ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dr Jagadeesh Maane Column: ಮಳೆ ಎಲ್ಲಿದೆ? ರೈತನ ಕಣ್ಣಲ್ಲಿ ಸಾವಿರ ಪ್ರಶ್ನೆಗಳು!

ಇನ್ನು ಮಣಿಪುರದಲ್ಲಿ ಶೇ.43, ಬಿಹಾರದಲ್ಲಿ ಶೇ.42, ಆಂಧ್ರಪ್ರದೇಶ ಮತ್ತು ಅರುಣಾಚಲ ಪ್ರದೇಶ ದಲ್ಲಿ ತಲಾ ಶೇ.41, ಪಂಜಾಬ್‌ನಲ್ಲಿ ಶೇ.36, ಗೋವಾದಲ್ಲಿ ಶೇ.34, ಅಸ್ಸಾಂನಲ್ಲಿ ಶೇ.25, ಕರ್ನಾಟಕ ದಲ್ಲಿ ಶೇ.23, ರಾಜಸ್ಥಾನದಲ್ಲಿ ಶೇ.22, ಕೇರಳದಲ್ಲಿ ಶೇ.21 ಹಾಗೂ ಮಿಜೋರಾಂನಲ್ಲಿ ಶೇ.20ರಷ್ಟು ಮಳೆಯ ಕೊರತೆ ಉಂಟಾಗಿದೆ.

ಮಳೆ ಎಲ್ಲಿದೆ? ರೈತನ ಕಣ್ಣಲ್ಲಿ ಸಾವಿರ ಪ್ರಶ್ನೆಗಳು!

-

Profile
Ashok Nayak Sep 8, 2026 9:47 AM

ಡಾ.ಜಗದೀಶ ಮಾನೆ

ಮಳೆಗಾಲವೆಂದರೆ ರೈತನ ಕಣ್ಣಲ್ಲಿ ಆಗ ಸಾವಿರ ಕನಸುಗಳು ಮೊಳಕೆಯೊಡೆಯುತ್ತವೆ. ಮಾನ್ಸೂನ್ ಮಾರುತಗಳು ಹೊತ್ತು ತರುವ ಮಳೆ ಧರಣಿಯನ್ನು ತಂಪಾಗಿಸಿದಾಗ, ಒಣಗಿದ್ದ ಭೂಮಿ ಹಸಿರು ಸೀರೆಯುಟ್ಟ ಪ್ರಕೃತಿ ದೇವತೆಯಂತೆ ಕಂಗೊಳಿಸುತ್ತದೆ. ನೆಲ ಹಸನಾಗಿ, ನದಿಗಳೆಲ್ಲ ಉಕ್ಕಿ ಹರಿಯು ತ್ತವೆ. ಮಳೆಗಾಲವೆಂದರೆ ರೈತನಿಗೆ ಬದುಕಿನ ಭರವಸೆ, ದೇಶಕ್ಕೆ ಅನ್ನದ ಭದ್ರತೆ, ಪ್ರಕೃತಿಗೆ ಹೊಸ ಚೈತನ್ಯ. ಆದರೆ ಈ ಬಾರಿ ಕಥೆ ಬೇರೆಯಾಗಿದೆ. ಮಳೆ ಬರಬೇಕಾದ ಸಮಯದಲ್ಲಿ ಮೋಡಗಳು ಮುನಿಸಿಕೊಂಡವು; ರೈತನ ಮುಖದಲ್ಲಿದ್ದ ಮಂದಹಾಸ ನಿಧಾನವಾಗಿ ಮಾಯವಾಯಿತು.

ಸಾಮಾನ್ಯವಾಗಿ ಜೂನ್ ಹಾಗೂ ಜುಲೈ ತಿಂಗಳಲ್ಲಿ ಬೀಳಬೇಕಿದ್ದ ಮಳೆ ಸಮರ್ಪಕವಾಗಿ ಬೀಳ ಲಿಲ್ಲ. ದೇಶದ ಎಡೆಯೂ ಬರದ ಛಾಯೆ ಆವರಿಸುವ ಮೂಲಕ ರೈತ ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಒಟ್ಟು ಸರಾಸರಿ ಮಳೆಯ ಪ್ರಮಾಣದಲ್ಲಿ ಶೇಕಡಾ 16ರಷ್ಟು ಕೊರತೆ ಉಂಟಾಗಿದೆ. ಕರ್ನಾಟಕದಲ್ಲಿ ಮಳೆಯ ಕೊರತೆಯ ಪ್ರಮಾಣವು ಶೇಕಡಾ 35ರಿಂದ 40ರಷ್ಟು ಮುಟ್ಟಿದೆ.

ಆಗ ತಿಂಗಳ ಹೊತ್ತಿಗೆ ಮುಂಗಾರು ಸ್ವಲ್ಪ ವೇಗ ಪಡೆದಿದ್ದರ ಪರಿಣಾಮವಾಗಿ ರೈತರಲ್ಲಿ ಕೊಂಚ ಆಸೆ ಚಿಗುರಿತ್ತು. ಆ ಸ್ವಲ್ಪ ಮಳೆಯೇ ರೈತನಲ್ಲಿ ಮತ್ತೆ ಬದುಕಿನ ನಿರೀಕ್ಷೆಯನ್ನು ಮೂಡಿಸಿತು. ಅದು ಕೂಡಾ ಕೈಕೊಟ್ಟಿದ್ದರೆ ಪರಿಸ್ಥಿತಿ ಇನ್ನಷ್ಟು ಚಿಂತಾಜನಕವಾಗುತ್ತಿತ್ತು. ಜೊತೆಗೆ ಕರ್ನಾಟಕ ಮತ್ತು ತಮಿಳುನಾಡು ನೀರಿಗಾಗಿ ಹೊಡೆದಾಡುವ ಪರಿಸ್ಥಿತಿ ಮತ್ತಷ್ಟು ತಾರಕಕ್ಕೇರುತ್ತಿತ್ತು.

ಇದನ್ನೂ ಓದಿ; Dr Jagadeesh Maane Column: ವಿಶ್ವಕ್ಕಾಗಿ ಸ್ವದೇಶಿ ಉತ್ಪಾದನೆಯೇ ಜಾಗತಿಕ ಭಾರತದ ಹೊಸ ಶಕ್ತಿ !

ಆಗ ತಿಂಗಳಲ್ಲಿ ರಾಜ್ಯದ ಕೆಲವೆಡೆ ಅಲ್ಪಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿದೆ. ಆದರೆ ಅದು ಎಲ್ಲರಲ್ಲೂ ಖುಷಿ ತರುವಷ್ಟು ಪ್ರಮಾಣದಗಿಲ್ಲ. ಮಳೆ ಬಂತು ಎಂಬ ಸಂತೋಷಕ್ಕಿಂತ, ಎಲ್ಲಿ ಎಷ್ಟು ಬಂತು ಎಂಬ ಪ್ರಶ್ನೆಯೇ ಈ ಬಾರಿ ಹೆಚ್ಚು ಕಾಡುತ್ತಿದೆ. ‘ಟೈಮ್ಸ್ ಆಫ್ ಇಂಡಿಯಾ’ ವರದಿಯ ಪ್ರಕಾರ, ಭಾರತದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಮಳೆ ಬೀಳುವ ಪ್ರದೇಶವಾದ ಚಿರಾಪುಂಜಿಯ ಶೇಕಡಾ 58ರಷ್ಟು ಮಳೆಯ ಕೊರತೆ ಉಂಟಾಗಿದೆ. ‌

ಇನ್ನು ಮಣಿಪುರದಲ್ಲಿ ಶೇ.43, ಬಿಹಾರದಲ್ಲಿ ಶೇ.42, ಆಂಧ್ರಪ್ರದೇಶ ಮತ್ತು ಅರುಣಾಚಲ ಪ್ರದೇಶ ದಲ್ಲಿ ತಲಾ ಶೇ.41, ಪಂಜಾಬ್‌ನಲ್ಲಿ ಶೇ.36, ಗೋವಾದಲ್ಲಿ ಶೇ.34, ಅಸ್ಸಾಂನಲ್ಲಿ ಶೇ.25, ಕರ್ನಾಟಕ ದಲ್ಲಿ ಶೇ.23, ರಾಜಸ್ಥಾನದಲ್ಲಿ ಶೇ.22, ಕೇರಳದಲ್ಲಿ ಶೇ.21 ಹಾಗೂ ಮಿಜೋರಾಂನಲ್ಲಿ ಶೇ.20ರಷ್ಟು ಮಳೆಯ ಕೊರತೆ ಉಂಟಾಗಿದೆ.

ಮಾನ್ಸೂನ್ ಮಾರುತಗಳನ್ನು ಬರಮಾಡಿಕೊಳ್ಳುವ ಕೇರಳದ ಈ ಬಾರಿ ಮಳೆಯ ಪ್ರಮಾಣ ಶೇ.21ರಷ್ಟು ಕಡಿಮೆಯಾಗಿದೆ. ಮತ್ತೊಂದೆಡೆ ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ತೆಲಂಗಾಣ, ಹರಿಯಾಣ, ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪ್ರದೇಶ, ಜಾರ್ಖಂಡ್, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ತ್ರಿಪುರಾ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ ಸಾಧಾರಣ ಮಟ್ಟದಲ್ಲಿ ಮಳೆಯಾಗಿದೆ. ಆದರೆ ಒಡಿಶಾದಲ್ಲಿ ಶೇ.20ರಷ್ಟು ಮತ್ತು ಲಡಾಖ್‌ನಲ್ಲಿ ಶೇ.60ರಷ್ಟು ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ.

Screenshot_3 ಒಕ

ಅಂದರೆ ಮಳೆ ಸಂಪೂರ್ಣವಾಗಿ ನಿಂತಿಲ್ಲ; ಮಳೆಯ ಸ್ವಭಾವವೇ ಬದಲಾಗಿದೆ. ಎಲ್ಲಿ ಮಳೆ ಬೇಕಿತ್ತೋ ಅಲ್ಲಿ ಬರ, ಎಲ್ಲಿ ಕಡಿಮೆ ಮಳೆ ಸಾಮಾನ್ಯವೋ ಅಲ್ಲಿ ಅತಿಮಳೆ- ಈ ವೈಪರೀತ್ಯವೇ ಇಂದು ನಮ್ಮ ಮುಂದಿರುವ ದೊಡ್ಡ ಎಚ್ಚರಿಕೆ. ಜಲಾಶಯಗಳು ಸಂಪೂರ್ಣವಾಗಿ ಭರ್ತಿಯಾಗ ದಿರುವುದು ಮುಂದಿನ ದಿನಗಳಲ್ಲಿ ನೀರಿನ ಅಭಾವದ ಆತಂಕವನ್ನು ಹೆಚ್ಚಿಸಿದೆ. ಮಳೆ ಕಡಿಮೆ ಯಾಗುವುದು ಒಂದು ಸಮಸ್ಯೆ; ಮಳೆ ತನ್ನ ಹಳೆಯ ದಾರಿಯನ್ನೇ ಬದಲಿಸಿಕೊಳ್ಳುವುದು ಇನ್ನೂ ದೊಡ್ಡ ಸಮಸ್ಯೆ.

ಸಮುದ್ರದ ಮೇಲ್ಮೈಯಲ್ಲಿ ಉಂಟಾಗುವ ಒಂದು ಸಣ್ಣ ಬದಲಾವಣೆ, ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ರೈತನ ಬದುಕಿನ ಮೇಲೆ ಪರಿಣಾಮ ಬೀರುತ್ತದೆ ಎಂದರೆ ನಂಬಲು ಕಷ್ಟವಾಗ ಬಹುದು. ಆದರೆ ಪ್ರಕೃತಿಯ ವ್ಯವಸ್ಥೆ ಅಷ್ಟೊಂದು ಸೂಕ್ಷ ವೂ ಶಕ್ತಿಯುತವೂ ಆಗಿದೆ. ಸದ್ಯ ಭಾರತವನ್ನು ಕಾಡುತ್ತಿರುವ ಎಲ್ ನಿನೊ ಮುಂಬರುವ ದಿನಗಳಲ್ಲಿ ಮತ್ತಷ್ಟು ಬಲಗೊಳ್ಳುವ ಸಾಧ್ಯತೆಯಿದೆ. ಈ ವರ್ಷದ ಕೊನೆಯವರೆಗೂ ಈ ವಿದ್ಯಮಾನ ಮುಂದುವರಿಯಬಹುದು.

ಇದರಿಂದ ಸಮುದ್ರದ ಮೇಲ್ಮೈ ಉಷ್ಣಾಂಶ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಸಮುದ್ರದ ಮೇಲ್ಮೈ ಉಷ್ಣಾಂಶವು 1.5 ಡಿಗ್ರಿ ಸೆಂ. ಹೆಚ್ಚಾಗುವ ಸಂದರ್ಭಗಳಿದ್ದು, ಈ ಬಾರಿ ಅದು 2.2ರಿಂದ 2.6 ಡಿಗ್ರಿ ಸೆಂ. ಹೆಚ್ಚಾಗುವ ಸಾಧ್ಯತೆಗಳಿವೆ. ಈ ಉಷ್ಣಾಂಶದ ಏರಿಕೆ ಕೇವಲ ಸಮುದ್ರಕ್ಕೆ ಸೀಮಿತವಾಗುವುದಿಲ್ಲ. ಅದರ ಅಲೆಗಳು ಹವಾಮಾನದ ಮೇಲೆ, ಹವಾಮಾನದ ಅಲೆಗಳು ಮಳೆಯ ಮೇಲೆ, ಮಳೆಯ ಬದಲಾವಣೆಗಳು ಕೃಷಿಯ ಮೇಲೆ, ಕೃಷಿಯ ಪರಿಣಾಮ ಇಡೀ ಸಮಾಜದ ಮೇಲೆ ಬೀರುತ್ತವೆ.

ಎಲ್ ನಿನೊ ಪರಿಣಾಮದಿಂದ ಪೆಸಿಫಿಕ್ ಭಾಗದ ಕೆಲವು ರಾಷ್ಟ್ರಗಳಲ್ಲಿ ಉಷ್ಣಾಂಶ ಶೇ.8ರಷ್ಟು ಹೆಚ್ಚಾಗಿದೆ. ಈ ಬೆಳವಣಿಗೆ ಸಾಮಾನ್ಯ ಹವಾಮಾನ ಬದಲಾವಣೆಯಷ್ಟೇ ಅಲ್ಲ; ಇಡೀ ಜಗತ್ತಿನ ಹವಾಮಾನ ವ್ಯವಸ್ಥೆಯಲ್ಲಿ ಉಂಟಾಗುತ್ತಿರುವ ದೊಡ್ಡ ಬದಲಾವಣೆಯ ಸಂಕೇತವೂ ಹೌದು. ಈ ಬಾರಿಯ ಎಲ್ ನಿನೊ ಮತ್ತಷ್ಟು ಬಲವಾಗುತ್ತಾ ಹೆಚ್ಚಿನ ಪ್ರಮಾಣದಲ್ಲಿ ತೊಂದರೆ ಉಂಟು ಮಾಡುವ ಸಾಧ್ಯತೆಗಳು ಗೋಚರಿಸುತ್ತಿವೆ.

ಈಗಾಗಲೇ ಇದರ ಪರಿಣಾಮ ಭಾರತದಲ್ಲೂ ಕಾಣಿಸಿಕೊಂಡಿದೆ. ಸಾಮಾನ್ಯವಾಗಿ ಎಲ್ ನಿನೊ ಪರಿಣಾಮಕಾರಿಯಾಗಿರುವ ವರ್ಷಗಳಲ್ಲಿ ಭಾರತದಲ್ಲಿ ಮಳೆಯ ಅಭಾವ ಕಂಡುಬರುವ ಸಾಧ್ಯತೆ ಹೆಚ್ಚಿರುತ್ತದೆ. ಜೊತೆಗೆ ಮಳೆಯ ಹರಡುವಿಕೆಯಲ್ಲೂ ವ್ಯತ್ಯಾಸ ಉಂಟಾಗಬಹುದು. ಈ ವರ್ಷದ ಉದಾಹರಣೆಯನ್ನೇ ತೆಗೆದುಕೊಂಡರೆ, ಮಹಾರಾಷ್ಟ್ರದ ಮುಂಬೈ, ಪುಣೆ ಹಾಗೂ ಅಲ್ಲಿನ ಕರಾವಳಿ ತೀರದ ನಗರಗಳು ಹೆಚ್ಚಿನ ಮಳೆಯ ಮೂಲಕ ಪ್ರವಾಹದ ಹೊಡೆತವನ್ನು ಎದುರಿಸಿವೆ. ಆದರೆ ಕೇರಳ ಮತ್ತು ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಒಂದೇ ದೇಶದಲ್ಲಿ ಒಂದೆಡೆ ಪ್ರವಾಹ, ಮತ್ತೊಂದೆಡೆ ಮಳೆಯ ಕೊರತೆ-ಇದು ಪ್ರಕೃತಿಯ ವ್ಯಂಗ್ಯವಲ್ಲ; ಬದಲಾಗುತ್ತಿರುವ ಹವಾಮಾನದ ಎಚ್ಚರಿಕೆಯ ಗಂಟೆ. ಮಳೆ ಎಲ್ಲಿಗೆ ಬೇಕೋ ಅಲ್ಲಿಗೆ ಬೀಳದಿದ್ದಾಗ, ಪ್ರಕೃತಿಯ ಅಸಮತೋಲನದ ಬೆಲೆ ಮನುಷ್ಯನೇ ತೆರಬೇಕಾಗುತ್ತದೆ.

ಈ ವರ್ಷ ಎಲ್ ನಿನೊದ ಕಾರಣದಿಂದ ಮಳೆಗಾಲವೇ ಸಮಸ್ಯೆಗೆ ತುತ್ತಾಗಿದೆ. ಆದರೆ ಚಳಿಗಾಲ ವಾದರೂ ಸರಿಯಾಗಿದ್ದು, ಮುಂದಿನ ಮಳೆಗಾಲದ ಹೊತ್ತಿಗೆ ಎಲ್ಲವೂ ಸರಿಯಾಗಬಹುದೇ? ಈ ಪ್ರಶ್ನೆಗೆ ಉತ್ತರ ಕೂಡಾ ಆಶಾದಾಯಕವಾಗಿಲ್ಲ. ಎಲ್ ನಿನೊ ಪರಿಣಾಮದಿಂದ ‘Indian Ocean Dipole’ನಲ್ಲೂ ಬಹಳಷ್ಟು ವ್ಯತ್ಯಾಸ ಕಂಡುಬಂದಿರುವುದರಿಂದ ಭಾರತದಲ್ಲಿ ಈ ವರ್ಷ ಹಿಂಗಾರು ಮಳೆಯೂ ಕಡಿಮೆಯಾಗ ಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಹೀಗಾಗಿ ಒಂದು ಮಳೆಗಾಲದ ಕೊರತೆ ಮತ್ತೊಂದು ಮಳೆಗಾಲದ ಮೇಲೂ ನೆರಳು ಬೀರುವ ಸಾಧ್ಯತೆ ಇದೆ. ಇದೆಲ್ಲವನ್ನೂ ಹೊರತುಪಡಿಸಿ ಮಳೆಯಾಗುವುದಾದರೆ, ಅದು ಚಂಡಮಾರುತದಂತಹ ಕಾರಣಗಳಿಂದ ಆಗಬೇಕಷ್ಟೇ. ಅಂದರೆ ನಮಗೆ ಬೇಕಾದ ಸಮಯದಲ್ಲಿ, ಬೇಕಾದ ಪ್ರಮಾಣದಲ್ಲಿ, ಬೇಕಾದ ರೀತಿಯಲ್ಲಿ ಮಳೆ ಬರುವುದೇ ದೊಡ್ಡ ಪ್ರಶ್ನೆಯಾಗಿದೆ. ಹಾಗಾಗಿ ಇಂದು ಮಳೆಯ ಕೊರತೆಯನ್ನು ಎದುರಿಸುತ್ತಿದ್ದೇವೆ; ನಾಳೆ ನೀರಿನ ಕೊರತೆಯನ್ನು ಎದುರಿಸಬೇಕಾಗದಂತೆ ಇಂದು ಎಚ್ಚೆತ್ತುಕೊಳ್ಳುವುದು ನಮ್ಮ ಜವಾಬ್ದಾರಿ.

ಹವಾಮಾನ ಬದಲಾಗುತ್ತಿದೆ ಎಂಬುದನ್ನು ಅರಿಯಲು ದೊಡ್ಡ ವೈಜ್ಞಾನಿಕ ವರದಿಗಳ ಅಗತ್ಯ ವಿಲ್ಲ; ನಮ್ಮ ಸುತ್ತಲಿನ ಪ್ರಕೃತಿಯನ್ನೇ ಗಮನಿಸಿದರೆ ಸಾಕು. ಈಗಾಗಲೇ ಭಾರತದಲ್ಲಿ ಮಾನ್ಸೂನ್ ಮಾರುತಗಳ ಕಾಲವೂ ಬದಲಾಗುತ್ತಿದೆ. ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಕಾಲಿಡು ತ್ತಿದ್ದ ಮಾನ್ಸೂನ್, ಮೇ ತಿಂಗಳ ಕೊನೆಯ ಹೊತ್ತಿಗೇ ಬರುತ್ತಿರುವ ಸಂದರ್ಭಗಳು ಕಂಡುಬರುತ್ತಿವೆ. ಮಾನ್ಸೂನ್ ಮಾರುತಗಳು ಬರುವ ಸಮಯದಲ್ಲಿ ಅರಬ್ಬಿ ಸಮುದ್ರದಲ್ಲಿ ಚಂಡಮಾರುತಗಳು ಸೃಷ್ಟಿಯಾಗುತ್ತಿರುವುದೂ ಗಮನಾರ್ಹ. ಇವೆಲ್ಲವೂ ಭಾರತದ ಹವಾಮಾನ ಬದಲಾಗುತ್ತಿರುವುದರ ಸೂಚನೆಗಳು.

ಚಳಿಗಾಲದ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿರುವುದರಿಂದ ಮುಂದಿನ ಬೇಸಿಗೆಯನ್ನು ಸಹಿಸಿಕೊಳ್ಳು ವುದೂ ಕಷ್ಟವಾಗುತ್ತಿದೆ. ಅದು ಮತ್ತಷ್ಟು ರಣಭೀಕರವಾಗುವ ಸಾಧ್ಯತೆಗಳೂ ಇವೆ. ಹೀಗಾದಾಗ ನಂತರ ಬರುವ ಮಳೆಗಾಲವೂ ವಿಪರೀತ ಸ್ವರೂಪ ಪಡೆಯಬಹುದು. 2019ರಲ್ಲಿ ರಾಜ್ಯ ಎದುರಿಸಿದ ಪರಿಸ್ಥಿತಿ ಇದಕ್ಕೆ ಒಂದು ಉದಾಹರಣೆಯಾಗಿದೆ. ಮಾರ್ಚ್-ಏಪ್ರಿಲ್ ತಿಂಗಳ ಬಿಸಿಲಿನ ತೀವ್ರತೆಯ ನಂತರ ಬಂದ ಮಳೆ ರಾಜ್ಯ ಹಿಂದೆಂದೂ ಕಾಣದ ರೀತಿಯ ಪ್ರವಾಹ ಪರಿಸ್ಥಿತಿಯನ್ನು ಸೃಷ್ಟಿಸಿತ್ತು.

ಸಾಮಾನ್ಯವಾಗಿ ಪ್ರತಿ ಐದರಿಂದ ಏಳು ವರ್ಷಗಳ ಒಳಗೆ ಎಲ್ ನಿನೊ ಕಾಣಿಸಿಕೊಳ್ಳುತ್ತದೆ ಎಂಬ ಅಭಿಪ್ರಾಯ‌ವಿದೆ. ಆದರೆ ಅದರ ಸ್ವರೂಪ ಮತ್ತು ಮಾದರಿಯಲ್ಲೂ ಬದಲಾವಣೆಗಳು ಕಾಣಿಸಿ ಕೊಳ್ಳುತ್ತಿವೆ. ಕೇವಲ ಮೂರು-ನಾಲ್ಕು ವರ್ಷಗಳಿಗೊಮ್ಮೆ ಅದರ ಪರಿಣಾಮ ಎದುರಾಗು ತ್ತಿರುವುದನ್ನು ಗಮನಿಸಿದರೆ, ಪ್ರಕೃತಿ ನಮಗೆ ಕೊಡುವ ಎಚ್ಚರಿಕೆಯನ್ನು ನಿರ್ಲಕ್ಷಿಸುವ ಕಾಲ ಇದಲ್ಲ.

ಅಷ್ಟಕ್ಕೂ ಈ ‘ಎಲ್ ನಿನೊ’ ಏನಿದು? ಹೆಸರು ಕೇಳಲು ಪುಟ್ಟ ಬಾಲಕನಂತೆ ಕಂಡರೂ, ಅದರ ಪರಿಣಾಮ ಮಾತ್ರ ಇಡೀ ಜಗತ್ತಿನ ಹವಾಮಾನವನ್ನು ಅಲುಗಾಡಿಸುವಷ್ಟು ದೊಡ್ಡದು. ಎಲ್ ನಿನೊ ಎಂಬ ಹೆಸರನ್ನು ಸ್ಪ್ಯಾನಿಷ್ ಭಾಷೆಯಿಂದ ಪಡೆದುಕೊಳ್ಳಲಾಗಿದೆ. ಇದಕ್ಕೆ ‘ಲಿಟಲ್ ಬಾಯ್’ ಎಂಬ ಅರ್ಥವಿದೆ. ಕ್ರಿ.ಶ. 1600ರ ಸುಮಾರಿಗೆ ದಕ್ಷಿಣ ಅಮೆರಿಕಾದ ಮೀನುಗಾರರು ಡಿಸೆಂಬರ್ ತಿಂಗಳಲ್ಲಿ ಮೀನು ಹಿಡಿಯಲು ಸಮುದ್ರಕ್ಕೆ ಇಳಿದಾಗ, ಸಮುದ್ರದ ನೀರು ಅಸಹಜವಾಗಿ ಬಿಸಿಯಾಗಿರುವುದನ್ನು ಗಮನಿಸಿದರು.

ಅದು ಕ್ರಿಸ್ಮಸ್ ಸಮಯವಾಗಿದ್ದರಿಂದ ಈ ವಿದ್ಯಮಾನವನ್ನು ಯೇಸು ಕ್ರಿಸ್ತನೊಂದಿಗೆ ಸಂಬಂಧಿಸಿ ’EL Nino de Navidad’ ಎಂದು ಕರೆಯಲಾಯಿತು. ಇದರ ಅರ್ಥ ‘The Christ Child’ ಅಥವಾ ‘Baby Jesus’. ಕಾಲಕ್ರಮೇಣ ’ de Navidad’ ಎನ್ನುವುದು ಬಿಟ್ಟುಹೋಗಿ ಎಲ್ ನಿನೊ ಎಂಬ ಹೆಸರು ಮಾತ್ರ ಉಳಿಯಿತು. ಒಂದು ಕಾಲದಲ್ಲಿ ಮೀನುಗಾರರು ಗಮನಿಸಿದ ಸಮುದ್ರದ ಬಿಸಿಯ ಬದಲಾವಣೆ, ಇಂದು ಇಡೀ ಜಗತ್ತು ಗಂಭೀರವಾಗಿ ಗಮನಿಸಬೇಕಾದ ಹವಾಮಾನದ ವಿದ್ಯಮಾನ ವಾಗಿದೆ.

ದಕ್ಷಿಣ ಅಮೆರಿಕಾದ ಪೆರು ಮತ್ತು ಈಕ್ವೆಡಾರ್ ಕರಾವಳಿಯ ಪೆಸಿಫಿಕ್ ಸಾಗರದಲ್ಲಿ ಸಮುದ್ರದ ಮೇಲ್ಮೆ ನೀರು ಅಸಹಜವಾಗಿ ಬೆಚ್ಚಗಾಗುವ ವಿದ್ಯಮಾನವನ್ನು ಎಲ್ ನಿನೊ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಪೆಸಿಫಿಕ್ ಸಾಗರದಲ್ಲಿ ವ್ಯಾಪಾರ ಮಾರುತಗಳು ಪೂರ್ವದಿಂದ ಪಶ್ಚಿಮಕ್ಕೆ ಬೀಸುತ್ತವೆ. ಹೀಗಾಗಿ ಪೆಸಿಫಿಕ್ ಸಾಗರದ ಮೇಲಿನ ಬೆಚ್ಚಗಿನ ನೀರು ಏಷ್ಯಾದ ಕಡೆಗೆ ಸಾಗುತ್ತದೆ. ಆ ನೀರು ಆವಿಯಾಗಿ, ನಂತರ ಮಳೆಯ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಆದರೆ ಎಲ್ ನಿನೊ ಉಂಟಾದಾಗ ಟ್ರೇಡ್ ವಿಂq ದುರ್ಬಲಗೊಳ್ಳುತ್ತವೆ.

ಇದರಿಂದ ಸಾಗರದ ಮೇಲಿನ ಬೆಚ್ಚಗಿನ ನೀರಿನ ಚಲನೆಯಲ್ಲೂ ಬದಲಾವಣೆ ಉಂಟಾಗುತ್ತದೆ. ಆ ನೀರು ದಕ್ಷಿಣ ಅಮೆರಿಕಾದ ಕರಾವಳಿಯ ಕಡೆಗೆ ಸಾಗುತ್ತದೆ. ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿ ಪ್ರವಾಹ ಉಂಟಾಗಬಹುದು. ಮತ್ತೊಂದೆಡೆ ಏಷ್ಯಾ ಮತ್ತು ಆಸ್ಟ್ರೇಲಿಯಾಗಳಿಗೆ ಮಳೆಯ ಕೊರತೆ ಸೇರಿದಂತೆ ವಿವಿಧ ಹವಾಮಾನ ಸಮಸ್ಯೆಗಳು ಎದುರಾಗುತ್ತವೆ. ಎಲ್ ನಿನೊಗೆ ಸಂಬಂಧಿಸಿದ ಪ್ರಮುಖ ಅಂಶಗಳಲ್ಲಿ ತಾಪಮಾನ ಏರಿಕೆಯೂ ಒಂದು. ಜಾಗತಿಕ ತಾಪಮಾನ ಹೆಚ್ಚಾದಂತೆ ಸಾಗರದ ಮೇಲ್ಮೈ ಉಷ್ಣಾಂಶವೂ ಹೆಚ್ಚಾಗುತ್ತದೆ. ಇದರಿಂದ ಎಲ್ ನಿನೋ ಪರಿಣಾಮ ಮತ್ತಷ್ಟು ತೀವ್ರವಾಗುವ ಸಾಧ್ಯತೆಯಿದೆ. ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ ಉಂಟಾಗುವ ಹವಾಮಾನದ ವೈಪರೀತ್ಯ ಮತ್ತೊಂದು ಭಾಗದ ಬದುಕಿನ ಮೇಲೂ ಪರಿಣಾಮ ಬೀರುತ್ತದೆ.

ಮಳೆ ಎಂದರೆ ಕೇವಲ ಆಕಾಶದಿಂದ ಭೂಮಿಗೆ ಬೀಳುವ ನೀರಲ್ಲ. ಅದು ರೈತನ ಬದುಕಿನ ಭರವಸೆ, ಹೊಲದ ಹಸಿರು, ನದಿಯ ಹರಿವು, ಜಲಾಶಯದ ಜೀವ ಮತ್ತು ದೇಶದ ಆಹಾರ ಭದ್ರತೆ. ಆದ್ದರಿಂದ ಎಲ್ ನಿನೊದಂತಹ ಹವಾಮಾನದ ವೈಪರೀತ್ಯವನ್ನು ಕೇವಲ ಒಂದು ವರ್ಷದ ಮಳೆ ಕೊರತೆ ಯಾಗಿ ನೋಡಲು ಸಾಧ್ಯವಿಲ್ಲ. ಇದು ಪ್ರಕೃತಿಯೊಂದಿಗೆ ನಮ್ಮ ಸಂಬಂಧವನ್ನು ಮರು ಪರಿಶೀಲಿಸುವ ಸಮಯ.

ಇಂದು ನಾವು ಎದುರಿಸುತ್ತಿರುವ ಪ್ರಶ್ನೆ ‘ಮಳೆ ಯಾವಾಗ ಬರುತ್ತದೆ?’ ಎನ್ನುವುದಷ್ಟೇ ಅಲ್ಲ; ‘ಮಳೆ ಬಂದಾಗ ಅದನ್ನು ಎಷ್ಟು ಉಳಿಸಿಕೊಳ್ಳುತ್ತೇವೆ?’ ಎನ್ನುವುದೂ ಹೌದು. ನೀರಿನ ಸಂರಕ್ಷಣೆ, ಪರಿಸರ ರಕ್ಷಣೆ, ಅರಣ್ಯಗಳ ಉಳಿವು, ಜಲಮೂಲಗಳ ಪುನರುಜ್ಜೀವನ ಮತ್ತು ವೈeನಿಕ ಕೃಷಿ ಪದ್ಧತಿಗಳ ಅಳವಡಿಕೆ- ಇವುಗಳು ಇನ್ನು ಆಯ್ಕೆಗಳಲ್ಲ; ಭವಿಷ್ಯದ ಅವಶ್ಯಕತೆಗಳು. ರೈತನ ಮುಖದಲ್ಲಿ ಮತ್ತೆ ಆ ಮಂದಹಾಸ ಮೂಡಬೇಕು. ಒಣಗಿದ ಭೂಮಿ ಮತ್ತೆ ಹಸಿರು ಸೀರೆಯುಡಬೇಕು. ನದಿಗಳು ಮತ್ತೆ ಉಕ್ಕಿ ಹರಿಯಬೇಕು. ಜಲಾಶಯಗಳು ಮತ್ತೆ ತುಂಬಬೇಕು. ಅದಕ್ಕಾಗಿ ಪ್ರಕೃತಿಯನ್ನು ಗೆಲ್ಲುವ ಹಠವಲ್ಲ, ಪ್ರಕೃತಿಯೊಂದಿಗೆ ಬದುಕುವ ಬುದ್ಧಿವಂತಿಕೆ ನಮಗೆ ಬೇಕು.

ಏಕೆಂದರೆ ಮಳೆ ಕೈಕೊಟ್ಟಾಗ ಅದರ ನೋವು ಕೇವಲ ರೈತನ ಮನೆಯ ಬಾಗಿಲಿಗೆ ನಿಲ್ಲುವುದಿಲ್ಲ; ಅದು ಇಡೀ ಸಮಾಜದ ಬಾಗಿಲನ್ನೂ ತಟ್ಟುತ್ತದೆ. ಆದ್ದರಿಂದ ಇಂದು ನಾವು ಉಳಿಸುವ ಪ್ರತಿಯೊಂದು ಹನಿ ನೀರು, ನಾಳೆಯ ಒಂದು ಕುಟುಂಬದ ಬದುಕನ್ನು ಉಳಿಸಬಹುದು. ಇಂದು ನಾವು ನೆಡುವ ಪ್ರತಿಯೊಂದು ಮರ, ನಾಳೆಯ ಒಂದು ಮಳೆಯ ಹನಿಗೆ ಕಾರಣವಾಗಬಹುದು. ಹಾಗಾಗಿ ಈ ಪ್ರಕೃತಿಯನ್ನು ಕಾಪಾಡುತ್ತ ಅದರೊಂದಿಗೆ ಬೆರೆತು ಬದುಕುವ ಅವಶ್ಯಕತೆ ಇದೆ.