Surendra Pai Column: ʼಶಿವ ಡಂಗುʼರದ ಅಂತರಂಗ ಬಲ್ಲವರಾರು?
ಶಿವನ ವೇಷದಲ್ಲಿ ಚಿತ್ರಿಸಿದ್ದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವರ ಆಕ್ಷೇಪ, ಟೀಕೆ ಟಿಪ್ಪಣಿ ಗಮನಿಸಿದೆ. ಪತ್ರಿಕೋದ್ಯಮದ ಆಳ ಅಗಲ ಗೊತ್ತಿಲ್ಲದವರು ತಮ್ಮ ತಮ್ಮ ವಿಚಾರವನ್ನು ತಮ್ಮ ವ್ಯಕ್ತಿತ್ವಕ್ಕೆ ತಕ್ಕಂತೆ ಪ್ರಕಟಿಸಿದರು. ಏಕವಚನದಿಂದ ಹಿಡಿದು, ಭಟ್ಟರಿಗೆ ಹೊಸ ಹೊಸ ಹೆಸರಿನ ಬಿರುದು, ನಾಮಕರಣವನ್ನು ಮಾಡಿದರು.
-
ಪ್ರತಿಕ್ರಿಯೆ
ಸುರೇಂದ್ರ ಪೈ, ಭಟ್ಕಳ
ಮಾಧ್ಯಮಗಳು ಮತ್ತು ಕಾರ್ಟೂನಿಸ್ಟ್‌ಗಳು ರಾಜಕಾರಣಿಗಳನ್ನು ವಿವಿಧ ರೂಪಗಳಲ್ಲಿ ಚಿತ್ರಿಸುವುದು ಹೊಸದೇನಲ್ಲ. ಬಜೆಟ್ ಮಂಡಿಸುವಾಗ ಹಣಕಾಸು ಸಚಿವರನ್ನು ಲಕ್ಷ್ಮಿ ಯಂತೆ, ಯುದ್ಧದ ಸಂದರ್ಭದಲ್ಲಿ ನಾಯಕರನ್ನು ಅರ್ಜುನನಂತೆ ಚಿತ್ರಿಸುವ ಪರಂಪರೆ ಹೊಸದೇನಲ್ಲ.
ಮೊನ್ನೆ ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ದಿನ ವಿಶ್ವವಾಣಿ ಪತ್ರಿಕೆಯ ಮುಖಪುಟದಲ್ಲಿ ಡಿ.ಕೆ ಶಿವಕುಮಾರ ಅವರನ್ನು ಶಿವನ ವೇಷದಲ್ಲಿ ಎದ್ದು ಕಾಣುವಂತೆ ಪೋಟೋ ಹಾಕಿದ್ದು ದೊಡ್ಡ ಮಟ್ಟಿನ ಸುದ್ದಿಯಾಯಿತು. ಅಂದು ಪತ್ರಿಕೆ ನೋಡಿದವರೆ ಇದರ ಪರ ವಿರೋಧದ ದನಿಯನ್ನು ಸಾಮಾಜಿಕ ಜಾಲತಾಣದಲ್ಲಿ ಎತ್ತಿದರು.
‘ಪತ್ರಿಕೆ ಸುದ್ದಿ ನೀಡಬೇಕು, ಅದಕ್ಕಿಂತ ಪತ್ರಿಕೆಯೇ ಸುದ್ದಿ ಯಾಗಬೇಕು’ ಎಂದು ವಿಶ್ವೇಶ್ವರ ಭಟ್ಟರು ಹೇಳಿದ ಮಾತು ನೆನಪಾಯಿತು. ಈ ಮಾತು ಈ ಘಟನೆಗೆ ಮಾತ್ರ ಸೀಮಿತವಲ್ಲ. ಬದಲಾಗಿ ವಿಶ್ವೇಶ್ವರ ಭಟ್ ಅವರ ಪತ್ರಿಕಾ ಪ್ರಪಂಚದ ಸುದೀರ್ಘ ಕಾಯಕದಲ್ಲಿ ಇದನ್ನು ಓದುಗರು ಗಮನಿಸಿದ್ದಾರೆ. ಅದು ವಿಜಯ ಕರ್ನಾಟಕವಾಗಿರಲಿ, ಕನ್ನಡಪ್ರಭವಾಗಿರಲಿ, ಇದೀಗ ವಿಶ್ವವಾಣಿ, ಪ್ರವಾಸಿ ಪ್ರಪಂಚ ವಾಗಿರಲಿ.
ಭಟ್ಟರಿಗೆ ಪರ ವಿರೋಧದ ಬಗ್ಗೆ ತಕರಾರಿಲ್ಲ. ಅವರೇ ಹೇಳುವ ಹಾಗೆ ಪರ-ವಿರೋಧ ಇದ್ದಿದ್ದೇ. ಅವು ಇರಲೇಬೇಕು. ‘ನಮ್ಮ ಕೆಲಸದ ಬಗ್ಗೆ ನಾಲ್ಕು ಮಂದಿ ಚೆನ್ನಾಗಿ ಟೀಕೆಯನ್ನೂ ಮಾಡದಿದ್ದರೆ ಅದು ಯಾವ ಸೀಮೆ ಜರ್ನಲಿಸಮ್ಮು, ಅಲ್ಲವೇ?’ ಎಂದು ಮತ್ತೊಂದು ಹೊಸ ಪ್ರಯೋಗಕ್ಕೆ, ಸುದ್ದಿಗೆ ಮುಂದಾಗುತ್ತಾರೆ.
ಶಿವನ ವೇಷದಲ್ಲಿ ಚಿತ್ರಿಸಿದ್ದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವರ ಆಕ್ಷೇಪ, ಟೀಕೆ ಟಿಪ್ಪಣಿ ಗಮನಿಸಿದೆ. ಪತ್ರಿಕೋದ್ಯಮದ ಆಳ ಅಗಲ ಗೊತ್ತಿಲ್ಲದವರು ತಮ್ಮ ತಮ್ಮ ವಿಚಾರವನ್ನು ತಮ್ಮ ವ್ಯಕ್ತಿತ್ವಕ್ಕೆ ತಕ್ಕಂತೆ ಪ್ರಕಟಿಸಿದರು. ಏಕವಚನದಿಂದ ಹಿಡಿದು, ಭಟ್ಟರಿಗೆ ಹೊಸ ಹೊಸ ಹೆಸರಿನ ಬಿರುದು, ನಾಮಕರಣವನ್ನು ಮಾಡಿದರು.
ಇದನ್ನೂ ಓದಿ: Surendra Pai Column: ಉಸಿರಾಟ ನಿಲ್ಲಿಸಿದ ಮಧ್ಯ ಭಾರತದ ಹಸಿರು ಶ್ವಾಸಕೋಶ
ಪತ್ರಿಕೆಯ ಮುಖಪುಟವಾಗಲಿ, ಅಲ್ಲಿ ಪ್ರಕಟವಾಗುವ ಲೇಖನವಾಗಲಿ ಓದುಗರನ್ನು ಆಕರ್ಷಿಸು ವುದು ಅದರ ಶೀರ್ಷಿಕೆಯಿಂದ. ಆ ನಿಟ್ಟಿನಲ್ಲಿ ‘ಶಿವ’ಕುಮಾರ ಎಂಬ ಹೆಸರನ್ನು ಡಿಕೆಶಿಯ ವ್ಯಕ್ತಿತ್ವ ವನ್ನು ಶಿವ ರೂಪಕ್ಕೆ ಹೋಲಿಸಿ ಸಿಕ್ಕ ಅವಕಾಶವನ್ನು ಕ್ರಿಯಾಶೀಲವಾಗಿ ಬಳಸಿಕೊಂಡಿದ್ದು ಸಂಪಾದಕರ ಚತುರತೆಯೇ ಸರಿ. ವ್ಯಕ್ತಿಯನ್ನು ದೇವರಂತೆ, ಅದರಲ್ಲೂ ರಾಜಕಾರಣಿಯನ್ನು ದೇವರಂತೆ ಬಿಂಬಿಸಿದ ಆಕ್ಷೇಪದ ಕಡೆಗೆ ಬರೋಣ.
ವ್ಯಕ್ತಿಯನ್ನು ದೇವರನ್ನಾಗಿಸುವುದು ಅಕ್ಷರಶಃ ತಪ್ಪು. ಯಾವುದೇ ವ್ಯಕ್ತಿ ದೇವರಾಗಲು ಸಾಧ್ಯವಿಲ್ಲ. ಡಿಕೆಶಿ ಅವರನ್ನು ಶಿವನ ವೇಷದಲ್ಲಿ ನೋಡಲು ಒಪ್ಪದವರು ಸಮಾಜದಲ್ಲಿ ನಿತ್ಯವೂ ಆಧ್ಯಾತ್ಮದ ಹೆಸರಿನಲ್ಲಿ ಜನರನ್ನು ವಂಚಿಸುವ ಸ್ವಾಮೀಜಿಗಳು ಅಥವಾ ಬಾಬಾಗಳು, ಸಿನಿಮಾ ತಾರೆಯರು, ರಾಜಕೀಯ ನಾಯಕರನ್ನು ದೇವರಂತೆ ನೋಡುವ ಜನರನ್ನು ಟೀಕಿಸುತ್ತಿಲ್ಲ. ಅದನ್ನು ಖಂಡಿಸುತ್ತಿಲ್ಲ.
ಏಕೆ ಅದರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜನಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿಲ್ಲ? ಇಂದು ಅಸಂಖ್ಯಾತ ಭಕ್ತರು ತಮ್ಮ ಆಸ್ತಿ, ನೆಮ್ಮದಿ, ತನು- ಮನವನ್ನೂ ಇವರ ಪಾದಕ್ಕೆ ಅರ್ಪಿಸಿ ಮೋಸ ಹೋಗುತ್ತಿದ್ದಾರೆ. ಅದೆಷ್ಟೋ ಜನ ಕಾಲ್ತುಳಿತಕ್ಕೆ ಸಿಕ್ಕಿ ಸಾವನ್ನಪ್ಪಿ ದ್ದಾರೆ.
ಕಾನೂನಿನ ಕೈಗೆ ಸಿಕ್ಕಿ ಜೈಲು ಪಾಲಾದ ಮೇಲೂ, ನಮ್ಮ ಗುರುಗಳು ತಪ್ಪು ಮಾಡಿರಲು ಸಾಧ್ಯವೇ ಇಲ್ಲ, ಇದು ಪಿತೂರಿ ಎಂದು ವಾದಿಸುವ ಅಂಧಾಭಿಮಾನಿಗಳನ್ನು ನೋಡಿದ್ದೇವೆ. ವ್ಯಕ್ತಿಪೂಜೆ ಎಂಬುದು ಮನುಷ್ಯನ ಕನಿಷ್ಠ ಜ್ಞಾನ ಮತ್ತು ವಿವೇಚನೆಯನ್ನು ಹೇಗೆ ಕುರುಡು ಮಾಡುತ್ತದೆ ಎಂಬುದು ಗೊತ್ತಿದ್ದರೂ ದೇವರ ವೇಷ ಹಾಕಿ ತಾನೇ ದೇವರೆಂದು ವರ್ತಿಸುವ ಜನರನ್ನು ನಾವೇಕೆ ಹಿಂಬಾಲಿಸುತ್ತಿದ್ದೇವೆ?
ಧಾರ್ಮಿಕ ಗುರುಗಳು ದೇವರಲ್ಲ, ಅವರ ನಿಜವಾದ ಕಾಯಕ ಸಮಾಜವನ್ನು ಒಗ್ಗೂಡಿಸುವುದು. ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುವುದು. ರಾಜಕೀಯ ನಾಯಕರು ಸಹ ದೇವರಲ್ಲ. ಅವರ ಕಾಯಕ ಜನಸೇವೆ. ಸಿನಿಮಾನಟರ ಕೆಲಸ ಮನರಂಜನೆ ನೀಡುವುದು ಹಾಗೂ ಸಮಾಜಕ್ಕೆ ಚಿತ್ರ ಮಾಧ್ಯಮದ ಮೂಲಕ ಉತ್ತಮ ಸಂದೇಶ ನೀಡುವುದು. ಕ್ರಿಕೆಟ್ ಆಟಗಾರನೂ ದೇವರಲ್ಲ.
ಆತನ ಕಾಯಕ ಜನರಲ್ಲಿ ಕ್ರೀಡಾಸ್ಪೂರ್ತಿ ಮೂಡಿಸಿ, ಕ್ರೀಡೆಗೆ ಪ್ರೋತ್ಸಾಹ ನೀಡುವುದು. ಇವರಾರೂ ದೇವರ ವೇಷ ಧರಿಸದಿದ್ದರೂ ಸಹ ನಾವೇ ಅವರನ್ನು ದೇವರನ್ನಾಗಿಸಿದ್ದೇವೆ. ಚುನಾವಣಾ ಪ್ರಚಾರಕ್ಕೆ ಜನಸೇವೆ ಮಾಡಲು ಅವಕಾಶ ನೀಡಿ ಎಂದು ಮನವಿ ಮಾಡಲು ಬಂದ ರಾಜಕೀಯ ನಾಯಕರ ರೋಡ್ ಶೋಗಳಲ್ಲಿ ಕುಟುಂಬದವರನ್ನೆ ನಿಲ್ಲಿಸಿಕೊಂಡು ಕೆಜಿಗಟ್ಟಲೇ ಹೂವು ಎಸೆಯುತ್ತೇವೆ.
ನಟರನ್ನು ದೇವರನ್ನಾಗಿಸಿ ಸಿನಿಮಾ ಬಿಡುಗಡೆಯಾದಾಗ ನೂರಾರು ಅಡಿ ಎತ್ತರದ ಕಟೌಟ್‌ಗಳಿಗೆ ಲೀಟರ್ʼಗಟ್ಟಲೆ ಹಾಲಿನ ಅಭಿಷೇಕ ಮಾಡುತ್ತೇವೆ. ತಮಿಳುನಾಡಿನಲ್ಲಿ ಎಂ.ಜಿ. ರಾಮಚಂದ್ರನ್, ಜಯಲಲಿತಾ ಮತ್ತು ಕರುಣಾನಿಧಿ ಅವರಂತಹ ನಾಯಕರಿಗೆ ಬೆಂಬಲಿಗರು ದೇವಸ್ಥಾನಗಳನ್ನು ಕಟ್ಟಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಗುಜರಾತ್ ಮತ್ತು ಉತ್ತರ ಪ್ರದೇಶದ ಕೆಲವು ಹಳ್ಳಿಗಳಲ್ಲಿ, ಹಾಗೆಯೇ ಸೋನಿಯಾ ಗಾಂಧಿ ಅವರಿಗಾಗಿ ತೆಲಂಗಾಣದಲ್ಲಿ ಬೆಂಬಲಿಗರು ದೇವಸ್ಥಾನ ಕಟ್ಟಿ, ವಿಗ್ರಹ ಇಟ್ಟು ಪೂಜೆ ಸಲ್ಲಿಸಿದ ಘಟನೆಗಳು ನಡೆದಿವೆ.
ನಟ ರಜನಿಕಾಂತ್ ಅವರಿಗೆ ತಮಿಳುನಾಡಿನಲ್ಲಿ ದೇವಸ್ಥಾನವಿದೆ. ನಟಿಯರಾದ ಖುಷ್ಬೂ, ನಯನತಾರಾ, ಹಂಸಿಕಾ ಮೋತ್ವಾನಿ ಅವರಿಗೂ ಅಭಿಮಾನಿಗಳು ಗುಡಿ ಕಟ್ಟಿ ಪೂಜೆ ಮಾಡಿದ್ದಾರೆ. ಕರ್ನಾಟಕದಲ್ಲೂ ಇದೇನೂ ಹೊರತಲ್ಲ. ಕ್ರಿಕೆಟ್ ಲೋಕದ ದೇವರೆಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಅವರಿಗೆ ಬಿಹಾರದಲ್ಲಿ ಅಭಿಮಾನಿಯೊಬ್ಬ ದೇವಸ್ಥಾನ ಕಟ್ಟಿದ್ದಾನೆ.
ವಾಸ್ತವದಲ್ಲಿ ಸ್ವಾಮೀಜಿಗಳಾಗಲಿ, ಸಿನಿಮಾ ತಾರೆಯರು, ರಾಜಕೀಯ ನಾಯಕರು, ಕ್ರಿಕೆಟ್ ಆಟಗಾರರು ಜನರಿಗೆ ವಿವಿಧ ಕ್ಷೇತ್ರದಲ್ಲಿ ತಮ್ಮಿಷ್ಟದ ವ್ಯಕ್ತಿಗಳ ಮೇಲೆ, ಸಾಧಕರ ಮೇಲೆ ಇರಬೇಕಾ ದದ್ದು ಅಭಿಮಾನ ಮಾತ್ರ. ಆದರೆ ನಾವು ಅಂಧಾಭಿಮಾನದತ್ತ ಸಾಗಿ ವ್ಯಕ್ತಿಯನ್ನು ದೇವರನ್ನಾಗಿಸು ತ್ತಿದ್ದೇವೆ. ಯಾವ ಸಮಾಜದಲ್ಲಿ ಮನುಷ್ಯರನ್ನು ದೇವರೆಂದು ಪೂಜಿಸಲಾಗುತ್ತದೆ ಯೋ, ಆ ಸಮಾಜದಲ್ಲಿ ನೈಜ ಮಾನವೀಯ ಮೌಲ್ಯಗಳು ಸತ್ತುಹೋಗುತ್ತವೆ. ರಕ್ತ-ಮಾಂಸದ ಮನುಷ್ಯರನ್ನು ಮನುಷ್ಯರನ್ನಾಗಿಯೇ ನೋಡೋಣ. ಅವರಲ್ಲಿನ ಒಳ್ಳೆಯ ಗುಣಗಳನ್ನು ಗೌರವಿಸೋಣ, ತಪ್ಪು ಗಳನ್ನು ತಿದ್ದೋಣ.
ನಾವು ಮನುಷ್ಯನನ್ನು ದೇವರು ಎಂದು ಭಾವಿಸಿದ ತಕ್ಷಣ, ಆತ ತಪ್ಪು ಮಾಡಲು ಸಾಧ್ಯವೇ ಇಲ್ಲ ಎಂಬ ಭ್ರಮೆಗೆ ಜಾರುತ್ತೇವೆ. ಇದರಿಂದಾಗಿ ಆ ವ್ಯಕ್ತಿ ಮಾಡುವ ತಪ್ಪುಗಳನ್ನು, ಅಪರಾಧಗಳನ್ನು ಅಥವಾ ಭ್ರಷ್ಟಾಚಾರವನ್ನು ಸಮಾಜವು ಸಮರ್ಥಿಸಿಕೊಳ್ಳಲು ತೊಡಗುತ್ತದೆ. ಇದು ಅಪರಾಧ ಪ್ರವೃತ್ತಿಗೆ ನಾವೇ ಅರಿವಿಲ್ಲದೆ ನೀಡುವ ಪ್ರೋತ್ಸಾಹ.
ಪ್ರಶ್ನಿಸುವುದು ಮತ್ತು ವಿಮರ್ಶಿಸುವುದು ಪ್ರಗತಿಪರ ಸಮಾಜದ ಲಕ್ಷಣ. ಒಬ್ಬ ರಾಜಕೀಯ ನಾಯಕ ನನ್ನು ಅಥವಾ ಸಾರ್ವಜನಿಕ ವ್ಯಕ್ತಿಯನ್ನು ದೇವರಾಗಿಸಿದಾಗ, ಆತನ ತಪ್ಪು ನಿರ್ಧಾರಗಳನ್ನು ಪ್ರಶ್ನಿಸುವ ಧೈರ್ಯ ಯಾರಿಗೂ ಇರುವುದಿಲ್ಲ. ಪ್ರಶ್ನಿಸಿದವರನ್ನು ದೇಶದ್ರೋಹಿಗಳು ಅಥವಾ ಧರ್ಮದ್ರೋಹಿಗಳು ಎಂದು ಬಿಂಬಿಸಲಾಗುತ್ತದೆ. ಇದು ಸಮಾಜವನ್ನು ಸರ್ವಾಧಿಕಾರದತ್ತ ತಳ್ಳುತ್ತದೆ.
ಇಂದು ರಾಜಕೀಯ ನಾಯಕರನ್ನು ದೇವರಂತೆ ಕಾಣುವ ಪ್ರವೃತ್ತಿ ಹೆಚ್ಚಾಗಿದೆ. ನಾಯಕರೊಬ್ಬರು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಾಗ ಅಥವಾ ಭ್ರಷ್ಟಾಚಾರದಲ್ಲಿ ತೊಡಗಿದಾಗಲೂ, ಅವರ ಬೆಂಬಲಿಗರು ಅದನ್ನು ಸಮರ್ಥಿಸಿಕೊಳ್ಳುತ್ತಾರೆ. ಅವರು ಮಾಡಿzಲ್ಲವೂ ದೇಶದ ಒಳಿತಿಗೇ ಎಂದು ಕಣ್ಣು ಮುಚ್ಚಿ ನಂಬುತ್ತಾರೆ. ರಾಜಕಾರಣಿಗಳನ್ನು ಪ್ರಶ್ನಿಸುವುದನ್ನು ನಿಲ್ಲಿಸಿದ ದಿನ ಪ್ರಜಾಪ್ರಭುತ್ವ ಸತ್ತು, ಸರ್ವಾಧಿಕಾರ ಹುಟ್ಟಿಕೊಳ್ಳುತ್ತದೆ ಎಂಬುದನ್ನು ಮರೆಯಬಾರದು.
‘ಪತ್ರಿಕೆ ಓದುಗರಿಗೆ ಸತ್ಯದರ್ಶನ ಮಾಡಿಸಬೇಕು, ಸದ್ವಿಚಾರ ಹಂಚುವ ಕಾಯಕ ಮಾಡಬೇಕೇ ವಿನಃ ಪತ್ರಿಕಾ ಸ್ವಾತಂತ್ರ್ಯ ದುರುಪಯೋಗ ಮಾಡಬಾರದಿತ್ತು’ ಎಂಬ ಟೀಕೆ. ಡಿಕೆಶಿ ಎಂಬ ರಾಜಕೀಯ ವ್ಯಕ್ತಿಯನ್ನು ಶಿವನ ರೂಪದಲ್ಲಿ ಒಪ್ಪದ ನಾವು, ನಿತ್ಯವೂ ಸಮಾಜದಲ್ಲಿ ವ್ಯಕ್ತಿಗಳನ್ನು ದೇವರೆಂದು ಪೂಜಿಸುತ್ತಿರುವುದು ತಪ್ಪೆಂದು ಸೂಚ್ಯವಾಗಿ ವಿಶ್ವವಾಣಿ ಪತ್ರಿಕೆಯ ಮೂಲಕ ಓದುಗರಿಗೆ ವಿಶ್ವೇಶ್ವರ ಭಟ್ ಪರೋಕ್ಷವಾಗಿ ಸತ್ಯದರ್ಶನ ಮಾಡಿಸಿದ್ದೆಂದು ಏಕೆ ಭಾವಿಸುವುದಿಲ್ಲ? ಭಟ್ಟರೇನು ದಡ್ಡರಲ್ಲ, ಪತ್ರಿಕೆ ಖಂಡಿತವಾಗಿಯೂ ಸುದ್ದಿಯಾಗುತ್ತದೆ ಎಂದು ಅರಿತವರೇ.
ಡಿಕೆಶಿಯಲ್ಲಿ ಶಿವನ ಎರಡೂ ಗುಣಗಳಿವೆ. ಅವರು ಸುಲಭವಾಗಿ ಸೋಲೊಪ್ಪದ ಬಂಡೆ. ಸಾಧಿಸುವ ಹಠವಾದಿ. ಪಕ್ಷಕ್ಕೆ ನಿಷ್ಠಾವಂತ. ಡಿಕೆಶಿ ರಾಜ್ಯದ ಜನತೆಗೆ ಶಿವನಂತೆ ಅಭಯ ಹಸ್ತ ನೀಡಿ ರಾಜ್ಯದ ಅಭಿವೃದ್ಧಿಗೆ ಕಾರಣರಾಗುತ್ತಾರೋ ಅಥವಾ ಲಯಕಾರನಂತೆ ರಾಜ್ಯದ ಜನರ ಸ್ಥಿತಿ ಶೋಚನೀಯ ವಾಗುವಂತೆ ಆಡಳಿತ ನಡೆಸುತ್ತಾರೋ ನೋಡೋಣ ಎಂಬ ಚಿಂತನೆಯೂ ಈ ಶಿವ ವೇಷದಲ್ಲಿ ಕಾಣಬಹುದು.
ಡಿಕೆಶಿಗೆ ಧರ್ಮ, ಪರಂಪರೆಯ ಅರಿವಿದೆ. ಮಾಧ್ಯಮಗಳು ಮತ್ತು ಕಾರ್ಟೂನಿಸ್ಟ್‌ಗಳು ರಾಜಕಾರಣಿ ಗಳನ್ನು ವಿವಿಧ ರೂಪಗಳಲ್ಲಿ ಚಿತ್ರಿಸುವುದು ಹೊಸದೇನಲ್ಲ. ಬಜೆಟ್ ಮಂಡಿಸುವಾಗ ಹಣಕಾಸು ಸಚಿವರನ್ನು ಲಕ್ಷ್ಮಿಯಂತೆ, ಯುದ್ಧದ ಸಂದರ್ಭದಲ್ಲಿ ನಾಯಕರನ್ನು ಅರ್ಜುನನಂತೆ ಚಿತ್ರಿಸುವ ಪರಂಪರೆ ಇದೆ.
ಅಯೋಧ್ಯೆಯ ಶ್ರೀರಾಮಮಂದಿರದ ಪ್ರಾಣಪ್ರತಿಷ್ಠೆಯ ಸಂದರ್ಭದಲ್ಲಿ ಒಂದು ಇಂಗ್ಲಿಷ್ ಪತ್ರಿಕೆ ಮೋದಿಯವರನ್ನೇ ಶ್ರೀರಾಮ ಕೈಹಿಡಿದು ನಡೆಸಿಕೊಂಡು ಹೋಗುತ್ತಿರುವಂತೆ ಚಿತ್ರಿಸಿತ್ತು. ಇಲ್ಲೂ ಸಹ ಕೇವಲ ವ್ಯಕ್ತಿಯನ್ನು ದೇವರಾಗಿಸುವ ಉದ್ದೇಶಕ್ಕಿಂತ ಹೆಚ್ಚಾಗಿ, ಅವರ ಹೆಸರಿನಲ್ಲಿರುವ ‘ಶಿವ’ ಎಂಬ ಪದವನ್ನ ಆಧರಿಸಿ ಪತ್ರಿಕೆಯು ಮಾಡಿದ ಒಂದು ಸೃಜನಶೀಲ ಅಥವಾ ಕಲಾತ್ಮಕ ವಿನ್ಯಾಸ ಇದು ಎಂದು ನೋಡಬಹುದು.
ಒಂದಂತೂ ನಿಜ, ಈ ಪ್ರಯೋಗದಿಂದ ಸಮಾಜಕ್ಕೆ ವ್ಯಕ್ತಿಯನ್ನು ದೇವರಾಗಿಸುವ ಅಪಾಯದ ಎಚ್ಚರಿಕೆಯ ಕರೆಯನ್ನು ವಿಶ್ವವಾಣಿಯ ಮೂಲಕ ವಿಶ್ವೇಶ್ವರ ಭಟ್ ನೀಡಿದ್ದಾರೆ. ಕೊನೆಯದಾಗಿ ವಿಶ್ವವಾಣಿಯ ಮುಖಪುಟವು ಎಷ್ಟರ ಮಟ್ಟಿಗೆ ಸುದ್ದಿ ಮಾಡಿತು ಎಂದರೆ ಮರುದಿನ ಜನಪ್ರಿಯ ತಮಿಳು ಪತ್ರಿಕೆ ‘ದಿನ ಮಲರ್’ ಡಿಕೆಶಿ ಪ್ರಮಾಣ ವಚನ ಮತ್ತು ವಿಶ್ವವಾಣಿ ಮುಖಪುಟವನ್ನು ಸಮಸಮವಾಗಿ ಮುಖಪುಟದಲ್ಲಿ ಪ್ರಕಟಿಸಿತ್ತು. ಇಂಗ್ಲಿಷ್ ಪತ್ರಿಕೆಗಳೂ ವರದಿ ಮಾಡಿದವು. ಭಟ್ಟರ ಸುದ್ದಿಕಾಯಕದ ಮರ್ಮ ಅಷ್ಟು ಸುಲಭವಾಗಿ ಇನ್ನೊಬ್ಬರಿಗೆ ಅರ್ಥವಾಗದು.