ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Thimmanna Bhagwat Column: ಪೌರತ್ವ ಪರೀಕ್ಷೆಯಲ್ಲಿ ಪಾಸ್‌ಪೋರ್ಟ್ ಪಾಸ್ ಆಗಲ್ಲ ಏಕೆ?

ಭಾರತದ ಸಂಸತ್ತು 1955ರಲ್ಲಿ ನಾಗರಿಕತ್ವ ಕಾಯಿದೆಯನ್ನು (Citizenship Act 1955) ಅಂಗೀಕರಿಸಿತು. ಭಾರತದ ನಾಗರಿಕತ್ವದ ಕುರಿತಾಗಿ ಈ ಕಾಯಿದೆಯ ತಾತ್ಪರ್ಯ ಈ ಮುಂದಿನಂತಿದೆ: ಹುಟ್ಟಿನಿಂದ ನಾಗರಿಕತ್ವ: ಕಾಯಿದೆಯ 3ನೇ ಕಲಮಿನ ಪ್ರಕಾರ ಯಾವದೇ ವ್ಯಕ್ತಿ 26 ಜನವರಿ 1950ರ ನಂತರ ಮತ್ತು 1987ರ ಜುಲೈ ಒಂದರ ಮೊದಲು ಭಾರತದಲ್ಲಿ ಜನಿಸಿದ್ದರೆ ಅಥವಾ ಜುಲೈ 1, 1987ರ ನಂತರ ಮತ್ತು 2003ರ ನಾಗರಿಕತ್ವ ತಿದ್ದುಪಡಿ ಕಾಯಿದೆ ಜಾರಿಯಾಗುವ ಮೊದಲು ಹುಟ್ಟಿದ್ದು ಆತನ ತಂದೆ ಅಥವಾ ತಾಯಿ ಆತನ ಜನನದ ಸಂದರ್ಭದಲ್ಲಿ ಭಾರತದ ನಾಗರಿಕರಾಗಿದ್ದರೆ ಅಂಥ ವ್ಯಕ್ತಿಗಳು ಭಾರತದ ನಾಗರಿಕರಾಗುತ್ತಾರೆ.

ಪೌರತ್ವ ಪರೀಕ್ಷೆಯಲ್ಲಿ ಪಾಸ್‌ಪೋರ್ಟ್ ಪಾಸ್ ಆಗಲ್ಲ ಏಕೆ?

-

Profile
Ashok Nayak Jul 13, 2026 6:00 AM

ಕಾನೂನ್ ಸೆನ್ಸ್

ತಿಮ್ಮಣ್ಣ ಭಾಗವತ್

ಅಕ್ರಮ ವಲಸಿಗರ ವಿರುದ್ಧ ಪಶ್ಚಿಮ ಬಂಗಾಲದಲ್ಲಿ ನಡೆಯುತ್ತಿರುವ ಕಾರ್ಯಾಚರಣೆ ಹಾಗೂ ದೇಶಾದ್ಯಂತ ನಡೆದಿರುವ ಮತಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗಳ ಕಾರಣಕ್ಕೆ ದೇಶದ ನಾಗರಿಕತ್ವವನ್ನು ಸಾಬೀತುಪಡಿಸಲು ಬೇಕಾದ ದಾಖಲೆಗಳ ಕುರಿತು ಗೊಂದಲ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ನಾಗರಿಕತ್ವ ಕಾಯಿದೆಯ ಸ್ಥೂಲ ಪರಿಚಯ ಅಗತ್ಯ.

ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಸರಕಾರದ ಪ್ರಜೆಗಳಾಗಿದ್ದ ಭಾರತೀಯರಿಗೆ ಯಾವದೇ ದೇಶದ ನಾಗರಿಕತ್ವ ಮತ್ತು ಅದರ ಆಧಾರದಲ್ಲಿ ದೊರೆಯಬೇಕಾದ ಹಕ್ಕುಗಳು ಇರಲಿಲ್ಲ. ಸ್ವಾತಂತ್ರ್ಯದ ನಂತರ ಧರ್ಮಾಧಾರಿತವಾಗಿ ನಡೆದ ದೊಂಬಿ ಮತ್ತು ಹಿಂಸಾಚಾರಗಳ ಕಾರಣಕ್ಕೆ ಪೂರ್ವ ಮತ್ತು ಪಶ್ಚಿಮ ಪಾಕಿಸ್ಥಾನದಿಂದ ಅತೀ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮೇತರರು ದೇಶದೊಳಗೆ ಗುಳೆ ಬಂದರು. ಅವರೆಲ್ಲ ದೇಶ ವಿಭಜನೆಯ ನಂತರ ಪಾಕಿಸ್ತಾನಕ್ಕೆ ಸೇರಿದ ಭೂಭಾಗದಲ್ಲಿ ವಾಸಿಸುತ್ತಿದ್ದವರು.

ಅವರೆಲ್ಲರ ನಾಗರಿಕತ್ವದ ಪರಿಶೀಲನೆಯ ಪ್ರಕ್ರಿಯೆ ಅಷ್ಟು ಸರಳವಾಗಿರಲಿಲ್ಲ. ಜೊತೆಗೆ ದೇಶಾದ್ಯಂತ ಇದ್ದ ಅನೇಕ ಸಂಸ್ಥಾನಗಳ ಪ್ರಜೆಗಳಾಗಿದ್ದ ಜನರಿಗೆ ನಾಗರಿಕತ್ವ ದೊರೆಯಲು ಅಂಥ ಸಂಸ್ಥಾನಗಳು ಭಾರತದ ಗಣರಾಜ್ಯ ಅಥವಾ ಪಾಕಿಸ್ಥಾನದೊಂದಿಗೆ ವಿಲೀನಗೊಳ್ಳುವ ಪ್ರಕ್ರಿಯೆ ಮುಗಿಯಬೇಕಿತ್ತು. 1950ರಲ್ಲಿ ಅಳವಡಿಸಿಕೊಂಡ ಸಂವಿಧಾನದ 5ನೇ ವಿಧಿ, ವ್ಯಕ್ತಿ ಅಥವಾ ಆತನ ತಂದೆತಾಯಿಗಳಿಬ್ಬರ ರಹವಾಸ ಅಥವಾ ಜನನದ ಆಧಾರದಲ್ಲಿ ನಾಗರಿಕತ್ವ ನೀಡುವ ಕುರಿತು ಇದೆ. 6ನೇ ವಿಧಿ ದೇಶದ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನದಿಂದ ಭಾರತದೊಳಕ್ಕೆ ವಲಸೆ ಬಂದವರಿಗೆ ನಾಗರಿಕತ್ವ ಒದಗಿಸುವ ಕುರಿತು ಹೇಳುತ್ತದೆ. 7ನೇ ವಿಧಿಯು ವಿದೇಶದಲ್ಲಿದ್ದ ಭಾರತ ಮೂಲದ ವ್ಯಕ್ತಿಗಳ ನಾಗರಿಕತ್ವದ ಕುರಿತು ಹೇಳುತ್ತದೆ.

ಭಾರತದ ಸಂಸತ್ತು 1955ರಲ್ಲಿ ನಾಗರಿಕತ್ವ ಕಾಯಿದೆಯನ್ನು (Citizenship Act 1955) ಅಂಗೀಕರಿಸಿತು. ಭಾರತದ ನಾಗರಿಕತ್ವದ ಕುರಿತಾಗಿ ಈ ಕಾಯಿದೆಯ ತಾತ್ಪರ್ಯ ಈ ಮುಂದಿ ನಂತಿದೆ: ಹುಟ್ಟಿನಿಂದ ನಾಗರಿಕತ್ವ: ಕಾಯಿದೆಯ 3ನೇ ಕಲಮಿನ ಪ್ರಕಾರ ಯಾವದೇ ವ್ಯಕ್ತಿ 26 ಜನವರಿ 1950ರ ನಂತರ ಮತ್ತು 1987ರ ಜುಲೈ ಒಂದರ ಮೊದಲು ಭಾರತದಲ್ಲಿ ಜನಿಸಿದ್ದರೆ ಅಥವಾ ಜುಲೈ 1, 1987ರ ನಂತರ ಮತ್ತು 2003ರ ನಾಗರಿಕತ್ವ ತಿದ್ದುಪಡಿ ಕಾಯಿದೆ ಜಾರಿಯಾಗುವ ಮೊದಲು ಹುಟ್ಟಿದ್ದು ಆತನ ತಂದೆ ಅಥವಾ ತಾಯಿ ಆತನ ಜನನದ ಸಂದರ್ಭದಲ್ಲಿ ಭಾರತದ ನಾಗರಿಕರಾಗಿದ್ದರೆ ಅಂಥ ವ್ಯಕ್ತಿಗಳು ಭಾರತದ ನಾಗರಿಕರಾಗುತ್ತಾರೆ. 2003ರ ನಾಗರಿಕತ್ವ ತಿದ್ದುಪಡಿ ಕಾಯಿದೆಯ ಪ್ರಕಾರ ವ್ಯಕ್ತಿಯೊಬ್ಬ 2003ರ ನಂತರ ಭಾರತದಲ್ಲಿ ಹುಟ್ಟಿದರೂ ಅವನ ಜನ್ಮ ದಿನಾಂಕದಂದು ಅವನ ತಾಯಿ, ತಂದೆಯರಿಬ್ಬರೂ ಭಾರತದ ನಾಗರಿಕರಲ್ಲದಿದ್ದರೆ ಅಥವಾ ತಾಯಿ ತಂದೆಯರಿಬ್ಬರ ಪೈಕಿ ಒಬ್ಬರು ಅಕ್ರಮ ವಲಸಿಗರಾಗಿದ್ದರೆ ಅವನಿಗೆ/ ಅವಳಿಗೆ ಭಾರತದಲ್ಲಿ ಹುಟ್ಟಿದ ಕಾರಣಕ್ಕೆ ಭಾರತದ ನಾಗರಿಕತ್ವ ದೊರೆಯುವದಿಲ್ಲ.

ಇದನ್ನೂ ಓದಿ: Thimmanna Bhagwath Column: ಆಯಾ ರಾಮ್‌ ಗಯಾ ರಾಮ್:‌ ಕಾನೂನು ಮರೆತರೇ ?

ವಂಶ ಅಥವಾ ಮೂಲದಿಂದ (Descent): (Section 4) ವ್ಯಕ್ತಿಯೊಬ್ಬ 10-12-1992ರ ಮೊದಲು ವಿದೇಶದಲ್ಲಿ ಹುಟ್ಟಿದರೂ ಆತನ ಜನ್ಮ ದಿನಾಂಕದಂದು ಆತನ ತಂದೆ ಭಾರತದ ನಾಗರಿಕತ್ವವನ್ನು ಹೊಂದಿದ್ದರೆ ಮತ್ತು ಆತನ ಜನನ 10-12-1992ರ ನಂತರವಾದರೆ ಆತನ ತಾಯಿ ತಂದೆಯರ ಪೈಕಿ ಒಬ್ಬರು ಭಾರತದ ನಾಗರಿಕತ್ವವನ್ನು ಹೊಂದಿದ್ದರೆ ಆತನಿಗೆ ಮೂಲದ ಕಾರಣದಿಂದ ಭಾರತದ ನಾಗರಿಕತ್ವ ದೊರೆಯುತ್ತದೆ. ಅಂಥ ಸಂದರ್ಭಗಳಲ್ಲಿ ಭಾರತದ ರಾಯಭಾರ ಕಚೇರಿಯಲ್ಲಿ ಜನನ ನೋಂದಣಿಯಾಗಿರಬೇಕು ಎಂಬ ನಿಯಮವಿದೆ.

ನೋಂದಣಿಯಿಂದ (Registrtation – Section 5): ಕೆಲವು ನಿಬಂಧನೆಗಳಿಗೊಳಪಟ್ಟು ಭಾರತದ/ ಅವಿಭಜಿತ ಭಾರತದ ಮೂಲದ ವ್ಯಕ್ತಿಗಳು ಅಥವಾ ಭಾರತದ ನಾಗರಿಕತ್ವವನ್ನು ಹೊಂದಿದವರನ್ನು ಮದುವೆಯಾದ ವ್ಯಕ್ತಿಗಳು ಭಾರತದ ನಾಗರಿಕತ್ವಕ್ಕೆ ಅರ್ಜಿ ಸಲ್ಲಿಸಬಹುದು. ಅವರು ಅಕ್ರಮ ವಲಸಿಗರಲ್ಲದಿದ್ದರೆ ಮತ್ತು ಅರ್ಜಿಗೆ ಮೊದಲು ನಿಗದಿತ ಅವಧಿಗೆ (7-8 ವರ್ಷ) ಭಾರತದಲ್ಲಿ ವಾಸಿಸುತ್ತಿದ್ದರೆ ಅಂಥವರಿಗೆ ಭಾರತದ ನಾಗರಿಕತ್ವ ನೀಡಲು ಅವಕಾಶವಿದೆ. ನೋಂದಣಿಯಿಂದ ನಾಗರಿಕತ್ವ ಪಡೆಯಲು ಇನ್ನೂ ಅನೇಕ ನಿಬಂಧನೆಗಳಿವೆ.

ನೈಸರ್ಗೀಕರಣ (Naturalisation): ಈ ಕಾಯಿದೆಯ 3ನೇ ಅನುಬಂಧದಲ್ಲಿ ಕಾಣಿಸಿದ ನಿಯಮ ಗಳಿಗೊಳಪಟ್ಟು ಕೇಂದ್ರ ಸರಕಾರಕ್ಕೆ ಈ ಕುರಿತು ಅರ್ಜಿ ಸಲ್ಲಿಸಿದರೆ, ಭಾರತ ಸಂಜಾತ ರಲ್ಲದವರಿಗೂ ಭಾರತದ ನಾಗರಿಕತ್ವ ನೀಡುವ ಅವಕಾಶಗಳಿವೆ. ನಾಗರಿಕತ್ವದ ಕಾಯಿದೆಯಲ್ಲಿ ಇನ್ನೂ ಅನೇಕ ನಿಬಂಧನೆಗಳಿವೆ.

ದ್ವಿಪೌರತ್ವ (Dual-citizeship): ನಾಗರಿಕತ್ವ ಕಾಯಿದೆ 1955ರ 9ನೇ ಕಲಮಿನ ಪ್ರಕಾರ ಭಾರತದ ನಾಗರಿಕತ್ವ ಹೊಂದಿರುವ ವ್ಯಕ್ತಿಯೊಬ್ಬ ಬೇರೆ ಯಾವದೇ ಇನ್ನೊಂದು ದೇಶದ ನಾಗರಿಕತ್ವವನ್ನು ಹೊಂದಿದ್ದರೆ ಅವನ ಭಾರತದ ಪೌರತ್ವ ತನ್ನಿಂದ ತಾನೇ ರದ್ದಾಗುತ್ತದೆ. ಇತರ ಕೆಲವು ದೇಶಗಳಲ್ಲಿ ಅನುಮತಿಸಲಾಗುವ ದ್ವಿಪೌರತ್ವಕ್ಕೆ ಭಾರತದ ನಾಗರಿಕತ್ವ ಕಾಯಿದೆಯಲ್ಲಿ ಅವಕಾಶವಿಲ್ಲ.

ಪಾಸ್‌ಪೋರ್ಟ್ ಮತ್ತು ನಾಗರಿಕತ್ವ: ಪೋರ್ಟ್ ಅಂದರೆ ಬಂದರು ಅಥವಾ ವಿಮಾನ ನಿಲ್ದಾಣ. ಪಾಸ್ ಅಂದರೆ ಅನುಮತಿ. ಪೋರ್ಟ್ ಮೂಲಕ ಹೊರ ಹೋಗಲು ಅನುಮತಿ ನೀಡುವ ಪತ್ರವೇ ಪಾಸ್‌ಪೋರ್ಟ್. ಸರಳ ಅರ್ಥದಲ್ಲಿ ಪಾಸ್‌ಪೋರ್ಟ್ ಒಂದು ಸಂಚಾರದ ಅನುಮತಿ ಪತ್ರ ಅಥವಾ Travel Document. 1967ರ ಪಾಸ್‌ಪೋರ್ಟ್ ಕಾಯಿದೆಯ 3ನೇ ಕಲಮಿನ ಪ್ರಕಾರ ಜಲ, ಭೂಮಿ ಅಥವಾ ವಾಯುಮಾರ್ಗಗಳ ಮೂಲಕ ಭಾರತದ ಹೊರಗೆ ಪ್ರಯಾಣಿಸಲು ಮಾನ್ಯತೆ ಇರುವ ಭಾರತದ ಪಾಸ್‌ಪೋರ್ಟ್ ಹೊಂದಿರಬೇಕಾದದ್ದು ಕಡ್ಡಾಯ.

passport

ವಿದೇಶದಲ್ಲಿ ಭಾರತದ ನಾಗರಿಕರೆಂದು ಸಾಬೀತುಪಡಿಸಲು ಭಾರತದ ಪಾಸ್‌ಪೋರ್ಟ್ ಒಂದು ಅಗತ್ಯ ದಾಖಲೆ. ಅದನ್ನು ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ, ಭಾರತದ ನಾಗರಿಕರಿಗೆ ಮಾತ್ರ ನೀಡಲಾಗುತ್ತದೆ ಮತ್ತು ನಾಗರಿಕತ್ವ ಸಾಬೀತು ಪಡಿಸಲು ಬೇಕಾದ ಎಲ್ಲಾ ದಾಖಲೆಗಳನ್ನು ಪಡೆದು ಅಗತ್ಯ ವಿಚಾರಣೆ ಮತ್ತು ಪೊಲೀಸ್ ಪರಿಶೀಲನೆ ನಡೆಸಿದ ನಂತರವೇ ಪಾಸ್‌ಪೋರ್ಟ್ ನೀಡಲಾಗುತ್ತದೆ. ಆದ್ದರಿಂದ ಭಾರತದ ನಾಗರಿಕತ್ವದ ಪುರಾವೆಗೆ ಪಾಸ್‌ಪೋರ್ಟ್‌ನಷ್ಟು ಸೂಕ್ತವಾದ ಇನ್ನೊಂದು ಏಕಮಾತ್ರ ದಾಖಲೆ ಇಲ್ಲ.

ಆದರೆ ವಿದೇಶಾಂಗ ಇಲಾಖೆ ‘ಪಾಸ್‌ಪೋರ್ಟ್ ಒಂದು ಸಂಚಾರದ ದಾಖಲೆ ಮಾತ್ರವೇ ಹೊರತು ಅದೇ ನಾಗರಿಕತ್ವದ ಅಂತಿಮ (Conclusive) ಪುರಾವೆಯಲ್ಲ’ ಎಂಬ ಸ್ಪಷ್ಟೀಕರಣ ನೀಡಿದೆ. ಈ ಕುರಿತು ಅನೇಕರು ತೀವ್ರ ಆಕ್ಷೇಪ ಎತ್ತಿದ್ದಾರೆ. ಪಾಸ್‌ಪೋರ್ಟ್ ಕಾಯಿದೆಯ 6(2)ಎ ಕಲಮಿನ ಪ್ರಕಾರ ಪಾಸ್‌ಪೋರ್ಟ್ ನೀಡುವ ಪ್ರಾಧಿಕಾರ ಯಾವದೇ ವ್ಯಕ್ತಿ ಭಾರತದ ನಾಗರಿಕರಲ್ಲದಿದ್ದರೆ ಅವರಿಗೆ ಪಾಸ್‌ಪೋರ್ಟ್ ನೀಡಲು ನಿರಾಕರಿಸಬಹುದು ಎಂದಿದೆ. ಅಂದರೆ ಪಾಸ್‌ಪೋರ್ಟ್ ಪಡೆಯಲು ನಾಗರಿಕತ್ವ ಕಡ್ಡಾಯ ಎಂದಾಯಿತು ಮತ್ತು ಆ ಕಾರಣಕ್ಕೆ ಪಾಸ್‌ಪೋರ್ಟ್ ನಾಗರಿಕತ್ವ ದ ಪುರಾವೆಯೇ ಆಗುತ್ತದೆ ಎಂಬುದು ಅವರೆಲ್ಲರ ವಾದ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪಾಸ್‌ಪೋರ್ಟ್ ಆಗಲಿ ಅಥವಾ ಆಧಾರ್‌ನಂಥ ಇನ್ನಿತರ ದಾಖಲೆಗಳನ್ನಾಗಲೀ ಯಾವ ಉದ್ದೇಶಕ್ಕಾಗಿ ನೀಡಲಾಗಿದೆ ಎಂಬುದು. ಉದಾಹರಣೆಗೆ ಡ್ರೈವಿಂಗ್ ಲೈಸೆನ್ಸ್‌ನ್ನು ವಾಹನ ಚಲಾವಣೆಯ ಅನುಮತಿ ಪತ್ರವಾಗಿ ನೀಡಲಾಗುತ್ತದೆ. ಅದನ್ನು ಅನೇಕ ಕಡೆ ರಹವಾಸ ಮತ್ತು ವಿಳಾಸದ ಪುರಾವೆಯಾಗಿ ಒಪ್ಪಲಾಗುತ್ತದೆ. ಅದರಂತೆ ಪ್ಯಾನ್ ಕಾರ್ಡ್‌ನ್ನು ಆದಾಯಕರದ ಉದ್ದೇಶಕ್ಕೆ ನೀಡಲಾಗುತ್ತದೆಯಾದರೂ ಅದನ್ನು ಗುರುತಿನ ಅಥವಾ ಜನ್ಮ ದಿನಾಂಕದ ಪುರಾವೆಯಾಗಿ ಕೂಡಾ ಒಪ್ಪಲಾಗುತ್ತದೆ. ಅದರಂತೆ ಪಾಸ್‌ಪೋರ್ಟ್ ನೀಡುವ ಉದ್ದೇಶ ವಿದೇಶ ಪ್ರಯಾಣಕ್ಕೆ ಅನುಮತಿ ನೀಡುವ ಕುರಿತು ಮಾತ್ರ ಎಂಬುದು ವಿದೇಶಾಂಗ ಇಲಾಖೆಯ ವಿವರಣೆ. ಸತ್ವಂತ್ ಸಿಂಗ್ ಹಾಗೂ ಮೇನಕಾ ಗಾಂಧಿ ಪ್ರಕರಣಗಳಲ್ಲಿ ವಿದೇಶ ಸಂಚಾರದ ದಾಖಲೆ ಯಾದ ಪಾಸ್‌ಪೋರ್ಟನ್ನು ಸೂಕ್ತ ಕಾರಣಗಳಿಲ್ಲದೆ ನಿರಾಕರಿಸಬಾರದು ಎಂದು ಸುಪ್ರೀಂ ಕೋರ್ಟು ಹೇಳಿದೆ.

ಕಾನೂನಿನ ದೃಷ್ಟಿಯಿಂದ ವಿದೇಶಾಂಗ ಇಲಾಖೆ ನೀಡಿರುವ ವಿವರಣೆ ಸರಿಯಾಗಿದೆ. ಯಾಕೆಂದರೆ ಪಾಸ್‌ಪೋರ್ಟ್ ನೀಡಿರುವ ಉದ್ದೇಶ ಭಾರತದಲ್ಲಿ ಅದನ್ನು ನಾಗರಿಕತ್ವದ ಪುರಾವೆಯಾಗಿ ಬಳಸುವದಲ್ಲ. ಹಾಗೆ ನೋಡಿದರೆ ಭಾರತದಲ್ಲಿ ನಾಗರಿಕತ್ವದ ಪುರಾವೆ ಎಂದು ಯಾವದೇ ಏಕದಾಖಲೆಯನ್ನು ನೀಡಲಾಗುವದಿಲ್ಲ. 1951ರ ಜನಗಣತಿಯ ಆಧಾರದಲ್ಲಿ ರಾಷ್ಟ್ರೀಯ ನಾಗರಿಕತ್ವದ ರೆಜಿಸ್ಟರ್ (NCR)ನ್ನು ಮಾಡಲು ಒಮ್ಮೆ ಪ್ರಯತ್ನಿಸಲಾಯಿತು. ಆದರೆ ಅದನ್ನು ಕಾಲಕಾಲಕ್ಕೆ ಬದಲಾಯಿಸಲಾಗಿಲ್ಲ. 2019ರ ಅಂತಿಮ ತಿದ್ದುಪಡಿ ಮತ್ತು 2023ರಲ್ಲಿ ಎನ್‌ಆರ್‌ಸಿ ಯನ್ನು ಹೊಸದಾಗಿ ಮಾಡಬೇಕೆಂಬ ಪ್ರಸ್ತಾಪಕ್ಕೆ ತೀವ್ರ ವಿರೋಧ ಬಂತು.

ಹಮ್ ಕಾಗಜ್ ನಹೀ ದೇಂಗೆ ಎಂದು ನಿರ್ದಿಷ್ಟ ಸಮುದಾಯದವರು ಪ್ರತಿಭಟಿಸಿದರು. ದಂಗೆ, ಹಿಂಸಾಚಾರಗಳೂ ನಡೆದ ಕಾರಣಕ್ಕೆ ಅದನ್ನು ಕೈಬಿಡಲಾಯಿತು. ಕೇವಲ ಆಸ್ಸಾಂನಲ್ಲಿ ಮಾತ್ರ ಕೆಲಮಟ್ಟಿಗೆ ಅದನ್ನು ದಾಖಲೀಕರಿಸಲಾಗಿದೆ. ಎನ್‌ಆರ್‌ಸಿ ಪ್ರಕ್ರಿಯೆ ದೇಶಾದ್ಯಂತ ಸರಿಯಾಗಿ ನಡೆದರೆ ನಾಗರಿಕತ್ವದ ಸಮಸ್ಯೆ ಬಗೆಹರಿದು, ಯುರೋಪ್‌ನಂಥ ದೇಶಗಳಲ್ಲಿರುವಂತೆ ಐ.ಡಿ. ಕಾರ್ಡ್ ನೀಡಬಹುದು. ಆಗ ಅದೊಂದು ಏಕಮಾತ್ರ ಪುರಾವೆಯಾಗಬಹುದು.

ಭಾರತದ ಒಳಗಡೆ ಯಾವ ದಾಖಲೆಯನ್ನು ನಾಗರಿಕತ್ವಕ್ಕೆ ಪುರಾವೆಯಾಗಿ ಒದಗಿಸಬೇಕು ಎಂಬುದು ಅದನ್ನು ಯಾವ ಕಾರಣಕ್ಕೆ ಉಪಯೋಗಿಸಲಾಗುತ್ತದೆ ಎಂಬುದನ್ನು ಅವಲಂಬಿಸಿದೆ. ಉದಾಹರ ಣೆಗೆ ಗ್ಯಾಸ್ ಕನೆಕ್ಶನ್ ಕುರಿತಾದರೆ ಏಜೆನ್ಸಿಯವರು ತಮಗೆ ಅನ್ವಯವಾಗುವ ನಿಯಮದ ಪ್ರಕಾರ ಆಧಾರ್ ಕಾರ್ಡ್, ರೇಶನ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್‌ಗಳನ್ನು ಒಪ್ಪಬಹುದು. ಇನ್ನು ಸರಕಾರೀ ಯೋಜನೆಗಳ ಫಲಾನುಭವಿಯಾಗಲು ಆಧಾರ್ ಕಾರ್ಡ್ ಮತ್ತು ರೇಶನ್ ಕಾರ್ಡ್ ಕೇಳಬಹುದು. ಚುನಾವಣೆ ಉದ್ದೇಶಕ್ಕೆ ಚುನಾವಣಾ ಆಯೋಗದ ಆದೇಶಗಳ ಪ್ರಕಾರ ವೋಟರ್ ಕಾರ್ಡ್, ಆಧಾರ್ ಕಾರ್ಡ್‌ನಂಥ ದಾಖಲೆಗಳನ್ನು ನೀಡಬೇಕಾಗುತ್ತದೆ. ಅನೇಕ ಕಡೆ ಕೇವಲ ಪಾಸ್‌ ಪೋರ್ಟನ್ನೇ ಒಪ್ಪಬಹುದು. ಅದು ಆಯಾ ಇಲಾಖೆ ಯವರು ರೂಪಿಸುವ ನಿಯಮಾವಳಿಗಳನ್ನು ಅವಲಂಬಿಸುತ್ತದೆ. ಕೆಲವು ನಿರ್ದಿಷ್ಟ ಕಾರಣಗಳಿಗಾಗಿ ಚುನಾವಣಾ ಆಯೋಗ ಕೇವಲ ಪಾಸ್‌ ಪೋರ್ಟ್‌ನ್ನೋ ಆಧಾರ್ ಕಾರ್ಡನ್ನೋ ದಾಖಲೆಯಾಗಿ ಒಪ್ಪದಿರಬಹುದು. ಆಗ ಅವರು ಕೇಳುವ ಇತರ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.

ಆಧಾರ್ ಕಾರ್ಡ್ ನೀಡುವದನ್ನು ಪ್ರಾರಂಭಿಸಿದಾಗ ಅದೊಂದು ನಾಗರಿಕತ್ವದ ದಾಖಲೆಯಾಗುತ್ತದೆ ಎಂಬ ಭಾವಿಸಲಾಗಿತ್ತು. UIDAI ಬಹುಷಃ ಹಾಗೆ ಹೇಳಿತ್ತು ಕೂಡಾ. ಆದರೆ ದಿನ ಕಳೆದಂತೆ ಆಧಾರ್ ಕಾರ್ಡ್ ನೀಡುವ ಪ್ರಕ್ರಿಯೆಯಲ್ಲಿ ದೋಷಗಳು ಕಂಡು ಬಂದವು. ವಿಶೇಷವಾಗಿ ಭಾರತದ ಪೂರ್ವ ರಾಜ್ಯಗಳಲ್ಲಿ ವ್ಯಾಪಕವಾಗಿ ನುಸುಳಿರುವ ಅಕ್ರಮ ವಲಸಿಗರಿಗೆ ಮತದಾನದ ಚೀಟಿ, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಅಲ್ಲದೇ ಪಾಸ್‌ಪೋರ್ಟ್‌ಗಳನ್ನು ಕೂಡಾ ನೀಡಲಾಗಿರುವದು ಗಮನಕ್ಕೆ ಬಂದಿದೆ. ಮೋಸದಿಂದ ಅಂಥ ದಾಖಲೆಗಳನ್ನು ಪಡೆದ ಹಾಗೂ ನಕಲಿ ದಾಖಲೆಗಳನ್ನು ಹಾಜರು ಪಡಿಸಿ ನಾಗರಿಕತ್ವ ವನ್ನು ಸಾಬೀತು ಪಡಿಸಲೆತ್ನಿಸಿದ ಅನೇಕ ಪ್ರಕರಣಗಳು ಸರಕಾರದ ಚಿಂತೆಗೆ ಕಾರಣವಾಗಿದೆ.

ಅಕ್ರಮ ನುಸುಳುಕೋರರನ್ನು ಮತಬ್ಯಾಂಕ್ ಆಗಿ ಪರಿವರ್ತಿಸಿ ನಕಲಿ ವೋಟರ್ ಐಡಿಗಳನ್ನು ನೀಡಲಾಗಿದೆ ಎಂಬ ಆರೋಪ ಕೂಡಾ ಇದೆ. ಈ ಎಲ್ಲ ಕಾರಣಗಳಿಗಾಗಿ ಯಾವದೇ ಒಂದು ದಾಖಲೆ ಯನ್ನು ನಾಗರಿಕತ್ವದ ಪುರಾವೆಯಾಗಿ ಅಂಗೀಕರಿಸಲು ಸರಕಾರ ಒಪ್ಪುತ್ತಿಲ್ಲ. ಆದ್ದರಿಂದ ಭಾರತದ ನಾಗರಿಕತ್ವವನ್ನು ದೇಶದ ಒಳಗೆ ಸಾಬೀತು ಪಡಿಸುವ ಪ್ರಶ್ನೆ ಬಂದಾಗ ಸಂಬಂದಿಸಿದ ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ವೋಟರ್ ಕಾರ್ಡ್, ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ ನಂಥ ಅನೇಕ ದಾಖಲೆಗಳನ್ನು ಹಾಜರು ಪಡಿಸಬೇಕಾದದ್ದು ಅನಿವಾರ್ಯ. ಪಾಸ್‌ಪೋರ್ಟ್ ಕೂಡಾ ಅಂಥ ದಾಖಲೆಗಳಲ್ಲಿ ಒಂದು.

ಅಕ್ರಮ ವಲಸೆ ಹಾಗೂ ಅಕ್ರಮ ಮತದಾನಗಳ ಸಮಸ್ಯೆ ಇಂದು ನಿನ್ನೆಯದಲ್ಲ. ಈಗ ನಡೆಯು ತ್ತಿರುವ ಎಸ್‌ಐಆರ್ ಪ್ರಕ್ರಿಯೆ ಪ್ರಾಮಾಣಿಕವಾಗಿ ನಡೆದರೆ ಈ ಸಮಸ್ಯೆಗೆ ಬಾಗಶಃ ಪರಿಹಾರ ದೊರಕು ತ್ತದೆ. ಈ ಪ್ರಕ್ರಿಯೆಗೆ ಎಲ್ಲರೂ ಸಹಕಾರ ನೀಡಬೇಕು. ಆದರೆ ಎಸ್‌ಐಆರ್‌ನಲ್ಲೂ ಅಕ್ರಮ-ಸಕ್ರಮ ನಡೆದರೆ ಅದೊಂದು ಗಂಭೀರ ಸಮಸ್ಯೆಯಾಗುತ್ತದೆ. ಭಾರತದ ಗಡಿಯಲ್ಲಿರುವ ಆಸ್ಸಾಂ, ಮಣಿಪುರ, ಪಶ್ಚಿಮ ಬಂಗಾಲ, ಅರುಣಾಚಲ ಪ್ರದೇಶದಂಥ ರಾಜ್ಯಗಳಲ್ಲಿ ಬಾಂಗ್ಲಾ ಮತ್ತು ಮ್ಯಾನ್ಮಾರ್ ದೇಶ ಗಳಿಂದ ಬಂದ ಅಕ್ರಮ ವಲಸೆಕೋರರೇ ತುಂಬಿ ಹೋಗಿ ಅಲ್ಲಿನ ಮೂಲನಿವಾಸಿಗಳು ಅಲ್ಪಸಂಖ್ಯಾತರಾಗಿದ್ದಾರೆ. ಯಾವ ನೈಜ ಭಾರತೀಯರಿಗೂ ತೊಂದರೆ ನೀಡಬೇಕಾಗಿಲ್ಲ. ಕೇವಲ ಅಕ್ರಮ ಆಕ್ರಮಣಕ್ಕೆ ತಡೆ ಬೇಕಾಗಿದೆ.