ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Sajangadde Column: ರುಪಾಯಿ ಮೌಲ್ಯ ಕುಸಿತವನ್ನು ನಿಭಾಯಿಸಬೇಕಿದೆ

ಕಳೆದ 6 ದಶಕಗಳಿಂದ, ಡಾಲರ್ ಎದುರು ರುಪಾಯಿ ಮೌಲ್ಯ ಕುಸಿಯುತ್ತಲೇ ಬಂದಿದೆ. ಕಳೆದೊಂದು ವಾರದಿಂದ ತುಸು ಹೆಚ್ಚೇ ಕುಸಿದು, ಒಂದು ಹಂತದಲ್ಲಿ ಸಾರ್ವಕಾಲಿಕ ಕನಿಷ್ಠದರ ಎನ್ನಬಹುದಾದ 91.38ಕ್ಕೆ ಕುಸಿದು, ನಂತರ ಒಂದಿಷ್ಟು ಚೇತರಿಕೆ ಕಂಡು, ಈಗ 90.50ರ ಆಸುಪಾಸಿನಲ್ಲಿದೆ. ಈ ವಿಚಾರವು ಒಂದಷ್ಟು ಪರ-ವಿರೋಧ ಚರ್ಚೆಗಳನ್ನು ಹುಟ್ಟು ಹಾಕಿದೆ.

ರುಪಾಯಿ ಮೌಲ್ಯ ಕುಸಿತವನ್ನು ನಿಭಾಯಿಸಬೇಕಿದೆ

-

Ashok Nayak
Ashok Nayak Dec 20, 2025 9:44 AM

ಮೌಲ್ಯಮಾಪನ

ರವೀ ಸಜಂಗದ್ದೆ

ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಶ್ವದ ರಾಷ್ಟ್ರಗಳಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. 2026ನೆಯ ವರ್ಷದಲ್ಲಿ, ಅಭಿವೃದ್ಧಿ ಸೂಚ್ಯಂಕದಲ್ಲಿನ ಭಾರತದ ಬೆಳವಣಿಗೆಯು (ಜಿಡಿಪಿ) ಶೇ.6.2ರಿಂದ ಶೇ.7.4 ರವರೆಗೆ ಇರಲಿದೆ ಎಂದು ಅಂದಾಜಿಸಲಾಗಿದೆ. ಭಾರತದ ಆರ್ಥಿಕ, ರಾಜಕೀಯ, ಸಾಮಾಜಿಕ, ಕೃಷಿ, ಆಮದು-ರಫ್ತು ಮತ್ತು ವಿವಿಧ ಸೇವೆ-ಉತ್ಪಾದನಾ ವಲಯಗಳು ದೃಢವಾಗಿರುವುದನ್ನು ಹಲವು ಅಂಕಿ-ಅಂಶಗಳು ಸ್ಪಷ್ಟವಾಗಿ ಹೇಳುತ್ತಿವೆ.

ಇಷ್ಟಾಗಿಯೂ ರುಪಾಯಿ ಮೌಲ್ಯ ಕುಸಿಯುತ್ತಲೇ ಇರುವುದು ಅಚ್ಚರಿಯುಂಟು ಮಾಡಿದೆ. ದಿನಗಳೆ ದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರುಪಾಯಿ ಮೌಲ್ಯ ವೃದ್ಧಿಸಬೇಕಾಗಿತ್ತು ಅಥವಾ ಸ್ಥಿರವಾಗಿಯಾದರೂ ಉಳಿಯಬೇಕಿತ್ತು. ಹಾಗಾಗುತ್ತಿಲ್ಲವೇಕೆ? ಎಂಬುದರ ಕುರಿತಾದ ಪಕ್ಷಿನೋಟ ವಿದು.

ಕಳೆದ 6 ದಶಕಗಳಿಂದ, ಡಾಲರ್ ಎದುರು ರುಪಾಯಿ ಮೌಲ್ಯ ಕುಸಿಯುತ್ತಲೇ ಬಂದಿದೆ. ಕಳೆ ದೊಂದು ವಾರದಿಂದ ತುಸು ಹೆಚ್ಚೇ ಕುಸಿದು, ಒಂದು ಹಂತದಲ್ಲಿ ಸಾರ್ವಕಾಲಿಕ ಕನಿಷ್ಠದರ ಎನ್ನಬಹುದಾದ 91.38ಕ್ಕೆ ಕುಸಿದು, ನಂತರ ಒಂದಿಷ್ಟು ಚೇತರಿಕೆ ಕಂಡು, ಈಗ 90.50ರ ಆಸುಪಾಸಿ ನಲ್ಲಿದೆ. ಈ ವಿಚಾರವು ಒಂದಷ್ಟು ಪರ-ವಿರೋಧ ಚರ್ಚೆಗಳನ್ನು ಹುಟ್ಟು ಹಾಕಿದೆ.

ಇದಕ್ಕೆ ಕಾರಣಗಳು ಹಲವು: ದೇಶೀಯ ಷೇರು ಮಾರುಕಟ್ಟೆಯಿಂದ ವಿದೇಶಿ ನೇರ ಹೂಡಿಕೆ (ಎಫ್‌ ಡಿಐ) ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆಯ (ಎಫ್ಐಐ) ಬಂಡವಾಳಗಳು ಡಿಸೆಂಬರ್‌ನಲ್ಲಿ ಗರಿಷ್ಠ ಪ್ರಮಾಣದಲ್ಲಿ ಹೊರ ಹರಿದಿವೆ, ‌ಇದು ರುಪಾಯಿ ಕುಸಿತಕ್ಕೆ ದೊಡ್ಡ ಕಾರಣವಾದಂತೆ ಭಾಸ ವಾಗುತ್ತಿದೆ. 2025ರಲ್ಲಿ ಎಫ್‌ ಡಿಐ ಮತ್ತು ಎಫ್ಐಐ ಹೂಡಿಕೆದಾರರು 18 ಶತಕೋಟಿ ಡಾಲರ್‌ಗಿಂತ ಅಧಿಕ ಮೌಲ್ಯದ ಭಾರತೀಯ ಷೇರುಗಳನ್ನು ಮತ್ತು 500 ಮಿಲಿಯನ್ ಡಾಲರ್‌ʼನಷ್ಟು ಬಾಂಡ್‌ ಗಳನ್ನು ಮಾರಾಟ ಮಾಡಿ, ಭಾರತದ ಷೇರು ಮಾರುಕಟ್ಟೆಯಿಂದ ತಂತಮ್ಮ ಹೂಡಿಕೆಯನ್ನು ಹಿಂತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: Ravi Sajangadde Column: ಇಂಡಿಗೋ ಅವಾಂತರ: ವಿಮಾನಯಾನ ಹರೋಹರ!

ಹೀಗಾಗಿ ‘ಬೇಸ್ ಕರೆನ್ಸಿ’ ಅಂದರೆ ರುಪಾಯಿಯ ಮೇಲೆ ಸಹಜ ಒತ್ತಡ ಬಿದ್ದು ಅದು ಒಂದಷ್ಟು ಅಪಮೌಲ್ಯಗೊಳ್ಳುತ್ತಿದೆ. ಮುಂದೊಮ್ಮೆ ವಿದೇಶಿ ಹೂಡಿಕೆಯ ಒಳಹರಿವು ಮತ್ತೆ ಹೆಚ್ಚಾದಲ್ಲಿ ರುಪಾಯಿ ಒಂದಷ್ಟು ಬಲಗೊಳ್ಳಲಿದೆ.

ಭಾರತ-ಅಮೆರಿಕ ನಡುವಿನ ‘ಸುಂಕ-ಸಮರ’ ಮತ್ತು ಇನ್ನೂ ಅಂತಿಮಗೊಳ್ಳದ ಹಲವಾರು ವ್ಯಾಪಾರ ಒಪ್ಪಂದಗಳು ರುಪಾಯಿಯ ಅಪಮೌಲ್ಯಕ್ಕೆ ಕಾರಣಗಳಾಗಿವೆ. ಈ ವರ್ಷಾಂತ್ಯದೊಳಗೆ ಒಂದಿಷ್ಟು ಒಪ್ಪಂದಗಳಿಗೆ ಸಹಿಬೀಳಬೇಕಿತ್ತಾದರೂ, ಅನ್ಯಾನ್ಯ ಕಾರಣಗಳಿಂದ ಅದು ಮುಂದೆ ಹೋಗಿದೆ, ಅನಿಶ್ಚಿತತೆ ಮುಂದುವರಿದಿದೆ.

ಹೀಗಾಗಿ, ಸದ್ಯದ ಶೇ.50ರ ಮಟ್ಟದ ಸುಂಕದಿಂದಾಗಿ ಅಮೆರಿಕಕ್ಕೆ ಆಮದು ದುಬಾರಿಯಾಗಿದೆ. ಜತೆಗೆ ಅಂದುಕೊಂಡಷ್ಟು ರಫ್ತು ನಡೆಯದೆ ತೊಂದರೆಗಳಾಗುತ್ತಿವೆ. ಇದು ‘ವಿತ್ತೀಯ ಕೊರತೆ’ಗೆ ಕಾರಣ ವಾಗಿ ರುಪಾಯಿಯ ಮೇಲೆ ಒತ್ತಡ ಹೆಚ್ಚಾಗಿ ಮೌಲ್ಯದ ಕುಸಿತಕ್ಕೆ ಕಾರಣವಾಗುತ್ತಿದೆ.

ಇದನ್ನು ನಿಯಂತ್ರಿಸಬೇಕೆಂದರೆ, ಸರಕಾರವು ಉತ್ಪಾದನೆ ಮತ್ತು ರಫ್ತಿಗೆ ಹೆಚ್ಚು ಉತ್ತೇಜಿಸಬೇಕು. ಇತ್ತೀಚಿನ ವರ್ಷಗಳಲ್ಲಿ ಖಾದ್ಯತೈಲ, ಚಿನ್ನ-ಬೆಳ್ಳಿಯ ಆಮದು ಹೆಚ್ಚಾಗಿರುವುದೂ ರುಪಾಯಿ ಮೌಲ್ಯದ ಮೇಲೆ ಪರಿಣಾಮ ಬೀರಿದೆ. ದೇಶದ ಬಳಕೆಯ ಅರ್ಧದಷ್ಟು ಖಾದ್ಯತೈಲವನ್ನು ನಾವು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತೇವೆ ಮತ್ತು ಈ ಬಳಕೆಯು ವರ್ಷದಿಂದ ವರ್ಷಕ್ಕೆ ಶೇ.8 ರಷ್ಟು ಏರಿಕೆಯಾಗುತ್ತಿದೆ.

ಚಿನ್ನ-ಬೆಳ್ಳಿಯ ಖರೀದಿಯಲ್ಲೂ ಎರ್ರಾಬಿರ್ರಿ ಏರಿಕೆಯಾಗುತ್ತಿದೆ. ಆ ಆಮದುಗಳನ್ನು ಕಮ್ಮಿ ಮಾಡುವ ಮೂಲಕ ‘ರಫ್ತು-ಆಮದು ನಡುವಿನ ಕೊರತೆ’ಯ ಅಂತರವನ್ನು ತಗ್ಗಿಸಿದರೆ ರುಪಾಯಿ ಯ ಕುಸಿತವನ್ನು ತಡೆಗಟ್ಟಬಹುದು ಎನ್ನುತ್ತಾರೆ ತಜ್ಞರು. ಜನರು ಉಳಿತಾಯ/ಹೂಡಿಕೆಗಾಗಿ ಚಿನ್ನ-ಬೆಳ್ಳಿಯನ್ನೇ ಆಶ್ರಯಿಸುವ ಪ್ರವೃತ್ತಿಯಿಂದ ಹಿಂದೆ ಸರಿದು, ಪರ್ಯಾಯ ಮಾರ್ಗಗಳನ್ನು ನೆಚ್ಚ ಬೇಕಿದೆ.

ತನ್ನ ಬಳಕೆಯ ಶೇ.85ರಷ್ಟು ಕಚ್ಚಾತೈಲ ಮತ್ತು ಶೇ.50ರಷ್ಟು ಅನಿಲ ಇಂಧನವನ್ನು ಭಾರತ ಆಮದು ಮಾಡಿಕೊಳ್ಳುತ್ತಿದ್ದು, ಈ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ರಷ್ಯಾದ ಕೆಲ ಕಂಪನಿಗಳನ್ನು ಹೊರತುಪಡಿಸಿ ಉಳಿದ ಬಹುತೇಕ ಖರೀದಿಗೆ ಅಮೆರಿಕನ್ ಡಾಲರ್‌ನಲ್ಲಿ ಪಾವತಿಸ ಬೇಕಿದ್ದು, ಇದು ರುಪಾಯಿಯ ಮೇಲೆ ಒತ್ತಡ ಹೇರುತ್ತಿದೆ. ಪರಿಣಾಮ, ರುಪಾಯಿ ಮೌಲ್ಯ ಕುಸಿದು ಭಾರತದ ಕಂಪನಿಗಳು ಹೆಚ್ಚಿನ ಮೊತ್ತವನ್ನು ಪಾವತಿಸಬೇಕಾಗುತ್ತಿದೆ.

ಕರೆನ್ಸಿಯು ಅಪಮೌಲ್ಯವಾಗುತ್ತಾ ದುರ್ಬಲಗೊಂಡಂತೆ, ದೇಶವು ಆಮದು ಮಾಡಿಕೊಳ್ಳುವ ವಸ್ತು ಗಳ ದರ ಹೆಚ್ಚಾಗುತ್ತದೆ. ಪರಿಣಾಮವಾಗಿ, ಆಮದು ಅವಲಂಬಿತ ಸೇವೆ/ಉತ್ಪನ್ನಗಳು ದುಬಾರಿ ಯಾಗುತ್ತವೆ. ಇಲೆಕ್ಟ್ರಾನಿಕ್ ಸರಕುಗಳು, ವಿವಿಧ ಗ್ರಾಹಕ ವಸ್ತುಗಳು, ಖಾದ್ಯತೈಲ, ಕಬ್ಬಿಣ ಮುಂತಾ ದವುಗಳನ್ನು ಭಾರತ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತದೆ.

ರುಪಾಯಿ ಕುಸಿತದಿಂದಾಗಿ ಈ ಎಲ್ಲಾ ವಸ್ತುಗಳೂ ದುಬಾರಿಯಾಗುತ್ತವೆ. ರುಪಾಯಿಯ ಅಪಮೌಲ್ಯ ವು ಮಾಹಿತಿ ತಂತ್ರಜ್ಞಾನ, ಫಾರ್ಮಾ ಕಂಪನಿಗಳಿಗೆ ಒಂದಿಷ್ಟು ವರವಾದರೆ, ವಿಮಾನಯಾನ ಸಂಸ್ಥೆಗಳಿಗೆ ಶಾಪವೇ ಸರಿ. ಯಾಕೆಂದರೆ, ಸಾಮಾನ್ಯವಾಗಿ ಅವುಗಳ ಆದಾಯ ರುಪಾಯಿಯ ಮೂಲಕ ದೊರೆತರೆ, ಇಂಧನ ಖರೀದಿ ಮತ್ತಿತರ ಖರ್ಚು ಆಗುವುದು ಡಾಲರ್ ಮೂಲಕ. ಡಾಲರ್ ದುಬಾರಿಯಾದಷ್ಟೂ ಹೊರೆ ಜಾಸ್ತಿ!

ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ತೆರಳುವವರಿಗೆ ದುರ್ಬಲ ರುಪಾಯಿಯು ಹೊರೆಯಾಗುತ್ತದೆ. ರುಪಾಯಿ ಯಲ್ಲಿ ಸಾಲ ಪಡೆದು, ಡಾಲರ್ ಮುಂತಾದ ವಿದೇಶಿ ಕರೆನ್ಸಿಯಲ್ಲಿ ಹಣವನ್ನು ವ್ಯಯಿಸುವಾಗ, ರುಪಾಯಿ ಅಪಮೌಲ್ಯವು ಹೆಚ್ಚಿನ ಮೊತ್ತವನ್ನು ಬೇಡುತ್ತದೆ. ವಿದೇಶ ಪ್ರಯಾಣ ಮತ್ತು ವಾಸ್ತವ್ಯ ತುಟ್ಟಿಯಾಗುತ್ತವೆ.

ಚಿಲ್ಲರೆ ಹಣದುಬ್ಬರವು ಕಳೆದೆರಡು ತಿಂಗಳಿಂದ ಶೇ.1ಕ್ಕಿಂತ ಕಡಿಮೆಯಿದೆ. ಕಚ್ಚಾತೈಲ ಬೆಲೆಯು 5 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದು, ಕಳೆದೆರಡು ವಾರಗಳಿಂದ ಸ್ವಲ್ಪ ಚೇತರಿಸಿಕೊಂಡಿದೆ. ಹೀಗಿದ್ದೂ ರುಪಾಯಿ ಮೌಲ್ಯ ಕುಸಿಯುತ್ತಿರುವುದು ಕಳವಳಕಾರಿ. ಇನ್ನೊಂದು ಅಚ್ಚರಿಯ ವಿಷಯ ವೆಂದರೆ, ಸಾಮಾನ್ಯವಾಗಿ ಷೇರು ಮಾರುಕಟ್ಟೆ ಸೂಚ್ಯಂಕವು ಏರುಗತಿಯಲ್ಲಿ ಸಾಗಿದಾಗ, ಚಿನ್ನದ ಬೆಲೆ ಸ್ಥಿರವಾಗುತ್ತದೆ ಅಥವಾ ಇಳಿಯುತ್ತದೆ; ಷೇರು ಮಾರುಕಟ್ಟೆಯು ಇಳಿಕೆಯತ್ತ ಮುಖ ಮಾಡಿ ದಾಗ, ಚಿನ್ನದ ಮೇಲಿನ ಹೂಡಿಕೆ ಹೆಚ್ಚಾಗಿ ಚಿನ್ನ ದುಬಾರಿಯಾಗುವುದು ವಾಡಿಕೆ.

ಆದರೀಗ, ಷೇರು ಮಾರುಕಟ್ಟೆ ಸೂಚ್ಯಂಕ ಮತ್ತು ಚಿನ್ನದ ಬೆಲೆ ಎರಡೂ ಏರುಗತಿಯಲ್ಲಿರುವುದು ಎಲ್ಲವೂ ಸುಸೂತ್ರ ವಾಗಿಲ್ಲ ಎಂಬುದರ ಸೂಚಕ. ಹೀಗಾದಾಗ, ರುಪಾಯಿಯ ಮೇಲೆ ಹೆಚ್ಚಿನ ನಕಾರಾತ್ಮಕ ಪರಿಣಾಮ ಗಳಾಗಿ ಮೌಲ್ಯ ಕುಸಿಯುತ್ತದೆ. ಇದು ಎದ್ದು ಕಾಣುತ್ತಿರುವ ಸತ್ಯ!

ಇವೆಲ್ಲದರ ನಡುವೆ, ಮಾರುಕಟ್ಟೆ ಮತ್ತು ಆರ್ಥಿಕ ವಿಶ್ಲೇಷಕರ ಪ್ರಕಾರ ಸದ್ಯೋಭವಿಷ್ಯದಲ್ಲಿ ಡಾಲರ್ ಎದುರು ರುಪಾಯಿ 92ರ ಮಿತಿಯನ್ನು ದಾಟಲಾರದು; ಇದು ದೇಶೀಯ ಆರ್ಥಿಕ ಮಾರು ಕಟ್ಟೆ ಒಂದಿಷ್ಟು ನಿಟ್ಟುಸಿರು ಬಿಡಬಹುದಾದ ಸಂಗತಿ.

ಹೀಗೆ ರುಪಾಯಿ ಮೌಲ್ಯ ಕುಸಿದಾಗೆಲ್ಲಾ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೆಚ್ಚಿನ ಪ್ರಮಾಣದಲ್ಲಿ ಡಾಲರ್ ಅನ್ನು ಮಾರಿ ರುಪಾಯಿಯ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಯತ್ನಿಸು ತ್ತಿತ್ತು. ಇತ್ತೀಚೆಗೆ ಅಂಥ ಯತ್ನವನ್ನೂ ಅದು ಸ್ಥಗಿತಗೊಳಿಸಿದೆ!

ರುಪಾಯಿಯ ಮೌಲ್ಯವನ್ನು ಕಾಪಾಡಿಕೊಳ್ಳುವ ಬದಲು, ಅದು ತನ್ನದೇ ನೈಜಮಟ್ಟವನ್ನು ಉಳಿಸುವ ರೀತಿಯ ತಂತ್ರಗಾರಿಕೆಯಿದು. ಡಾಲರ್ ಅನ್ನು ಮಾರಿ ರುಪಾಯಿಯ ಕುಸಿತವನ್ನು ತಡೆಯುವುದು ತಾತ್ಕಾಲಿಕ ಪರಿಹಾರ; ಬದಲಾಗಿ ಅನವಶ್ಯಕ ಆಮದುಗಳಿಗೆ ಕಡಿವಾಣ ಹಾಕುವಿಕೆ, ರಫ್ತು ಮಾರುಕಟ್ಟೆಯನ್ನು ವಿಸ್ತರಿಸಿ ಹೆಚ್ಚು ಸ್ಪರ್ಧಾತ್ಮಕಗೊಳಿಸುವಿಕೆ, ನಮ್ಮ ಉತ್ಪನ್ನಗಳಿಗೆ ದೇಶೀಯ ಬೇಡಿಕೆ ವರ್ಧಿಸುವಂತೆ ಮಾಡುವಿಕೆ ಮುಂತಾದವು, ರುಪಾಯಿ ಮೌಲ್ಯವು ಸ್ಥಿರವಾಗು ವಂತಾಗಲು ತೆಗೆದುಕೊಳ್ಳಬಹುದಾದ ದೀರ್ಘಕಾಲೀನ ಪರಿಹಾರೋಪಾಯಗಳಾಗುತ್ತವೆ.

ಒಂದು ಕಾಲಕ್ಕೆ, ‘ಕೇಂದ್ರ ಸರಕಾರ ಮತ್ತು ರುಪಾಯಿ ನಡುವೆ ಯಾವುದರ ಮೌಲ್ಯ ಹೆಚ್ಚು ತೀವ್ರ ವಾಗಿ ಕುಸಿಯುತ್ತಿದೆ ಎನ್ನುವ ಸ್ಪರ್ಧೆ ನಡೆದಂತೆ ತೋರುತ್ತಿದೆ’ ಎಂದು ಯುಪಿಎ ಸರಕಾರ ವನ್ನು ಲೇವಡಿ ಮಾಡಿದ ಪಕ್ಷವೇ ಈಗ ಅಧಿಕಾರದಲ್ಲಿದ್ದು, ಅದೇ ಮಾದರಿಯ ಲೇವಡಿಯನ್ನು ಕೇಳಿಸಿ ಕೊಳ್ಳಬೇಕಾಗಿದೆ!

‘ರುಪಾಯಿ ಮೌಲ್ಯ ಕುಸಿಯುತ್ತಿಲ್ಲ, ಬದಲಿಗೆ ಡಾಲರ್ ಬಲಿಷ್ಠವಾಗುತ್ತಿದೆ. ರುಪಾಯಿ ತನ್ನ ಸ್ವಾಭಾ ವಿಕ ಮಟ್ಟವನ್ನು ಕಂಡುಕೊಳ್ಳುತ್ತಿದೆ, ಆತಂಕ ಬೇಡ’ ಎಂಬುದು ಈಗಿನ ಸರಕಾರದ ವಿವರಣೆ! ಇಂಥ ರಾಜಕೀಯ ಹೇಳಿಕೆಗಳನ್ನು ಬದಿಗಿಟ್ಟು, ಸರಕಾರವು ಈ ವಿಚಾರವನ್ನು ಆರ್ಥಿಕ ದೃಢತೆಯ ದೃಷ್ಟಿಕೋನದಿಂದ ನೋಡಿ ಕಾರ್ಯಪ್ರವೃತ್ತವಾಗಬೇಕಿದೆ.

ರುಪಾಯಿಯ ಮೌಲ್ಯವನ್ನು ದಶಕದ ಹಿಂದಿನ ಮಟ್ಟಕ್ಕೆ ಪುನಃ ತೆಗೆದುಕೊಂಡು ಹೋಗುವುದು ಅಸಾಧ್ಯ! ಬದಲಿಗೆ ಅದು ಮತ್ತಷ್ಟು ಕುಸಿಯದಂತೆ ತಡೆಗಟ್ಟಲು ಬೇಕಾದ ದೀರ್ಘಕಾಲಿಕ ಕ್ರಮ ಗಳನ್ನು ಕೇಂದ್ರ ಸರಕಾರ ಕೈಗೊಳ್ಳಬೇಕು. ಏಕೆಂದರೆ, ರುಪಾಯಿಯ ಮೌಲ್ಯವು ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ದೇಶದ ಆರ್ಥಿಕ ದೃಢತೆಯ ದೃಷ್ಟಿಯಿಂದ ಅತ್ಯಂತ ಪ್ರಮುಖವಾದುದು.

ಭಾರತದಂಥ ಬೃಹತ್ ದೇಶದಲ್ಲಿ, ಮಾನವ ಸಂಪನ್ಮೂಲ ಸೇರಿದಂತೆ ಎಲ್ಲ ಸಂಪನ್ಮೂಲಗಳನ್ನೂ ಸಮರ್ಪಕವಾಗಿ ಬಳಸಿಕೊಂಡು, ಉತ್ಪಾದನೆ ಮತ್ತು ರಫ್ತು ಪ್ರಮಾಣವನ್ನು ಹೆಚ್ಚಿಸಿ, ದೇಶದ ಉತ್ಪನ್ನಗಳಿಗೆ ಮತ್ತಷ್ಟು ಬೇಡಿಕೆ ಬರುವಂತೆ ಮಾಡಿ, ವಿದೇಶದಿಂದ ದುಡ್ಡಿನ ಆವಕವು ಜಾಸ್ತಿ ಯಾಗುವಂತೆ ನೋಡಿಕೊಂಡರೆ, ರುಪಾಯಿಯ ಮೌಲ್ಯ ವರ್ಧಿಸುವುದರಲ್ಲಿ ಸಂಶಯವಿಲ್ಲ.

ದೇಶದ ಸರ್ವಾಂಗೀಣ ಏಳಿಗೆ ಸಾಧ್ಯವಾದಾಗ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಮಾಲೋಚನಾ ಕೌಶಲ ಮತ್ತು ವ್ಯಾವಹಾರಿಕ ಚಾಕಚಕ್ಯತೆ ವೃದ್ಧಿಸಿದಾಗ, ನಮ್ಮ ಆರ್ಥಿಕತೆ ಸುಭದ್ರವಾಗುತ್ತದೆ. ಹಾಗಾದಾಗ, ಜನಜೀವನದ ಜತೆಗೆ ರುಪಾಯಿಯೂ ಸದೃಢವಾಗಿ ಮೌಲ್ಯ ಯುತವಾಗುತ್ತದೆ. ಹಾಗಾಗುವ ದಿನಗಳು ಆದಷ್ಟು ಬೇಗ ಬರಲಿ.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)