Leena Joshi Column: ಪ್ರಧಾನಿಗಳ ಊಟದ ಬಟ್ಟಲಲ್ಲಿ ಏನಿರುತ್ತದೆ ?
ಪುರಬಿ ಶ್ರೀಧರ್ ಮತ್ತು ಸಂಗೀತಾ ಸಿಂಗ್ ಬರೆದಿರುವ ‘ದಿ ಪ್ರೈಮ್ ಮಿನಿಸ್ಟರ್ಸ್ ಟೇಬಲ್: ಡೆಲಿಕಸೀಸ್ ಆಂಡ್ ಡಿಪ್ಲೊಮಸೀಸ್ ಫ್ರಂ ದಿ ಎರಾ ಆಫ್ ನೆಹರೂ ಟು ಮೋದಿ’ ಪುಸ್ತಕ, ಜವಾಹರಲಾಲ್ ನೆಹರೂ ಅವರಿಂದ ನರೇಂದ್ರ ಮೋದಿ ಅವರವರೆಗಿನ ಭಾರತದ ಪ್ರಧಾನಮಂತ್ರಿ ಗಳ ಆಹಾರ ಪದ್ಧತಿ, ಇಷ್ಟದ ತಿನಿಸುಗಳು, ರಾಜತಾಂತ್ರಿಕ ಔತಣಗಳ ಕುರಿತು ಬೆಳಕು ಚೆಲ್ಲುತ್ತದೆ.
-
ಅಮೃತಕಾಲ
ಲೀನಾ ಜೋಶಿ
ಪ್ರಧಾನಿಯೊಬ್ಬರು ಬೆಳಿಗ್ಗೆ ಎದ್ದ ಕೂಡಲೇ ಏನು ತಿನ್ನುತ್ತಾರೆ? ಅವರಿಗೆ ಯಾವ ತಿನಿಸು ಇಷ್ಟ? ಯಾವ ಆಹಾರವನ್ನು ಇಷ್ಟಪಡುವುದಿಲ್ಲ? ಆರೋಗ್ಯದ ದೃಷ್ಟಿಯಿಂದ ಆಹಾರದಲ್ಲಿ ಏನಾದರೂ ನಿರ್ಬಂಧ ಗಳಿವೆಯೇ? ಮನೆಯ ಅಡುಗೆಯಲ್ಲಿ ಅವರಿಗೆ ವಿಶೇಷವಾದ ಯಾವುದಾದರೂ ಖಾದ್ಯವಿದೆಯೇ? ವಿದೇಶಿ ನಾಯಕರನ್ನು ಭೇಟಿಯಾದಾಗ ಅವರಿಗೆ ಯಾವ ರೀತಿಯ ಊಟ ಬಡಿಸಲಾಗುತ್ತದೆ? ಇಂತಹ ಪ್ರಶ್ನೆಗಳು ಕೇಳಲು ಸಾಮಾನ್ಯವೆನಿಸಿದರೂ, ಉತ್ತರಗಳು ದೇಶವನ್ನಾ ಳಿದ ನಾಯಕರ ವೈಯಕ್ತಿಕ ಬದುಕಿನ ಅಪರೂಪದ ಚಿತ್ರಣವನ್ನು ನಮ್ಮ ಮುಂದಿಡುತ್ತವೆ.
ಪುರಬಿ ಶ್ರೀಧರ್ ಮತ್ತು ಸಂಗೀತಾ ಸಿಂಗ್ ಬರೆದಿರುವ ‘ದಿ ಪ್ರೈಮ್ ಮಿನಿಸ್ಟರ್ಸ್ ಟೇಬಲ್: ಡೆಲಿಕಸೀಸ್ ಆಂಡ್ ಡಿಪ್ಲೊಮಸೀಸ್ ಫ್ರಂ ದಿ ಎರಾ ಆಫ್ ನೆಹರೂ ಟು ಮೋದಿ’ ಪುಸ್ತಕ, ಜವಾಹರಲಾಲ್ ನೆಹರೂ ಅವರಿಂದ ನರೇಂದ್ರ ಮೋದಿ ಅವರವರೆಗಿನ ಭಾರತದ ಪ್ರಧಾನಮಂತ್ರಿ ಗಳ ಆಹಾರ ಪದ್ಧತಿ, ಇಷ್ಟದ ತಿನಿಸುಗಳು, ರಾಜತಾಂತ್ರಿಕ ಔತಣಗಳ ಕುರಿತು ಬೆಳಕು ಚೆಲ್ಲುತ್ತದೆ.
ಪ್ರಧಾನಿಗಳ ಕುಟುಂಬದ ಸದಸ್ಯರು, ಸ್ನೇಹಿತರು, ಸಹೋದ್ಯೋಗಿಗಳು ಮತ್ತು ಅಡುಗೆ ಸಿಬ್ಬಂದಿಯ ನೆನಪುಗಳ ಮೂಲಕ ಅವರ ಊಟದ ಮೇಜಿನ ಸ್ವಾರಸ್ಯಕರ ಸಂಗತಿಗಳನ್ನು ದಾಖಲಿಸಲಾಗಿದೆ.
ಜವಾಹರಲಾಲ್ ನೆಹರು: ಭಾರತದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರ ಆಹಾರಾಭ್ಯಾಸಗಳು ಸಾಕಷ್ಟು ಸರಳವಾಗಿದ್ದವು. ಅವರ ಮನೆಯ ಆಹಾರದಲ್ಲಿ ಕಾಶ್ಮೀರಿ ಸಸ್ಯಾಹಾರಿ ತಿನಿಸುಗಳಿಗೆ ಆದ್ಯತೆ ಇದ್ದರೂ, ಪಾಶ್ಚಾತ್ಯ ಪ್ರಭಾವದಿಂದ ಮೊಟ್ಟೆಯೂ ದಿನಚರಿಯ ಭಾಗವಾಗಿತ್ತು. ಬೆಳಗಿನ ಉಪಾಹಾರದಲ್ಲಿ ಮೊಟ್ಟೆ ಸೇವಿಸುತ್ತಿದ್ದ ನೆಹರು, ಮಧ್ಯಾಹ್ನ ತೊಗರಿಬೇಳೆ, ದಮ್ ಆಲೂ ಹಾಗೂ ವಿವಿಧ ತರಕಾರಿ ಪದಾರ್ಥಗಳನ್ನು ಇಷ್ಟಪಡುತ್ತಿದ್ದರು. ರಾತ್ರಿ ಊಟದಲ್ಲಿ ಕೆಲವೊಮ್ಮೆ ಚೀಸ್ ಸೇರಿದಂತೆ ಯುರೋಪಿಯನ್ ಶೈಲಿಯ ಖಾದ್ಯಗಳೂ ಸ್ಥಾನ ಪಡೆಯುತ್ತಿದ್ದವು. ರಸ್ತೆಬದಿಯಲ್ಲಿ ಸಿಗುವ ತಂಪಾದ ‘ಥಂಡಾಯಿ’ ಕುಡಿಯುವುದೂ ಅವರಿಗೆ ಇಷ್ಟವಾಗಿತ್ತು. ದಾರಿಯಲ್ಲಿ ಮಕ್ಕಳು ಪ್ರೀತಿಯಿಂದ ನೀಡುವ ಸಿಹಿತಿಂಡಿಗಳನ್ನು ಅವುಗಳ ಮೇಲೆ ಧೂಳು ಇದ್ದರೂ ಸ್ವೀಕರಿಸುತ್ತಿದ್ದ ಅವರ ಸರಳ ಸ್ವಭಾವದ ಪ್ರಸಂಗಗಳು ಅವರ ಜನಸಾಮಾನ್ಯರೊಂದಿಗಿನ ಆತ್ಮೀಯತೆಯನ್ನು ತೋರಿಸುತ್ತವೆ. ನೆಹರು ಖಾರ ತಿನ್ನುತ್ತಿರಲಿಲ್ಲ, ಮಾಂಸಾಹಾರದ ಬಗ್ಗೆ ವಿಶೇಷ ಆಸಕ್ತಿ ಇರಲಿಲ್ಲ; ಸರಳ ಭಾರತೀಯ ಊಟವೇ ಅವರ ಆಯ್ಕೆಯಾಗಿತ್ತು.
ಇದನ್ನೂ ಓದಿ: Leena Joshi Column: ಮನೆ ಹೊಳೆಯಲಿ, ರಸ್ತೆ ಕೊಳೆಯಲಿ !
ಲಾಲ್ ಬಹದ್ದೂರ್ ಶಾಸ್ತ್ರಿ: ಭಾರತದ ಎರಡನೇ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೀವನಶೈಲಿ ಎಷ್ಟು ಸರಳವಾಗಿತ್ತೋ, ಅವರ ಆಹಾರ ಪದ್ಧತಿಯೂ ಅಷ್ಟೇ ಸರಳವಾಗಿತ್ತು. ಕೆಲವೊಮ್ಮೆ ರಸ್ತೆಬದಿಯಲ್ಲಿ ಕಾರು ನಿಲ್ಲಿಸಿ ಕಬ್ಬಿನ ಹಾಲಿನ ರಸ ಕುಡಿಯುತ್ತಿದ್ದರು. ಸೋರೆಕಾಯಿ, ಕುಂಬಳಕಾಯಿ ಸೇರಿದಂತೆ ಸರಳ ತರಕಾರಿ ಪದಾರ್ಥಗಳನ್ನು ಇಷ್ಟಪಡುತ್ತಿದ್ದರು. ಪ್ರತಿ ದಿನ ಕಾಫಿ ಕುಡಿಯುವ ಅಭ್ಯಾಸವೂ ಅವರಿಗಿತ್ತು. ಅವರು ತಮ್ಮ ಪತ್ನಿ ಲಲಿತಾರಿಗೆ ಕೆನೆ ಬೆರೆಸಿ ಚಹಾ ತಯಾರಿಸಿ ಕೊಡುತ್ತಿದ್ದರಂತೆ. ಶಾಸ್ತ್ರಿ ಯವರ ನಿಧನದ ಬಳಿಕ ಅವರ ಪತ್ನಿ ಚಹಾ ಕುಡಿಯುವು ದನ್ನೇ ಬಿಟ್ಟರು. 1965ರ ಯುದ್ಧದ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಲಿಂಡನ್ ಜಾನ್ಸನ್ ಭಾರತಕ್ಕೆ ಗೋಧಿ ಪೂರೈಕೆಯನ್ನು ನಿಲ್ಲಿಸುವ ಬ್ಲ್ಯಾಕ್ಮೇಲ್ ಮಾಡಿದಾಗ, ದೇಶ ಆಹಾರದ ಕೊರತೆಯನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ಶಾಸ್ತ್ರಿ ಅವರು ಮೊದಲು ತಮ್ಮ ಕುಟುಂಬದ ಒಂದು ಹೊತ್ತಿನ ಊಟ ಬಿಡುವ ಪ್ರಯೋಗ ಮಾಡಿದರು. ದೇಶವಾಸಿಗಳಿಗೂ ವಾರದಲ್ಲಿ ಒಂದು ಹೊತ್ತು ಆಹಾರವನ್ನು ತ್ಯಜಿಸುವಂತೆ ಮನವಿ ಮಾಡಿದರು. ದೇಶದ ಸಂಕಷ್ಟವನ್ನು ತಮ್ಮ ಕುಟುಂಬದ ಮೂಲಕ ಮೊದಲು ಅನುಭವಿಸಿ, ನಂತರ ಜನರಿಗೆ ಕರೆ ನೀಡಿದ ಅವರ ನಡೆ ಅವರ ಪ್ರಾಮಾಣಿಕತೆ ಮತ್ತು ನಾಯಕತ್ವಕ್ಕೆ ಸಾಕ್ಷಿಯಾಗಿದೆ.
ಇಂದಿರಾ ಗಾಂಧಿ: ಇಂದಿರಾ ಗಾಂಧಿಯವರ ಆಹಾರ ಪದ್ಧತಿ ಆರೋಗ್ಯದ ಕಾಳಜಿ ಮತ್ತು ಸರಳತೆ ಯನ್ನು ಒಳಗೊಂಡಿತ್ತು. ಬೆಳಗ್ಗೆ ಟೋಸ್ಟ್ ಮತ್ತು ಮೊಟ್ಟೆಯ ಭಾಗವನ್ನು ಸೇವಿಸುತ್ತಿದ್ದ ಅವರು, ಮಧ್ಯಾಹ್ನದ ಊಟದಲ್ಲಿ ದಾಲ, ಭಿಂಡಿ - ಸೇರಿದಂತೆ ಸಸ್ಯಾಹಾರಿ ಖಾದ್ಯಗಳನ್ನು ಇಷ್ಟಪಡು ತ್ತಿದ್ದರು. ವೆನಿ ಐಸ್ಕ್ರೀಮ್ ಜೊತೆಗೆ ಜಿಲೇಬಿಯನ್ನು ಸವಿಯುವುದು ಅವರ ವಿಶೇಷ ಇಷ್ಟಗಳಲ್ಲಿ ಒಂದಾಗಿತ್ತು. ಕುಲ್ಲಡ್ನಲ್ಲಿ ಚಹಾ ಕುಡಿಯುವುದೂ ಅವರಿಗೆ ಇಷ್ಟವಾಗಿತ್ತು. ಮಧ್ಯಾಹ್ನದ ಊಟ ಸ್ವಲ್ಪ ಭಾರವಾಗಿದ್ದರೆ ರಾತ್ರಿ ಸರಳ ಆಹಾರ ಸೇವಿಸುತ್ತಿದ್ದರು. ವಿದೇಶಿ ಗಣ್ಯರು ಬಂದಾಗ ಅವರ ಆತಿಥ್ಯದಲ್ಲಿ ವಿಶೇಷ ಕಾಳಜಿ ವಹಿಸುತ್ತಿದ್ದರು. ಮೇಜಿನ ಅಲಂಕಾರ, ಟೇಬಲ್ ಕ್ಲಾತ್, ಕಪ್ಗಳು, ಕ್ರೋಕರಿ, ತಟ್ಟೆ, ಚಮಚ ಸೇರಿದಂತೆ ಪ್ರತಿಯೊಂದು ವಿಚಾರವನ್ನೂ ಗಮನಿಸುತ್ತಿದ್ದರು. ಅತಿಥಿ ಗಳಿಗಾಗಿ ಬೇರೆ ಆಹಾರಗಳನ್ನು ಸವಿಯುತ್ತಿದ್ದರೂ, ಅವರ ವೈಯಕ್ತಿಕ ಆದ್ಯತೆ ಹೆಚ್ಚಾಗಿ ಸಸ್ಯಾಹಾರಿ ಊಟದ ಕಡೆಗೇ ಇತ್ತು.
ಮೊರಾರ್ಜಿ ದೇಸಾಯಿ: ದಿನಕ್ಕೆ ಎರಡು ಬಾರಿ ಮಾತ್ರ ಊಟ ಮಾಡುತ್ತಿದ್ದ ಅವರು, ಸಜ್ಜೆ ರೊಟ್ಟಿ ಮತ್ತು ಆಲೂಗಡ್ಡೆಯಂತಹ ಸರಳ ಆಹಾರಗಳನ್ನು ಸೇವಿಸುತ್ತಿದ್ದರು. ಶುದ್ಧ ಸಸ್ಯಾಹಾರ ಅವರ ಜೀವನದ ಭಾಗವಾಗಿತ್ತು. ಶ್ರೀಖಂಡ್ ಅವರ ಇಷ್ಟದ ಸಿಹಿ ತಿಂಡಿ.
ಗುಲ್ಜಾರಿಲಾಲ್ ನಂದಾ: ಚಹಾ ಪುಡಿಯನ್ನು ಕಾವಲಿಯ ಮೇಲೆ ಬಿಸಿ ಮಾಡಿ ನಂತರ ಅದರಿಂದ ಚಹಾ ತಯಾರಿಸಿ ಕುಡಿಯುವ ಅಭ್ಯಾಸ ಅವರಿಗಿತ್ತು. ಸಾಮಾನ್ಯವಾಗಿ ಎಲ್ಲರೂ ಚಹಾವನ್ನು ನೀರಿನಲ್ಲಿ ಕುದಿಸುವ ವಿಧಾನಕ್ಕೆ ಒಗ್ಗಿಕೊಂಡಿದ್ದರೆ, ಅವರ ಈ ವಿಭಿನ್ನ ಅಭ್ಯಾಸ ಅವರ ವೈಯಕ್ತಿಕ ಅಭಿರುಚಿಯನ್ನು ತೋರಿಸುತ್ತದೆ.
ರಾಜೀವ್ ಗಾಂಧಿ: ರಾಜೀವ್ ಗಾಂಧಿಯ ಆಹಾರಾಭ್ಯಾಸಗಳಲ್ಲಿ ಸಿಹಿತಿಂಡಿಗಳಿಗೆ ವಿಶೇಷ ಸ್ಥಾನ ವಿತ್ತು. ಕಬಾಬ್ ರಾಜೀವರ ಫೇವರಿಟ್. ಭೋಜನಕೂಟಗಳಲ್ಲಿ ಮೊದಲು ಸಿಹಿತಿಂಡಿಗಳನ್ನು ಸವಿಯುವುದು ಅವರ ವಿಶೇಷ ಅಭ್ಯಾಸವಾಗಿತ್ತು. ಅವರನ್ನು ಭೇಟಿಯಾಗಲು ಬರುವವರಿಗೆ ಚಾಕೊಲೇಟ್ಗಳನ್ನು ನೀಡುವ ಆತಿಥ್ಯವೂ ಇತ್ತು. ಅವರ ಮೇಜಿನ ಮೇಲೆ ಚಾಕೊಲೇಟ್ಗಳು ಸದಾ ಇರುತ್ತಿದ್ದವು ಎಂಬ ವಿವರಗಳು ಅವರ ಸಿಹಿ ಪ್ರೀತಿಯನ್ನು ಪರಿಚಯಿಸುತ್ತವೆ.
ಚಂದ್ರಶೇಖರ್: ಚಂದ್ರಶೇಖರ್ರ ಆಹಾರ ಅಭಿರುಚಿಯೂ ಬಹಳ ಸರಳವಾಗಿತ್ತು. ಆಲೂಗಡ್ಡೆ ಯಿಂದ ತಯಾರಿಸುವ ಸಾಮಾನ್ಯ ಖಾದ್ಯಗಳ ಬಗ್ಗೆ ಅವರಿಗೆ ವಿಶೇಷ ಒಲವಿತ್ತು ಎಂದು ಪುಸ್ತಕದ ವಿವರಗಳು ತಿಳಿಸುತ್ತವೆ.
ಪಿ.ವಿ. ನರಸಿಂಹ ರಾವ್: ಪಿ.ವಿ. ನರಸಿಂಹ ರಾವ್ ಅವರಿಗೆ ಮಧುಮೇಹ ಕಾಣಿಸಿಕೊಂಡ ಬಳಿಕ ಆಹಾರ ಮತ್ತು ವ್ಯಾಯಾಮದ ಮೂಲಕ ಅದನ್ನು ನಿಯಂತ್ರಿಸುವ ಪ್ರಯತ್ನ ಮಾಡುತ್ತಿದ್ದರು. ಪ್ರತಿದಿನ ಹಾಗಲಕಾಯಿ ರಸ ಕುಡಿಯುವ ಅಭ್ಯಾಸ ಅವರ ಆಹಾರ ಜೀವನಶೈಲಿಯ ಭಾಗವಾಗಿತ್ತು. ವಿದೇಶ ಪ್ರವಾಸಗಳಲ್ಲಿ ಅವರಿಗೆ ಹಾಗಲಕಾಯಿ ರಸ ವ್ಯವಸ್ಥೆ ಮಾಡುವುದು ಅಧಿಕಾರಿಗಳಿಗೆ ಸವಾಲಾಗುತ್ತಿತ್ತು. ಅವರ ಊಟ ಅತ್ಯಂತ ಸರಳವಾಗಿತ್ತು ಮತ್ತು ಮಿತವಾಗಿತ್ತು. ಅನ್ನ, ತೊಗರಿ ಬೇಳೆ, ಬದನೆಕಾಯಿ ಪದಾರ್ಥ, ಮೊಸರು ಮತ್ತು ಪಾಪಡ್ ಅವರ ಊಟದಲ್ಲಿ ಕಾಣಿಸಿಕೊಳ್ಳು ತ್ತಿದ್ದವು. ಯಾವುದೇ ರೂಪದಲ್ಲಿ ಬದನೆಕಾಯಿ ನೀಡಿದರೂ ಇಷ್ಟಪಟ್ಟು ತಿನ್ನುತ್ತಿದ್ದರಂತೆ. ಅಪರೂಪಕ್ಕೆ ಸ್ಟ್ರಾಬೆರಿ ಐಸ್ಕ್ರೀಮ್ ತಿನ್ನುತ್ತಿದ್ದರಂತೆ.
ಅಟಲ್ ಬಿಹಾರಿ ವಾಜಪೇಯಿ: ಭಾರತದ ಪ್ರಧಾನಮಂತ್ರಿಗಳಲ್ಲಿ ಆಹಾರವನ್ನು ಅತ್ಯಂತ ಮನಸಾರೆ ಆನಂದಿಸುತ್ತಿದ್ದ ವ್ಯಕ್ತಿ ಎಂದರೆ ಅಟಲ್ ಬಿಹಾರಿ ವಾಜಪೇಯಿ. ಕವಿತೆ, ರಾಜಕೀಯ ಭಾಷಣ, ಹಾಸ್ಯಪ್ರe ಮತ್ತು ಸ್ನೇಹಪರ ವ್ಯಕ್ತಿತ್ವದ ಜೊತೆಗೆ ಅವರಿಗೆ ರುಚಿಕರ ಆಹಾರದ ಮೇಲೂ ವಿಶೇಷ ಆಸಕ್ತಿ ಇತ್ತು. ಹಳೆಯ ದೆಹಲಿಯ ಚಾಟ, ಪಾಪ್ಡಿ, ಜಿಲೇಬಿ, ಪೇಡಾ ಮುಂತಾದ ತಿನಿಸು ಗಳನ್ನು ಇಷ್ಟಪಡುತ್ತಿದ್ದರು.
ಲಕ್ನೋದ ಪಾನ್, ಗ್ವಾಲಿಯರ್ನ ಲಡ್ಡುಗಳು ಅವರ ಇಷ್ಟದ ಪಟ್ಟಿಯಲ್ಲಿದ್ದವು. ತಾಜ್ ಮಾನ್ಸಿಂಗ್ ಹೋಟೆಲ್ನ ಹುರಿದ ಸಿಗಡಿ ಎಂದರೆ ಅವರಿಗೆ ಪಂಚಪ್ರಾಣ. ವಯಸ್ಸಾದ ಬಳಿಕ ಹೋಟೆಲ್ಗೆ ಹೋಗಲು ಸಾಧ್ಯವಾಗದಿದ್ದರೂ, ಆ ಖಾದ್ಯವನ್ನು ಮನೆಗೆ ತರಿಸಿಕೊಳ್ಳುತ್ತಿದ್ದರು ಎನ್ನುವ ವಿವರ ಅವರ ಆಹಾರದ ಮೇಲಿನ ಪ್ರೀತಿಯನ್ನು ತೋರಿಸುತ್ತದೆ. ಅವರ ಮನೆಯ ಊಟ ಮಾತ್ರ ಸರಳವಾಗಿರುತ್ತಿತ್ತು. ಒಂದು ತರಕಾರಿಯನ್ನು ತಂದರೆ ಅದರಿಂದ ಒಂದೇ ಪದಾರ್ಥ ಮಾಡುವ ಬದಲು, ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಲಾಗುತ್ತಿತ್ತು. ಮಸೂರ್ ದಾಲ್ ಕೂಡ ಅವರಿಗೆ ಅಚ್ಚುಮೆಚ್ಚಿನದು. ಪ್ರಧಾನಮಂತ್ರಿಯ ಅಧಿಕೃತ ನಿವಾಸದಲ್ಲಿ ನಡೆಯುತ್ತಿದ್ದ ಕೆಲವು ಖಾಸಗಿ ಔತಣಕೂಟಗಳ ಸಂದರ್ಭದಲ್ಲಿ ಚಾಂದಿನಿ ಚೌಕ್ನ ಚಾಟ್ ಮತ್ತು ಜಿಲೇಬಿ ಮಾರಾಟಗಾರರನ್ನು ಕರೆಸಲಾಗುತ್ತಿತ್ತು.
ಇಂದ್ರಕುಮಾರ್ ಗುಜ್ರಾಲ್: ಇಂದ್ರಕುಮಾರ್ ಗುಜ್ರಾಲ್ ಅವರಿಗೆ ಗ್ರಿಲ್ ಮಾಡಿದ ಮೀನು ಮತ್ತು ಕಾಫಿ ಇಷ್ಟವಾಗಿದ್ದವು.
ಮನಮೋಹನ ಸಿಂಗ್: ಆಹಾರದ ಬಗ್ಗೆ ಅತಿಯಾದ ಆಸಕ್ತಿ ಹೊಂದಿರದ ಅವರು, ಸರಳವಾದ ಮೆಕ್ಕೆ ಜೋಳದ ರೊಟ್ಟಿ, ರಾಜ್ಮಾ ಚಾವಲ್ನಂತಹ ಖಾದ್ಯಗಳನ್ನು ಇಷ್ಟಪಡುತ್ತಿದ್ದರು. ಪ್ರಧಾನಮಂತ್ರಿ ಯಾಗುವ ಮೊದಲು ಮಕ್ಕಳನ್ನು ಕರೆದುಕೊಂಡು ದಕ್ಷಿಣ ಭಾರತೀಯ ಊಟ ಸವಿಯಲು ಹೋಗುತ್ತಿದ್ದರಂತೆ. ಮುಘಲಾಯಿ ಆಹಾರವೂ ಅವರ ಇಷ್ಟದ ಪಟ್ಟಿಯಲ್ಲಿತ್ತು. ಅವರ ದೈನಂದಿನ ಊಟ ಸರಳವಾಗಿಯೇ ಇರುತ್ತಿತ್ತು.
ನರೇಂದ್ರ ಮೋದಿ: ನರೇಂದ್ರ ಮೋದಿ ಅವರ ಆಹಾರ ಪದ್ಧತಿಯ ಹಿಂದೆ ಅವರ ಹಿಂದಿನ ಬದುಕಿನ ಅನುಭವಗಳೂ ಕಾರಣವಾಗಿವೆ. ಸುಮಾರು 45 ವರ್ಷಗಳ ಕಾಲ ಅಲೆಮಾರಿ ಬದುಕು ನಡೆಸಿದ ಅವರು, ಆ ದಿನಗಳಲ್ಲಿ ಆಹಾರದ ಬಗ್ಗೆ ಆಯ್ಕೆ ಮಾಡುವ ಅವಕಾಶವೇ ಹೆಚ್ಚು ಇರಲಿಲ್ಲ. ಯಾವ ಊರಿನಲ್ಲಿ ಏನು ಸಿಗುತ್ತದೋ, ಯಾರಾದರೂ ಏನು ನೀಡುತ್ತಾರೋ ಅದನ್ನೇ ಸ್ವೀಕರಿಸಿ ತಿನ್ನಬೇಕಾದ ಪರಿಸ್ಥಿತಿ ಇತ್ತು. ಕೆಲ ದಿನ ಹೊಟ್ಟೆ ತುಂಬ ಊಟ ಸಿಕ್ಕರೆ, ಇನ್ನು ಕೆಲ ದಿನ ಊಟವೇ ಇಲ್ಲದೆ ಕಳೆಯಬೇಕಾಗುತ್ತಿತ್ತು. ಊಟದ ಸಮಯ, ಪ್ರಮಾಣ, ಆಹಾರದ ಗುಣಮಟ್ಟ ಯಾವುದಕ್ಕೂ ನಿರ್ದಿಷ್ಟತೆ ಇರದ ಇಂತಹ ಬದುಕು ಅವರ ಆರೋಗ್ಯ, ವಿಶೇಷವಾಗಿ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರಿತ್ತು ಎನ್ನಲಾಗುತ್ತದೆ. ಆ ಹಳೆಯ ಅನುಭವಗಳೇ ಈಗ ಆಹಾರದ ವಿಚಾರದಲ್ಲಿ ಅವರು ಹೆಚ್ಚು ಎಚ್ಚರಿಕೆ ವಹಿಸಲು ಕಾರಣವಾಗಿರಬಹುದು. ಸಬ್ಬಕ್ಕಿ ಖಿಚಡಿ ಅವರ ನೆಚ್ಚಿನ ತಿನಿಸುಗಳಲ್ಲಿ ಒಂದು. ಇದರ ಜೊತೆಗೆ ಸರಳ ಗುಜರಾತಿ ಮನೆಯೂಟ, ಸುಲಭವಾಗಿ ಜೀರ್ಣ ವಾಗುವ ಆಹಾರಗಳ ಬಗ್ಗೆ ಅವರಿಗೆ ಒಲವಿದೆ.
ಭಾರತದ ಪ್ರಧಾನಮಂತ್ರಿಗಳ ಆಹಾರಾಭ್ಯಾಸಗಳನ್ನು ಗಮನಿಸಿದಾಗ, ಅಧಿಕಾರದ ಉನ್ನತ ಸ್ಥಾನದಲ್ಲಿದ್ದರೂ ಹಲವರ ಬದುಕಿನಲ್ಲಿ ಸರಳ ಆಹಾರಕ್ಕೆ ವಿಶೇಷ ಸ್ಥಾನವಿತ್ತು. ಪ್ರಧಾನಿಗಳ ತಟ್ಟೆಯಲ್ಲಿ ಕಾಣಿಸುವ ಈ ವೈವಿಧ್ಯ ಭಾರತದ ಆಹಾರ ಸಂಸ್ಕೃತಿಯ ವೈವಿಧ್ಯವನ್ನೂ ಪ್ರತಿಬಿಂಬಿ ಸುತ್ತದೆ.