ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Rangaswamy Mookanahally Column: ಸ್ವಂತ ವಿವೇಚನೆ ಇರುವ ಜನರು ಸಮಾಜದ ಆಸ್ತಿ !

ಮನುಷ್ಯನ ಸೈಕಾಲಜಿ ನನಗೆ ಎಂದಿಗೂ ಅಚ್ಚರಿ ಹುಟ್ಟಿಸುವ, ಪ್ರಶ್ನೆಗಳನ್ನು ಹುಟ್ಟುಹಾಕುವ ವಿಷಯ. ಈ ಮನುಷ್ಯನ ಮನಸ್ಸು ಬಹಳ ವಿಚಿತ್ರ. ತನ್ನ ಬುದ್ಧಿವಂತಿಕೆಯ ಶಕ್ತಿಯಿಂದ ಈ ವಿಶ್ವ ಎಷ್ಟು ದೊಡ್ಡದು, ಅದರಲ್ಲಿ ನಾನೆಷ್ಟು ಚಿಕ್ಕವನು ಎನ್ನುವುದನ್ನು ಕಂಡುಕೊಂಡಿರುವುದು ಅವನ ದೊಡ್ಡಸ್ತಿಕೆ. ಆತನನ್ನು ಜಗತ್ತಿನ ಇತರ ಎಲ್ಲಾ ಜೀವಿಗಳಿಗಿಂತ ಶ್ರೇಷ್ಠವಾಗಿಸಿರುವುದು ಕೂಡ ಈ ಚಿಂತನ ಶಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ

ಸ್ವಂತ ವಿವೇಚನೆ ಇರುವ ಜನರು ಸಮಾಜದ ಆಸ್ತಿ !

-

ವಿಶ್ವರಂಗ

ಈ ಭೂಮಿ ಮೇಲೆ 800 ಕೋಟಿಗೂ ಹೆಚ್ಚಿನ ಜನ ಇದ್ದೇವೆ. 197 ದೇಶಗಳಿವೆ. ಸಾವಿರಾರು ರಾಜ್ಯ ಗಳು, ಲಕ್ಷಾಂತರ ಊರುಗಳು ಹಳ್ಳಿಗಳು, ಇಂತಿಪ್ಪ ಭೂಮಿ 3 ಲಕ್ಷ 20 ಸಾವಿರ ಕೋಟಿ ಪ್ಲಾನೆಟ್ ಇರುವ ಗ್ಯಾಲಕ್ಸಿಯಲ್ಲಿ ಒಂದು ಪುಟ್ಟ ಗ್ರಹ ಅಷ್ಟೇ! ಇಂತಹ ಗ್ಯಾಲಕ್ಸಿಯಲ್ಲಿನ ಭೂಮಿಗೆ ಶಾಖ ನೀಡುವ ಸೂರ್ಯ 20 ಸಾವಿರ ಕೋಟಿ ನಕ್ಷತ್ರಗಳಿರುವ ಮಿಲ್ಕಿ ವೇಯಲ್ಲಿ ಒಂದು ಸಣ್ಣ ನಕ್ಷತ್ರ!

20 ಸಾವಿರ ಕೋಟಿಗೂ ಹೆಚ್ಚು ನಕ್ಷತ್ರವನ್ನು ಹೊಂದಿರುವ ಮಿಲ್ಕಿ ವೇ ಎರಡು ಲಕ್ಷ ಕೋಟಿ ಗ್ಯಾಲಕ್ಸಿಗಳಲ್ಲಿ ಒಂದು ಸಣ್ಣ ಗ್ಯಾಲಕ್ಸಿ. ಇದು ಇವತ್ತಿಗೆ ಮನುಷ್ಯನ ಬುದ್ಧಿ ಶಕ್ತಿಗೆ ತಿಳಿದಿರುವ ಲೆಕ್ಕಾಚಾರ. ನಮಗೆ ನಿಲುಕದ್ದು ಅದೆಷ್ಟಿದೆಯೂ ಅಲ್ವಾ? ನಮಗೆ ಗೊತ್ತಿಲ್ಲ ಎಂದ ಮಾತ್ರಕ್ಕೆ ಅದಿಲ್ಲ ಎಂದಲ್ಲ ಎನ್ನುವುದು ನಮಗೆ ಗೊತ್ತಿರಲಿ. ಈ ಲೆಕ್ಕಾಚಾರದಲ್ಲಿ ಸಾಸಿವೆ ಕಾಳಿನ ಲೆಕ್ಕಕ್ಕೂ ಬಾರದ ಈ ಭೂಮಿ ಎನ್ನುವ ಗ್ರಹದಲ್ಲಿ 800 ಕೋಟಿಗೂ ಮೀರಿದ ಜನರಲ್ಲಿ ನಾವೆಷ್ಟರವರು ಅಲ್ವಾ? ಆದರೆ ಬಹುತೇಕ ಮನುಷ್ಯರಿಗೆ ಇದೆ ಅರ್ಥ ಆಗೋಲ್ಲ.

ಮನುಷ್ಯನ ಸೈಕಾಲಜಿ ನನಗೆ ಎಂದಿಗೂ ಅಚ್ಚರಿ ಹುಟ್ಟಿಸುವ, ಪ್ರಶ್ನೆಗಳನ್ನು ಹುಟ್ಟು ಹಾಕುವ ವಿಷಯ. ಈ ಮನುಷ್ಯನ ಮನಸ್ಸು ಬಹಳ ವಿಚಿತ್ರ. ತನ್ನ ಬುದ್ಧಿವಂತಿಕೆಯ ಶಕ್ತಿಯಿಂದ ಈ ವಿಶ್ವ ಎಷ್ಟು ದೊಡ್ಡದು, ಅದರಲ್ಲಿ ನಾನೆಷ್ಟು ಚಿಕ್ಕವನು ಎನ್ನುವುದನ್ನು ಕಂಡುಕೊಂಡಿರುವುದು ಅವನ ದೊಡ್ಡಸ್ತಿಕೆ. ಆತನನ್ನು ಜಗತ್ತಿನ ಇತರ ಎಲ್ಲಾ ಜೀವಿಗಳಿಗಿಂತ ಶ್ರೇಷ್ಠವಾಗಿಸಿರುವುದು ಕೂಡ ಈ ಚಿಂತನ ಶಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಎಲ್ಲಾ ಮನುಷ್ಯರಿಗೂ ಈ ಚಿಂತನ ಶಕ್ತಿ ಇರುವುದಿಲ್ಲ.

ಅವರು ಅವರಿವರು ಹೇಳಿದ್ದು, ಕೇಳಿದ್ದರ ಆಧಾರದ ಮೇಲೆ ಮಾತಾಡಲು ಶುರು ಮಾಡುತ್ತಾರೆ. ಅದು ತಮ್ಮದೇ ಮಾತು, ತಮ್ಮದೇ ನಿರ್ಧಾರ ಎಂದು ನಂಬಿ ಬಿಡುತ್ತಾರೆ. ಆದರೆ ಜಗತ್ತಿನ 95 ಪ್ರತಿ ಶತಕ್ಕೂ ಹೆಚ್ಚು ಜನರಿಗೆ ಸ್ವತಃ ಯೋಚಿಸುವ, ನಿರ್ಧಾರ ಕೈಗೊಳ್ಳುವ, ತಮ್ಮದೇ ಆದ ಒಪಿನಿಯನ್ ಹೊಂದುವ ಶಕ್ತಿ, ಕ್ಷಮತೆಯಿಲ್ಲ.

ಇದನ್ನೂ ಓದಿ: Rangaswamy Mookanahalli Column: ಅಮ್ಮ ಮುಖ್ಯ, ಅಪ್ಪನೂ ಅಷ್ಟೇ ಮುಖ್ಯ !

ಬಹಪಾಲು ಜನ ಕಾಪಿ ಕ್ಯಾಟ್‌ಗಳು. ಜಗತ್ತು ಇವತ್ತಿರುವ ಪರಿಸ್ಥಿತಿಗೆ ಬಂದಿರುವುದು ಆ ಮೂರು ಪ್ರತಿಶತ ಜನರಿಂದ ಮಾತ್ರ. ಇವತ್ತಿನ ಪರಿಸ್ಥಿತಿ ಒಳ್ಳೆಯದೋ ಅಥವಾ ಕೆಟ್ಟದ್ದೋ ಎನ್ನುವುದು ಚರ್ಚಾಸ್ಪದ ವಿಷಯ. ವಿವೇಚನೆ ಮತ್ತು ವಿಶ್ಲೇಷಣೆ ಎನ್ನುವ ಎರಡು ಗುಣಗಳು ಇದ್ದ ಮನುಷ್ಯ ನಿಜಕ್ಕೂ ಸಮಾಜಕ್ಕೆ ಆಸ್ತಿ.

ವಿಚಾರದ ಬಗ್ಗೆ ಮಾತ್ರ ಚರ್ಚೆಯಾಗಬೇಕು. ವ್ಯಕ್ತಿಯ ಬಗ್ಗೆಯಲ್ಲ ಎನ್ನುವ ವಿವೇಚನೆ ಮತ್ತು ವಿಚಾರ ಸರಿಯಾಗಿದೆಯೇ ,ಇಲ್ಲವೇ ಎನ್ನುವ ವಿಶ್ಲೇಷಣೆ ಮಾಡುವ ಮನೋಭಾವವಿರುವ ಸಮಾಜ ಉನ್ನತಿಯ ಕಡೆಗೆ ಸಾಗುತ್ತದೆ. ಇಲ್ಲವಾದಲ್ಲಿ ವ್ಯರ್ಥ ಮಾತುಗಳು, ಪ್ರಯೋಜನಕ್ಕೆ ಬಾರದ ಕಾಮೆಂಟುಗಳಲ್ಲಿ ಜೀವನ ಕಳೆದು ಹೋಗುತ್ತದೆ.

ಇವತ್ತಿನ ಕಾಲಘಟ್ಟದಲ್ಲಿ ಎಲ್ಲರಿಗೂ ತಮಗೆ ಅನ್ನಿಸಿದ್ದು ಹೇಳುವ ಹಪಾಹಪಿ. ಅದು ಸರಿಯೇ, ತಪ್ಪೇ ಎನ್ನುವ ವಿಶ್ಲೇಷಣೆಗೆ ಹೋಗುವುದಿಲ್ಲ. ಈ ಕ್ಷಣದಲ್ಲಿ ಅನ್ನಿಸಿದ್ದು ಹೇಳಿಬಿಡಬೇಕು ಅಷ್ಟೇ. ತಮ್ಮ ಅಭಿಪ್ರಾಯ ದಾಖಲಿಸದೆ ಇದ್ದರೆ ಹೇಗೆ? ಎನ್ನುವ ಸಾಮಾಜಿಕ ಒತ್ತಡಕ್ಕೆ ಬಿದ್ದು ಬಿಡುತ್ತಾರೆ. ಅಲ್ಲಿಗೆ ವಿವೇಚನೆ ಮೂಲೆಗುಂಪಾಗುತ್ತದೆ.

ಸೋಶಿಯಲ್ ಮೀಡಿಯಾದಲ್ಲಿ ನನಗೆ ನಿಮ್ಮ ಪೋಸ್ಟುಗಳಿಗೆ ಕಾಮೆಂಟ್ ಮಾಡುವ ಅವಕಾಶ ವಿಲ್ಲ. ಹೀಗಾಗಿ ಮೆಸ್ಸೇಜ್ ಕಳಿಸುತ್ತಿದ್ದೇನೆ ಎನ್ನುವ ಜನರು ಇದ್ದಾರೆ. ಇನ್ನು ಕೆಲವರು ಕಾಮೆಂಟ್ ಬಾಕ್ಸ್ ಲಾಕ್ ಮಾಡಿಕೊಂಡು ಕುಳಿತಿದ್ದೀಯ ತಾಕತ್ ಇದ್ದರೆ ಕಾಮೆಂಟ್ ಬಾಕ್ಸ್ ಓಪನ್ ಮಾಡು ಎನ್ನುವವರು‌ ಇದ್ದಾರೆ. ಮೊನ್ನೆಯಂತೂ ಬೇರೆ ಯಾರದೋ ಪೋಸ್ಟಿಗೆ ಕಾಮೆಂಟ್ ಮಾಡಿದ್ದರೆ ಅಲ್ಲಿಗೆ ಬಂದು ಕಾಮೆಂಟ್ ಬಾಕ್ಸ್ ಯಾಕೆ ಓಪನ್ ಇಟ್ಟಿಲ್ಲ ಎನ್ನುವ ಪ್ರಶ್ನೆಯನ್ನು‌ ಒಬ್ಬರು ಕೇಳಿದರು. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅಭಿಪ್ರಾಯ ಹೊಂದಿದ್ದಾರೆ.

7 ಒಕ

ನಿಜ ಏನೆಂದರೆ ನಾನು ಕಾಮೆಂಟ್ ಯಾರಿಗೂ ಕ್ಲೋಸ್ ಮಾಡಿಕೊಂಡಿಲ್ಲ. ಅದ್ಯಾಕೆ ಕೆಲವರಿಗೆ ಕಾಮೆಂಟ್ ಬಾಕ್ಸ್ ಓಪನ್ ಆಗಿರುವುದಿಲ್ಲ ಎನ್ನುವುದು ನನಗೆ ಗೊತ್ತಿಲ್ಲ. ನಾನು ವಿಶೇಷವಾಗಿ ಅಂತಹ ಸೆಟ್ಟಿಂಗ್‌ ಮಾಡಿಲ್ಲ. ಉಳಿದಂತೆ ಹೀಗೆ ನನ್ನನ್ನು ಕಾಮೆಂಟ್ ಬಾಕ್ಸ್ ಯಾಕೆ ಓಪನ್ ಇಟ್ಟಿಲ್ಲ ಎನ್ನುವವರಲ್ಲಿ ಬಹುತೇಕರ‌ ಪ್ರೊಫೈಲ್ ಲಾಕ್ ಆಗಿರುತ್ತದೆ.

ವಿಪರ್ಯಾಸ ನೋಡಿ, ತಮ್ಮ ಪ್ರೊಫೈಲ್ ಲಾಕ್ ಮಾಡಿಕೊಂಡು ಇತರರನ್ನು ನೀವ್ಯಾಕೆ ಕಾಮೆಂಟ್ ಬಾಕ್ಸ್ ಓಪನ್ ಇಟ್ಟಿಲ್ಲ ಎಂದು ಪ್ರಶ್ನಿಸುತ್ತಾರೆ.‌ ಇನ್ನು ಕೆಲವರದು ಸೆಲೆಕ್ಟಿವ್ ಮನಸ್ಥಿತಿ. ನೂರರಲ್ಲಿ 95 ಪ್ರತಿಶತಕ್ಕಿಂತ ಹೆಚ್ಚು ಧನಾತ್ಮಕ ವಿಚಾರಗಳನ್ನು, ಮಾಹಿತಿ ಇರುವ ವಿಚಾರಗಳನ್ನು ಮಾತ್ರ ಹಂಚಿಕೊಳ್ಳುವುದು ನನ್ನ ಅಭ್ಯಾಸ. ಅಂತಹ ಒಂದು ಪೋಸ್ಟಿಗೂ ಸ್ಪಂದಿಸಿದ ಜನ, ಅವರ ಮೂಗಿನ ನೇರಕ್ಕೆ ಅಥವಾ ಅವರ ನಂಬಿಕೆಗೆ ವಿರುದ್ಧವಾದ ಒಂದು ಪೋಸ್ಟಿಗೆ ವಿಷ ಕಾರಿಕೊಂಡು ಕಾಮೆಂಟ್ ಹಾಕುತ್ತಾರೆ.

ಮನುಷ್ಯನ ಮನಸ್ಸು ವಿಚಿತ್ರ ಎಂದದ್ದು ಈ ಕಾರಣಕ್ಕೆ! ಆತನ ಮನಸ್ಸು ತನಗೇನು ಇಷ್ಟ, ತಾನೇನು ಕೇಳಬೇಕು, ನೋಡಬೇಕು ಎಂದು ಬಯಸುತ್ತೆ ಅದನ್ನೇ ಹುಡುಕುತ್ತೆ. ತನ್ನ ನಿರೀಕ್ಷೆಗೆ ತಕ್ಕಂತಹ ಬರಹ, ವಿಚಾರ ಕಂಡ ತಕ್ಷಣ ಅದನ್ನು ಬರೆದವರನ್ನು ಇಷ್ಟಪಡುತ್ತಾರೆ. ಅದಕ್ಕೆ ವಿರುದ್ಧವಿದ್ದರೆ ಅವರನ್ನು ದ್ವೇಷಿಸಲು ಶುರು ಮಾಡುತ್ತಾರೆ. ಯಾವುದನ್ನು ಅವರು ಸಾರ್ವಜನಿಕವಾಗಿ ಒಪ್ಪುವು ದಿಲ್ಲ, ನೂರಾರು ಜನರ ಜೊತೆ ಸೇರಿ ಗುಂಪಿನಲ್ಲಿ ಗೋವಿಂದ ಎಂದಿರುತ್ತಾರೆ, ಅದನ್ನೇ ಮಾಡುತ್ತಿರು ತ್ತಾರೆ. ಸೋಶಿಯಲ್ ಮೀಡಿಯಾ ಇಮೇಜ್ ಬಿಡಲು ಅವರು ಸಿದ್ಧರಿರುವುದಿಲ್ಲ. ಎಲ್ಲಕ್ಕೂ ಪ್ರತಿಕ್ರಿಯೆ ನೀಡಬೇಕು ಎನ್ನುವ ದರ್ದು ಅದ್ಯಾಕೆ ಹುಟ್ಟಿತು? ಹೇಗೆ ಹುಟ್ಟಿತು? ಗೊತ್ತಿಲ್ಲ. ಆದರೆ ಒಮ್ಮೆ ಒಬ್ಬರು ಒಂದು ರೀತಿ ಕಾಮೆಂಟ್ ಮಾಡಿದರೆ ಸಾಕು. ಉಳಿದ ಕಾಮೆಂಟುಗಳು ಅದೇ ದಾರಿಯಲ್ಲಿ ಸಾಗುತ್ತವೆ.

ಕೆಲವೊಮ್ಮೆ ಬರವಣಿಗೆಯ ಮೂಲಾರ್ಥವನ್ನು ಅರಿತುಕೊಳ್ಳದೆ ಒಬ್ಬ ಬುದ್ಧಿವಂತ ತನಗೆ ತಿಳಿದಂತೆ ಇಂಟೆರ್ಪ್ರಿಟ್ ಮಾಡಿಕೊಂಡು ಕಾಮೆಂಟ್ ಹಾಕಿದರೆ ಅಲ್ಲಿಗೆ ಮುಗಿಯಿತು. ಮುಂದಕ್ಕೆ ಬರುವ ಕಾಮೆಂಟುಗಳು ಅದೇ ಧಾಟಿಯಲ್ಲಿರುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಅನಾಮಧೇಯ ಹೆಸರಿನವರದ್ದು ಇನ್ನೊಂದು ರೀತಿಯ ಕಾರ್ಯಾಚರಣೆ.

ಫೇಕ್ ಅಕೌಂಟ್ ಮಾಡಿಕೊಂಡು ನೇರವಾಗಿ ತಮ್ಮ ಹೆಸರಿನಲ್ಲಿ ಯಾರನ್ನು ಕೌಂಟರ್ ಮಾಡ ಲಾಗುವುದಿಲ್ಲ ಅವರ ತೇಜೋವಧೆಗೆ ಇಳಿಯುವುದು ಈ ಫೇಕ್ ಅಕೌಂಟಿಗರ ಕೆಲಸ. ಕೆಟ್ಟ ಕಾಮೆಂಟ್ ಮಾಡುವುದು, ಅಸಭ್ಯ ಪದಗಳನ್ನು ಬಳಸುವುದು ಮತ್ತು ಇದರಿಂದ ಅವರ ವ್ಯಕ್ತಿತ್ವಕ್ಕೆ ಘಾಸಿ ಮಾಡಿದೆ ಎನ್ನುವ ತೃಪ್ತಿ ಇವರದು. ಫೇಕ್ ಅಕೌಂಟ್ ಮಾಡಿಕೊಂಡು ಅದೆಷ್ಟೇ ಉನ್ನತ ವಿಚಾರಗಳನ್ನು ಬರೆಯಲಿ ಅವರು ಹೇಡಿಗಳು ಎಂದು ನನ್ನ ಭಾವನೆ.

ನಿಜವಾದ ಐಡೆಂಟಿಟಿ ಮುಚ್ಚಿಟ್ಟು ಅದ್ಯಾವ ಘನ ಕಾರ್ಯ ಸಾಧನೆಗೆ ಫೇಕ್ ಅಕೌಂಟ್ ಇಟ್ಟು ಕೊಂಡಿರುತ್ತಾರೆ? ಸಮಾಜವನ್ನು ನೇರವಾಗಿ ತನ್ನ ಹೆಸರಿನಲ್ಲಿ ಕೌಂಟರ್ ಮಾಡಲಾಗದವರು ಹೇಡಿಗಳಲ್ಲದೆ ಇನ್ನ್ಯಾರು ಆಗಲು ಸಾಧ್ಯ? ನಮ್ಮದು ಅತ್ಯಂತ ಶ್ರೇಷ್ಠ ಸಮಾಜ ಎನ್ನುವುದು ನನ್ನ ಭಾವನೆ. ಹಿಂದೂ ಸಮಾಜದಲ್ಲಿ ಮಾತ್ರ ಇಂತಹ ಶ್ರೇಷ್ಠತೆಯನ್ನು ಕಾಣಲು ಸಾಧ್ಯ.

ನನ್ನ ಅಜ್ಜಿ ಹಾಡುತ್ತಿದ್ದ ಹಾಡನ್ನು ಅಮ್ಮ ಕೂಡ ಹಾಡುತ್ತಾಳೆ. ಅದನ್ನು ನಾನು ಕೇಳಿಸಿಕೊಂಡು ಇಲ್ಲಿ ಅದರ ನಾಲ್ಕೈದು ಸಾಲುಗಳನ್ನು ಬರೆಯುತ್ತಿದ್ದೇನೆ. ಇದರ ಸಾಹಿತ್ಯವನ್ನು ಹುಡುಕಿದೆ. ಸಿಗಲಿಲ್ಲ. ಅಮ್ಮ ಇದನ್ನು ಜಾನಪದ ಗೀತೆ ಎಂದಳು. ಈ ಹಾಡು ಹೀಗಿದೆ. ಕೃಷ್ಣ ಕೃಷ್ಣ ಎನ್ನಲು ಕೃಷ್ಣನೇನು ಶ್ರೇಷ್ಠ? ಹದಿನಾರು ಸಾವಿರ ಗೋಪಿಯರ ಜೊತೆಗೆ ಸರಸವಾಡಿದ್ದ! ರಾಮ ರಾಮ ರಾಮನೆನಲು ರಾಮನೇನು ಶ್ರೇಷ್ಠ? ಅಗಸನ ಮಾತನು ಕೇಳಿ ಸೀತೆಯ ಅಗ್ನಿ ಪರೀಕ್ಷೆಗೆ ಒಡ್ಡಿದ್ದ !

ಬುದ್ಧ ಬುದ್ಧ ಬುದ್ಧನೆನಲು ಬುದ್ಧನೇನು ಶುದ್ಧ? ಹೆಂಡತಿ ಮಕ್ಕಳು ಮಲಗಿದ್ದಾಗ ಕಾಡಿಗೆ ಎದ್ದಿದ್ದ! ಹೀಗೆ ಹಾಡು ಸಾಗುತ್ತದೆ. ಇದರರ್ಥ ನಮ್ಮ ಹಿಂದೂ ಸಮಾಜದಲ್ಲಿ ಎಲ್ಲರನ್ನೂ ಪ್ರಶ್ನಿಸಬಹುದು. ಇಲ್ಲಿ ಯಾರೂ ಪ್ರಶ್ನಾತೀತರಲ್ಲ. ನಾವು ದೇವರು ಎಂದು ಆರಾಧಿಸುವ ಬುದ್ಧ, ಕೃಷ್ಣ ಮತ್ತು ರಾಮನನ್ನು ಕೂಡ ನಾವು ಬಿಟ್ಟಿಲ್ಲ! ಪ್ರಶ್ನಿಸಿದ್ದೇವೆ.

ಅವರೇನು ಶುದ್ಧ, ಅವರೇನು ಶ್ರೇಷ್ಠ ಎಂದಿದ್ದೇವೆ. ಈ ರೀತಿಯ ಪ್ರಶ್ನಿಸುವ ಸಮಾಜವನ್ನು ನಾನಂತೂ ಕಂಡಿಲ್ಲ. ಇದು ನಮ್ಮ ಸಮಾಜದ ಬುದ್ಧಿಮಟ್ಟವನ್ನು ತೋರಿಸುತ್ತದೆ. ಇದು ನಿಜಕ್ಕೂ ಒಳ್ಳೆಯ ವಿಚಾರ. ವ್ಯಕ್ತಿ ಯಾವುದೇ ಹುದ್ದೆಯಲ್ಲಿದ್ದರೂ, ಅದೆಷ್ಟೇ ಎತ್ತರವನ್ನು ಏರಿದ್ದರೂ ಅವರನ್ನೂ ನಮ್ಮ ಸಮಾಜ ಪ್ರಶ್ನಿಸುತ್ತದೆ ಎನ್ನುವುದು ಹೆಮ್ಮೆಯ ವಿಚಾರ. ಆದರೆ ಅದು ಎಂದಿಗೂ ವಿರೋಧಿಸಬೇಕು ಎನ್ನುವ ಕಾರಣಕ್ಕೆ ವಿರೋಧಿಸುವ ಮಟ್ಟಕ್ಕೆ ಹೋಗಬಾರದು.

ಇವತ್ತಿನ ಸೋಶಿಯಲ್ ಮೀಡಿಯಾದಲ್ಲಿ ಮನಸ್ಸಿಗೆ ಬಂದಂತೆ ಕಾಮೆಂಟ್ ಮಾಡುವ, ತಪ್ಪು ಮಾಹಿತಿ ಹರಡುವ, ವ್ಯಕ್ತಿಯ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪೋಸ್ಟ್ ಹಾಕುವವರ ಗಮನಕ್ಕೆ ಒಂದಷ್ಟು ಮಾಹಿತಿ ಹಂಚಿಕೊಳ್ಳುತ್ತಿದ್ದೇನೆ. ಐಟಿ ಆಕ್ಟ್ 2000ರ ಪ್ರಕಾರ‌ ಅನುಚಿತ ಚಿತ್ರಗಳನ್ನು ಹಂಚಿಕೊಳ್ಳುವುದು,‌ ಬೇರೊಬ್ಬರ ಐಡೆಂಟಿಟಿ ಬಳಸಿಕೊಂಡು ಅವರಂತೆ ಖಾತೆ ತೆಗೆಯುವುದು, ಖಾಸಗಿತನಕ್ಕೆ ಧಕ್ಕೆ ತರುವುದು ಅಪರಾಧ ಎಂದು ಪರಿಗಣಿಸಲಾಗಿದೆ.

ಭಾರತೀಯ ನ್ಯಾಯ ಸಂಹಿತೆ ಪ್ರಕಾರ ಮಹಿಳೆಯರನ್ನು ನಿಂದಿಸುವುದು, ಸೈಬರ್ ಸ್ಟಾಕಿಂಗ್, ತಪ್ಪು ಮಾಹಿತಿ ಹರಡುವುದು ಅಪರಾಧ. ಐಟಿ ಆಕ್ಟ್, ಸೆಕ್ಷನ್ 69ಎ ಪ್ರಕಾರ ಸರಕಾರ ಪೋ ಡಿಲೀಟ್ ಮಾಡುವ ಅಥವಾ‌ ಪೂರ್ತಿ ಸೋಶಿಯಲ್ ಮೀಡಿಯಾ ಅಕೌಂಟ್ ಮುಚ್ಚುವ ಹಕ್ಕನ್ನು ಹೊಂದಿವೆ. ಸಮಾಜದ ಹಿತದ ದೃಷ್ಟಿಯಿಂದ ಹೀಗೆ ಮಾಡುವ ಅಧಿಕಾರವನ್ನು ಅವು ಹೊಂದಿವೆ.

ಭಾರತದ ಸಂವಿಧಾನದ ಸೆಕ್ಷನ್ 19(1)(ಎ) ಪ್ರಕಾರ ಪ್ರತಿಯೊಬ್ಬ ಪ್ರಜೆಗೂ ಮಾತಾಡುವ ಹಕ್ಕನ್ನು ನೀಡಿದೆ. ಫ್ರೀಡಂ ಆಕ್ಟ್ ಸ್ಪೀಚ್ ಎಲ್ಲರಿಗೂ ಸಂವಿಧಾನ ನೀಡಿದೆ.‌ ಆದರೆ ಭಾರತದ ಸುಪ್ರೀಂ ಕೋರ್ಟ್ ಸೈಬರ್ ಕಿರಿಕಿರಿ (ಹರಾಸ್ಮೆಂಟ್), ಧಮಕಿ ಹಾಕುವುದು, ಮಾನನಷ್ಟ ಮಾಡಲು ಪ್ರಯತ್ನಿಸುವುದು ಇತ್ಯಾದಿಗಳನ್ನು ಅಪರಾಧ ಎಂದು ಹೇಳಿದೆ. ಫ್ರೀಡಂ ಆಫ್ ಸ್ಪೀಚ್ ಎಂದರೆ ಬಾಯಿಗೆ ಬಂದದ್ದೆ ಮಾತಾಡುವುದು‌ ಎಂದಲ್ಲ.

ಫೇಕ್ ಅಕೌಂಟ್ ಮಾಡಿಕೊಂಡ ತಕ್ಷಣಕ್ಕೆ ಸುರಕ್ಷಿತವೇನಲ್ಲ. ಇವತ್ತಿನ ತಂತ್ರಜ್ಞಾನದ ಮೂಲಕ ಕ್ಷಣದಲ್ಲಿ ನಿಜವಾದ ಐಡೆಂಟಿಟಿ ಪತ್ತೆ ಹೆಚ್ಚಬಹುದು. ನಾವ್ಯಾರೂ ಒಬ್ಬರಂತೆ ಒಬ್ಬರಿಲ್ಲ. ಎಲ್ಲರೂ ಒಂದೇ ರೀತಿ ಯೋಚಿಸಬೇಕು ಎನ್ನುವ ಕಾನೂನು ಕೂಡ ಇಲ್ಲ. ಎಲ್ಲರೂ ಅವರವರ ಅಭಿಪ್ರಾಯ ಹೊಂದಲು ಸ್ವಂತಂತ್ರರು. ನಮ್ಮಂತೆ ಅವರು ಯೋಚಿಸುತ್ತಿಲ್ಲ ಎಂದ ತಕ್ಷಣ ಮುಗಿಬೀಳುವುದು, ಗುಂಪು ಕಟ್ಟಿಕೊಂಡು ತೇಜೋವಧೆಗೆ ಇಳಿಯುವುದು ತಪ್ಪು. ನನಗೆ ಸರಿ ಅನ್ನಿಸಿದ್ದು ನಿಮಗೆ ತಪ್ಪು ಅನ್ನಿಸಬಹುದು. ಅದು ಸಹಜ.

ನಮ್ಮೆ ಭಿನ್ನತೆಗಳ ನಡುವೆ ನಾವು ಪರಸ್ಪರ ಪ್ರೀತಿ, ಗೌರವ ನೀಡುವುದನ್ನು ಎಂದಿಗೂ ಮರೆಯ ಬಾರದು. ನಮ್ಮಲ್ಲಿ ಸೈಬರ್ ಕಾನೂನು ಇನ್ನೂ ಭದ್ರವಾಗಿಲ್ಲ. ಹಲವಾರು ಬಿಡಿ ಬಿಡಿ ಸೆಕ್ಷನ್‌ಗಳು ಇದ್ದರೂ ಸೋಶಿಯಲ್ ಮೀಡಿಯಾ ಕೆಟ್ಟ ಬಳಕೆಗೆ ಕಾರ್ಯರೂಪದಲ್ಲಿ ಬರುವ ಕಾನೂನು ಬೇಕಿದೆ. ಸಮಾಜವಾಗಿ ನಾವು ಒಂದು ಚೌಕಟ್ಟು ಸೃಷ್ಟಿ ಮಾಡದೆ ಹೋದರೆ ಮುಂದಿನ ದಿನಗಳಲ್ಲಿ ಬೃಹತ್ ಸಮಸ್ಯೆಯಾಗಿ ಪರಿವರ್ತನೆಯಾಗುತ್ತದೆ.

ಇಷ್ಟೇ ಬರೆದದ್ದು ಕಾಮೆಂಟ್ ಮಾಡಬಾರದು, ವಿರೋಧಿಸಬಾರದು ಎನ್ನುವ ಕಾರಣಕ್ಕಲ್ಲ. ಕಾಮೆಂಟ್ ಮಾಡುವ ಮುನ್ನ, ವಿರೋಧಿಸುವ ಮುನ್ನ ವಿವೇಚನೆ ಮತ್ತು ವಿಶ್ಲೇಷಣೆ ನಮ್ಮದಾಗಿರಲಿ ಎನ್ನುವುದನ್ನು ಹೇಳುವುದಕ್ಕೆ ಇಷ್ಟು ಬರೆಯಬೇಕಾಯ್ತು. ಸಾಧ್ಯವಾದಷ್ಟೂ ನಮ್ಮ ಅಭಿಪ್ರಾಯ ವನ್ನು ಸರಿಯಾದ ರೀತಿಯಲ್ಲಿ ಹೇಳೋಣ. ಅಭಿಪ್ರಾಯ ಬೇಧ ಸಹಜ. ಅದು ವೈಯಕ್ತಿಕ ಕಿತ್ತಾಟಕ್ಕೆ ಕಾಣರವಾಗಬಾರದು. ಅಭಿಪ್ರಾಯ ಭೇದವನ್ನು ಗೌರವಿಸುವ ಗುಣವನ್ನು ನಾವು ಸಮಾಜವಾಗಿ ಕಲಿಯುವುದು ಬಾಕಿಯಿದೆ.