ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Hari Paraak Column: ತುಳಿದವನು ಬಾಳಿಯಾನು

ಸಾಮಾನ್ಯ ಪ್ರೇಕ್ಷಕರು ಇಂಥ ಚಿತ್ರಗಳ ಅಬ್ಬರ ನೋಡಿ ಹೀಗೆ ಮರುಳಾಗೋದು ಆಶ್ಚರ್ಯ ವೇನಲ್ಲ. ಆದರೆ ಅದು ಸತ್ಯ ಅಲ್ಲ. ಸಿನಿಮಾರಂಗದಲ್ಲಿ ಏನ್ ಪ್ರಯೋಗಗಳಾಗಲೀ, ಎಷ್ಟೇ ಹೈ ಬಜೆಟ್ ಸಿನಿಮಾಗಳು, ಏನೇ ಸೋ ಕಾಲ್ಡ್ ಕಂಟೆಂಟ್ ಬೇಸ್ಟ್ ಸಿನಿಮಾಗಳು ಬಂದರೂ ಮಾನವೀ ಯತೆ ಟಚ್ ಇರೋ ಹ್ಯೂಮ್ಯಾನಿಟಿ ಓರಿಯೆಂಟೆಡ್ ಸಿನಿಮಾಗಳಿಗೆ ಎಂದಿಗೂ ಸಾವಿಲ್ಲ. ‌

Hari Paraak Column: ತುಳಿದವನು ಬಾಳಿಯಾನು

-

ಹರಿ ಪರಾಕ್‌
ಹರಿ ಪರಾಕ್‌ Feb 15, 2026 9:19 AM

ತುಂಟರಗಾಳಿ

ಸಿನಿಗನ್ನಡ

ಚಿತ್ರರಂಗದಲ್ಲಿ ಈಗ ಮಾತೆತ್ತಿದರೆ ಪ್ಯಾನ್ ಇಂಡಿಯಾ ಸಿನಿಮಾ, ಹೈ ಬಜೆಟ್ ಚಿತ್ರ, ಟೆಕ್ನಿಕಲಿ ಬ್ರಿಲಿಯಂಟ್, ಹೊಸ ಅಲೆಯ ಚಿತ್ರಗಳು ಅಂತೆ ಮಾತುಗಳು ಶುರುವಾಗಿವೆ. ಇದರ ನಡುವೆ ‘ವಲವಾರ’ದಂಥ ಸಿನಿಮಾ ಸದ್ದು ಮಾಡುತ್ತಿದೆ. ನೋಡಿದರೆ ಏನೂ ಅನ್ನಿಸದ ಹಲವಾರು ಸಿನಿಮಾಗಳಿಗಿಂತ ‘ವಲವಾರ’ ಬೆಟರ್ ಅನ್ನೋದು ನೋಡಿದವರ ಅನಿಸಿಕೆ. ಕೆಲವರಂತೂ ಮಿತಿಮೀರಿದ ಉತ್ಸಾಹದಲ್ಲಿ ಮಾಮೂಲಿ ಲವ್ ಸ್ಟೋರಿ, ಫ್ಯಾಮಿಲಿ ಸ್ಟೋರಿಗಳು ಇರೋ ಸಿನಿಮಾಗಳು ಓಡೋದೇ ಇಲ್ಲ ಅಂತ ಷರಾ ಬರೆದುಬಿಟ್ಟಿದ್ದಾರೆ.

ನಿಮ್ಮಲ್ಲಿ ಅದೇ ಕಾಲೇಜ್ ಲವ್‌ಸ್ಟೋರಿ, ತಾಯಿ ಸೆಂಟಿಮೆಂಟ್ ಸಿನಿಮಾಗಳು ಇದ್ದರೆ ಅವನ್ನೆಲ್ಲ ಮೂಲೆಗೆ ಎತ್ತಿಡಿ ಅಂತ ಆದೇಶ ಹೊರಡಿಸಿಬಿಟ್ಟಿದ್ದಾರೆ. ಇವೆಲ್ಲ, ಇತ್ತೀಚೆಗೆ ದೊಡ್ಡ ಬಜೆಟ್‌ನ, ಮಿತಿಮೀರಿದ ಅಬ್ಬರ ಇರೋ ಸಿನಿಮಾಗಳು ಬಂದಿದ್ದರ ಸೈಡ್ ಎಫೆಕ್ಟ್‌ ಎನ್ನಬಹುದು.

ಸಾಮಾನ್ಯ ಪ್ರೇಕ್ಷಕರು ಇಂಥ ಚಿತ್ರಗಳ ಅಬ್ಬರ ನೋಡಿ ಹೀಗೆ ಮರುಳಾಗೋದು ಆಶ್ಚರ್ಯ ವೇನಲ್ಲ. ಆದರೆ ಅದು ಸತ್ಯ ಅಲ್ಲ. ಸಿನಿಮಾರಂಗದಲ್ಲಿ ಏನ್ ಪ್ರಯೋಗಗಳಾಗಲೀ, ಎಷ್ಟೇ ಹೈಬಜೆಟ್ ಸಿನಿಮಾಗಳು, ಏನೇ ಸೋ ಕಾಲ್ಡ್ ಕಂಟೆಂಟ್ ಬೇಸ್ಟ್ ಸಿನಿಮಾಗಳು ಬಂದರೂ ಮಾನವೀಯತೆ ಟಚ್ ಇರೋ ಹ್ಯೂಮ್ಯಾನಿಟಿ ಓರಿಯೆಂಟೆಡ್ ಸಿನಿಮಾಗಳಿಗೆ ಎಂದಿಗೂ ಸಾವಿಲ್ಲ. ‌

ಸಿನಿಮಾ ನೋಡೋ ಸಾಮಾನ್ಯ ಪ್ರೇಕ್ಷಕ ಯಾವತ್ತೂ ಸಿನಿಮಾಗೆ ಎಷ್ಟು ದುಡ್ಡು ಹಾಕಿ ದ್ದೀಯಾ, ಏನೇನು ಸರ್ಕಸ್ ಮಾಡಿದ್ದೀರಾ ಅಂತ ಕೇಳಲ್ಲ, ಅವನಿಗೆ ಸಿನಿಮಾ ಇಷ್ಟ ಆದ್ರೆ ಅಷ್ಟೇ ಸಾಕು. ಅಂದಿನ ‘ಬಂಗಾರದ ಮನುಷ್ಯ’, ‘ನಾಗರಹಾವು’ ಚಿತ್ರಗಳಿಂದ ಹಿಡಿದು ನಂತರದ ‘ನಂಜುಂಡಿ ಕಲ್ಯಾಣ’, ‘ರಾಮಾಚಾರಿ’, ‘ಯಜಮಾನ’, ‘ಜನುಮದ ಜೋಡಿ’, ‘ಮುಂಗಾರು ಮಳೆ’ಯಂಥ ಸಿನಿಮಾಗಳನ್ನು, ಅಯ್ಯೋ, ಕಡಿಮೆ ಬಜೆಟ್‌ನಲ್ಲಿ ಮಾಡಿದ್ದೀರಾ ಅಂತ ಅವನು ಯಾವತ್ತೂ ತಿರಸ್ಕಾರ ಮಾಡಿಲ್ಲ.

ಇದನ್ನೂ ಓದಿ: H‌ari Paraak Column: ಹೇಳಿದ್ದಕ್ಕೆಲ್ಲ ಸರಿ ಅನ್ನುವವನದ್ದು- ಅಗ್ರೀ ಕಲ್ಚರ್

ಇನ್ನು ಮುಂದೆಯೂ ಅದು ಹಾಗೇ ಇರುತ್ತದೆ. ಹಾಗಾಗಿ, ಅಯ್ಯೋ, ದೊಡ್ಡ ಬಜೆಟ್ ಇದ್ದಾರ ಸಿನಿಮಾಗಳು ಮಾತ್ರ ಗೆಲ್ತವೆ ಅಂತ ಯಾರೂ ಗಾಬರಿಗೊಳ್ಳುವ ಅಗತ್ಯವಿಲ್ಲ. ಆದರೆ ಈಗಿನ ಪ್ರೇಕ್ಷಕರಿಗೆ ಗಂಭೀರವಾದ ಜತೆಗೆ ಪ್ರಾಮಾಣಿಕವಾದ ಕಂಟೆಂಟ್ ಕೊಡಬೇಕಿದೆ. ಕೆಲವು ನಿರ್ದೇಶಕರು ಅದನ್ನು ಮಾಡಲು ಪ್ರಯತ್ನ ಪಡ್ತಾ ಇದ್ದರೂ ಮಿತಿಮೀರಿದ ಅಶ್ಲೀಲತೆ ಬಳಸುವ ಮೂಲಕ ತಮ್ಮನ್ನ ತಾವೇ ಹಾಳುಮಾಡಿಕೊಂಡರು. ಅದನ್ನು ಬಿಟ್ಟು, ಪ್ರಾಮಾ ಣಿಕವಾಗಿ ಒಳ್ಳೆಯ ಸಿನಿಮಾ ಮಾಡುವ ಕಡೆಗೆ ಗಮನ ಕೊಟ್ಟರೆ ಇವತ್ತಿಗೂ ಸಣ್ಣ ಬಜೆಟ್ ಚಿತ್ರಗಳೂ ಕೋಟಿ ಕೋಟಿ ಬಾಚುವ ಸಾಧ್ಯತೆಗಳಂತೂ ಖಂಡಿತಾ ಇವೆ.

ನೆಟ್ ಪಿಕ್ಸ್

ಖೇಮು ಕಾಲೇಜಲ್ಲಿ ಓದುವಾಗ ಒಂದು ದಿನ ಲೈಬ್ರರಿಗೆ ಅಂತ ಹೋದ. ಅಲ್ಲಿ ತುಂಬಾ ಜನ ಇದ್ರು. ಎಲ್ಲರೂ ಕಾಮ್ ಆಗಿ ಕೂತು ಓದ್ತಾ ಇದ್ರು. ಖೇಮು ಕೂತ್ಕೊಳ್ಳೋಕೆ ಜಾಗ ಹುಡುಕ್ತಾ ಇದ್ದ. ಆದ್ರೆ ಎಲ್ಲೂ ಜಾಗ ಇರಲಿಲ್ಲ. ತುಂಬಾ ಹುಡುಕಿದ ಮೇಲೆ ಅಲ್ಲಿ ಒಂದು ಕಡೆ ಒಂದು ಸುಂದರವಾದ ಹುಡುಗಿ ಕೂತಿದ್ದು ಕಾಣಿಸಿತು. ಅವಳ ಪಕ್ಕದಲ್ಲಿ ಒಂದು ಜಾಗ ಖಾಲಿ ಇತ್ತು.

ಆದರೆ ಖೇಮು ಸ್ವಲ್ಪ ನಾಚಿಕೆ ಸ್ವಭಾವದ ಹುಡುಗ. ಅವನಿಗೆ ಹುಡುಗಿಯ ಪಕ್ಕದಲ್ಲಿ ಹೋಗಿ ಕೂರೋದು ಮುಜುಗರ ಅನ್ನಿಸಿತು. ಆದರೆ ಬೇರೆ ದಾರಿ ಇರಲಿಲ್ಲ. ಸ್ವಲ್ಪ ಹೊತ್ತು ಯೋಚನೆ ಮಾಡಿ ನಂತರ ಧೈರ್ಯ ಮಾಡಿ ಆಕೆಯ ಬಳಿ ಹೋದ.

‘ಎಕ್ಸ್‌ʼಕ್ಯೂಸ್ ಮೀ’ ಅಂತ ಆಕೆಯನ್ನು ಮಾತನಾಡಿಸಿ, ಮೆಲುದನಿಯಲ್ಲಿ, “ಲೈಬ್ರರಿಯಲ್ಲಿ ಬೇರೆ ಎಲ್ಲೂ ಜಾಗ ಇಲ್ಲ. ಇಫ್ ಯೂ ಡೋಂಟ್ ಮೈಂಡ್, ನಾನು ನಿಮ್ಮ ಪಕ್ಕದಲ್ಲಿ ಕೂತ್ಕೋಬಹುದಾ?" ಅಂತ ಕೇಳಿದ. ಅವಳು ಒಂದು‌ ಕ್ಷಣ ಇವನ ಮುಖ ನೋಡಿ, ನಂತರ ಲೈಬ್ರೆರಿಯಲ್ಲಿರುವ ಎಲ್ಲರನ್ನೂ ಒಮ್ಮೆ ನೋಡಿ ಎದ್ದು ನಿಂತು ಎಲ್ಲರಿಗೂ ಕೇಳಿಸುವಂತೆ ಹೇಳಿದಳು “ಎಷ್ಟು ಧೈರ್ಯ ನಿಂಗೆ, ಎಲ್ಲರ ಮುಂದೆ, ನಿನ್ ಜತೆ ಒಂದ್ ನೈಟ್ ಮಲಗಬೇಕು ಅಂತ ಕೇಳ್ತೀಯಾ?".

ಖೇಮುಗೆ ಶಾಕ್ ಆಯ್ತು. ಗಾಬರಿಯಾದ. ಲೈಬ್ರರಿಯಲ್ಲಿದ್ದ ಎಲ್ಲರೂ ಇವನನ್ನೇ ಅಸಹ್ಯ ವಾಗಿ ನೋಡೋಕೆ ಶುರುಮಾಡಿದ್ರು. ಖೇಮುಗೆ ನಾಚಿಕೆ ಆಗಿ, ಒಂದು ಬುಕ್‌ಸ್ಟ್ಯಾಂಡ್ ಬಳಿ ಹೋಗಿ ಒಂದು ಪುಸ್ತಕ ತೆಗೆದು ಮುಖ ಮುಚ್ಚಿಕೊಂಡ. ಸ್ವಲ್ಪ ಹೊತ್ತಾದ ಮೇಲೆ ಆ ಹುಡುಗಿ ಖೇಮು ಹತ್ರ ಬಂದು, “ಸಾರಿ, ನಾನೊಬ್ಬ ಸೈಕಾಲಜಿ ಸ್ಟೂಡೆಂಟ್. ಈ ಥರ ಸಂದರ್ಭದಲ್ಲಿ ಗಂಡಸರು ಹೇಗೆ ವರ್ತಿಸ್ತಾರೆ ಅಂತ ನೋಡಬೇಕಿತ್ತು. ಅದಕ್ಕೆ ಹಾಗೆ ಮಾಡಿದೆ" ಅಂದಳು.

ಅದಕ್ಕೆ ಖೇಮು ಅಲ್ಲಿದ್ದ ಎಲ್ಲರಿಗೂ ಕೇಳುವಂತೆ ಜೋರಾಗಿ ಹೇಳಿದ “ಏನು? ಒಂದ್ ನೈಟ್‌ಗೆ 10000 ರುಪಾಯಿನಾ, ನೀನೇನು ತ್ರಿಪುರಸುಂದರಿ ಅಂತ ತಿಳ್ಕೊಂಡಿದ್ದೀಯಾ?". ಮತ್ತೆ ಅಲ್ಲಿದ್ದ ಎಲ್ಲರೂ ಇನ್ನಷ್ಟು ಆಶ್ಚರ್ಯದಿಂದ ಆ ಹುಡುಗಿಯನ್ನು ನೋಡಿದರು. ಹುಡುಗಿ ಗಾಬರಿಯಾಗಿ ನಿಂತಿದ್ದು ನೋಡಿ ಖೇಮು ಹೇಳಿದ, “ನಾನು ಲಾ ಸ್ಟೂಡೆಂಟ್, ಒಬ್ಬರು ಹಾಕಿದ ಕೇಸನ್ನ ಅವರಿಗೇ ಉಲ್ಟಾ ತಿರುಗಿಸೋದು ಹೆಂಗೆ ಅಂತ ನನಗೆ ಗೊತ್ತು".

ಲೂಸ್‌ ಟಾಕ್‌ - ರೌಡಿ ರಂಗಣ್ಣ

ಏನು ರೌಡಿ ರಂಗಣ್ಣೋರೆ, ಬರ್ತ್‌ʼ ಡೇ ಭಾರಿ ಜೋರಾಗಿ ಸೆಲೆಬ್ರೇಟ್ ಮಾಡ್ಕೊತಾ ಇದ್ದೀರಾ?

- ಹೌದೌದು, ಅದರ ಜತೆಗೆ, ಇನ್ಮೇಲೆ ನನ್ನ ಹುಟ್ಟುಹಬ್ಬನ ‘ವೈಲೆಂಟೈನ್ಸ್ ಡೇ’ ಅಂತ ಸೆಲೆಬ್ರೇಟ್ ಮಾಡ್ಬೇಕು ಅಂತ‌ ಮುಖ್ಯಮಂತ್ರಿಗಳಿಗೆ ಮನವಿ ಕೊಟ್ಟವ್ರೆ ನಮ್ಮುಡುಗ್ರು

ರೀ, ಈ ರೌಡಿಸಂನ ನೀವೇನ್ ಸರಕಾರಿ ನೌಕರಿ ಅಂದ್ಕೊಂಡಿದ್ದೀರಾ. ಇಷ್ಟೊಂದ್ ವೈಲೆಂಟ್ ಆಗಿದ್ರೆ, ಯಾವಾಗ ಪೊಲೀಸ್ನೋರು ನಿಮಗೆ ಲೈಫಿಂದಲೇ ವಾಲೆಂಟರಿ ರಿಟೈರ್ಮೆಂಟ್ ಕೊಡ್ತಾರೋ ಗೊತ್ತಾಗಲ್ಲ.

- ಅಯ್ಯೋ, ಅವರಿಗೆ ವಾರೆಂಟ್ ಇಲ್ದೆ ನಮ್ಮನ್ನ ಅರೆ ಮಾಡೋಕೇ ಆಗಲ್ಲ, ನೀವ್ ಹೇಳ್ದಂಗೆ ನಮ್ಗೆ ಅಷ್ಟು ಸುಲಭವಾಗಿ ‘ರೆಸ್ಟ್‌ ಇನ್ ಪೀಸ್’ ಎಲ್ಲ ಹೇಳೋಕಾಗಲ್ಲ, ಅರೆ ಮಾಡಿ ಜೈಲಿಗ್ ಹಾಕಿದ್ರೂ, ಒಳಗೂ ಆರಾಮಾಗಿ ರೆಸ್ಟ್ ತಗೋತೀವಿ.

ಅದಿರ್ಲಿ, ನಿಯತ್ತಾಗಿ‌ ಬದುಕೋಕೆ ಏನ್ ಕಷ್ಟ ನಿಮಗೆ?

- ಹಲೋ ಯಾಕ್ರೀ, ನಿಯತ್ತಾಗಿ ಬದುಕೋಕೆ, ನಾವೇನ್ ನಿಮ್ ಕಣ್ಣಿಗೆ ನಾಯಿಗಳ ಥರ ಕಾಣ್ತೀದೀವಾ?

ಥೋ ಹಂಗಲ್ಲ, ಈ ರೌಡಿಸಂ ಮಾಡೋದೇನ್ ದೊಡ್ಡ ಕೆಲಸ ಅಂದ್ಕೊಂಡಿದ್ದೀರಾ ಅಂತ ಕೇಳಿದ್ದು?

- ಮತ್ತೆ ಇನ್ನೇನು? ಈ ಕೆಲ್ಸ ಮಾಡೋಕೂ ‘ಚಾಕು’ಚಕ್ಯತೆ ಇರಬೇಕು ಗೊತ್ತಾ.

ಅಲ್ಲ ಕಣಪ್ಪಾ, ಎಲ್ಲರ ಹತ್ರ ಉಗಿಸ್ಕೊಂಡು ಬಾಳೋ ಈ ಥರ ಬಾಳು ಬೇಕಾ ನಿಮಗೆ?

- ಹಲೋ, ಯಾಕ್ರೀ, ನಾವೂ ಈ ಸಮಾಜದಲ್ಲಿ ‘ತಲೆ ಎತ್ಕೊಂಡೇ ಬದುಕ್ತಾ ಇರೋದು’ ಗೊತ್ತಾ?

(ಕಾಲ್ಪನಿಕ ಸಂದರ್ಶನ)

ಲೈನ್‌ ಮ್ಯಾನ್

ಕಾಡುಪಾಪಗಳ ಫೋಟೋ ತೆಗೆಯೋನು, ವೈಲ್ಡ್‌ʼಲೈಫ್‌ ಫೋಟೋಗ್ರಾಫರ್

- ಮನೆಯಲ್ಲಿ ಪಾಪುಗಳ ಫೋಟೋ ತೆಗೆಯೋನು, ಚೈಲ್ಡ್ ಲೈಫ್‌ ಫೋಟೋಗ್ರಾಫರ್ ಫೋಟೋಗ್ರಾಫರ್ ಒಬ್ಬ ಸತ್ತರೆ, ನ್ಯೂಸ್ ಹೆಡ್‌ಲೈನ್

- ‘ಫೋಟೋ’ಗ್ರಾಫರ್ ‘ಫಿನಿಷ್’

ಸಂಸಾರಗಳ ಗುಟ್ಟು

- ಒಂದ್ ಸಂಸಾರ ಇದ್ರೆ:

family.

- 2-3 ಸಂಸಾರ ಇದ್ರೆ:

joint family.

- ಅದಕ್ಕೂ ಜಾಸ್ತಿ ಇದ್ರೆ:

Giant family

ತುಂಬಾ ಸ್ವಚ್ಛವಾಗಿರೋ ಖಾಸಗಿ ಆಸ್ಪತ್ರೆ

- 'Clean'ic

ಗೊಂಬೆ ಆಡ್ಸೋಕೆ ಇರಬೇಕಾದ ಪ್ರಮುಖ ಅಂಶ

- ‘ಕೀ’ ಫ್ಯಾಕ್ಟರ್

ಜಗತ್ತಿನ ಅತಿ ಕಷ್ಟದ ಕೆಲಸ

- ಚೀನಾದಲ್ಲಿ ಫೇಸ್‌ರೀಡಿಂಗ್ ಕೆಲಸ ಮಾಡೋದು

ಇನ್ನೊಬ್ಬರನ್ನ ತುಳಿದು ಚೆನ್ನಾಗಿ ಬದುಕ್ತಾ ಇರೋರನ್ನ ನೋಡಿ ಹುಟ್ಟಿದ ಗಾದೆ

- ತುಳಿದವನು ಬಾಳಿಯಾನು

ಮದುವೆ ಆದ್ಮೇಲೆ ಲೈಫ್‌ ತುಂಬಾ ಚೆನ್ನಾಗಿರುತ್ತೆ ಅನ್ನೋ ಬ್ಯಾಚುಲರ್ ನಂಬಿಕೆ

- ತಾಳಿ ಕಟ್ಟಿದವನು ಬಾಳಿಯಾನು

ಬೈಜೂಸ್‌ನಂಥ ಎಜ್ಯುಕೇಶನ್ ಆಪ್‌ಗಳ ಕಾಲ

- ‘ಕಲಿ’ಯುಗ

‘ಲಿವಿಂಗ್ ಟುಗೆದರ್’ ನಲ್ಲಿರೋ ಸ್ನೇಹಿತರನ್ನು ನೋಡಿ ನಾನೂ ಮದ್ವೆ ಆಗಲ್ಲ ಅಂತ ಡಿಸೈಡ್ ಮಾಡೋದು

- ‘ಸಹ’ವಾಸ ದೋಷ