Raghava Sharma Nidle Column: ಮೇಕೆದಾಟು: ತ.ನಾಡು ದೂರಿಗೆ ಏನಂತೀರಿ ಮುಖ್ಯಮಂತ್ರಿಗಳೇ?
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಸೋತು ಅಧಿಕಾರ ಕಳೆದುಕೊಂಡಿದೆ. ಆದರೆ, ಮೇಕೆದಾಟು ವಿರೋಧದ ವಿಷಯದಲ್ಲಿ ಹೊಸ ಸರಕಾರವೂ ಸಕ್ರಿಯತೆ ಪ್ರದರ್ಶಿಸಿ, ಯೋಜನೆ ವಿರುದ್ಧ ಸರ್ವಾನುಮತದ ನಿರ್ಣಯ ತೆಗೆದುಕೊಂಡಿದೆ. ಡಿಎಂಕೆ ಸರಕಾರ 2025ರ ಡಿಸೆಂಬರ್ ಮತ್ತು 2026ರ ಮಾರ್ಚ್ ತಿಂಗಳಲ್ಲಿ ಕೇಂದ್ರಕ್ಕೆ ಸಲ್ಲಿಸಿದ್ದ 2ನೇ ಕಾವೇರಿ ನ್ಯಾಯಾಧೀಕರಣ ಬೇಡಿಕೆಯ ಅರ್ಜಿ ಬಗ್ಗೆ ಶೀಘ್ರದ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತ.ನಾಡು ಹೊಸ ಸರಕಾರವು ಕೇಂದ್ರ ಸರ್ಕಾರದ ಮೇಲೆ ಮತ್ತೆ ಒತ್ತಡ ಮುಂದುವರಿಸಿದೆ.
-
ಜನಪಥ
ಅದೃಷ್ಟವಶಾತ್ ಕಳೆದ ಕೆಲ ದಿನಗಳಿಂದ ರಾಜ್ಯದ ಕೆಲವೆಡೆ ಒಳ್ಳೆಯ ಮಳೆಯಾಗುತ್ತಿದೆ. ಆದರೆ, ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುವುದಿಲ್ಲ ಎಂಬ ವರದಿಗಳಿರುವುದರಿಂದ ಬರದ ಛಾಯೆ ಆವರಿಸುವ ಲಕ್ಷಣ ಕಾಣುತ್ತಿದೆ. ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದಂತೆಯೇ ಸಮಸ್ಯೆಗಳ ಸರಮಾಲೆಗಳೇ ರಾಜ್ಯವನ್ನು ಬಾಧಿಸತೊಡಗುತ್ತದೆ. ಜಲಸಮಸ್ಯೆಗಳಿಗೆ ತಕ್ಕಮಟ್ಟಿಗಾದರೂ ಪರಿಹಾರ ಒದಗಿಸಬಲ್ಲ ರಾಜ್ಯದ ಮಹತ್ವಾ ಕಾಂಕ್ಷಿ ನೀರಾವರಿ ಯೋಜನೆ-ಕ್ರಮಗಳಿಗೂ ಕೇಂದ್ರ ಸರಕಾರದ ಅಗತ್ಯ ಒಪ್ಪಿಗೆಗಳೂ ಸಿಗದಿರುವುದರಿಂದ ರಾಜ್ಯ ಸರಕಾರಕ್ಕೆ ಸ್ಪಷ್ಟ ದಿಕ್ಕಿನಲ್ಲಿ ಕಾರ್ಯೋ ನ್ಮುಖಗೊಳ್ಳುವುದೂ ಸಾಧ್ಯವಾಗುತ್ತಿಲ್ಲ.
ಏತನ್ಮಧ್ಯೆ, ತಮಿಳುನಾಡಿನ ಹಿಂದಿನ ಸರಕಾರಗಳಂತೆ ಈಗಿನ ಟಿವಿಕೆ ನೇತೃತ್ವದ ಮೈತ್ರಿ ಸರಕಾರ ಕೂಡ ಮೇಕೆದಾಟು ಯೋಜನೆಗೆ ಅಡ್ಡಗಾಲು ಹಾಕಿದೆ. ಯೋಜನೆ ವಿರೋಧಿಸಿ ಮೇ ತಿಂಗಳಲ್ಲಿ ಅಲ್ಲಿನ ವಿಧಾನ ಸಭೆ ನಿರ್ಣಯ ತೆಗೆದುಕೊಂಡಿತ್ತು. ಇದಕ್ಕೆ ಮುನ್ನವೇ ಹಿಂದಿನ ಡಿಎಂಕೆ ಸರಕಾರ 2026ರ ಮಾರ್ಚ್ 4ರಂದು ಕೇಂದ್ರ ಜಲಶಕ್ತಿ ಇಲಾಖೆಗೆ ಪತ್ರ ಬರೆದು, ‘ಮೇಕೆದಾಟು ಯೋಜನೆಗೆ ಸಂಬಂಧಿಸಿ ಕಾವೇರಿ ನ್ಯಾಯಾಧೀಕರಣ-2ನ್ನು ರಚನೆ ಮಾಡಬೇಕು ಮತ್ತು ಕರ್ನಾಟಕದ ಯಾವುದೇ ಉದ್ದೇಶಿತ ಯೋಜನೆಗಳಿಗೆ ಅನುಮತಿ ನೀಡಬಾರದು’ ಎಂಬ ಒತ್ತಡ ಹೇರಿತ್ತು ಎನ್ನುವುದು ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಸೋತು ಅಧಿಕಾರ ಕಳೆದುಕೊಂಡಿದೆ. ಆದರೆ, ಮೇಕೆದಾಟು ವಿರೋಧದ ವಿಷಯದಲ್ಲಿ ಹೊಸ ಸರಕಾರವೂ ಸಕ್ರಿಯತೆ ಪ್ರದರ್ಶಿಸಿ, ಯೋಜನೆ ವಿರುದ್ಧ ಸರ್ವಾನುಮತದ ನಿರ್ಣಯ ತೆಗೆದುಕೊಂಡಿದೆ. ಡಿಎಂಕೆ ಸರಕಾರ 2025ರ ಡಿಸೆಂಬರ್ ಮತ್ತು 2026ರ ಮಾರ್ಚ್ ತಿಂಗಳಲ್ಲಿ ಕೇಂದ್ರಕ್ಕೆ ಸಲ್ಲಿಸಿದ್ದ 2ನೇ ಕಾವೇರಿ ನ್ಯಾಯಾಧೀಕರಣ ಬೇಡಿಕೆಯ ಅರ್ಜಿ ಬಗ್ಗೆ ಶೀಘ್ರದ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತ.ನಾಡು ಹೊಸ ಸರಕಾರವು ಕೇಂದ್ರ ಸರ್ಕಾರದ ಮೇಲೆ ಮತ್ತೆ ಒತ್ತಡ ಮುಂದುವರಿಸಿದೆ.
ಇದನ್ನೂ ಓದಿ: Raghav Sharma Nidle Column: ರಾಮಭಕ್ತರ ಹೃದಯ ಕಲಕಿದ ಹುಂಡಿ ಕಳವು
ಅಚ್ಚರಿಯ ವಿಷಯ ಏನೆಂದರೆ, 2026 ಮಾರ್ಚ್ ತಿಂಗಳಲ್ಲಿ ಬರೆಯಲಾಗಿದ್ದ ಪತ್ರದ ಮೇಲೆ ಕ್ರಮ ಕೈಗೊಳ್ಳಿ ಎಂದು ಮೇ 2ರಂದು ತ.ನಾಡು ಜಲ ಇಲಾಖೆ ಉನ್ನತಾಧಿಕಾರಿ ಕೇಂದ್ರ ಜಲಶಕ್ತಿ ಇಲಾಖೆಗೆ ಮತ್ತೊಂದು ಪತ್ರ ಬರೆದಿದ್ದರು. ಮೇ.2ರಂದು ತಮಿಳುನಾಡಿನಲ್ಲಿ ಯಾವುದೇ ಸರಕಾರ ಅಧಿಕಾರದಲ್ಲಿರಲಿಲ್ಲ. ಏಪ್ರಿಲ್‌ನಲ್ಲಿ ಚುನಾವಣೆ ನಡೆದದ್ದರಿಂದ, ಎಲ್ಲಾ ರಾಜಕೀಯ ಪಕ್ಷಗಳು ಮೇ 4ರ ವಿಧಾನಸಭೆ ಫಲಿತಾಂಶವನ್ನು ಎದುರು ನೋಡುತ್ತಿದ್ದವು. ಹಾಗಂತ, ರಾಜ್ಯದ ಅಧಿಕಾರಿಗಳು ಸುಮ್ಮನೆ ಕೂರಲಿಲ್ಲ. ಸರಕಾರ ಇಲ್ಲದಿದ್ದರೇ ನಂತೆ, ಸ್ವಯಂಪ್ರೇರಿತರಾಗಿ ಕೇಂದ್ರಕ್ಕೆ ಪತ್ರ ಬರೆದು ಒತ್ತಡ ಹೇರುವ ಕಾರ್ಯ ಮುಂದುವರಿಸಿದ್ದರು.
ಅಂದರೆ, ತ.ನಾಡು ಅಧಿಕಾರಶಾಹಿ ಕೂಡ ಕಾವೇರಿ ವಿಷಯದಲ್ಲಿ ಎಷ್ಟೊಂದು ಸಕ್ರಿಯ ಮತ್ತು ತ್ವರಿತ ಗತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎನ್ನುವುದಕ್ಕೆ ಇದುವೇ ಸಾಕ್ಷಿ. ಈಗ ಕೇಂದ್ರಕ್ಕೆ ಮತ್ತೊಮ್ಮೆ ಒತ್ತಡ ಹೇರಬೇಕು ಎಂದು ವಿಪಕ್ಷ ನಾಯಕ ಉದಯನಿಽ ಸ್ಟಾಲಿನ್ ಟಿವಿಕೆ-ಕಾಂಗ್ರೆಸ್ ಸರಕಾರವನ್ನು ಒತ್ತಾಯಿಸಿದ್ದು, ಹಿಂದಿನ ಡಿಎಂಕೆ ಸರಕಾರದ ಪತ್ರಗಳನ್ನು ಉಖಿಸಿ ಮತ್ತೊಮ್ಮೆ ಪತ್ರ ಬರೆಯುವಂತೆ ಒತ್ತಾಯಿಸಿದ್ದಾರೆ.
ಮೇ 2ರಂದು ಕೇಂದ್ರಕ್ಕೆ ತ.ನಾಡು ನೀಡಿದ್ದ ಪತ್ರದ ಪ್ರಮುಖ ಅಂಶಗಳು ಹೀಗಿವೆ :
೧. ಕಾವೇರಿ ನದಿ ನೀರಿನ ಬಳಕೆ, ನಿಯಂತ್ರಣ ಮತ್ತು ಹಂಚಿಕೆಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸಲು ಹೊಸ ನ್ಯಾಯಾಧೀಕರಣ ರಚನೆ.
೨. ಕರ್ನಾಟಕ ಸರಕಾರ ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಎಂಬಲ್ಲಿ ಪ್ರಮುಖ ಜಲಾಶಯ ನಿರ್ಮಿಸಲು ಕೈಗೊಂಡಿರುವ ಏಕಪಕ್ಷೀಯ ನಿರ್ಧಾರವನ್ನು ತ.ನಾಡು ತೀವ್ರವಾಗಿ ವಿರೋಧಿಸುತ್ತದೆ.
೩. ಮೇಕೆದಾಟು ಯೋಜನೆಯಿಂದಾಗಿ ತಮಿಳುನಾಡಿನ ಜನರಿಗೆ ಮತ್ತು ರೈತರಿಗೆ ಸಿಗಬೇಕಾದ ನೀರಿನ ಪ್ರಮಾಣ ಕಡಿಮೆಯಾಗುತ್ತದೆ ಮತ್ತು ಇದು ರೈತರ ಹಿತಾಸಕ್ತಿಗಳಿಗೆ ಧಕ್ಕೆ ತರುತ್ತದೆ.
೪. ನ್ಯಾಯಾಧೀಕರಣದ ರಚನೆ ಮತ್ತು ಐತೀರ್ಪು ಬರುವವರೆಗೆ, ಮೇಕೆದಾಟು ಯೋಜನೆ ಅಥವಾ ಕಾವೇರಿ ನದಿ ಮತ್ತು ಉಪನದಿಗಳಿಗೆ ಅಡ್ಡಲಾಗಿ ಯಾವುದೇ ಹೊಸ ಯೋಜನೆ ಕೈಗೆತ್ತಿಕೊಳ್ಳಬಾರದು ಎಂಬ ನಿರ್ದೇಶನ ನೀಡಬೇಕು.
೫. ಮೇಕೆದಾಟು ವಿವಾದ ಆದಷ್ಟು ಬೇಗ ಬಗೆಹರಿಸಲು ಕೇಂದ್ರ ಸರಕಾರ ತಕ್ಷಣವೇ ಹೊಸ ಕಾವೇರಿ ನ್ಯಾಯಾಧೀಕರಣ ರಚನೆ ಮಾಡಬೇಕು.
ವಿಪರ್ಯಾಸ ಎಂದರೆ, ತಮಿಳುನಾಡು ಇಷ್ಟೊಂದು ಕ್ಷಿಪ್ರಗತಿಯಲ್ಲಿ ಮೇಕೆದಾಟು ವಿರೋಧಿ ಅಭಿಯಾನ ವನ್ನು ಕೇಂದ್ರದ ಮುಂದೆ ಮಾಡುತ್ತಿದ್ದರೂ ಕರ್ನಾಟಕದ ಕಾಂಗ್ರೆಸ್ ಸರಕಾರ ಈ ದಿಕ್ಕಿನಲ್ಲಿ ಏನೇನು ಕ್ರಮ ಕೈಗೊಂಡಿದೆ ಎನ್ನುವುದು ಇನ್ನೂ ಬೆಳಕಿಗೆ ಬಂದಿಲ್ಲ. ಸಿದ್ದರಾಮಯ್ಯ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಿ ತಾವು ಗದ್ದುಗೆ ಏರಲು ಬಯಸಿದ್ದ, ಆಗ ಜಲ ಸಂಪನ್ಮೂಲ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅವರಿಗೆ ತಮಿಳುನಾಡು ಬರೆದಿದ್ದ ಪತ್ರಗಳ ಬಗ್ಗೆ ಅರಿವಿತ್ತೇ ಇಲ್ಲವೇ ಎನ್ನುವ ಖಚಿತತೆ ಇಲ್ಲ. ಒಂದು ವೇಳೆ ಈ ಕುರಿತ ಮಾಹಿತಿ ಅವರಿಗೆ ಇತ್ತು ಎನ್ನುವುದಾದರೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೇಲಾದರೂ ಅವರಿಗೆ ಜಲ ಇಲಾಖೆ ಅಧಿಕಾರಿಗಳು ಮೇಕೆದಾಟು ಕುರಿತು ಪ್ರತಿತಂತ್ರಗಳ ರೂಪಿಸುವ ಬಗ್ಗೆ ತಿಳಿಸಬೇಕಿತ್ತು. ಒಂದುವೇಳೆ ಪ್ರತಿತಂತ್ರಗಳನ್ನು ರೂಪಿಸಿದ್ದಾರೆ ಎನ್ನುವುದಾದರೆ ಅದನ್ನು ಸಾರ್ವಜನಿಕ ಗೊಳಿಸುವ ಕೆಲಸವನ್ನಾ ದರೂ ಸರಕಾರ ಮಾಡಬೇಕಿತ್ತು. ಆದರೆ, ಅದ್ಯಾವುದೂ ಆಗಿಲ್ಲ.
ನನಗೆ ಜಲಸಂಪನ್ಮೂಲ ಖಾತೆ ಬೇಡ ಎಂದು ಭಾರದ ಮನಸ್ಸಿನಿಂದ ಇಲಾಖೆಯ ಜವಾಬ್ದಾರಿ ಸ್ವೀಕರಿಸಿ ರುವ ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರಿಗೆ ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡಿನ ಒತ್ತಡ ತಂತ್ರಗಳ ತೀವ್ರತೆಯ ಅರಿವಿದೆಯೋ ಇಲ್ಲವೋ ಎನ್ನುವುದು ಗೊತ್ತಾಗಬೇಕಷ್ಟೇ.
ಮೇಕೆದಾಟು ಯೋಜನೆ ಡಿ.ಕೆ. ಶಿವಕುಮಾರ್ ಅವರ ಮಹತ್ವಾಕಾಂಕ್ಷಿ ಯೋಜನೆ. ಇದಕ್ಕಾಗಿ ವಿಧಾನಸಭೆ ಚುನಾವಣೆ ಮುನ್ನ ಪಾದಯಾತ್ರೆಯನ್ನೂ ಕೈಗೊಂಡಿದ್ದರು. ಯೋಜನೆಗೆ ತಡೆಯೊಡ್ಡುವ ಸಲುವಾಗಿಯೇ ತ.ನಾಡು ನ್ಯಾಯಾಧೀಕರಣ ರಚನೆಯ ಹೊಸ ರಾಗ ಎಳೆದಿದೆ. ಮೊದಲಿಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯುಎಂಎ) ಸಭೆಯಲ್ಲಿ ಮೇಕೆದಾಟು ಚರ್ಚೆಗೆ ವಿರೋಧ ವ್ಯಕ್ತಪಡಿಸುತ್ತಾ, ಒಮ್ಮೆಯೂ ಸಿಡಬ್ಲ್ಯುಎಂಎ ಸಭೆಯಲ್ಲಿ ಮೇಕೆದಾಟು ಕುರಿತ ಚರ್ಚೆಯೇ ಆಗದಂತೆ ನೋಡಿಕೊಂಡ ತಮಿಳುನಾಡಿಗೆ 2025ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ಸಣ್ಣ ಹಿನ್ನಡೆ ತಂದಿತ್ತು. ಮೇಕೆದಾಟು ಯೋಜನೆಗೆ ಸಂಬಂಧಿಸಿ ತ.ನಾಡು ಸಲ್ಲಿಸಿದ್ದ ಅರ್ಜಿಯನ್ನು ನಿವೃತ್ತ ಸಿಜೆಐ ಬಿ.ಆರ್.ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ ರದ್ದು ಮಾಡಿತ್ತು. ಮೇಕೆದಾಟು ಕುರಿತ ಪರಿಷ್ಕೃತ ಡಿಪಿಆರ್ ಸಲ್ಲಿಕೆಗೆ ಕರ್ನಾಟಕಕ್ಕೆ ಅವಕಾಶ ನೀಡಿದ್ದ ಪೀಠ, ಕರ್ನಾಟಕ ನೀಡುವ ಪರಿಷ್ಕೃತ ಡಿಪಿಆರ್‌ಗೆ ಆಕ್ಷೇಪಣೆ ಸಲ್ಲಿಸುವ ಸ್ವಾತಂತ್ರ್ಯ ನೀಡಿತ್ತು. ಈಗ ಉದ್ದೇಶಿತ ಮೇಕೆದಾಟು ಯೋಜನೆಯ ಬುಡಕ್ಕೇ ಕೈ ಹಾಕಿರುವ ತಮಿಳುನಾಡು, ಕಾವೇರಿ 2ನೇ ನ್ಯಾಯಾಽಕರಣ ರಚನೆ ಮಾಡಿ ಎಂದು ಕೇಂದ್ರದ ಮುಂದೆ ಹಠಹಿಡಿದು ಕುಳಿತಿದೆ.
ಕೆಲ ದಿನಗಳ ಹಿಂದೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಜಲವ್ಯಾಜ್ಯಗಳ ಬಗ್ಗೆ ಗೊತ್ತಿರುವ ಹಿರಿಯ ತಜ್ಞರೊಬ್ಬರಿಗೆ ಫೋನ್ ಮಾಡಿ, ಮೇಕೆದಾಟುವಿಗೆ ಸಂಬಂಧಿಸಿ ನ್ಯಾಯಾಧೀಕರಣ ರಚನೆ ಮಾಡಿ ಎಂದು ತಮಿಳುನಾಡಿನವರು 2-3 ಬಾರಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ನಮ್ಮ ರಾಜ್ಯ ಸರಕಾರಕ್ಕೆ ಇದರ ಬಗ್ಗೆ ಮಾಹಿತಿಯಾದರೂ ಇದೆಯಾ? ತ.ನಾಡು ಒತ್ತಡಕ್ಕೆ ಪ್ರತಿಯಾಗಿ ನಮ್ಮವರು ಏನು ಪ್ಲಾನ್ ಮಾಡುತ್ತಿzರೆ ಎಂದು ಕೇಳಿದರಂತೆ. ದೇವೇಗೌಡರಿಗೆ ಈ ಇಳಿ ವಯಸ್ಸಿನಲ್ಲೂ ಕಾವೇರಿ ಬಗ್ಗೆ ಇರುವ ಕಾಳಜಿ ಸರಕಾರಕ್ಕೆ, ಅಧಿಕಾರಿಗಳಿಗೆ ಮತ್ತು ರಾಜ್ಯದ ಸಂಸದರಿಗೆ ಇಲ್ಲ. ಇದು ಅನೇಕ ಬಾರಿ ಸಾಬೀತಾಗಿದೆ.
ಇತ್ತೀಚಿಗಷ್ಟೇ, ಪೆನ್ನಾರ್ ನ್ಯಾಯಾಽಕರಣ ರಚನೆ ಮಾಡಲು ಕೇಂದ್ರ ಸರಕಾರ ಮತ್ತು ಸುಪ್ರೀಂ ಕೋರ್ಟ್ ಮುಂದೆ ಯಶಸ್ವಿಯಾದ ತಮಿಳುನಾಡು, ಮೇಕೆದಾಟು ವಿಚಾರ ಕೂಡ ನ್ಯಾಯಾಧೀಕರಣ ದಲ್ಲಿ ತೀರ್ಮಾನ ವಾಗಲಿ ಎಂಬ ಖಚಿತ ನಿಲುವಿಗೆ ಬಂದಿದೆ. ಜಲವ್ಯಾಜ್ಯಗಳಿಗೆ ಸಂಬಂಧಿಸಿ ನ್ಯಾಯಾಧೀಕರಣಗಳನ್ನು ರಚನೆ ಮಾಡುತ್ತಾ ಕೂರುವುದು ಕೇಂದ್ರದ ಆಸಕ್ತಿಯ ವಿಷಯವೇನಲ್ಲ. ರಾಜ್ಯಗಳು ಮಾತುಕತೆ ನಡೆಸಿ, ಬಿಕ್ಕಟ್ಟು ಪರಿಹರಿಸಿಕೊಳ್ಳುವುದೇ ಸೂಕ್ತ ಎಂದು ಎಷ್ಟೋ ಬಾರಿ ಕೇಂದ್ರದ ವಕೀಲರು ಸುಪ್ರೀಂ ಕೋರ್ಟ್ ಮುಂದೆ ಹೇಳಿರುವುದೇ ಇದಕ್ಕೆ ಸಾಕ್ಷಿ. ಆದರೆ, ಒಂದು ರಾಜ್ಯ ಒಪ್ಪಿ ಮತ್ತೊಂದು ರಾಜ್ಯ ಒಪ್ಪದಿದ್ದಾಗ ಮಧ್ಯಮ ಮಾರ್ಗ ಕಂಡುಕೊಳ್ಳುವುದು ಕೇಂದ್ರಕ್ಕೆ ಅನಿವಾರ್ಯವಾಗುತ್ತದೆ.
ಪೆನ್ನಾರ್ ವಿಷಯದಲ್ಲೂ ತಮಿಳುನಾಡು ಹಠಕ್ಕೆ ಮಣಿಯುವುದು ಕೇಂದ್ರಕ್ಕೆ ಅನಿವಾರ್ಯ ವಾಯ್ತು. ಈಗ ಮೇಕೆದಾಟು ವಿಷಯದಲ್ಲೂ ತ.ನಾಡು ನಿಲುವು ಅಚಲವಾಗಿರಲಿದೆ. ಕೇಂದ್ರ ಸರಕಾರಕ್ಕೂ ಕರ್ನಾಟಕ-ತಮಿಳುನಾಡು ತಿಕ್ಕಾಟ ಪರಿಹರಿಸುವುದು ದುಸ್ತರವಾಗುವುದು ನಿಶ್ಚಿತ. ಹೀಗಿದ್ದಾಗ ಇದಕ್ಕೆ ಪರಿಹಾರ ಮಾರ್ಗ ಯಾವುದು?
ಕೇಂದ್ರ ಜಲ ಆಯೋಗವು (ಸಿಡಬ್ಲ್ಯುಸಿ) ಕೇಂದ್ರ ಜಲ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ತಂಡವೇ ವಿನಃ ಅದಕ್ಕೆ ಕಾನೂನಾತ್ಮಕ ಅಧಿಕಾರಗಳಿಲ್ಲ. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಆಯೋಗ ಕ್ಕಿಂತ ಹೆಚ್ಚು ಅಧಿಕಾರಗಳಿದ್ದರೂ, ತ.ನಾಡು ಅಸಮ್ಮತಿಯನ್ನು ಮೀರಿ ಮೇಕೆದಾಟು ಯೋಜನೆಗೆ ಅನುಮತಿ ನೀಡಲು ಅದಕ್ಕೆ ಸಾಧ್ಯವಾಗುವುದೇ ಎನ್ನುವುದು ಪ್ರಶ್ನೆ.
ಹೀಗಿದ್ದಾಗ, ಕೇಂದ್ರ ಜಲ ಇಲಾಖೆ, ಪರಿಸರ ಸಚಿವಾಲಯ ವಾಸ್ತವ ಸ್ಥಿತಿ ಅರಿತುಕೊಂಡು ಮೇಕೆದಾಟು ಜಲಾಶಯದ ಅನುಕೂಲಗಳನ್ನು ಅರ್ಥಮಾಡಿಕೊಂಡು ದಿಟ್ಟ ನಿರ್ಧಾರವೊಂದನ್ನು ತೆಗೆದುಕೊಳ್ಳಬೇಕು ಮತ್ತು ರಾಜ್ಯದ ಯೋಜನೆಗೆ ಅವಕಾಶ ನೀಡಬೇಕು. ಬದಲಿಗೆ, ಈ ಯೋಜನೆ ಯನ್ನೂ ನ್ಯಾಯಾಧೀಕರಣದ ಅಂಗಳಕ್ಕೆ ಕೊಂಡೊಯ್ದಲ್ಲಿ ಅದಕ್ಕಿಂತ ದೊಡ್ಡ ವಿಪರ್ಯಾಸ ಮತ್ತೊಂದಿರದು. ಹಾಗೊಂದು ವೇಳೆ, ತ.ನಾಡು ಬಯಸಿದಂತೆ ನ್ಯಾಯಾಧೀಕರಣ ರಚನೆಯಾದಲ್ಲಿ, ಮೇಕೆದಾಟು ಜಲಾಶಯ ನಿರ್ಮಾಣ ಮಾಡಿ 35-40 ಟಿಎಂಸಿ ಸಂಗ್ರಹ ಮಾಡಬೇಕೆಂಬ ಮಹತ್ವಾ ಕಾಂಕ್ಷೆಯನ್ನು ಕರ್ನಾಟಕ ಸದ್ಯದ ಮಟ್ಟಿಗೆ ಕೈಬಿಡುವುದೇ ಉತ್ತಮ!
ಜಲವ್ಯಾಜ್ಯಗಳ ವಿಚಾರದಲ್ಲಿ ಕೇಂದ್ರ ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳಬಾರದು ಎನ್ನುವುದೇ ನೋ ನಿಜ. ಹಾಗಂತ, ತಮಿಳುನಾಡು ವಿರೋಧಿಸುತ್ತದೆ ಎಂಬ ಏಕೈಕ ಕಾರಣಕ್ಕೆ ಕರ್ನಾಟಕದ ಹಿತಾಸಕ್ತಿಗಳನ್ನೂ ಬದಿಗೆ ಸರಿಸಲು ಸಾಧ್ಯವಿಲ್ಲ. ಕೆಲವೊಮ್ಮೆ, ಕೇಂದ್ರ ಸರಕಾರದ ಮೇಲೆ ರಾಜ್ಯ ಗಳು ರಾಜಕೀಯವಾಗಿಯೂ ಒತ್ತಡ ಹಾಕಬೇಕಾಗುತ್ತದೆ. ಇದನ್ನು ತಮಿಳುನಾಡು ಹಿಂದಿನಿಂದಲೂ ಮಾಡಿಕೊಂಡು ಬಂದಿದೆ. 2014ರಿಂದ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವಿದ್ದು, ಮೂರು ಅವಧಿಗೂ ಕರ್ನಾಟಕ ದಿಂದ ಅತಿಹೆಚ್ಚು ಬಿಜೆಪಿ ಸಂಸದರು ಆಯ್ಕೆಯಾಗಿ ಕೇಂದ್ರದ ಸಂಖ್ಯಾಬಲ ಹಿಗ್ಗಿಸಿದ್ದಾರೆ. ಇದಕ್ಕೆ ಕಾರಣ- ಕರ್ನಾಟಕದ ಮತವರ್ಗ. ಇದನ್ನು ಕೇಂದ್ರ ಸರಕಾರವೂ ಅರಿತುಕೊಳ್ಳಬೇಕು.
ಮೇಕೆದಾಟು ಯೋಜನೆಗೆ ಅನುಮತಿ ನೀಡಿ ಎಂದು ಬಿಜೆಪಿ, ಕಾಂಗ್ರೆಸ್ ಸರಕಾರಗಳು ಕೇಂದ್ರಕ್ಕೆ ಪತ್ರ ಬರೆದ, ಮನವಿ ನೀಡಿದ್ದಕ್ಕೆ ಬಹುಶಃ ಲೆಕ್ಕವಿರಲಿಕ್ಕಿಲ್ಲ. ಇವೆ ಕೇಂದ್ರ ಸಚಿವರ ಜತೆಗೆ ಬರೀ ಫೋಟೋ ತೆಗೆಸಿ ಕೊಳ್ಳಲು ನೆಪವಾಗಿವೆಯೇ ವಿನಃ ಫಲಿತಾಂಶ ಮಾತ್ರ ಶೂನ್ಯ. ಸಿಎಂ ಡಿ.ಕೆ. ಶಿವಕುಮಾರ್ ಬಹುಶಃ ಸದ್ಯದ ಕೇಂದ್ರದ ಜಲಶಕ್ತಿ ಮಂತ್ರಿಗಳನ್ನು ಭೇಟಿ ಮಾಡಿ, ವಾಸ್ತವದ ಮನವರಿಕೆಗೆ ಯತ್ನಿಸಬಹುದು. ಆದರೆ, ಹೆಚ್ಚು ಸಂಸದರನ್ನು ಹೊಂದಿರುವ ರಾಜ್ಯ ಬಿಜೆಪಿ ನಿಲುವೇನು?
ಮೇಕೆದಾಟು ಮಾತ್ರವಲ್ಲ, ಮಹದಾಯಿ, ಕೃಷ್ಣಾ ಜಲವ್ಯಾಜ್ಯಗಳ ವಿಚಾರದಲ್ಲಿ ಅಗತ್ಯ ಅನುಮತಿ ಗಳನ್ನು ನೀಡಲು ನೀವು ಇಷ್ಟೊಂದು ವಿಳಂಬ ಮಾಡುತ್ತಿರುವುದರಿಂದ ನಮಗೆ ಕ್ಷೇತ್ರಗಳಲ್ಲಿ ಜನರ ಮುಂದೆ ಮುಖ ಎತ್ತಲು ಸಾಧ್ಯವಾಗುತ್ತಿಲ್ಲ ಎಂದು ಹೇಳುವ ಧೈರ್ಯವನ್ನು ಇನ್ನಾದರೂ ಬಿಜೆಪಿ ಸಂಸದರು ಪ್ರದರ್ಶಿಸುತ್ತಾರಾ? ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರಕಾರ 2023-24ರ ಕೇಂದ್ರ ಬಜೆಟ್‌ನಲ್ಲಿ ರೂ.5300 ಕೋಟಿ ಆರ್ಥಿಕ ನೆರವನ್ನು ಘೋಷಿಸಿತ್ತು. ಆದರೆ, ಇನ್ನೂ ಹಣ ಬಿಡುಗಡೆ ಮಾಡಿಲ್ಲ ಏಕೆ ಎಂಬ ಜನರ ಪ್ರಶ್ನೆಗೆ ಉತ್ತರ ನೀಡಲಾಗುತ್ತಿಲ್ಲ ಎಂಬ ಸತ್ಯವನ್ನು ಈಗಲಾದರೂ ಹೇಳುತ್ತಾರಾ?