ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ganesh Bhat Column: ಭಾರತದ ಜೆನ್ ಝೀ ಮುಂದಿನ ದಾರಿ ಯಾವುದು?

ಜೆನ್ ಝೀಯಲ್ಲಿರುವ ಅಗಾಧವಾದ ಮಾಹಿತಿಯ ಶಕ್ತಿಯು ಎರಡು ಅಲುಗಿನ ಕತ್ತಿಯಂತಿದೆ. ಅವರ ಶಕ್ತಿಯು ಸದುಪಯೋಗವಾದರೆ ಅವರು ದೇಶದ ಸಂಪತ್ತಾಗುತ್ತಾರೆ. ಜೆನ್ ಝೀಗಳ ದಾರಿತಪ್ಪಿಸುವ ಪ್ರಯತ್ನಗಳು ನಡೆಯುತ್ತಿವೆ. ಇದಾಗದಂತೆ ತಡೆಯಲು ಅವರಿಗೆ ಮಾದರಿ ವ್ಯಕ್ತಿತ್ವಗಳನ್ನು ತೋರಿಸಿ ಮಾರ್ಗದರ್ಶನ ಮಾಡುವುದು ಇಂದಿನ ಅಗತ್ಯವಾಗಿದೆ.

Ganesh Bhat Column: ಭಾರತದ ಜೆನ್ ಝೀ ಮುಂದಿನ ದಾರಿ ಯಾವುದು?

-

Profile
Ashok Nayak Jul 6, 2026 7:46 AM

ಒಳನೋಟ

- ಗಣೇಶ್ ಭಟ್

1997ರಿಂದ 2012ನೇ ಇಸವಿಯ ನಡುವೆ ಜನಿಸಿದ ಯುವ ಜನತೆಯನ್ನು ಜೆನ್ ಝೀ (ಜನರೇಶನ್ ಜೂಮರ್ಸ್) ಎಂದು ಕರೆಯಲಾಗುತ್ತದೆ. ಇವರನ್ನು ಡಿಜಿಟಲ್ ನೇಟಿ ಎಂದೂ ಗುರುತಿಸಲಾಗುತ್ತದೆ. ಏಕೆಂದರೆ ಇವರು ಹುಟ್ಟುತ್ತಲೇ ಸ್ಮಾರ್ಟ್ -ನ್‌ಗಳನ್ನು ಕಚ್ಚಿಕೊಂಡು ಬಂದವರು, ಯುಟ್ಯೂಬ, ವಾಟ್ಸಾಪ್, ಇನ್‌ಸ್ಟಾಗ್ರಾಂ ಮೊದಲಾದ ಸಾಮಾಜಿಕ ಮಾಧ್ಯಮಗಳಿಗೆ ಸಹಜವಾಗಿಯೇ ಹೊಂದಿ ಕೊಂಡವರು. ಇಂಟರ್ನೆಟ್ ಪ್ರಪಂಚಕ್ಕೆ ಚೆನ್ನಾಗಿ ತೆರೆದುಕೊಂಡವರಾದ ಕಾರಣ ಇವರಲ್ಲಿ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಸಾಕಷ್ಟು ಮಾಹಿತಿ ಇದೆಯಾದರೂ ಜೀವನಾನುಭವದ ಕೊರತೆಯುಳ್ಳ ಕಾರಣ ಒಂದಷ್ಟು ಜೆನ್ ಝೀಗಳು ಸಿನಿಕತನವನ್ನು ಬೆಳೆಸಿಕೊಂಡಿರುವ ಸಾಧ್ಯತೆಯೂ ಇದೆ. ಜೆನ್ ಝೀಯಲ್ಲಿರುವ ಅಗಾಧವಾದ ಮಾಹಿತಿಯ ಶಕ್ತಿಯು ಎರಡು ಅಲುಗಿನ ಕತ್ತಿಯಂತಿದೆ. ಅವರ ಶಕ್ತಿಯು ಸದುಪಯೋಗವಾದರೆ ಅವರು ದೇಶದ ಸಂಪತ್ತಾಗುತ್ತಾರೆ. ಜೆನ್ ಝೀಗಳ ದಾರಿತಪ್ಪಿಸುವ ಪ್ರಯತ್ನಗಳು ನಡೆಯುತ್ತಿವೆ. ಇದಾಗದಂತೆ ತಡೆಯಲು ಅವರಿಗೆ ಮಾದರಿ ವ್ಯಕ್ತಿತ್ವಗಳನ್ನು ತೋರಿಸಿ ಮಾರ್ಗದರ್ಶನ ಮಾಡುವುದು ಇಂದಿನ ಅಗತ್ಯವಾಗಿದೆ.

ಭಾರತವು ಈಗಷ್ಟೇ ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ತೆರೆದುಕೊಳ್ಳುತ್ತಿದೆ. ಇಂದಿನ ಎಐ ಹಾಗೂ ಇಲೆಕ್ಟ್ರಾನಿಕ್ಸ್ ಯುಗದಲ್ಲಿ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಸ್ವಾಯತ್ತತೆಯನ್ನು ಸಾಧಿಸದೆ ಭಾರತವು ಉತ್ಕೃಷ್ಟ ತಾಂತ್ರಿಕ ಸಾಧನೆಗಳನ್ನು ಮಾಡಲು ಸಾಧ್ಯವೇ ಇಲ್ಲ. ಭಾರತ ಸರಕಾರವು ಇದನ್ನು ಮನಗಂಡು ಸೆಮಿಕಂಡಕ್ಟರ್‌ಗಳನ್ನು ದೇಶೀಯವಾಗಿ ಉತ್ಪಾದಿಸುವ ಸಂಸ್ಥೆಗಳಿಗೆ ಭಾರಿ ಪ್ರಮಾಣ ದಲ್ಲಿ ಉತ್ಪಾದನಾಧಾರಿತ ಪ್ರೋತ್ಸಾಹಕ ಧನವನ್ನು ಒದಗಿಸುತ್ತಿದೆ. ಈಗಾಗಲೇ ದೇಶ ಹಾಗೂ ವಿದೇಶೀ ಸಂಸ್ಥೆಗಳು ಭಾರತದಲ್ಲಿ ಈ ನಿಟ್ಟಿನಲ್ಲಿ ಕೆಲಸವನ್ನು ಆರಂಭಿಸಿದ್ದು, 2026ರ ಅಂತ್ಯ ದೊಳಗೆ ಕನಿಷ್ಠ 4 ಕಂಪೆನಿಗಳು ಸೆಮಿಕಂಡಕ್ಟರ್‌ಗಳನ್ನು ಭಾರತದಲ್ಲಿ ಉತ್ಪಾದಿಸಲಿವೆ.

ಇದನ್ನೂ ಓದಿ: Ganesh Bhat Column: ಭಾರತದ ಪ್ರಜಾಪ್ರಭುತ್ವ ಎಷ್ಟು ಪ್ರಬುದ್ಧ ?

ಸೆಮಿಕಂಡಕ್ಟರ್‌ಗಳನ್ನು ತಯಾರು ಮಾಡುವ ಘಟಕಗಳ ನಿರ್ಮಾಣಕ್ಕೆ 1.2 ರಿಂದ 2 ಲಕ್ಷ ಕೋಟಿ ರುಪಾಯಿಗಳ ಭಾರೀ ಮೊತ್ತದ ಹೂಡಿಕೆ ಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಚಿಪ್‌ಗಳ ನಿರ್ಮಾಣಕ್ಕೆ ತರಬೇತಿ ಕೊಡುವ ಮೂಲಭೂತ ಸೌಕರ್ಯವನ್ನು ಕಲ್ಪಿಸಲು ಮಾಡಲು ಭಾರೀ ಮೊತ್ತದ ಹಣವು ಬೇಕಾಗುವುದರಿಂದ ಭಾರತದ ಯಾವುದೇ ಎಂಜಿನಿಯರಿಂಗ್ ಕಾಲೇಜುಗಳು ಅಥವಾ ಐಐಟಿಗಳಲ್ಲಿ ಸೆಮಿಕಂಡಕ್ಟರ್, ಚಿಪ್ ಫ್ಯಾಬ್‌ಗಳನ್ನು ನಿರ್ಮಿಸುವ ವಿಚಾರವಾಗಿ ಪ್ರಾಯೋಗಿಕ ತರಬೇತಿ ಕೊಡುವ ಲ್ಯಾಬ್‌ಗಳು ಇಲ್ಲ. ವಿದ್ಯಾರ್ಥಿಗಳಿಗೆ ಸೆಮಿಕಂಡಕ್ಟರ್ ಫ್ಯಾಕ್ಟರಿಗಳಿಗೆ ಪ್ರವೇಶದ ಅವಕಾಶ ವೇ ಇಲ್ಲ.

ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಬಾಂಬೆ ಐಐಟಿಯ ವಿದ್ಯಾರ್ಥಿಗಳು ಮಹತ್ತರವಾದ ಸಾಧನೆಯನ್ನು ಮಾಡಿದ್ದಾರೆ. ಐಐಟಿ ವಿದ್ಯಾರ್ಥಿಗಳಾದ ಆರ್ಯಮಾನ್ ಭಾಟಿಯಾ, ಅವಿನೀತ್ ಹಾಗೂ ಕಾರ್ತಿಕ್ ಡಾಗಾ ಇವರು ತಮ್ಮ ಗೆಳೆಯರ ಜೊತೆಗೆ ಸೇರಿಕೊಂಡು 10 ತಿಂಗಳುಗಳಲ್ಲಿ ಕೇವಲ 30 ಲಕ್ಷ ರುಪಾಯಿಗಳ ವೆಚ್ಚದಲ್ಲಿ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಲ್ಯಾಬೋರೇಟರಿ ಯನ್ನು ಸಿದ್ಧಪಡಿಸಿದ್ದಾರೆ.

ಇವರು ತಮ್ಮನ್ನು ಹ್ಯಾಕರ್ ಫ್ಯಾಬ್ ಐಐಟಿ ಬಿ ಎಂದು ಕರೆದುಕೊಂಡಿದ್ದಾರೆ. ಇವರು ಸಿಲಿಕಾನ್ ವೇಫರ್‌ಗಳನ್ನು ಚಿಪ್ ಆಗಿ ಪರಿವರ್ತಿಸುವ ಪ್ರಮುಖ ಮೂರು ಯಂತ್ರಗಳನ್ನು ತಯಾರಿಸಿದ್ದಾರೆ. ಡಿಎಲ್ ಮಾಲೆಸ್ ಲಿಥೋಗ್ರಫಿ ಯಂತ್ರದ ಮೂಲಕ ಬೆಳಕಿನ ಸಹಾಯದಿಂದ ವೇಫರ್ ಮೇಲೆ ಅತಿ ಸೂಕ್ಷ ವಿನ್ಯಾಸಗಳನ್ನು ಮುದ್ರಿಸಲಾಗುತ್ತದೆ.

ಪ್ರೆಸಿಶನ್ ಟ್ಯೂಬ್ ಫರ್ನೇಸ್ ಫಾರ್ ಸಿಲಿಕಾನ್ ಆಕ್ಸಿಡೇಶನ್ ಯಂತ್ರದ ಮೂಲಕ ಸಿಲಿಕಾನ್ ಅನ್ನು 1100 ಡಿಗ್ರಿ ಸೆಲ್ಸಿಯಸ್ ತನಕ ಬಿಸಿ ಮಾಡಿ ವೇಫರ್ ಮೇಲೆ ತೆಳುವಾದ ರಕ್ಷಣಾತ್ಮಕ ಪದರವನ್ನು ಹಾಕಲಾಗುತ್ತದೆ. ಡಿಸಿ ಪ್ಲಾಸ್ಮಾ ಸ್ಪುಟರರ್ ಯಂತ್ರವು ಲೋಹದ ತೆಳುವಾದ ಪದರವನ್ನು ವೇಫರ್ ಮೇಲೆ ಲೇಪಿಸುತ್ತದೆ. ಹ್ಯಾಕರ್ ಫ್ಯಾಬ್ ಐಐಟಿ ಬಿ ತಂಡವು ರಚಿಸಿರುವ ವಿನ್ಯಾಸಗಳು ಅತ್ಯಂತ ಚಿಕ್ಕವು. ಅವರು ರೂಪಿಸಿದ ಲೈಟ್-ಪ್ರಿಂಟಿಂಗ್ ಯಂತ್ರವು ಸುಮಾರು ಒಂದು ಮೈಕ್ರಾನ್ ಅಗಲದ ವಿನ್ಯಾಸಗಳನ್ನು ಸೃಷ್ಟಿಸಬಲ್ಲವು. ನಮ್ಮ ಯುವ ಜನತೆ ಎಂತಹ ಸವಾಲುಗಳನ್ನು ಕೂಡಾ ಯಶಸ್ವಿ‌ ಯಾಗಿ ನಿಭಾಯಿಸಬಲ್ಲರು ಎಂಬುದನ್ನು ಈ ಯುವ ವಿಜ್ಞಾನಿಗಳು ಸಾಧಿಸಿ ತೋರಿದ್ದಾರೆ. ಇಂದಿನ ಜೆನ್ ಝೀ ಹ್ಯಾಕರ್ ಫ್ಯಾಬ್ ಐಐಟಿ ಬಿ ತಂಡದ ಸಾಧನೆಯನ್ನು ಆದರ್ಶವಾಗಿ ಪರಿಗಣಿಸಬೇಕು.

Screenshot_6 ಒಕ

ಒಂದು ಬಿಲಿಯನ್ ಡಾಲರ್‌ಗಿಂತ ಹೆಚ್ಚು ಮೌಲ್ಯವನ್ನು ಹೊಂದಿದ ನವೋದ್ಯಮಗಳನ್ನು ಯುನಿ ಕಾರ್ನ್ ಸ್ಟಾರ್ಟ್ ಅಪ್ ಎಂದು ಕರೆಯಲಾಗುತ್ತದೆ. ಗ್ರಾಹಕರ ಮನೆಗಳಿಗೆ 10 ನಿಮಿಷದ ಒಳಗೆ ದಿನಸಿ ವಸ್ತುಗಳನ್ನು ತಲುಪಿಸುತ್ತಿರುವ ಯುನಿಕಾರ್ನ್ ಸ್ಟಾರ್ಟ್ ಅಪ್ ಝೆಪ್ರೋದ ಮೌಲ್ಯ ಸುಮಾರು 5.9 ಬಿಲಿಯನ್ ಡಾಲರ್‌ಗಳು (ಸುಮಾರು 55000 ಕೋಟಿ ರುಪಾಯಿಗಳು). 2021ರಲ್ಲಿ ಝೆಪ್ರೋವನ್ನು ಆರಂಭಿಸುವಾಗ ಸ್ಥಾಪಕರಾದ ಆದಿತ್ ಪಾಲಿಚ ಮತ್ತು ಕೈವಲ್ಯ ವೋಹ್ರಾ ಇವರ ವಯಸ್ಸು ಕ್ರಮವಾಗಿ ಕೇವಲ 20 ಹಾಗೂ 19. ಜಾಗತಿಕ ಇ ಕಾಮರ್ಸ್ ಮತ್ತು ಸರ್ವಿಸಸ್ ಸಂಸ್ಥೆಗಳಿಗೆ ಪೂರಕವಾಗಿ ಕೆಲಸ ಮಾಡುವ ಸಾಸ್ ವೇದಿಕೆಯಾದ ಸೈಟ್ ಜಿಪಿಟಿ ಹೆಸರಿನ ನವೋದ್ಯಮವನ್ನು ಆರಂಭಿಸಿದ ಭಾನು ತೇಜ ವಯಸ್ಸು 24. ಮುಂದಿನ ತಲೆಮಾರಿನ ಎಐ ಅಟೋಮೇಶನ್ ಟೂಲ್‌ ಗಳನ್ನು ತಯಾರು ಮಾಡುವ ಎಐ ರೆಲ್ಮ್ ಟೆಕ್ನಾಲಜೀಸ್ ಹೆಸರಿನ ನವೋದ್ಯಮವನ್ನು ರೂಪಿಸಿದ ರೌಲ್ ಜಾನ್ ಆಜು ಕೇವಲ 16 ವರ್ಷದ ಬಾಲ ಪ್ರತಿಭೆ.

ಎಐ ಮೂಲಕ ಉದ್ಯೋಗಾರ್ಥಿ‌ ಗಳ ಸಂದರ್ಶನ ಹಾಗೂ ಮೀಟಿಂಗ್‌ಗಳಿಗೆ ವೇದಿಕೆಯನ್ನು ಒದಗಿಸುವ ಲೇಝೀಜಾಬ್ ಸೀಕರ್ ಹೆಸರಿನ ನವೋದ್ಯಮವನ್ನು ಸೃಷ್ಟಿಸುವಾಗ ಸ್ಥಾಪಕ ರವಿತೇಜ ಬೀರೆಯ ವಯಸ್ಸು ಕೇವಲ 20. ಇವರೆ ಜೆನ್ ಜೀಗಳೇ. ಇಂಥವರಿಂದ ಇಂದಿನ ಜೆನ್ ಝೀಗಳು ಸೂರ್ತಿಯನ್ನು ಪಡೆಯಬೇಕು.

ಭಾರತದ ಇಂದಿನ ಚೆಸ್ ಸಾಧಕರಾದ ಡಿ ಗುಕೇಶ್, ಪ್ರeನಂದ, ಅರ್ಜುನ್ ಎರಿಗೈಸಿ, ವೈಶಾಲಿ ಇವರೆಲ್ಲರ ಸಾಧನೆ ಭಾರತೀಯರಿಗೆ ಹೆಮ್ಮೆ. 2024ರಲ್ಲಿ ಡಿ ಗುಕೇಶ್ ವಲ್ಡ ಚೆಸ್ ಚಾಂಪಿಯನ್‌ಶಿಪ್ ಗೆzಗ ಆತನ ವಯಸ್ಸು 18-19ರ ಆಸುಪಾಸಿನಲ್ಲಿತ್ತು. ಕಳೆದ ವರ್ಷ ನಾರ್ವೆಯ ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ನಾರ್ವೆ ಚೆಸ್ ಸ್ಪರ್ಧೆಯಲ್ಲಿ ಡಿ ಗುಕೇಶ್ ವಿರುದ್ಧ ಸೋತು ಹತಾಶೆಯಿಂದ ಚೆಸ್ ಟೇಬಲ್‌ಗೆ ಗುದ್ದಿ ನಿರ್ಗಮಿಸಿದಾಗಲೂ ಯಾವುದೇ ಭಾವಾವೇಶಕ್ಕೆ ಒಳಗಾಗದೇ ಸಮಚಿತ್ತ ದಿಂದ ಚದುರಂಗದ ಕಾಯಿಗಳನ್ನು ಜೋಡಿಸಿ ನಡೆದ ಗುಕೇಶ್‌ನ ನಡತೆ ಸರ್ವ ಪ್ರಶಂಸೆಗೆ ಪಾತ್ರವಾಗಿತ್ತು.

ಪ್ರಜ್ಞಾನಂದ ರಮೇಶ್ ಬಾಬು ಸರಳತೆಗೆ ಹೆಸರಾದ ಇನ್ನೋರ್ವ ಚೆಸ್ ಪ್ರತಿಭೆ. ಇತ್ತೀಚೆಗೆ ನಡೆದ ಪ್ರತಿಷ್ಠಿತ ನಾರ್ವೆ ಚೆಸ್ 2026ರಲ್ಲಿ ಮ್ಯಾಗ್ನಸ್ ಕಾರ್ಲ್ಸನ್ ಅನ್ನು ಸತತವಾಗಿ ಎರಡು ಬಾರಿ ಸೋಲಿಸಿ, ಡಿ ಗುಕೇಶ್, ಅಲಿರೇಝಾ ಫಿರೌಝ್ಹಾ, ವಿನ್ಸೆಮ್ಟ ಕೇಯ್ಮರ್ ಮೊದಲಾದ ಗ್ರ್ಯಾಂಡ್ ಮಾಸ್ಟರ್‌ಗಳನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದಿದ್ದಾರೆ ಪ್ರಜ್ಞಾನಂದ. ಪ್ರeನಂದ ಅವರ ಸಹೋದರಿ ವೈಶಾಲಿ ರಮೇಶ್ ಬಾಬು ಫಿಡೆ ವಿಮೆ ಗ್ರ್ಯಾಂಡ್ ಸ್ವಿಸ್, ಮಹಿಳಾ ಚೆಸ್ ಟೂರ್ 2026ನ ಕ್ಷಿಪ್ರ ವಿಭಾಗ ಪ್ರಶಸ್ತಿಗಳನ್ನು ಗೆದ್ದಿzರೆ. ಚೆಸ್ ಒಲಿಂಪಿಯಾಡ್‌ನಲ್ಲಿ ತಂಡ ಸ್ಪರ್ಧೆಯಲ್ಲಿ ಚಿನ್ನದ ಪದಕ, ಟಾಟಾ ಸ್ಟೀಲ್ ಚೆಸ್ ಪ್ರಶಸ್ತಿ ಮೊದಲಾದವುಗಳನ್ನು ಗೆದ್ದ ಪ್ರತಿಭೆ ಅರ್ಜುನ್ ಎರಿಗೈಸಿ. 2000 ಇಸವಿಯ ನಂತರವಷ್ಟೇ ಜನಿಸಿದ ಈ ಚೆಸ್ ಪ್ರತಿಭೆಗಳನ್ನು ನಮ್ಮ ಜೆನ್ ಝೀ ಮಾದರಿಯಾಗಿ ಕಾಣಬೇಕು.

ಇಂದು ಭಾರತದ ಯುವಜನತೆಯ ವಿದ್ಯಾಭ್ಯಾಸಕ್ಕೆ ಸಾಕಷ್ಟು ಅವಕಾಶಗಳು ಇವೆ. 2014ರಲ್ಲಿ ಭಾರತದಲ್ಲಿ 387 ಮೆಡಿಕಲ್ ಕಾಲೇಜುಗಳಿದ್ದರೆ ಈಗ ಆ ಸಂಖ್ಯೆ 824ಕ್ಕೆ ಏರಿದೆ. ಮೆಡಿಕಲ್ ಸೀಟುಗಳ ಸಂಖ್ಯೆ 51384ರಿಂದ 128976ಕ್ಕೆ ಏರಿದೆ, ಐಐಟಿ ಸೀಟುಗಳ ಸಂಖ್ಯೆ 9784ರಿಂದ 18951ಕ್ಕೆ ಏರಿದೆ.

3345ರಷ್ಟಿದ್ದ ಎಂಜಿನಿಯರಿಂಗ್ ಕಾಲೇಜುಗಳ ಸಂಖ್ಯೆ 9100ಕ್ಕೆ ಏರಿದೆ. ವಿಶ್ವವಿದ್ಯಾಲಯಗಳ ಸಂಖ್ಯೆ 760ರಿಂದ 1300ಕ್ಕೆ ಏರಿದೆ. ವೃತ್ತಿ ಕೌಶಲ್ಯ ತರಬೇತಿ ನೀಡುವ ಕೈಗಾರಿಕಾ ತರಬೇತಿ ಸಂಸ್ಥೆಗಳ (ಐಟಿಐ) ಸಂಖ್ಯೆ 9977 ಇದ್ದಿದ್ದು, ಇಂದು ಅವುಗಳ ಸಂಖ್ಯೆ 14688 ಆಗಿದೆ. ಅಂದಿಗೆ ಹೋಲಿಸಿದರೆ ಭಾರತದಲ್ಲಿ ಉದ್ಯೋಗಾವಕಾಶ ಬಹಳಷ್ಟು ಉತ್ತಮವಾಗಿದೆ. ಸ್ಟಾರ್ಟ್ ಅಪ್ ಇಂಡಿಯಾದ ಯೋಜನೆಯ ಪರಿಣಾಮವಾಗಿ ದೇಶದಲ್ಲಿ ಕಳೆದ 12 ವರ್ಷಗಳಲ್ಲಿ 2.23 ಲಕ್ಷ ನವೋದ್ಯಮಗಳು ರೂಪುಗೊಂಡಿದ್ದು ಸುಮಾರು 25 ಲಕ್ಷ ಮಂದಿಗೆ ನೇರ ಉದ್ಯೋಗಗಳನ್ನು ಹಾಗೂ ಅಷ್ಟೇ ಮಂದಿಗೆ ಪರೋಕ್ಷ ಉದ್ಯೋಗಗಳನ್ನು ಕಲ್ಪಿಸಿವೆ.

ಮೇಕ್ ಇನ್ ಇಂಡಿಯಾ ಹಾಗೂ ಆತ್ಮ ನಿರ್ಭರ ಭಾರತಗಳು ಯುವಜನತೆಯ ಉದ್ಯೋಗಾವಕಾಶ ಗಳನ್ನು ಹೆಚ್ಚಿಸಿವೆ. ಇನ್ನು ಯುವ ಜನತೆಯಲ್ಲಿ ಸ್ವ ಉದ್ಯೋಗಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಕಳೆದ 12 ವರ್ಷಗಳಲ್ಲಿ 57.79 ಕೋಟಿ ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಯಡಿಯಲ್ಲಿ ಸುಮಾರು 40 ಲಕ್ಷ ಕೋಟಿ ರುಪಾಯಿಗಳ ಸಾಲ ಸೌಲಭ್ಯವನ್ನು ಒದಗಿಸಲಾಗಿದೆ. ಮುದ್ರಾ ಸಾಲ ಪಡೆದವರಲ್ಲಿ ಸರಿಸುಮಾರು 21% ಮಂದಿ ಯುವಜನರಾಗಿದ್ದಾರೆ.

ಇಂದಿನ ಯುಗದಲ್ಲಿ ಪ್ರತಿಭೆ ಮತ್ತು ಸಾಮರ್ಥ್ಯ ಇದ್ದವರಿಗೆ ಉದ್ಯೋಗದ ಕೊರತೆಯ ಸಮಸ್ಯೆ ಇಲ್ಲ. ದೇಶದದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಯ ಪರಿಣಾಮವಾಗಿ ಕಳೆದ 12 ವರ್ಷಗಳಲ್ಲಿ 27 ಕೋಟಿ ಮಂದಿ ಬಡತನದ ರೇಖೆಯಿಂದ ಹೊರಬಂದಿದ್ದಾರೆ ಹಾಗೂ ಕಡು ಬಡತನದಲ್ಲಿರುವವರ ಪ್ರಮಾಣ 27.1%ದಿಂದ 5.3%ಗೆ ಇಳಿದಿದೆ ಎಂದು ವಲ್ಡ ಬ್ಯಾಂಕ್ ಹೇಳಿದೆ. ಹೀಗಿರುವಾಗ ದೇಶದ ಯುವ ಜನತೆ ತಮ್ಮ ಭವಿಷ್ಯದ ಬಗ್ಗೆ ಅಷ್ಟಾಗಿ ಚಿಂತಿಸುವ ಅವಶ್ಯಕತೆ ಇಲ್ಲ.

ನೆರೆಯ ನೇಪಾಳದಲ್ಲಿ ಅಥವಾ ಬಾಂಗ್ಲಾದೇಶದಲ್ಲಿ ನಡೆದಂತೆ ಭಾರತದಲ್ಲೂ ಯುವಜನರನ್ನು ಸರಕಾರದ ವಿರುದ್ಧವಾಗಿ ಎತ್ತಿಕಟ್ಟಿ ಸರಕಾರವನ್ನು ಬದಲಾಯಿಸುವ ಪ್ರಯತ್ನಗಳು ಇತ್ತೀಚೆಗೆ ಆರಂಭವಾಗಿದೆ. ಅಭಿಜೀತ್ ದೀಪ್ಕೆಯ ನಾಯಕತ್ವದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಹೆಸರಿನ ಇನ್‌ಸ್ಟಾಗ್ರಾಂ ಅಕೌಂಟಿಗೆ ಸುಮಾರು ೨ ಕೋಟಿ ಮಂದಿ ಸದಸ್ಯರನ್ನಾಗಿಸಲಾಗಿದೆ. ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕಾ ಸೋರಿಕೆಯ ವಿಷಯವನ್ನೇ ನೆಪವಾಗಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯನ್ನು ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿಯು ಪ್ರತಿಭಟನೆಗಳನ್ನು ನಡೆಸುತ್ತಿದೆ.

ಇನ್‌ಸ್ಟಾಗ್ರಾಂನಲ್ಲಿ ಎರಡು ಕೋಟಿ ಫಾಲೋವರ್‌ಗಳನ್ನು ಹೊಂದಿದ್ದರೂ ಪ್ರತಿಭಟನೆಗಳಿಗೆ ಸೇರುವ ಜನರ ಸಂಖ್ಯೆ ಕೆಲವು ನೂರುಗಳನ್ನು ಮೀರುತ್ತಿಲ್ಲ. ಇದೀಗ ಸೋನಂ ವಾಂಗ್ಚುಕ್ ನೇತೃತ್ವ ದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹಕ್ಕೂ ದೊರೆಯುತ್ತಿರುವ ಪ್ರತಿಕ್ರಿಯೆ ಬಹಳ ನೀರಸ ವಾಗಿದೆ. ಪ್ರಕಾಶ್ ರಾಜ, ವಿಶಾಲ್ ದಾಲ್ದಾನಿ, ಅನುರಾಗ್ ಕಶ್ಯಪ್, ಸೋನಾಕ್ಷಿ ಸಿನ್ಹಾ, ದಿಯಾ ಮಿರ್ಝಾ ಮೊದಲಾದ ಸಿನೆಮಾ ಮಂದಿಗಳು ಸಿಜೆಪಿಗೆ ಬೆಂಬಲವನ್ನು ಸೂಚಿಸಿದ್ದಾರೆ. ಆದರೆ ಇವರೆ ನರೇಂದ್ರ ಮೋದಿ ನೇತೃತ್ವದ ಸರಕಾರವನ್ನು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿರುವು ದರಿಂದ ಅವರ ಸಿಜೆಪಿ ಬೆಂಬಲವು ಹೊಸಾ ಬಾಟಲಿಯಲ್ಲಿನ ಹಳೇ ಮದ್ಯದಂತೆ ಆಗಿದೆ.

ಕಮ್ಯುನಿಸ್ಟ್ ಪಕ್ಷದ ನಾಯಕಿ ಬೃಂದಾ ಕಾರಟ್ ಸಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಿ ಭಾಷಣ ಮಾಡಿರುವುದು, ಕಮ್ಯುನಿಸ್ಟ್ ಬೆಂಬಲಿತ ವಿದ್ಯಾರ್ಥಿ ಸಂಘಟನೆಗಳಾದ ಎಐಎಸ್‌ಎ, ಎಸ್‌ಎ-ಐಗಳು ಸಿಜೆಪಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವುದು, ಸಿಜೆಪಿಯ ಹಿಂದೆ ಕಮ್ಯುನಿ ಪಕ್ಷವು ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ. ‌

ಕಮ್ಯುನಿಸ್ಟ್ ಪಕ್ಷ, ಆಮ್ ಆದ್ಮಿ ಪಕ್ಷ, ಅಖಿಲೇಶ್ ಯಾದವ್, ಆದಿತ್ಯ ಠಾಕ್ರೆ, ಕೀರ್ತಿ ಆಝಾದ್, ಮೊಹುವಾ ಮೊಯಿತ್ರಾ ಮೊದಲಾದ ರಾಜಕೀಯ ಪಕ್ಷಗಳು ಹಾಗೂ ನಾಯಕರು ಸಿಜೆಪಿಯನ್ನು ಬೆಂಬಲಿಸುತ್ತಿರುವುದು ರಾಜಕೀಯ ಉದ್ದೇಶದಿಂದಲ್ಲದೇ ಬೇರೇನೂ ಅಲ್ಲ ಎನ್ನುವುದು ಜನತೆಗೆ ಅದರಲ್ಲೂ ಯುವಜನತೆಗೆ ಈಗಾಗಲೇ ಅರ್ಥವಾಗಿದೆ. ಎಲ್ಲದಕ್ಕೂ ಹೆಚ್ಚಾಗಿ ಭಾರತದ ಜೆನ್ ಝೀ ಇಂದು ರಚನಾತ್ಮಕ ಚಿಂತನೆಯಲ್ಲಿ ತೊಡಗಿರುವುದರಿಂದ ಅವರು ಜಿರಳೆಗಳಿಗೆ ಅಷ್ಟು ಸುಲಭ ವಾಗಿ ಆಹಾರವಾಗುತ್ತಿಲ್ಲ.