Ranjith H Ashwath Column: ಆರ್ಥಿಕ ಸಂಕಷ್ಟ ನಿವಾರಿಸುವುದೇ ಗ್ಯಾರಂಟಿ ಪರಿಷ್ಕರಣೆ ?
ಕರ್ನಾಟಕದಲ್ಲಿ ಪಂಚಗ್ಯಾರಂಟಿ ಯೋಜನೆಯನ್ನು ಘೋಷಿಸಿದ್ದ ಕಾಂಗ್ರೆಸ್ ನಡೆಯನ್ನು ಟೀಕಿಸಿದ್ದ ಬಿಜೆಪಿ ಹಾಗೂ ಇತರೆ ಪಕ್ಷಗಳು ಇದೀಗ ಅದೇ ಮಾರ್ಗದಲ್ಲಿ ಸಾಗಿದೆ ಎನ್ನುವುದು ಬೇರೆ. ಭವಿಷ್ಯದಲ್ಲಿ ಈ ಗ್ಯಾರಂಟಿ ಘೋಷಣೆಗಳಿಲ್ಲದೇ ಚುನಾವಣೆ ನಡೆಸೋದು ಹೇಗೆ ಎನ್ನುವ ಸ್ಥಿತಿಗೆ ದೇಶ ಬಂದು ನಿಂತಿದೆ.
-
ಅಶ್ವತ್ಥಕಟ್ಟೆ
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಏರಿ ಮೂರು ವರ್ಷ ಪೂರೈಸಿ, ಮುಂದಿನ ಚುನಾವಣೆಗೆ ಸಿದ್ಧತೆ ನಡೆಸಿಕೊಳ್ಳುತ್ತಿದೆ. ಕಳೆದ ಚುನಾವಣೆಯಲ್ಲಿ ಗೆಲುವಿನ ಮಹತ್ವದ ಪಾತ್ರ ವಹಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳು ಸರಕಾರದ ಪ್ರಮುಖ ಸಾಧನೆಯ ಪೈಕಿ ಅಗ್ರಸ್ಥಾನದಲ್ಲಿ ಕಾಣಿಸುತ್ತಿವೆ. ಈಗಲೂ ಸರಕಾರದ ಸಾಧನೆಯ ಮೊದಲ ಹಾಗೂ ಕೊನೆಯ ವಾಕ್ಯ ಪಂಚ ಗ್ಯಾರಂಟಿ ಯೋಜನೆಗೆ ಸಂಬಂಧಿಸಿದ್ದಾಗಿರುತ್ತದೆ. ಬಡವರಿಗೆ ಆರ್ಥಿಕ ಶಕ್ತಿ ನೀಡಬೇಕು ಎನ್ನುವ ಉದ್ದೇಶದಿಂದ ಆರಂಭಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳು ಸರಕಾರದ ಬೊಕ್ಕಸಕ್ಕೆ ಬಹುದೊಡ್ಡ ಹೊರೆ ಯಾಗಿರುವುದು ಎಷ್ಟು ನಿಜವೋ, ಚುನಾವಣೆಗಳಲ್ಲಿ ‘ಉಚಿತ ಕೊಡುಗೆ’ ಅನಿವಾರ್ಯ ಎನ್ನುವ ಸ್ಥಿತಿಯನ್ನು ದೇಶಾದ್ಯಂತ ನಿರ್ಮಿಸಿರುವುದು ಅಷ್ಟೇ ಸತ್ಯ.
ಕರ್ನಾಟಕದಲ್ಲಿ ಪಂಚಗ್ಯಾರಂಟಿ ಯೋಜನೆಯನ್ನು ಘೋಷಿಸಿದ್ದ ಕಾಂಗ್ರೆಸ್ ನಡೆಯನ್ನು ಟೀಕಿಸಿದ್ದ ಬಿಜೆಪಿ ಹಾಗೂ ಇತರೆ ಪಕ್ಷಗಳು ಇದೀಗ ಅದೇ ಮಾರ್ಗದಲ್ಲಿ ಸಾಗಿದೆ ಎನ್ನುವುದು ಬೇರೆ. ಭವಿಷ್ಯದಲ್ಲಿ ಈ ಗ್ಯಾರಂಟಿ ಘೋಷಣೆಗಳಿಲ್ಲದೇ ಚುನಾವಣೆ ನಡೆಸೋದು ಹೇಗೆ ಎನ್ನುವ ಸ್ಥಿತಿಗೆ ದೇಶ ಬಂದು ನಿಂತಿದೆ.
ಆರಂಭದಲ್ಲಿ ವಿರೋಧಿಸಿದ್ದ ಪಕ್ಷಗಳು ಇಂದು ಗ್ಯಾರಂಟಿ ಯೋಜನೆಗಳ ಹಾದಿಯಲ್ಲಿಯೇ ಸಾಗಿರು ವುದು ರಾಜಕೀಯ ಹಾಗೂ ಮತದಾರರಲ್ಲಿ ಸೃಷ್ಟಿಸಿರುವ ಪ್ರಭಾವಕ್ಕೆ ಸಾಕ್ಷಿಯಾಗಿದೆ. ಕರ್ನಾಟಕಕ್ಕೆ ಸೀಮಿತಗೊಳಿಸಿ ಪಂಚ ಗ್ಯಾರಂಟಿ ಯೋಜನೆಗಳನ್ನು ನೋಡುವುದಾದರೆ, ದಲ್ಲಿ ಕಳೆದ ಮೂರು ವರ್ಷಗಳಲ್ಲಿ ರಾಜ್ಯ ಸರಕಾರ ಪಂಚಗ್ಯಾರಂಟಿ ಯೋಜನೆಗಳಿಗೆ ಬರೋಬ್ಬರಿ 1.34 ಲಕ್ಷ ಕೋಟಿ ರು.ಗೂ ಹೆಚ್ಚು ಖರ್ಚು ಮಾಡಿದೆ. ಈ ಪಂಚಗ್ಯಾರಂಟಿ ಯೋಜನೆಗಳ ಅನುಷ್ಠಾನದ ಅಡ್ಡ ಪರಿಣಾಮ ಎನ್ನುವಂತೆ ಶಾಸಕರ ಅನುದಾನದಲ್ಲಿ ಖೋತಾ, ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಕೊರತೆ, ನಿರ್ವಹಣೆಗೆ ಸಾಲದ ಮೊರೆ ಸೇರಿದಂತೆ ಹಲವು ರೀತಿಯ ಸಮಸ್ಯೆಯಾಗಿದೆ. ಆದರೆ ಆರ್ಥಿಕವಾಗಿ ಕರ್ನಾಟಕ ‘ಸಮರ್ಥ’ವಿರುವುದರಿಂದ ಸರಕಾರ ಎಲ್ಲವನ್ನು ಮೀರಿ ಯೋಜನೆ ಯನ್ನು ಆಚೀಚೆ ಮಾಡಿಕೊಂಡು ಮುನ್ನಡೆಸಿಕೊಂಡು ಹೋಗುತ್ತಿದೆ.
ಇದನ್ನೂ ಓದಿ: Ranjith H Ashwath Column: ಪರಿಷತ್ತಿನ ಫಲಿತಾಂಶ, ಗೆದ್ದರೂ ನಲುಗಿದ್ದ ಕಮಲ ಪಡೆ !
ಆದರೆ ಈಗ ಬರುತ್ತಿರುವ ಒಂದೊಂದೇ ಸಿಎಜಿ ವರದಿಗಳು ಕರ್ನಾಟಕ ಗ್ಯಾರಂಟಿ ಯೋಜನೆ ಗಳಲ್ಲಿರುವ ಲೋಪಗಳನ್ನು ಎತ್ತಿ ಹಿಡಿಯುತ್ತಿವೆ. 2023 ವಿಧಾನಸಭಾ ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ನಾಯಕರು ಪಂಚಗ್ಯಾರಂಟಿ ಯೋಜನೆಯನ್ನು ಘೋಷಿಸಿದಾಗಲೇ, ಫಲಾನುಭವಿಗಳ ಬಗ್ಗೆಯೂ ಸ್ಪಷ್ಟನೆ ನೀಡಿ ಎನ್ನುವ ಮಾತುಗಳು ಕೇಳಿಬಂದಿತ್ತು.
ಆದರೆ ಆ ಸಮಯದಲ್ಲಿ ‘ಎಲ್ಲರಿಗೂ ಅನ್ವಯ’ವೆಂದಿದ್ದರು. ಅಂದಿಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಕ್ತಿ ಯೋಜನೆಯ ಬಗ್ಗೆ ಸ್ಪಷ್ಟನೆ ನೀಡುವಾಗ, ‘ಮಹದೇವಪ್ಪ (ಅಂದಿನ ಸಚಿವ) ಅವರ ಪತ್ನಿಗೂ ಫ್ರೀ.. ನನ್ನ ಪತ್ನಿಗೂ ಫ್ರೀ’ ಎಂದು ಘೋಷಿಸಿದ್ದರು. ನಿಜವಾದ ಸಮಸ್ಯೆ ಶುರುವಾಗಿದ್ದೇ ಈ ಹಂತದಲ್ಲಿ. ಬಡತನ ರೇಖೆಗಿಂತ ಕೆಳಗಿರುವವರಿಗೆ ಈ ಯೋಜನೆಯನ್ನು ವಿಸ್ತರಣೆ ಮಾಡಿದ್ದರೆ ದೊಡ್ಡ ಸಮಸ್ಯೆಯಾಗುತ್ತಿರಲಿಲ್ಲ. ಅದಾಗಲೇ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಉಚಿತ ವಿದ್ಯುತ್ ಹಾಗೂ ಆಹಾರ ಸಾಮಗ್ರಿಯನ್ನು ಸರಕಾರಗಳಿಂದ ನೀಡಲಾಗುತ್ತಿತ್ತು. ಆದರೆ ಸಮಸ್ಯೆ ಶುರುವಾಗಿದ್ದರೂ, ಶಕ್ತಿ ಯೋಜನೆಯನ್ನು ಯಾರು ಬೇಕಾದರೂ ಬಳಸಬಹುದು, ಗೃಹಜ್ಯೋತಿ ಯೋಜನೆಗೆ 200 ಯುನಿಟ್ ಬಳಕೆಯೊಂದನ್ನೇ ಮಾನದಂಡವನ್ನಾಗಿ ಮಾಡಿದ್ದು ಹಾಗೂ ಗೃಹಲಕ್ಷ್ಮೀ ಯೋಜನೆಗೆ ‘ಮನೆ ಯಜಮಾನಿ’ಯೊಂದೇ ಮಾನದಂಡವನ್ನಾಗಿ ಮಾಡಿದ್ದು ಆರ್ಥಿಕ ಹೊರೆ ಈ ಪ್ರಮಾಣದಲ್ಲಿ ಏರಿಕೆಯಾಗಲು ಕಾರಣವಾಯಿತು ಎಂದರೆ ತಪ್ಪಾಗುವುದಿಲ್ಲ. ಅರ್ಹರಿಗೆ ಕಲ್ಯಾಣ ಯೋಜನೆಗಳನ್ನು ವಿಸ್ತರಿಸುವುದು ತಪ್ಪಿಲ್ಲ. ಆದರೆ ಎಲ್ಲರಿಗೂ ಎಂದಿದ್ದೇ ಇಂದಿನ ಈ ಸಮಸ್ಯೆಗೆ ಕಾರಣ.
ಇದಾದ ಬಳಿಕ ಗೃಹಲಕ್ಷ್ಮೀ ಯೋಜನೆಯ ಹಣ ದುರುಪಯೋಗದ ಬಗ್ಗೆ ಅಲ್ಲಲ್ಲಿ ಕೇಳಿಬಂದಿತ್ತು. ಅದಾದ ಬಳಿಕ ಗ್ಯಾರಂಟಿ ಅನುಷ್ಠಾನ ಸಮಿತಿಯೂ ಮೃತಪಟ್ಟ ಮಹಿಳೆಯರ ಖಾತೆಗೂ ಅನುದಾನ ಹೋಗುತ್ತಿದೆ ಎನ್ನುವ ವರದಿಯನ್ನು ಸಲ್ಲಿಸಿತ್ತು. ಈ ಬಗ್ಗೆ ಕ್ರಮ ವಹಿಸುವ ಮೊದಲೇ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅಧಿಕಾರ ವಹಿಸಿಕೊಂಡಿದ್ದರಿಂದ ಅವರು, ಅಧಿಕಾರಕ್ಕೆ ಬಂದ ಕೆಲವೇ ದಿನದಲ್ಲಿ ಪಂಚಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಹಾಗೂ ಮರು ಅರ್ಜಿಯನ್ನು ಕರೆಯುವ ಪ್ರಸ್ತಾಪ ಮಾಡಿದರು.
ಇದಕ್ಕೆ ಸಹಜವಾಗಿಯೇ ಪ್ರತಿಪಕ್ಷಗಳಿಂದ ವಿರೋಧ ವ್ಯಕ್ತವಾಗಿದ್ದರಿಂದ ಮೃತಪಟ್ಟಿರುವವವರ ಖಾತೆಗೆ ಅನುದಾನ ಹೋಗಿರುವ ವಿಷಯದಲ್ಲಿ ಕ್ರಮ ವಹಿಸಲು ಸರಕಾರ ಪರಿಷ್ಕರಣೆಗೆ ಮುಂದಾ ಗಿದೆ ಎಂದು ಸ್ಪಷ್ಟನೆ ನೀಡುವ ಕೆಲಸವನ್ನು ಮಾಡಿತ್ತು. ಆದರೆ ಅದನ್ನೂ ಮೀರಿದ ಲೋಪವಾಗಿ ರುವ ಬಗ್ಗೆ ಸಿಎಜಿ ಎತ್ತಿ ಹಿಡಿದಿರುವುದು ಇದೀಗ ಇಡೀ ಯೋಜನೆ ‘ಅರ್ಹ’ರಿಗೆ ತಲುಪಿದೆಯೇ ಎನ್ನುವ ಅನುಮಾನವನ್ನು ಹುಟ್ಟಿಸುತ್ತಿದೆ.
ಪ್ರಮುಖವಾಗಿ ಸುಮಾರು 19020 ಫಲಾನುಭವಿಗಳು ಒಂದೇ ಬ್ಯಾಂಕ್ ಖಾತೆಗೆ ಅಟ್ಯಾಚ್ ಆಗಿದ್ದಾರೆ. ಒಬ್ಬ ಫಲಾನುಭವಿಗೆ ಒಂದು ಖಾತೆ ಎನ್ನುವ ನಿಯಮವಿದ್ದರೂ, ಈ ಪ್ರಮಾಣದ ಹಣ ಒಂದೇ ಖಾತೆಯೊಂದಿಗೆ ಜೋಡಣೆಯಾಗಿದ್ದರೂ ಈ ಬಗ್ಗೆ ಇಲಾಖೆ ಏಕೆ ಕ್ರಮವಹಿಸಿಲ್ಲ? ಒಂದೇ ಖಾತೆಗೆ ಹಣ ಹರಿದಿರುವುದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಇದಿಷ್ಟೇ ಅಲ್ಲದೇ, 23,262 ಫಲಾನು ಭವಿಗಳಿಗೆ ಬ್ಯಾಂಕ್ ಖಾತೆಯೇ ಇಲ್ಲದಿದ್ದರೂ ಅವರ ಹೆಸರಿಯಲ್ಲಿ 46.52 ಕೋಟಿ ರು ಸಂದಾಯ ವಾಗಿರುವುದು, ಖಾತೆಯಿಲ್ಲದಿದ್ದರೂ ಡಿಬಿಟಿ ಮೂಲಕ ಹಣ ವರ್ಗಾವಣೆಯಾಗಿರುವ ಬಗ್ಗೆ ಪ್ರಶ್ನೆ ಗಳು ಮೂಡಿವೆ.
ಈ ಬಗ್ಗೆ ಸಿಎಜಿ ಎತ್ತಿರುವ ಪ್ರಶ್ನೆಗಳಿಗೆ ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸ್ಪಷ್ಟೀ ಕರಣವನ್ನು ನೀಡಲಾಗಿದ್ದು, ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯಿಂದ ಯೋಜನೆ ಅನುಷ್ಠಾನ ವಾಗುವುದರಿಂದ ಜಂಟಿ ಖಾತೆಗಳನ್ನು ಹೊಂದಿರುವ ಫಲಾನುಭವಿಗಳ ಪ್ರಕರಣದಲ್ಲಿ ಒಂದೇ ಖಾತೆಗೆ ಹಣ ಜಮೆಯಾಗಿರುವುದು ಕಂಡುಬಂದಿದೆ. ಇನ್ನು ಫಲಾನುಭವಿಗಳು ತಮ್ಮ ಇಚ್ಛೆಯಂತೆ ಆಧಾರ್ ಜೋಡಣೆಯನ್ನು ಮತ್ತೊಂದು ಬ್ಯಾಂಕ್ ಖಾತೆಗೆ ಬದಲಾಯಿಸಿಕೊಳ್ಳಲು ಸಂಪೂರ್ಣ ಅವಕಾಶವಿರುವುದರಿಂದ, ಬೇರೆ ಬೇರೆ ತಿಂಗಳುಗಳಲ್ಲಿ ಬೇರೆ ಬೇರೆ ಖಾತೆಗಳಿಗೆ ಹಣ ಜಮೆಯಾಗಿ ರುವ ಸಾಧ್ಯತೆಯಿರುತ್ತದೆ ಎಂದು ಸಮರ್ಥನೆ ನೀಡಿದೆ.
ಆದರೆ ಕರ್ನಾಟಕದ ಮಾದರಿಯಲ್ಲಿಯೇ ತೆಲಂಗಾಣ, ಹಿಮಾಚಲ ಪ್ರದೇಶದಲ್ಲಿಯೂ ಘೋಷಣೆ ಮಾಡಿ, ಅಧಿಕಾರದ ಗದ್ದುಗೆಯನ್ನು ಕಾಂಗ್ರೆಸ್ ಹಿಡಿದಿತ್ತು. ಆದರೆ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆಯುವಷ್ಟರಲ್ಲಿ ಈ ಎರಡೂ ರಾಜ್ಯಗಳು ಆರ್ಥಿಕವಾಗಿ ಜರ್ಜರಿತವಾಗಿದೆ. ಚುನಾವಣೆ ಯಲ್ಲಿನ ಗೆಲುವಿಗೆ ‘ಮಾಡೆಲ್’ ರೀತಿ ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನು ಮಾಡಿಕೊಂಡ ಇತರೆ ಪಕ್ಷಗಳು, ಚುನಾವಣಾ ತಂತ್ರಗಾರಿಕೆಯ ಭಾಗವಾಗಿ ಹತ್ತು ಹಲವು ಆಕರ್ಷಕ ಘೋಷಣೆ ಗಳನ್ನು ಮಾಡಿವೆ, ಮಾಡುತ್ತಿವೆ. ಘೋಷಣೆ ಮಾಡಿಕೊಂಡು ಅಧಿಕಾರದ ಗದ್ದುಗೆ ಹಿಡಿದಿರುವ ಅನೇಕ ರಾಜ್ಯಗಳು, ಈಗ ಯೋಜನೆಗಳನ್ನು ಪೂರೈಸಲು ಸಾಲಗಳ ಮೊರೆ ಅಥವಾ ‘ಅನುದಾನ ಕಡಿತ’ದ ಮೊರೆ ಹೋಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.
ಚುನಾವಣೆಗಳ ಗೆಲುವಿಗೆ ರಾಜಕೀಯ ಪಕ್ಷಗಳಿಂದ ಘೋಷಣೆಯಾಗುತ್ತಿರುವ ಉಚಿತ ಯೋಜನೆ ಗಳಿಂದ ಆಗುತ್ತಿರುವ ಆರ್ಥಿಕ ಹೊರೆಯ ಬಗ್ಗೆ ಈಗಾಗಲೇ ಆತಂಕದ ಮಾತುಗಳು ಶುರುವಾಗಿದೆ. ಸರಕಾರಗಳ ಅತಿರೇಕದ ಉಚಿತ ಕೊಡುಗೆಗಳು ದೇಶದ ದೀರ್ಘಾವಧಿ ಆರ್ಥಿಕ ಸ್ಥಿರತೆಗೆ ಮಾರಕ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚಿಗೆ ಆತಂಕ ವ್ಯಕ್ತಪಡಿಸಿತ್ತು.
ಪ್ರಮುಖವಾಗಿ ಬಜೆಟ್‌ನ ಬಹುಪಾಲು ಹಣ ಉಚಿತ ಯೋಜನೆಗಳಿಗೆ ವ್ಯಯವಾಗುವುದರಿಂದ ರಸ್ತೆ, ಶಿಕ್ಷಣ ಮತ್ತು ಆರೋಗ್ಯದಂತಹ ಮೂಲಸೌಕರ್ಯಗಳ ಮೇಲಿನ ಬಂಡವಾಳ ಹೂಡಿಕೆ ಗಣನೀಯ ವಾಗಿ ಕಡಿಮೆಯಾಗುತ್ತಿದೆ. ಇದರೊಂದಿಗೆ ರಾಜ್ಯಗಳ ಒಟ್ಟು ಸಾಲವು ಜಿಡಿಪಿಯ ಶೇ.29.5ಕ್ಕೆ ಏರುವ ಸಾಧ್ಯತೆಯಿದ್ದು, ಸಾಲದ ಬಡ್ಡಿ ಪಾವತಿಗೇ ಹೆಚ್ಚಿನ ಆದಾಯ ವ್ಯರ್ಥವಾಗುತ್ತಿದೆ ಎನ್ನುವ ಆತಂಕ ವ್ಯಕ್ತಪಡಿಸಿತ್ತು.
ಫ್ರೀಬಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯ ವೇಳೆ, ಸುಪ್ರೀಂ ಕೋರ್ಟ್ ಸಹ ಚುನಾವಣಾ ಪ್ರಣಾಳಿಕೆಗಳಲ್ಲಿ ರಾಜಕೀಯ ಪಕ್ಷಗಳು ಘೋಷಿಸುವ ಮಿತಿಮೀರಿದ ಉಚಿತ ಕೊಡುಗೆಯ ಸಂಸ್ಕೃತಿ ದೇಶದ ಆರ್ಥಿಕತೆಗೆ ಬಹುದೊಡ್ಡ ಹೊಡೆತ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು. ಕಲ್ಯಾಣ ಯೋಜನೆಗಳ ನೆಪದಲ್ಲಿ ಘೋಷಿಸುವ ರಾಜಕೀಯ ಪಕ್ಷಗಳನ್ನು ಹೇಗೆ ನಿಯಂತ್ರಿಸಲಾಗುತ್ತಿದೆ ಎಂದು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.
ಅತಿರೇಕದ ಉಚಿತ ಕೊಡುಗೆಗಳು ರಾಜ್ಯಗಳ ಆರ್ಥಿಕತೆಯನ್ನು ದಿವಾಲು ಮಾಡಬಹುದು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹದಗೆಡಿಸಬಹುದು ಎಂದು ಹೇಳಿದೆ. ಉಚಿತ ಶಿಕ್ಷಣ, ಆರೋಗ್ಯ ಮತ್ತು ಸಬ್ಸಿಡಿ ಆಹಾರದಂತಹ ಕಲ್ಯಾಣ ಕಾರ್ಯಕ್ರಮಗಳು ಸರಕಾರದ ಸಾಂವಿಧಾನಿಕ ಕರ್ತವ್ಯ ಗಳಾಗಿವೆ. ಆದರೆ ಚುನಾವಣೆಗಾಗಿ ನೀಡುವ ಗ್ರಾಹಕ ವಸ್ತುಗಳು ಅಥವಾ ಬೇಷರತ್ ನಗದು ವರ್ಗಾವಣೆಗಳು ಆರ್ಥಿಕತೆಗೆ ಹಾನಿಕಾರಕ ಎಂದು ಅಭಿಪ್ರಾಯಪಟ್ಟಿವೆ.
ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆ ಜಾರಿಗೊಂಡ ಕೆಲವೇ ತಿಂಗಳಲ್ಲಿ ಈ ಯೋಜನೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಮೇಲುಸ್ತುವಾರಿಯ ರೀತಿಯಲ್ಲಿ ರಾಜ್ಯ ಸರಕಾರ ಗ್ಯಾರಂಟಿ ಅನುಷ್ಠಾನ ಸಮಿತಿಯನ್ನು ರಚಿಸಿತ್ತು. ಸರಕಾರಿ ಅನುದಾನದಲ್ಲಿ ಈ ಸಮಿತಿಯನ್ನು ರಚಿಸಿ, ಕಾಂಗ್ರೆಸ್ ಕಾರ್ಯಕರ್ತರಿಗೆ ಸರಕಾರಿ ಸೌಲಭ್ಯ ನೀಡಲಾಗುತ್ತಿದೆ ಎನ್ನುವ ಆರೋಪವನ್ನು ಪ್ರತಿಪಕ್ಷಗಳು ಮಾಡಿದ್ದು ಬೇರೆ ಮಾತು. ಆದರೆ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ರಚಿಸಲಾಯಿತು.
ರಾಜ್ಯಮಟ್ಟದ ಸಮಿತಿಯ ಅಧ್ಯಕ್ಷರಿಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ನೀಡಿದರೆ, ಉಪಾಧ್ಯಕ್ಷರುಗಳಿಗೆ ರಾಜ್ಯ ಸಂಪುಟ ದರ್ಜೆಯ ಸ್ಥಾನಮಾನವನ್ನು ಸರಕಾರ ನೀಡಿತ್ತು. ರಾಜ್ಯ ಮಟ್ಟದ ಸಮಿತಿ ರಾಜ್ಯಾದ್ಯಂತ ಸಂಚಾರ ಮಾಡಿ, ಯೋಜನೆಗಳ ಸ್ಥಿತಿ-ಗತಿ, ಅರ್ಹರಿಗೆ ಯೋಜನೆ ಗಳು ತಲುಪುತ್ತಿವೆಯೇ ಎನ್ನುವುದನ್ನು ಪರಾಮರ್ಶೆ ನಡೆಸಬೇಕಿತ್ತು. ಆದರೆ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಹೊರತುಪಡಿಸಿದರೆ, ಇನ್ಯಾರು ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಹಲವರ ಬಳಿ ಉತ್ತರವಿಲ್ಲ.
ಕೆಲವೊಂದಷ್ಟು ಕಡೆ ಗ್ಯಾರಂಟಿ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಸಭೆ ನಡೆಸಿದ್ದಾರೆ. ಆದರೆ ಇನ್ನುಳಿದ ಉಪಾಧ್ಯಕ್ಷರು, ಸದಸ್ಯರು ಏನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಒಂದು ವೇಳೆ ಇದು ನಿಜವೇ ಆದರೂ, ಕೋಟ್ಯಂತರ ರುಪಾಯಿ ವ್ಯಯಿಸಿ, ಸ್ಥಾಪಿಸಿರುವ ಸಮಿತಿಯ ಮೂಲ ಉದ್ದೇಶವೇ ಮರೆಯಾದಂತಾಯಿತು.
ಇಡೀ ದೇಶಕ್ಕೆ ಮಾದರಿಯಾಗುವ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದ ಕರ್ನಾಟಕದ ಕಾಂಗ್ರೆಸ್ ಇದೀಗ, ಈ ಯೋಜನೆಯಲ್ಲಿರುವ ಲೋಪಗಳನ್ನು ಸರಿಪಡಿಸುವಲ್ಲಿಯೂ ‘ಮಾದರಿ’ ಯಾಗಬೇಕಿದೆ. ಗೃಹಲಕ್ಷ್ಮೀ ಯೋಜನೆಯ ಅನುದಾನ ಮೃತಪಟ್ಟವರ ಖಾತೆಗೆ ಹೋಗಿರುವುದು ತಿಳಿದಾಗ, ಮೃತಪಟ್ಟವರ ಬಗ್ಗೆ ಮಾಹಿತಿ ನೀಡಬೇಕಿರುವುದು ಕುಟುಂಬ ಸದಸ್ಯರ ಕರ್ತವ್ಯ. ಆದ್ದರಿಂದ ಇದು ವ್ಯವಸ್ಥೆಯ ಲೋಪಕ್ಕಿಂತ ಹೆಚ್ಚಾಗಿ ಮೃತಪಟ್ಟ ಕುಟುಂಬಗಳಿಂದ ಆಗಿರುವ ಲೋಪವೆಂದು ಸಮರ್ಥಿಸಿಕೊಳ್ಳುವ ಕೆಲಸವನ್ನು ಸರಕಾರ ಮಾಡಿತ್ತು. ಆದರೀಗ, ಒಂದೇ ಖಾತೆಗೆ ಸಾವಿರಾರು ಜನರ ಹೆಸರು ಲಿಂಕ್ ಆಗಿರುವುದು, ಕೆಲ ಸಾವಿರ ಖಾತೆಗೆ ತಿಂಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಹಣ ಜಮೆಯಾಗಿರುವುದು ಸಿಎಜಿ ವರದಿಯಲ್ಲಿ ಪ್ರಸ್ತಾಪವಾಗಿರುವುದು ವ್ಯವಸ್ಥೆ ಯಲ್ಲಿರುವ ಲೋಪವೇ ಕಾರಣ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗಿದೆ.
ಗ್ಯಾರಂಟಿ ಯೋಜನೆಯಲ್ಲಿ ಆಗುತ್ತಿರುವ ‘ಲೋಪ’ಗಳನ್ನು ಸರಿಪಡಿಸಿಕೊಳ್ಳಲು ಈಗ ಪರಿಷ್ಕರಣೆ ಮಾಡಲು ಮುಂದಾಗಿರುವುದು ಸ್ವಾಗತಾರ್ಹ. ಪರಿಷ್ಕರಣೆಯ ಸಮಯದಲ್ಲಿ ‘ಅರ್ಹ’ರಿಗೆ ಸಿಗುವಂತೆ ಮಾಡಬೇಕಾದ ಕೆಲಸವನ್ನು ಸರಕಾರ ಮಾಡಬೇಕಿದೆ. ಆದರೆ ಪರಿಷ್ಕರಣೆಯ ಸಮಯದಲ್ಲಿ ಅರ್ಹರು ಎಂದು ಗುರುತಿಸಲು ಇರುವ ಬಿಪಿಎಲ್‌ಗಳಲ್ಲಿಯೇ ಲಕ್ಷಾಂತರ ಕಾರ್ಡ್‌ಗಳು ಬೋಗಸ್ ಎನ್ನುವ ಆರೋಪಗಳಿವೆ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲವನ್ನೂ ಶುದ್ಧೀಕರಣ ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆಗೆ ‘ಮೌನ’ವೇ ಉತ್ತರವಾಗಿದೆ.