ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishweshwar Bhat Column: ವೆರ್ನಜ್ಜಾ: ಪ್ರಕೃತಿಯ ಮುನಿಸು, ಮಾನವನ ಗೆಲುವು !

ಡಿದಾದ ಬಂಡೆಗಳ ನಡುವೆ, ಲಿಗುರಿಯನ್ ಸಮುದ್ರದ ದಂಡೆಯಲ್ಲಿ ಕಂಗೊಳಿಸುವ ಈ ಊರು, ತನ್ನ ರೋಮಾಂಚಕ ಬಣ್ಣಬಣ್ಣದ ಮನೆಗಳು ಹಾಗೂ ನೈಸರ್ಗಿಕ ಬಂದರಿಗೆ ಹೆಸರುವಾಸಿಯಾಗಿದೆ. ಯುನೆಸ್ಕೋ ಇದನ್ನು ವಿಶ್ವ ಪಾರಂಪರಿಕ ತಾಣವೆಂದು ಗುರುತಿಸಿದೆ. ವೆರ್ನಜ್ಜಾದಲ್ಲಿ ಸಾರಿಗೆ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ವೆರ್ನಜ್ಜಾ: ಪ್ರಕೃತಿಯ ಮುನಿಸು, ಮಾನವನ ಗೆಲುವು !

-

ಇದೇ ಅಂತರಂಗ ಸುದ್ದಿ

ನೀವು ಇಟಲಿ ದೇಶದ ವೆರ್ನಜ್ಜಾ ಎಂಬ ಊರಿನ ಹೆಸರನ್ನು ಕೇಳಿರಬಹುದು. ಇದು ಇಟಲಿಯ ಲಾ ಸ್ಪೆಜಿಯಾ ಪ್ರಾಂತ್ಯದಲ್ಲಿರುವ, ಸುಮಾರು ಎಂಟು ನೂರು ಜನಸಂಖ್ಯೆ ಇರುವ ಒಂದು ಪುಟ್ಟ ಹಳ್ಳಿ. ಇದು ವಿಶ್ವಪ್ರಸಿದ್ಧ ‘ಚಿಂಕ್ವೆ ಟೆರೆ’ ಎಂದು ಕರೆಯುವ ಐದು ಐತಿಹಾಸಿಕ ಕರಾವಳಿ ಹಳ್ಳಿಗಳ ಸಮೂಹದಲ್ಲಿ ಒಂದಾಗಿದೆ. ಕಡಿದಾದ ಬಂಡೆಗಳ ನಡುವೆ, ಲಿಗುರಿಯನ್ ಸಮುದ್ರದ ದಂಡೆಯಲ್ಲಿ ಕಂಗೊಳಿಸುವ ಈ ಊರು, ತನ್ನ ರೋಮಾಂಚಕ ಬಣ್ಣಬಣ್ಣದ ಮನೆಗಳು ಹಾಗೂ ನೈಸರ್ಗಿಕ ಬಂದರಿಗೆ ಹೆಸರುವಾಸಿಯಾಗಿದೆ. ಯುನೆಸ್ಕೋ ಇದನ್ನು ವಿಶ್ವ ಪಾರಂಪರಿಕ ತಾಣವೆಂದು ಗುರುತಿಸಿದೆ. ವೆರ್ನಜ್ಜಾದಲ್ಲಿ ಸಾರಿಗೆ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಹಾಗಾಗಿ, ಇಲ್ಲಿನ ಕಿರಿದಾದ ಕಾಲುದಾರಿಗಳಲ್ಲಿ ಹೆಜ್ಜೆ ಹಾಕುತ್ತಾ, ಸಮುದ್ರದ ತಂಪಾದ ಗಾಳಿಯನ್ನು ಆಸ್ವಾದಿಸುವುದೇ ಒಂದು ಅದ್ಭುತ ಅನುಭವ. ಪ್ರಾಕೃತಿಕ ಸೌಂದರ್ಯ, ಪಾರಂಪರಿಕ ವಾಸ್ತುಶಿಲ್ಪ ಹಾಗೂ ಪ್ರಶಾಂತ ವಾತಾವರಣದ ಅಪರೂಪದ ಸಂಗಮ ವಾಗಿರುವ ವೆರ್ನಜ್ಜಾ, ವಿಶ್ವದಾದ್ಯಂತ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುವ ಒಂದು ಅದ್ಭುತ ತಾಣ ಎಂಬುದರಲ್ಲಿ ಎರಡು ಮಾತಿಲ್ಲ ಸುಮಾರು ಹದಿನೈದು ವರ್ಷಗಳ ಹಿಂದೆ (2011), ಈ ನಗರ ಪ್ರವಾಹದಲ್ಲಿ ಕೊಚ್ಚಿ ಹೋಗಿ, ನಂತರ ಹೂಳಿನಲ್ಲಿ ಮುಚ್ಚಿ ಹೋದಾಗ, ಆ ಸುದ್ದಿಯನ್ನು ನಾನು ಸಂಪಾದಕನಾಗಿದ್ದ ‘ಕನ್ನಡ ಪ್ರಭ’ದ ಮುಖಪುಟದಲ್ಲಿ ಆಂಕರ್ ಸುದ್ದಿಯಾಗಿ ಪ್ರಕಟಿಸಿದ್ದ ನೆನಪು.

ಅದಾಗಿ ಐದು ವರ್ಷಗಳ ನಂತರ ‘ನ್ಯಾಷನಲ್ ಜಿಯಾಗ್ರಫಿಕ್’ ಮ್ಯಾಗಜಿನ್, ಭೇಟಿ ನೀಡಲೇಬೇಕಾದ ವಿಶ್ವದ ಐವತ್ತು ಊರುಗಳ ಪಟ್ಟಿಯಲ್ಲಿ ವೆರ್ನಜ್ಜಾವನ್ನೂ ಸೇರಿಸಿತ್ತು. ಆಗ ಈ ಊರಿಗೆ ಹೋಗಲೇ ಬೇಕು ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದೆ. ಎಂಟು ವರ್ಷಗಳ ಹಿಂದೆ, ಅಂದರೆ 2018ರಲ್ಲಿ, ನಾನು ಈ ಊರಿಗೆ ಹೋಗಿದ್ದೆ. ನಾನು ಅಲ್ಲಿಗೆ ಹೋದಾಗ, ಆ ಊರು ಹೂಳಿನಲ್ಲಿ ಮುಚ್ಚಿ ಹೋಗಿದ್ದರ ಕಿಂಚಿತ್ ಕುರುಹು ಸಹ ಇಲ್ಲದಂತೆ ನಳನಳಿಸುತ್ತಿತ್ತು. ಆ ಕರಾಳ ಘಟನೆ, ಕೆಲವು ಹಿರಿಯರ ನೆನಪಿನಲ್ಲಿದ್ದುದನ್ನು ಬಿಟ್ಟರೆ, ಆ ಊರನ್ನು ನೋಡಿದರೆ ಅದರ ಲವಲೇಶವೂ ಕಾಣುತ್ತಿರಲಿಲ್ಲ.

2011ರ ಅಕ್ಟೋಬರ್ 25ರ ಆ ಕಪ್ಪು ಮಂಗಳವಾರ. ಇಟಲಿಯ ಅತ್ಯಂತ ಸುಂದರ ಕರಾವಳಿ ಗ್ರಾಮ ವಾದ ವೆರ್ನಜ್ಜಾ ಇತಿಹಾಸದ ಎಂದೂ ಮರೆಯಲಾಗದ ಕರಾಳ ದಿನ. ಶತಶತಮಾನಗಳಿಂದ ರೋಮ್ಯಾಂಟಿಕ್ ಕವಿಗಳನ್ನು, ಜಗತ್ತಿನ ಪ್ರವಾಸಿಗರನ್ನು ತನ್ನ ವರ್ಣರಂಜಿತ ಮನೆಗಳು ಮತ್ತು ಪ್ರಶಾಂತ ಸಮುದ್ರ ತೀರದಿಂದ ಮಂತ್ರಮುಗ್ಧಗೊಳಿಸುತ್ತಿದ್ದ ಆ ಪುಟ್ಟ ಹಳ್ಳಿ, ಕೇವಲ ಕೆಲವು ಗಂಟೆಗಳಲ್ಲಿ ಸುರಿದ ಭಾರೀ ಮಳೆ ಮತ್ತು ಪ್ರಕೃತಿಯ ವಿಕೋಪಕ್ಕೆ ಸಿಲುಕಿ ಸಂಪೂರ್ಣವಾಗಿ ಧ್ವಂಸವಾಗಿ ಹೋಗಿತ್ತು. ಇಡೀ ಜಗತ್ತೇ ಮರುಕಪಡುವಂತೆ ಮಾಡಿದ ಆ ಭೀಕರ ದುರಂತ ಕಂಡು ಜನ ವೆರ್ನಜ್ಜಾ ಕಥೆ ಮುಗಿಯಿತು ಎಂದೇ ಭಾವಿಸಿದ್ದರು. ಆದರೆ, ಆ ಘಟನೆ ನಂತರ ಅಲ್ಲಿನ ಜನರು ತೋರಿದ ಅದಮ್ಯ ಚೇತನ, ಕೆಚ್ಚಿನ ಹೋರಾಟ ಮತ್ತು ಮರುಜನ್ಮದ ಕಥೆ ಇತಿಹಾಸದಲ್ಲಿ ಬಂಗಾರದ ಅಕ್ಷರಗಳಲ್ಲಿ ಬರೆಯುವಂಥದ್ದು. ಅಂದು ಬೆಳಗ್ಗೆಯಿಂದಲೇ ಲಿಗೂರಿಯನ್ ಕರಾವಳಿಯಾದ್ಯಂತ ಆಕಾಶಕ್ಕೆ ತೂತು ಬಿದ್ದಂತೆ ಭಾರಿ ಮಳೆ ಸುರಿಯಲಾರಂಭಿಸಿತು.

ಇದನ್ನೂ ಓದಿ: Vishweshwar Bhat Column: ಇಂಗ್ಲೆಂಡ್ - ಬ್ರಿಟನ್ - ಯುನೈಟೆಡ್ ಕಿಂಗ್‌ಡಮ್

ಕೇವಲ ನಾಲ್ಕೇ ಗಂಟೆಗಳಲ್ಲಿ ಸುಮಾರು 22 ಇಂಚುಗಳಿಗಿಂತಲೂ ಅಧಿಕ ದಾಖಲೆ ಪ್ರಮಾಣದ ಮಳೆ ಸುರಿದಿತ್ತು. ವೆರ್ನಜ್ಜಾ ಕಡಿದಾದ ಬೆಟ್ಟಗಳ ಮಧ್ಯದ ಕಣಿವೆಯಲ್ಲಿ ಇರುವುದರಿಂದ, ಬೆಟ್ಟದ ಮೇಲ್ಭಾಗದಲ್ಲಿ ಸುರಿದ ಅಪಾರ ಪ್ರಮಾಣದ ನೀರು, ಭೀಕರ ಜಲಪ್ರವಾಹವಾಗಿ ಮಾರ್ಪಟ್ಟಿತು. ಬೆಟ್ಟದ ಮಣ್ಣು, ಬೃಹತ್ ಬಂಡೆಗಳು ಮತ್ತು ದಶಕಗಳ ಹಳೆಯ ಮರಗಳು ಪ್ರವಾಹದೊಂದಿಗೆ ಕೊಚ್ಚಿ ಬಂದು ಹಳ್ಳಿಯತ್ತ ನುಗ್ಗಿದವು.

ಕಣಿವೆಯ ನೈಸರ್ಗಿಕ ನೀರು ಹರಿಯುವ ಮಾರ್ಗಗಳು ಕ್ಷಣಾರ್ಧದಲ್ಲಿ ಮುಚ್ಚಿಹೋಗಿ, ಇಡೀ ಮಣ್ಣಿನ ಜಲಪಾತವೇ ವೆರ್ನಜ್ಜಾದ ಮುಖ್ಯ ರಸ್ತೆಯಾದ ‘ರೋಮಾ’ ಬೀದಿಗೆ ನುಗ್ಗಿತು. ಆ ಭೀಕರ ಕೆಸರು ಮತ್ತು ಮಣ್ಣಿನ ಸುನಾಮಿ ಎದುರಿಗೆ ಸಿಕ್ಕ ಕಾರುಗಳು, ಅಂಗಡಿ ಮುಂಗಟ್ಟುಗಳು, ಮನೆಗಳ ಗೋಡೆಗಳನ್ನು ಧೂಳೀಪಟ ಮಾಡುತ್ತಾ ಸಾಗಿತು. ಕೇವಲ ಕೆಲವು ಗಂಟೆಗಳಲ್ಲಿ ಇಡೀ ಹಳ್ಳಿ ಬರೋಬ್ಬರಿ ಏಳೆಂಟು ಮೀಟರ್‌ಗೂ ಅಧಿಕ ಎತ್ತರದ ಗಟ್ಟಿಯಾದ ಒದ್ದೆ ಕೆಸರು ಮತ್ತು ಕಲ್ಲುಗಳ ಅಡಿಯಲ್ಲಿ ಸಂಪೂರ್ಣವಾಗಿ ಹೂತುಹೋಗಿತ್ತು. ಸುಂದರ ಮನೆಗಳ ಮೊದಲ ಮಹಡಿಯವರೆಗೂ ಕೆಸರು ತುಂಬಿಕೊಂಡಿತ್ತು. ಕಿರಿದಾದ ಕಾಲುದಾರಿಗಳಲ್ಲಿ ಹರಿಯುತ್ತಿದ್ದ ಕೆಸರಿನ ರಭಸಕ್ಕೆ ಕಾರುಗಳು, ದೋಣಿಗಳು ಸಮುದ್ರಕ್ಕೆ ಕೊಚ್ಚಿಹೋಗಿತ್ತು. ವಿದ್ಯುತ್ ಸಂಪರ್ಕ ಕಡಿತಗೊಂಡು, ಕುಡಿಯುವ ನೀರಿಲ್ಲದೆ, ರಸ್ತೆಗಳೇ ಇಲ್ಲದಂತಾಗಿ ವೆರ್ನಜ್ಜಾ ಜಗತ್ತಿನಿಂದ ಸಂಪೂರ್ಣವಾಗಿ ಒಂಟಿಯಾಯಿತು.

ಪ್ರಕೃತಿಯ ಈ ವಿಕೋಪವು ಹಳ್ಳಿಯ ಭೌತಿಕ ಸ್ವರೂಪವನ್ನಷ್ಟೇ ಅಲ್ಲ, ಶತಮಾನಗಳ ಐತಿಹಾಸಿಕ ಪಾರಂಪರಿಕ ಕುರುಹುಗಳನ್ನು ಕಸಿದುಕೊಂಡಿತು. ಈ ಭೀಕರ ದುರಂತದಲ್ಲಿ ಮೂವರು ಸ್ಥಳೀಯ ನಿವಾಸಿಗಳು ಜೀವ ಕಳೆದುಕೊಂಡರು. ಹಳ್ಳಿಯ ಪರಿಸ್ಥಿತಿಯನ್ನು ಹೆಲಿಕಾಪ್ಟರ್ ಮೂಲಕ ನೋಡಿದ ಇಡೀ ವಿಶ್ವವೇ, ‘ಇನ್ನು ವೆರ್ನಜ್ಜಾ ಕಥೆ ಮುಗಿದೇ ಹೋಯಿತು, ಅದರ ಸಾಂಪ್ರದಾಯಿಕ ಸೌಂದರ್ಯವನ್ನು ಮತ್ತೆ ಎಂದಿಗೂ ನೋಡಲು ಸಾಧ್ಯವಿಲ್ಲ’ ಎಂದು ಕಣ್ಣೀರಿಟ್ಟಿತು. ಆದರೆ, ದುರಂತದ ಮರುದಿನವೇ ವೆರ್ನಜ್ಜಾದ ಜನರ ನಿಜವಾದ ಶಕ್ತಿ ಜಗತ್ತಿಗೆ ಪರಿಚಯವಾಯಿತು.

ತಮಗಾದ ಭಾರಿ ಆಸ್ತಿ-ಪಾಸ್ತಿ ನಷ್ಟ ಮತ್ತು ಪ್ರಾಣಹಾನಿಯ ಆಘಾತದಿಂದ ಕುಸಿಯದ ಅಲ್ಲಿನ ನಿವಾಸಿಗಳು, ‘ನಾವು ನಮ್ಮ ತಾಯ್ನಾಡನ್ನು ಹೀಗೆ ಬಿಡುವುದಿಲ್ಲ’ ಎಂದು ಶಪಥ ಮಾಡಿದರು. ಹಳ್ಳಿಯ ಪುರುಷರು, ಮಹಿಳೆಯರು ಮತ್ತು ಮಕ್ಕಳು ತಾವೇ ಸ್ವತಃ ಕೈಯಲ್ಲಿ ಗುದ್ದಲಿ, ಸಲಾಕೆಗಳನ್ನು ಹಿಡಿದು ಕೆಸರು ತೆಗೆಯಲು ರಸ್ತೆಗಿಳಿದರು. ಈ ಸುದ್ಧಿ ತಿಳಿಯುತ್ತಿದ್ದಂತೆ ಇಟಲಿಯ ನಾನಾ ಭಾಗಗಳಿಂದ ಮತ್ತು ಜಗತ್ತಿನಾದ್ಯಂತದ ನೂರಾರು ಸ್ವಯಂಸೇವಕರು ವೆರ್ನಜ್ಜಾದ ನೆರವಿಗೆ ಧಾವಿಸಿ ಬಂದರು.

61 ಒಕ

ಆಧುನಿಕ ಯಂತ್ರೋಪಕರಣಗಳನ್ನು ತರಲು ಅಲ್ಲಿ ಸರಿಯಾದ ರಸ್ತೆಗಳೇ ಇರಲಿಲ್ಲ. ಕಾರಣ ತೀರಾ ಇಕ್ಕಟ್ಟಾದ ರಸ್ತೆ. ಆದರೂ ಜನರು ಕೈಕೈ ಜೋಡಿಸಿ, ಬಕೆಟ್‌ಗಳ ಮೂಲಕ ಕೋಟ್ಯಂತರ ಟನ್ ಕೆಸರನ್ನು ಹಳ್ಳಿಯಿಂದ ಹೊರಹಾಕಲು ಆರಂಭಿಸಿದರು. ಸ್ಥಳೀಯರು ‘ಸೇವ್ ವೆರ್ನಜ್ಜಾ’ ಎಂಬ ಅಭಿಯಾನವನ್ನು ಆರಂಭಿಸಿ ಜಗತ್ತಿನಾದ್ಯಂತ ಹಣ ಮತ್ತು ಸಂಪನ್ಮೂಲಗಳನ್ನು ಕ್ರೋಢೀಕರಿಸಿ ದರು.

ಹಳ್ಳಿಯ ಕೆಳಭಾಗದಲ್ಲಿದ್ದ ಪ್ರಾಚೀನ ಚರಂಡಿ ವ್ಯವಸ್ಥೆಯನ್ನು ಪುನರ್ನಿರ್ಮಿಸುವುದು ದೊಡ್ಡ ಸವಾಲಾಗಿತ್ತು. ಆದರೆ ಇಂಜಿನಿಯರ್‌ಗಳು ಮತ್ತು ಕಾರ್ಮಿಕರು ರಾತ್ರಿ ಹಗಲಿನ್ನದೇ ಶ್ರಮಿಸಿದರು. ಜಗತ್ತಿನ ನಾನಾ ಮೂಲೆಗಳಿಂದ ಬಂದ ಸ್ವಯಂಸೇವಕರು, ಸೇನಾ ಸಿಬ್ಬಂದಿ ಹಾಗೂ ತಜ್ಞರು ಹಳ್ಳಿಯನ್ನು ಮರುಜೀವಗೊಳಿಸಲು ರಾತ್ರಿ-ಹಗಲೆನ್ನದೆ ದುಡಿದರು.

ಭೂಗತ ಕಾಲುವೆಗಳು, ಕುಡಿಯುವ ನೀರಿನ ವ್ಯವಸ್ಥೆ ಮತ್ತು ರೈಲು ಮಾರ್ಗಗಳನ್ನು ಸಂಪೂರ್ಣ ವಾಗಿ ಹೊಸದಾಗಿ ನಿರ್ಮಿ ಸಲಾಯಿತು. ಪ್ರವಾಹದಿಂದ ಮಸಕಾಗಿದ್ದ ಮನೆಗಳ ಗೋಡೆಗಳಿಗೆ ಮತ್ತೆ ಸಾಂಪ್ರದಾಯಿಕ ವರ್ಣರಂಜಿತ ಬಣ್ಣಗಳನ್ನು ಬಳಿಯಲಾಯಿತು. ಚರ್ಚ್‌ಗಳ ಗಂಟೆಗಳು ಮತ್ತೆ ಮೊಳಗಿದವು, ಕರಾವಳಿ ತೀರದ ಕೆಫೆಗಳು ಬಾಗಿಲು ತೆರೆದವು. ಪ್ರವಾಸಿಗರ ಹರಟೆ ಮತ್ತು ಕಾಫಿಯ ಸುವಾಸನೆ ಬೀದಿಗಳಲ್ಲಿ ಮತ್ತೆ ಜೀವ ಪಡೆಯಿತು. ಕೇವಲ ಎರಡೇ ವರ್ಷಗಳ ಅವಧಿಯಲ್ಲಿ, ಅಂದರೆ 2013ರ ವೇಳೆಗೆ, ಇಡೀ ಹಳ್ಳಿಯನ್ನು ಮತ್ತೆ ಅದರ ಮೂಲ ರೂಪಕ್ಕೆ ತಂದು ನಿಲ್ಲಿಸುವಲ್ಲಿ ಅವರು ಯಶಸ್ವಿಯಾದರು! ಒಂದು ಭೀಕರ ನೈಸರ್ಗಿಕ ವಿಕೋಪವು ಇಡೀ ಹಳ್ಳಿಯನ್ನೇ ಅಳಿಸಿ ಹಾಕಬಹುದು, ಆದರೆ ಅಲ್ಲಿನ ಜನರ ಒಗ್ಗಟ್ಟು ಮತ್ತು ಅದಮ್ಯ ಇಚ್ಛಾಶಕ್ತಿಯನ್ನು ಅಳಿಸಲು ಸಾಧ್ಯವಿಲ್ಲ ಎಂಬುದಕ್ಕೆ ವೆರ್ನಜ್ಜಾ ಇಂದಿಗೂ ಜಗತ್ತಿಗೆ ಒಂದು ಜೀವಂತ ಉದಾಹರಣೆಯಾಗಿ ನಿಂತಿದೆ.

ಇಂದು ವೆರ್ನಜ್ಜಾಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಅಲ್ಲಿ ಅಂಥದ್ದೊಂದು ಭೀಕರ ಪ್ರಳಯ ನಡೆದಿತ್ತು ಎಂಬುದರ ಕುರುಹುಗಳೂ ಸಿಗುವುದಿಲ್ಲ. ಪ್ರಕೃತಿಯ ಕೋಪದ ಮುಂದೆ ಮಾನವ ಎಷ್ಟೇ ಅಸಹಾಯಕ ನಾದರೂ, ಸಂಘಟಿತ ಒಗ್ಗಟ್ಟು, ನಂಬಿಕೆ ಮತ್ತು ಪುನರ್ನಿರ್ಮಾಣದ ದೃಢ ಸಂಕಲ್ಪ ವಿದ್ದರೆ ಬೂದಿಯಿಂದಲೂ ಎದ್ದು ಬರುವ ಫೀನಿಕ್ಸ್ ಹಕ್ಕಿಯಂತೆ ಮರುಜೀವ ಪಡೆಯಬಹುದು ಎಂಬುದಕ್ಕೆ ವೆರ್ನಜ್ಜಾ ಇಂದಿಗೂ ಜಗತ್ತಿಗೆ ಶ್ರೇಷ್ಠ ಉದಾಹರಣೆಯಾಗಿದೆ.

ನಾನು ಈಗ ವೆರ್ನಜ್ಜಾವನ್ನು ನೆನಪಿಸಿಕೊಳ್ಳಲು ಕಾರಣವಿದೆ. ಹಿಂದಿನ ವಾರ ಬೆಂಗಳೂರಿನ ಪಂಚತಾರಾ ಹೋಟೆಲೊಂದರಲ್ಲಿ ಇಟಲಿ ಪ್ರವಾಸೋದ್ಯಮ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ನಾನು ಆಹ್ವಾನದ ಮೇರೆಗೆ ಆ ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದೆ. ಅಲ್ಲಿನ ಪ್ರವಾಸೋದ್ಯಮ ಅಧಿಕಾರಿ ಯೊಬ್ಬರು ಸಭೆಯನ್ನುದ್ದೇಶಿಸಿ, ‘ಇಲ್ಲಿ ಸೇರಿರುವ ಸುಮಾರು ಇನ್ನೂರು ಜನರ ಪೈಕಿ, ಯಾರಾದರೂ ವೆರ್ನಜ್ಜಾ ನೋಡಿದ್ದೀರಾ?’ ಎಂದು ಕೇಳಿದರು. ನಾನು ಕೈ ಎತ್ತಿದೆ ಮತ್ತು ಈ ಎಲ್ಲ ಕಥೆಯನ್ನು ಹೇಳಿದೆ. ಅದನ್ನೂ ನಿಮಗೂ ಹೇಳಬೇಕು ಎನಿಸಿತು.

‘ಲಿವ್ಸ್‌ನ್ಯೂಟಾರೆ’ ಎಂದರೇನು?

ನಾನು ಮೊನ್ನೆ ಲಂಡನ್ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಕುಳಿತಿದ್ದಾಗ, ಎದುರಿನ ಎಲೆಕ್ಟ್ರಾನಿಕ್ ಫಲಕದ ಮೇಲೆ, ಟ್ರಾವೆಲ್ ಕಂಪನಿಯೊಂದು ನೀಡಿದ ಜಾಹೀರಾತಿನಲ್ಲಿ How to Livsnjutare in Wales? ಎಂಬ ಹೆಡ್ ಲೈನ್ ಕಾಣಿಸಿತು. ಲಿವ್ಸ್‌ನ್ಯೂಟಾರೆ (Livsnjutare) ಎಂಬ ಪದವನ್ನು ನಾನು ಕೇಳಿರಲಿಲ್ಲ, ಓದಿರಲಿಲ್ಲ. ಆ ಪದವನ್ನು ನನ್ನ ನೋಟ್ ಬುಕ್ ನಲ್ಲಿ ಬರೆದುಕೊಂಡು ಸುಮ್ಮನಾಗಿದ್ದೆ. ಮೊನ್ನೆ ನನ್ನ ನೋಟ್ ಬುಕ್ ಮೇಲೆ ಕಣ್ಣು ಹಾಯಿಸುವಾಗ ಈ ಪದ ಕಣ್ಣಿಗೆ ಬಿತ್ತು. ಅಷ್ಟಕ್ಕೂ ಈ ‘ಲಿವ್ಸ್‌ನ್ಯೂಟಾರೆ’ ಸ್ವೀಡಿಶ್ ಪದ. ಈ ಪದಕ್ಕೆ ಅತ್ಯಂತ ಹತ್ತಿರವಾದ ಅರ್ಥವೆಂದರೆ ‘ಜೀವನಪ್ರೇಮಿ’ ಅಥವಾ ‘ಪ್ರತಿಯೊಂದು ಕ್ಷಣವನ್ನೂ ರಸವತ್ತಾಗಿ ಅನುಭವಿಸು ವವನು’. ಇದು ಕೇವಲ ಒಂದು ಶಬ್ದವಲ್ಲ, ಅದೊಂದು ಜೀವನ ದೃಷ್ಟಿಕೋನ.

ಇಂದಿನ ಧಾವಂತದ ಜಗತ್ತಿನಲ್ಲಿ ನಾವೆಲ್ಲರೂ ‘ಗಮ್ಯಸ್ಥಾನ’ವನ್ನು ತಲುಪುವ ಧಾವಂತದಲ್ಲಿ ದ್ದೇವೆಯೇ ಹೊರತು, ಸಾಗುವ ದಾರಿ’ಯನ್ನು ಆಸ್ವಾದಿಸುವುದನ್ನು ಮರೆತು ಬಿಟ್ಟಿದ್ದೇವೆ. ಆದರೆ ಒಬ್ಬ ‘ಲಿವ್ಸ್‌ನ್ಯೂಟಾರೆ’ಗೆ ಪ್ರಯಾಣದ ಉದ್ದೇಶ ಕೇವಲ ಸಾಲು ಸಾಲು ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ, ಚೆಕ್‌ಲಿಸ್ಟ್ ಪೂರ್ಣಗೊಳಿಸುವುದಲ್ಲ, ಬದಲಿಗೆ ಆ ಪಯಣ ತಂದುಕೊಡುವ ಸಣ್ಣ ಸಣ್ಣ ಅನುಭವಗಳಲ್ಲಿ ಸಂಪೂರ್ಣವಾಗಿ ಕಳೆದುಹೋಗುವುದು.

ಹೊಸದೊಂದು ಅಪರಿಚಿತ ಊರಿನ ಬೀದಿಯ ಮೂಲೆಯಲ್ಲಿ ಕುಳಿತು ಕುಡಿಯುವ ಬಿಸಿ ಕಾಫಿಯ ಆ ಸುಗಂಧ, ಕಿವಿಗೆ ಅಪ್ಪಳಿಸುವ ತಂಪಾದ ಸಮುದ್ರದ ಗಾಳಿ ಅಥವಾ ಹೋಟೆಲ್ ಒಂದರ ಸಿಬ್ಬಂದಿ ನೀಡುವ ಮುಕ್ತ ಮುಗುಳುನಗೆ-ಇವೆಲ್ಲವೂ ಒಬ್ಬ ಲಿವ್ಸ್‌ನ್ಯೂಟಾರೆಗೆ ಕೋಟಿ ರುಪಾಯಿಯ ಅನುಭವಕ್ಕೆ ಸಮ. ವಿಮಾನ ನಿಲ್ದಾಣದ ಅಥವಾ ರೈಲ್ವೇ ಸ್ಟೇಷನ್ ನ ಗಂಟೆಗಟ್ಟಲೆ ಕಾಯಬೇಕಾಗಿ ಬಂದಾಗ, ಹೆಚ್ಚಿನವರು ಕಿಡಿಕಿಡಿಯಾಗುತ್ತಾರೆ. ಆದರೆ ಈ ಮನಸ್ಥಿತಿಯ ವ್ಯಕ್ತಿ, ಅಲ್ಲಿನ ಸನ್ನಿವೇಶ ವನ್ನು, ಹಾದುಹೋಗುವ ಅಪರಿಚಿತ ಮುಖಗಳನ್ನು, ಅಲ್ಲಿನ ಸಂಭಾಷಣೆಗಳನ್ನು ಕುತೂಹಲದಿಂದ ಗಮನಿಸುತ್ತಾ ಆ ಸಮಯವನ್ನೂ ಆನಂದಮಯವಾಗಿಸಿಕೊಳ್ಳುತ್ತಾನೆ.

ಭೂತಕಾಲದ ನೆನಪುಗಳು ಅಥವಾ ಭವಿಷ್ಯದ ಚಿಂತೆಗಳಿಂದ ದೂರವಾಗಿ, ‘ಈ ಕ್ಷಣ’ದಲ್ಲಿ ಸಂಪೂರ್ಣವಾಗಿ ಇರುವುದು. ಕೆಮರಾದ ಲೆನ್ಸ್ ಮೂಲಕ ಜಗತ್ತನ್ನು ಬಂಧಿಸುವುದಕ್ಕಿಂತ ಹೆಚ್ಚಾಗಿ, ಕಣ್ಣಿನ ಅಂಗಳದ ಆ ಸೌಂದರ್ಯವನ್ನು ಇಳಿಸಿ ಕೊಂಡು ಮನಸ್ಸಿನಲ್ಲಿ ಭದ್ರಪಡಿಸಿಕೊಳ್ಳುವುದು ಇವರ ಶೈಲಿ. ಪ್ರವಾಸದಲ್ಲಷ್ಟೇ ಅಲ್ಲ, ದೈನಂದಿನ ಜೀವನದಲ್ಲೂ ನಾವು ಈ ಅಭ್ಯಾಸವನ್ನು ಅಳವಡಿಸಿಕೊಳ್ಳಬಹುದು. ಬೆಳಗಿನ ಸೂರ್ಯ ರಶ್ಮಿ, ನೆಚ್ಚಿನ ಪುಸ್ತಕದ ಪುಟಗಳನ್ನು ತಿರುಗಿಸುವಾಗ ಸಿಗುವ ವಾಸನೆ, ಮಳೆ ಬಿದ್ದಾಗ ಬರುವ ಮಣ್ಣಿನ ಪರಿಮಳ, ಇಲ್ಲವೇ ಪ್ರೀತಿಪಾತ್ರರ ಜತೆಗಿನ ಅಲ್ಪ ಸಮಯದ ಹರಟೆ - ಇವೆಲ್ಲವನ್ನೂ ಪೂರ್ಣ ಮನಸ್ಸಿನಿಂದ ಆಸ್ವಾದಿಸುವುದೇ ನಿಜವಾದ ಲಿವ್ಸ್ ನ್ಯೂಟಾರೆ ಜೀವನ.

ಜೀವನ ಎನ್ನುವುದು ಓಡುವ ಓಟದ ಸ್ಪರ್ಧೆಯಲ್ಲ, ಅದೊಂದು ರಸದೌತಣ. ಪ್ರತಿಯೊಂದು ಸಣ್ಣ ಅನುಭವವನ್ನೂ ಪ್ರೀತಿಯಿಂದ ಸ್ವೀಕರಿಸಿ, ಜಗತ್ತು ನೀಡುವ ಸಣ್ಣ ಸಣ್ಣ ಉಡುಗೊರೆಗಳಿಗೆ ಕೃತಜ್ಞರಾಗಿರುವುದೇ ಲಿವ್ಸ್‌ನ್ಯೂಟಾರೆ ತತ್ವದ ಸಾರ.

ಯಾವ ದೇಶದಲ್ಲಿ ಏನು ನಿಷೇಧ?

ವಿಶ್ವದಾದ್ಯಂತ ಹಲವು ದೇಶಗಳು ಹಾಗೂ ರಾಜ್ಯಗಳಲ್ಲಿ ತಮ್ಮದೇ ಆದ ವಿಶಿಷ್ಟ ಮತ್ತು ಅಚ್ಚರಿ ಮೂಡಿಸುವ ವಿಚಿತ್ರ ಕಾನೂ ನುಗಳು ಅಥವಾ ನಿಷೇಧಗಳಿವೆ. ಇವುಗಳಲ್ಲಿ ಕೆಲವು ಆಸಕ್ತಿಕರ ಹತ್ತು ನಿಷೇಧಗಳನ್ನು ನಿಮಗೆ ಪಟ್ಟಿ ಮಾಡಿಕೊಡುವುದಾದರೆ... ಸಿಂಗಾಪುರದಲ್ಲಿ ಸಾರ್ವಜನಿಕ ಸ್ಥಳ ಗಳನ್ನು ಸ್ವಚ್ಛವಾಗಿಡಲು ಮತ್ತು ಮೆಟ್ರೋ ರೈಲು ಹಾಗೂ ಕಟ್ಟಡಗಳ ಸೌಂದರ್ಯ ಹಾಳಾಗದಂತೆ ತಡೆಯಲು 1992ರಿಂದ ಚ್ಯೂಯಿಂಗ್ ಗಮ್ ಮಾರಾಟ, ಆಮದು ಮತ್ತು ಬಳಕೆಯನ್ನು ಸಂಪೂರ್ಣ ವಾಗಿ ನಿಷೇಧಿಸಲಾಗಿದೆ (ಕೇವಲ ವೈದ್ಯಕೀಯ ಕಾರಣ ಹೊರತುಪಡಿಸಿ).

ವೆನಿಸ್‌ನ ಪ್ರಸಿದ್ಧ ‘ಸೆಂಟ್ ಮಾರ್ಕ್ಸ್ ಸ್ಕ್ವೇರ್’ನಲ್ಲಿ ಪಾರಿವಾಳ ಗಳಿಗೆ ಆಹಾರ ಹಾಕುವುದನ್ನು ನಿಷೇಧಿಸಲಾಗಿದೆ. ಪಾರಿವಾಳ ಗಳ ಹಿಕ್ಕೆಯಿಂದ ಐತಿಹಾಸಿಕ ಸ್ಮಾರಕಗಳು ಮತ್ತು ಪಾರಂಪರಿಕ ಕಟ್ಟಡಗಳು ಹಾಳಾಗುತ್ತವೆ ಎಂಬ ಕಾರಣಕ್ಕೆ ಈ ನಿಯಮ. ಅಕ್ರೋಪೊಲಿಸ್‌ನಂಥ ಗ್ರೀಸ್‌ನ ಪ್ರಾಚೀನ ಐತಿಹಾಸಿಕ ತಾಣಗಳಲ್ಲಿ ಚೂಪಾದ ‘ಹೈ ಹೀಲ್ಸ್’ ಪಾದರಕ್ಷೆಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಈ ಬೂಟುಗಳ ಚೂಪಾದ ಅಂಚುಗಳು ಸಾವಿರಾರು ವರ್ಷಗಳ ಹಳೆಯ ಕಲ್ಲುಗಳನ್ನು ಮತ್ತು ಸ್ಮಾರಕಗಳನ್ನು ಹಾಳುಮಾಡುತ್ತವೆ ಎಂಬುದು ಇದಕ್ಕೆ ಕಾರಣ.

ಸ್ವಿಜರ್ಲೆಂಡ್‌ನ ‘ಆಪೆನ್‌ಝೆಲ’ ಪ್ರದೇಶದ ಸುಂದರ ಬೆಟ್ಟಗಳಲ್ಲಿ ನೈಸರ್ಗಿಕ ಸೌಂದರ್ಯವನ್ನು ಆನಂದಿಸಲು ‘ಬೆತ್ತಲೆ ಟ್ರೆಕ್ಕಿಂಗ್’ (ಘ್ಠೆbಛಿ ಏಜಿhಜ್ಞಿಜ) ಮಾಡುವ ಪ್ರವೃತ್ತಿ ಹೆಚ್ಚಾದಾಗ, ಸ್ಥಳೀಯ ಸಂಸ್ಕೃತಿ ಮತ್ತು ಸಭ್ಯತೆಯನ್ನು ಕಾಪಾಡಲು ಅದನ್ನು ಕಾನೂನುಬದ್ಧವಾಗಿ ನಿಷೇಧಿಸಲಾಗಿದೆ.

1910ರಲ್ಲಿ ಜಾರಿಗೆ ಬಂದ ಈ ಕಾಯ್ದೆಯ ಪ್ರಕಾರ, ಫ್ರಾನ್ಸ್‌ನ ರೈಲ್ವೇ ಸ್ಟೇಷನ್‌ಗಳಲ್ಲಿ ರೈಲು ಹಳಿಗಳ ಮೇಲೆ ಅಥವಾ ಪ್ಲಾಟ್ ಫಾರ್ಮ್‌ನಲ್ಲಿ ಪ್ರೇಮಿಗಳು ಚುಂಬಿಸುವುದನ್ನು ನಿಷೇಧಿಸಲಾಗಿದೆ. ರೈಲುಗಳು ತಡವಾಗುವುದನ್ನು ತಡೆಯಲು ಈ ವಿಚಿತ್ರ ನಿಯಮ ಮಾಡಲಾಯಿತು. ಥೈಲ್ಯಾಂಡ್‌ ನಲ್ಲಿ ಅಲ್ಲಿನ ರಾಜನಿಗೆ ಅತ್ಯಂತ ಗೌರವ ನೀಡಲಾಗುತ್ತದೆ. ದೇಶದ ನೋಟುಗಳು ಮತ್ತು ನಾಣ್ಯಗಳ ಮೇಲೆ ರಾಜನ ಚಿತ್ರವಿರುವುದರಿಂದ, ಕೆಳಗೆ ಬಿದ್ದ ಹಣವನ್ನು ಕಾಲುಗಳಿಂದ ತುಳಿಯುವುದು ಅಥವಾ ಮೆಟ್ಟುವುದು ಅಲ್ಲಿ ದೊಡ್ಡ ಅಪರಾಧ ಮತ್ತು ರಾಜದ್ರೋಹಕ್ಕೆ ಸಮ.

ಜಪಾನ್‌ನಲ್ಲಿ ಸಾರ್ವಜನಿಕ ಆರೋಗ್ಯವನ್ನು ಕಾಪಾಡಲು 40ರಿಂದ 74 ವರ್ಷದ ಪುರುಷರು ಮತ್ತು ಮಹಿಳೆಯರ ಸೊಂಟದ ಅಳತೆಗೆ ಮಿತಿ ಹೇರಲಾಗಿದೆ. ನಿಯಮಿತ ಪ್ರಮಾಣಕ್ಕಿಂತ ದಪ್ಪಗಿದ್ದರೆ ಅವರಿಗೆ ಮತ್ತು ಅವರ ಕಂಪನಿಗಳಿಗೆ ಆರೋಗ್ಯ ಮಾರ್ಗದರ್ಶನ ಹಾಗೂ ದಂಡ ವಿಽಸಲಾಗುತ್ತದೆ. ಸ್ಪೇನ್‌ನಲ್ಲಿ ಬೇಸಿಗೆಯಿದ್ದರೂ ಸಹ, ಬರಿ ಮೈಯಲ್ಲಿ (ಶರ್ಟ್ ಧರಿಸದೆ) ಅಥವಾ ಚಪ್ಪಲಿ ಧರಿಸಿ ಕಾರು ಚಾಲನೆ ಮಾಡುವುದನ್ನು ನಿಷೇಽಸಲಾಗಿದೆ. ಇದು ಚಾಲಕನ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ ಮತ್ತು ಅಪಾಯಕಾರಿ ಎಂಬುದು ಅಲ್ಲಿನ ಸಂಚಾರ ನಿಯಮ.

ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದಲ್ಲಿ ಭಾನುವಾರ ಮಧ್ಯಾಹ್ನ ಹನ್ನೆರಡು ಗಂಟೆಯ ನಂತರ ಸಾರ್ವಜನಿಕವಾಗಿ ‘ಗುಲಾಬಿ ಬಣ್ಣದ ಪ್ಯಾಂಟ್’ ಧರಿಸುವುದನ್ನು ನಿಷೇಧಿಸುವ ಹಳೆಯ ವಿಚಿತ್ರ ಕಾನೂನೊಂದಿದೆ. ಬೊಲಿವಿಯಾದ ‘ಲಾ ಪಾಝ’ ನಗರದಲ್ಲಿ ಮದ್ಯದಂಗಡಿ ಅಥವಾ ರೆಸ್ಟೋ ರೆಂಟ್‌ಗಳಲ್ಲಿ ವಿವಾಹಿತ ಮಹಿಳೆಯರು ಒಂದಕ್ಕಿಂತ ಹೆಚ್ಚು ಗ್ಲಾಸ್ ವೈನ್ ಕುಡಿಯುವುದನ್ನು ಕಾನೂನು ಬದ್ಧವಾಗಿ ನಿಷೇಧಿಸಲಾಗಿದೆ.

ಇದು ಮಹಿಳೆಯರು ನೈತಿಕವಾಗಿ ದಾರಿ ತಪ್ಪುವುದನ್ನು ತಡೆಯುತ್ತದೆ ಎಂಬುದು ಅಲ್ಲಿನ ನಂಬಿಕೆ. ಮುದಾ ರಾಕ್ಷಸನ ಪವಾಡ 1970ರ ದಶಕದಲ್ಲಿ ಬ್ರಿಟನ್ ರಾಜಮನೆತನದ ರಾಜಕುಮಾರಿ ‘ಆನ್’ (Princess Anne) ಅವರ ವಿವಾಹ ನಿಶ್ಚಿತಾರ್ಥದ ಸುದ್ದಿ ಬ್ರಿಟನ್‌ನಾದ್ಯಂತ ತೀವ್ರ ಕುತೂಹಲ ಮೂಡಿಸಿತ್ತು. ಈ ಮಹತ್ವದ ಸುದ್ದಿಯನ್ನು ಅತ್ಯಂತ ವೈಭವವಾಗಿ ಪ್ರಕಟಿಸಲು ‘ದಿ ಗಾರ್ಡಿಯನ್’ ಪತ್ರಿಕೆಯ ಸಂಪಾದಕೀಯ ಮಂಡಳಿ ನಿರ್ಧರಿಸಿತ್ತು. ವರದಿಗಾರರು ರಾಜಕುಮಾರಿಯ ಸೌಂದರ್ಯ, ಅವರ ರಾಯಲ್ ವೈಭವ ಮತ್ತು ಸಾಂಪ್ರದಾಯಿಕ ಉಡುಪನ್ನು ಹೊಗಳಿ ಅತ್ಯಂತ ಕಾವ್ಯಾತ್ಮಕವಾದ ಸುದೀರ್ಘ ವರದಿಯನ್ನು ಸಿದ್ಧಪಡಿಸಿದರು.

ವರದಿಯ ಒಂದು ಪ್ರಮುಖ ಸಾಲಿನಲ್ಲಿ ರಾಜಕುಮಾರಿಯ ಭವ್ಯ ನೋಟವನ್ನು ವರ್ಣಿಸುತ್ತಾ, The Princess looked simply breathtaking (ರಾಜಕುಮಾರಿ ನೋಡಲು ಅತ್ಯಂತ ಆಕರ್ಷಕವಾಗಿ, ಉಸಿರು ಬಿಗಿಹಿಡಿಯುವಷ್ಟು ಸುಂದರವಾಗಿ ಕಾಣುತ್ತಿದ್ದರು) ಎಂದು ಬರೆದು, ಮುದ್ರಣ ವಿಭಾಗಕ್ಕೆ ಕಳುಹಿಸಲಾಯಿತು. ಅಂದಿನ ಕಾಲದಲ್ಲಿ ಕಂಪ್ಯೂಟರ್ ಇರಲಿಲ್ಲ. ಕೈಯಲ್ಲಿ ಮೊಳೆಗಳನ್ನು ಜೋಡಿಸಿ ಅಕ್ಷರಗಳನ್ನು ಮುದ್ರಿಸಲಾಗುತ್ತಿತ್ತು. ತಾಂತ್ರಿಕವಾಗಿ ತರಾತುರಿಯಲ್ಲಿ ಅಕ್ಷರಗಳನ್ನು ಜೋಡಿಸುವಾಗ ಆಪರೇಟರ್‌ನಿಂದ ಸಣ್ಣ ಎಡವಟ್ಟಾಯಿತು.

‘ breathtaking ’ (ಉಸಿರುಬಿಗಿಹಿಡಿಯುವಷ್ಟು ಸುಂದರ) ಎಂಬ ಪದದಲ್ಲಿ ‘ಠಿ’ ಅಕ್ಷರ ಬಿಟ್ಟುಹೋಗಿ, ಅದರ ಜಾಗದಲ್ಲಿ ‘ b ’ ಅಕ್ಷರ ಮುದ್ರಣಗೊಂಡುಬಿಟ್ಟಿತು! ಮರುದಿನ ಬೆಳಗ್ಗೆ ಪತ್ರಿಕೆ ಲಕ್ಷಾಂತರ ಓದುಗರ ಕೈಸೇರಿದಾಗ ಆ ವಾಕ್ಯ ಹೀಗೆ ಮುದ್ರಿತವಾಗಿತ್ತು - The Princess looked simply breath-baking (baking ಅಂದ್ರೆ ಒಣ ಶಾಖವನ್ನು ಬಳಸಿ ಆಹಾರವನ್ನು ಬೇಯಿಸುವುದು) ಎಂದು ಪ್ರಿಂಟ್ ಆಗಿಬಿಟ್ಟಿತ್ತು!