ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishweshwar Bhat Column: ಸ್ಟಾರ್‌ ಹೋಟೆಲಿನಲ್ಲಿ ಕೆಲಸ ಮಾಡಿದವರು ಸಿಕ್ಕಾಗ ಏನು ಮಾಡಬೇಕು ?

ಎಲ್ಲರಿಗೂ ತಾವು ಹೆಚ್ಚಿನ ಹಣವನ್ನು ತೆತ್ತು ಅಲ್ಲಿಗೆ ಬಂದಿರುತ್ತೇವೆ ಎಂಬ ಭಾವನೆ ಇರುತ್ತದೆ. ಹೀಗಾಗಿ ತಮಗೆ ವಿಶೇಷ ಸವಲತ್ತು, ಸೌಕರ್ಯ, ಗಮನ ಮತ್ತು ಮರ್ಯಾದೆ ಸಿಗಬೇಕು ಎಂದು ಅಪೇಕ್ಷಿಸುತ್ತಾರೆ. ಇವುಗಳ ಪೈಕಿ ಸ್ವಲ್ಪ ವ್ಯತ್ಯಯವಾದರೂ ಕಿರಿಕಿರಿ ಮಾಡುತ್ತಾರೆ ಅಥವಾ ಜಗಳವಾಡಲು ಹಿಂದೇಟು ಹಾಕುವುದಿಲ್ಲ.

ಸ್ಟಾರ್‌ ಹೋಟೆಲಿನಲ್ಲಿ ಕೆಲಸ ಮಾಡಿದವರು ಸಿಕ್ಕಾಗ ಏನು ಮಾಡಬೇಕು ?

-

ಇದೇ ಅಂತರಂಗ ಸುದ್ದಿ

ಹಿಂದಿನ ವರ್ಷ ನಾನು ಮಲೇಷಿಯಾದ ರಾಜಧಾನಿ ಕೌಲಾಲಾಂಪುರದ ‘ಫೋರ್ ಸೀಸನ್ಸ್’ ಹೋಟೆಲಿನ ಜನರಲ್ ಮ್ಯಾನೇಜರ್ ಜತೆ ಮಾತಾಡುತ್ತಿದ್ದೆ. ನಮ್ಮ ಮಾತುಕತೆ ಹೋಟೆಲಿ ನಲ್ಲಿ ಉಳಿದುಕೊಳ್ಳುವ ಗ್ರಾಹಕರ ಮನಸ್ಥಿತಿ ಮತ್ತು ಅವರ ವರ್ತನೆಯ ಬಗ್ಗೆ ಹೊರಳಿತು. ‘ಫೋರ್ ಸೀಸನ್ಸ್’ ಲಕ್ಸುರಿ ಹೋಟೆಲುಗಳ ಪೈಕಿ ಪ್ರಮುಖವಾದುದು.

ಸಾಮಾನ್ಯವಾಗಿ ಅಲ್ಲಿಗೆ ಲಾಟಪೂಟ ವ್ಯಕ್ತಿಗಳು ಬರುವುದಿಲ್ಲ. ಸಮಾಜದಲ್ಲಿ ಗಣ್ಯವ್ಯಕ್ತಿ ಗಳೆಂದು ಕರೆಯಿಸಿಕೊಂಡವರು, ಶ್ರೀಮಂತರು, ಸಿಲೆಬ್ರಿಟಿಗಳು, ಸಿನಿಮಾ ನಟರು, ಉದ್ಯಮಿ ಗಳು ಆಗಮಿಸುತ್ತಾರೆ. ಅಲ್ಲಿಗೆ ಬರುವವರೆಲ್ಲ ವಿವಿಐಪಿಗಳೇ. ಯಾರನ್ನೂ ಸಾಮಾನ್ಯರು ಎಂದು ಪರಿಗಣಿಸುವಂತಿಲ್ಲ.

‘ನಮ್ಮ ಹೋಟೆಲಿಗೆ ಬರುವ ವ್ಯಕ್ತಿಯ ಪರಿಚಯ ಇಲ್ಲದೇ ಹೋಗಬಹುದು. ಆದರೆ ನಮ್ಮಲ್ಲಿಗೆ ಬರುವವರೆಲ್ಲರೂ ಅತಿಗಣ್ಯ ವ್ಯಕ್ತಿಗಳೇ. ಯಾರನ್ನೂ ಲಘುವಾಗಿ ಪರಿಗಣಿಸು ವಂತಿಲ್ಲ’ ಎಂಬುದು ಆ ಹೋಟೆಲಿನ ಗೆಸ್ಟ್ ಮ್ಯಾನ್ಯುವಲ್‌ನಲ್ಲಿ ಬರೆದಿದೆ. ಇಂಥ ಹೋಟೆಲಿಗೆ ಬರುವವರೆಲ್ಲರೂ ಅತಿ ಗಣ್ಯ ವ್ಯಕ್ತಿಗಳು ಎಂದ ಮೇಲೆ ಅವರ ವರ್ತನೆಯೂ ಉನ್ನತ ಸ್ತರದಲ್ಲಿದ್ದಿರಬಹುದು ಎಂದು ಭಾವಿಸುವುದು ಸಹಜ.

ಬಹುತೇಕ ಸಂದರ್ಭದಲ್ಲಿ ಅದು ನಿಜ ಕೂಡ. ಆದರೆ ಶ್ರೀಮಂತರು ಅಂದರೆ ಪರಿಪೂರ್ಣರು ಎಂದು ಭಾವಿಸಬೇಕಿಲ್ಲ. ಅವರಲ್ಲಿಯೂ ಸಾಕಷ್ಟು ಗುಣದೋಷಗಳಿರುತ್ತವೆ. ಆ ಹೋಟೆಲಿ ಗೆ ಎಲ್ಲ ಮನಸ್ಥಿತಿಯವರೂ ಉಳಿಯಲು ಬರುತ್ತಾರೆ. ಅವರ ಭಾವನೆಗಳನ್ನು ಅರಿತು ಅವರೊಂದಿಗೆ ವ್ಯವಹರಿಸುವುದು ಬಹಳ ಮುಖ್ಯ.

ಎಲ್ಲರಿಗೂ ತಾವು ಹೆಚ್ಚಿನ ಹಣವನ್ನು ತೆತ್ತು ಅಲ್ಲಿಗೆ ಬಂದಿರುತ್ತೇವೆ ಎಂಬ ಭಾವನೆ ಇರುತ್ತದೆ. ಹೀಗಾಗಿ ತಮಗೆ ವಿಶೇಷ ಸವಲತ್ತು, ಸೌಕರ್ಯ, ಗಮನ ಮತ್ತು ಮರ್ಯಾದೆ ಸಿಗಬೇಕು ಎಂದು ಅಪೇಕ್ಷಿಸುತ್ತಾರೆ. ಇವುಗಳ ಪೈಕಿ ಸ್ವಲ್ಪ ವ್ಯತ್ಯಯವಾದರೂ ಕಿರಿಕಿರಿ ಮಾಡುತ್ತಾರೆ ಅಥವಾ ಜಗಳವಾಡಲು ಹಿಂದೇಟು ಹಾಕುವುದಿಲ್ಲ.

ಇದನ್ನೂ ಓದಿ: Vishweshwar Bhat Column: ಇನ್ನಷ್ಟು ಚೆಂದಗೊಳಿಸಲು ಸುಂದರ ಹೂವಿಗೆ ಬಣ್ಣ ಹಚ್ಚಬಾರದು !

ಸಾಮಾನ್ಯವಾಗಿ ಸ್ಟಾರ್ ಹೊಟೇಲುಗಳಲ್ಲಿ, ಗ್ರಾಹಕರು ಹೋಗುವಾಗ ಹೊತ್ತೊಯ್ಯುವ ಸಾಮಾನುಗಳನ್ನು ಇಡುವುದಿಲ್ಲ. ಆದರೆ ಕೆಲವು ಅತಿಥಿಗಳು ಹೋಟೆಲಿನ ಟವೆಲ್ಲುಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಾರೆ. ಕೆಲವು ಹೋಟೆಲುಗಳು ಅದನ್ನು ಪುರಸ್ಕರಿ ಸುವುದಿಲ್ಲ. ಆದರೆ ಅತಿಥಿಗಳ ಬ್ಯಾಗ್ ಚೆಕ್ ಮಾಡಲು ಆಗುವುದಿಲ್ಲ. ಅತಿಥಿಗಳು ಹೋಟೆಲಿ ನಿಂದ ಹೋದ ಬಳಿಕ ಅವರು ಟಾವೆಲ್ ಎಗರಿಸಿದ್ದು ಗೊತ್ತಾಗುತ್ತದೆ.

ಆಗ ಏನೂ ಮಾಡಲು ಆಗುವುದಿಲ್ಲ. ಕೆಲವು ಹೋಟೆಲುಗಳು ರೂಮು ಬಾಡಿಗೆ ದರ ನಿರ್ಧರಿಸುವಾಗಲೇ, ಟಾವೆಲ್‌, ಸೋಪ್, ಶಾಂಪೂ, ಟೂತ್ ಬ್ರಷ್, ರೇಜರ್ ಮುಂತಾದವು ಗಳ ಬೆಲೆಗಳನ್ನು ಸೇರಿಸಿರುತ್ತಾರೆ. ಅಂದರೆ ಅತಿಥಿಗಳು ರೂಮಿನಲ್ಲಿಟ್ಟ ಈ ವಸ್ತುಗಳನ್ನು ತೆಗೆದುಕೊಂಡು ಹೋದರೂ ತಲೆ ಕೆಡಿಸಿಕೊಳ್ಳುವುದಿಲ್ಲ.

ಕೆಲವು ಹೋಟೆಲುಗಳು, ‘ನಮ್ಮ ರೂಮಿನಲ್ಲಿಟ್ಟ ಯಾವುದಾದರೂ ವಸ್ತುಗಳು ನಿಮಗೆ ಇಷ್ಟವಾದರೆ, ಅವು ಮಾರಾಟಕ್ಕೆ ಸಿಗುತ್ತವೆ’ ಎಂದು ಬರೆದಿರುತ್ತವೆ. ಸಾಮಾನ್ಯವಾಗಿ ಇಂಥ ಸೂಚನೆಯನ್ನು ಹೋಟೆಲಿನ ಜನರಲ್ ಮ್ಯಾನೇಜರ್ ಅತಿಥಿಗಳಿಗೆ ತನ್ನ ಲೆಟರ್ ಹೆಡ್‌ನಲ್ಲಿ ನೀಡಿರುತ್ತಾನೆ. ಅಂದರೆ ರೂಮಿನಲ್ಲಿಟ್ಟ ಯಾವುದೇ ಸಾಮಾನುಗಳನ್ನು ತೆಗೆದುಕೊಂಡು ಹೋಗಬಾರದು ಎಂಬುದನ್ನು ಸೂಚ್ಯವಾಗಿ ರವಾನಿಸಿರುತ್ತಾರೆ. ಆದರೂ ಅತಿಥಿಗಳು ತಮ್ಮ ಅಸಲಿ ಬುದ್ಧಿಯನ್ನು ತೋರಿಸಿರುತ್ತಾರೆ.

ಇದರಲ್ಲಿ ಶ್ರೀಮಂತರು, ಅತಿ ಶ್ರೀಮಂತರು ಎಂಬ ಭೇದ-ಭಾವ ಇಲ್ಲ. ಇದು ಅವರವರ ನಸ್ಥಿತಿಗೆ ಸಂಬಂಧಿಸಿದ್ದು. ನ್ಯೂಯಾರ್ಕ್‌ನ ಪ್ರಮುಖ ಹೋಟೆಲೆಂದು ಕೆಲ ತಿಂಗಳುಗಳ ಹಿಂದೆ, ರೂಮಿನಲ್ಲಿಟ್ಟ ಟಾವೆಲ್ಲಿಗೆ ಎಲೆಕ್ಟ್ರಾನಿಕ್ ಟ್ಯಾಗ್ ಅಳವಡಿಸಿದ್ದಾಗಿಯೂ, ಯಾರಾ ದರೂ ಹೋಟೆಲ್‌ನಿಂದ ಹೊರಕ್ಕೆ ಯಾವುದೇ ಸಾಮಾನುಗಳನ್ನು ಎಗರಿಸಿಕೊಂಡು ಹೋದರೆ, ಬೀಪ್ ಸದ್ದು ಬರುವುದಾಗಿಯೂ ಘೋಷಿಸಿಕೊಂಡಿತ್ತು. ಆದರೆ ಇದಕ್ಕೆ ಅತಿಥಿ ಗಳಿಂದ ಮತ್ತು ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾಯಿತು.

‘ನಿಮ್ಮ ಹೋಟೆಲಿನಲ್ಲಿ ಉಳಿದುಕೊಂಡವರಿಗೆ ಕಳ್ಳ ಎಂಬ ಹಣೆಪಟ್ಟಿ ಹಚ್ಚಬೇಡಿ. ಅಷ್ಟಕ್ಕೂ ನಿಮ್ಮ ಹೋಟೆಲಿನಲ್ಲಿ ಉಳಿದುಕೊಳ್ಳಬೇಕು ಎಂಬ ಅನಿವಾರ್ಯವೇನಿದೆ?’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು. ಅಲ್ಲಿಗೆ ಆ ಹೋಟೆಲ್ ಆ ನಿರ್ಧಾರವನ್ನು ಕೈಬಿಟ್ಟಿತು.

ಆದರೆ ಹೋಟೆಲ್ ಆಡಳಿತ ಮಂಡಳಿಗೆ ಅತಿಥಿಗಳ ಈ ವರ್ತನೆ ತಲೆನೋವೇ. ಆದರೆ ದೊಡ್ಡ ದೊಡ್ಡ ಹೋಟೆಲುಗಳು ಈ ವಿಷಯದ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟಿವೆ. ಈ ವಸ್ತುಗಳನ್ನು ಸೇರಿಸಿಯೇ ರೂಮ್ ರೆಂಟ್ ತೆಗೆದುಕೊಳ್ಳುತ್ತವೆ. ಆದರೆ ಹೋಟೆಲಿನಲ್ಲಿ ಉಳಿದುಕೊಳ್ಳುವ ಎಲ್ಲ ಗ್ರಾಹಕರೂ ಹೀಗೆ ಮಾಡುವುದಿಲ್ಲ. ಆಗ ಹೋಟೆಲಿಗೆ ಲಾಭವೇ. ಈ ಕಾರಣದಿಂದ ಅದನ್ನು ಒಂದು ರಾದ್ಧಾಂತದ ವಿಷಯವಾಗಿ ಮಾಡುವುದಿಲ್ಲ. ಭಾರತೀಯ ರೈಲಿನಲ್ಲಿ ಯಾವ ವಸ್ತುವನ್ನೂ ಎಗರಿಸಿಕೊಂಡು ಹೋಗಲು ಆಗುವುದಿಲ್ಲ. ಚೊಂಬನ್ನು ಸಹ ಸರಪಣಿ ಕಟ್ಟಿ ಇಡುತ್ತಿದ್ದರು.

ಸೀಟಿನಿಂದ ಸ್ಪಾಂಜನ್ನು ಕೀಳಲು ಆಗುವುದಿಲ್ಲ. ಫ್ಯಾನ್ ಕಿತ್ತುಕೊಂಡು ಹೋಗಲು ಸಾಧ್ಯ‌ ವಿಲ್ಲ. ಅದೇ ನಿಯಮವನ್ನು ಕೆಲವು ಹೋಟೆಲುಗಳು ಪಾಲಿಸುತ್ತಿವೆ. ಆದರೆ ಟಾವೆಲ್ ಎಗರಿಸುವ ವಿಷಯದಲ್ಲಿ ‘ಫೂಲ್ ಪ್ರೂಫ್’ ವ್ಯವಸ್ಥೆಯನ್ನು ತರಲು ಸಾಧ್ಯವಾಗಿಲ್ಲ. ನೂರು-ಐನೂರು ರೂಮುಗಳಿರುವ ಹೋಟೆಲ್ ನಿಭಾಯಿಸುವುದು ಸಣ್ಣ ಕೆಲಸವಲ್ಲ. ಐನೂರು ಸಂಸಾರಗಳನ್ನು ನಿಭಾಯಿಸಿದಂತೆ. ಮಧ್ಯರಾತ್ರಿ ಫೋನ್ ಮಾಡಿ, ಶಾವರ್‌ನಿಂದ ಹರಿದ ನೀರು ರೂಮಿನಲ್ಲ ತುಂಬಿಕೊಂಡಿದೆ ಎಂದು ಹೇಳುತ್ತಾರೆ.

ಇನ್ಯಾರೋ ಮೂರು ಗಂಟೆಗೆ ಫೋನ್ ಮಾಡಿ, ‘ಮಜ್ಜಿಗೆ ಬೇಕಿತ್ತು. ರೂಮಿಗೆ ಕಳಿಸಿ’ ಅಂತಾರೆ. ಯಾರಿಗೂ ಇಲ್ಲ ಎಂದು ಹೇಳುವಂತಿಲ್ಲ. ಒಂದು ವೇಳೆ ಇಲ್ಲ ಅಂದರೆ ಅದನ್ನೇ ದೊಡ್ಡ ವಿಷಯವಾಗಿ ಮಾಡುತ್ತಾರೆ. ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿಗಳು ಎಂದು ಯಾರನ್ನು ಭಾವಿಸುತ್ತೇವೋ, ಅವರ ವರ್ತನೆ ಭಿನ್ನವಾಗಿರುವುದಿಲ್ಲ.

ಹಾಲಿವುಡ್ ನಟರೊಬ್ಬರು, ಹೋಟೆಲಿನಲ್ಲಿ ಕುಡಿದು ಪ್ಲೇಟನ್ನು ಬಿಸಾಡಿ ರಂಪ ರಾದ್ಧಾಂತ ಮಾಡಿದ್ದರಂತೆ. ಅತಿ ಗಣ್ಯರೊಬ್ಬರು ಗೋಡೆಯಲ್ಲಿ ನೇತು ಹಾಕಿದ ಪೇಂಟಿಂಗ್ ನ್ನು ಎಗರಿಸಿಕೊಂಡು ಹೋಗಿದ್ದರು. ಸಂದೇಹ ಬರದಿರಲೆಂದು ಆ ಜಾಗದಲ್ಲಿ ಬೇರೊಂದು ಪೇಂಟಿಂಗ್ ನ್ನು ತಂದು ಇಟ್ಟಿದ್ದರು.

ಹತ್ತಾರು ವರ್ಷಗಳ ಕಾಲ ಸ್ಟಾರ್ ಹೋಟೆಲುಗಳಲ್ಲಿ ಕೆಲಸ ಮಾಡಿದವರು ಸಿಕ್ಕರೆ, ಅವರ ಬಾಯಿ ಬಿಡಿಸಿ. ನಿಮಗೆ ಹಲವು ಕತೆಗಳು ಸಿಗುತ್ತವೆ. ಕೆಲವರ ಬಗ್ಗೆ ಇರುವ ಕಲ್ಪನೆಗಳು ಬದಲಾಗುತ್ತವೆ. ಅಂಥವರ ಇನ್ನೊಂದು ಮುಖ ಗೊತ್ತಾಗುತ್ತದೆ. ನಾನಂತೂ ಈ ಅವಕಾಶ ವನ್ನು ಎಂದೂ ತಪ್ಪಿಸಿಕೊಳ್ಳುವುದಿಲ್ಲ.

ಪದಗಳಿಗಿಂತ ಚುಕ್ಕೆ ಪ್ರಭಾವಶಾಲಿ

ಎಲಾನ್ ಮಸ್ಕ್ ಎಂಬ ವ್ಯಕ್ತಿ ಮತ್ತು ಅವರ ’ X ’ (ಟ್ವಿಟರ್) ಹ್ಯಾಂಡಲ್ ಇಂದಿನ ಜಗತ್ತಿನ ಅತಿದೊಡ್ಡ ‘ಡಿಜಿಟಲ್ ರಂಗಸ್ಥಳ’. ಅವರು ಮಾಡುವ ಮೂಲ ಟ್ವೀಟ್‌ಗಿಂತ ಅದಕ್ಕೆ ಬರುವ ಪ್ರತಿಕ್ರಿಯೆಗಳು (Replies) ಒಂದು ಸಾಮಾಜಿಕ ಅಧ್ಯಯನಕ್ಕೆ ಅರ್ಹವಾದ ವಿಷಯ. ಎಲಾನ್ ಮಸ್ಕ್ ಒಂದು ಚುಕ್ಕೆ ಅಥವಾ ಡಾಟ್ ಇಟ್ಟರೂ ಕೋಟ್ಯಂತರ ಮಂದಿ ಪ್ರತಿಕ್ರಿಯೆ ನೀಡುತ್ತಾರೆ. ಸಾಮಾನ್ಯವಾಗಿ ಅಕ್ಷರ ಗಳಿಲ್ಲದಿದ್ದರೆ ಸಂವಹನವಿಲ್ಲ ಎಂದು ನಾವು ಭಾವಿಸುತ್ತೇವೆ. ಆದರೆ ಮಸ್ಕ್ ಒಂದು ಚುಕ್ಕೆ ಇಟ್ಟು ಪೋಸ್ಟ್ ಮಾಡಿದಾಗ, ಅಲ್ಲಿ ತನಕ ‘ಖಾಲಿ ಕ್ಯಾನ್ವಾಸ್’ ಆಗಿದ್ದುದು ಒಂದು ಚುಕ್ಕೆ ಯಿಂದಾಗಿ ಯಾವುದೋ ಮಹಾನ್ ಕಲಾಕೃತಿ ಎಂಬಂತೆ ಜನ ಸ್ವೀಕರಿಸುತ್ತಾರೆ.

ಹೂಡಿಕೆದಾರರು ಆ ಚುಕ್ಕೆಯನ್ನು ನೋಡಿ, ‘ಮಸ್ಕ್ ಯಾವುದೋ ಹೊಸ ಕಂಪನಿ ಕೊಳ್ಳುತ್ತಿದ್ದಾರೆ’ ಅಥವಾ ‘ಟೆಸ್ಲಾ ಷೇರು ಏರಲಿದೆ’ ಎಂದು ಅರ್ಥೈಸಿ ಹಣ ಹೂಡುತ್ತಾರೆ. ರಾಜಕೀಯ ಪಂಡಿತರು ಆ ಚುಕ್ಕೆಯನ್ನು ‘ಇದು ವಿರೋಧಿಗಳಿಗೆ ನೀಡಿದ ಪಂಚ್’ ಎಂದು ವಿಶ್ಲೇಷಿಸುತ್ತಾರೆ. ಇಲ್ಲಿ ಮಸ್ಕ್ ಏನನ್ನೂ ಹೇಳದಿದ್ದರೂ, ಜಗತ್ತು ತನಗೆ ಬೇಕಾದ್ದನ್ನು ಕೇಳಿಸಿಕೊಳ್ಳುತ್ತದೆ.

ಇದು ಮೌನದ ಮೂಲಕ ಮಾಡುವ ಅತಿದೊಡ್ಡ ಸಂವಹನ ತಂತ್ರ.ಮಸ್ಕ್ ಅವರ ಟ್ವೀಟ್ ಕೇವಲ ಒಂದು ‘ವಿಷಯ’ ಮಾತ್ರ, ಆದರೆ ಅದಕ್ಕೆ ಬರುವ ಲಕ್ಷಾಂತರ ಪ್ರತಿಕ್ರಿಯೆಗಳೇ ಅಸಲಿ ‘ಡ್ರಾಮಾ’. ಮಸ್ಕ್ ಅವರ ಒಂದು ಫೋಟೋ ಅಥವಾ ಪದಕ್ಕೆ ಸಾವಿರಾರು ಮೀಮ್‌ ಗಳು ಪ್ರತಿಕ್ರಿಯೆಯಾಗಿ ಬರುತ್ತವೆ. ಈ ಮೀಮ್‌ಗಳು ಮೂಲ ಟ್ವೀಟ್‌ಗಿಂತ ಹೆಚ್ಚು ಸೃಜನ ಶೀಲವಾಗಿರುತ್ತವೆ.

ಅಲ್ಲಿ ಒಂದು ಕಡೆ ಮಸ್ಕ್ ಅವರನ್ನು ದೇವರೆಂದು ಪೂಜಿಸುವವರಿದ್ದರೆ, ಇನ್ನೊಂದೆಡೆ ಅವರನ್ನು ಕಟುವಾಗಿ ಟೀಕಿಸುವವರೂ ಇರುತ್ತಾರೆ. ಇವರಿಬ್ಬರ ನಡುವೆ ಪ್ರತಿಕ್ರಿಯೆಗಳ ಬಾಕ್ಸ್‌ನಲ್ಲಿ ನಡೆಯುವ ‘ಶಬ್ದ ಯುದ್ಧ’ ಒಂದು ರೋಚಕ ಕಾದಂಬರಿಯಂತೆ ಇರುತ್ತದೆ.

ಇಂದಿನ ಕಾಲದಲ್ಲಿ ‘ಗಮನ ಸೆಳೆಯುವುದು’ ಎಂಬುದು ಅತ್ಯಂತ ದೊಡ್ಡ ಕರೆನ್ಸಿ. ಮಸ್ಕ್ ಇದನ್ನು ಚೆನ್ನಾಗಿ ಅರಿತಿದ್ದಾರೆ. ಅವರು ಮಾಡುವ ಅಸ್ಪಷ್ಟ ಟ್ವೀಟ್‌ಗಳು ಜನರನ್ನು ಅವರ ಪ್ರೊಫೈಲ್‌ನ ಹೆಚ್ಚು ಕಾಲ ಇರುವಂತೆ ಮಾಡುತ್ತವೆ. ಜನರು ಆ ಚುಕ್ಕೆಯ ಅರ್ಥವೇನು ಎಂದು ಹುಡುಕುತ್ತಾ ಕಮೆಂಟ್ ಬಾಕ್ಸ್ ಜಾಲಾಡುತ್ತಾರೆ.

ಇದರಿಂದ ಆ ಪ್ಲಾಟ್ ಫಾರ್ಮ್‌ನ ‘ಎಂಗೇಜ್ʼಮೆಂಟ್’ ಹೆಚ್ಚಾಗುತ್ತದೆ. ಇದು ಸಂವಹನ ಕಲೆಗಿಂತ ಹೆಚ್ಚಾಗಿ ಒಂದು ಗಣಿತ (ಅಲ್ಗಾರಿಥಮ)ದ ಆಟ. ಹಿಂದೆ ಒಂದು ಸುದ್ದಿ ಗಮನ ಸೆಳೆಯಲು ಪ್ರೆಸ್ ನೋಟ್ ಕೊಡಬೇಕಿತ್ತು. ಆದರೆ ಇಂದು ಮಸ್ಕ್ ಮಾಡುವ ಒಂದು ಪ್ರತಿಕ್ರಿಯೆ ಜಾಗತಿಕ ಹೆಡ್‌ಲೈನ್ ಆಗುತ್ತದೆ.

ಉದಾಹರಣೆಗೆ, ಯಾರೋ ಒಬ್ಬರು ಮಸ್ಕ್ ಬಗ್ಗೆ ಟೀಕೆ ಮಾಡಿದಾಗ ಅವರು ಕೊಡುವ ’ interesting’ ಅಥವಾ ‘True’ ಎಂಬ ಒಂದು ಪದದ ಪ್ರತಿಕ್ರಿಯೆ ಮರುದಿನ ಪತ್ರಿಕೆಯ ಮುಖ ಪುಟದಲ್ಲಿರುತ್ತದೆ. ಇಲ್ಲಿ ಮೂಲ ಸುದ್ದಿ ಸಣ್ಣದಾಗಿ, ಅದರ ಮೇಲಿನ ಪ್ರತಿಕ್ರಿಯೆಯೇ ದೊಡ್ಡದಾಗಿ ಬೆಳೆಯುತ್ತದೆ.

ಮಸ್ಕ್ ಅವರ ಪ್ರತಿಕ್ರಿಯೆಗಳ ವಿಭಾಗವು ಇಂದಿನ ಜಗತ್ತಿನ ಕನ್ನಡಿ. ಅಲ್ಲಿ ದ್ವೇಷವಿದೆ, ಹಾಸ್ಯ ವಿದೆ, ಜ್ಞಾನವಿದೆ ಮತ್ತು ಅಪ್ಪಟ ಮುಗ್ಧತೆಯೂ ಇದೆ. ಒಂದು ಚುಕ್ಕೆಯ ಕೆಳಗೆ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ಅತ್ಯಂತ ಬಡ ಯುವಕ ಮುಖಾಮುಖಿಯಾಗಲು ಸಾಧ್ಯ ವಿರುವುದು ಇಂದಿನ ತಂತ್ರಜ್ಞಾನದ ವಿಸ್ಮಯ.ಸಂವಹನ ಎಂದರೆ ಕೇವಲ ಸುದೀರ್ಘ ಲೇಖನಗಳನ್ನು ಬರೆಯುವುದು ಎಂದು ಭಾವಿಸಬೇಕಿಲ್ಲ.

ಅದು ಕನಿಷ್ಠ ಪದಗಳಲ್ಲಿ ಅಥವಾ ಶಬ್ದವೇ ಇಲ್ಲದಿದ್ದರೂ ಜನರನ್ನು ಯೋಚಿಸುವಂತೆ ಮಾಡಬಹುದು. ಎಲಾನ್ ಮಸ್ಕ್ ಎಂಬ ’ಎಡಿಟರ್’ ತನ್ನ ಜಗತ್ತಿನಲ್ಲಿ ಯಾವುದೇ ನಿಯಮ ಗಳಿಲ್ಲದೇ ‘ಪತ್ರಿಕೆ’ ನಡೆಸುತ್ತಿದ್ದಾನೆ. ಆ ಪತ್ರಿಕೆಯಲ್ಲಿ ‘ಲೇಖನ’ಗಳಿಗಿಂತ’ ‘ಓದುಗರ ಪತ್ರ’ಗಳೇ ಹೆಚ್ಚು ಪ್ರಬಲವಾಗಿವೆ!

ಟ್ರಂಪ್ ಮತ್ತು ಪತ್ರಕರ್ತರು

ಡೊನಾಲ್ಡ ಟ್ರಂಪ್ ಮತ್ತು ಪತ್ರಕರ್ತರ ನಡುವಿನ ಸಂಬಂಧವು ಜಗತ್ತಿನ ರಾಜಕೀಯ ಇತಿಹಾಸದ ಅತ್ಯಂತ ವಿಲಕ್ಷಣವಾದ ’ಲವ್-ಹೇಟ್ ರಿಲೇಶನ್‌ಶಿಪ್’. ಟ್ರಂಪ್ ಪತ್ರಕರ್ತ ರನ್ನು ವೇದಿಕೆಯ ಮೇಲೆ ನಿಂತು ‘ಜನಶತ್ರುಗಳು’ (Enemy of the People) ಎಂದು ಜರೆದರೂ, ಅವರ ಮುಂದಿನ ಸಾಲಿನಲ್ಲಿ ಅದೇ ಪತ್ರಕರ್ತರು ಮೈಕ್ ಹಿಡಿದು ಸುಮ್ಮನೆ ಕುಳಿತಿರುತ್ತಾರೆ.

ಪತ್ರಕರ್ತರು ಟ್ರಂಪ್ ಅವರ ಕಟು ಟೀಕೆಗಳನ್ನು ಸಹಿಸಿಕೊಂಡು ಯಾಕೆ ಸುಮ್ಮನಿರುತ್ತಾರೆ ? ಪತ್ರಿಕೋದ್ಯಮ ಇಂದು ಕಾಮೆಂಟ್, ಲೈಕ್ಸ್ ಮತ್ತು ವ್ಯೂಸ್ ಮೇಲೆ ನಿಂತಿದೆ. ಟ್ರಂಪ್ ಅವರನ್ನು ಟೀಕಿಸುವುದು ಅಥವಾ ಅವರ ಬಗ್ಗೆ ಬರೆಯುವುದು ಪತ್ರಿಕೆಗಳಿಗೆ ಮತ್ತು ಚಾನಲ್‌ಗಳಿಗೆ ಭರ್ಜರಿ ಲಾಭ ತಂದುಕೊಡುತ್ತದೆ.

ಟ್ರಂಪ್ ಅವರು ಪತ್ರಕರ್ತರನ್ನು ಬೈದಷ್ಟೂ ಆ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತವೆ. ಜನರು ಟ್ರಂಪ್ ಏನನ್ನು ಬೈಯುತ್ತಾರೆ ಎಂದು ನೋಡಲು ಕಾಯುತ್ತಿರುತ್ತಾರೆ. ಟ್ರಂಪ್ ಅವರನ್ನು ವಿರೋಧಿಸುವವರಿಗೂ ಅವರ ಸುದ್ದಿ ಬೇಕು, ಬೆಂಬಲಿಸುವವರಿಗೂ ಅವರ ಸುದ್ದಿ ಬೇಕು. ಹಾಗಾಗಿ, ಟ್ರಂಪ್ ಅವರನ್ನು ಎದುರು ಹಾಕಿಕೊಳ್ಳುವುದು ಎಂದರೆ ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಕಳೆದುಕೊಂಡಂತೆ ಎಂದು ಮಾಧ್ಯಮ ಸಂಸ್ಥೆಗಳಿಗೆ ಗೊತ್ತು.

ಒಬ್ಬ ವೃತ್ತಿಪರ ಪತ್ರಕರ್ತನಿಗೆ ವೈಯಕ್ತಿಕ ಅವಮಾನಕ್ಕಿಂತ ಸುದ್ದಿಯೇ ದೊಡ್ಡದು. ಟ್ರಂಪ್ ಅವರು ಹೆಸರು ಹಿಡಿದು ಬೈದರೂ, ಆ ಕ್ಷಣದಲ್ಲಿ ಪತ್ರಕರ್ತ ’ನನ್ನನ್ನು ಬೈದ’ ಎಂದು ಅಳುತ್ತಾ ಕೂರುವುದಿಲ್ಲ. ಬದಲಾಗಿ, ‘ಅಧ್ಯಕ್ಷರು ನನ್ನನ್ನು ಬೈದರು’ ಎನ್ನುವುದನ್ನೇ ಒಂದು ಹೆಡ್‌ಲೈನ್ ಮಾಡುತ್ತಾರೆ.

ಇದು ಪತ್ರಿಕೋದ್ಯಮದ ಒಂದು ವಿಚಿತ್ರ ನಿಯಮ. ಟ್ರಂಪ್ ಅವರ ನೇರಾನೇರ ದಾಳಿಯು ಪತ್ರಕರ್ತರಿಗೆ ಸಾರ್ವಜನಿಕವಾಗಿ ಹೆಚ್ಚಿನ ಪ್ರಚಾರ ಮತ್ತು ‘ವೀರ ಪತ್ರಕರ್ತ’ ಎಂಬ ಪಟ್ಟ ವನ್ನೂ ತಂದುಕೊಡುತ್ತದೆ.

ಟ್ರಂಪ್ ಅವರು ಪತ್ರಕರ್ತರನ್ನು ದ್ವೇಷಿಸಬಹುದು, ಆದರೆ ಅವರು ಮಾಡುವ ಟ್ವೀಟ್ ಅಥವಾ ಭಾಷಣಗಳು ಜಗತ್ತಿನ ಮೇಲೆ ಪ್ರಭಾವ ಬೀರುತ್ತವೆ. ಪತ್ರಕರ್ತರಿಗೆ ಸುದ್ದಿ ಬೇಕೆಂದರೆ ಟ್ರಂಪ್ ಅವರ ಹತ್ತಿರ ಹೋಗಲೇಬೇಕು. ಟ್ರಂಪ್ ಅವರಿಗೆ ತನ್ನ ವಿಚಾರಗಳನ್ನು ಜನರಿಗೆ ತಲುಪಿಸಲು ಮಾಧ್ಯಮಗಳು ಬೇಕೇ ಬೇಕು. ಇದು ಒಂಥರಾ ‘ಬೆಂಕಿಯ ಜತೆಗಿನ ಸರಸ’. ಒಬ್ಬರಿಗೊಬ್ಬರು ಬೈದುಕೊಳ್ಳುತ್ತಿದ್ದರೂ, ಇಬ್ಬರಿಗೂ ಪರಸ್ಪರರ ಅಸ್ತಿತ್ವ ಅನಿವಾರ್ಯ.

ಟ್ರಂಪ್ ಅವರು ಪತ್ರಕರ್ತರನ್ನು ಟೀಕಿಸುವುದು ಕೇವಲ ಕೋಪದಿಂದಲ್ಲ, ಅದು ಅವರ ಒಂದು ಬಲವಾದ ರಾಜಕೀಯ ತಂತ್ರ. ಮಾಧ್ಯಮಗಳನ್ನು ಟೀಕಿಸುವ ಮೂಲಕ ಅವರು ತಮ್ಮ ಬೆಂಬಲಿಗರಿಗೆ ‘ನೋಡಿ, ಈ ಮಾಧ್ಯಮಗಳು ನನಗೆ ವಿರುದ್ಧವಾಗಿವೆ, ಹಾಗಾಗಿ ನಾನು ಹೇಳುವುದೇ ಸತ್ಯ’ ಎಂದು ನಂಬಿಸುತ್ತಾರೆ.

ಪತ್ರಕರ್ತರು ಈ ಆಟವನ್ನು ಅರ್ಥ ಮಾಡಿಕೊಂಡಿದ್ದಾರೆ. ಅವರು ಟ್ರಂಪ್ ವಿರುದ್ಧ ತಿರುಗಿ ಬಿದ್ದರೆ, ಟ್ರಂಪ್ ಅವರಿಗೆ ಇನ್ನಷ್ಟು ಬಲ ಬರುತ್ತದೆ ಎಂಬುದು ಪತ್ರಕರ್ತರ ಮೌನಕ್ಕೆ ಅಥವಾ ತಾಳ್ಮೆಗೆ ಒಂದು ಕಾರಣ.

ಅಮೆರಿಕದ ಸಂವಿಧಾನವು ಪತ್ರಿಕಾ ಸ್ವಾತಂತ್ರ್ಯಕ್ಕೆ ಹೆಚ್ಚಿನ ಬೆಲೆ ನೀಡುತ್ತದೆ. ಟ್ರಂಪ್ ಎಷ್ಟೇ ಬೈದರೂ ಅವರ ಅಧಿಕಾರವನ್ನು ಪ್ರಶ್ನಿಸುವುದು ಪತ್ರಕರ್ತರ ಸಾಂವಿಧಾನಿಕ ಹಕ್ಕು. ಅವರು ಸುಮ್ಮನೆ ಇರುವುದು ಎಂದರೆ ಭಯದಿಂದಲ್ಲ, ಬದಲಾಗಿ ‘ನೀವು ಎಷ್ಟೇ ಬೈದರೂ ನಾವು ನಮ್ಮ ಕೆಲಸ ನಿಲ್ಲಿಸುವುದಿಲ್ಲ’ ಎಂಬ ಹಠದಿಂದ.

ಟ್ರಂಪ್ ಅವರ ಕೋಪವು ಪತ್ರಕರ್ತರಿಗೆ ತಾವು ಸರಿಯಾದ ದಾರಿಯಲ್ಲಿದ್ದೇವೆ ಎಂಬ ಪುರಾವೆಯಂತೆ ಕಾಣಿಸುತ್ತದೆ. ಟ್ರಂಪ್ ಅವರು ಪತ್ರಕರ್ತರನ್ನು ಅವಮಾನಿಸುವುದರ ಒಂದು ಬಗೆಯ ಆನಂದ ಕಾಣುತ್ತಾರೆ. ಪತ್ರಕರ್ತರು ಅದನ್ನು ಸಹಿಸಿಕೊಳ್ಳುವುದು ಅವರ ಸೋಲಲ್ಲ, ಅದು ಅವರ ವೃತ್ತಿಪರತೆಯ ವಿಜಯ. ಕೊನೆಗೆ ಉಳಿಯುವುದು ಸುದ್ದಿಯೇ ಹೊರತು ಸೈದ್ಧಾಂತಿಕ ಸಂಘರ್ಷವಲ್ಲ. ಟ್ರಂಪ್ ಅವರ ಕಾಲದಲ್ಲಿ ಮಾಧ್ಯಮಗಳು ಕಳೆದು ಕೊಂಡದ್ದಕ್ಕಿಂತ ಗಳಿಸಿದ್ದೇ ಹೆಚ್ಚು ಎಂಬುದು ಇತಿಹಾಸ ಹೇಳುವ ಕಟು ಸತ್ಯ.

ಟ್ರಂಪ್ ಕುರಿತ ಜೋಕುಗಳು

ಟ್ರಂಪ್ ಮತ್ತು ಪತ್ರಕರ್ತರ ಸಂಬಂಧದ ಬಗ್ಗೆ ಹಲವು ಜೋಕುಗಳು ದಿನವೂ ಹುಟ್ಟಿ ಕೊಳ್ಳುತ್ತಿವೆ. ಆ ಪೈಕಿ ಮೂರು. ಟ್ರಂಪ್ ಅವರಿಗೆ ಒಂದು ಸಣ್ಣ ಆಪರೇಷನ್ ಮಾಡಬೇಕಾ ಯಿತು. ಅರಿವಳಿಕೆ ಕೊಡುವ ಮೊದಲು ಡಾಕ್ಟರ್ ಕೇಳಿದರು - ‘ಸಾರ್, ನಿಮಗೆ ಪ್ರಜ್ಞೆ ತಪ್ಪಿದ ಮೇಲೆ ಪತ್ರಕರ್ತರಿಗೆ ಏನಾದರೂ ಸಂದೇಶ ಕೊಡಬೇಕಾ?’ ಟ್ರಂಪ್ ಅಂದರು - ‘ಖಂಡಿತ! ನಾನು ಕಣ್ಣು ಮುಚ್ಚಿದ ತಕ್ಷಣ ಅವರು ‘ಟ್ರಂಪ್ ನಿಧನ’ ಅಂತ ಬ್ರೇಕಿಂಗ್ ನ್ಯೂಸ್ ಹಾಕ್ತಾರೆ ಅಂತ ನನಗೆ ಗೊತ್ತು. ಅವರಿಗೆ ಹೋಗಿ ಹೇಳಿ, ನಾನು ಸತ್ತರೂ ಅವರ ಟಿಆರ್‌ಪಿಗೋಸ್ಕರ ದೆವ್ವವಾಗಿ ಬಂದು ಅವರಿಗೆ ‘ಎಕ್ಸ್ ಕ್ಲೂಸಿವ್ ಇಂಟರ್‌ವ್ಯೂ’ ಕೊಡ್ತೀನಿ ಅಂತ!

ವಿಪತ್ತು

ಪತ್ರಕರ್ತ: ಸಾರ್, ನಿಮ್ಮ ಪ್ರಕಾರ ಜಗತ್ತಿನ ಅತಿದೊಡ್ಡ ವಿಪತ್ತು ಯಾವುದು?

ಟ್ರಂಪ್: ನನ್ನ ಸ್ಪೆಲ್ಲಿಂಗ್ ಮಿಸ್ಟೇಕ್ ಹುಡುಕುವ ಪತ್ರಕರ್ತರು!

ಪತ್ರಕರ್ತ: ಮತ್ತೆ ಎರಡನೇ ಅತಿದೊಡ್ಡ ವಿಪತ್ತು?

ಟ್ರಂಪ್: ನಾನು ಹೇಳಿದ್ದನ್ನೇ ಪ್ರಿಂಟ್ ಮಾಡೋ ಪತ್ರಕರ್ತರು!

ಬಿಸಿನೆಸ್ ಡೀಲ್

ಪತ್ರಕರ್ತ: ನೀವು ಪತ್ರಿಕೆಗಳ ಮೇಲೆ ಅಷ್ಟೊಂದು ಕೇಸ್ ಹಾಕ್ತೀರಾ, ಅದರಿಂದ ನಿಮಗೆ ಏನು ಲಾಭ?’‌

ಟ್ರಂಪ್: ಕೇಸ್ ಹಾಕೋದ್ರಿಂದ ನನಗೆ ದುಡ್ಡು ಬರುತ್ತೋ ಇಲ್ಲವೋ ಗೊತ್ತಿಲ್ಲ, ಆದ್ರೆ ಪತ್ರಿಕೆ ಗಳಲ್ಲಿ ನನ್ನ ಫೋಟೋ ದೊಡ್ಡದಾಗಿ ಬರುತ್ತೆ. ನನ್ನ ಫೋಟೋ ಹಾಕಿ ನೀವು ಪೇಪರ್ ಮಾರ್ಕೋತೀರಿ, ನಿಮ್ಮನ್ನ ಕೋರ್ಟಿಗೆ ಎಳೆದು ನಾನು ರೇಟಿಂಗ್ ಪಡ್ಕೋತೀನಿ. ಇದು ಪಕ್ಕಾ ಬಿಸಿನೆಸ್ ಡೀಲ್!

ಅಡ್ಡ ಪರಿಣಾಮ

ಇತ್ತೀಚೆಗೆ ಖ್ಯಾತ ವಕೀಲ ಪ್ರಶಾಂತ ಭೂಷಣ ಒಂದು ಟ್ವೀಟ್ ಮಾಡಿದ್ದರು. ಕೋವಿಶೀಲ್ಡ ವ್ಯಾಕ್ಸಿನ್ ನ ಸೈಡ್ ಇಫೆಕ್ಟ್ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಅವರು ಆ ಟ್ವೀಟ್ ಮಾಡಿದ್ದರು.

‘ಭಾರತದಲ್ಲಿ ಕೋವಿಶೀಲ್ಡ್ ಲಸಿಕೆಯ ಅಡ್ಡ ಪರಿಣಾಮದ ಬಗ್ಗೆ ಮಾಧ್ಯಮಗಳಲ್ಲಿ ಮೊದಲ ವರದಿ ಪ್ರಕಟವಾಗಿದೆ. ಲಸಿಕೆಯನ್ನು ಹಾಕಿಸಿಕೊಳ್ಳಲು ನಾನೇಕೆ ಹಿಂದೇಟು ಹಾಕಿದ್ದೆ ಎಂಬ ಬಗ್ಗೆ ನಾನು ೨೦೨೧ರಲ್ಲಿಯೇ ಲೇಖನ ಬರೆದು ನನ್ನ ಆತಂಕವನ್ನು ವ್ಯಕ್ತಪಡಿಸಿದ್ದೆ. ಆ ಸಂದರ್ಭದಲ್ಲಿ ನನ್ನ ಈ ಅಧ್ಯಯನಪೂರ್ಣ ಲೇಖನವನ್ನು ಪ್ರಕಟಿ ಸಲು ಮುಖ್ಯವಾಹಿನಿ ಪತ್ರಿಕೆಗಳು ನಿರಾಕರಿಸಿದವು.’ ಎಂದು ಪ್ರಶಾಂತ ಭೂಷಣ ಟ್ವೀಟ್ ಮಾಡಿದ್ದರು.

ಅದಕ್ಕೆ ಡಾ.ವೇದು ಎನ್ನುವವರು ಹೀಗೆ ಪ್ರತಿಕ್ರಿಯಿಸಿದ್ದರು - ‘ಭೂಷಣ್ ಅವರೇ, ಕಾಂಡೋಮ್ ಸೇರಿದಂತೆ ಪ್ರತಿ ಔಷಧಕ್ಕೂ ಅಡ್ಡಪರಿಣಾಮ ಎಂಬುದು ಇದ್ದೇ ಇರುತ್ತದೆ. ನಿಮ್ಮ ತಂದೆ ಯವರು ಅದನ್ನು ಬಳಸಿಯೂ, ನೀವು ಹುಟ್ಟಿರಬಹುದು. ಹತ್ತು ಲಕ್ಷದಲ್ಲಿ ಒಬ್ಬರಿಗೆ ಕೋವಿ ಶೀಲ್ಡ ಅಡ್ಡ ಪರಿಣಾಮ ತಟ್ಟಿರಬಹುದು. ಆದ್ದರಿಂದ ಜನರಲ್ಲಿ ಆತಂಕ ಸೃಷ್ಟಿಸುವ ನಿಮ್ಮ ಚಾಳಿಯನ್ನು ಬಿಟ್ಟುಬಿಡಿ. ಒಂದು ವೇಳೆ ಈ ಲಸಿಕೆಯನ್ನು ಕಾಂಗ್ರೆಸ್ ಸರಕಾರ ನೀಡಿದ್ದಿದ್ದರೆ ನೀವು ಸೊಂಟಕ್ಕೆ, ಭುಜಕ್ಕೆ ಸೇರಿದಂತೆ ಹತ್ತು ಲಸಿಕೆಗಳ ಇಂಜೆಕ್ಷನ್ ತೆಗೆದುಕೊಳ್ಳುತ್ತಿದ್ದೀರಿ.’

ಸೆಕ್ಸ್ ಮತ್ತು ಪತ್ನಿ ಮುಖ

ಟ್ವಿಟ್ಟರ್ ನಲ್ಲಿ (ಈಗ ಎಕ್ಸ್ ) ಮಹಿಳೆಯೊಬ್ಬಳು, ‘ಸೆಕ್ಸ್ ಮಾಡುವಾಗ ಗಂಡಸರು ತಮ್ಮ ಹೆಂಡತಿಯನ್ನು ನೋಡುತ್ತಾರಾ?’ ಎಂಬ ಪ್ರಶ್ನೆಯನ್ನು ಕೇಳಿದ್ದಳು. ಇಂಥ ಪ್ರಶ್ನೆಗಳನ್ನು ಓದಿ ಯಾರೂ ಸುಮ್ಮನಿರುವುದಿಲ್ಲ. ತಲೆಗೊಬ್ಬರು ತರಲೆ ಉತ್ತರ ಅಥವಾ ಪ್ರತಿಕ್ರಿಯೆ ನೀಡುತ್ತಾರೆ. ಈ ಪ್ರಶ್ನೆಗೆ ನೂರಕ್ಕೂ ಹೆಚ್ಚು ಜನ ಪ್ರತಿಕ್ರಿಯೆ ನೀಡಿದ್ದರು. ಆದರೆ ನನಗೆ ಒಂದು ಪ್ರತಿಕ್ರಿಯೆ ಇಷ್ಟವಾಯಿತು.

ಕ್ಸೆವಿಯರ್ ಎನ್ನುವವರು ಹೀಗೆ ಬರೆದಿದ್ದರು - ‘ನಾನು ಒಮ್ಮೆ ಅವಳ ಮುಖವನ್ನು ನೋಡಿ ದೆ. ಅವಳ ಮುಖ ಕೋಪದಲ್ಲಿ ಕುದಿಯುತ್ತಿತ್ತು. ಆಕೆ ಕಿಟಕಿಯಾಚೆಯಿಂದ ದುರುದುರು ನಮ್ಮನ್ನು ದಿಟ್ಟಿಸುತ್ತಿದ್ದಳು.’