Ravi Hunj Column: ಇದು ಸಂಕ್ಷಿಪ್ತ ಹಾಲುಮತ ಪುರಾಣದ ಕತೆ !
ಹಾಗೆಯೇ ಚನ್ನಮಲ್ಲಿಕಾರ್ಜುನರು, ಕುರುಬರ ಚರಿತ್ರೆಯ ಪ್ರಕಾರ ಕಲ್ಯಾಣದಿಂದ ಕುರಿಗಳ ಹಿಂಡನ್ನು ಪದ್ಮಗೊಂಡನು ಕುರುಪತಿಪುರವೆಂಬ ನಗರದ ಹತ್ತಿರ ಒಂದಾನೊಂದು ಭೂ ಭಾಗದಲ್ಲಿ ಕುರಿ(ದೇವತೆ)ಗಳನ್ನು ಅಡಗಿಸಿಟ್ಟಿದ್ದನು. ಈ ಕುರುಪತಿ ಎಂಬುದು ರಾಣಿಬೆನ್ನೂರು ಸಮೀಪದ ಕುರುವತ್ತಿ ಊರಾಗಿರಬೇಕು ಎಂದು ಊಹೆಗೆ ಬರುತ್ತದೆ.
-
ವಚನಾಮೃತ (ಭಾಗ-2)
ರವಿ ಹಂಜ್
ನಾಡಿನ ಶೈಕ್ಷಣಿಕ ವಲಯದ ದುರಂತವೆಂದರೆ, ಕನ್ನಡ ಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಶಿಕ್ಷಣ ಪಡೆದು ಭಾಷಾಶಾಸದಲ್ಲಿಯೇ ಪರಿಣಿತಿ ಹೊಂದಿದ ತಜ್ಞರು ರೂಪಾಲಂಕಾರ, ಉಪಮಾಲಂಕಾರಗಳನ್ನು ಅರ್ಥ ಮಾಡಿ ಕೊಳ್ಳದೆ ಪುತ್ರ ಎಂದರೆ ಲೈಂಗಿಕ ಸಂಬಂಧದಿಂದಲೇ ಹುಟ್ಟಿದವರು ಎಂದರ್ಥೈಸಿ ಕೊಂಡು ರೇವಣರು ಅವನ ಮಗ ಇವನ ಮೊಮ್ಮಗ ಎಂದು ಹೇಳುವ ಭಾಷಾ ಜ್ಞಾನಕ್ಕೆ ಏನೆನ್ನಬೇಕು?
ಈ ಪುರಾಣವನ್ನು ಕುರುಬರ ಚರಿತ್ರೆ, ಸಿದ್ಧರಾಮೇಶ್ವರ ಸಾಂಗತ್ಯ ಮತ್ತಿತರೆ ಗ್ರಾಂಥಿಕ ಮತ್ತು ಶಾಸನಗಳ ಮೂಲಕ ತಾಳೆ ಹಾಕಿ ಇತಿಹಾಸವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಸಾಹಿತಿಗಳಾದ ಶ್ರೀ ಚನ್ನಮಲ್ಲಿಕಾರ್ಜುನರು ತಮ್ಮ 1958ರಲ್ಲಿ ಪ್ರಕಟಿತ ‘ಶ್ರೀ ರೇವಣ ಸಿದ್ಧರು’ ಗ್ರಂಥದಲ್ಲಿ ಮಾಡಿದ್ದಾರೆ. ಅವರ ತಾರ್ಕಿಕ ಚಿಂತನೆ ಹೀಗಿದೆ, ‘ರೇವಣರು ಒಂಟಿಯಾಗಿ ದೇಶಸಂಚಾರ ಮಾಡುವುದಕ್ಕೆ ಮುಂಚೆ ಪ್ರಾಯಶಃ ಒಂದು ನೈಸರ್ಗಿಕ ಗವಿಯಲ್ಲಿ ಏಳೆಂಟು ಕುರಿಗಳನ್ನು ಕೂಡಿ ಹೋಗಿರಬೇಕು.
ಅವು ಹಗಲೆಲ್ಲಾ ಮೇದು ರಾತ್ರಿ ಆ ಗವಿಯಲ್ಲಿ ಮಲಗುತ್ತಾ ಬೆಳೆದು ರೇವಣರು ಹತ್ತು ಹನ್ನೆರಡು ವರ್ಷಗಳ ನಂತರ ಬರುವುದರೊಳಗಾಗಿ ದೊಡ್ಡ ಹಿಂಡಾಗಿ ಪದ್ಮಗೊಂ ಡನಿಗೆ ಸಿಕ್ಕಿರಬೇಕು’ ಎಂದು ಪುರಾಣದಲ್ಲಿ ಹೇಗೆ ಚಾರಿತ್ರಿಕಾಂಶವಾಗಿ ತಿಳಿಯಬೇಕಾಗಿದೆ ಎನ್ನುತ್ತಾರೆ.
ಅದೇ ರೀತಿ ಜನಪದ ಕತೆಯಲ್ಲಿ ಸುಗ್ಗಲೆಯ ಕರ್ಣದಲ್ಲಿ ಜನಿಸುವುದೆಂದರೆ ಯತಾರ್ಥ ವಾಗಿ ಕಿವಿಯಿಂದ ಜನಿಸುವುದು ಎಂದಲ್ಲ. ಕಿವಿಯಲ್ಲಿ ಮಂತ್ರವನ್ನು ಉಚ್ಛರಿಸಿ ಆ ಮಂತ್ರ ರೂಪಿನಿಂದ ಹುಟ್ಟಿದನೆಂದು ತಿಳಿಯಬೇಕು ಎನ್ನುತ್ತಾರೆ. ಇದೇ ರೀತಿ ಕರಸಂಜಾತ ಪುತ್ರ ಎಂದರೆ ಗುರುವಿನ ಕೃಪಾಶೀರ್ವಾದದಿಂದ ಹುಟ್ಟಿದವರು ಎಂದರ್ಥ. ವಿಪರ್ಯಾಸ ವೆಂದರೆ ಇಲ್ಲಿ ಪುತ್ರ ಎನ್ನುವುದನ್ನು ಗರ್ಭಸಂಜಾತವೆಂದು ಬಗೆದು ಜಾತ್ಯಂಧರು ಮತ್ತು ಕಮ್ಯುನಿಸ್ಟ್ ಪ್ರಣೀತ ಸಂಶೋಧಿಗರು ಸಂಶೋಧನೆ ಮಂಡಿಸುತ್ತಾರೆ!
ಹಾಗೆಯೇ ಹಾಲುಮತ ಎನ್ನುವ ಪದೋತ್ಪತ್ತಿಯ ಕುರಿತಾಗಿ, ಕುರುಬರ ಚರಿತ್ರೆಯಲ್ಲಿ ಕುರುಬರನ್ನು ಹಾಲು ಮೊತ್ತದವರು ಎಂದು ಕರೆದಿದೆ. ಇವರು ಕಂಬಿಗಳಲ್ಲಿನ ಕೊಡಗಳಲ್ಲಿ ಗೋವಿನ ಹಾಲನ್ನು ತುಂಬಿ ಕಲ್ಯಾಣದಲ್ಲಿ ಮಾರುತ್ತಿದ್ದಾಗ ಇವರು ಹಾಲಿನ ಮೊತ್ತದವರು ಎಂಬುದನ್ನು ತೋರಿಸುವುದಕ್ಕಾಗಿ ತೋಹಿನ ಮೊತ್ತ, ಕಾಳಮೊತ್ತ ಮುಂತಾದ ಹೆಸರು ಗಳಾದವು.
ಇದನ್ನೂ ಓದಿ: Ravi Hunj Column: ಮಳೆ ನಿಂತರೂ ಮರದ ಹನಿ ಹನಿಯಂತೆ ರೇವಣ್ಣಸಿದ್ಧ !
ಅವು ಮುಂದೆ ಮುತ್ಯ, ಮುತ್ತಯ್ಯ ಎಂಬ ಕೊನೆಯುಳ್ಳ ಹೆಸರಿನಲ್ಲಿ ಪಲ್ಲಟಿಸಿದವು ಎನ್ನುತ್ತಾರೆ. ಕಲ್ಯಾಣದಲ್ಲಿ ಹಾಲು ಮೊಸರನ್ನು ಮಾರುತ್ತಿರುವಾಗ ಪದ್ಮಗೊಂಡನಿಗೆ ಹಾಲುಮೊತ್ತದ ಒಡೆಯ ಎಂಬ ಪಟ್ಟವನ್ನು ಕಟ್ಟಿರಬೇಕು. ಕಡೆಗೆ ಕಲ್ಯಾಣದಲ್ಲಿ ಎಲ್ಲರಿಗೂ ಲಿಂಗಧಾರಣವಾಯಿತು. ಒಟ್ಟಿನಲ್ಲಿ ಬಸವೇಶ್ವರ ಮತ್ತು ಶ್ರೀ ರೇವಣರ ದೆಸೆಯಿಂದ ಕುರುಬರು ಲಿಂಗವಂತರಾಗಿ ಪ್ರಸಿದ್ಧಿಗೆ ಬಂದರೆಂದು ಹೇಳಲನುಮಾನವಾರಿಗೂ ಬರಲಾರದು ಎನ್ನುತ್ತಾರೆ.
ಹಾಗೆಯೇ ಚನ್ನಮಲ್ಲಿಕಾರ್ಜುನರು, ಕುರುಬರ ಚರಿತ್ರೆಯ ಪ್ರಕಾರ ಕಲ್ಯಾಣದಿಂದ ಕುರಿಗಳ ಹಿಂಡನ್ನು ಪದ್ಮಗೊಂಡನು ಕುರುಪತಿಪುರವೆಂಬ ನಗರದ ಹತ್ತಿರ ಒಂದಾನೊಂದು ಭೂ ಭಾಗದಲ್ಲಿ ಕುರಿ(ದೇವತೆ)ಗಳನ್ನು ಅಡಗಿಸಿಟ್ಟಿದ್ದನು. ಈ ಕುರುಪತಿ ಎಂಬುದು ರಾಣಿಬೆನ್ನೂರು ಸಮೀಪದ ಕುರುವತ್ತಿ ಊರಾಗಿರಬೇಕು ಎಂದು ಊಹೆಗೆ ಬರುತ್ತದೆ. ಆದರೆ, ಸಿದ್ಧರಾಮೇಶ್ವರ ಸಾಂಗತ್ಯದಲ್ಲಿ ಬರುವ ಇಂತಹುದೇ ಪ್ರಸಂಗವನ್ನು ಗಮನಿಸಿದಾಗ ಅಲ್ಲಿನ ಕುರುಬೆಟ್ಟ ಎಂಬ ಸ್ಥಳ ಕುರುಗೋಡು ಇರಬಹುದು.
ಹಾಗಾಗಿ ಇದು ಕುರುವತ್ತಿಗಿಂತ ಕಲ್ಯಾಣಕ್ಕೆ ಸಮೀಪವೂ ಮತ್ತು ಏಳು ದಿನಗಳಲ್ಲಿ ತಲುಪಬಹುದಾದ ಜಾಗವಾದ್ದರಿಂದ ಪದ್ಮಗೊಂಡನು ಕುರುಗೋಡಿಗೆ ಬಂದಿರಬಹುದು ಎನ್ನುವ ಭೌಗೋಳಿಕ ತರ್ಕವನ್ನು ಇಡುತ್ತಾರೆ. ಅದೇ ರೀತಿ, ಕ್ರಿ. ಶ. 1187ರ ಸಿರಿವಾಳ ಶಾಸನವು ಆಚಾರ್ಯ ಶ್ರೀ ರೇವಣರಿಗೇ ಸಂಬಂಧಿಸಿದುದಾಗಿದೆ.
ಶಾಂತಿಮಯ್ಯಗಳ ಪುತ್ರ ಎಂದು ಶಾಸನದಲ್ಲಿ ಇದೆ. ಶಾಂತಮಲ್ಲಿಕಾರ್ಜುನ ಲಿಂಗ ಎಂಬುದು ಶ್ರೀ ರೇವಣರ ಪ್ರಾಣಲಿಂಗವೆಂದು ಏಕ ಕಂಠದಿಂದ ಎಲ್ಲ ಗ್ರಂಥಗಳು ಹೇಳುತ್ತವೆ. ಗುರುವಿನ ಹೆಸರನ್ನೇ ಲಿಂಗಕ್ಕೆ ಇಡುವ ರೂಢಿ ಇರುವುದರಿಂದಲೂ, ಗುರುವನ್ನೇ ತಂದೆ ಯಾಗಿ ತಿಳಿಯುವ ರೂಢಿಯೂ ವೀರಶೈವರಲ್ಲಿ ಇರುವುದರಿಂದಲೂ ಶಾಂತಿಮಯ್ಯ ಗುರುಗಳ ಪುತ್ರರಿವರು, ಎಂದು ತಿಳಿಯಲಿಕ್ಕೆ ಬರುವುದರಿಂದಲೂ ಆ ಶಾಸನವು ಇವರಿಗಾಗಿ ಯೇ ಬರೆಯಲ್ಪಟ್ಟದ್ದು ಎಂದಾಗುತ್ತದೆ ಎಂದಿದ್ದಾರೆ.
ಹಾಗಾಗಿ ಈ ವಿಚಾರವು ನಾನು ಈ ಹಿಂದೆಯೇ ತಿಳಿಸಿದಂತೆ ಗುರುಪರಂಪರೆಗಳಲ್ಲಿ ವಂಶೀಯ ಎಂದರೆ ಅನುವಂಶೀಯವಾಗಿ ಹುಟ್ಟಿದವ ಎಂದಲ್ಲ. ಅದು ಉತ್ತರಾಧಿಕಾರಿ ಎಂದು! ಇದು ಕೇವಲ ವೀರಶೈವ ಗುರು ವಿರಕ್ತರಲ್ಲಲ್ಲದೆ ಇತರೆ ಪಂಥ ಗಳಲ್ಲಿಯೂ ಇದೇ ಅರ್ಥವನ್ನು ಹೊಂದಿದೆ. ವೀರಶೈವರಲ್ಲಿ, ನಿರಂಜನ ವಂಶ ರತ್ನಾಕರ ಎಂಬ ಉತ್ತರಾಧಿ ಕಾರಿಗಳ ಇತಿಹಾ ಸವಿದ್ದರೆ, ಶಂಕರಮಠವು ಗುರುವಂಶಕಾವ್ಯವನ್ನು ಹೊಂದಿದೆ.
ಚನ್ನಮಲ್ಲಿಕಾರ್ಜುನರ ತರ್ಕಕ್ಕೆ ಸಾಕ್ಷಿಯಾಗಿ ಈಗಲೂ ಬಹು ಪಾಲು ವೀರಶೈವ ಲಿಂಗಾ ಯತರು ತಮ್ಮ ತಮ್ಮ ಗುರುಗಳನ್ನು ಮತ್ತು ಮಠಾಧೀಶರನ್ನು ಅಪ್ಪಾರು, ಅಪ್ಪಗೋಳು, ಅಜ್ಜಾರು ಎಂದೇ ಸಂಬೋಧಿಸುತ್ತಾರೆ. ಅದೇ ರೀತಿ, ಅಂದಿನ (ಹಾಲು) ಮೊತ್ತ ಎನ್ನುವ ಪದದ ರೂಪಾಂತರವೇ ಆಧುನಿಕ (ಹಾಲಿನ) ವರ್ತನೆ ಎಂದಾಗಿದೆ. ಮೊತ್ತ ಯಾನೆ ವರ್ತನೆ ಅಥವಾ ರೂಢಿ, ಸಂಪ್ರದಾಯ, ನಡವಳಿಕೆ, ನಡತೆ, ನಿಯಮಿತ ಗೊತ್ತುವಳಿ, ನಿತ್ಯಗಟ್ಟಳೆ, ಗ್ರಾಮಾಧಿಕಾರಿಗಳಿಗೆ ಸಲ್ಲುವ ಹಣದ ರೂಪದ ಕಾಣಿಕೆ, ಉದ್ದವನ್ನು ಅಳೆಯುವ ಪ್ರಮಾಣ ಮುಂತಾದ ಅರ್ಥಗಳ ಪದ ಮತವಾದದ್ದು ನಿಜಕ್ಕೂ ಸಂಶೋ ಧನೀಯ ಜಿಜ್ಞಾಸೆ!
ಇದೇ ಹಿನ್ನೆಲೆಯಲ್ಲಿ ಪ್ರೊ.ಚಿದಾನಂದ ಮೂರ್ತಿಯವರು, ಬಸವಣ್ಣ, ಜಗದ್ಗುರು ರೇವಣ ಸಿದ್ಧರು ಸಮಕಾಲೀನರು. ರೇವಣಸಿದ್ಧರು ಹಿರಿಯರಾಗಿರಬಹುದು. ಇಬ್ಬರೂ ವೀರಶೈವ ಧರ್ಮ ಪ್ರಚುರಪಡಿಸಿದರು. ಇಬ್ಬರೂ ಐತಿಹಾಸಿಕ ಪುರುಷರು, ವಾಸ್ತವ ವ್ಯಕ್ತಿಗಳು ಈ ಭೂಮಿಯಲ್ಲಿ ಬದುಕಿದ್ದವರು.
ಈ ರೇವಣಸಿದ್ಧರು ಕುರುಬರ ಕುಲಗುರು ಹೌದು ಎಂದಿದ್ದಾರೆ ಎನ್ನುವದು ಮೇಲ್ಕಾಣಿಸಿದ ಎಲ್ಲ ಮೂಲಗಳಿಂದ ಸತ್ಯವೆನಿಸುತ್ತದೆ. ಆದರೆ, ಅದೇ ರೇವಣಸಿದ್ಧರ ಪೌರಾಣಿಕ ರೂಪ ವಾದ ರೇಣುಕನೆಂಬ ಶಿವನ ಗಣಾಚಾರ್ಯ ಎಂಬ ಉಪನಾಮವನ್ನು ಯಾವುದೇ ಐತಿಹಾಸಿಕ ದಾಖಲೆಗಳು ಇಲ್ಲ ಎಂದು ನಿರಾಕರಿಸುವುದು ಎಷ್ಟು ಸರಿ? ಬಸವಣ್ಣನನ್ನು ಬಸವ, ಬಸವಿ ದೇವ, ಡಣ್ಣಾಯಕ, ಬಸವಯ್ಯ, ಬಸವಾರಾಧ್ಯ, ನಂದೀಶ್ವರ ಮುಂತಾಗಿ ಕರೆದಂತೆ ರೇವಣರನ್ನು ಅವರದೇ ಪುರಾಣದ ರೇಣುಕ ಗಣನೆಂದು ಕರೆಯಬಾರದು ಎನ್ನುವುದು ಆಯ್ದ ವೈಯಕ್ತಿಕ ಅಭಿಲಾಷೆ ಎನಿಸದೆ!? ಮೇಲಾಗಿ ಇವರೆಲ್ಲರೂ ಕೇವಲ ಹನ್ನೆರಡನೇ ಶತಮಾನದ ರೇವಣಸಿದ್ಧರ ಕುರಿತು ಮಾತನಾಡಿದ್ದಾರೆಯೇ ಹೊರತು ಹಿಂದಿನ ರೇವಣರ ಕುರಿತಲ್ಲ ಎಂಬುದು ಸ್ಪಷ್ಟ.
ನಾಡಿನ ಶೈಕ್ಷಣಿಕ ವಲಯದ ದುರಂತವೆಂದರೆ, ಕನ್ನಡ ಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಶಿಕ್ಷಣ ಪಡೆದು ಭಾಷಾಶಾಸ್ತ್ರದಲ್ಲಿಯೇ ಪರಿಣಿತಿ ಹೊಂದಿದ ತಜ್ಞರು ರೂಪಾಲಂಕಾರ, ಉಪಮಾಲಂಕಾರಗಳನ್ನು ಅರ್ಥ ಮಾಡಿಕೊಳ್ಳದೆ ಪುತ್ರ ಎಂದರೆ ಲೈಂಗಿಕ ಸಂಬಂಧದಿಂದಲೇ ಹುಟ್ಟಿದವರು ಎಂದರ್ಥೈಸಿಕೊಂಡು ರೇವಣರು ಅವನ ಮಗ ಇವನ ಮೊಮ್ಮಗ ಎಂದು ಹೇಳುವ ಭಾಷಾಜ್ಞಾನಕ್ಕೆ ಏನೆನ್ನ ಬೇಕು? ಅದರಲ್ಲೂ ಶ್ರೀಮಾನ್ ನಾಗರಾಜಯ್ಯ ವಡ್ಡಗೆರೆ ತಮ್ಮ ಕೈಯಲ್ಲಿಯೇ ಕಲ್ಲಿನಿಂದ ಉದ್ಭವವಾದ ಕಂಬಳಿ ಹೊದ್ದ ರೇವಣಸಿದ್ಧರ ಫೋಟೊ ಹಿಡಿದುಕೊಂಡು ಅವರನ್ನು ಹಾಡಿ ಹೊಗಳುತ್ತಾ ತಮ್ಮ ಕೈಯಲ್ಲಿರುವ ಚಿತ್ರದ ತದ್ರೂಪು ಕಂಬಳಿ ಬದಲು ಹಸಿರು ಅಂಗವಸ್ತ್ರದ ರೇಣುಕಾ ಚಾರ್ಯರು ಕಲ್ಲಿನಿಂದ ಹುಟ್ಟುವುದು ವೈಜ್ಞಾನಿಕವೇ ಎನ್ನುವುದು ಅವರ ಬೌದ್ಧಿಕ ಅನಾಚಾರವನ್ನು ಸಾಕ್ಷಿ ಸಮೇತವಾಗಿ ನೈತಿಕ ಅಪರಾಧಿಯಾಗಿಸುತ್ತದೆ.
ಒಟ್ಟಾರೆ ಇದಿಷ್ಟು ನಿಜಾರ್ಥದ ಸಂಶೋಧನೆಯು ಸಮಗ್ರವಾಗಿ ಒಂದು ಜನಪದ ಕಥನ ದಲ್ಲಿ ಹುದುಗಿಸಿಕೊಂಡಿರುವ ಮಾನವಿಕ, ಭೌಗೋಳಿಕ, ಇತಿಹಾಸವನ್ನು ಅಂದಿನ ಕಾಲಘಟ್ಟದ ಸಾಮಾಜಿಕ, ರಾಜಕೀಯ ಸನ್ನಿವೇಶಗಳಿಗೆ ಜನಪದ, ಶಾಸನ ಮತ್ತು ಗ್ರಾಂಥಿಕ ಸಾಹಿತ್ಯವನ್ನು ತಾಳೆ ಹಾಕಿ ಸಂಶೋಧಿಸುವ ಪರಿ.
ಇದನ್ನೇ ಎಪ್ಪತ್ತು ವರ್ಷಗಳ ಹಿಂದೆ ಚನ್ನಮಲ್ಲಿಕಾರ್ಜುನರು ಮಾಡಿದ್ದಾರೆ. ಅವರಂತೆಯೇ ಶಂ.ಬಾ. ಜೋಶಿ, ಕಪಟರಾಳರು, ಬಿ.ಎಲ. ರೈಸ್ ಮುಂತಾದ ಎಲ್ಲ ಸ್ವಾತಂತ್ರ್ಯಪೂರ್ವ ಸಂಶೋಧಕರು ಮಾಡಿದ್ದಾರೆ. ಸ್ವಾತಂತ್ರ್ಯಪೂರ್ವ ಭಾರತದಲ್ಲಿನ ಸಂಶೋಧಕರು ಸಮಗ್ರ ವಾಗಿ ಆಕರಗಳನ್ನು ಪರಿಗಣಿಸಿ ಸಂಶೋಧನ ವೈಧಾನಿಕತೆಗಳನ್ನು ಅಳವಡಿಸಿ ಕೊಂಡಿರು ವುದು ಗೋವಿಂದ ಪೈಗಳಂತಹ ಪಂಡಿತರ ಸಂಶೋಧನೆಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ.
ಆದರೆ, ಸ್ವಾತಂತ್ರೋತ್ತರ ಸಂಶೋಧಕರಲ್ಲಿ ಹೀಗಿದ್ದರೆ ಹೇಗೆ (What if) ಎಂಬ ವೈಧಾನಿಕತೆ ಕ್ಷೀಣಿಸುತ್ತ ಸಾಗಿ ಬಂದಿರುವುದನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಕನ್ನಡ ಸಂಶೋಧನ ನೆಲೆಯಲ್ಲಿ ಬಿ.ಎಲ್. ರೈಸ್ ನಂತರದ ಗೋವಿಂದ ಪೈ, ವೆಂಕಣ್ಣಯ್ಯ, ಶಂ.ಬಾ. ಜೋಷಿ, ಆರ್.ಜಿ.ದೀಕ್ಷಿತ್, ರಾಮಸ್ವಾಮಿ ಐಯಂಗಾರ್, ಎಸ್.ಸಿ. ನಂದಿಮಠ ಮುಂತಾ ದವರ ಪರಂಪರೆಯನ್ನು ಸಮರ್ಥವಾಗಿ ಮುನ್ನಡೆಸುವಲ್ಲಿ ಸ್ವತಂತ್ರ ಭಾರತದಲ್ಲಿ ಏಕೀಕರಣಗೊಂಡ ಕರ್ನಾಟಕದ ಸಂಶೋಧನ ಪರಂಪರೆ ನಿಸ್ಸಂಶಯವಾಗಿ ಸೋತಿದೆ. ಏಕೆಂದು ಪ್ರಶ್ನಿಸಿಕೊಂಡರೆ ಧುತ್ತನೆ ನಿಮಗೆ ವಡ್ಡಗೆರೆ, ಬಿಜ್ಜರಗಿಯಂತಹ ಪಂಡಿತರು ಮತ್ತು ವಿಶ್ವವಿದ್ಯಾಲಯಗಳ ಸಹಸ್ರಾರು ತೌಲನಿಕ ಅಧ್ಯಯನ ಎನ್ನುವ ತಥಾಕಥಿತ ಸಂಶೋಧನೆ ಗಳು ಕಣ್ಮುಂದೆ ಬರುವುದು ಸಹಜದಲ್ಲಿ ಸಹಜ.
ಸ್ವಾತಂತ್ರೋತ್ತರ ಭಾರತದ ಇಪ್ಪತ್ತೊಂದನೇ ಶತಮಾನದಲ್ಲಿ ಚನ್ನಮಲ್ಲಿಕಾರ್ಜುನ ರಂತಹ ವಾಸ್ತವಿಕ ವಿಶ್ಲೇಷಣೆಯ ಸಾಮಾಜಿಕ ಸಹಬಾಳ್ವೆಯ ಅಂತಃಕರಣದ ಇತಿಹಾಸ ವನ್ನು ಯಾವುದೇ ತಾರ್ಕಿಕ ವಾಸ್ತವಿಕ ವಿಶ್ಲೇಷಣೆಯಿಲ್ಲದೆ ವೈದಿಕ -ಅವೈದಿಕ, ದ್ರಾವಿಡ-ಆರ್ಯ, ತಳಸಮುದಾಯದ ಉಸಿರು, ದರ್ಪದ ಬಸಿರು ಇತ್ಯಾದಿಯಾಗಿ ಕಂಬಳಿ ನೂಲನ್ನು ವಿಶ್ವವಿದ್ಯಾಲಯದ ಅನುದಾನದಲ್ಲಿ, ಘನ ಸರಕಾರದ ಪ್ರಶಸ್ತಿಗಳ ಆರ್ಭಟದಲ್ಲಿ ಅನಂತ ವಾಯುವಿನಿಂದ ಓಂ ಹ್ರೀಂ ಹ್ರೂಂ ಫಟ್ ಎಂದು ಸುತ್ತುವುದು ಭಾರತೀಯ ಸಾಂಸ್ಕೃತಿಕ ಅಧ್ಯಯನಗಳ ಒಂದು ಟೈಮ್ ಬಾಂಬ್!
ಅಂದಹಾಗೆ ಭಾರತದ ಸಾಂಸ್ಕೃತಿಕ ಅಧ್ಯಯನ ಎತ್ತ ಸಾಗುತ್ತಿದೆ!? ಇದನ್ನು ಮನಗಂಡೇ ಅಂದು ತೋಂಟದ ಸಿದ್ಧಲಿಂಗೇಶ್ವರರು ಹೀಗೆ ಹೇಳಿದ್ದಾರೆ, “ಆದಿಯಲ್ಲಿ ಶಿವತತ್ವದಲ್ಲಿ ರೇಣುಕನುದಯವಾಗದಿರ್ದಡೆ, ಇಲ್ಲಿ ಶಿವಲಿಂಗದಲ್ಲಿ ಉದಯವಾದ ಪರಿಯೆಂತೋ? ಆ ಶಿವನಲ್ಲಿಯೆ ಹುಟ್ಟಿ ಶಿವನಲ್ಲಿಯೇ ಲಯವಾದ ರೇವಣಸಿದ್ಧೇಶ್ವರನು, ಅನಾದಿಮುಕ್ತನಲ್ಲ, ಅವಾಂತರಮುಕ್ತರೆಂಬ ಅಜ್ಞಾನಿಗಳಿಗೆ ನಾಯಕನರಕ ತಪ್ಪದು."