27 ವರ್ಷಗಳು, 3 ಅಂತರಿಕ್ಷ ಮಿಷನ್, 608 ದಿನಗಳ ಬಾಹ್ಯಾಕಾಶ ವಾಸ; ಸುನೀತಾ ವಿಲಿಯಮ್ಸ್ ನಿವೃತ್ತಿ
A stellar career ends: ಸುನೀತಾ ವಿಲಿಯಮ್ಸ್ ಅವರು 27 ವರ್ಷಗಳ ದೀರ್ಘ ಸೇವೆಯ ಬಳಿಕ ನಿವೃತ್ತಿಯಾಗಿದ್ದಾರೆ. ಮೂರು ಅಂತರಿಕ್ಷ ಮಿಷನ್‌ಗಳಲ್ಲಿ ಭಾಗವಹಿಸಿ ಒಟ್ಟು 608 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿರುವ ಅವರು, ಮಾನವ ಅಂತರಿಕ್ಷ ಅನ್ವೇಷಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಈ ಮೂಲಕ ನಾಸಾದ ಅತ್ಯಂತ ಅನುಭವಿ ಅಂತರಿಕ್ಷಯಾನಿಗಳಲ್ಲಿ ಒಬ್ಬರಾಗಿ ತಮ್ಮ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.
ಗಗನಯಾತ್ರಿ ಸುನೀತಾ ವಿಲಿಯಮ್ಸ್ (ಸಂಗ್ರಹ ಚಿತ್ರ) -
ನವದೆಹಲಿ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ತಮ್ಮ ಕೊನೆಯ 10 ದಿನಗಳ ಅಂತರಿಕ್ಷ ಮಿಷನ್‍ನಲ್ಲಿ, ಒಂದೂವರೆ ತಿಂಗಳ ಕಾಲ ಕಳೆದ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ (Sunita Williams), 27 ವರ್ಷಗಳ ನಂತರ ನಿವೃತ್ತರಾಗಿದ್ದಾರೆ. ಈ ನಿವೃತ್ತಿಯನ್ನು ನಾಸಾ (NASA) ಮಂಗಳವಾರ ಘೋಷಿಸಿದ್ದು, ಅದು ಕಳೆದ ಕ್ರಿಸ್ಮಸ್ ನಂತರದ ದಿನವಾದ 2025 ಡಿಸೆಂಬರ್ 27ರಿಂದ ಜಾರಿಗೆ ಬಂದಿದೆ.
ಸುನಿತಾ ವಿಲಿಯಮ್ಸ್ ಮಾನವ ಬಾಹ್ಯಾಕಾಶ ಹಾರಾಟದಲ್ಲಿ ಮಾರ್ಗದರ್ಶಕಿಯಾಗಿದ್ದು, ಅಂತರಿಕ್ಷ ನಿಲ್ದಾಣದಲ್ಲಿನ ತಮ್ಮ ನಾಯಕತ್ವದ ಮೂಲಕ ಅನ್ವೇಷಣೆಯ ಭವಿಷ್ಯವನ್ನು ರೂಪಿಸಿದ್ದಾರೆ ಮತ್ತು ಭೂಮಿಯ ಕೆಳ ಕಕ್ಷೆಗೆ ವಾಣಿಜ್ಯ ಮಿಷನ್‍ಗಳಿಗೆ ದಾರಿ ಮಾಡಿಕೊಟ್ಟಿದ್ದಾರೆ ಎಂದು ನಾಸಾ ಆಡಳಿತಾಧಿಕಾರಿ ಜೇರೆಡ್ ಐಸಾಕ್ಮನ್ ಹೇಳಿದರು.
Sunita William: ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತದೆ?: ಸುನೀತಾ ವಿಲಿಯಮ್ಸ್ ನೀಡಿದ ಉತ್ತರವೇನು ಗೊತ್ತಾ?
ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಮುನ್ನಡೆಸುವ ಅವರ ಕೆಲಸವು ಚಂದ್ರನತ್ತ ನಡೆಯುವ ಆರ್ಟೆಮಿಸ್ ಕಾರ್ಯಾಚರಣೆಗಳಿಗೆ ಮತ್ತು ಮಂಗಳಗ್ರಹದತ್ತ ಮುನ್ನಡೆಯಲು ಅಡಿಪಾಯವನ್ನು ಹಾಕಿದೆ. ಅವರ ಅಪರೂಪದ ಅಸಾಧಾರಣ ಸಾಧನೆಗಳು ಮುಂದಿನ ಪೀಳಿಗೆಗೆ ದೊಡ್ಡ ಕನಸು ಕಾಣಲು ಮತ್ತು ಸಾಧ್ಯವಿರುವ ಎಲ್ಲಾ ಗಡಿಗಳನ್ನು ಮೀರಿ ಸ್ಫೂರ್ತಿ ನೀಡುತ್ತವೆ. ನಿಮ್ಮ ಸಂಪೂರ್ಣವಾಗಿ ಅರ್ಹವಾದ ನಿವೃತ್ತಿಗೆ ಅಭಿನಂದನೆಗಳು. ನಾಸಾ ಮತ್ತು ನಮ್ಮ ರಾಷ್ಟ್ರಕ್ಕಾಗಿ ನೀಡಿದ ನಿಮ್ಮ ಸೇವೆಗೆ ಧನ್ಯವಾದಗಳು ಎಂದು ಜೇರೆಡ್ ಅಭಿನಂದಿಸಿದ್ದಾರೆ.
ಬಾಹ್ಯಾಕಾಶದಲ್ಲಿ 608 ದಿನಗಳು
ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರನ್ನು 1998 ರಲ್ಲಿ ನಾಸಾ ಆಯ್ಕೆ ಮಾಡಿತ್ತು. ಅವರು ತಮ್ಮ ಮೂರು ಅಂತರಿಕ್ಷ ಪ್ರಯಾಣಗಳಲ್ಲಿ 608 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ. ನಾಸಾ ಗಗನಯಾತ್ರಿಯೊಬ್ಬರು ಬಾಹ್ಯಾಕಾಶದಲ್ಲಿ ಕಳೆದ ಅವಧಿಯ ಪಟ್ಟಿಯಲ್ಲಿ ಇದು ಎರಡನೇ ಅತಿ ಹೆಚ್ಚು ಸಮಯವಾಗಿದೆ.
ಅಮೆರಿಕನ್ನರ ಅಂತರಿಕ್ಷಯಾನಿಗಳಲ್ಲಿ ಒಂದು ಪ್ರಯಾಣದಲ್ಲೇ ಅತಿ ದೀರ್ಘ ಅಂತರಿಕ್ಷ ವಾಸ ಮಾಡಿದವರ ಪಟ್ಟಿಯಲ್ಲಿ ಸುನಿತಾ ವಿಲಿಯಮ್ಸ್ ಆರನೇ ಸ್ಥಾನದಲ್ಲಿದ್ದಾರೆ. ಅವರು ಬಚ್ ವಿಲ್ಮೋರ್ ಅವರೊಂದಿಗೆ ಸಮಬಲದಲ್ಲಿದ್ದು, ಇಬ್ಬರೂ 286 ದಿನಗಳನ್ನು ಅಂತರಿಕ್ಷದಲ್ಲಿ ಕಳೆದಿದ್ದಾರೆ ನಾಸಾದ ಬೋಯಿಂಗ್ ಸ್ಟಾರ್‌ಲೈನರ್ ಮತ್ತು ಸ್ಪೇಸ್‌ಎಕ್ಸ್ ಕ್ರೂ-9 ಕಾರ್ಯಾಚರಣೆಗಳಲ್ಲಿ 286 ದಿನಗಳನ್ನು ಕಳೆದಿದ್ದಾರೆ.
ವಿಲಿಯಮ್ಸ್ ಒಂಬತ್ತು ಬಾಹ್ಯಾಕಾಶ ನಡಿಗೆಗಳನ್ನು ಪೂರ್ಣಗೊಳಿಸಿದ್ದಾರೆ. ಒಟ್ಟು 62 ಗಂಟೆ 6 ನಿಮಿಷಗಳು, ಇದು ಯಾವುದೇ ಮಹಿಳಾ ಗಗನಯಾತ್ರಿಗಳಿಗಿಂತ ಹೆಚ್ಚು ಮತ್ತು NASA ದ ಸಾರ್ವಕಾಲಿಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಬಾಹ್ಯಾಕಾಶದಲ್ಲಿ ಮ್ಯಾರಥಾನ್ ಓಡಿದ ಮೊದಲ ವ್ಯಕ್ತಿಯೂ ಇವರಾಗಿದ್ದಾರೆ.
27 ವರ್ಷಗಳಲ್ಲಿ 3 ಬಾಹ್ಯಾಕಾಶ ಯಾತ್ರೆಗಳು
ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಡಿಸೆಂಬರ್ 9, 2006 ರಂದು STS-116 ಸಿಬ್ಬಂದಿಯೊಂದಿಗೆ ಡಿಸ್ಕವರಿ ಬಾಹ್ಯಾಕಾಶ ನೌಕೆಯಲ್ಲಿ ತಮ್ಮ ಮೊದಲ ಬಾಹ್ಯಾಕಾಶ ಹಾರಾಟ ನಡೆಸಿದ್ದರು. ಎಕ್ಸ್‌ಪೆಡಿಶನ್ 14/15 ರ ಸದಸ್ಯರಾಗಿ, ವಿಲಿಯಮ್ಸ್ ಫ್ಲೈಟ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದರು. ಒಟ್ಟು 29 ಗಂಟೆ 17 ನಿಮಿಷಗಳ ಕಾಲ ನಾಲ್ಕು ಬಾಹ್ಯಾಕಾಶ ನಡಿಗೆಗಳನ್ನು ಮಾಡುವ ಮೂಲಕ ಆಗಿನ ವಿಶ್ವದಾಖಲೆಯನ್ನು ಸ್ಥಾಪಿಸಿದರು.
ಆರು ವರ್ಷಗಳ ಬಳಿಕ ನಡೆದ ಅವರ ಎರಡನೇ ಮಿಷನ್ 2012 ಜುಲೈ 14ರಂದು ಆರಂಭವಾಯಿತು. ಈ ವೇಳೆ ಸುನಿತಾ ವಿಲಿಯಮ್ಸ್ ಅವರು ಕಝಾಕಿಸ್ತಾನದಲ್ಲಿನ ಬೈಕೋನೂರ್ ಕಾಸ್ಮೋಡ್ರೋಮ್‍ನಿಂದ ಎಕ್ಸ್‌ಪಿಡಿಷನ್ 32/33 ತಂಡದ ಸದಸ್ಯೆಯಾಗಿ 127 ದಿನಗಳ ಕಾರ್ಯಾಚರಣೆ ನಡೆಯಿತು. ಈ ಮಿಷನ್ ವೇಳೆ ವಿಲಿಯಮ್ಸ್ ಅವರು ಮೂರು ಬಾರಿ ಅಂತರಿಕ್ಷ ನಡಿಗೆ (spacewalk) ನಡೆಸಿ, ಅಂತರಿಕ್ಷ ನಿಲ್ದಾಣದ ರೇಡಿಯೇಟರ್‌ನಲ್ಲಿ ಉಂಟಾಗಿದ್ದ ಅಮೋನಿಯಾ ಸೋರಿಕೆಯನ್ನು ದುರಸ್ತಿ ಮಾಡಿದರು. ಜೊತೆಗೆ, ನಿಲ್ದಾಣದ ಸೌರ ಫಲಕಗಳಿಂದ ಅದರ ವ್ಯವಸ್ಥೆಗಳಿಗೆ ವಿದ್ಯುತ್ ಪೂರೈಸುವ ಘಟಕವೊಂದನ್ನು ಬದಲಾಯಿಸುವ ಕಾರ್ಯವನ್ನೂ ಯಶಸ್ವಿಯಾಗಿ ನೆರವೇರಿಸಿದರು.
Sunita Williams: ಸುರಕ್ಷಿತವಾಗಿ ಭೂಮಿಗೆ ಮರಳಿದ ಸುನೀತಾ ವಿಲಿಯಮ್ಸ್
ಅತ್ಯಂತ ದೀರ್ಘವಾದ ಅವರ ಮೂರನೇ ಮಿಷನ್ 2024ರ ಜೂನ್‌ನಲ್ಲಿ ಆರಂಭವಾಯಿತು. ನಾಸಾದ ಬೋಯಿಂಗ್ ಕ್ರ್ಯೂ ಫ್ಲೈಟ್ ಟೆಸ್ಟ್ ಮಿಷನ್‌ನ ಭಾಗವಾಗಿ ವಿಲಿಯಮ್ಸ್ ಮತ್ತು ವಿಲ್ಮೋರ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಉಡಾವಣೆಯಾದರು. ನಂತರ ಅವರು ವಿಲ್ಮೋರ್ ಎಕ್ಸ್‌ಪೆಡಿಶನ್ 71/72 ಗೆ ಸೇರಿಕೊಂಡರು. ಇಬ್ಬರು ಗಗನಯಾತ್ರಿಗಳು ಮಾರ್ಚ್ 2025 ರಲ್ಲಿ ಸುರಕ್ಷಿತವಾಗಿ ಭೂಮಿಗೆ ಮರಳಿದರು.
ಭಾರತೀಯ ಮೂಲದ ಸುನೀತಾ ವಿಲಿಯಮ್ಸ್
ಅಂದಹಾಗೆ, ಸುನೀತಾ ವಿಲಿಯಮ್ಸ್ ತಂದೆ ಗುಜರಾತ್ ಮೂಲದವರು. ಮೆಹ್ಸಾನಾ ಜಿಲ್ಲೆಯ ಜುಲಾಸನ್‌ನಲ್ಲಿ ಜನಿಸಿದ ಅವರ ತಂದೆ ನರಶಸ್ತ್ರಚಿಕಿತ್ಸಕರಾಗಿದ್ದರು. ನಂತರ ಅಮೆರಿಕಕ್ಕೆ ವಲಸೆ ಹೋಗಿ ಸ್ಲೊವೇನಿಯನ್ ಮೂಲದ ಬೋನಿ ಪಾಂಡ್ಯ ಅವರನ್ನು ವಿವಾಹವಾದರು.
ಓಹಿಯೋದ ಯೂಕ್ಲಿಡ್‌ನಲ್ಲಿ ಜನಿಸಿದ ಸುನೀತಾ, ಮ್ಯಾಸಚೂಸೆಟ್ಸ್‌ನ ನೀಧಮ್ ಅನ್ನು ತಮ್ಮ ತವರು ಎಂದು ಪರಿಗಣಿಸುತ್ತಾರೆ. ವಿಲಿಯಮ್ಸ್ ಮತ್ತು ಅವರ ಪತಿ ಮೈಕೆಲ್ ತಮ್ಮ ನಾಯಿಗಳೊಂದಿಗೆ ಸುತ್ತಾಡುವುದು, ವ್ಯಾಯಾಮ ಮಾಡುವುದು, ಮನೆ, ಕಾರುಗಳು-ವಿಮಾನಗಳಲ್ಲಿ ಕೆಲಸ ಮಾಡುವುದು, ಪಾದಯಾತ್ರೆ ಮತ್ತು ಕ್ಯಾಂಪಿಂಗ್ ಮಾಡುವುದನ್ನು ಆನಂದಿಸುತ್ತಾರೆ.