ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Thimmanna Bhagawat Column: ಯುಜಿಸಿ ಮಾರ್ಗಸೂಚಿ: ಮತದ ಭೂತದ ಜಾಲ

ವಿಶ್ವವಿದ್ಯಾಲಯಗಳ ಕೆಲ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಜಾತ್ಯಾಧಾರಿತ ತಾರತಮ್ಯವೇ ಕಾರಣ ಎಂಬ ಆರೋಪದ ಕೆಲವು ಪ್ರಕರಣಗಳು ವಿಚಾರಣೆಗೆ ಬಂದಾಗ ಸುಪ್ರೀಂ ಕೋರ್ಟು ಕೂಡಾ ಆ ಕುರಿತು ಹೊಸ ಕಾನೂನು ರಚಿಸಿ ಜಾರಿಗೆ ತರಬೇಕೆಂಬ ಅದೇಶ ನೀಡಿತು. ಅಂಥ ಆತ್ಮಹತ್ಯೆಗಳಿಗೆ ನಿಜವಾದ ಕಾರಣಗಳೇನು ಎಂಬುದು ಕೊನೆಗೂ ವಿಚಾರಣೆಯಾಗಲೇ ಇಲ್ಲ.

ಯುಜಿಸಿ ಮಾರ್ಗಸೂಚಿ: ಮತದ ಭೂತದ ಜಾಲ

-

Profile
Ashok Nayak Oct 26, 2026 7:45 AM

ಕಾನೂನ್‌ ಸೆನ್ಸ್‌

ತಿಮ್ಮಣ್ಣ ಭಾಗವತ್

ಸಾಮಾಜಿಕ ಮಾಧ್ಯಮದಲ್ಲ್ಲಿ ಹಂಚಲಾದ ಒಂದು ತುಣುಕು: ‘ನನ್ನ ಮಗಳು ಮತ್ತು ನೆರೆಮನೆಯ ಹುಡುಗಿ ಬಾಲ್ಯದಿಂದಲೂ ಸ್ನೇಹಿತೆಯರು. ಜಾತಿಯ ಯಾವ ಕಲ್ಪನೆಯೂ ಇಲ್ಲದೆ ಇಬ್ಬರೂ ಒಟ್ಟಿಗೇ ಓದುತ್ತಾ, ಆಡುತ್ತಾ, ಊಟ-ತಿಂಡಿ ಮಾಡುತ್ತಾ ಬೆಳೆದವರು. ಇಬ್ಬರೂ 6ನೇ ಕ್ಲಾಸಿಗೆ ಬಂದಾಗ ಕೇಂದ್ರೀಯ ವಿದ್ಯಾಲಯವೊಂದರ ಪ್ರವೇಶ ಪರೀಕ್ಷೆಗೆ ಹಾಜರಾದರು. ನನ್ನ ಮಗಳಿಗೆ 149 ಅಂಕ ಬಂದಿದ್ದರಿಂದ ಅವಳಿಗೆ ಸ್ವಲ್ಪದರಲ್ಲೇ ಸೀಟ್ ತಪ್ಪಿತು. ಅವಳ ಸ್ನೇಹಿತೆಗೆ ಸಿಕ್ಕಿದ್ದು 105 ಅಂಕವಾದರೂ ಅವಳಿಗೆ ಸೀಟ್ ಸಿಕ್ಕಿತು. ನನ್ನ ಮಗಳಿಗೆ ತುಂಬಾ ಗೊಂದಲ.

ನಿನ್ನ ಅಜ್ಜ ನಿನ್ನ ಸ್ನೇಹಿತೆಯ ಅಜ್ಜನ ವಿಷಯದಲ್ಲಿ ತಪ್ಪು ಮಾಡಿದ್ದರಂತೆ ಅದಕ್ಕೆ ಹೀಗೆ, ಅಂತ ಅನಿವಾರ್ಯವಾಗಿ ಅವಳ ಸ್ನೇಹಿತೆಯ ಜಾತಿ ಮತ್ತು ಆ ಕಾರಣಕ್ಕೆ ಅವಳಿಗೆ ಸೀಟು ಸಿಕ್ಕಿದ ಬಗೆಯನ್ನು ವಿವರಿಸಬೇಕಾಗಿ ಬಂತು.’ ‘ಜಿಲ್ಲೆಗೇ ಪ್ರಥಮ ರ್ಯಾಂಕ್ ಪಡೆದ ವಿದ್ಯಾರ್ಥಿಗೆ ಆತ ನಿರ್ದಿಷ್ಟ ವರ್ಗಕ್ಕೆ ಸೇರದ ಕಾರಣ ಒಂದು ಸ್ಕಾಲರ್‌ಶಿಪ್ ಸಿಗಲಿಲ್ಲ. ‌

ಬದಲಾಗಿ ಅವನಿಗಿಂತ ಕಡಿಮೆ ಅಂಕ ಪಡೆದ ಅವನ ಸ್ನೇಹಿತನಿಗೆ ಸಿಕ್ಕಿತು.’ ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಬೇಕೆಂಬುದು ಬಹುತೇಕ ಪ್ರಜ್ಞಾವಂತರ ಭಾವನೆ. ಆದರೆ ಜಾತಿಯ ಹೆಸರಿನಲ್ಲಿ ಪ್ರತ್ಯೇಕ ಸ್ಕಾಲರ್‌ಶಿಪ್, ಪ್ರತ್ಯೇಕ ಶಾಲೆಗಳು, ಹಾಸ್ಟೆಲ್‌ಗಳು, ಸಡಿಲ ನೀತಿಯ ಮಾನದಂಡ, ಶುಲ್ಕದಲ್ಲಿ ರಿಯಾಯತಿ ಇವೆಲ್ಲವೂ ಇರುವಾಗ ಬಾಲ್ಯದಲ್ಲೇ ಮುಗ್ಧ ಮಕ್ಕಳ ತಲೆಯಲ್ಲಿ ಜಾತಿಯ ಭೂತ ಹೊಕ್ಕದಿರಲು ಹೇಗೆ ಸಾಧ್ಯ? ಬೆಂಗಳೂರಿನಂಥ ಪಟ್ಟಣಗಳಲ್ಲಿ ಪಕ್ಕದ ಫ್ಲ್ಯಾಟ್‌ನಲ್ಲಿರು ವವರ ಜಾತಿಯೇ ತಿಳಿದಿರುವದಿಲ್ಲ. ಅದು ಮಹತ್ವದ ವಿಷಯವೂ ಆಗುವದಿಲ್ಲ.

ಇದನ್ನೂ ಓದಿ: Thimmanna Bhagawat Column: ನಾರದ ಸ್ಮೃತಿ - ಕಲಹಪ್ರಿಯ ನಾರದರ ನ್ಯಾಯ ಸಂಹಿತೆ

ಮಕ್ಕಳು ಶಾಲೆಗೆ ಹೋಗಲು ಆರಂಭಿಸಿದ ನಂತರ ಅವರ ಜಾತಿಯ ವಿಷಯ ಮುನ್ನೆಲೆಗೆ ಬರುತ್ತದೆ. ಪ್ರಾಥಮಿಕ ಶಾಲೆಗೆ ಸೇರ್ಪಡೆ ಮಾಡುವ ಫಾರ್ಮ್‌ನಲ್ಲಿಯೇ ಧರ್ಮ ಮತ್ತು ಜಾತಿಯ ವಿವರ ಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ಜಾತಿಯೆಂದರೆ ಏನೆಂದೇ ತಿಳಿಯದ ಮಕ್ಕಳ ನಡುವೆ ಜಾತಿಯ ಹೆಸರಲ್ಲಿ ತಾರತಮ್ಯ ಮಾಡಿ ಜಾತಿಯೆಂಬ ಭೂತ ಅವರ ತಲೆಯಲ್ಲಿ ಹೊಕ್ಕು ಹಾಗೇ ಉಳಿಯಲು ಮತದ ಭೂತ ನಮ್ಮ ರಾಜಕಾರಣಿಗಳನ್ನು ಆಟ ಆಡಿಸುತ್ತಿರುವದೇ ಕಾರಣ.

ವಿಶ್ವವಿದ್ಯಾಲಯ ಮತ್ತು ಇತರ ಉನ್ನತ ವ್ಯಾಸಂಗ ಸಂಸ್ಥೆಗಳಲ್ಲಿ ಜಾತ್ಯಾಧಾರಿತ ತಾರತಮ್ಯ ನಡೆಯುತ್ತಿದೆ ಎಂಬ ಆರೋಪ ಹೊಸದಲ್ಲ. 2015ರಲ್ಲಿ ನಡೆದ ರೋಹಿತ್ ವೇಮುಲ ಅವರ ಆತ್ಮಹತ್ಯೆ, 2017ರ ಜೆ.ಮುತ್ತುಕೃಷ್ಣರ ಆತ್ಮಹತ್ಯೆ ಮತ್ತು ಕಳೆದ ತಿಂಗಳು ಮುಂಬೈ ಐಐಟಿಯ ವಾಖೋಡೆಯವರ ಆತ್ಮಹತ್ಯೆ ಇವೆಲ್ಲಕ್ಕೂ ಜಾತ್ಯಾಧಾರಿತ ತಾರತಮ್ಯವನ್ನೇ ಕಾರಣವೆಂದು ಆರೋಪಿಸಲಾಗಿದೆ. ಅಂಥ ಘಟನೆಗಳು ನಡೆದ ತಕ್ಷಣ ಅವುಗಳ ಹೊಣೆಯನ್ನು ತಥಾಕಥಿತ ಮುಂದುವರಿದ ವರ್ಗದ ಜನರ ತಲೆಗೆ ಕಟ್ಟುವ ಸಂಘಟಿತ ಪ್ರಯತ್ನ ನಡೆಯುತ್ತದೆ. ಯಾವದೇ ಕಾರಣಕ್ಕೆ ನಡೆದರೂ ಅಂಥ ಜೀವಹಾನಿ ದುರದೃಷ್ಟಕರ ಮತ್ತು ಶೋಚನೀಯ. ಆದರೆ ಅಂಥ ಶೋಚನೀಯ ಆತ್ಮಹತ್ಯೆಗಳು ಘಟಿಸುವ ಮೊದಲು ನಡೆದ ಘಟನೆಗಳನ್ನು ಯಾವುದೇ ಮಾಧ್ಯಮ ದವರಾಗಲೀ ಜನನಾಯಕರಾಗಲೀ ವಿವರಿಸುವುದೇ ಇಲ್ಲ.

ಉದಾಹರಣೆಗೆ, ಭಯೋತ್ಪಾದಕರನ್ನು ಸಮರ್ಥಿಸುವ ಅಥವಾ ಅವರ ಹತ್ಯೆಗೆ ಶೋಕಾಚರಣೆ ಮಾಡುವಂಥ ಘಟನೆಗಳು ಅಥವಾ ವ್ಯಕ್ತಿಯೊಬ್ಬ ಕಾನೂನಿನಂತೆ ಓಬಿಸಿ ವರ್ಗಕ್ಕೆ ಸೇರಿದ್ದರೂ ಅವನನ್ನು ಎಸ್‌ಸಿ ಎಂದು ಹೇಗೆ ಪರಿಗಣಿಸಲಾಯಿತು ಎಂಬ ಸಂಕೀರ್ಣ ವಿಷಯಗಳು ಮತ ಬೇಟೆಗಾರರಿಗೆ ಚರ್ಚಾರ್ಹ ವಿಷಯವಾಗುವದಿಲ್ಲ. ಬದಲಾಗಿ ದಲಿತರೆಂಬ ಕಾರಣಕ್ಕೆ ಅವರನ್ನು ನಿಂದಿಸಿ ಜಾತ್ಯಾಧಾರಿತ ತಾರತಮ್ಯ ಮಾಡಿದ್ದು ಅವರ ಆತ್ಮಹತ್ಯೆಗೆ ಕಾರಣ ಎಂಬ ಸಂವೇದನಾತ್ಮಕ ಹೇಳಿಕೆಗಳನ್ನು ಜಾಹೀರು ಮಾಡಿ ದೇಶಾದ್ಯಂತ ಪ್ರತಿಭಟನೆಗಳನ್ನು ಕೈಗೊಳ್ಳಲಾಗುತ್ತದೆ ಮತ್ತು ಆ ಮೂಲಕ ನಿರ್ದಿಷ್ಟ ವರ್ಗದ ಜನರನ್ನು ಓಲೈಸುವ ಪ್ರಯತ್ನಗಳು ಮುಂದುವರೆಯುತ್ತವೆ.

TB 2610

ಪರಿಣಾಮವಾಗಿ ನಿಜವಾದ ಸಮಸ್ಯೆಗಳ ಕುರಿತು ಚರ್ಚೆಯೇ ಆಗುವದಿಲ್ಲ. ವಾಖೋಡೆಯವರ ಪರೀಕ್ಷಾ ಪ್ರಕರಣ ಮತ್ತು ತದನಂತರ ನಡೆದ ಅವರ ಆತ್ಮಹತ್ಯೆಯ ವಿಷಯದಲ್ಲೂ ಜಾತ್ಯಾಧಾರಿತ ತಾರತಮ್ಯ ವನ್ನೇ ಮುಂದಿಡಲಾಗಿದೆ. ಪರೀಕ್ಷಾ ಹಾಲ್‌ನ ಸಿಸಿ ಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ ಮೇಲೂ ತಾರತಮ್ಯದ ಕೂಗು ಕಡಿಮೆಯಾಗಿಲ್ಲ. ತಪ್ಪನ್ನು ತಪ್ಪೆಂದು ಹೇಳುವದಕ್ಕೂ ಜಾತಿ ನೋಡಬೇಕೆಂಬ ಮನೋಸ್ಥಿತಿಗೆ ಏನನ್ನಬೇಕು? ಎಳೆಯ ಜೀವಗಳು ಜೀವ ಕಳೆದುಕೊಳ್ಳು ವದನ್ನು ತಡೆಯಲು ಕಾರ್ಯಸಾಧ್ಯ ನೀತಿಗಳನ್ನು ರೂಪಿಸುವ ಬದಲು ಅಂಥ ಘಟನೆಗಳನ್ನು ತಮ್ಮ ಮತದ ದುರಾಸೆಗೆ ಬಳಸಿಕೊಳ್ಳುವವರನ್ನು ಖಂಡಿಸಬೇಕಿದೆ.

ಇತ್ತೀಚೆಗಂತೂ ಪ್ರತಿಭಟನೆಗಳೇ ನಿಯಮವಾಗಿ ಶಾಂತ ಸ್ಥಿತಿಯೇ ಅಪವಾದವೆನ್ನುವಂತಾಗಿದೆ. ಪ್ರತಿಭಟನೆ ಗಳು ನಿಯಂತ್ರಣ ಮೀರಿದಾಗ ಅದಕ್ಕೆ ಕಾನೂನುಗಳ ಲೋಪವೇ ಕಾರಣ ಹೊರತು ಆಂತರಿಕ ಸುರಕ್ಷೆ ಅಥವಾ ವಿಚಕ್ಷಣಾ ವ್ಯವಸ್ಥೆಯ ವೈಫಲ್ಯವಲ್ಲ ಎಂಬ ಅಭಿಪ್ರಾಯ ಮೂಡಿಸಲು ಸರಕಾರಗಳು ಮುಂದಾಗುತ್ತವೆ.

ವಿಶ್ವವಿದ್ಯಾಲಯಗಳ ಕೆಲ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಜಾತ್ಯಾಧಾರಿತ ತಾರತಮ್ಯವೇ ಕಾರಣ ಎಂಬ ಆರೋಪದ ಕೆಲವು ಪ್ರಕರಣಗಳು ವಿಚಾರಣೆಗೆ ಬಂದಾಗ ಸುಪ್ರೀಂ ಕೋರ್ಟು ಕೂಡಾ ಆ ಕುರಿತು ಹೊಸ ಕಾನೂನು ರಚಿಸಿ ಜಾರಿಗೆ ತರಬೇಕೆಂಬ ಅದೇಶ ನೀಡಿತು. ಅಂಥ ಆತ್ಮಹತ್ಯೆಗಳಿಗೆ ನಿಜವಾದ ಕಾರಣಗಳೇನು ಎಂಬುದು ಕೊನೆಗೂ ವಿಚಾರಣೆಯಾಗಲೇ ಇಲ್ಲ.

ಹೊಸ ಯುಜಿಸಿ ಮಾರ್ಗಸೂಚಿಗಳು: ವಾಸ್ತವದಲ್ಲಿ ವಿಶ್ವವಿದ್ಯಾಲಯ ಮತ್ತು ಇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತ್ಯಾಧಾರಿತ ತಾರತಮ್ಯ ನಿವಾರಣೆ ಕುರಿತು ವಿಶ್ವವಿದ್ಯಾಲಯ ಧನಸಹಾಯ ಆಯೋಗ ದಿಂದ (ಯುಜಿಸಿ) 2012ರಲ್ಲೇ ಮಾರ್ಗಸೂಚಿಗಳನ್ನು ನೀಡಲಾಗಿತ್ತು. ಆ ನಿಯಮಾ ವಳಿಗಳಲ್ಲಿ ಎಲ್ಲಾ ರೀತಿಯ ತಾರತಮ್ಯ ಮತ್ತು ಶೋಷಣೆಗಳನ್ನು ನಿವಾರಿಸುವ ಹಲವಾರು ನಿಯಮಗಳಿದ್ದವು. ಆದರೆ ಸುಪ್ರೀಂ ಕೋರ್ಟಿನ ಆದೇಶದ ಹಿನ್ನೆಲೆಯಲ್ಲಿ 2026ರಲ್ಲಿ ಹೊರಡಿಸ ಲಾದ ಹೊಸ ಮಾರ್ಗ ಸೂಚಿಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಯಿತು.

ಪ್ರಮುಖವಾಗಿ ಜಾತ್ಯಾಧಾರಿತ ತಾರತಮ್ಯದ ವ್ಯಾಖ್ಯೆಯನ್ನು ಬದಲಾಯಿಸಲಾಯಿತು. ಹೊಸ ಮಾರ್ಗಸೂಚಿಗಳ ಪ್ರಕಾರ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳ ವಿರುದ್ಧ ಮಾಡಲಾಗುವ ತಾರತಮ್ಯಗಳನ್ನು ಮಾತ್ರ ಜಾತ್ಯಾಧಾರಿತ ತಾರತಮ್ಯವೆಂದು ಪರಿಗಣಿಸಲಾಗುತ್ತದೆ. ಸಾಮಾನ್ಯ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳ ವಿರುದ್ಧ ಮಾಡಲಾಗುವ ಅಂಥ ತಾರತಮ್ಯಗಳಿಗೆ ಇದು ಅನ್ವಯವಾಗುವದಿಲ್ಲ.

ಸಮಾನ ಅವಕಾಶ ಕೇಂದ್ರದ ಸಂರಚನೆಯಲ್ಲಿ ಬದಲಾವಣೆ ಮಾಡಿ ಅದರಲ್ಲಿ ಮೂವರು ಪ್ರಾಧ್ಯಾಪಕರು, ಒಬ್ಬರು ಬೋಧಕೇತರ ಸಿಬ್ಬಂದಿ, ಇಬ್ಬರು ಸಾಮಾಜಿಕ ಪ್ರತಿನಿಧಿಗಳು, ಇಬ್ಬರು ವಿದ್ಯಾರ್ಥಿ ಪ್ರತಿನಿಧಿಗಳು ಮತ್ತು ಒಬ್ಬರು ಸಂಯೋಜನಾಧಿಕಾರಿ, ಹೀಗೆ ಒಂಬತ್ತು ಸದಸ್ಯರು ಇರುವ ಈ ಸಮಿತಿಗೆ ಸಂಸ್ಥೆಯ ಮುಖ್ಯಸ್ಥರು ಅಧ್ಯಕ್ಷರಾಗಿರುತ್ತಾರೆ. ಈ ಸದಸ್ಯರುಗಳ ಪೈಕಿ ವಿಶೇಷ-ಚೇತನರು, ಮಹಿಳೆಯರು, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗಗಳಿಗೆ ಸೇರಿದ ಒಬ್ಬೊಬ್ಬರು ಪ್ರತಿನಿಧಿಗಳು ಇರಬೇಕು ಎಂಬ ನಿಯಮವಿದೆ.

ಇವರ ಜೊತೆ ಸಂಯೋಜಕರು ಸೇರಿದರೆ ಸಮಿತಿಯಲ್ಲಿ ಸಾಮಾನ್ಯ ವರ್ಗದ ಪ್ರತಿನಿಧಿಗಳಿಗೆ ಬಹುಮತ ದೊರೆಯುವ ಸಾಧ್ಯತೆ ಕಡಿಮೆ. ಈ ಸಮಿತಿಯು ಸೂಕ್ತ ಪ್ರಾತಿನಿಧಿತ್ವ ಹೊಂದಿದ ಇಕ್ವಿಟಿ ಸ್ವ್ಯಾಡ್ ಅಂದರೆ ವಿಚಕ್ಷಣಾ ತಂಡವನ್ನು ರಚಿಸಬೇಕು ಮತ್ತು ಆ ತಂಡವು ಅವಕಾಶವಂಚಿತ ಜಾತಿಯ ವಿದ್ಯಾರ್ಥಿಗಳ ಮೇಲೆ ನಡೆಯಲಾಗುವ ತಾರತಮ್ಯಗಳ ಕುರಿತು ನಿರಂತರವಾಗಿ ನಿಗಾ ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.

ಈ ನಿಯಮಗಳ ವಿಷಯದಲ್ಲಿ ಸಮಾನ ಅವಕಾಶ ಕೇಂದ್ರವು ವ್ಯಾಪಕ ಪ್ರಚಾರ ನಡೆಸಿ ವಿದ್ಯಾರ್ಥಿ ಗಳಿಗೆ ಅರಿವು ಮೂಡಿಸಬೇಕು ಎಂಬ ಅನೇಕ ನಿಯಮಗಳಿವೆ. 2012ರ ಆದೇಶಕ್ಕೆ ಹೋಲಿಸಿದರೆ ಹೆಚ್ಚು ಕಠಿಣ ನಿಯಮಗಳನ್ನೊಳಗೊಂಡ ಹೊಸ ಆದೇಶದ ಪ್ರಕಾರ ನಿಯಮಾವಳಿ ಗಳ ಉಲ್ಲಂಘನೆ ಮಾಡುವ ಶಿಕ್ಷಣ ಸಂಸ್ಥೆಗಳ ವಿರುದ್ಧ ದಂಡನಾತ್ಮಕ ಕ್ರಮ ಕೈಗೊಳ್ಳಲಾಗುವದು.

ಸುಪ್ರೀಂ ಕೋರ್ಟು ಈ ಹೊಸ ಆದೇಶಕ್ಕೆ ತಡೆಯಾಜ್ಞೆ ನೀಡಿರುವದರಿಂದ ಇದೀಗ ಪುನಃ 2012ರ ಅದೇಶ ಚಾಲ್ತಿಯಲ್ಲಿದೆ. ಪ್ರಮುಖವಾಗಿ ಜಾತ್ಯಾಧಾರಿತ ತಾರತಮ್ಯದ ವ್ಯಾಖ್ಯೆಯಲ್ಲಿ ಸಾಮಾನ್ಯ ವರ್ಗದ ಜನರನ್ನು ಹೊರಗಿಟ್ಟಿರುವದು, ಸಮಾನ ಅವಕಾಶ ಸಮಿತಿಯ ಸಂರಚನೆಯಲ್ಲಿರುವ ಲೋಪಗಳು, ಸುಳ್ಳು ಆರೋಪಗಳ ವಿಷಯದಲ್ಲಿ ಸೂಕ್ತ ನಿಯಮಗಳಿಲ್ಲದಿರುವದು, ಮೇಲ್ಮನವಿಗೆ ಪ್ರತ್ಯೇಕ ವ್ಯವಸ್ಥೆ ಇಲ್ಲದಿರುವದು, ರ್ಯಾಂಗಿಗ್ ಕುರಿತು ಮೌನ ಮುಂತಾದ ಅಂಶಗಳ ಆಧಾರದಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. ಅಂಥ ಆದೇಶಗಳನ್ನು ನೀಡಲು ಯುಜಿಸಿಗೆ ಇರುವ ಅಧಿಕಾರ ವ್ಯಾಪ್ತಿಯನ್ನು ಕೂಡಾ ಪ್ರಶ್ನಿಸಲಾಗಿದೆ.

ಸುಪ್ರೀಂ ಕೋರ್ಟಿನ ಅಂತಿಮ ಆದೇಶ ಹೇಗಿರುತ್ತದೆಂಬುದನ್ನು ಕಾದು ನೋಡಬೇಕು. ಜಾತ್ಯಾ ಧಾರಿತ ತಾರತಮ್ಯವು ಖಂಡನೀಯ ಮತ್ತು ಅಂಥ ಘಟನೆಗಳು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡುತ್ತವೆ. ಆದರೆ ಉನ್ನತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಅದಕ್ಕೂ ಮಿಗಿಲಾದ ಅನೇಕ ಕಠಿಣ ಸಮಸ್ಯೆಗಳನ್ನು ಎದುರಿಸುತ್ತಾರೆ. ಅತಿಯಾದ ಸ್ಪರ್ಧೆ, ತಲುಪಲಾಗದ ಶೈಕ್ಷಣಿಕ ಮಟ್ಟ, ಶಿಕ್ಷಕರು ಮತ್ತು ಪಾಲಕರಿಂದ ಅತಿಯಾದ ನಿರೀಕ್ಷೆ, ಮತ್ತು ಆ ಕಾರಣಕ್ಕೆ ವಿದ್ಯಾರ್ಥಿಗಳು ಎದುರಿಸುವ ಅತಿಯಾದ ಒತ್ತಡ, ಮುಂತಾದ ಅನೇಕ ವಿಷಯಗಳಿವೆ.

ಆದರೆ ಕೇವಲ ಮತಗಳ ಮೇಲೆ ಕಣ್ಣಿಟ್ಟಿರುವ ರಾಜಕೀಯ ವ್ಯವಸ್ಥೆ, ನೈಜ ಸಮಸ್ಯೆಗಳನ್ನು ಮರೆಮಾಚಿ ಎಲ್ಲದಕ್ಕೂ ಜಾತಿಯ ಬಣ್ಣ ಬಳಿಯ ಹೊರಟಿದೆ. ಸುಪ್ರೀಂ ಕೋರ್ಟಿನ ಪರಿಶೀಲನೆ ಯಲ್ಲಿರುವ ಕೇಂದ್ರ ಸರಕಾರದ ಯುಜಿಸಿ ನಿಯಮಾವಳಿಗಳು ಇಂಥ ಅನೀತಿಯ ಒಂದು ಉದಾಹರಣೆ ಮಾತ್ರ. ತಾರತಮ್ಯವೆಂಬುದು ಯಾವ ಆಧಾರದಲ್ಲಿ ನಡೆದರೂ ಅದು ಅಕ್ಷಮ್ಯವೇ. ಸಾಮಾನ್ಯವರ್ಗದ ವಿದ್ಯಾರ್ಥಿಗಳ ಕುರಿತು ನಡೆದರೂ ಅದು ತಾರತಮ್ಯವೇ ಆಗುತ್ತದೆ.

2012ರ ನಿಯಮಾವಳಿಗಳು ಇದನ್ನೇ ಹೇಳುತ್ತವೆ. ಆದರೆ ಹೊಸ ಯುಜಿಸಿ ನಿಯಮಾವಳಿಗಳಲ್ಲಿ ಇದು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗಗಳಿಗೆ ಮಾತ್ರ ಅನ್ವಯವಾಗುತ್ತದೆ. ಅಂಥ ಹೊಸ ನಿಯಮಾವಳಿಗಳನ್ನು ಹೊರಡಿಸುವಾಗ ಸರಕಾರ ಯಾವೆಲ್ಲ ವೈಜ್ಞಾನಿಕ ಅಧ್ಯಯನ ನಡೆಸಿದೆ ಮತ್ತು ಆಧಾರವಾಗಿ ಪರಿಗಣಿಸಿದ ಅಂಶಗಳೇನು ಎಂಬ ಕುರಿತು ಯಾವುದೇ ಸ್ಪಷ್ಟತೆಯಿಲ್ಲ. ಇಷ್ಟಾಗಿ ತಾರತಮ್ಯವೆಂದರೇನು ಎಂಬ ಅಂಶವೇ ಸ್ಪಷ್ಟವಾಗಿಲ್ಲ.

ಇದು ಅಂಥ ನಿಯಮಾವಳಿಗಳನ್ನು ದುರುಪಯೋಗ ಮಾಡಲು ದಾರಿ ಮಾಡಿಕೊಡುತ್ತದೆ. ಅಂಥ ವಿಷಯಗಳ ಗಂಧಗಾಳಿಯಿರದೇ ಕೇವಲ ಓದನ್ನೇ ಮಾಡುತ್ತ, ನಿಜವಾದ ಮೆರಿಟ್ ಆಧಾರದಲ್ಲಿ ಸೀಟು ಪಡೆದ ವಿದ್ಯಾರ್ಥಿಯೊಬ್ಬ ಸುಳ್ಳು ಆರೋಪಗಳಲ್ಲಿ ಸಿಲುಕಿಕೊಂಡರೆ ಶಿಕ್ಷಕರಾಗಲೀ, ಸಾಂಸ್ಥಿಕ ವ್ಯವಸ್ಥೆಯಾಗಲೀ ಆತನ ಪರವಾಗಿ ನಿಲ್ಲುವ ಸಾಹಸ ಮಾಡುವದಿಲ್ಲ.

ರಾಜಕಾರಣಿಗಳು ಮತದ ಆಸೆಗೆ ಆತನ ವಿರುದ್ಧವೇ ಹೇಳಿಕೆ ನೀಡಲು ಮುಂದಾಗುತ್ತಾರೆ. ಹೊಸ ಕಾನೂನು ತರಬೇಕೆಂಬ ಒತ್ತಾಯ ಮಾಡುತ್ತಾರೆ. ಆರೋಪ ಸಿದ್ಧವಾಗುವ ಮೊದಲೇ ದೌರ್ಜನ್ಯದ ತೀರ್ಮಾನ ಕೊಟ್ಟು ಬಿಡುತ್ತಾರೆ. ಅಟ್ರಾಸಿಟಿ ಕಾಯಿದೆಯ ದುರುಪಯೋಗದ ಅನೇಕ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಅಂಥದ್ದೇ ಇನ್ನೊಂದು ಕಾನೂನು ತರುವಾಗ ಸರಕಾರ ಸೂಕ್ತ ರಕ್ಷಣಾತ್ಮಕ ಕಲಮುಗಳನ್ನು ಅಳವಡಿಸಬೇಕು. ನಕಲಿ ಪ್ರಕರಣಗಳು ನಡೆದರೆ ನಮ್ಮ ಪೊಲೀಸ್ ಮತ್ತು ನ್ಯಾಯ ವ್ಯವಸ್ಥೆಯನ್ನು ಎದುರಿಸುವದು ಎಷ್ಟು ಕಷ್ಟ ಎಂಬುದು ಎಲ್ಲರಿಗೂ ತಿಳಿದ ಸಂಗತಿ.

2018ರಲ್ಲಿ ಅಟ್ರಾಸಿಟಿ ಕಾಯಿದೆಯ ದುರುಪಯೋಗದ ಕುರಿತು ಸುಪ್ರೀಂ ಕೋರ್ಟು ಕಠಿಣ ನಿಯಮಾ ವಳಿಗಳನ್ನು ರೂಪಿಸಿದಾಗ ಅನೇಕರು ಪ್ರತಿಭಟನೆ ನಡೆಸಿದ್ದರು. ಆದರೆ ಎನ್‌ಡಿಎ ಸರಕಾರದ ಎಲ್ಲಾ ಕ್ರಮಗಳನ್ನೂ ವಿರೋಧಿಸುವ ಕಾಂಗ್ರೆಸ್ ಕೂಡಾ ಈ ಹೊಸ ಯುಜಿಸಿ ನಿಯಮಾವಳಿಗಳ ಕುರಿತು ಚಕಾರವೆತ್ತಲಿಲ್ಲ. ವಿದ್ಯಾರ್ಥಿಗಳ ಸಮಸ್ಯೆಯೆಂದರೆ ಕೇವಲ ನಿರ್ದಿಷ್ಟ ವರ್ಗದ ಸಮಸ್ಯೆಯಲ್ಲ. ಅದು ಇಡೀ ವ್ಯವಸ್ಥೆಯ ಸಮಸ್ಯೆ. ಅದನ್ನು ಸಮಗ್ರವಾಗಿ ಪರಿಗಣಿಸಬೇಕು- ಪರಿಹರಿಸಬೇಕು. ಇಲ್ಲವಾದರೆ ವಿದ್ಯಾರ್ಥಿಗಳು ಎಂಬ ವರ್ಗದ ವ್ಯಾಖ್ಯೆ ಕೂಡಾ ಜಾತಿ ಧರ್ಮದ ಆಧಾರದಲ್ಲಿ ಬದಲಾಗುತ್ತದೆ. ಈಗಾಗಲೇ ಮೀಸಲಾತಿಯ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಈ ನಿಯಮಾವಳಿಗಳ ವಿಷಯ ಕೂಡಾ ಸೇರಿಕೊಂಡರೆ ತಪ್ಪೆನಿಸುವದಿಲ್ಲ ಅಲ್ಲವೇ?