Shishir Hegde Column: ನಾಯಕನನ್ನು ಕೊಲ್ಲುವ ಮೂಲಕ ಈ ಯುದ್ಧ ಶುರುವಾಯಿತಲ್ಲ !
ಇರಾನ್ ಮತ್ತು ಭಾರತದ ಸಂಬಂಧ ಬಹಳ ಹಳೆಯದು. ಎಷ್ಟು? ನಾವಿಂದು ಉಖ ಮಾಡುವ ಹರುಕುಮುರುಕು ಬ್ರಿಟಿಷ್ ಅಪೂರ್ಣ ಇತಿಹಾಸವನ್ನೇ ಆಧರಿಸಿ ನೋಡುವುದಾದರೆ, ಆರರಿಂದ ಹತ್ತುಸಾವಿರ ವರ್ಷ. ಅಷ್ಟುಕಾಲದಿಂದ ಭಾರತ ಇರಾನಿನ ಸಂಬಂಧವಿದೆ. ಪಾಕಿಸ್ತಾನ ವಿಭಜನೆ ಗಿಂತ ಮೊದಲು ಇರಾನ್ ಪಕ್ಕದ ದೇಶ ತಾನೆ!
-
ಶಿಶಿರಕಾಲ
ಖುದಾ ಭೀ ಆಸಮಾನ್ ಸೆ ಜಬ್ ಜಮೀನ್ ಪರ್ ದೇಖತಾ ಹೋಗಾ... ಮೇರೆ ಮೆಹಬೂಬ ಕೋ ಕಿಸನೆ ಬನಾಯಾ ಸೋಚತಾ ಹೋಗಾsss..
‘ದೇವರು ಯಾವಾಗಾದರೂ ಆಕಾಶದಿಂದ ಭೂಮಿಯತ್ತ ನೋಡುತ್ತಿರಬಹುದು, ನನ್ನ ಪ್ರಿಯತಮೆಯನ್ನು ಸೃಷ್ಟಿ ಮಾಡಿದವರು ಯಾರು ಎಂದು ಅವನು ಕೂಡ ಯೋಚಿಸುತ್ತಿರ ಬಹುದು! ಹಿಂದಿಯ ಧರ್ತಿ’ ಸಿನಿಮಾದಲ್ಲಿ ರಾಜೇಂದ್ರ ಕುಮಾರ್ ವಹೀದಾ ರೆಹಮಾನ್ ಳನ್ನು ಮೆಲ್ಲಗೆ ಅಪ್ಪುವ ಹಾಡು. ಮಹಮ್ಮದ್ ರಫಿಯ ಸ್ವರಭಾವದಿಂದಾಗಿ ರಾಜೇಂದ್ರ ಕುಮಾರ್ ಕೂಡ ರೋಮ್ಯಾಂಟಿಕ್ ಆಗಿ ಕಾಣಿಸಿ ಬಿಡುತ್ತಾನೆ!
ರಫಿಯ ಅಸಂಖ್ಯ ಹಾಡುಗಳಲ್ಲಿ ಇದು ಕೂಡ ನನಗಿಷ್ಟ. ಆಗೀಗ ನೆನಪಾಗುತ್ತಲೇ ಇರುತ್ತದೆ. ಆದರೆ ನೆನಪಾಗುವುದು ಹಾಡಿನ ಇಂಪಿಗೆ, ತಂಪಿಗೆ ಅಲ್ಲ. ಮನುಷ್ಯ ಕೆಟ್ಟದ್ದು ಮಾಡಿದಾಗ ಅಥವಾ ಅನಾಚಾರಕ್ಕೆ ಇಳಿದದ್ದು ಕಂಡಾಗಲೆಲ್ಲ ಈ ಹಾಡು - ಅದರಲ್ಲೂ ವಿಶೇಷವಾಗಿ ಪಲ್ಲವಿಯ ಮೊದಲ ಸಾಲು ನೆನಪಾಗುತ್ತದೆ. ದೇವರು ಯಾವಾಗಲಾದರೂ ಭೂಮಿಯತ್ತ ನೋಡುತ್ತಿರಬಹುದು.. ಆಗ ಏನಂದುಕೊಳ್ಳಬಹುದು?
ಇರಾನ್ ಮತ್ತು ಭಾರತದ ಸಂಬಂಧ ಬಹಳ ಹಳೆಯದು. ಎಷ್ಟು? ನಾವಿಂದು ಉಖ ಮಾಡುವ ಹರುಕುಮುರುಕು ಬ್ರಿಟಿಷ್ ಅಪೂರ್ಣ ಇತಿಹಾಸವನ್ನೇ ಆಧರಿಸಿ ನೋಡುವು ದಾದರೆ, ಆರರಿಂದ ಹತ್ತುಸಾವಿರ ವರ್ಷ. ಅಷ್ಟುಕಾಲದಿಂದ ಭಾರತ ಇರಾನಿನ ಸಂಬಂಧ ವಿದೆ. ಪಾಕಿಸ್ತಾನ ವಿಭಜನೆಗಿಂತ ಮೊದಲು ಇರಾನ್ ಪಕ್ಕದ ದೇಶ ತಾನೆ!
ಇದನ್ನೂ ಓದಿ: Shishir Hegde Column: ಶ್.. ಗುಟ್ಟಿನ ಗುಟ್ಟನ್ನು ಹೇಳುತ್ತೇನೆ, ಯಾರಿಗೂ ಹೇಳ್ಬೇಡಿ
‘ಅವೆಸ್ತಾ’ (ಪ್ರಾಚೀನ ಇರಾನಿನ, ಝರತುಷ್ಟ್ರರ ಪವಿತ್ರ ಗ್ರಂಥ) ಮತ್ತು ಋಗ್ವೇದದಲ್ಲಿ ಇರುವ ಶಬ್ದ ಸಾಮ್ಯತೆ, ಉದಾಹರಣೆಗೆ ಅಸುರ, ಸೋಮ, ಆರ್ಯ ಇವೆಲ್ಲ ಅಲ್ಲಿಯೂ ಅದೇ ಅರ್ಥದಲ್ಲಿ ಬಳಸಿದ್ದು ಇತ್ಯಾದಿ ಸಾಕ್ಷಿ. ಝರತುಷ್ಟ್ರ ಧರ್ಮಗ್ರಂಥದಲ್ಲಿ ಇರುವ ಸಾಮ್ಯತೆ ಕಂಡರೆ, ಇರಾನ್‌ನಲ್ಲಿ ಅದಕ್ಕಿಂತ ಮೊದಲು ಸನಾತನ ಧರ್ಮವೇ ಇತ್ತು ಎಂಬು ದು ಸ್ಪಷ್ಟವಾಗುತ್ತದೆ.
ಸೃಷ್ಟಿ, ಅಗ್ನಿ, ಚಂದ್ರ, ಪ್ರಕೃತಿ, ಪ್ರಾಣಿಗಳು ಇವನ್ನೆಲ್ಲ ಪೂಜಿಸುವ ಪದ್ಧತಿ ಇತ್ತು ಎನ್ನುತ್ತದೆ ಇತಿಹಾಸ. ಹಾಗಿರುವಾಗ ಹೇಗೆ ಭಾರತದಲ್ಲಿ ಬೌದ್ಧ, ಜೈನ ಮತಗಳು ಪ್ರತ್ಯೇಕಗೊಂಡು ಹುಟ್ಟಿದಂತೆ, ಝರತುಷ್ಟ್ರ ಧರ್ಮ ಅಲ್ಲಿನ ಸನಾತನ ಬದುಕಿಗೊಂದು ರೂಪರೇಷೆ ಕೊಟ್ಟಿತ್ತು.
ಅಲ್ಲಿಂದ ಮುಂದೆ ಬರೋಬ್ಬರಿ ಒಂದುಕಾಲು ಸಾವಿರ ವರ್ಷ ಇರಾನಿನಲ್ಲಿ ಝರತುಷ್ಟ್ರ ರಾಷ್ಟ್ರಧರ್ಮವಾಗಿತ್ತು. ಏಳನೇ ಶತಮಾನದ ವರೆಗೆ. ಅರಬ್ಬಿ ಮುಸ್ಲಿಂ ರಾಜರ ದಾಳಿ - ಹತ್ತೇಹತ್ತು ವರ್ಷದಲ್ಲಿ ಪಾರ್ಸಿ ರಾಜರು ಯುದ್ಧದಲ್ಲಿ ಸೋತು ಅವರ ಧರ್ಮ ಸರ್ವನಾಶ ವಾಗಿ ಹೋಯಿತು. ಆಗ ಅಳಿದುಳಿದವರು ಓಡಿಬಂದದ್ದು ಮತ್ತು ಈಗಾಗಲೇ ವ್ಯಾಪಾರಕ್ಕೆ ಸಿಲ್ಕ್ ರೂಟ್ ಮಾರ್ಗವಾಗಿ ಭಾರತಕ್ಕೆ ಬಂದು ಹೋಗುತ್ತಿದ್ದವರು ಇಲ್ಲಿಯೇ ಉಳಿದು ಕೊಂಡವರು ಇತ್ಯಾದಿ.
ಹೀಗೆ ಬಂದವರ ಪ್ರಮಾಣ ತೀರಾತೀರಾ ಕಡಿಮೆ. ಇವತ್ತಿಗೆ ಇಷ್ಟು ವರ್ಷವಾದರೂ ಭಾರತ ದಲ್ಲಿ ಪಾರ್ಸಿಗಳ ಒಟ್ಟೂ ಸಂಖ್ಯೆ 60-70 ಸಾವಿರ ಎಂದಾದರೆ ಆಗ ಬಂದವರು ಎಷ್ಟಿರ ಬಹುದು? ಇಡೀ ಸಾಮ್ರಾಜ್ಯದಲ್ಲಿ ಕೆಲವೇ ಕೆಲವು ಸಾವಿರ. ಉಳಿದವರು ಕೊಲ್ಲಲ್ಪ ಟ್ಟರು, ಇಲ್ಲವೇ ಮತಾಂತರವಾದರು. ಕೊಲೆ, ರೇಪ್ ನರಮೇಧ, ದಂಗೆ, ರಕ್ತಸಿಕ್ತ. ಟಿಪಿಕಲ್ ಮುಸ್ಲಿಂ ದಾಳಿಕೋರರು. ಅವರು ಝರತುಷ್ಟ್ರ ಧರ್ಮವನ್ನು ಸಂಪೂರ್ಣ ನಾಶ ಮಾಡಿ ಬಿಟ್ಟರು.
ನಿಜ ಹೇಳಬೇಕೆಂದರೆ ಭಾರತದಲ್ಲಿರುವ ಪಾರ್ಸಿಗಳು - ಪಾರ್ಸಿ ಎಂಬ ಭವ್ಯತೆಯ ಕೊನೆಯ ಒಂದು ಚಿಕ್ಕ ಅಂಶ. ಅವರನ್ನು ಭಾರತ ಕಾವುಕೊಟ್ಟು ಕೈಲಾದಷ್ಟು ಪೋಷಿಸಿ ಬೆಳೆಸಿದೆ ಎನ್ನುವುದು ಹೆಚ್ಚು ಸರಿ. ಈಗ ಮೊನ್ನೆ ಇಸ್ರೇಲ್ ಇರಾನಿನ ಮೇಲೆ ದಾಳಿ ಮಾಡಿತಲ್ಲ. ಇತಿಹಾಸದ ವ್ಯಂಗ್ಯವೇನೆಂದರೆ ಇಸ್ರೇಲಿನದು - ಯಹೂದಿಗಳದ್ದು ಕೂಡ ಹೆಚ್ಚು ಕಡಿಮೆ ಇದೇ ಕಥೆ. ಇರಾನಿನಲ್ಲಿ ಮುಸ್ಲಿಮರು ಬಂದು ಪಾರ್ಸಿ ಧರ್ಮವನ್ನು ಸರ್ವನಾಶ ಮಾಡಿದರು, ಅಲ್ಲಿ ರೋಮನ್ನರು ಜೆರುಸಲೇಂ ವಶಪಡಿಸಿಕೊಂಡು ಯಹೂದಿಗಳನ್ನು ದಿಕ್ಕಪಾಲಾಗಿಸಿದರು.
ಮುಂದೆ ಏಳನೇ ಶತಮಾನದಲ್ಲಿ ಅರಬ್ಬಿ ಮುಸ್ಲಿಮರು ರೋಮನ್ನರ ಕೈಯಿಂದ ಯಹೂದಿ ಗಳ ನೆಲವನ್ನು ವಶಪಡಿಸಿಕೊಂಡಿದ್ದವು. ಆಮೇಲೆ ವಿಶ್ವಯುದ್ಧ ಎಲ್ಲ ಆಯಿತು, ಹಿಟ್ಲರ್ ಬಂದ, ನರಮೇಧ ಮಾಡಿದ ಇತ್ಯಾದಿ ನಡೆಯಿತು.
ಇದೆಲ್ಲದರಿಂದ ಯಹೂದಿಗಳು ದಿಕ್ಕಾಪಾಲಾಗಿ ಯುರೋಪ್, ಅಮೆರಿಕ ಸೇರಿಕೊಂಡರು. ಆನಂತರ ಇಸ್ರೇಲ್ ಸ್ಥಾಪನೆಯಾಯ್ತು. ಅತ್ತ ಇರಾನಿನಲ್ಲಿ ಶಿಯಾ ಮುಸ್ಲಿಂ ರಾಜರ ಆಡಳಿತ ಮುಂದುವರಿಯಿತು. ಕೊನೆಯ ಒಂದೆರಡು ರಾಜರೂ, ಮುಹಮ್ಮದ್ ರೇಜಾ ಪೆಹ್ಲಾವಿ ಈ ದೇಶವನ್ನು ಅದೆಷ್ಟು ಆಧುನೀಕರಿಸಿದ್ದ ಎಂಬುದನ್ನು ‘ಆಗೀಗ ಇರಾನ್ ಹೀಗಿತ್ತು’ ಎಂಬ ಫೊಟೋದಲ್ಲಿ ನೋಡಿರುತ್ತೇವೆ.
ಇತ್ತೀಚೆಗೆ 1979ರವರೆಗೆ ಚೆನ್ನಾಗಿಯೇ ಇತ್ತು. ಇರಾನಿಗೆ ಸಾಡೆ ಸಾತ್ ಶನಿ ಶುರುವಾಗಿದ್ದು ಆಗ, ಆ ವರ್ಷ. ರೇಜಾ ಪೆಹ್ಲಾವಿ ಅಮೆರಿಕಾದ ಕೈಗಾರಿಕೆ, ಸಂಸ್ಕೃತಿ ಎಲ್ಲವನ್ನೂ ಸ್ವಾಗತಿಸಿದ. ಆದರೆ ಇರಾನಿನ ಖಟ್ಟರ್ ಮತೀಯರಲ್ಲಿ ಆಧುನಿಕತೆಯ ಬಗ್ಗೆ ತೀವ್ರವಾದ ತಿರಸ್ಕಾರ ಇತ್ತು. ಒಂದಿಷ್ಟು ಎಡಚರು ಮತ್ತು ರೋಹೊ ಖೋಮೇನಿ ಎಂಬ ಕ್ಲೆರಿಕ್ (ಧರ್ಮ ಮುಖ್ಯಸ್ಥ) ಗಲಾಟೆ, ದಂಗೆ ಶುರುಮಾಡಿಕೊಂಡರು.
ಅದನ್ನು ಹತ್ತಿಕ್ಕಲು ರಾಜನಿಗೆ, ಆಡಳಿತಕ್ಕೆ ಸಾಧ್ಯವಾಗಲಿಲ್ಲ. 1979ರ ವರ್ಷವೇ ಜನರು ಇಡೀ ದೇಶವನ್ನು ಧರ್ಮದ ಮುಖ್ಯಸ್ಥನೊಬ್ಬನಿಗೆ ಕೊಟ್ಟರು. ಈ ಖೋಮೇನಿ ಅಂಡ್ ಖೋಮೇನಿ ಬಂದವರು ಮಾಡಿದ ಮೊದಲ ಕೆಲಸ ಎಂದರೆ ಧರ್ಮ, ಬುರ್ಕಾ ಹೇರಿಕೆ ಇತ್ಯಾದಿ. ಹುದಾದ್ - ಅಪರಾಧ ನಿಗದಿತ ಶಿಕ್ಷೆ, ಕಾಸಿಸ್ - ಕಣ್ಣು ತೆಗೆದರೆ ಕಣ್ಣು, ತಾರ್ಜಿ, ದಿಯಾ ಇತ್ಯಾದಿ ಶೆರಿಯಾ ಧಾರ್ಮಿಕ ಕಾನೂನು ಹೇರಿ ಕೂತರು.
ಹಣೆಬರಹ ನೋಡಿ. ಈ ಖೋಮೇನಿಗಳು ಅಲ್ಲಿಂದಿಲ್ಲಿಯವರೆಗೂ ಅಮೆರಿಕ ಶತ್ರು, ಇಸ್ರೇಲ್ ನ ವೈರಿ ರಾಷ್ಟ್ರ - ಇದನ್ನೇ ಜಪ ಮಾಡಿದ್ದು. ಉಳಿದ ದೇಶಗಳ ಜೊತೆ ಸಂಬಂಧ ಸರಿಯಿಟ್ಟು ಕೊಳ್ಳದೆ-ಆಧುನಿಕವಾಗಿದ್ದ ಇರಾನನ್ನು ನಲವತ್ತು ವರ್ಷಗಳಲ್ಲಿ ನೂರು ವರ್ಷ ಹಿಂದಕ್ಕೆ ಒಯ್ದುಬಿಟ್ಟರು. ಅಷ್ಟು ವರ್ಷ ಧರ್ಮದ ಹೆಸರಲ್ಲಿ ಜನರನ್ನು ಬಂದೂಕಿನಿಂದ ಆಳಿದ್ದು ಈ ಆಯತೊ ಖೋಮೇನಿ, ಅವನು ಈ ವ್ಯವಸ್ಥೆಗೆ ಭದ್ರಬುನಾದಿ ಹಾಕಿಕೊಟ್ಟವ.
ಈಗ ಸತ್ತವ ಆಯತೊ ಖೋಮೇನಿ. ಇರಾನಿಗೆ ಬಿದ್ದ ದೊಡ್ಡ ಎಂತೆಂದರೆ ಇರಾಕ್-ಇರಾನ್ ಯುದ್ಧ. ದೇಶದ ಬಡತನಕ್ಕೆ ಧರ್ಮದ ಹೆಸರಿನಲ್ಲಿ ಹದಗೆಡಿಸಿಕೊಂಡ ಅಂತರಾಷ್ಟ್ರೀಯ ಸಂಬಂಧ ಕಾರಣವಾಯಿತು. ಜೊತೆಯಲ್ಲಿ ಆಂತರಿಕ ದಂಗೆಗಳಿಗೂ ಅದೇ ಧಾರ್ಮಿಕ ಹಿನ್ನೆಲೆಯ ವ್ಯವಸ್ಥೆ, ಕಾನೂನು ಕಾರಣವಾಗಿತ್ತು.
ಅತ್ತ ಖೋಮೇನಿ ‘ಅಮೆರಿಕಗೆ ಸಾವು ಬರಲಿ’ ಎಂದು ಬೊಬ್ಬೆ ಹಾಕಿ ಅದನ್ನೇ ಆಧುನಿಕತೆ ಯ ವಿರುದ್ಧ ಎಂಬಂತೆ ಬಿಂಬಿಸಿಕೊಳ್ಳುತ್ತಾ ಇದ್ದರೆ, ಇತ್ತ ಅಮೆರಿಕ ತನ್ನ ಡಾಲರ್ ಮೂಲಕ ಇರಾನಿಗೆ ಕೊಟ್ಟ ಕಾಟ ಕೂಡ ಅಷ್ಟಿಷ್ಟಲ್ಲ. ನೂರಾರು ಬಿಲಿಯನ್ ಡಾಲರ್ ಪೆಟ್ರೋಲ್ ರಫ್ತು ಮಾಡಿದರೂ ಇರಾನ್ ದಿವಾಳಿಯ ಅಂಚಿನಲ್ಲಿ ನಿಂತು ಕೆಲವು ವರ್ಷಗಳೇ ಕಳೆದಿವೆ. ಅದೆಲ್ಲದರ ಜೊತೆ ಕೊರೊನಾ ಸಾಂಕ್ರಾಮಿಕದ ನಂತರ ಜನರ ದಂಗೆಗಳು ಇತ್ಯಾದಿ ಕೂಡ ಹೆಚ್ಚಿದ್ದವು.
ಡೊನಾಲ್ಡ್ ಟ್ರಂಪ್ ಹಿಂದಿನ ಸರತಿ ಅಧ್ಯಕ್ಷನಾಗಿದ್ದಾಗ ಇರಾನಿನ ಮೇಲೆ ಅಮೆರಿಕದ ಆರ್ಥಿಕ ಒತ್ತಡ ಹೆಚ್ಚಿಸಿದ್ದ. ಅದಾದ ಮೇಲೆ ಬೈಡನ್ ಸರಕಾರ ನಿರ್ಬಂಧವನ್ನು ಸ್ವಲ್ಪ ಸಡಿಸಿಲಿಸಿತ್ತು. ಆಗ ಇರಾನ್ ಸ್ವಲ್ಪ ಚೇತರಿಸಿಕೊಂಡಿತ್ತು. ಈಗ ಟ್ರಂಪ್ ಪುನರಾಯ್ಕೆಯಾಗಿ ವರ್ಷ ಕಳೆದಿದೆಯಷ್ಟೇ - ಹೀಗಿರುವಾಗ ಅಮೆರಿಕ ಮತ್ತು ಇಸ್ರೇಲ್ ಸೀದಾ ಹೋಗಿ 86ರ ಖೋಮೇನಿಯನ್ನೇ ಮುಗಿಸಿ ಬಿಟ್ಟಿದ್ದಾರೆ!
ಹೀಗೆ ಒಬ್ಬ ದೇಶದ ಮುಖ್ಯಸ್ಥನನ್ನು ಏಕಾಏಕಿ ದಾಳಿಮಾಡಿ ಕೊಲ್ಲುವುದು ಸಾಮಾನ್ಯದ ವಿಷಯವೇ? ಅಮೆರಿಕ ಇತ್ತೀಚೆಗೆ ವೆನೆಜುವೆಲಾದ ಅಧ್ಯಕ್ಷನನ್ನು ಅವನ ಮನೆಯಿಂದಲೇ ರಾತ್ರಿ ಎತ್ತಿಕೊಂಡು ಬಂದದ್ದೇ ದೊಡ್ಡ ಸುದ್ದಿಯಾಗಿತ್ತು. ಈಗಿನ ನಡೆ ಅದಕ್ಕಿಂತ ದೊಡ್ಡದು. ಇದನ್ನು ಪಶ್ಚಿಮ ರಾಷ್ಟ್ರಗಳು ಅಮೆರಿಕ ದೇಶ ಲಾಡೆನ್ ಕೊಂದಂತೆ ಇದು ಎಂದೇ ಬಿಂಬಿಸುತ್ತಿವೆ. ಆದರೆ ಲಾಡೆನ್ ಯಾವುದೇ ದೇಶದ ಮುಖ್ಯಸ್ಥನಾಗಿರಲಿಲ್ಲ.
ಅಮೆರಿಕ ಮತ್ತು ಇಸ್ರೇಲ್ ಇರಾನಿನ ಮೇಲೆ ದಾಳಿ ಮಾಡಲು ಮುಂದಾದ ಮುಖ್ಯ ಕಾರಣ ವೇನು ಎಂದರೆ ಒಬ್ಬೊಬ್ಬರದು ಒಂದೊಂದು ಉತ್ತರ. ಟ್ರಂಪ್ ಒಮ್ಮೆ ಇಸ್ರೇಲಿಗರು ದಾಳಿ ಮಾಡಿದ್ದು, ನಾವು ಜೊತೆಯಾಗಲೇಬೇಕಾದ ಅನಿವಾರ್ಯತೆ ಎಂಬಂತೆ ಒಂದು ಕಡೆ ಹೇಳಿದ್ದಾನೆ.
ಇನ್ನೊಂದು ಕಡೆ - ಇನ್ನು ಸ್ವಲ್ಪ ತಡ ಮಾಡಿದ್ದಾರೆ ಇರಾನ್ ನಮ್ಮ ಮೇಲೆಯೇ ದಾಳಿ ಮಾಡಿ ಬಿಡುತ್ತಿತ್ತು ಎಂದಿದ್ದಾನೆ. ಟ್ರಂಪ್ ಏನು ಬೇಕಾದರೂ ಹೇಳಿ ಬಿಡುತ್ತಾನೆ. ಈ ಕುರಿತು ಖುದ್ದು ಅಮೆರಿಕಾದ ರಾಜಕಾರಣಿಗಳಲ್ಲಿಯೂ ಆ ಸ್ಪಷ್ಟತೆ, ಏಕತೆ ಇಲ್ಲ. ಒಂದಂತೂ ಸತ್ಯ ಖೋಮೇನಿ ಖತಂ ಆಗಿದ್ದಾನೆ.
ಆದರೆ ಇದು ಯಾವುದೋ ರಾಜ, ಪ್ರಧಾನಿ, ಅಧ್ಯಕ್ಷನನ್ನು ತೆಗೆದು ಹಾಕಿ ಹೊಸ ವ್ಯವಸ್ಥೆ ಸೃಷ್ಟಿಸಿದಂತಲ್ಲ. ಇರಾನಿನಲ್ಲಿ ಇದ್ದದ್ದು ಧರ್ಮದ ಆಡಳಿತ. ಅಲ್ಲಿ ಮುಖ್ಯಸ್ಥ ಖೋಮೇನಿ, ಅವನ ಕೆಳಗೆ 88 ಜನ ಆಡಳಿತದವರೂ ಧರ್ಮ ಮುಖ್ಯಸ್ಥರೇ. ಅವರ ಕೆಳಗೆ, ಇನ್ನೆರಡು-ಮೂರು ಸ್ತರಗಳಲ್ಲಿ, ಅಲ್ಲಿಂದ ಸ್ಥಳೀಯ ನ್ಯಾಯಾಧೀಶರವರೆಗೆ ಎಲ್ಲರೂ ಇದೇ ಧಾರ್ಮಿಕ ಹಿನ್ನೆಲೆಯವರದೇ ಆಡಳಿತ.
ಅವರ್ಯಾರು ಡಿಗ್ರಿ, ಎಂಬಿಎ, ಎಲ್‌ಎಲ್‌ಬಿ ಮುಗಿಸಿ ನೌಕರಿಗೆ ಕೂತವರಲ್ಲ. ಅವರದು ಧರ್ಮ, ಸ್ಥಳೀಯ ಸಾರ್ವಭೌಮ. ಇಲ್ಲಿ ವ್ಯಕ್ತಿ ಆಳ್ವಿಕೆ ನಡೆಸುತ್ತಿರುವುದಲ್ಲ- ಬದಲಿಗೆ ಮತದ -ರೆಲಿಜಿಯನ್ನಿನ ಆಡಳಿತ. ಖೋಮೇನಿ ಪರಮೋಚ್ಚ ಧಾರ್ಮಿಕ ಮುಖ್ಯಸ್ಥ, ಅವನೇ ಪರಮಾಧ್ಯಕ್ಷನಾಗಿದ್ದ. ಈಗ ಅವನಿಲ್ಲ, ಅವನ ಕೆಳಹಂತದ ಎರಡು ಮೂರು ನೂರು ಮಂದಿ ಸತ್ತಿರಬಹುದು. ಆದರೆ ಇಡೀ ಆಡಳಿತ ವ್ಯವಸ್ಥೆ ಹಾಗೆಯೇ ಇದೆ.
ಇತಿಹಾಸದ ಯಾವುದೇ ಯುದ್ಧವನ್ನೇ ನೋಡಿ - ಎಲ್ಲ ಘರ್ಷಣೆಗಳು ಶುರುವಾಗುವುದು ಎಲ್ಲಿ? ಗಡಿಯಿಂದ ಅಲ್ಲವೇ? ಶತ್ರುರಾಷ್ಟ್ರ ಒಳನುಗ್ಗುತ್ತ, ಕೊನೆಯಲ್ಲಿ ರಾಜಧಾನಿ, ರಾಜನ ಮನೆ ವಶಪಡಿಸಿಕೊಂಡು ರಾಜನನ್ನೋ, ಅಧ್ಯಕ್ಷನನ್ನೋ ಮುಗಿಸಿದ ಮೇಲೆ ಯುದ್ಧ ಮುಗಿಯುತ್ತದೆ ಅಲ್ಲವೇ? ಆದರೆ ಈ ಯುದ್ಧ ಹಾಗಲ್ಲ - ಇದು ಶುರುವಾಗಿದ್ದೇ ಖೋಮೇನಿ ಎಂಬ ಸರ್ವಾಧ್ಯಕ್ಷನನ್ನು ಕೊಲ್ಲುವ ಮೂಲಕ. ಮುಗಿಯುವ ಹಂತದಲ್ಲಿ ಆಗಬೇಕಾದದ್ದು ಮೊದಲ ಹಂತದಲ್ಲಿಯೇ ನಡೆದುಬಿಟ್ಟಿದೆ.
ಅಮೆರಿಕಗೆ ಇರಾನಿನ ವ್ಯವಸ್ಥೆಯನ್ನು ಭೇದಿಸಲು, ಬದಲಿಸಲು ಸಾಧ್ಯವೇ ಇಲ್ಲ. ಜನರಿಂದ ಧರ್ಮವನ್ನೇ ತೆಗೆಯಬೇಕೆಂದರೆ ಚೀನಾ ರೀತಿಯ ಆಡಳಿತವಾದರೆ ಸಾಧ್ಯವಾದೀತು. ಅದು ಮುಸ್ಲಿಂ ರಾಷ್ಟ್ರದಲ್ಲಿ ಅಸಾಧ್ಯ. ಶಿಯಾ ರಾಷ್ಟ್ರಕ್ಕೆ ಮಾದರಿಯಾಗುವ ಇನ್ನೊಂದು ರಾಷ್ಟ್ರ ವೂ ಇಲ್ಲ. ಇದು ಪ್ರಜಾಪ್ರಭುತ್ವ ತಂದು, ಆ ಮೂಲಕ ವ್ಯವಸ್ಥೆಯಿಂದ ಧರ್ಮವನ್ನು ಏಕಾಏಕಿ ಬಿಡಿಸುವುದು - ಹೊರಹಾಕುವುದು ಸಾಧ್ಯವಾಗುವುದಿಲ್ಲ. ರಾಜ ಆಡಳಿತಕ್ಕೆ ಹೋಗಲು ಸಾಧ್ಯವೂ ಇಲ್ಲ.
ಇಸ್ರೇಲಿಗೆ ಇರಾನ್ ಅಪಾಯ. ಅದನ್ನು ನಿಶ್ಶಸ್ತ್ರಗೊಳಿಸಲೇಬೇಕಾದ ಸ್ಥಿತಿ ಈಗಿತ್ತಲಾಗೆ ನಿರ್ಮಾಣವಾಗಿತ್ತು. ಇಸ್ರೇಲಿಗಳು ಹಮಾಸ್ ಸರ್ವನಾಶಕ್ಕೆ ಇಳಿದಾಗ, ಅತ್ತ ಹೂತಿಗಳನ್ನು ಬಳಸಿಕೊಂಡು ಇರಾನಿಯನ್ ರೆವಲ್ಯೂಷನ್ ಗಾರ್ಡ್ ಇಸ್ರೇಲಿನ ಮೇಲೆ ನಿತಂತರ ದಾಳಿ ಮಾಡುತ್ತಲೇ ಇತ್ತು. ಈಗ ಬಹುತೇಕ ಇಸ್ರೇಲಿನ ಬಯಕೆ ತೀರಿದೆ. ಲೆಕ್ಕ ಮೇರಿ ಯುದ್ಧನೌಕೆ, ಸೈನ್ಯ, ಶಸ್ತ್ರ, ಎಲ್ಲವನ್ನೂ ಅಮೆರಿಕ ಇಸ್ರೇಲ್ ಸೇರಿ ಬೂದಿ ಮಾಡುತ್ತಿವೆ. ಆದರೆ ಅಮೆರಿಕಗೆ ಈ ಯುದ್ಧದಲ್ಲಿ ಹೇಳಿಕೊಳ್ಳುವಂತಹ ಉದ್ದೇಶವೇ ಇಲ್ಲ.
ಟ್ರಂಪ್ ಒಮ್ಮೆ ಅಣ್ವಸ್ತ್ರ ನಿಲ್ಲಿಸಲು, ಇನ್ನೊಮ್ಮೆ ಮಿಸೈಲ್ ನಿಲ್ಲಿಸಲು, ಆಡಳಿತ ಬದಲಾಯಿಸಲು, ಹಳೆಯ ಸೇಡಿಗೆ ಎಂದೆಲ್ಲ ಹೇಳುತ್ತಿದ್ದಾನೆ. ಆದರೆ ಯುದ್ಧದಿಂದಾಗಿ ಅಮೆರಿಕಗೆ ನೇರ ಹೊಡೆತ ಬಿದ್ದಿದೆ. ಪರಿಸ್ಥಿತಿ ಹೇಗಾಗಿದೆಯೆಂದರೆ ನಿಮಗೆ ಗೊತ್ತಿದೆಯಲ್ಲ, ಭಾರತ ರಷ್ಯಾದಿಂದ ತೈಲ ಖರೀದಿಸಲಿ ಎಂದು ಹರಿಯುವ ನೀರಿಗೆ ದೊಣ್ಣೆ ನಾಯಕನ ಅಪ್ಪಣೆಯಂತೆ ಟ್ರಂಪ್ ಹೇಳಿದ್ದಾನಲ್ಲ.
ಒಟ್ಟಾರೆ - ಹೀಗೆ ಹೇಗೋ ಶುರುವಾದ ಯುದ್ಧ ಎಲ್ಲಿಗೆ, ಏನು ಮಾಡಿದ ನಂತರ ಮುಗಿಸ ಬೇಕು ಎನ್ನುವುದೇ ಪ್ರಶ್ನೆಯಾಗಿದೆ. ಹೆಚ್ಚು ದಿನ ಹಾಗೆಯೇ ಬಿಡಲಿಕ್ಕೂ ಸಾಧ್ಯವಿಲ್ಲ - ಅಲ್ಲಿ ಇರಾನಿನ ಹೊರ್ಮುಜ್ - ಜಗತ್ತಿನ ಐದನೇ ಒಂದರಷ್ಟು ಪೆಟ್ರೋಲಿಯಂ ಅದೇ ಮಾರ್ಗ ವಾಗಿ ದಾಟಿ ಬರಬೇಕು - ಅಲ್ಲಿ ಇರಾನ್ ಪಾರುಪತ್ಯವಿದೆ.
ಹಾಗಾಗಿ ಆದಷ್ಟು ಬೇಗ ಅದನ್ನು ಸರಿಮಾಡಿಕೊಳ್ಳದಿದ್ದರೆ ಈ ಯುದ್ಧದ ಪೆಟ್ಟು ಸ್ವತಃ ಅಮೆರಿಕ ಮತ್ತು ಎಲ್ಲಾ ದೇಶಗಳಿಗೂ ತಾಗಲಿದೆ. ಪೆಟ್ರೋಲಿಯಂ ಅಕ್ಕಿ - ಬೇಳೆಯಂತಲ್ಲ. ನಿರಂತರ ಬೇಡಿಕೆ - ಉತ್ಪಾದನೆ - ಸರಬರಾಜು. ಯಾವ ಅವಲಂಬನೆಯ ರಾಷ್ಟ್ರದಲ್ಲಿಯೂ ಪೆಟ್ರೋಲಿಯಂ ದಾಸ್ತಾನಿರುವುದಿಲ್ಲ.
ಇಷ್ಟಾಗಿಯೂ ಅಮೆರಿಕ ಇಸ್ರೇಲ್‌ನ ಬೆನ್ನಿಗೆ ನಿಲ್ಲುವುದು ಏಕೆ? ಇತಿಹಾಸ ಏನೇ ಇರಲಿ - ಇಂದಿನ ಟ್ರಂಪ್‌ನಂತಹ ಆಡಳಿತವೂ ಇಸ್ರೇಲಿನ ಬೆನ್ನಿಗೆ ನಿಂತು ದೋಸ್ತಿ ನಿಭಾಯಿಸು ವುದು ಹೇಗೆ, ಏಕೆ? ಏನಿರಬಹುದು ಆ ಕಾರಣ? ಅನಾದಿಕಾಲದಲ್ಲಿ ಯಹೂದಿಗಳು ರೋಮನ್ನರ, ನಂತರ ಮುಸ್ಲಿಮರ ದಾಳಿಗೆ ದಿಕ್ಕಾಪಾಲಾದರು, ಚದುರಿ ಹೋದರು ಎಂದೆನಲ್ಲ. ಅವರಲ್ಲಿ ಒಂದು ದೊಡ್ಡವರ್ಗ, ಅವರ ತಲಗಳಿಗಳು ಅಮೇರಿಕಾದಲ್ಲಿವೆ.
ಅವರ ವಶೀಲಿತನ - ರಾಜಕೀಯ ಮತ್ತು ಆರ್ಥಿಕ ತಾಕತ್ತು ಇದೆಲ್ಲವನ್ನೂ ಸಾಧ್ಯವಾಗಿಸಿದೆ. ಇದು ಸೂಕ್ಷ್ಮ. ಅಮೆರಿಕ ಈ ಯುದ್ಧದಲ್ಲಿ ಕಳೆದ ಆರು ದಿನದಲ್ಲಿ 11 ಬಿಲಿಯನ್ ಡಾಲರ್ ವ್ಯಯ ಮಾಡಿದೆ !
ಅಂತಹ ಭವ್ಯ ಪರಂಪರೆ ಕಂಡ ಇರಾನ್ ಅನ್ನು ಈಗ ನೋಡಿದರೆ, ಹಳೆಯ ಹಿಂದಿ ಸಿನಿಮಾದ ವಿಲನ್ ಲಕ್ವಾ ಹೊಡೆದು ಹಾಸಿಗೆ ಹಿಡಿದಂತೆ ಕಾಣಿಸುತ್ತಿದೆ. ರಿಲಿಜಿಯನ್ ಕೈಗೆ ಆಡಳಿತ ಕೊಟ್ಟ ಇರಾನ್ ಇಂದು ಭೂತ ಮತ್ತು ಭವಿಷ್ಯತ್ತಿನ ಮಧ್ಯ, ತ್ರಿಶಂಕು ಸ್ಥಿತಿಯಲ್ಲಿ ಇದೆ. ಪಾಠ ಏನೆಂದರೆ ದೇಶ, ವ್ಯವಸ್ಥೆ ಅದೆಷ್ಟೇ ಭದ್ರವೆನಿಸಿರಲಿ, ಆಧುನಿಕವೆನಿಸಿರಲಿ, ಕೆಲವೊಮ್ಮೆ ಅದೇ ವ್ಯವಸ್ಥೆಯೊಳಗೆ ರಿಲಿಜಿಯನ್ ಹುಳುಕೊಂದು ರಾಕ್ಷಸ ರೂಪ ಪಡೆದು ಬಿಡುತ್ತದೆ.
ಕ್ಯಾನ್ಸರ್ ಅದು. ಇದಕ್ಕೆ ಪಾಕಿಸ್ತಾನ, ಬಾಂಗ್ಲಾದೇಶ, ಇವೆಲ್ಲವೂ ಉದಾಹರಣೆಗಳು. ಇರಾನ್ - ಕೇವಲ ನಲವತ್ತೈದು ವರ್ಷದಲ್ಲಿ ಕೆಳಗೆ ಬಿದ್ದದ್ದು ನೆಲಕ್ಕಲ್ಲ, ಪಾತಾಳಕ್ಕೆ. ಇದರ ಪರಿಣಾಮ ಕನಿಷ್ಠ ಎಂಟರಿಂದ ಹತ್ತು ತಲೆಮಾರು ಅನುಭವಿಸಬೇಕು, ಮತ್ತಿನ್ನೊಂದು ಯುದ್ಧವಾಗದಿದ್ದರೆ. ರೆಲಿಜಿಯನ್‌ಗೆ ಸಿಕ್ಕಿಕೊಂಡ ಇರಾನಿನ ಕಥೆ ಇದಾದರೆ ಇದೆಲ್ಲ ನಡೆಯುವಾಗಲೇ ಸಿಂಗಾಪುರ, ಜಪಾನ್, ಹಾಂಗ್ ಕಾಂಗ್, ದಕ್ಷಿಣ ಕೊರಿಯಾ ಈ ದೇಶಗಳು ತಮ್ಮನ್ನು ತಾವು ಕಟ್ಟಿಕೊಂಡಿವೆ, ಯಶಸ್ವಿಯಾಗಿವೆ.
ಇದು ಸಮಾನಾಂತರ ಇತಿಹಾಸದ ಇನ್ನೊಂದು ಮಜಲು. ಖುದಾ ಭೀ ಆಸಮಾನ್ ಸೆ ಜಬ್ ಜಮೀನ್ ಪರ್ ದೇಖತಾ ಹೋಗಾ... ದೇವರು ನಮ್ಮತ್ತ ನೋಡುತ್ತಿದ್ದರೆ ಖಂಡಿತ ಅವನು ವಹೀದಾ ರೆಹಮಾನ್ ಬಗ್ಗೆ ಯೋಚಿಸೋದಂತೂ ಅನುಮಾನವೇ. ಆದರೆ ತಾನೇ ಸೃಷ್ಟಿಸಿದ ಮನುಷ್ಯ ಜಗತ್ತು ನಡೆಯುವ ರೀತಿ ವೈಚಿತ್ರಗಳು ಅವನಿಗೂ ಸೋಜಿಗವೇ ಆಗಿರುತ್ತದೆ.
ಚಂದದ ಭೂಮಿ, ಗಾಳಿ, ನೀರು, ದೇಹ, ಬುದ್ಧಿ ಎಲ್ಲವನ್ನೂ ಕೊಟ್ಟ ದೇವರಿಗೆ - ಈ ಮನುಷ್ಯ ನನ್ನದೇ ಸೃಷ್ಟಿಯೇ ಎಂಬ ಅನುಮಾನ ಬರುತ್ತಿರಬಹುದು! ಇನ್ನೊಂದು ಯುದ್ಧ - ಇನ್ನೊಂದಿಷ್ಟು ಸಾವು. ಅರೆ, ಹಾಗಾದರೆ ಯುದ್ಧವಿಲ್ಲದೆ ಬದುಕಲು ಸಾಧ್ಯವೇ ಇಲ್ಲವೇ ಅಥವಾ ಇದೆಲ್ಲವೂ ಹೀಗೆಯೇ ಮುಂದಿವರಿಯಬೇಕೆ?