ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Raghava Sharma Nidle Column: ಹಠಕ್ಕೆ ಬಿದ್ದು ಕಂಬಳ ನಡೆಸುವುದರ ಉದ್ದೇಶವೇನು ?

ವಿಶ್ವಪ್ರಸಿದ್ಧ ಮೈಸೂರು ದಸರಾದಲ್ಲಿ ಕರಾವಳಿ ಭಾಗದ ಜಾನಪದ ಕ್ರೀಡೆ ಕಂಬಳದ ಆಯೋಜನೆಗೆ ತೀರ್ಮಾನ ಮಾಡಿರುವುದು ಪರ/ವಿರೋಧ ಚರ್ಚೆಗೆ ಗ್ರಾಸವಾಗಿದೆ. ಮೈಸೂರು ಸಂಸದ ಯದು ವೀರ ಒಡೆಯರ್, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಕೆಲ ಸಾಂಸ್ಕೃತಿಕ ಸಂಘಟನೆಗಳು, ರೈತ ಮುಖಂಡರು ಕಂಬಳದ ಆಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದರೆ, ದಕ್ಷಿಣ ಕನ್ನಡದ ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ರೈ ಒತ್ತಾಯದ ಮೇರೆಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ಕಂಬಳ ನಡೆಸುವ ನಿರ್ಧಾರ ಮಾಡಿದ್ದಾರೆ.

ಹಠಕ್ಕೆ ಬಿದ್ದು ಕಂಬಳ ನಡೆಸುವುದರ ಉದ್ದೇಶವೇನು ?

-

ಜನಫಥ

ಮೈಸೂರು ದಸರಾಕ್ಕೆ ಅಂದಾಜು 40-45 ಕೋಟಿ ಖರ್ಚಾಗಬಹುದು. ಅದರಲ್ಲಿ ರೂ.10 ಕೋಟಿಯನ್ನು ಕಂಬಳಕ್ಕೆಂದೇ ಮೀಸಲಿಡಬೇಕಿದೆ. ದಸರಾದಲ್ಲಿ ಬೇರೆ ಎಲ್ಲಾ ಆಕರ್ಷಣೆ ಗಳೂ ಇರುವಾಗ ಕಂಬಳಕ್ಕೆ ಅವಕಾಶ ನೀಡಿದರೆ ತಪ್ಪೇನು ಎಂಬುದು ಅಶೋಕ್ ರೈ ವಾದ. ಸರಕಾರ ಇತರ ಕಲೆಗಳಿಗೆ, ಕಲಾವಿದರ ಅನುಕೂಲಕ್ಕೆ ಎಷ್ಟು ಖರ್ಚು ಮಾಡುತ್ತದೆ ಎಂಬುದೂ ಪ್ರಶ್ನೆಯೇ.

ವಿಶ್ವಪ್ರಸಿದ್ಧ ಮೈಸೂರು ದಸರಾದಲ್ಲಿ ಕರಾವಳಿ ಭಾಗದ ಜಾನಪದ ಕ್ರೀಡೆ ಕಂಬಳದ ಆಯೋಜನೆಗೆ ತೀರ್ಮಾನ ಮಾಡಿರುವುದು ಪರ/ವಿರೋಧ ಚರ್ಚೆಗೆ ಗ್ರಾಸವಾಗಿದೆ. ಮೈಸೂರು ಸಂಸದ ಯದು ವೀರ ಒಡೆಯರ್, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಕೆಲ ಸಾಂಸ್ಕೃತಿಕ ಸಂಘಟನೆಗಳು, ರೈತ ಮುಖಂಡರು ಕಂಬಳದ ಆಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದರೆ, ದಕ್ಷಿಣ ಕನ್ನಡದ ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ರೈ ಒತ್ತಾಯದ ಮೇರೆಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ಕಂಬಳ ನಡೆಸುವ ನಿರ್ಧಾರ ಮಾಡಿದ್ದಾರೆ.

2023ರಲ್ಲಿ ಕಂಬಳವನ್ನು ಬೆಂಗಳೂರಿನಲ್ಲಿ ಆಯೋಜನೆ ಮಾಡಿದ್ದೆವು ಎಂದು ಹಿರಿ ಹಿಗ್ಗಿದ್ದ ಅಶೋಕ್ ರೈ, ಈಗ ಕಂಬಳವನ್ನು ನಾವು ಮೈಸೂರು ದಸರಾಕ್ಕೂ ವಿಸ್ತರಣೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ರಾಜಕೀಯ ಲಾಭ ಪಡೆದುಕೊಳ್ಳಲು ಮುಂದಾಗುವುದರಲ್ಲಿ ಅಚ್ಚರಿ ಏನಿಲ್ಲ. ದಸರಾದೊಂದಿಗೆ ಭಾವನಾತ್ಮಕವಾಗಿ ಜೋಡಿಸಿಕೊಂಡಿರುವ ಮೈಸೂರು ಜನತೆಯ ಭಾವನೆ ಏನೇ ಇದ್ದರೂ, ಮಹತ್ವಾಕಾಂಕ್ಷಿ ರಾಜಕಾರಣಿಯಾಗಿರುವ ಅಶೋಕ್ ರೈಗೆ ಮೈಸೂರಿನಲ್ಲಿ ಕಂಬಳ ಮಾಡುವುದು ರಾಜಕೀಯ ಜೀವನದ ಮಹತ್ವದ ಮೈಲಿಗಲ್ಲಾಗಬಹುದು. ಅಶೋಕ್ ರೈ ರಾಜಕೀಯ ಏರುಗತಿ ಹಿಂದೆ ಕಂಬಳದ ಕೊಡುಗೆ ಇದೆ. ಕಂಬಳಕ್ಕೆ ನಿಷೇಧ ಹೇರಬೇಕು ಎಂಬ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿದ್ದಾಗ ಅಶೋಕ್ ರೈ ಕಂಬಳದ ಪರವಾಗಿ ಕಾನೂನು ಹೋರಾಟ ಮಾಡಿದ್ದರು. ನಾನು ದೆಹಲಿಯಲ್ಲಿದ್ದಾಗ ಇದನ್ನು ನೋಡಿದ್ದೇ ಕೂಡ.

ಸಾಮಾಜಿಕ ಜೀವನದ ಆರಂಭದಿಂದಲೂ ಕಂಬಳದ ಜತೆ ಜೋಡಿಸಿಕೊಂಡಿರುವುದರಿಂದ ಈ ಜಾನಪದ ಕ್ರೀಡೆಯ ವಿಚಾರ ಬಂದಾಗ ಕರಾವಳಿಯ ಇತರೆ ಪ್ರಭಾವಿ ರಾಜಕಾರಣಿಗಳ ಜತೆಗೆ ಅಶೋಕ್ ರೈ ಕೂಡ ಕಾಣಿಸಿಕೊಳ್ಳುತ್ತಾರೆ. ಈ ಮೊದಲು ಬಿಜೆಪಿಯಲ್ಲಿದ್ದು, ಸಂಘ ಪರಿವಾರದವರ ಮಧ್ಯೆಯೂ ಗುರುತಿಸಿಕೊಂಡಿದ್ದರು.

ಇದನ್ನೂ ಓದಿ: Raghava Sharma Nidle Column: ಮೇಕೆದಾಟು: ತ.ನಾಡು ದೂರಿಗೆ ಏನಂತೀರಿ ಮುಖ್ಯಮಂತ್ರಿಗಳೇ?

ಮುಖ್ಯವಾಗಿ ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ಆಪ್ತಕೂಟದಲ್ಲಿದ್ದ ಅಶೋಕ್ ರೈ, ಗೌಡರ ಜತೆ ಅನೇಕ ಬಾರಿ ದೆಹಲಿಯಲ್ಲೂ ಕಾಣಿಸಿಕೊಂಡಿದ್ದರು. ಈಗ ಪುತ್ತೂರಿನ ಕಾಂಗ್ರೆಸ್ ಶಾಸಕರಾಗಿರುವ ಅಶೋಕ ರೈ, ತಮ್ಮ ಕ್ಷೇತ್ರ ಮಾತ್ರವಲ್ಲ, ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ಮುಖಂಡರಾಗಿ ಬೆಳೆಯುತ್ತಿದ್ದಾರೆ. ದ.ಕ. ಜಿಯಲ್ಲಿ ಸದ್ಯ ೮ ವಿಧಾನಸಭಾ ಕ್ಷೇತ್ರಗಳಿದ್ದು, ಉಳ್ಳಾಲ ಮತ್ತು ಪುತ್ತೂರಿನಲ್ಲಿ ಮಾತ್ರ ಕಾಂಗ್ರೆಸ್ ಶಾಸಕರಿದ್ದಾರೆ. ಉಳಿದೆಡೆ ಬಿಜೆಪಿಯದ್ದೇ ಪ್ರಾಬಲ್ಯ. ಜಿಲ್ಲೆಯಲ್ಲಿ ಪೊಲಿಟಿಕಲ್ ಡಿವಿಡೆಂಡ್ ಪಡೆಯಲು ಮೈಸೂರಿನಲ್ಲಿ ಕಂಬಳ ಆಯೋಜನೆ ನೆರವಾಗಬಲ್ಲದು ಎಂದು ಸಿಎಂ ಡಿ.ಕೆ.ಶಿವಕುಮಾರ್ ಭಾವಿಸಿದಂತಿದೆ. ಇದಕ್ಕೆ ಅಶೋಕ್ ರೈ ಅವರ ಮಾತುಗಳು ಡಿ.ಕೆ.ಶಿವಕುಮಾರ್ ಆಲೋಚನೆಗೆ ಸ್ಪೂರ್ತಿ ತುಂಬಿರಬಹುದು. ಅಶೋಕ್ ರೈಯವರಿಗೆ 2023ರ ವಿಧಾನಸಭೆ ಟಿಕೆಟ್ ಸಿಕ್ಕಿದ್ದರ ಹಿಂದೆ ಡಿ.ಕೆ. ಶಿವಕುಮಾರ್ ಪ್ರಭಾವ ಕೆಲಸ ಮಾಡಿತ್ತೆನ್ನು ವುದು ಗುಟ್ಟಿನ ವಿಷಯವೇನಲ್ಲ.

ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ, ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲರನ್ನು ಒಪ್ಪಿಸಿ, ರೈ ಅವರಿಗೆ ಟಿಕೆಟ್ ಕೊಡಿಸಿದ್ದು ಡಿಕೆಶಿ. ಅವರಿಬ್ಬರ ನಡುವಿನ ಬಾಂಧವ್ಯ ಈಗ ಮೈಸೂರು ದಸರಾದಲ್ಲಿ ಕರಾವಳಿ ಜಾನಪದ ಕ್ರೀಡೆ ಕಂಬಳ ನಡೆಸುವಷ್ಟರ ಮಟ್ಟಿಗೆ ವಿಸ್ತರಿಸಿದೆ. ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿ ನಾಯಕರ ಒಳಜಗಳ, ಟಿಕೆಟ್ ಹಂಚಿಕೆ ಗೊಂದಲ ಮತ್ತು ಅರುಣ್ ಕುಮಾರ್ ಪುತ್ತಿಲ ಪ್ರತ್ಯೇಕ ಸ್ಪರ್ಧೆಯಿಂದಾಗಿ ಅಶೋಕ್ ರೈ ಅವರು ಪುತ್ತಿಲ ವಿರುದ್ಧ 4419 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.

ತಮ್ಮ ಭಿನ್ನ ಕಾರ್ಯಶೈಲಿ, ಪ್ರಚಾರದ ವೈಖರಿ ಹಾಗೂ ಜನಸ್ನೇಹಿಯಂತೆ ಕಾಣಿಸಿಕೊಳ್ಳುವ ಗುಣದಿಂದಾಗಿ ಕರಾವಳಿ ಭಾಗದಲ್ಲಿ ಅವರ ಪ್ರಸಿದ್ಧಿ ನಿಧಾನವಾಗಿ ಹೆಚ್ಚುತ್ತಿದೆ. ಇದೇ ಕಾರಣಕ್ಕೆ ಅವರು ಪುತ್ತೂರನ್ನೂ ಮೀರಿದ ನಾಯಕನಾಗಿ ಬೆಳೆಯಲು ಯತ್ನಿಸುತ್ತಿದ್ದಾರೆ. ಮೈಸೂರು ದಸರಾ ದಲ್ಲಿ ಕಂಬಳ ಆಯೋಜನೆಯ ಯಶಸ್ಸು ಅದಕ್ಕೊಂದು ಮೆಟ್ಟಿಲಾಗಿ ಪರಿಣಮಿಸಬಹುದು ಮತ್ತು ರಾಜಕೀಯವಾಗಿ ಅವರ ವರ್ಚಸ್ಸು ವೃದ್ಧಿಗೆ ಕಾರಣವಾಗಬಹುದು. ಅಲ್ಲದೆ, ಕರಾವಳಿಯಲ್ಲಿ ಕಾಂಗ್ರೆಸ್‌ನ ಮರು ವಿಸ್ತರಣೆಗೆ ಅಶೋಕ್ ರೈ ಪ್ರಮುಖ ಅಸ್ತ್ರವಾಗಬಲ್ಲರು ಎಂದು ಡಿ.ಕೆ. ಶಿವಕುಮಾರ್‌ಗೆ ಅನಿಸಿರಬಹುದು. ಬಹುಶಃ ಈ ಎಲ್ಲಾ ಲೆಕ್ಕಾಚಾರಗಳು ದಸರಾದಲ್ಲಿ ಕಂಬಳ ನಡೆಸಲು ಪ್ರೇರೇಪಣೆಯಾದಂತಿದೆ.

Kambala ok

ಕಾವೇರಿ ಕಣಿವೆ ಭಾಗದ ಮೈಸೂರು ಹಾಗೂ ಸುತ್ತಮುತ್ತಲ ಪ್ರದೇಶಗಳು ಈ ಬಾರಿ ಬರಗಾಲ ಎದುರಿಸುತ್ತಿವೆ. ಮಳೆ ಕೊರತೆಯು ಭವಿಷ್ಯದ ದಿನಗಳ ಬಗ್ಗೆ ರೈತರಲ್ಲಿ ಆತಂಕ ಮೂಡಿಸಿದೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ಯಾವ ಪ್ರಮಾಣದಲ್ಲಿ ಮಳೆಯಾಗಬೇಕಿತ್ತೋ ಅಷ್ಟು ಮಳೆಯಾಗಿಲ್ಲ. ಹೀಗಿರುವಾಗ ಕಂಬಳವೊಂದಕ್ಕೇ ರೂ. 8-9 ಕೋಟಿ ಖರ್ಚು ಮಾಡಿ ದಸರಾದಲ್ಲಿ ಅದನ್ನು ಆಯೋಜನೆ ಮಾಡುವ ಅಗತ್ಯ ಏನಿದೆ ಎಂಬ ಸಹಜ ಪ್ರಶ್ನೆ ಮೈಸೂರು ಭಾಗದ ಅನೇಕರನ್ನು ಕಾಡುತ್ತಿದೆ.

ಸರಕಾರಕ್ಕೆ ಸಾರ್ವಜನಿಕ ದುಡ್ಡನ್ನು ಎಲ್ಲಿ, ಹೇಗೆ ಖರ್ಚು ಮಾಡಬೇಕೆಂಬ ಕಲ್ಪನೆ ಇಲ್ಲದಿದ್ದಾಗ ಇಂತಹಾ ವಿಚಿತ್ರ ನಿರ್ಧಾರಗಳು ಹೊರಬೀಳುತ್ತವೆ ಎಂಬ ಆಕ್ರೋಶದ ಮಾತುಗಳು ಕೇಳುತ್ತಿವೆ. ಕಂಬಳ ಆಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವವರಲ್ಲಿ ಪ್ರಮುಖರಾದ ಮೈಸೂರು ವಿಶ್ವ ವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಎನ್.ಎಸ್. ರಂಗರಾಜು ಅವರೊಂದಿಗೆ ನಾನು ಈ ಬಗ್ಗೆ ಮಾತನಾಡಿದೆ. ಕಂಬಳ ತುಳುನಾಡಿನ ಸಂಸ್ಕೃತಿ. ನಾಳೆ ಮೈಸೂರು ಅಂಬಾರಿಯನ್ನು ಪುತ್ತೂರಿನಲ್ಲಿ ಮಾಡಿ ಎನ್ನುತ್ತಾರೆ. ಅದನ್ನೂ ಒಪ್ಪುತ್ತಾರಾ? ನಾನು ಕಂಬಳದ ವಿರೋಧಿ ಅಲ್ಲ. ಇಲ್ಲಿ ಬೇಡ ಎಂದಷ್ಟೇ ಹೇಳುತ್ತಿದ್ದೇನೆ.

ಮೈಸೂರು ದಸರಾಕ್ಕೆ ಅದರದ್ದೇ ಆದ ಇತಿಹಾಸವಿದೆ ಮತ್ತು ಸಾಂಸ್ಕೃತಿಕ ನೆಲೆಗಟ್ಟಿದೆ. ಹಿಂದೆ ಮೈಸೂರು ಮಹಾರಾಜರು ಮಂಗಳೂರಿನಲ್ಲಿ ಕಂಬಳ ನಡೆಸಲು ನೆರವು ನೀಡಿದ್ದರು. ಆದರೆ ಮೈಸೂರಿನಲ್ಲಿ ನಡೆಸಲು ಅವರು ಮುಂದಾಗಿರಲಿಲ್ಲ. ಕಂಬಳಕ್ಕೆ ಪ್ರತ್ಯೇಕ ಭೂಮಿ, ನೀರು ಸೇರಿ ವಿಶೇಷ ಸಿದ್ಧತೆಯನ್ನು ಮೊದಲೇ ಮಾಡಬೇಕಾಗುತ್ತದೆ. ಈ ಬಾರಿ ಮಳೆನೇ ಇಲ್ಲ. ನೀರಿಲ್ಲದೆ ಹಾಹಾಕಾರ ಉಂಟಾಗುವ ಭೀತಿ ಇದೆ.

ಕಳೆದ ವರ್ಷ ಈ ಹೊತ್ತಿಗೆ ಕಾವೇರಿ ತುಂಬಿ ಹೋಗಿತ್ತು. ಈಗಿನ ಸ್ಥಿತಿ ಚಿಂತಾಜನಕ ಎಂಬ ಆತಂಕ ಅವರದ್ದು. ಕಳೆದ ವರ್ಷದ ಲೆಕ್ಕಾಚಾರಕ್ಕೆ ಹೋಲಿಸಿದರೆ ಈ ಬಾರಿಯೂ ಮೈಸೂರು ದಸರಾಕ್ಕೆ ಅಂದಾಜು 40-45 ಕೋಟಿ ಖರ್ಚಾಗಬಹುದು. ಅದರಲ್ಲಿ ರೂ. ಎಂಟೊಂಬತ್ತು ಕೋಟಿಯನ್ನು ಕಂಬಳಕ್ಕೆಂದೇ ಮೀಸಲಿಡ ಬೇಕಿದೆ. ಮೈಸೂರಿನ ವಿಟಿಯು ಕಾಲೇಜಿನ ಪಕ್ಕದಲ್ಲಿ ಮೂಡಾಕ್ಕೆ ಸೇರಿದ 17 ಎಕರೆ ಭೂಮಿಯಲ್ಲಿ ಕಂಬಳ ನಡೆಯಲಿದೆ.

ರಾಜ್ಯ ಸರಕಾರ ಖಾಸಗಿ ಪ್ರಾಯೋಜಕತ್ವ ದಿಂದ ಕಂಬಳ ನಡೆಸಲು ಮುಂದಾಗಿದ್ದರೆ ಬಹುಶಃ ಇಷ್ಟೊಂದು ವಿರೋಧ ಬರುತ್ತಿರಲಿಲ್ಲವೇನೋ. ಆದರೆ, ಸರಕಾರಿ ದುಡ್ಡಲ್ಲೇ ಜಿದ್ದಿಗೆ ಬಿದ್ದವರಂತೆ ಕಂಬಳ ನಡೆಸಿಯೇ ತೀರುತ್ತೇವೆ ಎಂದು ಹಠಕ್ಕೆ ಬಿದ್ದಿರುವುದು ಮೈಸೂರು ಭಾಗದ ಕಾಂಗ್ರೆಸ್ಸಿಗ ರನ್ನೂ ಇಕ್ಕಟ್ಟಿಗೆ ಸಿಲುಕಿಸಿದೆ. ಅವರು ಬಹಿರಂಗವಾಗಿ ಸರಕಾರದ ಕ್ರಮವನ್ನು ವಿರೋಧಿಸುತ್ತಿಲ್ಲ. ಆದರೆ, ನೀವು ಹೋರಾಟ ಮಾಡಿ, ಹಿಂದಿನಿಂದ ನಾವಿದ್ದೇವೆ ಎಂದು ಕಂಬಳ ವಿರೋಧಿ ಹೋರಾಟ ಗಾರರ ಬೆಂಬಲಕ್ಕೆ ನಿಂತಿದ್ದಾರೆ. ಕಂಬಳದ ಬಗ್ಗೆ ತೀರ್ಮಾನ ಮಾಡುವ ಮುನ್ನ ಆ ಭಾಗದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂದೂ ಹೇಳಲಾಗುತ್ತಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರು ಜಿಲ್ಲೆಯವರಾಗಿರುವುದರಿಂದ ಅವರೊಂದಿಗೆ ಸಿಎಂ ಶಿವಕುಮಾರ್ ಕಂಬಳದ ಬಗ್ಗೆ ಚರ್ಚೆ ನಡೆಸಿದ್ದಾರೋ ಇಲ್ಲವೋ ಎಂಬ ಸ್ಪಷ್ಟತೆ ಇಲ್ಲ. ಮೈಸೂರಿ ನಲ್ಲಿ 2 ದಸರಾ ನಡೆಯುತ್ತದೆ. ಒಂದು ಅರಮನೆ ಒಳಗೆ ನಡೆಯುವ ಮಹಾರಾಜರ ಖಾಸಗಿ ದರ್ಬಾರ್, ಎರಡನೆಯದ್ದು 1972ರಿಂದ ಪ್ರಾರಂಭಗೊಂಡ ಸಾರ್ವಜನಿಕ ದಸರಾ. ಆರಂಭದಲ್ಲಿ ಇದಕ್ಕೆ ಸಾಕಷ್ಟು ವಿರೋಧಗಳು ಬಂದರೂ ಅಂದಿನ ಮುಖ್ಯಮಂತ್ರಿಗಳಾಗಿದ್ದ ದಿವಂಗತ ದೇವರಾಜ್ ಅರಸು ಅವರು ಅದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ನಾಡಹಬ್ಬದ ಆಚರಣೆಗೆ ನಾಂದಿ ಹಾಡಿದರು.

ನಾಡಹಬ್ಬದಲ್ಲಿ ಸ್ಥಳೀಯ ಸಂಸ್ಕೃತಿಗೇ ಆದ್ಯತೆ. ಡೊಳ್ಳು ಕುಣಿತ ಶಿವಮೊಗ್ಗದಲ್ಲಿ ಖ್ಯಾತಿ ಪಡೆದಿದ್ದರೆ, ಕಂಸಾಳೆ ಮೈಸೂರು, ಮಂಡ್ಯ, ಚಾಮರಾಜನಗರದಲ್ಲಿ ಜನಪ್ರಿಯತೆ ಗಳಿಸಿದೆ. ಇಲ್ಲಿ ಪರಿಕರಗಳನ್ನಿಟ್ಟು ಕೊಂಡು ಜಾನಪದ ಕಲೆಯ ಪ್ರದರ್ಶನವಾಗುತ್ತದೆ. ಕಂಬಳ ಹಾಗಲ್ಲ. ಅದು ಜಾನಪದ ಕ್ರೀಡೆಯಾದರೂ, ಅದಕ್ಕೆ ಬೇಕಾದ ಪರಿಕರಗಳೇ ಬೇರೆ ಮತ್ತು ಅದನ್ನು ಒಂದು ನಿರ್ದಿಷ್ಟ ಸ್ಥಳದಲ್ಲಷ್ಟೇ ಮಾಡಬಹುದು. ಸರಕಾರ ನಿಜವಾಗಿ ಗಮನ ಕೊಡಬೇಕಾದ್ದು ಜನಪದ ಕಲೆಗಳನ್ನು ಪ್ರದರ್ಶಿಸುವ ಕಲಾವಿದರನ್ನು ಇಲ್ಲಿ ನೋಡಿಕೊಳ್ಳುವ ರೀತಿಯ ಬಗ್ಗೆ. ಅವರಿಗೆ ಬಂಡಿಪಾಳ್ಯ ಎಂಬಲ್ಲಿ ವಾಸ್ತವ್ಯಕ್ಕೆ ಸ್ಥಳ ನೀಡಲಾಗುತ್ತದೆ.

ತಮ್ಮ ಕುಟುಂಬದವರೆಲ್ಲರನ್ನೂ ಕಲಾವಿದರು ಕರೆದುಕೊಂಡು ಬಂದಿರುತ್ತಾರೆ. ಅವರಿಗೆ ಅಗತ್ಯವಾಗಿ ಬೇಕಾದ ಯಾವುದೇ ಮೂಲಸೌಕರ್ಯಗಳೇ ಇರುವುದಿಲ್ಲ. ಸೂಕ್ತ ಪ್ರಮಾಣದಲ್ಲಿ ದುಡ್ಡನ್ನೂ ಅವರಿಗೆ ಸರಕಾರ ಕೊಡುವುದಿಲ್ಲ. ಕಂಬಳಕ್ಕೆ ರೂ. 10 ಕೋಟಿ ಖರ್ಚು ಮಾಡಬಯ ಸುವ ಸರಕಾರಕ್ಕೆ ಡೊಳ್ಳು ಕುಣಿತ ಮಾಡುವ ಶಿವಮೊಗ್ಗದ ಹೆಣ್ಣುಮಕ್ಕಳ, ಉಳಿದ ಕಲಾವಿದರ ಸುಧಾರಣೆ ಬಗ್ಗೆ ಚಿಂತೆ ಮಾಡಿದೆಯೇ ಎನ್ನುವುದು ಪ್ರೊ.ರಂಗರಾಜು ಅವರ ಕಳಕಳಿ.

ಅಂಬಾರಿ, ರಾಜಮನೆತನದ ಖಾಸಗಿ ದರ್ಬಾರು, ಜಟ್ಟಿ ಕಾಳಗದ ಕಾರಣದಿಂದಾಗಿ ಮೈಸೂರು ದಸರಾ ವಿಶ್ವದ ಗಮನ ಸೆಳೆದಿದೆ. ಉಳಿದಂತೆ ಮೈಸೂರು ದಸರಾದಲ್ಲಿ ಬೇರೆ ಉತ್ಸವಗಳಂತೆ ಎಲ್ಲಾ ಆಕರ್ಷಣೆಗಳೂ ಇರುತ್ತವೆ. ಹೀಗಿರುವಾಗ, ಜಾನಪದ ಕ್ರೀಡೆ ಕಂಬಳಕ್ಕೆ ಅವಕಾಶ ನೀಡಿದರೆ ತಪ್ಪೇನು? ಕಂಬಳವನ್ನು ಕರಾವಳಿಯಿಂದ ಬೆಂಗಳೂರು, ಮೈಸೂರಿನಂತಹ ನಗರ ಪ್ರದೇಶಗಳಿಗೆ ವಿಸ್ತರಿಸುವುದರಿಂದ ಆ ಕ್ರೀಡೆಯ ಜನಪ್ರಿಯತೆ-ಪ್ರಸಿದ್ಧಿ ಮತ್ತೊಂದು ಭಾಗಕ್ಕೂ ವಿಸ್ತರಣೆಯಾಗು ತ್ತದೆ ಎನ್ನುವುದು ಅಶೋಕ್ ರೈ ಮತ್ತವರ ಬೆಂಬಲಿಗರ ಪ್ರತಿಪಾದನೆ.

ಮೈಸೂರಿನ ಜನತೆಗೂ ಕಂಬಳದ ಸೊಬಗನ್ನು ವೀಕ್ಷಿಸುವ ಅವಕಾಶ ಸಿಗುತ್ತದೆ. ಮೈಸೂರಿನ ಸಂಸ್ಕೃತಿಗೆ ಸವಾಲಾಗಿ ಕಂಬಳ ಮಾಡುತ್ತಿಲ್ಲ. ಈ ನೆಲದ ಆಚಾರ-ವಿಚಾರಗಳನ್ನು ಕೆಣಕುವ ಕೆಲಸ ನಾವು ಮಾಡುತ್ತಿಲ್ಲ ಎನ್ನುವುದು ಅಶೋಕ್ ರೈ ಸಮರ್ಥನೆ. ಯುವ ದಸರಾ ಹೆಸರಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ, ಬಾಲಿವುಡ್ ಗ್ಲಾಮರ್ ಲೋಕವನ್ನೇ ಪರಿಚಯಿಸುತ್ತಿರುವ ಈ ಕಾಲಘಟ್ಟದಲ್ಲಿ ಕಂಬಳಕ್ಕೆ ತಕರಾರು ಏಕೆ? ಲೇಸರ್ ಶೋ, ಏರ್ ಶೋಗೂ ದಸರಾಕ್ಕೂ ಸಂಬಂಧವಿದೆಯೇ? ಕಂಬಳದಲ್ಲಿ ಡಿಸ್ಕೋಡ್ಯಾ ಮಾಡುತ್ತಾರಾ? ದಸರಾದಲ್ಲಿ ಉತ್ತರ ಭಾರತದ ನೃತ್ಯಗಳು ನಡೆಯುತ್ತಿರುವುದನ್ನು ಯಾರೂ ಪ್ರಶ್ನಿಸುವುದಿಲ್ಲ ಎಂಬೆ ಅಶೋಕ್ ರೈ ವಾದದಲ್ಲಿ ತರ್ಕವಿಲ್ಲ ಎಂದೇನಲ್ಲ. ಹಾಗಾಗಿ, ಕಂಬಳ ಬೇಡ ಎನ್ನುತ್ತಿರುವವರು ಅಶೋಕ್ ರೈಯವರ ಈ ಪ್ರಶ್ನೆಗಳನ್ನೂ ಉತ್ತರಿಸಬೇಕಾಗುತ್ತದೆ.

ದಸರಾ ಕಂಬಳದ ಬಗ್ಗೆ ಈಗ ಅಂತಿಮ ನಿರ್ಧಾರ ಮಾಡಿರುವುದರಿಂದ ಛಲವಾದಿ ರಾಜಕಾರಣಿ, ಸಿಎಂ ಡಿ.ಕೆ. ಶಿವಕುಮಾರ್ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವವರಲ್ಲ. ಹಿಂದೆ ಸರಿದರೆ ವಿಪಕ್ಷಗಳ ಒತ್ತಡಕ್ಕೆ ಮಣಿದರು ಎಂದಾಗುತ್ತದೆ. ಹೀಗಾಗಿ, ಈ ಸಲದ ಮೈಸೂರು ದಸರಾದಲ್ಲಿ ಕಂಬಳ ನಿಶ್ಚಿತ. ಆದರೆ, ಸರಕಾರದ ಮಂದಿ ರೂ. 8-9 ಕೋಟಿ ದುಬಾರಿ ವೆಚ್ಚದಲ್ಲಿ, ಜಿದ್ದಿಗೆ ಬಿದ್ದು ಕಂಬಳ ಮಾಡುತ್ತೇವೆ ಎನ್ನುವಾಗ, ಅಲ್ಲಲ್ಲಿ ಗುಂಡಿ ಬಿದ್ದ ರಸ್ತೆಗಳು, ಶಿಥಿಲಾವಸ್ಥೆಯಲ್ಲಿರುವ, ಸುಧಾರಣೆ ಕಾಣದ, ಮುಚ್ಚುತ್ತಿರುವ ಸರಕಾರಿ ಶಾಲೆಗಳು, ಗ್ಯಾರಂಟಿ ಯೋಜನೆಗಳಿಂದಾಗಿ ಅನುದಾನ ಇಲ್ಲ ಎಂದು ನೂರಾರು ಹಳ್ಳಿಗಳನ್ನು ಈಗಲೂ ಸಂಪರ್ಕಿಸದ ಸರಕಾರಿ ಬಸ್ಸುಗಳು, ಅನುದಾನಗಳಿಲ್ಲದೆ ಸೊರಗಿ-ಅಭಿವೃದ್ಧಿ ಚಟುವಟಿಕೆಗಳನ್ನೇ ಮರೆತು ಸಹಾಯಕ್ಕಾಗಿ ಖಾಸಗಿ ಸಂಸ್ಥೆ, ವ್ಯಕ್ತಿಗಳನ್ನು ಅವಲಂಬಿಸಿ ಉಸಿರಾಡುತ್ತಿರುವ ಪಂಚಾಯತ್‌ಗಳು...ಹೀಗೆ ಇವೆಲ್ಲವೂ ಕಣ್ಮುಂದೆ ಬರುತ್ತವೆ. ಸರಕಾರದ ಕಣ್ಣು ಮಾತ್ರ ಬೇರೆ ಇರುತ್ತದೆ!