ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shishir Hegde Column: ವರ್ಷ ಆರು, ವಾರ ಮುನ್ನೂರು: ಇದು ಶಿಶಿರಕಾಲದ ಸ್ವಗತ

ನಾವೇಕೆ ಸಂಖ್ಯೆಯನ್ನು ಸಂಭ್ರಮಿಸಬೇಕು? ಅಳತೆಗೆ? ಲೆಕ್ಕಕ್ಕೆ? ಹೋಲಿಕೆಗೆ? ಸ್ವಸ್ತುತಿಗೆ? ಪ್ರಯಾಣ ಚಾಲ್ತಿಯಲ್ಲಿರುವಾಗಲೇ ‘ರೌಂಡ್ ಫಿಗರ್’ ನಮಗೊಂದು ಏನೋ ಮುಗಿಸಿದ ಭಾವ ಕೊಡುತ್ತದೆಯಲ್ಲ! ಆ ಕಾರಣಕ್ಕೆ? ಬ್ಯಾಟ್ಸ್‌ಮನ್ ಶತಕ ಬಾರಿಸಿದಾಗ, ವ್ಯಕ್ತಿಯ ಸಹಸ್ರಚಂದ್ರ ದರ್ಶನ, ದಶಮಾನೋತ್ಸವ, ಸಿಲ್ವರ್, ಗೋಲ್ಡನ್ ಇತ್ಯಾದಿ ಜುಬಿಲಿಗಳ ಸಂಭ್ರಮಗಳ ಅವಶ್ಯ ಕತೆ, ಅಸಲಿ ಪ್ರಸ್ತುತತೆ ಏನು? ಸರಿ- ಈಗ ಅಂಕಣ ಮುನ್ನೂರು ವಾರ ಆಗಿದೆ.

ವರ್ಷ ಆರು, ವಾರ ಮುನ್ನೂರು: ಇದು ಶಿಶಿರಕಾಲದ ಸ್ವಗತ

-

ಶಿಶಿರಕಾಲ

ಇದು ಶಿಶಿರಕಾಲದ ಮುನ್ನೂರನೇ ಲೇಖನ.

ಸರಿ. ಈಗ ಇದನ್ನು ಸಂಭ್ರಮಿಸಬೇಕೆ? ಓದುಗರಿಗೆ ಹೇಳಬೇಕೆ? ಅಥವಾ ನೂರು, ಇನ್ನೂರು ಆದಂತೆ ಸುಮ್ಮನಿರಬೇಕೆ? ಅಷ್ಟಕ್ಕೂ ಇಂತಿಷ್ಟು ವಾರ, ತಿಂಗಳು, ಒಪ್ಪತ್ತು, ವರ್ಷ, ಇಂತಿಷ್ಟು ಪುಟ, ಗಂಟೆ ಎಂದೆಲ್ಲ ಯಾವ ಕಾರಣಕ್ಕೆ ಲೆಕ್ಕವಿಡಬೇಕು? ಈ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಲೇ ಇಂದಿನ ಈ ಲೇಖನವನ್ನು ಬರೆಯಲು ಕೂತಿದ್ದೇನೆ.

ಇಷ್ಟು ಹೆಜ್ಜೆ ನಡೆದೆ, ಇಷ್ಟು ಮಾರ್ಕ್ಸ್ ತಗೊಂಡೆ, ಶುಗರ್-ಬಿಪಿ ಇಷ್ಟು, ಇಷ್ಟು ವರ್ಷ ದುಡಿದೆ, ಇಷ್ಟು ತೂಕ ಇಳಿಸಿದೆ, ಮದುವೆಯಾಗಿ ಇಷ್ಟು ವರ್ಷವಾಯಿತು, ಇಷ್ಟನೇ ಹುಟ್ಟುಹಬ್ಬ- ಹೀಗೆ ನಾವು ಎಲ್ಲವನ್ನೂ ಲೆಕ್ಕವಿಟ್ಟು ಏನೋ ಒಂದು ಗಡಿಯನ್ನು ದಾಟು ವತ್ತ ಹೊರಟಿರುತ್ತೇವಲ್ಲ! ‌

ನಾವೇಕೆ ಸಂಖ್ಯೆಯನ್ನು ಸಂಭ್ರಮಿಸಬೇಕು? ಅಳತೆಗೆ? ಲೆಕ್ಕಕ್ಕೆ? ಹೋಲಿಕೆಗೆ? ಸ್ವಸ್ತುತಿಗೆ? ಪ್ರಯಾಣ ಚಾಲ್ತಿಯಲ್ಲಿರುವಾಗಲೇ ‘ರೌಂಡ್ ಫಿಗರ್’ ನಮಗೊಂದು ಏನೋ ಮುಗಿಸಿದ ಭಾವ ಕೊಡುತ್ತದೆಯಲ್ಲ! ಆ ಕಾರಣಕ್ಕೆ? ಬ್ಯಾಟ್ಸ್‌ಮನ್ ಶತಕ ಬಾರಿಸಿದಾಗ, ವ್ಯಕ್ತಿಯ ಸಹಸ್ರಚಂದ್ರ ದರ್ಶನ, ದಶಮಾನೋತ್ಸವ, ಸಿಲ್ವರ್, ಗೋಲ್ಡನ್ ಇತ್ಯಾದಿ ಜುಬಿಲಿಗಳ ಸಂಭ್ರಮಗಳ ಅವಶ್ಯಕತೆ, ಅಸಲಿ ಪ್ರಸ್ತುತತೆ ಏನು? ಸರಿ- ಈಗ ಅಂಕಣ ಮುನ್ನೂರು ವಾರ ಆಗಿದೆ. ಆದರೆ ಆಚರಿಸುವುದು ಏನನ್ನು? ಇಷ್ಟು ಕಾಲ ಬರೆದೆ ಎಂಬ ವಾರದ ಸಂಖ್ಯೆ ಯನ್ನೇ? ಬರವಣಿಗೆಗೆ ವ್ಯಯಿಸಿದ ಸಮಯವನ್ನೇ? ಶ್ರಮವನ್ನೇ? ಈಗ ಮೂರು ವಾರದ ಹಿಂದೆ ಶಿಶಿರಕಾಲ ಅಂಕಣದ ಬಹುಕಾಲದ ಓದುಗ ಮಿತ್ರರೊಬ್ಬರು “ನಿಮ್ಮ ಅಂಕಣ ಬಹುಶಃ ಮುನ್ನೂರು ದಾಟಿರಬಹುದು; ಎಷ್ಟು, ಆರು ವರ್ಷವಾಯ್ತಾ?" ಎಂದು ಇಮೇಲ್ ಮಾಡಿದ್ದರು.

ಇದನ್ನೂ ಓದಿ: Shishir Hegde Column: ನಾಯಕನನ್ನು ಕೊಲ್ಲುವ ಮೂಲಕ ಈ ಯುದ್ಧ ಶುರುವಾಯಿತಲ್ಲ !

ಇವತ್ತು ಬೆಳಗ್ಗೆ ಅದೇಕೋ ನೆನಪಾಗಿ ನಾನು ಬರೆದು ಫೈಲ್ ಮಾಡಿಟ್ಟ ಲ್ಯಾಪ್‌ಟಾಪ್ ಫಾಲ್ಡರ್‌ನಲ್ಲಿ ಎಷ್ಟು ಫೈಲ್ ಇದೆ ಎಂದು ನೋಡಿದರೆ, ಅಲ್ಲಿದ್ದದ್ದು 299 ಫೈಲ್ಸ್. ಇವತ್ತಿನದು ಮುನ್ನೂರನೆಯದು ಎಂದು ಗೊತ್ತದಾಗಿನಿಂದ ಮೇಲಿನ ಪ್ರಶ್ನೆಗಳು. ಪ್ರಾಮಾ‌ ಣಿಕವಾಗಿ ಹೇಳಬೇಕೆಂದರೆ ಇದೇನೂ ಅಸಾಮಾನ್ಯ ಸಾಧನೆಯೇನಲ್ಲ.

ವಿಶ್ವೇಶ್ವರ ಭಟ್ಟರು, ಶ್ರೀವತ್ಸ ಜೋಶಿಯವರು ದಶಕಗಳಿಂದ ಬರೆಯುತ್ತಿದ್ದಾರೆ. ನಾನು ಬರೆದದ್ದಕ್ಕಿಂತ ಅವರು ಬರೆದದ್ದನ್ನು ನಾನು ಓದಿದ್ದೇ ಜಾಸ್ತಿ ಲೆಕ್ಕವಾಗಬಹುದು. ಇನ್ನು ಈ ಅಂಕಣ ಬರಹದಲ್ಲಿ ವಾರ ವಾರ ನಾನೇನೂ ಹೊಸತನ್ನು ಕಂಡುಹಿಡಿಯುವುದಿಲ್ಲ.

ನದಿಯ ದಿಕ್ಕನ್ನು ಬದಲಿಸುವುದಿಲ್ಲ. ನಾನು ಮಾಡಿದ್ದು ಏನು? ಪ್ರತಿ ವಾರ ಬರೆಯಲು ಕುಳಿತುಕೊಂಡದ್ದು, ಕೆಲಹೊತ್ತು ಯೋಚಿಸಿದ್ದು, ಅದಕ್ಕೆ ಬೇಕಾದದ್ದನ್ನು ಓದಿದ್ದು, ನನ್ನ ತಿಳಿವಳಿಕೆಗೆ ಸಿಕ್ಕಿದಷ್ಟನ್ನು ಪ್ರಾಮಾಣಿಕವಾಗಿ ಅಕ್ಷರ ರೂಪ ಕೊಟ್ಟು ನಿಮ್ಮ ಮುಂದೆ ಇಟ್ಟದ್ದು.

ಯಾವುದೇ ಮೈಲಿಗಲ್ಲು ಪಟಾಕಿ ಹೊಡೆದು, ಗೌಜಿ ಮಾಡಿ ಸಂಭ್ರಮಿಸುವುದಕ್ಕೆ ಮಾತ್ರ ಇರುವುದಲ್ಲ ಎನ್ನುವುದು ನನ್ನ ಗಟ್ಟಿ ನಂಬಿಕೆ. ಬದಲಿಗೆ ಮೈಲಿಗಲ್ಲುಗಳು ಇರುವುದು ಒಂದು ಕ್ಷಣ ನಿಂತು ಶಾಂತವಾಗಲಿಕ್ಕೆ, ಸುಮ್ಮನೆ ಮೌನವಾಗಲಿಕ್ಕೆ. ಸೊಂಟದ ಮೇಲೆ ಕೈ ಇಟ್ಟು, ಒಮ್ಮೆ ದೀರ್ಘ ಉಸಿರೆಳೆದು, ‘ಓಹ್ ಅಲ್ಲಿಂದ ಬಂದೆ, ಹೀಗೆ ಬಂದೆ’ ಎಂದು ಹಿಂದಿರುಗಿ ನೋಡಲಿಕ್ಕೆ.

‘ಹಾ, ಏನೋ ಒಂದನ್ನು ಸಾಧಿಸಿಬಿಟ್ಟೆನಲ್ಲ’ ಎಂಬ ಸೊಕ್ಕಿನಿಂದಲ್ಲ. ಬದಲಿಗೆ ಒಂದಿಷ್ಟು ಕುತೂಹಲದಿಂದ. ಇಷ್ಟು ಕಾಲ ಏನು ಸಾಧ್ಯವಾಯಿತು? ಏನು ಬದಲಾಯಿತು? ಏನು ಉಳಿಯಿತು? ಏನು ಹೋಯ್ತು? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿಕೊಳ್ಳಲಿಕ್ಕೆ. ಅದೆಲ್ಲದ ಕ್ಕಿಂತ ಮುಖ್ಯವಾಗಿ ಪ್ರಯಾಣದಲ್ಲಿ ಜತೆಯಾದವರಿಗೆ ಧನ್ಯವಾದ ಹೇಳಲಿಕ್ಕೆ.

300

ದಾರಿಯ ನಿಯತ್ತನ್ನು ಪ್ರಶ್ನಿಸಿಕೊಳ್ಳಲಿಕ್ಕೆ. ಅದಿಲ್ಲದಿದ್ದರೆ ಯಾವುದೇ ಮೈಲಿಗಲ್ಲು, ಯಾವುದೇ ಸಾಧನೆ, ಇಲ್ಲಿ ನಾನು ಇಂತಿಷ್ಟು ವಾರ ಬರೆದೆ ಎನ್ನುವುದೆಲ್ಲ- ಕೇವಲ accumulation, ಸಂಗ್ರಹಣೆಯಾಗಿ- ಸಂಖ್ಯೆಯಾಗಿ ನಮ್ಮ ಅಹಮ್ಮಿಗೊಂದು ಗೊಬ್ಬರ ವಾಗುತ್ತದೆ, ಉಳಿದುಹೋಗುತ್ತದೆ.

ನನಗೆ ಈ ಮುನ್ನೂರು ಮೈಲಿಗಲ್ಲು ಎಂದು ಅನಿಸುತ್ತಿಲ್ಲ. ಬದಲಿಗೆ ಇದು ಇಷ್ಟು ಕಾಲ ಸದ್ದಿಲ್ಲದೆ ಬೆಳೆದ ದೀರ್ಘ ಸಂಬಂಧವೆಂಬಂತೆ ಕಾಣಿಸುತ್ತದೆ. ನನ್ನ ಮತ್ತು ಪೇಪರ್, ಅಕ್ಷರ ಶಬ್ದಗಳ ಸಂಬಂಧವಲ್ಲ. ನನ್ನ ಮತ್ತು ಓದುಗರಾದ ನಿಮ್ಮ ದೀರ್ಘಕಾಲದ ಸಂಬಂಧ. ಪ್ರತಿ ವಾರ ನಿಮ್ಮ ಬದುಕು, ಜಂಜಾಟ, ಸಂಭ್ರಮ, ಹೋರಾಟಗಳ ನಡುವೆ ನೀವೀಗ ಈ ಲೇಖನ ಓದುತ್ತಿರುವ ಜಾಗಕ್ಕೆ ನೀವು ಕೂಡ ತಪ್ಪಿಸದೇ ಬರುತ್ತೀರಲ್ಲ.

ನೀವಿಲ್ಲಿ ಟೈಮ್‌ಪಾಸ್‌ಗೆ ಬರುವವರಲ್ಲ. ಪ್ರತಿ ವಾರ ಬಂದವರು ಕೆಲ ಹೊತ್ತು ನನ್ನೊಡನೆ ಕೂತು ಸಂವಹಿಸಿದ್ದೀರಿ, ಚರ್ಚಿಸಿದ್ದೀರಿ, ಪ್ರಶ್ನಿಸಿದ್ದೀರಿ, ಪ್ರತಿಕ್ರಿಯಿಸಿದ್ದೀರಿ. ಆದರೆ ನಾವಿಲ್ಲಿ ವಾಗ್ವಾದ ಮಾಡಿದ್ದು ಅತ್ಯಂತ ಕಡಿಮೆ. ನೀವು ಕೋಪ ಮಾಡಿಕೊಂಡು ಎದ್ದು ಹೋದದ್ದು ಇಲ್ಲವೇ ಇಲ್ಲ. ನಾನು ಹೇಳುತ್ತಿರುವುದು ವಾರದಿಂದ ವಾರಕ್ಕೆ ಬೆಳೆದ ಆ ಸಂಬಂಧದ ಬಗ್ಗೆ. ಬರಹಗಾರ ಮತ್ತು ಓದುಗರ ನಡುವಿನ mutual feeling ಬಗ್ಗೆ. ನಿಜ, ನನಗೆಂದೂ ಇದು ಏಕಮುಖ ಅಭಿವ್ಯಕ್ತಿ, ಸಂಭಾಷಣೆ ಎಂದೆನಿಸಲೇ ಇಲ್ಲವಲ್ಲ!

ಶಿಶಿರಕಾಲ ಅಂಕಣ ಶುರುಮಾಡಿದ ಹೊಸತರಲ್ಲಿ ನನ್ನ ವಿಚಾರಗಳನ್ನು ಹೊರ ಹಾಕಲು ಇದೊಂದು ವೇದಿಕೆ ಎಂದಷ್ಟೇ ನಾನು ಅಂದುಕೊಂಡಿದ್ದೆ. ಆದರೆ ಈ ರೀತಿಯ ಅಗೋಚರ ಸಂಭಾಷಣೆಯಲ್ಲಿ ತೊಡಗುತ್ತಿದ್ದೇನೆ ಎನ್ನುವ ಅಂದಾಜಾಗಲು ಸ್ವಲ್ಪ ಸಮಯ ಬೇಕಾ ಯ್ತು. ಬರವಣಿಗೆ ಏಕವ್ಯಕ್ತಿ ಕ್ರಿಯೆ, ಆದರೆ ಇಲ್ಲಿ ಮಾತ್ರ ಅದೆಂದೂ ಏಕಾಂತ ವೆನಿಸಲಿಲ್ಲ.

ನಾನು ಈಗ ಬರೆಯುತ್ತಿರುವ ಅಕ್ಷರ, ಶಬ್ದ ಯಾರೋ, ಎಲ್ಲೋ, ನಾಳೆ, ನಾಡಿದ್ದು, ಯಾವತ್ತೋ ಓದುತ್ತಾರೆ. ಈ ವಿಷಯ ಅತ್ಯಂತ ಸರಳ ಎನಿಸಬಹುದು, ಆದರೆ ಇದೆಲ್ಲದರ ಇಂಪ್ಯಾಕ್ಟ್ ನನಗೆ ಅರ್ಥವಾಗಿದ್ದು ಹಲವು ರೀತಿಗಳಲ್ಲಿ. ಅದೊಂದು ದಿನ ಮಧ್ಯರಾತ್ರಿ. ನನ್ನ ವಾಟ್ಸಾಪ್‌ಗೆ ಯಾವುದೋ unknown number ಇಂದ ಎರಡು ಬಾರಿ ಕರೆಬಂತು. ‌

ನಾನು ಸೈಲೆಂಟ್ ಮಾಡಿ ಮಲಗಿದರೆ ಇನ್ನೊಮ್ಮೆ ‘ಗುರ್ ಗುರ್’ ಎಂದು ‘ವೈಬ್ರೇಟ್ ರಿಂಗ್’ ಆಯಿತು. ಭಾರತದ ಫೋನ್ ನಂಬರ್. ಏನೋ ಅರ್ಜೆಂಟ್ ವಿಷಯವಿರಬೇಕು ಎಂದು ಎತ್ತಿದರೆ ಅತ್ತಕಡೆಯಿಂದ 87 ವರ್ಷದ ವಯೋವೃದ್ಧ ಓದುಗರೊಬ್ಬರ ಗಂಭೀರ ಧ್ವನಿ.

“ಹಲೋ ಶಿಶಿರ್, ಗುಡ್ ಆ-ರ್‌ನೂನ್" ಅಂದರು. ಅವರಿಗೆ ಮಧ್ಯಾಹ್ನ ಆದರೆ ನನಗೆ ಅಮೆರಿಕದಲ್ಲಿ ಬೆಳಗಿನ ಜಾವ ಎರಡು ಗಂಟೆ. ಅವರ ಸ್ವರ ಕೇಳಿ ಏಕೋ ಸಮಾಧಾನ ಕಳೆದುಕೊಳ್ಳಬಾರದೆನಿಸಿತು. “ಶಿಶಿರ್, ನಾನು ನಿಮ್ಮ ಲೇಖನಕ್ಕೆ ಪ್ರತಿ ವಾರ ಕಾಯುತ್ತೇನೆ. ಗುರುವಾರ ಬೆಳಗ್ಗೆಯಿಂದಲೇ ನಾಳೆ ಶುಕ್ರವಾರ ಎಂದು ನೆನಪಾಗುತ್ತದೆ. ನಿಮ್ಮ ಅಂಕಣ ನನ್ನ ಬದುಕಿನ, ರುಟೀನ್‌ನ ಭಾಗವಾಗಿದೆ. ಒಂದೆರಡು ಲೇಖನಗಳು ನಾನು ಬದುಕನ್ನು ನೋಡುವ ರೀತಿಯನ್ನೇ ಬದಲಿಸಿವೆ. ಧನ್ಯವಾದ" ಎಂದು ಹೇಳಿ ಅವರು ಫೋನಿಟ್ಟರು.

ಅವರು ಆ ದಿನ ವಿಶ್ವವಾಣಿ ಕಚೇರಿಗೆ ಫೋನ್ ಮಾಡಿ, ಅಲ್ಲಿ ನನ್ನ ಫೋನ್ ಸಂಖ್ಯೆ ಪಡೆದು ನನಗೆ ಫೋನ್ ಮಾಡಿದ್ದು ಮೂರ್ನಾಲ್ಕು ವಾಕ್ಯದ ಕೃತಜ್ಞತೆ ಹೇಳಲು. ನನಗೆ ಆ ಸರಿರಾತ್ರಿ ಯ ಫೋನ್ ಕರೆ ಮುಗಿಸುವಾಗ ನಿದ್ರೆ ಸಂಪೂರ್ಣ ಹಾರಿ ಹೋಗಿತ್ತು.

ಯಾಕೋ ಚಾವಡಿಯ ಸೋಫಾ ಮೇಲೆ ಕೆಲವು ನಿಮಿಷ ಮೌನವಾಗಿ ಕೂರಬೇಕೆನ್ನಿಸಿತು. ಈ ನಡುವೆ ನನ್ನ ಹೆಂಡತಿ- ಈ ಮಧ್ಯರಾತ್ರಿಯ ಫೋನ್ ಕರೆ ಮತ್ತು ನಾನು ಸೀಲಿಂಗ್ ನೋಡುತ್ತಾ ಕೂತ ಸನ್ನಿವೇಶದಲ್ಲಿಯೇ ನನ್ನನ್ನು ಕಂಡು- “ಯಾರಾದರೂ ಹೋಗಿ ಬಿಟ್ಟರಾ?" ಎಂದು ಕೇಳಿ, ಇಲ್ಲವೆಂದು ಕನ್ಫರ್ಮ್ ಮಾಡಿಕೊಂಡು ಹೋಗಿ ನಿದ್ರೆ ಮುಂದು ವರಿಸಿದಳು.

ನನಗೆ ನಿದ್ರೆ ಬರಲಿಲ್ಲ. ಆ ದಿನ ನನ್ನ ಲೇಖನ ನಾನಂದುಕೊಂಡದ್ದಕ್ಕಿಂತ ದೂರ ಪ್ರಯಾ ಣಿಸುತ್ತಿದೆ ಎಂದೆನಿಸಿತು. ಅಂಕಿ, ಸಂಖ್ಯೆ, ಭೌಗೋಳಿಕವಾಗಿ, ಅಲ್ಲ. ಬದಲಿಗೆ ಭಾವನಾತ್ಮಕ ವಾಗಿ. ಬರೆದ ಲೇಖನಗಳು ಪರಿಚಯವೇ ಇಲ್ಲದ ಇನ್ನೊಬ್ಬರ ಬದುಕಿನ ಭಾಗವಾಗುವುದು ಎಂದರೆ? ಬರವಣಿಗೆ ಎಂದರೆ ಮಾಹಿತಿಯನ್ನು ಬರೆದು ಹಂಚುವುದಲ್ಲ, ಬದಲಿಗೆ ಇದೊಂದು ಸಂಬಂಧ ಎನ್ನುವುದು ಖಚಿತವಾಗಿದ್ದು ಆ ದಿನ.

ಅಂದಹಾಗೆ ಅಜ್ಜನಿಗೀಗ 93 ವರ್ಷ. ಅವರಿಗೆ ಈಗ ಮೊಮ್ಮಗ ಅಂಕಣವನ್ನು ಓದಿ ಹೇಳುತ್ತಾನಂತೆ. ಕೆಲ ದಿನದ ಹಿಂದೆ ವಾಟ್ಸಾಪ್ ಧ್ವನಿ ಸಂದೇಶ ಕಳುಹಿಸಿದ್ದರು. ರೆಕಾರ್ಡಿಂಗ್ ನಡುನಡುವೆ ಅವರ ಮಾತನ್ನು ಅವರ ಮೊಮ್ಮಗ ನನಗೆ ಸ್ಪಷ್ಟಪಡಿಸಿ ಹೇಳುತ್ತಿದ್ದ- “ಅವರಿಗೆ ಈಗೀಗ ಮಷಿನ್ ಹಾಕಿದರೂ ಕಿವಿ ಕೇಳುವುದಿಲ್ಲ, ಕೂಗಬೇಕು" ಅಂತ.

ನಾನು ಹೇಳಿದ್ದನ್ನು ದೊಡ್ಡ ಧ್ವನಿಯಲ್ಲಿ ಹೇಳುತ್ತಿದ್ದ. ಅವರ ಮೊಮ್ಮಗ ಹೇಳಿದ ‘ಕಿವಿ ಕೇಳುವುದಿಲ್ಲ, ಕಣ್ಣು ಕಾಣಿಸುವುದಿಲ್ಲ, ಈಗ ನಾನೇ ಓದು ಹೇಳಬೇಕು’ ಎಂಬ ಮಾತಿಗೆಲ್ಲ ನಾನು ನಿರುತ್ತರನಾದೆ.

ನಿಯತ- ಪ್ರತಿ ವಾರ ಇಮೇಲ್, ಮೆಸೇಜ್ ಮಾಡುವ ಓದುಗ ಸ್ನೇಹಿತರಿದ್ದಾರೆ. ಒಂದೆರಡು ದಿನವಲ್ಲ, ಅವರ ಪ್ರತಿಕ್ರಿಯೆ ಅಂಕಣದಷ್ಟೇ ನಿಯತ. ಅವರು ಅಂಕಣಕ್ಕೆ ಕಾದಂತೆಯೇ ನಾನವರ ಪ್ರತಿಕ್ರಿಯೆಗೆ ಕಾಯುತ್ತೇನೆ. ಅವರು ಪ್ರತಿ ವಾರ ಓದಿ, ಆ ಬಗ್ಗೆ ಇನ್ನಷ್ಟು ಯೋಚಿಸಿ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಾರೆ. ಈ ದನದ ಗುಂಪನ್ನು ಮೇಯಲು (ದನ ಕಾಯಲು) ಹಾಡಿಗೆ ಒಯ್ಯುವಾಗ ಹಿಂದಿನ 2-3 ದನಗಳಿಗೆ ಚಿಕ್ಕ ಕೋಲಿನಲ್ಲಿ- ಸ್ವಲ್ಪ ಆಚೀಚೆ ನೋವಾಗದಂತೆ ಹೊಡೆಯುತ್ತಿರಬೇಕು.

ಆಗ ಇಡೀ ಗುಂಪು ಶಿಸ್ತಿನಲ್ಲಿರುತ್ತದೆ. ಆ ಕೆಲಸದ ಜವಾಬ್ದಾರಿ ಅವರಿಗೆ. ಶಾಲಾ ಶಿಕ್ಷಕರು, ವಿಶ್ವವಿದ್ಯಾಲಯ, ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಸೈನ ಪ್ರೊಫೆಸರ್‌ಗಳು, ವಿದ್ಯಾರ್ಥಿ ಗಳು, ವೈದ್ಯರು, ಎಂಜಿನಿಯರುಗಳು, ಕೃಷಿಕರು, ಗೃಹಿಣಿಯರು. ಯಾವಯಾವುದೋ ಊರು, ಉದ್ಯೋಗ, ಬದುಕಿನ ಹಿನ್ನೆಲೆ, ಸ್ಥಿತಿ.

ಈ ಅಂಕಣ ನಮ್ಮಿಬ್ಬರನ್ನು ಜೋಡಿಸಿದೆ. ಕೆಲವರು ಯಥೇಚ್ಛ ಹೊಗಳುತ್ತಾರೆ. ಇನ್ನು ಕೆಲವರದು ಸ್ವಲ್ಪ ಹಿಂಜರಿಕೆಯ ಸ್ವಭಾವ. ಇನ್ನು ಕೆಲವರು ನೇರಾನೇರ, ಅಳುಕಿಲ್ಲದೆ ಅಭಿಪ್ರಾಯವನ್ನು ತಿಳಿಸುತ್ತಾರೆ. ಕೆಲವರದು ಹೂಬಾಣ, ಇನ್ನು ಕೆಲವರದು ಸುತ್ತಿಗೆ-ಚಾಣ. ಆಗೀಗ “ನಾನು ನಿಮಗೆ ಇಮೇಲ್ ಮಾಡಬೇಕೆಂದು ಬಹಳ ಕಾಲದಿಂದ ಯೋಚಿಸುತ್ತಿದ್ದೆ, ಇವತ್ತು ಮುಹೂರ್ತ ಬಂತು" ಎಂದು ಕೆಲವರು ‘ಹಾಯ್’ ಹೇಳಿ ಮಾಯವಾಗುತ್ತಾರೆ. ‌

ನಾನು ವೈಯಕ್ತಿಕವಾಗಿ ಅವರೆಲ್ಲರಿಗೂ ಚಿರಋಣಿ. ಸುಮ್ಮನೆ ಓದಿ ಪಕ್ಕಕ್ಕಿಟ್ಟು ಚಿಂತನೆ ಗಿಳಿಯುವವರಿಗೂ ಚಿರಋಣಿ. ಪ್ರಾಮಾಣಿಕ ಹೊಗಳಿಕೆ ಧೈರ್ಯವನ್ನು ತುಂಬುತ್ತದೆ, ಖುಷಿ ಯೆನಿಸುತ್ತದೆ. ಅಂತೆಯೇ ಓದುಗರು ಆಗೀಗ ಹೆಕ್ಕಿ ತೋರಿಸುವ ತಪ್ಪು ಚಿಕ್ಕದೇ ಇದ್ದರೂ ಅದು ಜವಾಬ್ದಾರಿಯನ್ನು ಪ್ರಶ್ನಿಸುತ್ತದೆ.

ಇದೆಲ್ಲದರ ನಡುವೆ ಕೆಲವೊಂದು ವಾರ ಹೀಗೆನಿಸುವುದಿದೆ- ಕಳುಹಿಸಿಕೊಟ್ಟ ಲೇಖನ ಮೌನವಾಗಿ ಹಿಮ್ಮರಳಿ ಬಂದಂತೆ. ಇದು ಓದುಗರಿಗೆ ಮುಟ್ಟಿತಾ, ಇಷ್ಟವಾಯ್ತಾ, ಬರೆದ ಉದ್ದೇಶ ಈಡೇರಿತಾ ಎನ್ನುವ ಪ್ರಶ್ನೆ. ಅದೆಷ್ಟೋ ಬಾರಿ ಮೌನವೂ ಉತ್ತರವೇ, ಪ್ರತಿಕ್ರಿಯೆ ಯೇ ಎನ್ನುವುದು ಈಗೀಗ ಅರ್ಥವಾಗಿದೆ.

ಶಿಶಿರಕಾಲದ ಬಹುತೇಕ ಲೇಖನವನ್ನು ನಾನು ಬರೆಯುವುದು ಬುಧವಾರ ರಾತ್ರಿ, ಸಕಲ ಜೀವರಾಶಿಗಳು ಮಲಗಿದ ಮೇಲೆ. ಇಡೀ ಜಗತ್ತು ಶಾಂತವಾಗುತ್ತಿದ್ದಂತೆ ವಿಚಾರಗಳಿಗೆ ಅಡಗಿ ಕೊಳ್ಳಲು ಜಾಗವಿರುವುದಿಲ್ಲ. ಆದರೆ ಈ ಬರೆಯುವ, ವಿಚಾರಮಾಡುವ ಪ್ರೋಸೆಸ್ ನಿರಂತರ ನಡೆಯುತ್ತಿರಬೇಕು. ಕೊನೇ ಪಕ್ಷ ಬುಧವಾರ ಮಧ್ಯಾಹ್ನದಿಂದಲಾದರೂ ಶುರುವಾಗಬೇಕು.

ನಾನು ಬರೆದ ಮುನ್ನೂರು ಲೇಖನಗಳೂ ಪ್ರಕಟಣೆಯ ಹಿಂದಿನ ದಿನ ರಾತ್ರಿಯೇ ತಯಾರಾದವು. Procrastination. ಬುಧವಾರ ಎಂದರೆ ನಾನು ಬರೆಯುವ ದಿನ ಎಂದು ನನ್ನ ಕುಟುಂಬಕ್ಕೆ ಮತ್ತು ಆಪ್ತ ಸ್ನೇಹವಲಯದಲ್ಲಿ ಬಹುತೇಕರಿಗೆ ಗೊತ್ತಿದೆ. ಹಾಗಾಗಿ ಆ ದಿನ ಅವರ‍್ಯಾರೂ ಎಲ್ಲಿಗೂ ಕರೆಯುವುದಿಲ್ಲ, ಫೋನ್ ಸಹ ಮಾಡುವುದಿಲ್ಲ.

“ಬುಧವಾರ ಸಂಜೆಯಾಗುತ್ತಿದ್ದಂತೆ ಅವನ ಮಾತು ಕಡಿಮೆಯಾಗಿ ಬಿಡುತ್ತದೆ, ಸೀರಿಯಸ್ ಆಗಿ ಬಿಡುತ್ತಾನೆ" ಎಂದು ಕೇಳದಿದ್ದರೂ ಎಲ್ಲರಿಗೂ ಹೇಳುತ್ತಾಳೆ- ನನ್ನ ಹೆಂಡತಿ. ಒಂದೇ ವಿಷಯದ ಕುರಿತು ಕೆಲವೊಂದಿಷ್ಟು ತಾಸು ನಿರಂತರ ಯೋಚಿಸಬೇಕೆಂದರೆ ಅದಕ್ಕೊಂದು ಮಾನಸಿಕ ನಿಶ್ಚಲತೆ ಬೇಕು.

ಈ ಪ್ರಕ್ರಿಯೆ ಯೋಚನೆಗಳ ಕಬಡ್ಡಿ. ಕೆಲವು ವಾರ ತೆರೆದ ಖಾಲಿಪೇಜು ತುಂಬಿಸಿದ್ದಕ್ಕಿಂತ ಭಾರವೆನಿಸಿದ್ದಿದೆ. ಕೆಲವು ವಾರ ಕ್ಲಿಷ್ಟವೆನಿಸುವ ವಿಚಾರವೊಂದು ಅನಾಯಾಸವಾಗಿ ಲೇಖನವಾಗಿ ಬಿಡುತ್ತದೆ. ಇನ್ನು ಕೆಲವು ವಾರ ಆಯ್ಕೆಮಾಡಿಕೊಂಡ ವಿಷಯ ಬಹಳ ಸರಳವಿರುತ್ತದೆ, ಆದರೆ ಬರವಣಿಗೆ ಚಾರ್ಮಾಡಿ ಘಾಟು ಹತ್ತಿದಂತೆ. ಆದರೆ ಬರವಣಿಗೆಯ ಕಿಂಚಿತ್ ಸುಸ್ತು ಕೂಡ ಅಕ್ಷರದಲ್ಲಿ ಓದುಗರಿಗೆ ಅನುಭವವಾಗಬಾರದು.

ಕೆಲವು ವಾರ Am I genuine? ಎಂಬ ಅನುಮಾನ ಬಂದದ್ದೂ ಇದೆ. ಇಷ್ಟು ದೀರ್ಘ ಪ್ರಯಾಣದಲ್ಲಿ ಹಾಗೆಲ್ಲ ಅನಿಸುವುದು ಸಹಜ. ಅದೇನೇ ಇದ್ದರೂ ಕೊನೆಯಲ್ಲಿ ನಿಧಾನ ವಾಗಿ ಲೇಖನ ಒಂದು ರೂಪವನ್ನು ಪಡೆಯುತ್ತದೆ. ಕೆಲವೊಮ್ಮೆ ಹೀಗಾಗುತ್ತದೆ.

ಏನೋ ಬರೆಯಲು ಯೋಚಿಸಿ, ಪೀಠಿಕೆಯೇ ದೊಡ್ಡದಾಗಿ, ಅಲ್ಲಿ ಬೇರೆಯದೇ ವಿಚಾರ ಬಂದು ಪೂರ್ಣ ಲೇಖನವಾದದ್ದೂ ಇದೆ. ಬರೆಯುತ್ತ ಹೋದಂತೆ ವಿಚಾರದ ಆಯ್ಕೆ ಬದಲಾಗುವುದರ ಅನುಭವ ಅದು. ಒಟ್ಟಾರೆ, ಬರವಣಿಗೆ ಅಕ್ಷರಗಳ ಜತೆ ಮಾತ್ರವಲ್ಲ, ವಿಚಾರಗಳ ಜತೆಯೂ ತಾಳ್ಮೆಯಿಂದ ವ್ಯವಹರಿಸುವುದನ್ನು ಕಲಿಸಿದೆ.

ನಾನು ಬರೆಯುವ ಲೇಖನಗಳಿಗೆ ನಮ್ಮ ಮನೆಯಲ್ಲಿ ಬೇರೆಯದೇ ಆದ ರೀತಿಯ ಬದುಕಿದೆ. ನನ್ನ ತಂದೆ ನನ್ನ ಲೇಖನದ ಮೊದಲ ಕ್ರಿಟಿಕ್, ವಿಮರ್ಶಕ. ಅವರು ಭಟ್ಟರ ಲೇಖನ ಹೊರತುಪಡಿಸಿ, ಬೇರೆಯವರ ಲೇಖನವನ್ನು ತಪ್ಪು ಹುಡುಕದೆ ಓದಿದ್ದು ಇಲ್ಲವೇ ಇಲ್ಲ.

ನನ್ನದನ್ನು ಬಿಟ್ಟಾರೆಯೇ? ನನ್ನ ಮಾವ, ಅತ್ತೆಯಂದಿರು, ಭಾವ, ಆಪ್ತ ಸ್ನೇಹಿತ ವರ್ಗದಲ್ಲಿ ಹೆಚ್ಚಿನವರು ಓದುಗರು, ಅಷ್ಟೇ ಅಲ್ಲ ಕಟು ವಿಮರ್ಶಕರೂ ಹೌದು. ಅವರೆಲ್ಲ ಲಂಕೇಶ್, ಭಟ್ಟರು, ಕಾರಂತರು, ಬೆಳಗೆರೆ, ಗೌರೀಶ್ ಕಾಯ್ಕಿಣಿ, ಡಿವಿಜಿ ಅವರನ್ನೆಲ್ಲ ಓದಿದವರು.

ಆಪ್ತವಲಯದಲ್ಲಿ ಸೀರಿಯಸ್ ಓದುಗರಿದ್ದರೆ ಒಂದು ಸಮಸ್ಯೆ. ಏನೋ ಕಥೆಕಟ್ಟಿ ಬರೆಯು ವಂತಿಲ್ಲ. ಏನೋ ಪೋಕಳೆ ಬಿಡುವಂತಿಲ್ಲ. ನನ್ನ ಹೆಂಡತಿ ಲೇಖನ ಓದುವುದೇ ಇಲ್ಲ ವೇನೋ ಎನ್ನುವಂತಿರುತ್ತಾಳೆ. ಶಿಶಿರಕಾಲ ಆರಂಭಿಸಿದ್ದು ಕರೋನಾ ಸಮಯದಲ್ಲಿ. ಈ ಅಂಕಣಕ್ಕಿಂತ ಮೊದಲು ತಿಂಗಳುಗಟ್ಟಲೆ ಪ್ರತಿನಿತ್ಯ ‘ಕರೋನಾ’ ಬಗ್ಗೆ ವಿಶ್ವವಾಣಿಯಲ್ಲಿ ಲೇಖನ ರೂಪದ ವರದಿ ಬರೆದಿದ್ದೆ.

ಅದಾಗಿ ಎರಡು ವರ್ಷವಾಗಿರಬೇಕು, ಮಗಳು ಮೂರನೇ ಕ್ಲಾಸಿನಲ್ಲಿದ್ದಾಗ ಒಂದು ದಿನ ನನ್ನ ಬಳಿ ಬಂದು ಗಂಭೀರವಾಗಿ “ಕರೋನಾ ಮುಗಿದಿದೆ, ನೀನು ಇನ್ನೂ ಅದನ್ನೇ ಏಕೆ ಬರೆಯುವುದು" ಎಂದು ಕೇಳಿದ್ದಳು. ಅವಳ ಲೆಕ್ಕದಲ್ಲಿ ನಾನು ಇನ್ನೂ ಕರೋನಾ ಬಗ್ಗೆಯೇ ಬರೆಯುತ್ತಿದ್ದೇನೆ ಎಂದಿತ್ತು. ಅವಳಿಗೆ ಬರವಣಿಗೆ ಎಂಬುದು ವಾರಕ್ಕೊಮ್ಮೆ ಅಪ್ಪ ಕೆಲವು ತಾಸು ಕೂತು ಪುನರಾವರ್ತಿಸುವ ಕೆಲಸ ಎಂದೆನಿಸಿರಬೇಕು. ಆದರೆ ಬರವಣಿಗೆಯೆಡೆಗಿನ ಅವಳ ಆ ಪ್ರಶ್ನೆ ಕೆಲವೊಮ್ಮೆ ಸರಿಯೆನಿಸುತ್ತದೆ.

ಅದೇ ವಿಚಾರಗಳು ಬಹುರೂಪಗಳಲ್ಲಿ ಪುನರಾವರ್ತನೆಯಾಗಿಬಿಡುತ್ತವೆ. ಅತಿಯಾದ ಮಾಹಿತಿಯ ಲಭ್ಯತೆ, ಯುಟ್ಯೂಬ್, ಸಾಮಾಜಿಕ ಜಾಲತಾಣಗಳು, ಕೃತಕ ಬುದ್ಧಿಮತ್ತೆ (AI) ಇವೆಲ್ಲದರ ಮಧ್ಯೆ ಶಿಶಿರಕಾಲದಂಥ ಅಂಕಣದ ಅವಶ್ಯಕತೆ ಇದೆಯೇ ಎಂದು ನಾನು ಅದೆಷ್ಟೋ ಬಾರಿ ಕೇಳಿಕೊಂಡಿದ್ದೇನೆ.

ನಿಜ, ಕೃತಕ ಬುದ್ಧಿಮತ್ತೆ ಏನನ್ನು ಬೇಕಾದರೂ ಅದ್ಭುತವಾಗಿಯೇ ಬರೆಯುತ್ತದೆ. ಆದರೆ ಅಲ್ಲಿ human factor ಮನುಷ್ಯತ್ವ ಇಲ್ಲ. ಬರಹಗಾರ ಮತ್ತು ಓದುಗನ ನಡುವಿನ ಈ ಮನುಷ್ಯ ಸಂಬಂಧ ಅಲ್ಲಿಲ್ಲ. ಇನ್ನು ಬರವಣಿಗೆಯೇ ಏಕೆ? ಬರವಣಿಗೆ-ಓದು ಇವೆರಡಕ್ಕೆ ಮಾತ್ರ ಯೋಚನೆಯನ್ನು ನಿಧಾನವಾಗಿಸುವ ಶಕ್ತಿಯಿದೆ.

ಇವು ಮೇಲೆ ಹೇಳಿದವುಗಳಲ್ಲಿಲ್ಲ. ಅಂಕಣವು ಓದುಗನ ವಿಚಾರವನ್ನು ಹಿಡಿದು ನಿಲ್ಲಿಸು ತ್ತದೆ. ಅದಕ್ಕೊಂದು ಲಗಾಮು ಹಾಕುತ್ತದೆ. ದಿಶೆ ಕೊಡುತ್ತದೆ. ಕಥೆ, ಕಾದಂಬರಿ, ಕವನ ಇವೆಲ್ಲದಕ್ಕಿಂತ ಅಂಕಣ ಸಾಹಿತ್ಯ ಪ್ರಕಾರ ಬಹಳ ವಿಭಿನ್ನ. ಆಗೀಗ ಬರೆದಂತಲ್ಲ. ಇಲ್ಲಿ ನಿರಂತರತೆಯಿದೆ. ಅಂಕಣ ಸಾಹಿತ್ಯ ಯಾವತ್ತೂ ನೈಜ ಬದುಕಿನಿಂದ ತಪ್ಪಿಸಿಕೊಳ್ಳಲು ಹೆಣಗುವುದಿಲ್ಲ. ಬಿಡುವುದಿಲ್ಲ.

ಹೇಳುತ್ತಾ ಹೋದರೆ ಹೇಳಲು ಬೇಕಾದಷ್ಟಿದೆ. ಮುಖ್ಯವಾಗಿ ಈ ನಮ್ಮಿಬ್ಬರ ಸಂಬಂಧಕ್ಕೆ ಕೊಂಡಿಯನ್ನು ನೀಡಿದ್ದು ಸಂಪಾದಕರಾದ ವಿಶ್ವೇಶ್ವರ ಭಟ್ಟರು, ವಿಶ್ವವಾಣಿ. ಈ ಸ್ವಾತಂತ್ರ್ಯವು ಅಂಕಣಕಾರನಿಗೆ ಅತ್ಯಂತ ಮುಖ್ಯ. ಶಿಶಿರಕಾಲ ‘ಲೋಕಧ್ವನಿ’ ಪತ್ರಿಕೆ ಯಲ್ಲಿಯೂ ಪ್ರಕಟವಾಗುತ್ತದೆ. ನಾನು ಎಲ್ಲರಿಗೂ ಋಣಿ. ಅಲ್‌ರೈಟ್- ಮುಂದಕ್ಕೆ ಹೋಗೋಣ. ಶಿಶಿರಕಾಲ ಮುಂದುವರಿಯುತ್ತದೆ....