ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Mohan Vishwa Column: ಈ ಕೃತಿ ಪ್ರೀತಿಯ ಪ್ರಣಯವಲ್ಲ, ಅನುಕಂಪದ ರಾಜಕೀಯ !

ಶಹಜಾದ್ ಅಹಮದ್ ಕೂಡ ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ಇಂತಹ ನ್ಯಾಯಾಂಗ ಪ್ರಕ್ರಿಯೆಗಳಿದ್ದರೂ ಅಂದಿನ ಕಾಂಗ್ರೆಸ್‌ನ ಕೆಲವು ಹಿರಿಯ ನಾಯಕರು ಎನ್‌ಕೌಂಟರ್ ಕುರಿತು ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಸಲ್ಮಾನ್ ಖುರ್ಷಿದ್ ಎನ್‌ಕೌಂಟರ್‌ನ ಚಿತ್ರಗಳನ್ನು ನೋಡಿ ಸೋನಿಯಾ ಗಾಂಧಿಯವರು ಭಾವುಕರಾದರು ಮತ್ತು ಕಣ್ಣೀರಿಟ್ಟರು ಎಂದು ಹೇಳಿಕೆ ನೀಡಿದ್ದರು.

ಈ ಕೃತಿ ಪ್ರೀತಿಯ ಪ್ರಣಯವಲ್ಲ, ಅನುಕಂಪದ ರಾಜಕೀಯ !

-

ವೀಕೆಂಡ್‌ ವಿತ್‌ ಮೋಹನ್

ʼBelonging : A Journey of Love' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಹೊಸ ಆತ್ಮಕಥನವನ್ನು ಓದುವಾಗ, ಅದರಲ್ಲಿರುವ ರಾಜಕೀಯ ನೆನಪುಗಳು ಮತ್ತು ಅವರು ವ್ಯಕ್ತಪಡಿ ಸಿರುವ ಕೆಲವು ಭಾವನೆಗಳನ್ನು ಗಮನಿಸಿದಾಗ, ಮೂಡುವ ಸಹಜ ಪ್ರಶ್ನೆ, ಇದು ನಿಜಕ್ಕೂ ಪ್ರೀತಿಯ ಪಯಣವೇ ಅಥವಾ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಆಯ್ದುಕೊಂಡ ಅನುಕಂಪದ ಕಥೆಯೇ? ಡಿಸೆಂಬರ್ 6, 1992ರಂದು ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸವಾಗುವುದನ್ನು ದೂರದರ್ಶನದಲ್ಲಿ ನೋಡಿದಾಗ ತಾನು ಕಣ್ಣೀರಿಟ್ಟಿದ್ದಾಗಿ ಸೋನಿಯಾ ಗಾಂಧಿ ಹೇಳಿಕೊಂಡಿದ್ದಾರೆ. ಅದನ್ನು ಅವರು ತಮ್ಮ ಜೀವನದ ಮಹತ್ವದ ತಿರುವು ಎಂದು ಬಣ್ಣಿಸಿದ್ದಾರೆ.

ಆದರೆ ಸಾವಿರಾರು ಸಿಖ್ಖರು ಹತ್ಯೆಯಾದಾಗ, ಕಾಶ್ಮೀರದಲ್ಲಿ ಹಿಂದೂಗಳು ತಮ್ಮ ನೆಲೆಯಿಂದ ಓಡಿಹೋಗ ಬೇಕಾದಾಗ, ಭಯೋತ್ಪಾದಕ ದಾಳಿಗಳಲ್ಲಿ ಅಮಾಯಕರು ಪ್ರಾಣ ಕಳೆದುಕೊಂಡಾಗ ಮತ್ತು ದೇಶದ ಭದ್ರತೆಗಾಗಿ ಹೋರಾಡಿದ ಪೊಲೀಸ್ ಅಧಿಕಾರಿಗಳು ಹುತಾತ್ಮರಾದಾಗ ಅವರ ಮನಸ್ಸಿನಲ್ಲಿ ಇದೇ ರೀತಿಯ ನೋವು ಮೂಡಿತ್ತೇ? ಒಂದು ಕಡೆ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಾಂವಿಧಾನಿಕ ಮೌಲ್ಯಗಳ ಕುರಿತು ದೊಡ್ಡ ಭಾಷಣಗಳನ್ನು ಮಾಡುವವರು, ಮತ್ತೊಂದೆಡೆ ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆದ ಗಂಭೀರ ಘಟನೆಗಳ ಬಗ್ಗೆ ಎಷ್ಟು ಮುಕ್ತವಾಗಿ ಆತ್ಮಾವಲೋಕನ ಮಾಡಿಕೊಳ್ಳುತ್ತಾರೆ? ಆತ್ಮಕಥನದಲ್ಲಿ ತಮ್ಮ ಕುಟುಂಬದ ನೋವುಗಳಿಗೆ ಪುಟಗಳನ್ನು ಮೀಸಲಿಡುವಾಗ, ತಮ್ಮ ಪಕ್ಷದ ಆಡಳಿತದಲ್ಲಿ ನೋವು ಅನುಭವಿಸಿದ ಸಾವಿರಾರು ಕುಟುಂಬಗಳ ಕಣ್ಣೀರಿಗೆ ಎಷ್ಟು ಜಾಗ ನೀಡಿದ್ದಾರೆ? ಶತಮಾನಗಳಿಂದ ಹಿಂದೂಗಳು ಅಯೋಧ್ಯೆಯನ್ನು ಶ್ರೀರಾಮನ ಜನ್ಮಭೂಮಿಯೆಂದು ನಂಬಿದ್ದಾರೆ. ಅಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂಬುದು ಕೋಟ್ಯಂತರ ಭಕ್ತರ ಧಾರ್ಮಿಕ ಆಶಯವಾಗಿತ್ತು. ಆ ನಂಬಿಕೆಯ ಹಿಂದಿರುವ ಇತಿಹಾಸ, ಪುರಾತತ್ವ ಸಾಕ್ಷ್ಯಗಳು, ನ್ಯಾಯಾಲಯದಲ್ಲಿ ನಡೆದ ದೀರ್ಘ ಹೋರಾಟ ಮತ್ತು ಭಕ್ತರ ಭಾವನೆಗಳನ್ನು ಸೋನಿಯಾ ಗಾಂಧಿ ಅರ್ಥ ಮಾಡಿಕೊಳ್ಳಲಿಲ್ಲ.

ಸುಪ್ರೀಂ ಕೋರ್ಟ್ ಅಂತಿಮವಾಗಿ ಭೂಮಿಯನ್ನು ರಾಮಮಂದಿರ ನಿರ್ಮಾಣಕ್ಕಾಗಿ ನೀಡುವಂತೆ ಆದೇಶಿಸಿತು ಮತ್ತು ಮುಸ್ಲಿಂ ಸಮುದಾಯಕ್ಕೆ ಪರ್ಯಾಯವಾಗಿ ಐದು ಎಕರೆ ಭೂಮಿ ನೀಡುವಂತೆ ನಿರ್ದೇಶಿಸಿತು. ಹೀಗಿರುವಾಗ, ಬಾಬರಿ ಮಸೀದಿ ಧ್ವಂಸವನ್ನು ನೆನೆದು ಕಣ್ಣೀರು ಹಾಕಿದ ಸೋನಿಯಾ ಗಾಂಧಿಯವರು ಅಯೋಧ್ಯೆಯ ಹಿಂದೂ ಭಕ್ತರ ಶತಮಾನಗಳ ನೋವು, ನಂಬಿಕೆ ಮತ್ತು ಹೋರಾಟದ ಬಗ್ಗೆ ಯಾವ ಭಾವನೆ ಹೊಂದಿದ್ದಾರೆ? 2003ರ ಮಾರ್ಚ್ 15ರಂದು ಹುರಿಯತ್ ಕಾನ್ಫರೆನ್ಸ್‌ನ ನಿಯೋಗದ ಭಾಗವಾಗಿ ಜಮ್ಮು-ಕಾಶ್ಮೀರ ಲಿಬರೇಷನ್ ಫ್ರಂಟ್‌ನ ನಾಯಕ ಯಾಸಿನ್ ಮಲಿಕ್ ಮತ್ತು ಮಿರ್ವೈಜ್ ಉಮರ್ ಫಾರೂಕ್, ಸೋನಿಯಾ ಗಾಂಧಿಯವರನ್ನು ದೆಹಲಿಯ ನಿವಾಸದಲ್ಲಿ ಭೇಟಿಯಾಗಿದ್ದರು. ಅವರು ಕಾಶ್ಮೀರ ಪ್ರತ್ಯೇಕತಾವಾದದ ಪ್ರಮುಖ ಮುಖವಾಗಿದ್ದರು. ನಂತರ ರಾಷ್ಟ್ರೀಯ ತನಿಖಾ ಸಂಸ್ಥೆಯ ಪ್ರಕರಣ ದಲ್ಲಿ ಭಯೋತ್ಪಾದನೆಗೆ ಹಣಕಾಸು ಒದಗಿಸಿದ ಆರೋಪದಲ್ಲಿ ದೋಷಿ ಎಂದು ತೀರ್ಪುಗೊಂಡು ಜೀವಾವಧಿ ಶಿಕ್ಷೆಗೆ ಗುರಿಯಾದರು.

ಇದನ್ನೂ ಓದಿ: Mohan Vishwa Column: ವೀರತ್ವ, ವಿಜಯದ ಇಮ್ಮಡಿ ಪುಲಿಕೇಶಿ

ಭಾರತದ ಸಾರ್ವಭೌಮತ್ವ ಮತ್ತು ಭದ್ರತೆಗೆ ಸವಾಲೊಡ್ಡಿದ ಪ್ರತ್ಯೇಕತಾವಾದಿ ರಾಜಕೀಯದ ನಾಯಕ ರೊಂದಿಗೆ ಸೋನಿಯಾ ಗಾಂಧಿ ನಡೆಸಿದ ಮಾತುಕತೆಗಳ ಉದ್ದೇಶವೇನು? ಪುಸ್ತಕದಲ್ಲಿ ಅದನ್ನು ಯಾಕೆ ಬರೆದಿಲ್ಲ? 2008ರ ಬಾಟ್ಲಾ ಹೌಸ್ ಎನ್‌ಕೌಂಟರ್, ಈ ರಾಜಕೀಯ ಆಯ್ದ ಅನುಕಂಪದ ಚರ್ಚೆಗೆ ಮತ್ತೊಂದು ಪ್ರಮುಖ ಉದಾಹರಣೆ.

ಸೆಪ್ಟೆಂಬರ್ 19, 2008ರಂದು ದೆಹಲಿಯ ಜಾಮಿಯಾ ನಗರದ ಬಾಟ್ಲಾ ಹೌಸ್‌ನ್ನಲ್ಲಿ ದೆಹಲಿ ಪೊಲೀಸರ ವಿಶೇಷ ಘಟಕ ಮತ್ತು ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಶಂಕಿತ ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯಿತು. ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಮೋಹನ್ ಚಂದ್ ಶರ್ಮಾ ಹುತಾತ್ಮರಾದರು, ಇಬ್ಬರು ಶಂಕಿತ ಉಗ್ರರು ಹತರಾದರು. ನಂತರದ ನ್ಯಾಯಾಂಗ ವಿಚಾರಣೆಯಲ್ಲಿ ಅರಿಜ್ ಖಾನ್, ಪೊಲೀಸ್ ಅಧಿಕಾರಿ ಮೋಹನ್ ಚಂದ್ ಶರ್ಮಾ ಅವರ ಕೊಲೆ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ಬಂತು.

ಶಹಜಾದ್ ಅಹಮದ್ ಕೂಡ ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ಇಂತಹ ನ್ಯಾಯಾಂಗ ಪ್ರಕ್ರಿಯೆಗಳಿದ್ದರೂ ಅಂದಿನ ಕಾಂಗ್ರೆಸ್‌ನ ಕೆಲವು ಹಿರಿಯ ನಾಯಕರು ಎನ್‌ಕೌಂಟರ್ ಕುರಿತು ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಸಲ್ಮಾನ್ ಖುರ್ಷಿದ್ ಎನ್‌ಕೌಂಟರ್‌ನ ಚಿತ್ರಗಳನ್ನು ನೋಡಿ ಸೋನಿಯಾ ಗಾಂಧಿಯವರು ಭಾವುಕರಾದರು ಮತ್ತು ಕಣ್ಣೀರಿಟ್ಟರು ಎಂದು ಹೇಳಿಕೆ ನೀಡಿದ್ದರು.

sonia gandh with Book ok

ದಿಗ್ವಿಜಯ್ ಸಿಂಗ್ ಕೂಡ ಎನ್‌ಕೌಂಟರ್ ಕುರಿತು ಪ್ರಶ್ನೆಗಳನ್ನು ಎತ್ತಿದ್ದರು. ಈ ಹೇಳಿಕೆಗಳು ದೇಶದ ಭದ್ರತಾ ವ್ಯವಸ್ಥೆ ಮತ್ತು ಪೊಲೀಸ್ ಪಡೆಯ ಮನೋಸ್ಥೈರ್ಯದ ಕುರಿತು ಗಂಭೀರ ಚರ್ಚೆಗೆ ಕಾರಣವಾದವು. ಇಲ್ಲಿ ಪ್ರಶ್ನೆ ಅತ್ಯಂತ ಸರಳವಾಗಿದೆ. ದೇಶದ ರಾಜಧಾನಿಯಲ್ಲಿ ಸರಣಿ ಬಾಂಬ್ ಸ್ಫೋಟಗಳ ತನಿಖೆ ನಡೆಸುತ್ತಿದ್ದಾಗ ಹುತಾತ್ಮರಾದ ಪೊಲೀಸ್ ಅಧಿಕಾರಿ ಮೋಹನ್ ಚಂದ್ ಶರ್ಮಾ ಅವರ ಕುಟುಂಬದ ನೋವು ಮತ್ತು ಬಲಿದಾನಕ್ಕೆ ಯಾವ ಸ್ಥಾನ? ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ ಪೊಲೀಸರ ಪರವಾಗಿ ದೃಢವಾಗಿ ನಿಲ್ಲಬೇಕಾದ ರಾಜಕೀಯ ನಾಯಕತ್ವ ಅನುಮಾನಗಳ ವಾತಾವರಣ ಸೃಷ್ಟಿಸಿದರೆ, ಅದರಿಂದ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಯಾವ ಸಂದೇಶ ಹೋಗುತ್ತದೆ? ಒಬ್ಬ ಪೊಲೀಸ್ ಅಧಿಕಾರಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದಾಗ ಅವರ ಕುಟುಂಬಕ್ಕೆ ಸಿಗಬೇಕಾದ ರಾಜಕೀಯ ಮತ್ತು ನೈತಿಕ ಬೆಂಬಲದ ಬಗ್ಗೆ ಸೋನಿಯಾ ಗಾಂಧಿಯವರು ತಮ್ಮ ಪುಸ್ತಕದಲ್ಲಿ ಏನು ಹೇಳಿದ್ದಾರೆ? ಇದಕ್ಕಿಂತಲೂ ಕರಾಳವಾದ ಇತಿಹಾಸ 1984ರ ಸಿಖ್ ವಿರೋಧಿ ಹಿಂಸಾಚಾರ.

ಅಕ್ಟೋಬರ್ 31ರಂದು ಇಂದಿರಾ ಗಾಂಧಿಯವರ ಹತ್ಯೆಯ ನಂತರ ದೆಹಲಿ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಸಿಖ್ ಸಮುದಾಯದ ವಿರುದ್ಧ ಸಂಘಟಿತ ಹಿಂಸಾಚಾರ ನಡೆಯಿತು. ಸಾವಿರಾರು ಅಮಾಯಕರು ಕೊಲ್ಲಲ್ಪಟ್ಟರು. ಮನೆಗಳು, ಅಂಗಡಿಗಳು ಮತ್ತು ಗುರುದ್ವಾರಗಳ ಮೇಲೆ ದಾಳಿ ನಡೆಯಿತು. ಮಹಿಳೆಯರು ಮತ್ತು ಮಕ್ಕಳೂ ಹಿಂಸೆಗೆ ಬಲಿಯಾದರು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದು ಎಂದಿಗೂ ಮರೆಯಲಾಗದ ದುರಂತ.

ಸಾವಿರಾರು ಸಿಖ್ಖರು ಹತ್ಯೆಯಾದಾಗ ಆಡಳಿತದಲ್ಲಿದ್ದ ಕಾಂಗ್ರೆಸ್ ಪಕ್ಷದ ರಾಜಕೀಯ ಹೊಣೆಗಾರಿಕೆ ಏನು? ನ್ಯಾಯ ದೊರಕಲು ದಶಕಗಳೇ ಏಕೆ ಬೇಕಾಯಿತು? ರಾಜೀವ್ ಗಾಂಧಿಯವರ ವಿವಾದಾತ್ಮಕ ಹೇಳಿಕೆ ಮತ್ತು ಅದರ ರಾಜಕೀಯ ಪರಿಣಾಮಗಳ ಬಗ್ಗೆ ಸಮಗ್ರ ಆತ್ಮಾವಲೋಕನ ಪುಸ್ತಕದಲ್ಲಿ ಎಲ್ಲಿದೆ? ಬಾಬರಿ ಮಸೀದಿ ಧ್ವಂಸವನ್ನು ನೆನೆದು ಕಣ್ಣೀರಿಟ್ಟಿದ್ದಾಗಿ ಹೇಳುವ ಸೋನಿಯಾ ಗಾಂಧಿ ಯವರು, ಗುರುದ್ವಾರಗಳು ಸುಟ್ಟು ಹೋದಾಗ ಮತ್ತು ಸಿಖ್ ಕುಟುಂಬಗಳು ಬೀದಿಗೆ ಬಿದ್ದಾಗ ಅನುಭವಿಸಿದ ನೋವಿಗೆ ಯಾವ ಸ್ಥಾನ ನೀಡಿದ್ದಾರೆ? ಕಾಶ್ಮೀರದ ಹಿಂದೂಗಳ ನೋವಿನ ಬಗ್ಗೆಯೂ ಇದೇ ಪ್ರಶ್ನೆ ಕೇಳಬೇಕಾಗಿದೆ.

1989-90ರ ಅವಧಿಯಲ್ಲಿ ಕಾಶ್ಮೀರ ಕಣಿವೆಯಲ್ಲಿ ಉಗ್ರಗಾಮಿ ಹಿಂಸಾಚಾರ ಹೆಚ್ಚಾದಂತೆ ಕಾಶ್ಮೀರಿ ಪಂಡಿತರು ಬೆದರಿಕೆ, ಹತ್ಯೆ ಮತ್ತು ಬಲವಂತದ ವಲಸೆಗೆ ಒಳಗಾದರು. ತಮ್ಮ ಮನೆ, ಆಸ್ತಿ, ದೇವಾಲಯ ಮತ್ತು ತಲೆಮಾರುಗಳಿಂದ ಬೆಳೆಸಿಕೊಂಡಿದ್ದ ಬದುಕನ್ನು ತೊರೆದು ಸಾವಿರಾರು ಕುಟುಂಬಗಳು ಕಣಿವೆಯಿಂದ ಹೊರಬರಬೇಕಾಯಿತು.

ಇದು ಕೇವಲ ವಲಸೆಯಲ್ಲ; ಒಂದು ಸಮುದಾಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಸ್ತಿತ್ವಕ್ಕೆ ಬಿದ್ದ ದೊಡ್ಡ ಹೊಡೆತ. ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಅನುಭವಿಸಿದ ಸಂಕಷ್ಟವನ್ನು ಇತಿಹಾಸ ಮರೆಯಲು ಸಾಧ್ಯವಿಲ್ಲ. ಬಾಬರಿ ಮಸೀದಿ ಧ್ವಂಸವನ್ನು ಭಾರತದ ಜಾತ್ಯತೀತತೆಯ ಮೇಲಿನ ದಾಳಿಯೆಂದು ಪರಿಗಣಿಸುವವರು, ಕಾಶ್ಮೀರಿ ಹಿಂದೂಗಳ ಮೇಲಿನ ಹಿಂಸಾಚಾರವನ್ನು ಭಾರತದ ಬಹುಸಂಸ್ಕೃತಿಯ ಮೇಲಿನ ದಾಳಿಯೆಂದು ಅದೇ ತೀವ್ರತೆಯಿಂದ ಏಕೆ ಪರಿಗಣಿಸುವು ದಿಲ್ಲ? ಕಾಶ್ಮೀರದಲ್ಲಿ ಹಿಂದೂಗಳ ಅಸ್ತಿತ್ವವೇ ಅಪಾಯಕ್ಕೆ ಸಿಲುಕಿದಾಗ ಅವರ ಪರವಾಗಿ ಧ್ವನಿ ಎತ್ತುವುದು ಜಾತ್ಯತೀತತೆಯ ಭಾಗವಲ್ಲವೇ? ಧಾರ್ಮಿಕ ಅಲ್ಪಸಂಖ್ಯಾತರ ರಕ್ಷಣೆಯ ಬಗ್ಗೆ ಮಾತನಾಡುವ ಕಾಂಗ್ರೆಸ್ ಮತ್ತು ಸೋನಿಯಾ ಗಾಂಧಿ, ತಮ್ಮದೇ ದೇಶದಲ್ಲಿ ಹಿಂಸೆಯಿಂದ ನೆಲೆ ಕಳೆದುಕೊಂಡ ಹಿಂದೂಗಳ ನೋವನ್ನೂ ಸಮಾನವಾಗಿ ಗುರುತಿಸಬೇಕಲ್ಲವೇ? ಹಾಗಾದರೆ ಸೋನಿಯಾ ಗಾಂಧಿಯವರಿಗೆ ಕಾಶ್ಮೀರಿ ಪಂಡಿತರ ನರಮೇಧದ ವಿಷಯ ಕೇಳಿ ಕಣ್ಣಿನಲ್ಲಿ ನೀರು ಬರಲಿಲ್ಲವೇ? ತಮ್ಮ ಪುಸ್ತಕದಲ್ಲಿ ಇದರ ಬಗ್ಗೆ ಏನು ಹೇಳಿದ್ದಾರೆ?

ಒಟ್ಟಿನಲ್ಲಿ, "Belonging : A Journey of Love' ಪುಸ್ತಕದ ಶೀರ್ಷಿಕೆಯಲ್ಲಿ ಮಾತ್ರ ಪ್ರೀತಿಯಿದೆ. ಆದರೆ ಭಾರತದ ಜನರು ಈ ಪುಸ್ತಕದಿಂದ ನಿರೀಕ್ಷಿಸುವುದು ಕೇವಲ ಕುಟುಂಬದ ಪ್ರೇಮಕಥೆಯಲ್ಲ. ದೇಶದ ಇತಿಹಾಸದ ಬಗ್ಗೆ ಪ್ರಾಮಾಣಿಕವಾದ ಉತ್ತರಗಳು, ಯಾಸಿನ್ ಮಲಿಕ್‌ನಂತಹ ಪ್ರತ್ಯೇಕತಾವಾದಿ ನಾಯಕನೊಂದಿಗೆ ನಡೆದ ರಾಜಕೀಯ ಭೇಟಿಗಳ ಹಿನ್ನೆಲೆ ಏನು? ಪಾಕಿಸ್ತಾನದ ಬಗ್ಗೆ ಕಾಂಗ್ರೆಸ್‌ನ ಶಾಂತಿ ನಿಲುವು, ರಾಷ್ಟ್ರೀಯ ಭದ್ರತೆಯ ಬಗ್ಗೆ ತೋರಿದ ನಿಲುವುಗಳು, ಬಾಟ್ಲಾ ಹೌಸ್ ಪ್ರಕರಣ ದಲ್ಲಿ ಪೊಲೀಸ್ ಅಧಿಕಾರಿಗಳ ಬಲಿದಾನಕ್ಕೆ ತೋರಿದ ಗೌರವ ಎಷ್ಟು? 1984ರ ಸಿಖ್ ವಿರೋಧಿ ಹಿಂಸಾಚಾರಕ್ಕೆ ಕಾಂಗ್ರೆಸ್‌ನ ರಾಜಕೀಯ ಹೊಣೆಗಾರಿಕೆ ಏನು? ಕಾಶ್ಮೀರಿ ಪಂಡಿತರ ನಿರ್ಗಮನದ ಬಗ್ಗೆ ಪಕ್ಷದ ಆತ್ಮಾವಲೋಕನ ಎಲ್ಲಿದೆ? ಬಾಬರಿ ಮಸೀದಿ ಧ್ವಂಸವನ್ನು ನೆನೆದು ಕಣ್ಣೀರಿಟ್ಟವರು ರಾಮಮಂದಿರದ ಕುರಿತು ಹಿಂದೂಗಳ ಶತಮಾನಗಳ ನಂಬಿಕೆ ಮತ್ತು ಭಾವನೆಗಳನ್ನು ಹೇಗೆ ಅರ್ಥಮಾಡಿಕೊಳ್ಳುತ್ತಾರೆ? ಇವು ದ್ವೇಷದ ಪ್ರಶ್ನೆಗಳಲ್ಲ; ಸಾರ್ವಜನಿಕ ಜವಾಬ್ದಾರಿಯ ಪ್ರಶ್ನೆಗಳು.ʼ