ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Editorial: ಕನ್ನಡಿಗರಿಗೆ ಉದ್ಯೋಗ

ಕನ್ನಡಿಗರಿಗೆ ಉದ್ಯೋಗ ನಿರಾಕರಿಸುತ್ತಿರುವ ಕೆಲ ಖಾಸಗಿ ಕಂಪನಿಗಳ ವರ್ತನೆಯ ಬಗ್ಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದು, ಸಂಸ್ಥೆಗಳ ಈ ರೀತಿಯ ನಡವಳಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದಿದ್ದಾರೆ. ಕರ್ನಾಟಕದಲ್ಲಿ ಕನ್ನಡಿಗರ ಹಕ್ಕು, ಗೌರವ ಮತ್ತು ಉದ್ಯೋಗಾವಕಾಶಗಳನ್ನು ಯಾವುದೇ ಕಾರಣಕ್ಕೂ ಕಡೆಗಣಿಸಲು ಸರಕಾರ ಅವಕಾಶ ನೀಡುವುದಿಲ್ಲ

Vishwavani Editorial: ಕನ್ನಡಿಗರಿಗೆ ಉದ್ಯೋಗ

-

Profile
Ashok Nayak Oct 26, 2026 8:20 AM

ಕನ್ನಡಿಗರಿಗೆ ಉದ್ಯೋಗ ನಿರಾಕರಿಸುತ್ತಿರುವ ಕೆಲ ಖಾಸಗಿ ಕಂಪನಿಗಳ ವರ್ತನೆಯ ಬಗ್ಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದು, ಸಂಸ್ಥೆಗಳ ಈ ರೀತಿಯ ನಡವಳಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದಿದ್ದಾರೆ. ಕರ್ನಾಟಕದಲ್ಲಿ ಕನ್ನಡಿಗರ ಹಕ್ಕು, ಗೌರವ ಮತ್ತು ಉದ್ಯೋಗಾವಕಾಶಗಳನ್ನು ಯಾವುದೇ ಕಾರಣಕ್ಕೂ ಕಡೆಗಣಿಸಲು ಸರಕಾರ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

ಬೆಂಗಳೂರಿನ ಕೆಲವು ಐಟಿ ಕಂಪನಿಗಳು ಕನ್ನಡವನ್ನು ಮಾತೃಭಾಷೆಯೆಂದು ನಮೂದಿಸುವ ಅಭ್ಯರ್ಥಿಗಳಿಗೆ ಉದ್ಯೊಗ ನೀಡುತ್ತಿಲ್ಲ. ತಮಿಳು ಮತ್ತು ತೆಲುಗು ಭಾಷೆ ಬಲ್ಲ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತಿದೆ. ಬೆಂಗಳೂರಿನ ಕಾಲೇಜುಗಳಲ್ಲಿ ಕ್ಯಾಂಪಸ್ ಸಂದರ್ಶನಗಳನ್ನು ನಡೆಸದೇ ಹೊರ ರಾಜ್ಯಗಳಿಂದ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಾಗುತ್ತಿದೆ ಎಂದು ಯುವತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದರು. ಈ ಆರೋಪ ಹೊಸತಲ್ಲ.

ಇದನ್ನೂ ಓದಿ: Government jobs: ಕುಟುಂಬಕ್ಕೊಂದು ಸರ್ಕಾರಿ ಉದ್ಯೋಗ, ಸೇವಾವಧಿ 10-15 ವರ್ಷ ಮಾತ್ರ; ಹೊಸ ಪ್ಲ್ಯಾನ್‌ ಬಿಚ್ಚಿಟ್ಟ ಎಚ್‌ಡಿಕೆ

ಕೆಲವೊಮ್ಮೆ ಕಂಪನಿಗಳೇ ಜಾಹೀರಾತಿನಲ್ಲಿ ‘ಕನ್ನಡಿಗರು ಅರ್ಜಿ ಹಾಕುವ ಅಗತ್ಯವಿಲ್ಲ’ ಎಂದೂ ಸಾರಿ ತಮ್ಮ ಕನ್ನಡ ದ್ವೇಷವನ್ನು ತೋರಿದ್ದುಂಟು. 1984ರಷ್ಟು ಹಿಂದೆಯೇ, ಕನ್ನಡಿಗರ ಉದ್ಯೋಗದ ಸ್ಥಿತಿಗತಿ ಕುರಿತು ನೀಡಲಾದ ಸರೋಜಿನಿ ಮಹಿಷಿ ವರದಿಯಲ್ಲಿ, ಕರ್ನಾಟಕದಲ್ಲಿ ಕಾರ್ಯಾಚರಿಸುವ ಖಾಸಗಿ ವಲಯದ ಕಂಪನಿಗಳಲ್ಲಿ ಕನ್ನಡಿಗರಿಗೆ ಡಿ ಮತ್ತು ಸಿ ದರ್ಜೆಗಳಲ್ಲಿ ಶೇ.100 ಹಾಗೂ ಉನ್ನತ ಹುದ್ದೆಗಳಲ್ಲಿ ಶೇ. 80ರಷ್ಟು ಉದ್ಯೋಗಗಳನ್ನು ಮೀಸಲು ಇಡಬೇಕೆಂದು ಶಿಫಾರಸು ಮಾಡಿದ್ದರು.

ಈ ವರದಿಯ ಶಿಫಾರಸುಗಳನ್ನು ಸರಕಾರ ತಾತ್ವಿಕವಾಗಿ ಒಪ್ಪಿಕೊಂಡಿದ್ದರೂ, ಅನುಷ್ಠಾನಕ್ಕೆ ಇನ್ನೂ ತಂದಿಲ್ಲ. ಕನ್ನಡ ಸಂಘಟನೆಗಳು ಈ ವರದಿಯನ್ನು ಪರಿಷ್ಕರಿಸಿ ಜಾರಿಗೆ ತರಬೇಕೆಂದು ಆಗ್ರಹಿಸುತ್ತಿವೆ. ಇದರ ಜಾರಿಯ ಬಗ್ಗೆ ಕಠಿಣ ನಿಲುವು ನಮ್ಮಲ್ಲಿ ಇಲ್ಲದಿರುವುದರಿಂದ, ಕನ್ನಡಿಗರ ಬಗ್ಗೆ ಕಂಪನಿಗಳು ತಾತ್ಸಾರ ನಿಲುವು ತಳೆಯಲು ಕಾರಣವಾಗಿದೆ. ಬೆಂಗಳೂರನ್ನು ಭಾರತದ ತಂತ್ರಜ್ಞಾನ ರಾಜಧಾನಿಯಾಗಿ ಗುರುತಿಸುಲಾಗುತ್ತಿದೆ. ಕರ್ನಾಟಕದ ನೆಲ, ನೀರು, ಸಬ್ಸಿಡಿ ಮೂಲಕ ನೀಡಲಾಗುತ್ತಿರುವ ವಿದ್ಯುತ್ ಇತ್ಯಾದಿಗಳನ್ನು ಬಳಸಿಕೊಂಡು ಈ ಕಂಪನಿಗಳು ಬೆಳೆದು ನಿಂತಿವೆ.

ಹೀಗಿರುವಾಗ, ಉದ್ಯೋಗ ನೀಡುವಲ್ಲಿ ಕನ್ನಡಿಗರನ್ನು ಇವರು ಕಡೆಗಣಿಸುತ್ತಿರುವುದು ಯಾಕೋ ತಿಳಿಯದು. ಇದನ್ನು ಉಂಡ ಮನೆಗೆ ಎರಡು ಬಗೆಯುವುದು ಎನ್ನದೇ ಬೇರೆ ಮಾತಿನಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಯಾವುದೇ ಖಾಸಗಿ ಸಂಸ್ಥೆ ಉದ್ದೇಶಪೂರ್ವಕವಾಗಿ ಕನ್ನಡಿಗರನ್ನು ಉದ್ಯೋಗಾವಕಾಶ ಗಳಿಂದ ವಂಚಿಸುತ್ತಿರುವುದು ಕಂಡುಬಂದರೆ ಕೂಡಲೇ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಕನ್ನಡಿಗರ ಹಿತಾಸಕ್ತಿಯನ್ನು ಕಾಪಾಡಬೇಕು.