Ranjith H Ashwath Column: ತರಾತುರಿಯಲ್ಲಿ ತೃತೀಯ ಭಾಷೆ ಕೈಬಿಟ್ಟಿದ್ದೇಕೆ ?
ವಿದ್ಯಾರ್ಥಿಗಳ ಮೇಲಿನ ಹೊರೆಯನ್ನು ತಗ್ಗಿಸಬೇಕು ಎನ್ನುವ ಕಾರಣಕ್ಕೆ ಹಾಗೂ ಕರ್ನಾಟಕ ದಲ್ಲಿ ಹಿಂದಿ ಹೇರಿಕೆಯನ್ನು ಸಹಿಸುವುದಿಲ್ಲ ಎನ್ನುವ ಸಂದೇಶ ರವಾನಿಸಬೇಕು ಎನ್ನುವ ಕಾರಣಕ್ಕೆ ತೃತೀಯ ಭಾಷೆಯ ಅಂಕವನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಪರಿಗಣಿಸುವ ಬದಲು ಗ್ರೇಡಿಂಗ್ ಕೊಟ್ಟು ಕೈತೊಳೆದುಕೊಳ್ಳುವುದಾಗಿ ಇಲಾಖೆ ಹೇಳಿದೆ.
-
ಅಶ್ವತ್ಥಕಟ್ಟೆ
ದೇಶ ಅಥವಾ ರಾಜ್ಯದ ಅಭಿವೃದ್ಧಿಯ ಸೂಚಕವಾಗಿ ಆ ಭಾಗದ ರಸ್ತೆ, ಆರೋಗ್ಯ, ನೀರಾವರಿ, ಮೂಲಸೌಕರ್ಯ ಸೇರಿದಂತೆ ವಿವಿಧ ಅಂಶಗಳಿರುತ್ತವೆ. ಆದರೆ ಆ ದೇಶ ಅಥವಾ ರಾಜ್ಯದ ಭವಿಷ್ಯವನ್ನು ಶಿಕ್ಷಣ ಕ್ಷೇತ್ರದಿಂದ ಮಾತ್ರ ಕಾಣಲು ಸಾಧ್ಯ. ಆ ಕಾರಣಕ್ಕೆ, ಯಾವ ಸರಕಾರಗಳು ಶಿಕ್ಷಣಕ್ಕೆ ಒತ್ತು ನೀಡುವವೋ ಆ ಪ್ರದೇಶದ ಭವಿಷ್ಯ ಉಜ್ವಲ ವಾಗಿರುತ್ತದೆ ಎನ್ನುವುದು ಬಹುಜನರ ನಂಬಿಕೆ.
ಈ ಕಾರಣಕ್ಕೆ, ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಬದಲಾವಣೆ ಮಾಡುವ ಮೊದಲು ಹತ್ತಾರು ಆಯಾಮದಲ್ಲಿ ಆಲೋಚಿಸುವುದುಂಟು. ಆದರೆ ಕಳೆದ ಕೆಲ ದಿನಗಳಿಂದ ಕರ್ನಾಟಕದಲ್ಲಿ ಶಿಕ್ಷಣ ಇಲಾಖೆಯ ತೀರ್ಮಾನಗಳು ವಿದ್ಯಾರ್ಥಿಗಳನ್ನಷ್ಟೇ ಅಲ್ಲದೇ ಇಡೀ ರಾಜ್ಯವನ್ನು ಗೊಂದಲಕ್ಕೀಡು ಮಾಡಿವೆ.
ಕಳೆದ ಒಂದು ವಾರದ ಅವಧಿಯಲ್ಲಿ ಶಿಕ್ಷಣ ಇಲಾಖೆಯು ಎರಡು ತೀರ್ಮಾನಗಳನ್ನು ಕೈಗೊಂಡಿದೆ. ಅದರಲ್ಲಿ ಒಂದು, ಒಂದನೇ ತರಗತಿಗೆ ಸೇರಿಸಲು ಮಗುವಿಗೆ ಕಡ್ಡಾಯವಾಗಿ ಆರು ವರ್ಷವಾಗಿರಬೇಕು ಎನ್ನುವ ನಿಯಮದ ಬದಲು 60 ದಿನಗಳ ವಿನಾಯಿತಿಯನ್ನು ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಸೀಮಿತಗೊಳಿಸಿ ತೀರ್ಮಾನಿಸಿದ್ದು, ಮುಂದಿನ ವರ್ಷದ ವೇಳೆಗೆ ಇದಕ್ಕೆ ಕಾಯಿದೆಯ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳುವುದಾಗಿ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ವಿನಾಯಿತಿಯ ಅವಧಿಯನ್ನು ಎರಡು ತಿಂಗಳ ಬದಲು ಮೂರು ಅಥವಾ ನಾಲ್ಕು ತಿಂಗಳಿಗೆ ಏರಿಸಬಹುದು ಎನ್ನುವ ವಾದವಿದೆ. ಮುಂದಿನ ವರ್ಷದ ವೇಳೆಗೆ ಈ ಸಮಸ್ಯೆ ಬಗೆಹರಿಯಬಹುದು. ಈ ತೀರ್ಮಾನದ ಪರ-ವಿರೋಧ ಚರ್ಚೆ ಮುಗಿಯುವ ಮೊದಲೇ, ‘ತುರ್ತು’ ಸುದ್ದಿಗೋಷ್ಠಿಯ ನೆಪದಲ್ಲಿ ಮಧು ಬಂಗಾರಪ್ಪ ಅವರು ಘೋಷಿಸಿದ ‘ತೃತೀಯ ಭಾಷೆ ಆಟಕ್ಕುಂಟು-ಲೆಕ್ಕಕ್ಕಿಲ್ಲ’ ಎನ್ನುವ ತೀರ್ಮಾನ ಇದೀಗ ತೀವ್ರ ಚರ್ಚೆ, ವಿರೋಧಕ್ಕೆ ಕಾರಣವಾಗಿದೆ.
ವಿದ್ಯಾರ್ಥಿಗಳ ಮೇಲಿನ ಹೊರೆಯನ್ನು ತಗ್ಗಿಸಬೇಕು ಎನ್ನುವ ಕಾರಣಕ್ಕೆ ಹಾಗೂ ಕರ್ನಾಟಕದಲ್ಲಿ ಹಿಂದಿ ಹೇರಿಕೆಯನ್ನು ಸಹಿಸುವುದಿಲ್ಲ ಎನ್ನುವ ಸಂದೇಶ ರವಾನಿಸಬೇಕು ಎನ್ನುವ ಕಾರಣಕ್ಕೆ ತೃತೀಯ ಭಾಷೆಯ ಅಂಕವನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಪರಿಗಣಿಸುವ ಬದಲು ಗ್ರೇಡಿಂಗ್ ಕೊಟ್ಟು ಕೈತೊಳೆದುಕೊಳ್ಳುವುದಾಗಿ ಇಲಾಖೆ ಹೇಳಿದೆ. ಈ ತೀರ್ಮಾನಕ್ಕೆ ಬೆಂಬಲವಾಗಿ ತೃತೀಯ ಭಾಷೆ ಹಿಂದಿಯ ಕಾರಣ ಕ್ಕಾಗಿಯೇ ಕರ್ನಾಟಕದಲ್ಲಿ 90 ಸಾವಿರ ವಿದ್ಯಾರ್ಥಿಗಳು ಫೇಲಾಗಿದ್ದಾರೆ. ಆದ್ದರಿಂದ ಇಂಥ ಹೇರಿಕೆಯ ಅಗತ್ಯವೇನು ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಇದನ್ನೂ ಓದಿ: Ranjith H Ashwath Column: ನುಂಗಲಾರದ ತುತ್ತಾಗುವುದೇ ದೋಸ್ತಿ ಪಕ್ಷ ?
ಸರಕಾರದ ಈ ತೀರ್ಮಾನದಿಂದ ವಿದ್ಯಾರ್ಥಿಗಳ ಮೇಲಿನ ಹೆಚ್ಚುವರಿ ಹೊರೆ ತಗ್ಗಲಿದ್ದು, ಆಸಕ್ತಿ ಇದ್ದವರು ಹಿಂದಿಯನ್ನು ಕಲಿತುಕೊಳ್ಳಲಿದ್ದಾರೆ ಎನ್ನುವುದು ಕನ್ನಡ ಹೋರಾಟ ಗಾರರ, ಕನ್ನಡಾಭಿಮಾನಿಗಳ, ಸರಕಾರದ ನಿಲುವಾಗಿದೆ. ಇಲಾಖೆ ತೆಗೆದುಕೊಂಡಿರುವ ಈ ತೀರ್ಮಾನದ ಸಾಧಕ-ಬಾಧಕದ ಬಗ್ಗೆ ಚರ್ಚಿಸುವುದಕ್ಕಿಂತ ತೆಗೆದುಕೊಂಡ ಸಮಯದ ಬಗ್ಗೆ ಈಗ ವಿರೋಧ ವ್ಯಕ್ತವಾಗುತ್ತಿದೆ.
ಒಂದು ವೇಳೆ ಕರ್ನಾಟಕದಲ್ಲಿ ದ್ವಿಭಾಷಾ ಸೂತ್ರದಲ್ಲಿಯೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ನಡೆಸಬೇಕು ಎನ್ನುವ ಆಲೋಚನೆ ಇದ್ದಿದ್ದರೆ ಅದನ್ನು ಪರೀಕ್ಷೆ ಘೋಷಿಸುವ ಮೊದಲೇ ಸ್ಪಷ್ಟಪಡಿಸಬೇಕಿತ್ತು. ಇಲ್ಲವಾದರೆ, ಈ ಶೈಕ್ಷಣಿಕ ವರ್ಷದ ಬಳಿಕ ತೀರ್ಮಾನಿಸ ಬಹುದಾಗಿತ್ತು. ಆದರೆ ಅದನ್ನು ಮಾಡದೇ ಪರೀಕ್ಷೆ ನಡೆಯುತ್ತಿರುವ ಸಮಯದಲ್ಲಿಯೇ ಈ ರೀತಿಯ ಗ್ರೇಡಿಂಗ್ ವ್ಯವಸ್ಥೆ ಪರಿಚಯಿಸುವ ಅವಸರವೇನಿತ್ತು? ಎನ್ನುವ ಪ್ರಶ್ನೆಗೆ ಈವರೆಗೆ ಸರಕಾರದಿಂದ ಯಾವುದೇ ಉತ್ತರ ಬಂದಿಲ್ಲ.
ಇನ್ನು ಶಿಕ್ಷಣ ಇಲಾಖೆ ತೃತೀಯ ಭಾಷೆಯ ವಿಷಯದಲ್ಲಿ ತೆಗೆದುಕೊಂಡಿರುವ ಏಕಾಏಕಿ ತೀರ್ಮಾನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತಿಪಕ್ಷ ಬಿಜೆಪಿ ನಾಯಕರು ಸೇರಿದಂತೆ ಬಹುತೇಕರು ‘ಹಿಂದಿ’ ಭಾಷೆಗೆ ಸೀಮಿತಗೊಳಿಸಿ ಮಾತನಾಡು ತ್ತಿದ್ದಾರೆ.
ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅನೇಕ ವಿದ್ಯಾರ್ಥಿಗಳು ತೃತೀಯ ಭಾಷೆಯಾಗಿ ಕೇವಲ ಹಿಂದಿಯನ್ನಲ್ಲ, ಕನ್ನಡವನ್ನೂ ತೆಗೆದುಕೊಂಡಿದ್ದಾರೆ ಎನ್ನುವ ಬಗ್ಗೆ ಬಹುತೇಕರು ಆಲೋಚಿಸದಿರುವುದು ಮಾತ್ರ ದುರಂತ!
ರಾಜ್ಯದ ಎಲ್ಲ ಕಡೆಯೂ ಹಿಂದಿಯೇ ತೃತೀಯ ಭಾಷೆಯಲ್ಲ, ಕೆಲವು ನಗರ ಪ್ರದೇಶಗಳಲ್ಲಿ ಕನ್ನಡವೂ ಸೇರಿ ಹಲವು ಭಾಷೆಗಳು ತೃತೀಯ ಭಾಷೆಯಾಗಿವೆ. ಹಿಂದಿಯೂ ಸೇರಿದಂತೆ ಕನ್ನಡ, ಇಂಗ್ಲಿಷ್, ಅರಬ್ಬಿ, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಮರಾಠಿ ಭಾಷೆಗಳನ್ನೂ ತೃತೀಯ ಭಾಷೆಯಾಗಿ ಲಕ್ಷಾಂತರ ಮಕ್ಕಳು ಕಲಿಯುತ್ತಿದ್ದಾರೆ.
ಮೊದಲ ಭಾಷೆಯಾಗಿ ಉರ್ದು, ಸಂಸ್ಕೃತವನ್ನು ತೆಗೆದುಕೊಂಡಿರುವ ವಿದ್ಯಾರ್ಥಿಗಳಿಗೆ ಕನ್ನಡವೇ ತೃತೀಯ ಭಾಷೆಯಾಗಿರಲಿದೆ. ಹೀಗಿರುವಾಗ, ಹಿಂದಿ ಹೇರಿಕೆಯನ್ನು ತಗ್ಗಿಸುವ ನೆಪದಲ್ಲಿ ಕನ್ನಡವನ್ನು ಭವಿಷ್ಯದಲ್ಲಿ ನೇಪಥ್ಯಕ್ಕೆ ಸರಿಸುವುದು ಕೆಟ್ಟ ತೀರ್ಮಾನ ವಾಗುವುದಿಲ್ಲವೇ? ಸರಕಾರ ಈಗ ತೆಗೆದುಕೊಂಡಿರುವ ತೀರ್ಮಾನವನ್ನು ಕೇವಲ ಹಿಂದಿಗೆ ಸೀಮಿತಗೊಳಿಸಲು ಕಾನೂನಾತ್ಮಕವಾಗಿ ಸಾಧ್ಯವಿಲ್ಲ.
ಆದ್ದರಿಂದ ಹಿಂದಿ ಹೇರಿಕೆಯನ್ನು ತಗ್ಗಿಸಲು ಹೋಗಿ, ಅನಿವಾರ್ಯವಾಗಿ ಮೂರನೇ ಭಾಷೆ ಯಾಗಿ ಆದರೂ ಕನ್ನಡವನ್ನು ಕಲಿಯುತ್ತಿದ್ದ ಅನೇಕರಿಗೆ ಸರಕಾರವೇ, ಕನ್ನಡ ಕಲಿಕೆ ಅನಿವಾರ್ಯವಲ್ಲ ಎನ್ನುವ ಸ್ಥಿತಿ ನಿರ್ಮಿಸಿದಂತೆ ಆಗಲಿಲ್ಲವೇ? ಹೋಗಲಿ, ಈ ತೀರ್ಮಾನ ಘೋಷಿಸುವ ಮೊದಲು ಸಚಿವ ಸಂಪುಟ ಸಭೆಯಲ್ಲಿ ಕನಿಷ್ಠ ಚರ್ಚೆ, ತಜ್ಞರ ಸಮಿತಿಯಿಂದ ಸಲಹೆಗಳನ್ನು ಪಡೆಯದೇ ಅಥವಾ ಶಿಕ್ಷಣ ಕ್ಷೇತ್ರದ ಪ್ರಮುಖರೊಂದಿಗೆ ಈ ರೀತಿಯ ನಿರ್ಧಾರದಿಂದ ಆಗುವ ಪರಿಣಾಮಗಳೇನು ಎನ್ನುವ ಬಗ್ಗೆ ಚರ್ಚಿಸದೇ ಘೋಷಿಸುವಷ್ಟು ತರಾತುರಿ ಮಾಡಿದ್ದೇಕೆ? ಈ ಪ್ರಮಾಣದ ತರಾತುರಿಯಲ್ಲಿ ಎಸ್‌ಎಸ್‌ಎಲ್‌ಸಿ ತೃತೀಯ ಭಾಷಾ ಪರೀಕ್ಷೆಯನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಮಾಡಿದ ರಾಜ್ಯ ಸರಕಾರ, ಒಂದನೇ ತರಗತಿ ಸೇರ್ಪಡೆಗೆ ವಯಸ್ಸನ್ನು ನಿಗದಿಪಡಿಸುವ ವಿಷಯದಲ್ಲಿ ಕಳೆದ ಮೂರು ವರ್ಷಗಳಿಂದ ಪ್ರತಿವರ್ಷ ವಿವಾದ, ಗೊಂದಲ ಸೃಷ್ಟಿಸಿಕೊಂಡು ಕೊನೆಗೆ ತಾತ್ಕಾಲಿಕ ರಿಲೀಫ್ ನೀಡುತ್ತಾ ಬಂದಿದೆ.
ಅಧಿಕಾರಕ್ಕೆ ಬರುವ ಮೊದಲು, ಬಂದ ಬಳಿಕ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಒಪ್ಪುವು ದಿಲ್ಲ ಎಂದೇ ಹೇಳುತ್ತಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಒಂದನೇ ತರಗತಿ ಯ ಸೇರ್ಪಡೆಯ ವಿಷಯದಲ್ಲಿ ಮಾತ್ರ ಎನ್‌ಇಪಿ ಮಾರ್ಗಸೂಚಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಒಂದನೇ ತರಗತಿ ಸೇರಲು ಜೂನ್ 1ಕ್ಕೆ ಮಗುವಿನ ವಯಸ್ಸು ಕಡ್ಡಾಯವಾಗಿ ಆರು ವರ್ಷ ಪೂರೈಸಿರಬೇಕು ಎನ್ನುವ ನಿಯಮವಿದೆ. ಇದರಿಂದ ಜೂನ್ 1ರ ಬಳಿಕ ಬಹುತೇಕ ಮಕ್ಕಳಿಗೆ ಒಂದು ವರ್ಷ ನಷ್ಟವಾಗುತ್ತದೆ.
ಉದಾಹರಣೆಗೆ ಜೂನ್ 10ಕ್ಕೆ ಜನಿಸುವ ಮಗುವು 2026ರ ಜೂನ್ 10ಕ್ಕೆ ಆರು ವರ್ಷ ಪೂರೈಸಿದರೆ, ಆ ಮಗು 2027ರ ಜೂನ್ ತನಕ ಕಾಯಬೇಕಾದ ಕಠಿಣ ನಿಲುವಿತ್ತು. ಈ ‘ಕಟ್ ಆಫ್’ನಿಂದಾಗಿ ಪ್ರತಿವರ್ಷ ಲಕ್ಷಾಂತರ ಮಕ್ಕಳಿಗೆ ಒಂದೆರಡು ತಿಂಗಳ ಅಂತರಕ್ಕೆ ಇಡೀ ವರ್ಷ ಮನೆಯಲ್ಲಿಯೇ ಕಳೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ.
ಆದ್ದರಿಂದ ಐದು ವರ್ಷ 10 ತಿಂಗಳಾದ ಮಗುವಿಗೂ ಒಂದನೇ ತರಗತಿ ಸೇರ್ಪಡೆಗೆ ಅವಕಾಶ ನೀಡಬೇಕು ಎನ್ನುವ ಆಗ್ರಹಗಳು ಕಳೆದ ಎರಡು ವರ್ಷಗಳಿಂದ ಕೇಳಿ ಬರುತ್ತಿವೆ. ಹಾಗೆ ನೋಡಿದರೆ, ಐದು ವರ್ಷ 10 ತಿಂಗಳ ನಿಯಮ ಹಲವು ದಶಕಗಳಿಂದ ಕರ್ನಾಟಕ ದಲ್ಲಿ ಜಾರಿಯಲ್ಲಿದೆ. ಆದರೆ ಎನ್‌ಇಪಿ ಜಾರಿಯಾದ ಬಳಿಕ ಆರು ವರ್ಷವೆಂದು ಕಡ್ಡಾಯ ಗೊಳಿಸಲಾಯಿತು.
ಕಳೆದ ವರ್ಷ ತೀವ್ರ ವಿವಾದವಾದ ಬಳಿಕ ಎರಡು ತಿಂಗಳ ವಿನಾಯಿತಿ ನೀಡಲಾಗಿತ್ತು. ಈ ವರ್ಷವೂ ಡಿಸೆಂಬರ್‌ನಿಂದಲೇ ಗಲಾಟೆ ಶುರುವಾದರೂ, ಕೊನೆಗೆ ತೀರ್ಮಾನ ಕೈಗೊಂಡಿದ್ದು ಮಾತ್ರ ಕಳೆದ ವಾರ.
ಹಾಗೆ ನೋಡಿದರೆ, ಒಂದನೇ ತರಗತಿ ಸೇರಲು ವಯೋಮಿತಿಯ ವಿಷಯದಲ್ಲಿ ಸರಕಾರದ ತೀರ್ಮಾನ ಕೊಂಚ ಕಠಿಣವಾಗಿದೆ. ಏಕೆಂದರೆ, ಸದ್ಯ ಎರಡು ತಿಂಗಳ ವಿನಾಯಿತಿ ನೀಡಿದ್ದರೂ, ಆಗಸ್ಟ್‌ನಿಂದ ಡಿಸೆಂಬರ್ ಅವಧಿಯಲ್ಲಿ ಜನಿಸುವ ಮಗು ಒಂದನೇ ತರಗತಿ ಸೇರಲು ಅಗತ್ಯವಿರುವಷ್ಟು ಬುದ್ಧಿಮತ್ತೆಯಿದ್ದರೂ ನಿಯಮದ ಕಾರಣಕ್ಕೆ ಸೇರ್ಪಡೆ ಮಾಡದಿರುವುದು ಸರಿಯಲ್ಲ.
ನಾಲ್ಕೈದು ತಿಂಗಳಿನ ವ್ಯತ್ಯಾಸವು ಮಗುವಿನ ಅಭ್ಯಾಸಕ್ಕೆ ಬಹುದೊಡ್ಡ ವ್ಯತ್ಯಾಸ ವನ್ನೇನೂ ಮಾಡುವುದಿಲ್ಲ ಎನ್ನುವುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಅಮೆರಿಕ, ಯುಕೆ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಐದು ವರ್ಷಕ್ಕೆ ಶಾಲೆಗಳಿಗೆ ಪ್ರವೇಶ ನೀಡಿದರೆ, ಫಿನ್‌ಲ್ಯಾಂಡ್, ಸ್ವೀಡನ್‌ನಂಥ ರಾಷ್ಟ್ರಗಳಲ್ಲಿ ಏಳು ವರ್ಷಕ್ಕೆ ಮಕ್ಕಳನ್ನು ಶಾಲೆಗೆ ಸೇರಿಸ ಲಾಗುತ್ತಿದೆ. ಆದರೆ ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳು ಆರು ವರ್ಷದ ನಿಯಮ ವನ್ನು ಜಾರಿಗೊಳಿಸಿವೆ.
ಆರು ವರ್ಷಕ್ಕೆ ಶಾಲಾ ಶಿಕ್ಷಣ ಆರಂಭಿಸುವುದು ಸೂಕ್ತವಾದರೂ, ‘ಕಡ್ಡಾಯ’ವಾಗಿ ಆರು ವರ್ಷ ಆಗಿರಬೇಕು ಎನ್ನುವುದು ಈಗಿರುವ ಗೊಂದಲ ಹಾಗೂ ವಿವಾದಕ್ಕೆ ಕಾರಣ ಎಂದರೆ ತಪ್ಪಾಗುವುದಿಲ್ಲ.
ಶಿಕ್ಷಣ ಇಲಾಖೆಯು ಎಸ್‌ಎಸ್‌ಎಲ್‌ಸಿ ತೃತೀಯ ಭಾಷಾ ವಿನಾಯಿತಿ ವಿಷಯದಲ್ಲಿ ನಿರ್ಧಾರವನ್ನು ತೆಗೆದುಕೊಂಡಷ್ಟು ವೇಗವಾಗಿ ಮಕ್ಕಳ ಶಾಲಾ ಪ್ರವೇಶಾತಿ ವಿಷಯದಲ್ಲಿ ತೆಗೆದುಕೊಳ್ಳಲಿಲ್ಲ ಎನ್ನುವುದು ಎರಡನೇ ಮಾತು. ಆದರೆ ಒಂದನೇ ತರಗತಿಗೆ ಆರು ವರ್ಷ ಕಡ್ಡಾಯ ಎನ್ನುವ ನಿಯಮವನ್ನು ಪ್ರತಿವರ್ಷ ಟಾಪ್‌ಅಪ್ ರೀತಿ ಮಾಡುವ ಬದಲು ಶಾಶ್ವತ ಕಾಯಿದೆಯನ್ನು ರೂಪಿಸುವ ಅನಿವಾರ್ಯತೆಯಿದೆ.
ಇದರೊಂದಿಗೆ ಒಂದನೇ ತರಗತಿಗಷ್ಟೇ ಅಲ್ಲದೇ, ಎಲ್‌ಕೆಜಿ, ಯುಕೆಜಿ ವಿಷಯದಲ್ಲಿಯೂ ಸರಕಾರಗಳು ಸ್ಪಷ್ಟ ನಿಲುವಿಗೆ ಬರಬೇಕಿದೆ. ಇಲ್ಲದೇ ಹೋದರೆ, ಮೂರುವರೆ ವರ್ಷಕ್ಕೆ ಎಲ್ಕೆಜಿ ಸೇರಿ, ನಾಲ್ಕೂವರೆ ವರ್ಷಕ್ಕೆ ಯುಕೆಜಿಗೆ ಬರುವ ವಿದ್ಯಾರ್ಥಿ ಐದೂವರೆ ವರ್ಷಕ್ಕೆ ಯುಕೆಜಿ ಮುಗಿಸುತ್ತಾನೆ. ಆಗ ಈ ಆರು ವರ್ಷ ಕಡ್ಡಾಯ ಎನ್ನುವ ನಿಯಮದಿಂದ ವಿದ್ಯಾರ್ಥಿಗಳು ಯುಕೆಜಿಯಲ್ಲಿಯೇ ಹೆಚ್ಚುವರಿ ಒಂದು ವರ್ಷ ಕಲಿಯಬೇಕಾದ ಅಥವಾ ಒಂದು ವರ್ಷ ಮನೆಯಲ್ಲಿಯೇ ಕೂರಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ.
ಇದರಿಂದಾಗಿ ಮಗುವಿನ ಮನಸ್ಸಿನ ಮೇಲೆ ಆಗಬಹುದಾದ ಪರಿಣಾಮಗಳ ಬಗ್ಗೆ ಸರಕಾರ ಎಚ್ಚರವಹಿಸಬೇಕಿದೆ. ಶಿಕ್ಷಣ ಕ್ಷೇತ್ರದಲ್ಲಿ ತೆಗೆದುಕೊಳ್ಳುವ ಯಾವುದೇ ತೀರ್ಮಾನ ಕೇವಲ ಒಬ್ಬ ವ್ಯಕ್ತಿ ಅಥವಾ ಕುಟುಂಬದ ಮೇಲೆ ಪರಿಣಾಮವನ್ನು ಬೀರುವುದಿಲ್ಲ. ಬದಲಿಗೆ ಇಡೀ ಸಮುದಾಯದ ಮೇಲೆ ಅದಕ್ಕೂ ಮಿಗಿಲಾಗಿ ನಾಡಿನ ಭವಿಷ್ಯದ ಮೇಲೆ ತೀವ್ರ ಹೊಡೆತ ಬೀಳುವ ಅಪಾಯವಿರುತ್ತದೆ.
ಆಡಳಿತ ಮೊಗಸಾಲೆಯಲ್ಲಿರುವ ಸರಕಾರಗಳು ತಮ್ಮ ಸೈದ್ಧಾಂತಿಕ ನಿಲುವುಗಳಿಗೆ ಸರಿ ಹೊಂದುವ ರೀತಿಯಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳುವುದನ್ನು ನೋಡಿದ್ದೇವೆ. ಶಿಕ್ಷಣ ಕ್ಷೇತ್ರದಲ್ಲಿಯೂ ಇದೇ ರೀತಿಯ ಹತ್ತು ಹಲವು ತೀರ್ಮಾನಗಳನ್ನು ತೆಗೆದು ಕೊಂಡಿರುವು ದಕ್ಕೆ ಉದಾಹರಣೆಗಳಿವೆ.
ನಾಲ್ಕೈದು ವರ್ಷದಲ್ಲಿ ಕರ್ನಾಟಕದಲ್ಲಿಯೇ ಆಗಿರುವ ವಿಷಯವನ್ನು ನೋಡುವುದಾದರೆ, ಈ ಹಿಂದಿದ್ದ ಬಿಜೆಪಿ ಸರಕಾರ ಇಡೀ ರಾಷ್ಟ್ರದಲ್ಲಿ ಎನ್‌ಇಪಿ ಜಾರಿಗೊಳಿಸಿದ ಮೊದಲ ರಾಜ್ಯ ಎನ್ನುವ ‘ಹೆಮ್ಮೆ’ ಪಡೆಯಬೇಕು. ಈ ಮೂಲಕ ದೆಹಲಿ ನಾಯಕರನ್ನು ಒಲೈಸಬೇಕು ಎನ್ನುವ ಕಾರಣಕ್ಕೆ ತಯಾರಿ ಇಲ್ಲದೇ ಎನ್‌ಇಪಿ ಜಾರಿಗೊಳಿಸಿತ್ತು.
ಇದಾಗುತ್ತಿದ್ದಂತೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನಾಯಕರು ಎನ್‌ಇಪಿ ಬದಲು ಎಸ್‌ಇಪಿ (ರಾಜ್ಯ ಶಿಕ್ಷಣ ನೀತಿ) ಜಾರಿಗೊಳಿಸುವುದಾಗಿ ಘೋಷಿಸಿ, ಅದಕ್ಕೊಂದು ಸಮಿತಿಯನ್ನು ರಚಿಸಿದ್ದರು. ಈ ಸಮಿತಿಯ ವರದಿಯಲ್ಲೇನಿದೆ? ಅದನ್ನು ಯಾವ ರೀತಿಯಲ್ಲಿ ಜಾರಿಗೊಳಿಸ ಬೇಕು ಎನ್ನುವ ಆಲೋಚನೆ ಮಾಡುವ ಮೊದಲೇ ಎನ್‌ಇಪಿಯನ್ನು ರದ್ದುಗೊಳಿಸಿರುವು ದಾಗಿ ಸರಕಾರ ಘೋಷಿಸಿದೆ.
ಸದ್ಯ ‘ಇತ್ತ ಎನ್‌ಇಪಿ ಇಲ್ಲದೇ, ಅತ್ತ ಎಸ್‌ಇಪಿ ಇಲ್ಲ’ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ, ರಾಷ್ಟ್ರದ ಭವಿಷ್ಯವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ನಾಯಕರು ತಮ್ಮ ಸಿದ್ಧಾಂತ, ರಾಜಕೀಯ ಲಾಭ-ನಷ್ಟದಲ್ಲಿಯೇ ತೀರ್ಮಾನಿಸುವ ಬದಲು ಇಂದಿನ ದಿನಮಾನಕ್ಕೆ ಶಿಕ್ಷಣ ಕ್ಷೇತ್ರಕ್ಕೆ ಬೇಕಿರುವುದೇನು ಎನ್ನುವ ನಿಟ್ಟಿನಲ್ಲಿ ಆಲೋಚಿಸಿ ತೀರ್ಮಾನಿಸಬೇಕಿದೆ. ಈ ವಿಷಯದಲ್ಲಿ ಸಿದ್ಧಾಂತ ಮೀರಿದ ‘ಶಿಕ್ಷಣ’ ತಜ್ಞರೊಂದಿಗಿನ ಚರ್ಚೆ ಇಂದಿನ ಅಗತ್ಯವೆಂದರೆ ತಪ್ಪಾಗುವುದಿಲ್ಲ.