Lokesh Kaayarga Column: ದೇಶದ ಏಕತೆ ವಿಷಯದಲ್ಲಿ ಒಡಕು ಧ್ವನಿ ಬೇಡ
ಟ್ರಂಪ್ ಬೂಟಾಟಿಕೆಯ ಮಾತನ್ನು ಸಮರ್ಥಿಸುವ ಭರದಲ್ಲಿ ರಾಹುಲ್, ದೇಶವಾಸಿಗಳ ಭಾವನೆ, ಅಭಿಪ್ರಾಯಗಳನ್ನು ಗಮನಿಸಿದಂತೆ ಕಾಣುತ್ತಿಲ್ಲ. ದೇಶದ ಆರ್ಥಿಕತೆ ಕುಸಿದಿದೆ ಎಂದು ಹೇಳಲು ರಾಹುಲ್‌ಗೆ ಟ್ರಂಪ್ ಹೇಳಿಕೆಯ ಅವಶ್ಯಕತೆ ಇರಲಿಲ್ಲ. ಟಿಸಿಎಸ್‌ನಂತಹ ಐಟಿ ದೈತ್ಯ ಕಂಪನಿ 12 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾಗಿರುವುದನ್ನು ರಾಹುಲ್ ಉಲ್ಲೇಖಿಸಬಹುದಿತ್ತು.


ಲೋಕಮತ
kaayarga@gmail.com
ಭಾರತ-ಅಮೆರಿಕ ಸಂಬಂಧದ ಇತಿಹಾಸ ತಿಳಿದಿರುವ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎಡಬಿಡಂಗಿತನ ಗೊತ್ತಿರುವ ಯಾರಿಗಾದರೂ, ಅವರ ಹೇಳಿಕೆ ಬಗ್ಗೆ ಅಚ್ಚರಿ ಪಡುವಂಥದ್ದು ಏನೂ ಇಲ್ಲ. ‘ಭಾರತ ಮತ್ತು ರಷ್ಯಾ ತಮ್ಮ ಸತ್ತ ಆರ್ಥಿಕತೆಗಳನ್ನು ಒಟ್ಟಿಗೆ ಹೂಳಲಿ’ ಎಂಬ ಟ್ರಂಪ್ ಹೇಳಿಕೆಯಲ್ಲಿ ಎಚ್ಚರಿಕೆಗಿಂತ ಹತಾಶೆ ಎದ್ದು ಕಾಣುತ್ತಿದೆ. ಆದರೆ ಈ ಹೇಳಿಕೆಯನ್ನು ಸಮರ್ಥಿಸುವ ಮುನ್ನ ಪ್ರತಿಪಕ್ಷ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅರೆಕ್ಷಣವಾದರೂ ಯೋಚಿಸ ಬೇಕಿತ್ತು.
ಮೋದಿ ನೇತೃತ್ವದ ಬಿಜೆಪಿ ಸರಕಾರವನ್ನು ಟೀಕಿಸಲು ಪ್ರತಿಪಕ್ಷಗಳಿಗೆ, ವಿಶೇಷವಾಗಿ ರಾಹುಲ್ ಗಾಂಧಿ ಅವರಿಗೆ ನೂರು ಕಾರಣಗಳಿರಬಹುದು. ಆದರೆ ವಿದೇಶಿ ರಾಷ್ಟ್ರವೊಂದು ನಮ್ಮ ದೇಶದ ವಿರುದ್ಧ ಹೇಳಿಕೆ ನೀಡಿದಾಗ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮರೆತು, ಅವಹೇಳನಕಾರಿ ಮಾತನ್ನು ಖಂಡಿಸುವುದು ಭಾರತೀಯರಾಗಿ ನಮ್ಮ ಕರ್ತವ್ಯ.
ಆದರೆ ರಾಹುಲ್ ಏಕಾಏಕಿ, ಟ್ರಂಪ್ ಅವರ ಮಾತನ್ನು ಸಮರ್ಥಿಸಿ ಮಾತನಾಡಿದರು. ಗಲ್ವಾನ್ ಪ್ರಕರಣದಲ್ಲಿ ನೀಡಿದ ಹೇಳಿಕೆಗಾಗಿ ಸುಪ್ರೀಂ ಕೋರ್ಟ್ ಕೆಂಗಣ್ಣಿಗೆ ಗುರಿಯಾಗಿರುವ ರಾಹುಲ್, ಈ ವಿಚಾರದಲ್ಲೂ ಎಡವಿರುವುದು ಸ್ಪಷ್ಟ. ಆಡಳಿತ ಪಕ್ಷದ ಹುಳುಕುಗಳನ್ನು ಎತ್ತಿ ತೋರಿಸುವುದು ಪ್ರತಿಪಕ್ಷದ ಕರ್ತವ್ಯ.
ಇದನ್ನೂ ಓದಿ: Lokesh Kaayarga Column: ನಮ್ಮ ವಿವಿಗಳನ್ನು ಮುಚ್ಚುವ ಸ್ಥಿತಿ ಬರಬಹುದೇ ?
ಆದರೆ ರಾಷ್ಟ್ರದ ಹಿತಾಸಕ್ತಿ, ಘನತೆ, ಗೌರವದ ವಿಚಾರ ಬಂದಾಗ ಆಡಳಿತ ಪಕ್ಷ-ಪ್ರತಿಪಕ್ಷ ಎಂಬ ಭೇದ ಇರುವುದಿಲ್ಲ. ಹೊರಗಿನ ವೈರಿಯನ್ನು ಎದುರಿಸುವಾಗ ಇಡೀ ದೇಶ ಒಂದಾಗಬೇಕೆನ್ನುವುದು ನಾವು ಕಲಿತ ಪಾಠ. ಸಂದರ್ಭ, ಸನ್ನಿವೇಶಗಳನ್ನು ಮರೆತು ಅವಸರದಲ್ಲಿ ಮಾತನಾಡುವ ರಾಹುಲ್ ಪದೇ ಪದೆ ಈ ಪಾಠ ಮರೆತು ಇಕ್ಕಟ್ಟಿಗೆ ಸಿಲುಕುತ್ತಿದ್ದಾರೆ.
ಟ್ರಂಪ್ ಬೂಟಾಟಿಕೆಯ ಮಾತನ್ನು ಸಮರ್ಥಿಸುವ ಭರದಲ್ಲಿ ರಾಹುಲ್, ದೇಶವಾಸಿಗಳ ಭಾವನೆ, ಅಭಿಪ್ರಾಯಗಳನ್ನು ಗಮನಿಸಿದಂತೆ ಕಾಣುತ್ತಿಲ್ಲ. ದೇಶದ ಆರ್ಥಿಕತೆ ಕುಸಿದಿದೆ ಎಂದು ಹೇಳಲು ರಾಹುಲ್‌ಗೆ ಟ್ರಂಪ್ ಹೇಳಿಕೆಯ ಅವಶ್ಯಕತೆ ಇರಲಿಲ್ಲ. ಟಿಸಿಎಸ್‌ನಂತಹ ಐಟಿ ದೈತ್ಯ ಕಂಪನಿ 12 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾಗಿರುವುದನ್ನು ರಾಹುಲ್ ಉಲ್ಲೇಖಿಸಬಹುದಿತ್ತು.
ಚೀನಾದ ಅಗ್ಗದ ಉತ್ಪನ್ನಗಳ ಮುಂದೆ ಸ್ಪರ್ಧಿಸಲಾರದೆ ಬಾಗಿಲು ಮುಚ್ಚಿದ ಸಾವಿರಾರು ಸಣ್ಣ ಕೈಗಾರಿಕೆಗಳ ಉದಾಹರಣೆಯನ್ನು ನೀಡಬಹುದಿತ್ತು. ‘ಮೋದಿ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಬಿಟ್ಟು ಭಾರತದ ಆರ್ಥಿಕತೆ ನಿರ್ಜೀವವಾಗಿರುವುದು ಇಡೀ ಜಗತ್ತಿಗೆ ಗೊತ್ತು’ ಎಂದು ಹೇಳಿಕೆ ನೀಡುವ ಮುನ್ನ ಅಮೆರಿಕ ಅಧ್ಯಕ್ಷರ ಘನತೆಗೆ ತಕ್ಕುದಲ್ಲದ ಬೆದರಿಕೆ ಮತ್ತು ಮೂದಲಿಕೆಯ ಮಾತುಗಳನ್ನು ರಾಹುಲ್ ಖಂಡಿಸಬೇಕಿತ್ತು. ಈ ನಿಟ್ಟಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರ ನಡೆಯನ್ನು ಅನುಸರಿಸಿದ್ದರೆ, ಇಡೀ ದೇಶ ಒಂದಾಗಿದೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಬಹುದಿತ್ತು.
ಅತ್ಯಾಚಾರ ಪ್ರಕರಣದಲ್ಲಿ ಮೊಮ್ಮಗ ಪ್ರಜ್ವಲ್‌ಗೆ ಜೀವಾವಧಿ ಸಜೆಯಾದ ಸಂದರ್ಭದಲ್ಲೂ ಮಾಜಿ ಪ್ರಧಾನಿ ದೇವೇಗೌಡರು ಟ್ರಂಪ್ ಹೇಳಿಕೆಯನ್ನು ಖಂಡಿಸಿ ಪತ್ರ ಬರೆಯುವ ವಿವೇಚನೆ ಪ್ರದರ್ಶಿಸಿ ದ್ದರು. ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕ ರಾಷ್ಟ್ರವಾಗುವತ್ತ ಮುನ್ನಡೆದಿರುವ ಭಾರತದ ಪ್ರಗತಿಯನ್ನು ಕಾಣಲಾರದಷ್ಟು ಟ್ರಂಪ್ ಕುರುಡಾಗಿದ್ದಾರೆಯೇ ಎಂದು ದೇವೇಗೌಡರು ಕಟು ಶಬ್ದಗಳಲ್ಲಿ ಅಮೆರಿಕದ ಅಧ್ಯಕ್ಷರ ನಡೆಯನ್ನು ಖಂಡಿಸಿದ್ದರು.
ಇಷ್ಟಕ್ಕೂ ಟ್ರಂಪ್ ಭಾರತ ಮಾತ್ರವಲ್ಲ, ವಿಶ್ವದ ಶೇ.90ಕ್ಕಿಂತ ಹೆಚ್ಚು ದೇಶಗಳ ಮೇಲೆ ಸುಂಕ ವಿಧಿಸಲು ಮುಂದಾಗಿದ್ದಾರೆ. ಇದರಲ್ಲಿ ಹೆಸರೇ ಕೇಳದ ಕೆಲವು ದ್ವೀಪರಾಷ್ಟ್ರಗಳೂ ಸೇರಿವೆ. ‘ಭಾರತ ಮಿತ್ರ ರಾಷ್ಟ್ರ, ಮೋದಿ ಆತ್ಮೀಯ ಸ್ನೇಹಿತ’ ಎಂದು ಹೇಳುತ್ತಲೇ ಬಂದ ಟ್ರಂಪ್ ಅವರಿಗೆ ಅವರ ರಾಷ್ಟ್ರದ ಹಿತಾಸಕ್ತಿ ಮುಖ್ಯ. ನಮಗೆ ನಮ್ಮ ದೇಶದ ಹಿತಾಸಕ್ತಿ ಮುಖ್ಯ. ಯಾವುದೇ ರಾಷ್ಟ್ರದ ವಿದೇಶಾಂಗ ನೀತಿಯ ಬುನಾದಿ ರಾಷ್ಟ್ರೀಯ ಹಿತಾಸಕ್ತಿ. ಆದರೆ ಟ್ರಂಪ್ ಈಗ ಕೈಗೊಳ್ಳುತ್ತಿರುವ ಕ್ರಮಗಳು ಅತಿರೇಕದ್ದು.
ಅವರಾಡುತ್ತಿರುವ ಮಾತುಗಳು ಯಾವುದೇ ದೇಶದ ಮುಖ್ಯಸ್ಥರಿಗೆ ಶೋಭೆಯಲ್ಲ. ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ಭಾರತ ಮಾತ್ರವಲ್ಲ ನೆರೆಯ ಕೆನಡಾ, ಐರೋಪ್ಯ ಒಕ್ಕೂಟದ ಮಿತ್ರ ರಾಷ್ಟ್ರಗಳು, ಬ್ರೆಜಿಲ್, ಇಸ್ರೇಲ್ ಸೇರಿದಂತೆ ಹಲವು ರಾಷ್ಟ್ರಗಳ ಮೇಲೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ.
ನೆರೆ ರಾಷ್ಟ್ರ ಕೆನಡಾ ಅಮೆರಿಕದ ಭಾಗ ಎಂದು ಟ್ರಂಪ್ ಅಬ್ಬರಿಸಿದ್ದರು. ಮೂರೇ ತಿಂಗಳಲ್ಲಿ ರಷ್ಯಾ- ಉಕ್ರೇನ್ ಯುದ್ಧ ನಿಲ್ಲಿಸುವುದಾಗಿ ಹೇಳಿದ್ದರು. ಆದರೆ ಯಾವುದೂ ಟ್ರಂಪ್ ಎಣಿಕೆಯಂತೆ ನಡೆದಿಲ್ಲ. ಚೀನಾದ ವಿರುದ್ಧ ಶೇ.100ರ ಮೇಲಿನ ತೆರಿಗೆ ವಿಧಿಸಿ ಟ್ರಂಪ್, ಕೆಲವೇ ದಿನಗಳಲ್ಲಿ ಆ ರಾಷ್ಟ್ರದ ಜತೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಭಾರತದ ಮೇಲೆ ಟ್ರಂಪ್ ಮುನಿಸಿಗೆ ರಷ್ಯಾದೊಂದಿಗಿನ ಸ್ನೇಹ ಸಂಬಂಧ ಒಂದೇ ಕಾರಣವಲ್ಲ. ಭಾರತವು ಅಮೆರಿಕ ಮತ್ತು ಚೀನಾ ಬಳಿಕ ಮೂರನೇ ಅತಿ ದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರ ಹೊಮ್ಮುವುದು ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳ ಕಣ್ಣು ಕುಕ್ಕುತ್ತಿದೆ. ಈ ಕಾರಣಕ್ಕಾಗಿಯೇ ನ್ಯಾಟೋ ರಾಷ್ಟ್ರಗಳನ್ನೂ ಟ್ರಂಪ್ ಭಾರತದ ಮೇಲೆ ಛೂ ಬಿಡುತ್ತಿದ್ದಾರೆ.
ಪಾಕಿಸ್ತಾನವನ್ನು ಮತ್ತೆ, ಮತ್ತೆ ಓಲೈಸುತ್ತಿದ್ದಾರೆ. ಹೊಸ ವಲಸೆ ನೀತಿಯ ನೆಪದಲ್ಲಿ ಭಾರತೀಯ ವಿದ್ಯಾರ್ಥಿಗಳ ವೀಸಾ ಪ್ರಮಾಣವನ್ನು ಕಡಿತಗೊಳಿಸಿದ್ದಾರೆ. ವ್ಯಾಪಾರ ಸ್ಥಗಿತದ ಬೆದರಿಕೆ ಹಾಕಿ ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಟ್ರಂಪ್ ಪದೇ ಪದೆ ಹೇಳುತ್ತಿದ್ದಾರೆ. ‘ಮಿತ್ರರಾಷ್ಟ್ರ’ ಭಾರತ ಮತ್ತು ‘ಸ್ನೇಹಿತ’ ಮೋದಿಗೆ ಮುಜುಗರ ಉಂಟು ಮಾಡುವುದು ಬಿಟ್ಟರೆ ಇದರ ಹಿಂದೆ ಬೇರೆ ಯಾವ ಕಾರಣಗಳೂ ಕಾಣಿಸುತ್ತಿಲ್ಲ.
ಪಹಲ್ಗಾಮ್ ದಾಳಿಯ ಹಿಂದಿರುವ ಪಾಕಿಸ್ತಾನದ ಸೇನಾ ಮುಖ್ಯಸ್ಥನನ್ನು ಅಮೆರಿಕಕ್ಕೆ ಕರೆಸಿ ಕೊಂಡು ಔತಣ ನೀಡಿರುವ ಹಿಂದೆಯೂ ಭಾರತವನ್ನು ಕೆಣಕುವ ಉದ್ದೇಶವಷ್ಟೇ ಕಾಣುತ್ತಿದೆ. ಅಮೆರಿಕದ ಅಧ್ಯಕ್ಷರ ಹತಾಶೆಯ ಕ್ರಮಗಳಿಗೆ ಭಾರತದ ಬದಲಾದ ವಿದೇಶಾಂಗ ನೀತಿಯೂ ಪ್ರಮುಖ ಕಾರಣ.
2016ರ ಉರಿ ಸರ್ಜಿಕಲ್ ಸ್ಟ್ರೈಕ್, 2019ರ ಬಾಲಕೋಟ್ ಏರ್ ಸ್ಟ್ರೈಕ್ ಮತ್ತು ಇತ್ತೀಚಿನ ಆಪರೇಷನ್ ಸಿಂಧೂರ್ ಕಾರ‍್ಯಾಚರಣೆ ಬಳಿಕ ಭಾರತ, ಮೃದುರಾಷ್ಟ್ರವೆಂಬ ತನ್ನ ಹಣೆ ಪಟ್ಟಿ ಕಳಚಿಕೊಂಡಿದೆ. ಪಾಕಿಸ್ತಾನ ಸೇರಿದಂತೆ ಯಾವುದೇ ವೈರಿ ರಾಷ್ಟ್ರದ ದಾಳಿ ಎದುರಿಸಲು ಮಾತ್ರವಲ್ಲ, ಸಂದರ್ಭ ಬಂದಾಗ ಮುನ್ನುಗ್ಗಿ ದಾಳಿ ನಡೆಸಲು ಭಾರತ ಸಿದ್ಧವಿದೆ ಎಂಬ ಸಂದೇಶ ಇಡೀ ಜಗತ್ತಿಗೆ ರವಾನೆ ಯಾಗಿದೆ.
ಅಮೆರಿಕ ಮತ್ತು ರಷ್ಯಾದಿಂದ ಸಮಾನ ಅಂತರ ಕಾಯ್ದುಕೊಳ್ಳಲು ಬಯಸುವ ರಾಷ್ಟ್ರಗಳು ಈಗ ಭಾರತದತ್ತ ನೋಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಭಾರತವು ಆಸಿಯಾನ್ ಸೇರಿದಂತೆ ಹಲವು ರಾಷ್ಟ್ರ ಗಳ ಒಕ್ಕೂಟದ ಜತೆ ವ್ಯಾಪಾರ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುತ್ತಿವೆ. ಅದರಲ್ಲೂ ಭಾರತ, ರಷ್ಯಾ, ಚೀನಾ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ ದೇಶಗಳ ಬ್ರಿಕ್ಸ್ ಸಂಘಟನೆಯ ಹೊಸ ವ್ಯಾಪಾರ ವಹಿವಾಟು ಒಪ್ಪಂದ ಅಮೆರಿಕದ ಕಣ್ಣು ಕುಕ್ಕಿದೆ. ಇತ್ತೀಚೆಗೆ ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ, ಯುಎಇ ಮತ್ತು ಇಂಡೋನೇಷ್ಯಾ ಕೂಡ ಈ ಸಂಘಟನೆ ಸೇರಿ ಕೊಂಡಿವೆ.
ಪಾಶ್ಚಿಮಾತ್ಯ ದೇಶಗಳ ಪ್ರಭಾವವನ್ನು ಕಡಿಮೆ ಮಾಡಿ, ಅಭಿವೃದ್ಧಿಶೀಲ ರಾಷ್ಟ್ರಗಳ ಧ್ವನಿಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಬ್ರಿಕ್ಸ್ ನ ಉದ್ದೇಶವೇ ಟ್ರಂಪ್ ಆಕ್ರೋಶಕ್ಕೆ ಮುಖ್ಯ ಕಾರಣ. ಇದನ್ನು ಸ್ವತ: ಟ್ರಂಪ್ ಹೇಳಿಕೊಂಡಿದ್ದಾರೆ. ವಿಶ್ವಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಗೆ ಪರ‍್ಯಾಯವಾಗಿ ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್ ಸ್ಥಾಪಿಸಿರುವ ಬ್ರಿಕ್ಸ್ ನೇರವಾಗಿ ಅಮೆರಿಕ ಮತ್ತು ಐರೋಪ್ಯರಾಷ್ಟ್ರಗಳಿಗೆ ಸಡ್ಡು ಹೊಡೆಯಲು ಮುಂದಾಗಿದೆ.
ಬ್ರಿಕ್ಸ್ ಸಭೆಯ ಬಳಿಕ ಚೀನಾದೊಂದಿಗೂ ಭಾರತದ ಸಂಬಂಧ ಸುಧಾರಣೆ ಕಂಡಿದೆ. ಡ್ರ್ಯಾಗನ್ ರಾಷ್ಟ್ರ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಸರಬರಾಜು ಮಾಡಿ, ತನ್ನ ಯುದ್ದೋಪಕರಣಗಳ ಪ್ರಾಯೋಗಿಕ ಪರೀಕ್ಷೆ ಮಾಡಿದರೂ ಆಪರೇಷನ್ ಸಿಂದೂರ ಕಾರ‍್ಯಾಚರಣೆ ವೇಳೆ ಭಾರತದ ವಿರುದ್ಧ ಯಾವುದೇ ಖಂಡನಾ ಹೇಳಿಕೆ ನೀಡಿರಲಿಲ್ಲ. ಅಮೆರಿಕವು ಮುಂದೊಂದು ದಿನ ಪಾಕಿಸ್ತಾನವನ್ನು ತನ್ನ ಸೇನಾ ನೆಲೆಯಾಗಿ ಬಳಸಿಕೊಂಡರೆ ಚೀನಾಗೆ ಬೆದರಿಕೆಯಿರುವುದು ಖಚಿತ.
ಭಾರತ ಮಾತ್ರವಲ್ಲ ಜಗತ್ತಿನ ಯಾವುದೇ ರಾಷ್ಟ್ರವೂ ಅಮೆರಿಕ ನಂಬಿಕಸ್ಥ ರಾಷ್ಟ್ರ ಎಂದು ಭಾವಿಸುವುದಿಲ್ಲ. ಆದರೆ ಜಗತ್ತಿನ ಅತಿ ಪ್ರಬಲ ರಾಷ್ಟ್ರ ಎಂಬ ಕಾರಣಕ್ಕೆ ಪ್ರತಿಯೊಂದು ದೇಶವೂ ‘ದೊಡ್ಡಣ್ಣನ’ ಸ್ನೇಹ ಸಂಬಂಧವನ್ನು ಬಯಸುತ್ತವೆ. ಭಾರತವೂ ಇದಕ್ಕೆ ಹೊರತಲ್ಲ.
ಸದ್ಯದ ಕಾಲಘಟ್ಟದಲ್ಲಿ ಅಮೆರಿಕ ನಮಗೆ ಎಷ್ಟು ಅಗತ್ಯವೋ, ಅಮೆರಿಕಕ್ಕೆ ನಮ್ಮ ಅವಶ್ಯಕತೆಯೂ ಅಷ್ಟೇ ಇದೆ. ಅಮೆರಿಕದ ಜನಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ಮಧ್ಯಮ ವರ್ಗ ಭಾರತದಲ್ಲಿದೆ. ಇರಲ್ಲಿ ಹೆಚ್ಚಿನವರು ಅಮೆರಿಕನ್ ಕಂಪನಿಗಳ ಉತ್ಪನ್ನಗಳಿಗೆ ಗ್ರಾಹಕರು. ಭಾರತವನ್ನು ದೂರ ವಿಡುವುದೆಂದರೆ ಅಮೆರಿಕ ಈ ಗ್ರಾಹಕರನ್ನೂ ದೂರವಿಟ್ಟಂತೆ. ಅಮರಿಕ ತನ್ನ ವಾಣಿಜ್ಯ ಹಿತಾಸಕ್ತಿ ಗಳಿಗೆ ಧಕ್ಕೆ ತಂದುಕೊಂಡ ಇತಿಹಾಸವೇ ಇಲ್ಲ.
ಎರಡೂ ರಾಷ್ಟ್ರಗಳ ಸಂಬಂಧ ಈಗ ರಾಜತಾಂತ್ರಿಕತೆಗೆ ಸೀಮಿತವಾಗಿಲ್ಲ. ಅಮೆರಿಕದ ಜನಸಂಖ್ಯೆ ಯಲ್ಲಿ, ಅಲ್ಲಿನ ಆಡಳಿತದಲ್ಲಿ, ನಾಸಾದಂತಹ ಸಂಶೋಧನಾ ಸಂಸ್ಥೆಗಳಲ್ಲಿ, ಗೂಗಲ್, ಮೈಕ್ರೋ ಸಾಫ್ಟ್ ನಂತಹ ಐಟಿ ದಿಗ್ಗಜ ಕಂಪನಿಗಳಲ್ಲಿ ಭಾರತೀಯರು ನಿರ್ಣಾಯಕ ಸ್ಥಾನದಲ್ಲಿದ್ದಾರೆ.
ಟ್ರಂಪ್ ಭಾರತವನ್ನು ದೂರವಿಡಬಹುದು. ಆದರೆ ಭಾರತೀಯರನ್ನು ದೂರವಿಡಲು ಸಾಧ್ಯವಿಲ್ಲ. ಈ ಹಿಂದೆ ಅಮೆರಿಕವು ಭಾರತಕ್ಕೆ ಕ್ರಯೋಜನಿಕ್ ತಂತ್ರಜ್ಞಾನ ನಿರಾಕರಿಸಿ ಉಪಗ್ರಹ ತಂತ್ರಜ್ಞಾನ ವನ್ನು ತಡೆಯುವ ಪ್ರಯತ್ನ ನಡೆಸಿತ್ತು. ಅದೇ ರಾಷ್ಟ್ರ ಇಂದು ಉಪಗ್ರಹಗಳನ್ನು ಹಾರಿಸಲು ಇಸ್ರೋ ಜತೆ ಪಾಲುದಾರಿಕೆ ಹೊಂದಿದೆ ರಾಜಕೀಯ ನಿರ್ಧಾರಗಳು ಏನೇ ಇರಲಿ ನಿರ್ಬಂಧಗಳ ಮೂಲಕ ಭಾರತವನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ ಎನ್ನುವುದು ಟ್ರಂಪ್‌ಗೂ ಗೊತ್ತು.
ಇದೀಗ ಆಸ್ಟ್ರೇಲಿಯಾದ ಆಟಗಾರರಂತೆ ನಿಂದನೀಯ ಭಾಷೆ ಬಳಸಿ ಭಾರತದ ತಾಳ್ಮೆಯನ್ನು ಕೆಣಕುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ರಾಜಕೀಯ ನಾಯಕರು ಟ್ರಂಪ್ ದಾಳಕ್ಕೆ ಸಿಲುಕದೆ, ಪಕ್ಷ ಭೇದ ಮರೆತು ಬಿಕ್ಕಟ್ಟಿನ ವಿರುದ್ಧ ಸೆಟೆದು ನಿಲ್ಲಬೇಕು. ಯಾವುದೇ ರಾಷ್ಟ್ರದ ಮೇಲೆ ಯುದ್ಧ ಸಾರಲು ಶಸ್ತ್ರಾಸ್ತ್ರವೇ ಬೇಕಾಗಿಲ್ಲ. ಟ್ರಂಪ್ ಈಗ ಸುಂಕ ಹೇರುವ ಮೂಲಕ ಭಾರತದ ಮೇಲೆ ಸಮರ ಸಾರಿದ್ದಾರೆ.
ನಾವು ಇದನ್ನು ಸಮರ್ಥವಾಗಿ ಬಳಸಿಕೊಂಡು ಪ್ರಗತಿಯ ಹೊಸ ಮಾರ್ಗ ಕಂಡುಕೊಳ್ಳಬೇಕು. ಇಲ್ಲಿನ ಪ್ರತಿಭೆಗಳ ವಿದೇಶ ಪಲಾಯನವನ್ನು ತಡೆದು ದೇಶದ ಅಭಿವೃದ್ಧಿಯಲ್ಲಿ ಬಳಸಿಕೊಳ್ಳಬೇಕು. ಪ್ರತಿಪಕ್ಷ ನಾಯಕನಾಗಿ ರಾಹುಲ್ ಗಾಂಧಿ ಈ ದಿಶೆಯಲ್ಲಿ ಕೈ ಜೋಡಿಸಬೇಕು. ವಿರೋಧ ಪಕ್ಷ ಎಂದಾಕ್ಷಣ ಎಲ್ಲವನ್ನೂ ವಿರೋಧಿಸಬೇಕಿಲ್ಲ. ರಚನಾತ್ಮಕ ಸಲಹೆಗಳ ಮೂಲಕವೂ ಪ್ರತಿಪಕ್ಷದ ಕೆಲಸ ಮಾಡಬಹುದು.