ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr N Someshwara Column: ಭಯಾನಕ ಸ್ಫೋಟಕವು ನಂಬಿಕೆಯ ಹೃದ್ರೋಗ ಔಷಧವಾದಾಗ !

ಡೈನಮೈಟ್, ಮನುಕುಲವು ಕಂಡರಿಯದ ಸರ್ವನಾಶಕವಾಗಿರುವ ಹಾಗೆ, ಮನುಷ್ಯರ ಆರೋಗ್ಯ ವನ್ನು ರಕ್ಷಿಸುವ ಸಂಜೀವಿನಿಯೂ ಆಗಿದೆ ಎಂದರೆ ಆಶ್ಚರ್ಯವಾಗುತ್ತದೆ. 19ನೆಯ ಶತಮಾನದಲ್ಲಿ ನೈಟ್ರೋ ಗ್ಲಿಸರಿನ್ ಆವಿಷ್ಕಾರವಾದ ದಿನದಿಂದ ಅದು ಮೃತ್ಯು ಪ್ರತೀಕವಾಗಿ ಬೆಳೆದು, ಕೊನೆಗೆ ಹೃದ್ರೋಗಕ್ಕೆ ರಾಮಬಾಣವಾಗಿ ತ್ರಿವಿಕ್ರಮೋಪಾದಿಯಲ್ಲಿ ಬೆಳೆದು, ಇಂದಿಗೂ ಉಪಯುಕ್ತವಾಗಿದೆ.

ಭಯಾನಕ ಸ್ಫೋಟಕವು ನಂಬಿಕೆಯ ಹೃದ್ರೋಗ ಔಷಧವಾದಾಗ !

Profile Ashok Nayak May 21, 2025 7:35 AM

ಹಿಂದಿರುಗಿ ನೋಡಿದಾಗ

ದಿಮರ್ಚೆಂಟ್ ಆಫ್ ಡೆತ್ ಈಸ್ ಡೆಡ್!‌ ಸಾವಿನ ವ್ಯಾಪಾರಿಯ ಸಾವು! ಇದು 1888ರ ಫ್ರೆಂಚ್ ಪತ್ರಿಕೆ ಯಲ್ಲಿ ಪ್ರಕಟವಾದ ‘ನಿಧನ ವಾರ್ತೆ’ಯ ಶೀರ್ಷಿಕೆ. ಆಲ್ ಫ್ರೆಡ್ ನೊಬೆಲ್‌ನ ಹಿರಿಯ ಅಣ್ಣನಾದ
ಲಡ್ವಿಗ್ ಇಮಾನ್ಯುಯಲ್ ನೊಬೆಲ್ ತೀರಿಕೊಂಡಿದ್ದ. ಫ್ರೆಂಚ್ ಪತ್ರಿಕೆಯು, ಆಲ್ ಫ್ರೆಡ್ ನೊಬೆಲ್ ತೀರಿಕೊಂಡಿದ್ದಾನೆ ಎಂದು ತಪ್ಪಾಗಿ ಭಾವಿಸಿ, ಅವನ ನಿಧನ ವಾರ್ತೆಗೆ, ಯಾರೇ ಆಗಲಿ ಬೆಚ್ಚಿ ಬೀಳುವಂಥ ಶೀರ್ಷಿಕೆಯನ್ನು ಕೊಟ್ಟಿತು. ಆಲ್ ಫ್ರೆಡ್ ನೊಬೆಲ್, ಡೈನಮೈಟನ್ನು ಕಂಡು ಹಿಡಿದಿದ್ದ. ಮೂಲತಃ ಕಟ್ಟಡಗಳನ್ನು ಕಟ್ಟಲು ಬೇಕಾದ ಚಪ್ಪಡಿ ಕಲ್ಲು ಹಾಗೂ ಜಲ್ಲಿಕಲ್ಲನ್ನು ಪಡೆಯಲು ಕಲ್ಲು ಬಂಡೆಗಳನ್ನು ಸಿಡಿಸಲು ಡೈನಮೈಟನ್ನು ಬಳಸುತ್ತಿದ್ದರು. ಆದರೆ ಮನುಷ್ಯರಲ್ಲಿ ವಕ್ರಬುದ್ಧಿಯವರು ಸಾಕಷ್ಟು ಇರುತ್ತಾರಲ್ಲ!

ಡೈನಮೈಟ್ ಹಾಗೂ ಅದರಿಂದ ರೂಪಿಸಿದ ಸಿಡಿಮದ್ದಿನಿಂದ ಶತ್ರುಗಳಿರುವ ತಾಣಗಳನ್ನು, ಅವರ ವಾಹನಗಳನ್ನು ಹಾಗೂ ಸೈನಿಕರ ತುಕಡಿಗಳನ್ನು ಕ್ಷಣದಲ್ಲಿ ಸರ್ವನಾಶವನ್ನು ಮಾಡಬಹುದು ಎಂದು ಕಂಡುಕೊಂಡರು! ಹಾಗಾಗಿ ಡೈನಮೈಟ್ ಹಾಗೂ ಸಿಡಿಮದ್ದಿಗೆ ವಿಪರೀತ ಬೇಡಿಕೆ ಬಂದಿತು. ಬೇಡಿಕೆಯನ್ನು ಸಮರ್ಥವಾಗಿ ಪೂರೈಸಿದ ಆಲ್ ಫ್ರೆಡ್ ನೊಬೆಲ್ ಕೈತುಂಬಾ ಹಣವನ್ನು ಸಂಪಾ ದಿಸಿದ, ನಿಜ. ಆದರೆ... ಇಷ್ಟು ತ್ವರಿತವಾಗಿ ಜನರನ್ನು ಕೊಲ್ಲುವ ನವನವೀನ ವಿಧಾನವನ್ನು ಕಂಡು ಹಿಡಿದ ಸಾವಿನ ವ್ಯಾಪಾರಿ ಸತ್ತುಹೋದುದಕ್ಕೆ ಆ ಪತ್ರಿಕೆಯು ನೆಮ್ಮದಿಯ ನಿಟ್ಟುಸಿರನ್ನು ಬಿಟ್ಟಿತ್ತು.

ಫ್ರೆಂಚ್ ಪತ್ರಿಕೆಯ ಈ ವರದಿಯು ಆಲ್ ಫ್ರೆಡ್ ನೊಬೆಲ್ ನನ್ನು ತುಂಬಾ ನೋಯಿಸಿತು. ಡೈನಮೈಟಿನ ಕಾರಣ, ಅವನು ಈಗಾಗಲೇ ತನ್ನ ಕಿರಿಯ ತಮ್ಮ ಎಮಿಲ್ ಆಸ್ಕರ್ ನೊಬೆಲ್ ನನ್ನು ಕಳೆದುಕೊಂಡಿದ್ದ. ಸೆಪ್ಟೆಂಬರ್ 3, 1864. ಸ್ಟಾಕ್ ಹೋಮಿನ ಹೆಲೀನೆಬೋರ್ಗ್ ಪ್ರಯೋಗಾಲಯ. ಅದಕ್ಕೆ ಹೊಂದಿಕೊಂಡಂತೆ ನೊಬೆಲ್ ಕುಟುಂಬದ ಶಸ್ತ್ರಾಗಾರಗಳ ಕಾರ್ಖಾನೆಯಿತ್ತು. ಎಮಿಲ್ ನೈಟ್ರೋಗ್ಲಿಸರಿನ್‌ನನ್ನು ಹೇಗೆ ಸುರಕ್ಷಿತವಾಗಿ ಬಳಸಬಹುದು ಎನ್ನುವುದರ ಬಗ್ಗೆ ಪ್ರಯೋಗ ಗಳನ್ನು ನಡೆಸುತ್ತಿದ್ದ. ಇದ್ದಕ್ಕಿದ್ದ ಹಾಗೆ ನೈಟ್ರೋಗ್ಲಿಸರಿನ್ ಸಂಯುಕ್ತವು ಸ್ಫೋಟಿಸಿತು. ಆ ಸ್ಫೋಟವು ಎಷ್ಟು ತೀವ್ರ ವಾಗಿತ್ತು ಎಂದರೆ ಪ್ರಯೋಗಾಲಯವು ಕಾರ್ಖಾನೆಯ ಸಮೇತ ಛಿದ್ರ ವಾಯಿತು.

ಇದನ್ನೂ ಓದಿ: Dr N Someshwara Column: ಕೋಪನ್‌ ಹೇಗನ್‌ ಹಿಪ್ನಾಸಿಸ್‌ ಡಬಲ್‌ ಮರ್ಡರ್‌ ಕೇಸ್‌

ಜತೆಗೆ ಎಮಿಲ್ ಆಸ್ಕರ್ ನೊಬೆಲ್ ಹಾಗೂ ಹಲವು ಕಾರ್ಮಿಕರೂ ಮರಣಿಸಿದರು. ಇದರಿಂದ ತೀವ್ರ ವಾಗಿ ನೊಂದಿದ್ದ ಆಲ್ ಫ್ರೆಡ್ ನೊಬೆಲ್, ಪತ್ರಿಕೆಯು ತನ್ನನ್ನು ‘ಸಾವಿನ ವ್ಯಾಪಾರಿ’ ಎಂದು ಕರೆದದ್ದನ್ನು ನೋಡಿ, ಭವಿಷ್ಯದಲ್ಲಿ ಈ ಜಗತ್ತು ತನ್ನನ್ನು ಏನೆಲ್ಲ ಹೀಗಳೆಯಬಹುದು ಎನ್ನುವು ದನ್ನು ಊಹಿಸಿಕೊಂಡು ತಲ್ಲಣಿಸಿಹೋದ.

ಕೂಡಲೇ ತನ್ನ ಅಪಾರ ಸಂಪತ್ತಿನ ಶೇ.94ರಷ್ಟು ಭಾಗವನ್ನು ಬಳಸಿಕೊಂಡು ನೊಬೆಲ್ ಪ್ರತಿಷ್ಠಾನ ವನ್ನು ಆರಂಭಿಸಿದ. ನೊಬೆಲ್ ಪಾರಿತೋಷಕಗಳನ್ನು ಘೋಷಿಸಿದ. ಶಾಂತಿ, ಸಾಹಿತ್ಯ, ಭೌತ ವಿಜ್ಞಾನ, ರಸಾಯನ ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ, ಹಿಂದಿನ ವರ್ಷ ಯಾರು ಮನುಕುಲದ ಪ್ರಗತಿಗೆ ಅತ್ಯುನ್ನತ ಕಾಣಿಕೆಯನ್ನು ನೀಡಿರುತ್ತಾರೋ, ಅವರಿಗೆ ಬಹು ದೊಡ್ಡ ಮೊತ್ತದ ಹಣವನ್ನು ಬಹುಮಾನವನ್ನಾಗಿ ನೀಡಬೇಕೆಂದು ಘೋಷಿಸಿದ. ಅದು ಇಂದಿನವರೆಗೂ ನಡೆದುಕೊಂಡು ಬಂದಿದೆ.

ಡೈನಮೈಟ್, ಅದುವರೆಗೂ ಮನುಕುಲವು ಕಂಡರಿಯದ ಸರ್ವನಾಶಕವಾಗಿರುವ ಹಾಗೆ, ಮನುಷ್ಯರ
ಆರೋಗ್ಯವನ್ನು ರಕ್ಷಿಸುವ ಸಂಜೀವಿನಿಯೂ ಆಗಿದೆ ಎಂದರೆ ಆಶ್ಚರ್ಯವಾಗುತ್ತದೆ. 19ನೆಯ ಶತಮಾನದಲ್ಲಿ ನೈಟ್ರೋಗ್ಲಿಸರಿನ್ ಆವಿಷ್ಕಾರವಾದ ದಿನದಿಂದ ಅದು ಮೃತ್ಯು ಪ್ರತೀಕವಾಗಿ ಬೆಳೆದು, ಕೊನೆಗೆ ಹೃದ್ರೋಗಕ್ಕೆ ರಾಮಬಾಣವಾಗಿ ತ್ರಿವಿಕ್ರಮೋಪಾದಿಯಲ್ಲಿ ಬೆಳೆದು, ಇಂದಿಗೂ ಉಪಯುಕ್ತವಾಗಿದೆ.

6 R

ಸಾವಿನ ವ್ಯಾಪಾರಿ ಎಂದು ಕುಖ್ಯಾತನಾದ ಆಲ್ ಫ್ರೆಡ್ ನೊಬೆಲ್‌ನ ಹೃದ್ರೋಗವನ್ನೂ ನೈಟ್ರೋ ಗ್ಲಿಸರಿನ್ ಸುಧಾರಿಸಿತು ಎನ್ನುವುದು ಒಂದು ವಿಪರ್ಯಾಸಕರ ಇತಿಹಾಸವಾಗಿದೆ. 1847. ಅಸ್ಕಾನಿ ಯೋ ಸೋಬ್ರಿನೊ (1812-1888) ಎಂಬ ಇಟಾಲಿಯನ್ ರಸಾಯನ ಶಾಸ್ತ್ರಜ್ಞ. ಟ್ಯೂರಿನ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನವನ್ನು ಮಾಡಿದ.

ಅಲ್ಲಿನ ಪ್ರಯೋಗಾಲಯದಲ್ಲಿ ಗ್ಲಿಸರಿನ್ ತೆಗೆದುಕೊಂಡ. ಅದಕ್ಕೆ ನೈಟ್ರಿಕ್ ಮತ್ತು ಸಲ್ಯೂರಿಕ್ ಆಸಿಡ್ ಬೆರೆಸಿದ. ಸಾವಯವ ರಾಸಾಯನಿಕ ವಸ್ತುಗಳನ್ನು ನೈಟ್ರೀಕರಿಸಿದರೆ ಏನಾಗುತ್ತದೆ ಎನ್ನುವು ದನ್ನು ತಿಳಿದುಕೊಳ್ಳುವ ಕುತೂಹಲವಿತ್ತು. ಆದರೆ ಅವನು ತಯಾರಿಸಿದ ಈ ಹೊಸ ವಸ್ತುವು ಯಾವುದೇ ಪೂರ್ವಭಾವಿ ಸೂಚನೆಯನ್ನು ನೀಡದೆ ಹಠಾತ್ತನೇ ಸ್ಫೋಟಿಸಿತು.

ಆನಂತರ ಹಲವು ಬಾರಿ ಎಚ್ಚರಿಕೆಯಿಂದ ಅತ್ಯಲ್ಪ ಪ್ರಮಾಣದಲ್ಲಿ ತನ್ನ ಪ್ರಯೋಗವನ್ನು ಪುನರಾವರ್ತಿಸಿದ. ಸ್ವಲ್ಪ ಶಾಖ ಹೆಚ್ಚಾದರೆ, ಸ್ವಲ್ಪ ಘರ್ಷಣೆ ಏರ್ಪಟ್ಟರೆ ಅಥವಾ ಸ್ವಲ್ಪ ಒತ್ತಡ ಬಿತ್ತೆಂದರೆ ತಕ್ಷಣವೇ ಅದು ಉಗ್ರ ಸ್ವರೂಪದಲ್ಲಿ ಸ್ಫೋಟಿಸುತ್ತಿತ್ತು. ಸೋಬ್ರೆರೊ ತುಂಬಾ ನಿರಾಶ ನಾದ. ಹಾಗೆಯೇ ‘ಇದು ಅತ್ಯಂತ ಅಪಾಯಕಾರಿ ವಸ್ತು. ಇದರಿಂದ ಯಾವ ಉಪಯೋಗವೂ ಇಲ್ಲ.

61 R

ಇದು ಜೀವವನ್ನು ತೆಗೆಯುವಷ್ಟು ಆಘಾತಕಾರಿ. ಇದರ ತಂಟೆಗೆ ಹೋಗಬೇಡಿ’ ಎಂದು ತನ್ನ ಸಹುದ್ಯೋಗಿಗಳಿಗೆಲ್ಲ ಎಚ್ಚರಿಕೆಯನ್ನು ನೀಡಿದ. ತನ್ನ ಈ ಪ್ರಯೋಗವು ‘ಕಾಲಗರ್ಭದಲ್ಲಿ ಹೂತು ಹೋಗಲಿ’ ಎಂದು ಸೋಬ್ರೆರೊ ಪ್ರಾರ್ಥಿಸಿದರೂ ಹಾಗೆ ಆಗಲೇ ಇಲ್ಲ. ಆಲ್ ಫ್ರೆಡ್ ನೊಬೆಲ್ (1833-1896) ಓರ್ವ ಸ್ವೀಡಿಶ್ ರಸಾಯನ ಶಾಸ್ತ್ರಜ್ಞ ಹಾಗೂ ಉದ್ಯಮಿಯಾಗಿದ್ದ. ಅವನಿಗೆ ನೈಟ್ರೋ ಗ್ಲಿಸರಿನ್ನಿನ ಅಸಾಧಾರಣ ಸ್ಫೋಟಕ ಸಾಮರ್ಥ್ಯದ ಬಗ್ಗೆ ಮಾಹಿತಿ ದೊರೆಯಿತು. ಅದರ ಬಗ್ಗೆ ಅತೀವ ಕುತೂಹಲವನ್ನು ತಳೆದ. ಬೆಂಕಿಯೂ ಅಪಾಯಕಾರಿಯಾದದ್ದೆ! ಆದರೆ ಮನುಷ್ಯನು ಬೆಂಕಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು, ಅದನ್ನು ಹಿತ-ಮಿತವಾಗಿ ಬಳಸಿಕೊಳ್ಳುತ್ತಾ ತನ್ನ ದೈನಂದಿನ ಕೆಲಸ ಕಾರ್ಯ ಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾನಲ್ಲ!

ಹಾಗೆಯೇ ನೈಟ್ರೋಗ್ಲಿಸರಿನ್ನಿನ ಸ್ಫೋಟಕ ಶಕ್ತಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಅದನ್ನು ಸುರಕ್ಷಿತವಾಗಿ ಬಳಸಬಹುದು ಎಂದು ನಂಬಿದ್ದ. ನೈಟ್ರೋಗ್ಲಿಸರಿನ್ನನ್ನು ನಿಗ್ರಹಿಸಬಲ್ಲ ವಿವಿಧ ವಿಧಾನಗಳ ಹುಡುಕಾಟದಲ್ಲಿಯೇ ಅವನು ತನ್ನ ತಮ್ಮ ಎಮಿಲ್ ಆಸ್ಕರ್ ನೊಬೆಲ್‌ನನ್ನು ಕಳೆದು ಕೊಂಡಿದ್ದ. ಕೊನೆಗೆ ನೈಟ್ರೋಗ್ಲಿಸರಿನ್ನಿನ ಜತೆಯಲ್ಲಿ ಡಯಾಟಮೀ ಮಣ್ಣನ್ನು (ಡಯಾಟಮ್ ಎನ್ನುವ ಬ್ಯಾಕ್ಟೀರಿಯಗಳ ಕವಚಗಳಿಂದ ರೂಪಿತವಾದ ಮಣ್ಣು. ಕೆರೆ/ ಸಮುದ್ರಗಳ ತಳದಲ್ಲಿರು ತ್ತದೆ) ಬೆರೆಸಿದ.

ಮುಟ್ಟಿದರೆ ಸಿಡಿಯುವ ನೈಟ್ರೋಗ್ಲಿಸರಿನ್ ‘ಶಾಂತ’ವಾಯಿತು. ಹೀಗೆ ಸುರಕ್ಷಿತವಾಗಿ ಬಳಸ ಬಹುದಾದ ನೈಟ್ರೋಗ್ಲಿಸರಿನ್ ಸ್ಫೋಟಕವನ್ನು 1867ರಲ್ಲಿ ರೂಪಿಸಿದ. ಕೂಡಲೇ ನೈಟ್ರೋ ಗ್ಲಿಸರಿನ್ನಿಗೆ ಗಣಿಗಾರಿಕೆ ಹಾಗೂ ಬಂಡೆಕಲ್ಲುಗಳನ್ನು ಸಿಡಿಸುವ ಉದ್ಯಮಗಳಿಂದ ಅಪಾರ ಬೇಡಿಕೆ ಬಂದಿತು. ಅವರ ಬೇಡಿಕೆಯನ್ನು ನೊಬೆಲ್ ಪೂರೈಸಿದ. ಹಣದ ಹೊಳೆಯು ಹರಿದುಬರಲಾ ರಂಭಿಸಿತು. ಹಾಗೆಯೇ ಯುದ್ಧಗಳಲ್ಲಿ ಬಳಸಲು ಡೈನಮೈಟ್ ಹಾಗೂ ಅದರ ಸುಧಾರಕ ಸ್ಫೋಟಕ ಗಳ ಬೇಡಿಕೆ ಹೆಚ್ಚಿತು. ನೊಬೆಲ್ ತನ್ನ ಕನಸುಮನಸ್ಸಿನಲ್ಲಿಯೂ ನಿರೀಕ್ಷಿಸದ ಪ್ರಮಾಣ ದಲ್ಲಿ ಹಣವು ಪ್ರವಾಹೋಪಾದಿಯಲ್ಲಿ ಬಂದು ಅವನನ್ನು ಮಹಾ ಶ್ರೀಮಂತನನ್ನಾಗಿಸಿತು.

1860ರ ದಶಕ. ಡೈನಮೈಟನ್ನು ತಯಾರಿಸುತ್ತಿದ್ದ ಕಾರ್ಖಾನೆಗಳಲ್ಲಿ ಕೆಲಸಗಾರರು ಅನಿವಾರ್ಯ ವಾಗಿ ನೈಟ್ರೋಗ್ಲಿಸರಿನ್ನಿನಿಂದ ಹೊರಡುತ್ತಿದ್ದ ಅನಿಲಗಳನ್ನು ಸೇವಿಸುತ್ತಿದ್ದರು. ಆಗ ಅವರಿಗೆ ಉಗ್ರ ಸ್ವರೂಪದ ತಲೆನೋವು ಬರುತ್ತಿತ್ತು. ಮುಖವೆಲ್ಲ ಕೆಂಪಾಗಿ, ಒಂದು ರೀತಿಯ ತಲೆ ಸುತ್ತು ಬಂದು, ಕೆಲವು ಸಲ ವಾಂತಿಯೂ ಆಗುತ್ತಿತ್ತು. ಇಲ್ಲಿ ಒಂದು ಅನಿರೀಕ್ಷಿತ ಪರಿಣಾಮವನ್ನು ಕೆಲವು ಕಾರ್ಮಿಕರು ಗಮನಿಸಿದರು.

ಕಾರ್ಮಿಕರಲ್ಲಿ ಕೆಲವರಿಗೆ ಎದೆಶೂಲೆ (ಆಂಜೈನ ಪೆಕ್ಟೋರಿಸ್) ಬರುತ್ತಿತ್ತು. ಅಂಥ ಕಾರ್ಮಿಕರು ನೈಟ್ರೋಗ್ಲಿಸರಿನ್ನಿನ ಜತೆಯಲ್ಲಿ ಕೆಲಸವನ್ನು ಮಾಡುವಾಗ ಅವರ ಎದೆಶೂಲೆಯು ಮಾಯ ವಾಗುತ್ತಿತ್ತು. ಸ್ವಲ್ಪ ದಿನಗಳ ನಂತರ, ಆ ಕಾರ್ಮಿಕರು ಮತ್ತೊಂದು ವಿಶೇಷವನ್ನು ಗಮನಿಸಿದರು. ಶುಕ್ರವಾರ ಸಂಜೆ ಮನೆಯನ್ನು ಸೇರುತ್ತಿದ್ದ ಕಾರ್ಮಿಕರು, ವಾರಾಂತ್ಯವನ್ನು ಕಳೆದು ಸೋಮ ವಾರವೇ ಕೆಲಸಕ್ಕೆ ಬರುತ್ತಿದ್ದರು. ಆದರೆ ಸೋಮವಾರ ಬೆಳಗಾಗುತ್ತಿದ್ದಂತೆಯೇ ಅವರಿಗೆ ಉಗ್ರ ಸ್ವರೂಪದ ಎದೆಶೂಲೆಯು ಬರುತ್ತಿತ್ತು.

ಇದನ್ನು ಅವರು ‘ಸೋಮವಾರ ಬೆಳಗಿನ ಎದೆಶೂಲೆ’ ಅಥವಾ ‘ಮಂಡೆ ಮಾರ್ನಿಂಗ್ ಆಂಜೈನ’ ಎಂದು ಕರೆದರು. ಆಗ ಅವರಲ್ಲಿ ಒಂದಿಬ್ಬರು ಬುದ್ಧಿವಂತರು, “ವಾರಪೂರ್ತಿ ನಾವು ನೈಟ್ರೋಗ್ಲಿ ಸರಿನ್ನಿನ ಅನಿಲವನ್ನು ಸೇವಿಸುತ್ತಿರುತ್ತೇವೆ. ಆ ಅನಿಲವು ನಮ್ಮ ಎದೆಶೂಲೆಯನ್ನು ನಿಯಂತ್ರಿಸು ತ್ತದೆ ಎಂದು ಕಾಣುತ್ತದೆ. ವಾರಾಂತ್ಯದಲ್ಲಿ ನಾವು ಕಾರ್ಖಾನೆಗೆ ಬರದೇ ಇರುವ ಕಾರಣ, ನೈಟ್ರೋ ಗ್ಲಿಸರಿನ್ ಅನಿಲವನ್ನು ಸೇವಿಸದೇ ಇರುವ ಕಾರಣ, ಎದೆಶೂಲೆಯು ನಿಧಾನವಾಗಿ ಆರಂಭವಾಗು ತ್ತದೆ ಎಂದು ಕಾಣುತ್ತದೆ.

ಸೋಮವಾರದ ಬೆಳಗಿನ ಹೊತ್ತಿಗೆ ಈ ಎದೆಶೂಲೆ ಉಗ್ರವಾಗುತ್ತದೆ. ಸೋಮವಾರ ಕೆಲಸವನ್ನು ಆರಂಭಿಸಿದ ಸ್ವಲ್ಪ ಹೊತ್ತಿನಲ್ಲಿ ಎದೆಶೂಲೆಯು ನಾಟಕೀಯವಾಗಿ ಕಡಿಮೆಯಾಗುತ್ತದೆ" ಎಂದು ತರ್ಕಿಸಿದರು. ಕೆಲವು ಕಾರ್ಮಿಕರು ನೈಟ್ರೋಗ್ಲಿಸರಿನ್ನನ್ನು ತಮ್ಮ ಬಟ್ಟೆಗೆ ಲೇಪಿಸಿ, ಅದೇ ಬಟ್ಟೆ ಯನ್ನು ವಾರಾಂತ್ಯದಲ್ಲಿ ತೊಡುತ್ತಿದ್ದರು. ಬಟ್ಟೆಯ ಮೇಲಿದ್ದ ನೈಟ್ರೋ ಗ್ಲಿಸರಿನ್ ನಿಧಾನವಾಗಿ ಆವಿಯಾಗಿ ಅವರ ಎದೆಶೂಲೆಯನ್ನು ಶಮನಗೊಳಿಸುತ್ತಿತ್ತು.

ಹೃದಯವು ಒಂದು ಸ್ನಾಯು ಪಂಪ್. ನಮ್ಮ ಇಡೀ ದೇಹಕ್ಕೆ ಆಕ್ಸಿಜನ್‌ಭರಿತ ರಕ್ತವನ್ನು ಸರಬರಾಜು ಮಾಡುತ್ತದೆ. ಇತರ ಅಂಗಗಳಿಗೆ ಸರಬರಾಜು ಮಾಡುವ ಮೊದಲು ತನಗೆ ತಾನೇ ಮಕುಟಧಮನಿಗಳ (ಕರೋನರಿ ಆರ್ಟರೀಸ್) ಮೂಲಕ ಆಕ್ಸಿಜನ್‌ಭರಿತ ರಕ್ತವನ್ನು ಪೂರೈಸುತ್ತದೆ. ಇಂಥ ಮಕುಟ ಧಮನಿಗಳಲ್ಲಿ ಕೊಬ್ಬು ಸಂಗ್ರಹವಾಗಿ, ಹರಿಯುವ ರಕ್ತದ ಪ್ರಮಾಣವು ಕಡಿಮೆಯಾದಾಗ, ಎದೆಯ ಸ್ನಾಯುಗಳು ‘ನನಗೆ ಆಕ್ಸಿಜನ್ ಬೇಕು’ ಎಂದು ಆಕ್ರಂದಿಸುತ್ತದೆ.

ಆ ಆಕ್ರಂದನವೇ ಎದೆಶೂಲೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ನೈಟ್ರೋಗ್ಲಿಸರಿನ್ ರಕ್ತನಾಳ ವಿಸ್ತಾರಕವಾಗಿ (ವ್ಯಾಸೋ ಡಯಲೇಟರ್) ಆಗಿ ಕೆಲಸವನ್ನು ಮಾಡುತ್ತದೆ. ನೈಟ್ರೋ ಗ್ಲಿಸರಿನ್ ಪ್ರಭಾವವು ಇರುವವರಿಗೆ ರಕ್ತನಾಳವು ವಿಸ್ತಾರವಾಗಿಯೇ ಇರುವ ಕಾರಣ, ರಕ್ತಸರಬರಾಜು ಸುಧಾ ರಿಸಿರುವ ಕಾರಣ, ನೋವು ಕಡಿಮೆಯಾಗುತ್ತದೆ. ನೈಟ್ರೋಗ್ಲಿಸರಿನ್ ಪ್ರಭಾವವು ಕಡಿಮೆಯಾಗುತ್ತಿರು ವಂತೆಯೇ ಮಕುಟಧಮನಿಗಳು ಕಿರಿದಾಗಿ ಮತ್ತೆ ಎದೆಶೂಲೆಯು ಉಗ್ರವಾಗುತ್ತದೆ.

1878. ವಿಲಿಯಂ ಮ್ಯೂರೆಲ್ ಎಂಬ ಬ್ರಿಟಿಶ್ ವೈದ್ಯ. ಈತನ ಬಳಿ ಎದೆಶೂಲೆಯ ಚಿಕಿತ್ಸೆಗಾಗಿ ಸಾಕಷ್ಟು ಜನರು ಬರುತ್ತಿದ್ದರು. ಡೈನಮೈಟ್ ಕಾರ್ಖಾನೆಯಲ್ಲಿ ಕೆಲಸವನ್ನು ಮಾಡುವ ಕಾರ್ಮಿಕರು ನೈಟ್ರೋಗ್ಲಿಸರಿನ್ ಎದೆಶೂಲೆಯನ್ನು ಕಡಿಮೆ ಮಾಡುತ್ತದೆ ಎನ್ನುವ ವಿಚಾರವನ್ನು ತಿಳಿಸಿದರು. ಆಗ ಅವನು ಒಂದು ಪ್ರಯೋಗವನ್ನು ಕೈಗೊಳ್ಳುವ ದಿಟ್ಟ ನಿರ್ಧಾರವನ್ನು ಮಾಡಿದ.

ನೈಟ್ರೋಗ್ಲಿಸರಿನ್ನಿನ ಶೇ.1ರಷ್ಟು ಪ್ರಮಾಣದ ದ್ರಾವಣವನ್ನು ತಯಾರಿಸಿದ. ತನ್ನ ನಾಲಿಗೆಯ ಅಡಿಯಲ್ಲಿ ಎರಡು ಹನಿ ದ್ರಾವಣವನ್ನು ಲೇಪಿಸಿದ. ನಾಲಿಗೆಯ ಕೆಳಗೆ ರಕ್ತನಾಳಗಳ ಜಾಲ ದಟ್ಟ ವಾಗಿರುವ ಕಾರಣ, ನೈಟ್ರೋಗ್ಲಿಸರಿನ್ ಹೊಟ್ಟೆಗೆ ಹೋಗುವ ಮೊದಲೇ ಹೃದಯವನ್ನು ನೇರವಾಗಿ ತಲುಪುತ್ತದೆ.

ಮ್ಯೂರೆಲ್ ಆರೋಗ್ಯವಂತನಾಗಿದ್ದ. ಹಾಗಾಗಿ ಅವನ ದೇಹದಲ್ಲಿ ರಕ್ತನಾಳಗಳೆಲ್ಲ ಅನಗತ್ಯವಾಗಿ ವಿಸ್ತಾರವಾದವು. ಮುಖಕ್ಕೆ ರಕ್ತವು ನುಗ್ಗಿ ಮುಖವೂ ಟೊಮೇಟೊವನ್ನು ಮೀರಿಸುವಷ್ಟು ಕೆಂಪಾ ಯಿತು. ತಲೆಯಲ್ಲಿದ್ದ ರಕ್ತನಾಳಗಳೆಲ್ಲ ವಿಸ್ತಾರವಾಗಿ, ರಕ್ತವು ಸಂಚಯನಗೊಂಡು, ಸಿಡಿದು ಹೋಗುವಂಥ ತಲೆನೋವು ಕಾಣಿಸಿಕೊಂಡಿತು. ಆಗ ಅವನಿಗೆ ಅನಿಸಿತು- ಈ ನೈಟ್ರೋಗ್ಲಿಸರಿನ್ ಶರೀರದ ಧಮನಿ ಹಾಗೂ ಸಿರೆಗಳ ವ್ಯಾಸವನ್ನು ವಿಸ್ತರಿಸಿ, ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಕಾರಣ, ಎದೆಶೂಲೆಯು ಕಡಿಮೆಯಾಗುತ್ತದೆ ಅಂತ.

ಮುಂದಿನ ಹೆಜ್ಜೆಯಾಗಿ, ಎದೆಶೂಲೆಯಿಂದ ನರಳುತ್ತಿದ್ದ ತನ್ನ ರೋಗಿಗಳಿಗೆ ನೈಟ್ರೋಗ್ಲಿಸರಿನ್ ದ್ರಾವಣವನ್ನು ನೀಡಿದ. ಅವರೆಲ್ಲರೂ ತಮ್ಮ ಎದೆಶೂಲೆಯು ನಾಟಕೀಯವಾಗಿ ಶಮನವಾಯಿತು ಎಂದರು. ಮ್ಯೂರೆಲ್ ತನ್ನ ಅಧ್ಯಯನವನ್ನು 1879ರಲ್ಲಿ ಜಗತ್ತಿನ ವಿಖ್ಯಾತ ಪತ್ರಿಕೆಯಾದ ‘ಲ್ಯಾನ್ಸೆಟ್’ನಲ್ಲಿ ಪ್ರಕಟಿಸಿದ. ‘ನೈಟ್ರೋಗ್ಲಿಸರಿನ್ ಆಸ್ ಎ ರೆಮಿಡಿ ಫಾರ್ ಆಂಜೈನ ಪೆಕ್ಟೋರಿಸ್’ ಎಂಬ ಶೀರ್ಷಿಕೆಯಲ್ಲಿ ಆ ಲೇಖನವು ಪ್ರಕಟವಾಯಿತು.

ಈ ಲೇಖನದಲ್ಲಿ ನೈಟ್ರೋಗ್ಲಿಸರಿನ್ನಿನ ಔಷಧಿಯ ಗುಣಗಳನ್ನು ಈ ಕೆಳಕಂಡಂತೆ ಸಂಗ್ರಹಿಸಿದ:

? ಇದು ಎದೆಶೂಲೆಯನ್ನು ತ್ವರಿತವಾಗಿ ನಿವಾರಿಸುತ್ತದೆ

? ಹೃದಯಕ್ಕೆ ಅಗತ್ಯವಾದ ಆಕ್ಸಿಜನ್ನನ್ನು ತಕ್ಷಣವೇ

ಪೂರೈಸುತ್ತದೆ

? ಕಡಿಮೆ ಪ್ರಮಾಣದಲ್ಲಿ ಉತ್ತಮ ಹಾಗೂ ನಂಬಿಕೆಗೆ ಅರ್ಹವಾದ ಔಷಧವಾಗಿದೆ.

ಇಂದು ನೈಟ್ರೋಗ್ಲಿಸರಿನ್ ಅನ್ನು ಗುಳಿಗೆಗಳ ರೂಪದಲ್ಲಿ, ಸ್ಪ್ರೇ ರೂಪದಲ್ಲಿ, ಇಂಜಕ್ಷನ್ ಮೂಲಕ ಹಾಗೂ ಪ್ಯಾಚ್‌ಗಳ ಮೂಲಕ ನಿಗದಿತ ಪ್ರಮಾಣದಲ್ಲಿ ಔಷಧವಾಗಿ ಪೂರೈಸಲು ಸಾಧ್ಯವಾಗಿದೆ. ಎದೆಶೂಲೆಯ ಜತೆಯಲ್ಲಿ ‘ರೇನಾಡ್ಸ್ ಡಿಸೀಸ್’ ಎಂಬ ರಕ್ತನಾಳಗಳ ಸಮಸ್ಯೆಯಲ್ಲಿ ಇದನ್ನು ಬಳಸ ಬಹುದಾಗಿದೆ.

ಹಾಗೆಯೇ ‘ನಿಮಿರು ದೌರ್ಬಲ್ಯ’ ಅಥವಾ ‘ಎರೆಕ್ಟೈಲ್ ಡಿಸ್ ಫಂಕ್ಷನ್’ ಸಮಸ್ಯೆಯಲ್ಲೂ ‘ವಯಾಗ್ರ’ ದಂತೆ ಇದನ್ನು ಉಪಯೋಗಿಸಲು ಸಾಧ್ಯವಿದೆ. ಹೀಗೆ ಮೃತ್ಯುಸ್ವರೂಪವಾಗಿದ್ದ ನೈಟ್ರೋ ಗ್ಲಿಸರಿನ್, ಜೀವ ಉಳಿಸುವ ಆಪದ್ಭಾಂಧವ ಆಗಿರುವುದು ನಿಜಕ್ಕೂ ಒಂದು ವಿಪರ್ಯಾಸವಾಗಿದೆ. ಚಾಕು ವಿನಿಂದ ಹಣ್ಣನ್ನೂ ಹೆಚ್ಚು ಬಹುದು, ಮತ್ತೊಬ್ಬರನ್ನು ಕೊಲ್ಲಲೂಬಹುದು. ಎಲ್ಲವೂ ಮನುಷ್ಯನ ಕೈಯಲ್ಲಿದೆ.