Vishweshwar Bhat Column: ಲುಡ್ಡೈಟ್ಸ್ ಅಂದರೆ ಯಾರು ?
1811 ರಿಂದ 1816 ರ ಅವಧಿಯಲ್ಲಿ ಇಂಗ್ಲೆಂಡಿನ ನಾಟಿಂಗ್ʼಹ್ಯಾಮ್‌ಶೈರ್, ಯಾರ್ಕ್‌ಶೈರ್ ಮತ್ತು ಲಂಕಾ ಷೈರ್ ಪ್ರಾಂತ್ಯಗಳಲ್ಲಿ ಈ ಚಳವಳಿ ತೀವ್ರವಾಗಿ ಹರಡಿತು. ಆ ಕಾಲಘಟ್ಟದಲ್ಲಿ ಕೈಗಾರಿಕಾ ಕ್ರಾಂತಿ ತೀವ್ರ ಗತಿಯಲ್ಲಿ ಸಾಗುತ್ತಿತ್ತು. ಕೈಮಗ್ಗಗಳ ಜಾಗದಲ್ಲಿ ಬೃಹತ್ ಯಾಂತ್ರಿಕ ಮಗ್ಗಗಳು (ಪವರ್ ಲೂಮ್ಸ) ಮತ್ತು ನೂಲುವ ಯಂತ್ರಗಳು ಕಾರ್ಖಾನೆಗಳನ್ನು ಪ್ರವೇಶಿಸಿದವು.
-
ಸಂಪಾದಕರ ಸದ್ಯಶೋಧನೆ
ಇತ್ತೀಚೆಗೆ ಒಂದು ಪಾರ್ಟಿಯಲ್ಲಿ ನನ್ನ ಸ್ನೇಹಿತರೊಬ್ಬರು, ’ಇವರು ನನ್ನ ಸ್ನೇಹಿತರು, ಅಮೆರಿಕದ ಯೇಲ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಪ್ರಾಧ್ಯಾಪಕರು’ ಎಂದು ತಮ್ಮ ಸ್ನೇಹಿತರನ್ನು ಪರಿಚಯ ಮಾಡಿಕೊಟ್ಟರು. ಅದಕ್ಕೆ ನನ್ನ ಸ್ನೇಹಿತರ ಸ್ನೇಹಿತರು, ‘ನಾನು ಕಂಪ್ಯೂಟರ್ ಸೈನ್ಸ್ ಪ್ರಾಧ್ಯಾಪಕನಾಗಿದ್ದರೂ ‘ಲುಡ್ಡೈಟ್ಸ್’ (Luddites) ಎಂದು ಕರೆದುಕೊಳ್ಳಲು ಬಯಸುತ್ತೇನೆ’ ಎಂದು ಹೇಳಿದರು.
ಕೈಗಾರಿಕಾ ಕ್ರಾಂತಿಯ ಕಾಲದಲ್ಲಿ ಇಂಗ್ಲೆಂಡಿನ ಜವಳಿ ಕಾರ್ಖಾನೆಗಳಲ್ಲಿ ಯಂತ್ರಗಳನ್ನು ಧ್ವಂಸ ಗೊಳಿಸುವ ಮೂಲಕ ಜಗತ್ತಿನ ಗಮನ ಸೆಳೆದ ಒಂದು ಐತಿಹಾಸಿಕ ಚಳವಳಿಯ ಹೆಸರು ‘ಲುಡ್ಡೈಟ್ಸ್’ ಅಥವಾ ‘ಲಡ್ಡೈಟ್ಸ್’. ಇಂದು ನಾವು ಯಾವುದೇ ಹೊಸ ತಂತ್ರeನ, ನಾವೀನ್ಯ ಅಥವಾ ಕಂಪ್ಯೂಟರೀ ಕರಣವನ್ನು ವಿರೋಧಿಸುವ ಜನರನ್ನು ಕರೆಯಲು ‘ಲುಡ್ಡೈಟ್ಸ್’ ಎಂಬ ಪದವನ್ನು ಬಳಸುತ್ತೇವೆ. ಆದರೆ, ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ, ‘ಲುಡ್ಡೈಟ್ಸ’ಗಳು ಕೇವಲ ತಂತ್ರಜ್ಞಾನದ ಕುರುಡು ವಿರೋಧಿಗಳಾಗಿರಲಿಲ್ಲ. ಬದಲಿಗೆ ಅವರು ತಮ್ಮ ಬದುಕು, ಹಕ್ಕು ಮತ್ತು ಸ್ವಾಭಿಮಾನ ಕ್ಕಾಗಿ ಹೋರಾಡಿದ ಕಾರ್ಮಿಕರಾಗಿದ್ದರು ಎಂಬುದು ಸ್ಪಷ್ಟವಾಗುತ್ತದೆ.
1811 ರಿಂದ 1816 ರ ಅವಧಿಯಲ್ಲಿ ಇಂಗ್ಲೆಂಡಿನ ನಾಟಿಂಗ್ʼಹ್ಯಾಮ್‌ಶೈರ್, ಯಾರ್ಕ್‌ಶೈರ್ ಮತ್ತು ಲಂಕಾಷೈರ್ ಪ್ರಾಂತ್ಯಗಳಲ್ಲಿ ಈ ಚಳವಳಿ ತೀವ್ರವಾಗಿ ಹರಡಿತು. ಆ ಕಾಲಘಟ್ಟದಲ್ಲಿ ಕೈಗಾರಿಕಾ ಕ್ರಾಂತಿ ತೀವ್ರಗತಿಯಲ್ಲಿ ಸಾಗುತ್ತಿತ್ತು. ಕೈಮಗ್ಗಗಳ ಜಾಗದಲ್ಲಿ ಬೃಹತ್ ಯಾಂತ್ರಿಕ ಮಗ್ಗಗಳು (ಪವರ್ ಲೂಮ್ಸ) ಮತ್ತು ನೂಲುವ ಯಂತ್ರಗಳು ಕಾರ್ಖಾನೆಗಳನ್ನು ಪ್ರವೇಶಿಸಿದವು.
ಈ ಯಂತ್ರಗಳ ಆಗಮನದಿಂದಾಗಿ, ತಲೆಮಾರುಗಳಿಂದ ಗೌರವಾನ್ವಿತ ಮತ್ತು ನುರಿತ ಜವಳಿ ಕುಶಲಕರ್ಮಿಗಳಾಗಿದ್ದ ನೇಯ್ಗೆಯವರು ತಮ್ಮ ಕೆಲಸವನ್ನು ಕಳೆದುಕೊಳ್ಳುವ ಭೀತಿ ಎದುರಿಸಿದರು. ಯಂತ್ರಗಳು ಕಡಿಮೆ ವೆಚ್ಚದಲ್ಲಿ, ಕಡಿಮೆ ನುರಿತ ಕಾರ್ಮಿಕರನ್ನು (ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳನ್ನು) ಬಳಸಿ ಅತಿ ಹೆಚ್ಚು ಬಟ್ಟೆಗಳನ್ನು ಉತ್ಪಾದಿಸತೊಡಗಿದವು.
ಇದನ್ನೂ ಓದಿ: Vishweshwar Bhat Column: ಫೇಸ್ʼಬುಕ್ʼನಲ್ಲಿ ಜವಾಬ್ದಾರಿಯಿಂದ ಕಾಮೆಂಟ್ ಮಾಡಬೇಕು, ಏಕೆಂದರೆ...!
ಇದು ಸಾಂಪ್ರದಾಯಿಕ ಕಾರ್ಮಿಕರ ವೇತನ ಕುಸಿತಕ್ಕೆ ಮತ್ತು ನಿರುದ್ಯೋಗಕ್ಕೆ ಕಾರಣವಾಯಿತು. ಈ ಆರ್ಥಿಕ ಸಂಕಷ್ಟ ಮತ್ತು ಶೋಷಣೆಯ ವಿರುದ್ಧ ಸಿಡಿದೆದ್ದ ಕಾರ್ಮಿಕರ ಗುಂಪೇ ‘ಲುಡ್ಡೈಟ್ಸ್’. ಈ ಚಳವಳಿಗೆ ‘ಲುಡ್ಡೈಟ್ಸ್’ ಎಂಬ ಹೆಸರು ಬರಲು ‘ನೆಡ್ ಲುಡ್’ ಎಂಬ ವ್ಯಕ್ತಿ ಕಾರಣ. ಆತ ಕೋಪದಲ್ಲಿ ಎರಡು ಯಾಂತ್ರಿಕ ಹೆಣಿಗೆ ಯಂತ್ರಗಳನ್ನು ಒಡೆದು ಹಾಕಿದ್ದ. ಇವನ ಸುತ್ತ ಕ್ರಮೇಣ ದಂತಕಥೆಗಳು ಸೃಷ್ಟಿಯಾದವು.
ಕಾರ್ಮಿಕರು ಅವನನ್ನು ‘ಕಿಂಗ್‌ಲುಡ್’ ಅಥವಾ ಜನರಲ್ ಲುಡ್’ ಎಂದು ಕರೆಯುತ್ತಾ, ಅವನ ಹೆಸರಿನಲ್ಲಿ ಕಾರ್ಖಾನೆಯ ಮಾಲೀಕರಿಗೆ ಬೆದರಿಕೆ ಪತ್ರಗಳನ್ನು ಕಳುಹಿಸಲು ಪ್ರಾರಂಭಿಸಿದರು. ನೆಡ್ ಲುಡ್ ಎಂಬ ಪ್ರವಾದಿ ಅಥವಾ ನಾಯಕ ನಿಜವಾಗಿಯೂ ಬದುಕಿದ್ದನೇ ಎಂಬುದಕ್ಕೆ ಯಾವುದೇ ಗಟ್ಟಿ ಪುರಾವೆಗಳಿಲ್ಲ. ಆದರೆ, ಶೋಷಿತ ಕಾರ್ಮಿಕರಿಗೆ ಆ ಹೆಸರು ಒಂದು ದೊಡ್ಡ ಸಾಂಕೇತಿಕ ಶಕ್ತಿಯಾಗಿ ಮಾರ್ಪಟ್ಟಿತು. ಅವರು ರಾತ್ರೋರಾತ್ರಿ ಮುಖವಾಡ ಧರಿಸಿ ಕಾರ್ಖಾನೆಗಳಿಗೆ ನುಗ್ಗಿ, ಹೊಸ ಯಂತ್ರಗಳನ್ನು ಸುತ್ತಿಗೆಯಿಂದ ಬಡಿದು ಧ್ವಂಸಗೊಳಿಸುತ್ತಿದ್ದರು.
ಆಧುನಿಕ ಜಗತ್ತು ‘ಲುಡ್ಡೈಟ್ಸ್’ಗಳನ್ನು ‘ಬದಲಾವಣೆಯನ್ನು ಒಪ್ಪದ ಮೂರ್ಖರು’ ಎಂಬಂತೆ ಬಿಂಬಿಸುತ್ತದೆ. ಆದರೆ ಅವರ ಹೋರಾಟ ತಂತ್ರಜ್ಞಾನದ ಮೇಲಲ್ಲ, ಬದಲಿಗೆ ಆ ತಂತ್ರಜ್ಞಾನವನ್ನು ಬಳಸಿ ಮಾಲೀಕರು ಮಾಡುತ್ತಿದ್ದ ಆರ್ಥಿಕ ಶೋಷಣೆಯ ವಿರುದ್ಧವಾಗಿತ್ತು.
‘ಲುಡ್ಡೈಟ್ಸ್’ ಚಳವಳಿ ಬ್ರಿಟಿಷ್ ಸರಕಾರವನ್ನು ತಲ್ಲಣಗೊಳಿಸಿತು. ಆ ಸಮಯದಲ್ಲಿ ನೆಪೋಲಿ ಯನ್ ವಿರುದ್ಧದ ಯುದ್ಧದಲ್ಲಿ ನಿರತವಾಗಿದ್ದ ಬ್ರಿಟಿಷ್ ಸರಕಾರ, ದೇಶದ ಒಳಗಿನ ಈ ದಂಗೆಯನ್ನು ಹತ್ತಿಕ್ಕಲು ತನ್ನ ಸೈನ್ಯವನ್ನು ಬಳಸಿತು. ಒಂದು ಹಂತದಲ್ಲಿ, ಯುರೋಪ್ ರಣರಂಗದಲ್ಲಿದ್ದ ಸೈನಿಕರಿಗಿಂತ ಹೆಚ್ಚು ಬ್ರಿಟಿಷ್ ಸೈನಿಕರು ಇಂಗ್ಲೆಂಡಿನ ಒಳಗೇ ‘ಲುಡ್ಡೈಟ್ಸ್’ ಗಳನ್ನು ಮಟ್ಟ ಹಾಕಲು ನಿಯೋಜನೆಗೊಂಡಿದ್ದರು.
ಸರಕಾರವು ನೂರಾರು ‘ಲುಡ್ಡೈಟ್ಸ್’ಗಳನ್ನು ಬಂಧಿಸಿತು. ಅನೇಕರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಯಿತು ಮತ್ತು ಇನ್ನು ಹಲವರನ್ನು ಆಸ್ಟ್ರೇಲಿಯಾದ ದ್ವೀಪಗಳಿಗೆ ಗಡಿಪಾರು ಮಾಡಲಾಯಿತು. ಕಾಲ ಬದಲಾಗಿದೆ, ಆದರೆ ‘ಲುಡೈಟ್ಸ್’ ಮನಸ್ಥಿತಿ ಇಂದಿಗೂ ಜೀವಂತವಾಗಿದೆ. ಇಂದು ಆಧುನಿಕ ತಂತ್ರಜ್ಞಾನ, ಗಣಕೀಕರಣ, ಜಾಗತೀಕರಣ ಮತ್ತು ಕೃತಕ ಬುದ್ಧಿಮತ್ತೆಯನ್ನು (GI) ವಿರೋಧಿಸುವವರನ್ನು ‘ಲುಡ್ಡೈಟ್ಸ್’ ಎಂದು ಕರೆಯಲಾಗುತ್ತದೆ. ಅಭಿವೃದ್ಧಿ ಎಂದರೆ ಕೇವಲ ಯಂತ್ರಗಳ ಮೇಲ್ದರ್ಜೆಯಲ್ಲ, ಮನುಷ್ಯನ ಜೀವನಮಟ್ಟದ ಸುಧಾರಣೆಯೂ ಹೌದು ಎಂಬುದು ‘ಲುಡ್ಡೈಟ್ಸ್’ ಗಳ ವಾದ.