ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Naveen Sagar Column: ಅದೃಷ್ಟ-ದುರದೃಷ್ಟಗಳೆಂದರೇನು ? ಅಟಪಟ್ಟುವನ್ನು ಕೇಳಿ !

ಕಂಬ್ಯಾಕ್, ಬೌನ್ಸ್ ಬ್ಯಾಕ್ ಅಂದ್ರೆ ಏನು ಎಂಬುದಕ್ಕೆ ಅಟಪಟ್ಟು ಕೆರಿಯರ್ ಉದಾಹರಣೆ. ಸೋಲು ವೈಫಲ್ಯಗಳನ್ನು ಮೆಟ್ಟಿನಿಂತು ಯಶಸ್ಸು ಗಳಿಸುವುದಕ್ಕೆ ನಿದರ್ಶನ ವಾಗಬಹುದು ಅಟಪಟ್ಟು ಜೀವನಗಾಥೆ. ಮರಳಿ ಯತ್ನವ ಮಾಡು, ಕೈಚೆಲ್ಲಿ ಕೂರದಿರು, ಸೋಲೊಪ್ಪಿ ಕೊಳ್ಳದಿರು ಎಂದು ಯಾರಿಗೇ ಬುದ್ಧಿ ಹೇಳಹೊರಟಾಗ ಅಟಪಟ್ಟು ಕಥೆಯನ್ನು ಹೇಳಬಹುದು.

ಅದೃಷ್ಟ-ದುರದೃಷ್ಟಗಳೆಂದರೇನು ? ಅಟಪಟ್ಟುವನ್ನು ಕೇಳಿ !

-

ಪದಸಾಗರ

ಆತನ ಫೇಲ್ಯೂರ್, ಕಂಬ್ಯಾಕ್ ಮತ್ತು ಸಕ್ಸಸ್ ಸ್ಟೋರಿಗಳಾಚೆ ಆತ ಸುಖಾಸುಮ್ಮನೆ ಎಂಬಂತೆ ನಂಗೆ ಇಷ್ಟ ಆಗಿ ಬಿಟ್ಟಿದ್ದ. ಅವನನ್ನು ನೋಡಿದರೆ ನನ್ನ ಫೇವರಿಟ್ ನಟ ಅಕ್ಷಯೀ ಖನ್ನಾನನ್ನು ನೋಡಿದಂತಾಗುತ್ತಿತ್ತು. ಆತನ ಬಾಡ್ ಲಾಂಗ್ವೇಜ್ ಕಂಡಾಗ ಅಂದಿನ ನನ್ನ ಫೇವರಿಟ್ ಕ್ರಿಕೆಟರ್‌ಗಳಲ್ಲಿ ಒಬ್ಬನಾಗಿದ್ದ ಮೊಹಮ್ಮದ್ ಅಜರುದ್ದೀನ್ ನೆನಪಾಗುತ್ತಿದ್ದ.

ಎಲ್ಲಕ್ಕಿಂತ ಹೆಚ್ಚಾಗಿ ನನಗೆ ಆತನ ದುರದೃಷ್ಟವನ್ನು ಕಂಡು ಅನುಕಂಪ ಹುಟ್ಟಿಬಿಟ್ಟಿತ್ತು. ಅವನ ಹೆಸರು ಅಟಪಟ್ಟು. ಮಾರ್ವನ್ ಅಟಪಟ್ಟು. ಹೇಳ್ತಾ ಹೋದ್ರೆ ಈ ಹೆಸರು ಇನ್ನೂ ಉದ್ದವಾಗುತ್ತಾ ಹೋಗುವ ಅಪಾಯವಿದೆ.

ಶ್ರೀಲಂಕನ್ ಕ್ರಿಕೆಟರ್‌ಗಳ ಹೆಸರುಗಳೇ ಹಾಗೆ. ಬರೀ ಲಾಸ್ಟ್ ನೇಮೋ ಫಸ್ಟ್‌ ನೇಮೋ ಹೇಳಿ ಮುಗಿಸಿದರೆ ಬಚಾವ್. ಪೂರ್ತಿ ಹೆಸರು ಹೇಳೋಕೆ ಹೊರಟರೆ ಹೆಸರಿನ ಒಂದು ತುದಿಯಿಂದ ಇನ್ನೊಂದು ತುದಿ ತಲುಪೋದಕ್ಕೆ ಅರ್ಧಗಂಟೆ ಹಿಡಿಯುತ್ತದೆ. ವೆಲೆಗೆದರಾ ಎಂಬ ಆಟಗಾರನೊಬ್ಬನಿದ್ದಾನೆ.

ಇದನ್ನೂ ಓದಿ: Naveen Sagar Column: ಎಲ್ಲ ಶಿಲ್ಪಗಳಿಗೂ ಒಂದೊಂದು ಹಿಂದಿನ ಕಥೆಯಿದೆ...

ಅವನ ಪೂರ್ಣನಾಮ ಉಡಾ ವಲವ್ವೇ ಮಹಿಮ್ ಬಂಡರಲಗೆ ಚಣಕ ಅಸಂಗ ವೆಲೆಗೆದರಾ! ವೇಗದ ಬೌಲರ್ ಚಮಿಂದ ವಾಸ್‌ನ ಪೂರ್ತಿಹೆಸರು- ದೇಶಬಂದು ವರ್ನಕುಲ ಸೂರ್ಯ ಪಟಬೆಂಡಿಗೆ ಉಷಾಂತ ಜೋಸೆಫ್ ಚಮಿಂದಾ ವಾಸ್! ‌

ಇಂಥ ಹಲವು ಉದಾಹರಣೆಗಳು ಸಿಗಬಹುದು. ತಮಾಷೆಗೆ ಹೇಳೋದಾದರೆ, ಎಷ್ಟೋ ಕ್ರಿಕೆಟರ್‌ಗಳ ಕೆರಿಯರ್ ಅವರ ಹೆಸರಿನಷ್ಟು ದೀರ್ಘ ಬಾಳಲಿಲ್ಲ. ಮಾರ್ವನ್ ಅಟಪಟ್ಟು ಹೆಸರು ಕೂಡ ದೇಶಬಂದು ಮಾರ್ವನ್ ಸ್ಯಾಮ್ಸನ್ ಅಟಪಟ್ಟು ಅಂತ. ಅಟಪಟ್ಟು ಅಂದ್ರೆ ಸಿಂಹಳೀ ಭಾಷೆಯಲ್ಲಿ ಗ್ರೆನೇಡ್ ಅಥವಾ ಹ್ಯಾಂಡ್‌ಬಾಂಬ್ ಅಂತ ಅರ್ಥವಂತೆ.

ಎಂಥ ವೈರುಧ್ಯ ನೋಡಿ. ಆತನ ಹೆಸರಿಗೆ ಮಸಿ ಬಳಿಯುವಂತೆ ಅವನ ಕೆರಿಯರ್‌ನ ಆರಂಭ ಠುಸ್ ಪಟಾಕಿಯಂತಾಗಿ ಹೋಯಿತು. ಆತ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗ ಅವನ ಹೆಸರು ಕೇಳಿ, ‘ಇದೇನಿದು ಈ ಶ್ರೀಲಂಕಾದವ್ರು ತಾಲಿಪಟ್ಟು ಥರ ಅಟಪಟ್ಟು ಅಂತೆಲ್ಲ ಹೆಸರಿಟ್ಕೋತಾರೆ’ ಅಂತ ನಕ್ಕಿದ್ದೆ.

M Atapattu R

ಶ್ರೀಲಂಕನ್ನರ ಹೆಸರುಗಳು, ಅಲ್ಲಿಯ ಮೈದಾನದ ಹೆಸರುಗಳು ಎಲ್ಲವೂ ಏನಾದರೊಂದು ತಮಾಷೆಗೆ ವಸ್ತುವಾಗುತ್ತಿದ್ದವು. ಶ್ರೀಲಂಕಾದಲ್ಲಿ ಖೆಟ್ಟಾರಾಮ ಎಂಬ ಸ್ಟೇಡಿಯಂ ಇದೆ. ಈಗ ಆರ್ ಪ್ರೇಮದಾಸ ಸ್ಟೇಡಿಯಂ ಎಂದು ಮರುನಾಮಕರಣಗೊಂಡಿರೋ ಮೈದಾನಕ್ಕೆ ಆಗ ಖೆಟ್ಟಾರಾಮ ಎಂಬ ಹೆಸರಿತ್ತು. ಕನ್ನಡ ಪತ್ರಿಕೆಗಳಲ್ಲಿ ಕೆಟ್ಟರಾಮ ಸ್ಟೇಡಿಯಂ ಅಂತಲೂ ಬರೆಯಲಾಗುತ್ತಿತ್ತು. ಇದೆಂಥ ಹೆಸರಪ್ಪಾ ಎಂದು ಚರ್ಚಿಸುವಾಗ, ನನ್ನ ಮುಗ್ಧತೆ ಜತೆ ಆಟವಾಡಿದ ನನ್ನ ಅಪ್ಪಾಜಿ, ಶ್ರೀಲಂಕಾ ರಾವಣನ ಊರು. ರಾವಣನಿಗೆ ರಾಮ ಶತ್ರು.

ರಾವಣನ ಊರಿನವರಿಗೂ ರಾಮ ಅಂದ್ರೆ ಕೆಟ್ಟವನೇ. ಅದ್ಕೇ ಅವ್ರು ಕೆಟ್ಟರಾಮ ಅಂತ ಸ್ಟೇಡಿಯಮ್ಮಿಗೆ ಹೆಸರಿಟ್ಟು ಸೇಡು ತೀರಿಸಿಕೊಂಡಿದ್ದಾರೆ ಅಂತ ಕತೆ ಕಟ್ಟಿ ಹೇಳಿದ್ದರು. ನಾನದನ್ನು ಆಗ ನಂಬಿದ್ದೆ. ಅಟಪಟ್ಟು ಬಗ್ಗೆ ಬರೀತಾ ಹಾಗೇ, ಲಹರಿ ಎಲ್ಲೋ ಹರಿದು ಹೋಗ್ತಾ ಇದೆ. ಯೆಸ್, ಅಟಪಟ್ಟು ಬಗ್ಗೆ ವಿಶ್ವೇಶ್ವರ ಭಟ್ ಹಿಂದೊಮ್ಮೆ ಅಂಕಣ ಬರಹ ಬರೆದಿದ್ದರು. ಇಂದಿಗೂ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಎಂಬಂತೆ ಆತನ ಕಥೆ ಯನ್ನು ಮೊಟಿವೇಷನಲ್ ಸ್ಟೋರಿಯಾಗಿ ಹರಿಬಿಡಲಾಗುತ್ತದೆ.

ಹೌದು. ಕಂಬ್ಯಾಕ್, ಬೌನ್ಸ್ ಬ್ಯಾಕ್ ಅಂದ್ರೆ ಏನು ಎಂಬುದಕ್ಕೆ ಅಟಪಟ್ಟು ಕೆರಿಯರ್ ಉದಾಹರಣೆ. ಸೋಲು ವೈಫಲ್ಯಗಳನ್ನು ಮೆಟ್ಟಿನಿಂತು ಯಶಸ್ಸು ಗಳಿಸುವುದಕ್ಕೆ ನಿದರ್ಶನ ವಾಗಬಹುದು ಅಟಪಟ್ಟು ಜೀವನಗಾಥೆ. ಮರಳಿ ಯತ್ನವ ಮಾಡು, ಕೈಚೆಲ್ಲಿ ಕೂರದಿರು, ಸೋಲೊಪ್ಪಿಕೊಳ್ಳದಿರು ಎಂದು ಯಾರಿಗೇ ಬುದ್ಧಿ ಹೇಳಹೊರಟಾಗ ಅಟಪಟ್ಟು ಕಥೆ ಯನ್ನು ಹೇಳಬಹುದು.

ಎಸೆಸ್ಸೆಲ್ಸಿ, ಪಿಯುಸಿ, ಐಎಎಸ್ ವೈಫಲ್ಯಗಳಿರಬಹುದು, ಕ್ರೀಡೆ, ಸಿನಿಮಾ, ರಾಜಕೀಯ, ಆಫೀಸ್ ಇಂಟರ್‌ವ್ಯೂ, ಪರೀಕ್ಷೆ ಇದೆಲ್ಲದರಲ್ಲೂ ಕಾಣಬಹುದಾದ ಸೋಲುಗಳಿಗೆ ಮತ್ತೆ ಪುಟಿದೇಳುವ ಛಲ ಬರಬೇಕೆಂದರೆ ಅಟಪಟ್ಟು ಕ್ರಿಕೆಟ್ ಬದುಕಿನ ಆರಂಭಿಕ ಪುಟಗಳನ್ನು ತಿರುವಿಹಾಕಿ ಬರಬಹುದು.

ಅಟಪಟ್ಟು ಶ್ರೀಲಂಕಾದ ದೇಶೀ ಕ್ರಿಕೆಟ್‌ನಲ್ಲಿ ರನ್‌ಗಳ ಗುಡ್ಡೆ ಹಾಕಿದ್ದನ್ನು ನೋಡಿ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡುತ್ತಾರೆ. ಆಗಿನ್ನೂ ಆತನಿಗೆ ಇಪ್ಪತ್ತು ವರ್ಷ. ಭಾರತದ ವಿರುದ್ಧ ಮೊದಲ ಟೆಸ್ಟ್. ಮೊದಲ ಇನ್ನಿಂಗ್ಸ್‌ ನಲ್ಲಿ ಅಟಪಟ್ಟು ಗಳಿಸಿದ್ದು ಶೂನ್ಯ ರನ್.

ಎರಡನೇ ಇನ್ನಿಂಗ್ಸ್‌ ನಲ್ಲಿ ಮತ್ತೊಂದು ಸೊನ್ನೆ. ಶ್ರೀಲಂಕಾ ತಂಡ ತಕ್ಷಣವೇ ಆತನನ್ನು ಡ್ರಾಪ್ ಮಾಡುತ್ತದೆ. ಅಟಪಟ್ಟು ಮತ್ತೆ ದೇಶೀ ಕ್ರಿಕೆಟ್‌ಗೆ ಮರಳುತ್ತಾನೆ. ಮತ್ತೆ ರನ್‌ಗಳ ಮಳೆ ಹರಿಸುತ್ತಾನೆ. ಆಯ್ಕೆ ಸಮಿತಿಗೆ ಆತನನ್ನು ನಿರ್ಲಕ್ಷಿಸಲಾಗುವುದಿಲ್ಲ.

ಇಪ್ಪತ್ತೊಂದು ತಿಂಗಳುಗಳ ನಂತರ ತನ್ನ ಎರಡನೇ ಟೆಸ್ಟ್ ಆಡಲು ಅಟಪಟ್ಟು ಪ್ಯಾಡ್ ಕಟ್ಟುತ್ತಾನೆ. ನಸೀಬು ಹೇಗಿದೆ ನೋಡಿ. ಮತ್ತೆ ಆ ಟೆ‌ಸ್ಟ್‌ ನ ಎರಡೂ ಇನ್ನಿಂಗ್ಸ್‌ ನಲ್ಲಿ ವೈಫಲ್ಯ! ಮೊದಲ ಇನ್ನಿಂಗ್ಸಲ್ಲಿ ಸೊನ್ನೆ. ಎರಡನೇ ಇನ್ನಿಂಗ್ಸಲ್ಲಿ ಒಂದು ರನ್. ನಿರ್ದಯವಾಗಿ ಆತನನ್ನು ತಂಡದಿಂದ ಹೊರ ಹಾಕಲಾಗುತ್ತದೆ.

ಎರಡು ವರ್ಷಗಳಲ್ಲಿ ಅಟಪಟ್ಟು ಆಡಿದ್ದು ಎರಡು ಟೆಸ್ಟ್. ಹೊಡೆದದ್ದು ಒಂದು ರನ್! ಅಟಪಟ್ಟು ಬಗ್ಗೆ ಯಾರೊಬ್ಬರಿಗೂ ಭರವಸೆ ಇರಲಿಲ್ಲ. ಇವತ್ತಿನ ಥರ ಯಾರೂ ಆತನ ಹೆಸರು ಚರ್ಚಿಸಲೂ ಇಲ್ಲ. ಅಟಪಟ್ಟು ಮತ್ತೆ ವಾಪಸ್ ನೆಟ್ಸಗೆ ಹೋದ. ಮತ್ತೆ ದೇಶೀ ಕ್ರಿಕೆಟ್‌ಗೆ ಹೋದ. ಸೆಂಚುರಿಗಳ ಮೇಲೆ ಸೆಂಚುರಿ ಬಾರಿಸಿದ. ಅಷ್ಟೊತ್ತಿಗೆ ಆತ ಡ್ರಾಪ್ ಆಗಿ ಹದಿನೇಳು ತಿಂಗಳು ಕಳೆದು ಹೋಗಿದ್ದವು. ‌

ಸಾಕಷ್ಟು ಹೊಸ ಆಟಗಾರರು ರಾಷ್ಟ್ರೀಯ ತಂಡಕ್ಕೆ ಬರಲು ಪೈಪೋಟಿ ನಡೆಸಿದ್ದರು. ಅವರ ಮಧ್ಯೆಯೂ ಅಟಪಟ್ಟುಗೆ ಮತ್ತೊಮ್ಮೆ ಬುಲಾವ್ ಬಂತು. ಮೂರೂವರೆ ವರ್ಷಗಳ ನಂತರ ಮೂರನೇ ಚಾನ್ಸ್ ಸಿಕ್ಕಿದೆ. ತನ್ನ ವೃತ್ತಿ ಜೀವನದ ಮೂರನೇ ಟೆಸ್ಟ್ ಆಡ್ತಿದ್ದಾನೆ. ಈ ಸಲವೂ ಫೇಲ್ ಆದರೆ ಇನ್ನೆಂದೂ ಅವಕಾಶ ಸಿಗುವುದಿಲ್ಲ. ಅದೆಷ್ಟು ಪ್ರೆಶರ್ ಇದ್ದಿರಬಹುದು? ಅಟಪಟ್ಟು ಈ ಅವಕಾಶವನ್ನು ಉಪಯೋಗಿಸಿಕೊಳ್ಳಲೇಬೇಕಿತ್ತು. ಆದರೆ ಆಗಿದ್ದೇನು? ಮತ್ತೊಮ್ಮೆ ಎರಡೂ ಇನ್ನಿಂಗ್ಸ್‌ ಗಳಲ್ಲಿ ಅಟಪಟ್ಟು ಸೊನ್ನೆ ಸುತ್ತಿಬಿಟ್ಟ.

ತಂಡದಿಂದ ಹೊರದಬ್ಬಲ್ಪಟ್ಟ. ಆತನನ್ನು ಮೂರನೇ ಬಾರಿ ತಂಡಕ್ಕೆ ಆಯ್ಕೆ ಮಾಡಲು ಆಯ್ಕೆ ಸಮಿತಿಯಲ್ಲಿ ಅದೆಷ್ಟು ವಾಗ್ವಾದಗಳು ನಡೆದಿದ್ದವೋ, ತಂಡದ ನಾಯಕ ರಣತುಂಗ ಅದೆಷ್ಟು ಹೋರಾಟ ನಡೆಸಿದ್ದನೋ, ಎಲ್ಲವೂ ನೀರಲ್ಲಿ ಹೋಮದಂತಾಗಿತ್ತು. ಇನ್ನು ಅಟಪಟ್ಟುಗೆ ಅವಕಾಶ ಸಿಗುವ ಸಾಧ್ಯತೆಯೇ ಇರಲಿಲ್ಲ.

ಆರು ವರ್ಷದ ಆರಂಭಿಕ ಟೆಸ್ಟ್ ಕೆರಿಯರ್‌ನಲ್ಲಿ ಅಟಪಟ್ಟು ಗಳಿಸಿದ್ದು ಕೇವಲ ಒಂದು ರನ್. ಆತ ಎರಡನೇ ರನ್ ಹೊಡೆಯೋದಕ್ಕೆ ನಾಲ್ಕನೇ ಬಾರಿ ತಂಡದಲ್ಲಿ ಅವಕಾಶ ಸಿಗಬೇಕಿತ್ತು. ಅಟಪಟ್ಟು ಅದೃಷ್ಟ ಅನ್ನಬೇಕೋ ಅಥವಾ ಅವನೆಲ್ಲ ವೈಫಲ್ಯಗಳ ಆಚೆಗೆ ಆತನ ಪ್ರತಿಭೆಯ ಮೇಲೆ ನಂಬಿಕೆ ಇಟ್ಟ ಶ್ರೀಲಂಕನ್ ಆಯ್ಕೆ ಸಮಿತಿ ಮತ್ತು ನಾಯಕನನ್ನು ಮೆಚ್ಚಬೇಕೋ.. ಅಟಪಟ್ಟುಗೆ ಮತ್ತೆ ತಂಡದಲ್ಲಿ ಅವಕಾಶ ಸಿಕ್ಕಿತು.

ಮೂರು ಇನ್ನಿಂಗ್ಸ್‌ ನಲ್ಲಿ ಐದು ಸೊನ್ನೆ ಮತ್ತು ಒಂದು ರನ್ ಗಳಿಸಿದ್ದ ಅಟಪಟ್ಟು ಆರು ವರ್ಷಗಳ ನಂತರ ತನ್ನ ಟೆಸ್ಟ್ ಜೀವನದ ಎರಡನೇ ರನ್ ಗಳಿಸುತ್ತಾನೆ. ಆದರೆ ಆ ಎರಡನೇ ರನ್ ನಂತರ ಆತ ಹಿಂದಿರುಗಿ ನೋಡಲೇ ಇಲ್ಲ. ಅಲ್ಲಿಂದ ಮುಂದೆ ಆತ ಶ್ರೀಲಂಕಾ ತಂಡದ ನಾಯಕನೂ ಆಗುತ್ತಾನೆ. ಟೆ‌ಸ್ಟ್‌ ನಲ್ಲಿ ಹದಿನಾರು ಶತಕ, ಆರು ದ್ವಿಶತಕ ಬಾರಿಸುತ್ತಾನೆ. ಏಕದಿನ ಪಂದ್ಯಗಳಲ್ಲೂ ಹನ್ನೊಂದು ಶತಕ ಗಳಿಸುತ್ತಾನೆ. ಶ್ರೀಲಂಕಾದ ಶ್ರೇಷ್ಠ ಕ್ರಿಕೆಟರ್‌ ಗಳಲ್ಲೊಬ್ಬ ಎಂದು ಇತಿಹಾಸದ ಪುಟದಲ್ಲಿ ಸ್ಥಾನ ಪಡೆಯುತ್ತಾನೆ.

ನಿಸ್ಸಂಶಯವಾಗಿ ಅಟಪಟ್ಟು ಕ್ರಿಕೆಟ್ ಜೀವನ ಎಲ್ಲರಿಗೂ ಪ್ರೇರಣಾದಾಯಕ. ಅಟಪಟ್ಟು ಜಾಗದಲ್ಲಿ ಬೇರೆ ಯಾರೇ ಇದ್ದಿದ್ದರೂ ಡಿಪ್ರೆಶನ್‌ಗೆ ಹೋಗಿರುತ್ತಿದ್ದರು. ಕ್ರಿಕೆಟ್ ಬಿಟ್ಟು ಬೇರೆ ಬದುಕು ನೋಡುತ್ತಿದ್ದರು. ಆದರೆ ಅಟಪಟ್ಟು ಬಲೆ ಕಟ್ಟುವ ಜೇಡನ ಹಾಗೆ ಮರಳಿ ಮರಳಿ ಯತ್ನವ ಮಾಡಿ ಗೆದ್ದ ಅಂತ ಈಗ ಮಾತನಾಡುತ್ತಿದ್ದೇವೆ. ಒಂದು ವೇಳೆ ಅಟಪಟ್ಟು ತನಗೆ ಸಿಕ್ಕ ನಾಲ್ಕನೇ ಅವಕಾಶದಲ್ಲೂ ವಿಫಲನಾಗಿ ಬಿಟ್ಟಿದ್ದರೆ, ಜಗತ್ತಿಗೆ ಅವನನ್ನು ಉದಾಹರಣೆ ಯಾಗಿ ತೋರಿಸುವ ಅವಕಾಶ ಇರುತ್ತಿತ್ತಾ? ಅಟಪಟ್ಟು ಬದುಕು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಅಟಪಟ್ಟು ಪ್ರತಿಭೆ ಬಗ್ಗೆ ಇಷ್ಟೊಂದು ನಂಬಿಕೆ ಇದ್ದಿದ್ದರೆ, ಯಾಕೆ ಒಂದೇ ಒಂದು ಟೆಸ್ಟ್‌ ವೈಫಲ್ಯದ ನಂತರ ಕೈಬಿಟ್ಟರು? ಯಾರಿಗೆ ಗೊತ್ತು, ಅವನನ್ನು ಡ್ರಾಪ್ ಮಾಡದೇ ಇದ್ದಿದ್ದರೆ ಎರಡನೇ ಟೆಸ್ಟ್‌ ನ ಆತ ಪರಾಕ್ರಮ ಮೆರೆಯುತ್ತಿದ್ದನೋ ಏನೋ. ಅದು ಬಿಡಿ. ಎಲ್ಲರಿಗೂ ಅಟಪಟ್ಟು ಥರ ಮತ್ತೆ ಮತ್ತೆ ಅವಕಾಶ ಸಿಗುತ್ತದೆಯಾ? ಕೆಲವು ರಂಗಗಳಲ್ಲಿ ಮತ್ತೆ ಮತ್ತೆ ಪ್ರಯತ್ನಿಸಲು, ಗೆಲ್ಲಲು ಅವಕಾಶ ಇರುತ್ತದೆ. ಆದರೆ ಕೆಲವೆಡೆ ಅವಕಾಶವೇ ಇರುವುದಿಲ್ಲ ವಲ್ಲ.

ಪ್ರತಿಭೆ ಎಂಬುದು ಪರ್ಫಾಮೆನ್ಸ್ ಆಗಿ ಬದಲಾದಾಗ ಮಾತ್ರವೇ ಬೆಲೆ. ಸಂಜು ಸ್ಯಾಮ್ಸನ್ ಎಂಬ ಕ್ರಿಕೆಟಿಗನ ಪ್ರತಿಭೆ ಬಗ್ಗೆ ಇಡೀ ದೇಶಕ್ಕೆ ನಂಬಿಕೆ. ಆದರೆ ಅದು ಪರ್ಫಾಮೆನ್ಸ್ ಆಗಿ ಬದಲಾಗಲು ಎಷ್ಟು ಅವಕಾಶ ಸಿಕ್ಕೀತು? ಇಂದಿನ ಸ್ಪೀಡ್ ಜಗತ್ತಿನಲ್ಲಿ, ಸ್ಪರ್ಧಾತ್ಮಕ ಯುಗ ದಲ್ಲಿ ಮತ್ತೆ ಮತ್ತೆ ಅವಕಾಶಗಳನ್ನು ಯಾರು ತಾನೇ ನೀಡಿಯಾರು? ಪ್ರತಿಭೆ, ಸಾಮರ್ಥ್ಯ ಇದೆ ಎಂದು ಗೊತ್ತಾದಾಗ, ಹೇಗಾದರೂ ತಂಡದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ನಡೆದೇ ನಡೆಯುತ್ತದೆ. ‌

ರೋಹಿತ್ ಶರ್ಮ, ರಾಹುಲ್ ದ್ರಾವಿಡ್, ಹಾರ್ದಿಕ್ ಪಾಂಡ್ಯ, ಅಜಿತ್ ಅಗರ್ಕರ್, ಸೆಹವಾಗ್ ಹೀಗೆ ಹಲವಾರು ಕ್ರಿಕೆಟಿಗರನ್ನು ಇಲ್ಲಿ ಉಲ್ಲೇಖಿಸಬಹುದು. ರೋಹಿತ್ ಶರ್ಮನ ಪ್ರತಿಭೆ ಮತ್ತು ಸಾಮರ್ಥ್ಯದ ಮೇಲೆ ನಂಬಿಕೆ ಇದ್ದುದರಿಂದ ಆತನ ಸ್ಟ್ರೆಂತ್ ಏನು ಎಂದು ಅರಿತು ಅದಕ್ಕೆ ತಕ್ಕ ಅವಕಾಶ ಕೊಡಲಾಯ್ತು. ಮುಂದಿನದ್ದು ಇತಿಹಾಸ. ದ್ರಾವಿಡ್‌ನ ನಿಸ್ವಾರ್ಥ ಭಾವ, ಪ್ರತಿಭೆ, ಸಾಮರ್ಥ್ಯ, ಶ್ರದ್ಧೆ, ತಾಳ್ಮೆ, ಅಡಾಪ್ಟೆಬಿಲಿಟಿ ಇವನ್ನೆಲ್ಲ ನೋಡಿ ಈತನನ್ನು ಉಳಿಸಿಕೊಳ್ಳಲೇಬೇಕು ಎಂದು ಗಂಗೂಲಿ ನಿರ್ಧರಿಸಿದ ಪರಿಣಾಮ ರಾಹುಲ್ ದ್ರಾವಿಡ್ ಇಂದಿಗೆ ದಂತಕಥೆಯಾದದ್ದು.

ನಮ್ಮ ನಿತ್ಯಜೀವನದಲ್ಲೂ ಅಷ್ಟೆ, ಆಫೀಸಿನಲ್ಲಿ ಒಬ್ಬ ನೌಕರನಲ್ಲಿ ಪ್ರತಿಭೆ, ಕೆಲಸ ಮಾಡುವ ಉತ್ಸಾಹ, ಶ್ರದ್ಧೆ, ಕಲಿಕಾ ಮನೋಭಾವ, ಶಿಸ್ತು, ಪ್ರಾಮಾಣಿಕತೆ ಇವೆಲ್ಲ ಇದೆ ಅಂದಾಗ, ಪರ್ಫಾಮೆನ್ಸ್ ಇಲ್ಲ ಎಂದು ಏಕಾಏಕಿ ತೆಗೆದು ಹಾಕುವುದಿಲ್ಲ. ಅತ ಎಲ್ಲಿ ಫಿಟ್ ಆಗ್ತಾನೆ, ಅವನ ಸ್ಟ್ರೆಂತ್ ಅನ್ನು ಎಲ್ಲಿ ಬಳಕೆ ಮಾಡಬಹುದು, ಅವನ ಆಸಕ್ತಿ ಏನು, ಇದೆಲ್ಲ ನೋಡಿ ಆ ಕೆಲಸ ಕೊಟ್ಟು ಔಟ್‌ಪುಟ್ ತೆಗೆಯಲು ಪ್ರಯತ್ನಿಸಲಾಗುತ್ತದೆ.

ಇಲ್ಲ ಈತನಲ್ಲಿ ಪ್ರತಿಭೆಯೂ ಇಲ್ಲ, ಸಾಮರ್ಥ್ಯ, ಪ್ರಾಮಾಣಿಕತೆ, ಶ್ರದ್ಧೆ, ಬೆಳೆಯುವ ಕಲಿಯುವ ಆಸಕ್ತಿ ಯಾವುದೂ ಇಲ್ಲ ಅಂತನಿಸಿದಾಗ ಮಾತ್ರ ಗೇಟ್‌ಪಾಸ್ ನೀಡುವುದು ಅನಿವಾರ್ಯವಾಗುತ್ತದೆ. ಅಟಪಟ್ಟು ಪ್ರತಿ ಬಾರಿ ವಿಫಲವಾದಾಗಲೂ ಇನ್ನೊಂದು ಚಾನ್ಸ್ ಕೊಡಿ ಎಂದು ಗೋಗರೆಯಲಿಲ್ಲ, ನನ್ನನ್ನು ಬೇರೆ ಕ್ರಮಾಂಕದಲ್ಲಿ ಆಡಿಸಿ ಟ್ರೈ ಮಾಡಿ ಅಂತೆಲ್ಲ ವೈಫಲ್ಯಕ್ಕೆ ನೆಪ ಹುಡುಕಲಿಲ್ಲ.

ಸೀದಾ ದೇಶೀ ಕ್ರಿಕೆಟ್‌ಗೆ ಹೋದ, ಬೆವರು ಸುರಿಸಿ ರನ್ ಹರಿಸಿ, ತನ್ನಲ್ಲಿ ಪ್ರತಿಭೆ, ಸಾಮರ್ಥ್ಯ, ಹಸಿವು ಇದೆಯೆಂದು ತೋರಿಸಿದ. ಆತನಲ್ಲಿ ದೊಡ್ಡ ಪಂದ್ಯಕ್ಕೆ ಬೇಕಿರೋ ಟೆಂಪರಮೆಂಟ್, ಮೆಚುರಿಟಿ ಕೊರತೆ ಇದೆ ಎಂದು ಆಯ್ಕೆದಾರರು ಭಾವಿಸಿದ್ದರು. ಅದನ್ನೂ ಸುಳ್ಳು ಮಾಡು‌ ವಂತೆ ದೀರ್ಘ ಇನ್ನಿಂಗ್ಸ್‌ʼಗಳನ್ನು ಆಡಿ ಸಾಲುಸಾಲು ದ್ವಿಶತಕಗಳನ್ನು ಪೇರಿಸಿದ. ಅಟಪಟ್ಟುವಿನಿಂದ ಏನನ್ನಾದರೂ ಕಲಿಯುವುದಾದಲ್ಲಿ, ಆತನ ಬದುಕನ್ನು ಅದೃಷ್ಟ ದುರದೃಷ್ಟಗಳ ಲೆಕ್ಕಾಚಾರದ ಆಚೆಗೆ ನಿಂತು ನೋಡಬೇಕಾಗುತ್ತದೆ.