Rangaswamy Mookanahally Column: ವೇಳೆ ಬರೋವರೆಗೂ ತಾಳ್ಮೆಯಿಂದ ಕೆಲಸ ಮಾಡುತ್ತಿರಬೇಕು !
ಸಮಾಜದ ಕಟ್ಟುಕಟ್ಟಳೆಗಳಂತೆ ನಡೆಯುತ್ತಿಲ್ಲ ಎಂದ ತಕ್ಷಣ ಅವರನ್ನು ಕುರಿತು ಋಣಾತ್ಮಕ ಮಾತು ಗಳು ಕೂಡ ಶುರುವಾಗಿಬಿಡುತ್ತವೆ. ಹುಟ್ಟು, ಶಾಲೆ, ಶಿಕ್ಷಣ, ಯೌವನ, ಮದುವೆ, ನಂತರ ಮಕ್ಕಳು, ಆಮೇಲೆ ಆ ಮಕ್ಕಳನ್ನು ಸಾಕಲು ದುಡಿಮೆ, ೬೦ ಅಥವಾ 65ಕ್ಕೆ ನಿವೃತ್ತಿ, ಆಯಸ್ಸು ಇರುವವರೆಗೆ ಕುಳಿತು ತಿಂದು, ವೇಳೆ ಕಳೆದು ಹೊರಟುಬಿಡುವುದು. ಇದು ಅಲಿಖಿತ ನಿಯಮ.
-
ವಿಶ್ವರಂಗ
ಈ ಜಗತ್ತು ಒಂದು ಫಾರ್ಮ್ಯಾಟ್ ಮಾಡಿಕೊಂಡುಬಿಟ್ಟಿದೆ. ಹೀಗೆ ಬದುಕಬೇಕು ಎನ್ನುವುದು ಕಡ್ಡಾಯವಲ್ಲ. ಆದರೆ ನಾವೆ ಒಂದು ರೀತಿಯಲ್ಲಿ ಸಮೂಹ ಸನ್ನಿಗೆ ಸಿಕ್ಕವರಂತೆ ಸಿದ್ದಸೂತ್ರಗಳಿಗೆ, ಸಮಾಜ ಸೃಷ್ಟಿಸಿರುವ ಫಾರ್ಮುಲಾ, ಪ್ಯಾಟ್ರನ್‌ಗಳಿಗೆ ಕಟ್ಟು ಬೀಳುತ್ತೇವೆ. ನೀವೇ ಗಮನಿಸಿ ನೋಡಿ, ಇಂಥ ವರ್ತುಲದಿಂದ ಹೊರಬಂದವರ ಸಂಖ್ಯೆ ಬಹಳ ಕಡಿಮೆ.
ಸಮಾಜದ ಕಟ್ಟುಕಟ್ಟಳೆಗಳಂತೆ ನಡೆಯುತ್ತಿಲ್ಲ ಎಂದ ತಕ್ಷಣ ಅವರನ್ನು ಕುರಿತು ಋಣಾತ್ಮಕ ಮಾತುಗಳು ಕೂಡ ಶುರುವಾಗಿಬಿಡುತ್ತವೆ. ಹುಟ್ಟು, ಶಾಲೆ, ಶಿಕ್ಷಣ, ಯೌವನ, ಮದುವೆ, ನಂತರ ಮಕ್ಕಳು, ಆಮೇಲೆ ಆ ಮಕ್ಕಳನ್ನು ಸಾಕಲು ದುಡಿಮೆ, 60 ಅಥವಾ 65ಕ್ಕೆ ನಿವೃತ್ತಿ, ಆಯಸ್ಸು ಇರುವವರೆಗೆ ಕುಳಿತು ತಿಂದು, ವೇಳೆ ಕಳೆದು ಹೊರಟುಬಿಡುವುದು. ಇದು ಅಲಿಖಿತ ನಿಯಮ.
ಈ ಫಾರ್ಮ್ಯಾಟ್ ಮೀರಿ ಬದುಕಿದವರ ಸಂಖ್ಯೆ ಅತ್ಯಲ್ಪ. ಕರ್ನಲ್ ಸ್ಯಾಂಡರ‍್ಸ್ ಈ ಚೌಕಟ್ಟು ಮೀರಿ ಬದುಕಿದ ಅಸಾಮಾನ್ಯ. ಆತನ ಜೀವನ ಪಯಣ ಏಳು-ಬೀಳು ಎನ್ನುವುದಕ್ಕಿಂತ ಬೀಳು ಹೆಚ್ಚಿತ್ತು ಎನ್ನಬಹುದು. ಬಿದ್ದವರು ಏಳಲೇಬೇಕು, ಅದು ಪ್ರಕೃತಿ ನಿಯಮ. ಆದರೆ ಸಮಾಜ ಹೇಳುವಂತೆ ಅದಕ್ಕೆ ಸಮಯದ ಚೌಕಟ್ಟು ತೊಡಿಸಬಾರದು.
ನಾವು ‘ಕ್ವಿಟ್’ ಹೇಳುವುದಕ್ಕೆ ಮುಂಚೆ ನಮ್ಮ ಸಮಯ ಬರುವವರೆಗೆ ಕಾಯಬೇಕು. ಕರ್ನಲ್ ಸ್ಯಾಂಡರ‍್ಸ್ ಹೆಸರು ಕೇಳಿದರೆ ಯಾರಿವರು? ಎನ್ನುವ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಉತ್ಪನ್ನ ವಾಗಿರುತ್ತದೆ. ಅದೇ ಕೆಂಟುಕಿ ಫ್ರೈಡ್ ಚಿಕನ್ ಅಥವಾ ಕೆಎಫ್ ಸಿ ಎಂದರೆ, “ಓಹ್ ಅದಾ, ನನಗೆ ಗೊತ್ತು’ ಎಂದು ಉದ್ಗಾರ ಹೊರಡಿಸುತ್ತಿರಿ. ಕರ್ನಲ್ ಸ್ಯಾಂಡರ‍್ಸ್ ಕೆಎಫ್ ಸಿಯ ಜನಕ. ಇವತ್ತಿಗೆ 145ಕ್ಕೂ ಹೆಚ್ಚು ದೇಶಗಳಲ್ಲಿ 29 ಸಾವಿರಕ್ಕೂ ಹೆಚ್ಚು ಮಳಿಗೆಗಳನ್ನು ಕೆಎಫ್ಸಿ ಹೊಂದಿದೆ.
ಇದನ್ನೂ ಓದಿ: Rangaswamy Mookanahalli Column: ಹೆಚ್ಚುತ್ತಿರುವ ತಾರತಮ್ಯದ ಬಗ್ಗೆ ಹೋರಾಡೋಣ
ಹತ್ತಿರತ್ತಿರ ೧೩ ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯವುಳ್ಳ ಸಂಸ್ಥೆ ಇದಾಗಿದೆ. ವಾರ್ಷಿಕ ಆದಾಯವೇ ಹತ್ತಿರತ್ತಿರ ೩ ಬಿಲಿಯನ್ ಡಾಲರ್ ಎಂದರೆ ಅದೆಷ್ಟು ದೊಡ್ಡದು ಎನ್ನುವುದನ್ನು ಮನಗಾಣಬಹುದು. ಜಗತ್ತಿನಲ್ಲಿ 197 ದೇಶಗಳಿವೆ ಅದರಲ್ಲಿ 147 ದೇಶಗಳಲ್ಲಿ ಕೆಎಫ್ಸಿ ಇದೆ ಎಂದರೆ , ಅದರ ನೆಟ್ ವರ್ಕ್ ಎಷ್ಟು ದೊಡ್ಡದು ಎನ್ನುವುದನ್ನು ನಾವು ತಿಳಿಯಬಹುದು.
ಚೀನಾದಂಥ ಕರ್ಮಠ ಕಮ್ಯುನಿಸ್ಟ್ ದೇಶದಲ್ಲಿ ಕೂಡ ಈ ಸಂಸ್ಥೆ ನುಸುಳಿದೆ. ಅಷ್ಟೇ ಅಲ್ಲದೆ 10 ಸಾವಿರ ಮಳಿಗೆಯನ್ನು ಕೇವಲ ಚೀನಾ ದೇಶವೊಂದರ ಹೊಂದಿರುವುದು ಅಸಾಮಾನ್ಯ ಸಾಧನೆ. ಜಾಗತಿಕವಾಗಿ ಈ ಸಂಸ್ಥೆ ೮ ಲಕ್ಷಕ್ಕೂ ಹೆಚ್ಚಿನ ಜನರಿಗೆ ಉದ್ಯೋಗವನ್ನು ನೀಡಿದೆ.
ಸೆಪ್ಟೆಂಬರ್ ೯, 1890ರಲ್ಲಿ ಅಮೆರಿಕದ ಇಂಡಿಯಾನಾ ಎನ್ನುವ ಪ್ರದೇಶದಲ್ಲಿ ಸ್ಯಾಂಡರ‍್ಸ್ ಅವರ ಜನನವಾಗುತ್ತದೆ. ಮೂರು ಮಕ್ಕಳಲ್ಲಿ ಸ್ಯಾಂಡರ‍್ಸ್ ಮೊದಲನೆಯವರು. ಅಪ್ಪ ಕಟುಕ ಅಂದರೆ ಬುಚ್ಚರ್, ಮಾಂಸ ಮಾರುವ ವೃತ್ತಿಯಲ್ಲಿ ತೊಡಗಿರುತ್ತಾರೆ. ಅಮ್ಮ ಗೃಹಿಣಿ. ಬಾಲಕ ಸ್ಯಾಂಡರ‍್ಸ್ ಆರು ವರ್ಷದವನಾಗಿzಗ ಅಪ್ಪನ ಮರಣವಾಗುತ್ತದೆ.
ಅವರಮ್ಮ ಸಂಸಾರದ ಭಾರವನ್ನು ಹೊರುತ್ತಾರೆ. ಕೃಷಿ ಕೆಲಸಕ್ಕೆ ಅವರು ಹೋಗುತ್ತಿರುತ್ತಾರೆ. ಹೀಗಾಗಿ ಒಡಹುಟ್ಟಿದವರ ಲಾಲನೆ, ಪೋಷಣೆ ಸ್ಯಾಂಡರ‍್ಸ್ ಪಾಲಿಗೆ ಬರುತ್ತದೆ. ಅವರಿಗೆ ಊಟ ಸಿದ್ಧಪಡಿಸುವುದು, ತಿನ್ನಿಸುವುದು ಇತರ ಎಲ್ಲಾ ಕಾರ್ಯಗಳನ್ನು ಸ್ಯಾಂಡರ್ರ‍್ಸ್ ಮಾಡಬೇಕಾಗುತ್ತದೆ.
ಬದುಕೇ ಹೀಗೆ ನೋಡಿ, ಬಾಲ್ಯದ ದೊಡ್ಡವರ ಜವಾಬ್ದಾರಿಯನ್ನು ಹಾಕುತ್ತದೆ. ಬದುಕು ಕಲಿಸುವ ಪಾಠದ ಮುಂದೆ ಬೇರೆಲ್ಲವೂ ಗೌಣ. ಅಮ್ಮ ತೀರಾ ದೈವಭಕ್ತೆ ಆದ ಕಾರಣ ಅಲ್ಕೋಹಾಲ್, ಸಿಗರೇಟು, ಕಾಫಿ ಸೇವನೆ, ಸುಳ್ಳು ಹೇಳುವುದು, ಸೀಟಿ ಹೊಡೆಯುವುದು ಕೂಡ ಮಾಡದಂತೆ ಕಟ್ಟು ನಿಟ್ಟಾಗಿ ಬೆಳೆಸುತ್ತಾರೆ. ಸ್ಯಾಂಡರ‍್ಸ್ ೧೨ರ ಹರೆಯದಲ್ಲಿದ್ದಾಗ ಆತನ ತಾಯಿ ಬೇರೊಂದು ಮದುವೆ ಯಾಗುತ್ತಾರೆ.
ಇದು ಬಾಲಕ ಸ್ಯಾಂಡರ‍್ಸ್‌ಗೆ ಇಷ್ಟವಾಗುವುದಿಲ್ಲ. ಹೀಗಾಗಿ ಮನೆಬಿಟ್ಟು ಹೋಗುತ್ತಾರೆ. ಆ ವಯಸ್ಸಿ ನಲ್ಲಿ ಬೇರಾವ ಕೆಲಸ ಸಿಕ್ಕೀತು? ಅದರಲ್ಲೂ ಸ್ಯಾಂಡರ‍್ಸ್‌ಗೆ ಗಣಿತ ಎಂದರೆ ಭಯ. ಕೃಷಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಹೆಚ್ಚು ಕಾಲ ಕೆಲಸ ಮಾಡಲು ಒಪ್ಪಿದ ಎನ್ನುವ ಕಾರಾಣಕ್ಕೆ ಇರಲು ಜಾಗದ ಜತೆಗೆ ಮಾಸಿಕ ಹತ್ತು ಡಾಲರ್ ವೇತನವನ್ನು ಆತ ಅಂದಿಗೆ ಪಡೆಯುತ್ತಾರೆ.
15ನೇ ವಯಸ್ಸಿನವರೆಗೆ ಅಲ್ಲಿ ಕೆಲಸ ಮಾಡಿ ನಂತರ ೧೬ರಲ್ಲಿ ಮಿಲಿಟರಿಗೆ ಸೇರೋಣ ಎಂದು ಹೋಗುತ್ತಾರೆ. ಆದರೆ ಚಿಕ್ಕ ವಯಸ್ಸು ಎನ್ನುವ ಕಾರಣದಿಂದ ಅಲ್ಲಿ ಸೇರಿಸಿಕೊಳ್ಳುವುದಿಲ್ಲ. ಮುಂದೆ ಅವರಿಗೆ ಮಿಲಿಟರಿ ಸೇರಲು ಅವಕಾಶ ಕೂಡ ಸಿಗುವುದಿಲ್ಲ. ಆದರೂ ಅವರ ಹೆಸರಿನಲ್ಲಿ ಕರ್ನಲ್ ಹೆಸರಿದೆ. ಸಮಾಜಕ್ಕೆ, ಕಮ್ಯುನಿಟಿಗೆ ಅವರು ನೀಡಿದ ಕೊಡುಗೆಯನ್ನು ಗಮನಿಸಿ ಕೆಂಟುಕಿ ಗವರ್ನರ್ ನೀಡಿದ ‘ಸ್ಟೇಟ್ ಟೈಟಲ್’ ಇದಾಗಿದೆ.
ಮಿಲಿಟರಿ ಸೇರಲು ಆಗುವುದಿಲ್ಲ ಆದರೆ ರೈಲ್ವೇಸ್‌ನಲ್ಲಿ ಕಲ್ಲಿದ್ದಲು ಎತ್ತಿಹಾಕುವ ಕೆಲಸಕ್ಕೆ ಸೇರಿ ಕೊಳ್ಳುತ್ತಾರೆ. ಸ್ಯಾಂಡರ‍್ಸ್‌ಗೆ ಚಿಕ್ಕ ವಯಸ್ಸಿನಿಂದ ಶುಚಿಯಾಗಿರುವುದು ಬಹಳ ಇಷ್ಟ. ಹೀಗಾಗಿ ಆತ ಕಲ್ಲಿದ್ದಲು ಎತ್ತುವ ಕೆಲಸಕ್ಕೆ ಕೂಡ ಬಿಳಿ ಬಟ್ಟೆಯನ್ನು ಧರಿಸಿ ಹೋಗುತ್ತಿದ್ದರಂತೆ. ಅಲ್ಲದೆ ಅದನ್ನು ಹಾಗೆ ಶುಚಿಯಾಗಿ ಇರಿಸಿಕೊಂಡು ಬರುತ್ತಿದ್ದರಂತೆ!
ನಿಧಾನಕ್ಕೆ ಅಲ್ಲಿನ ಕೆಲಸದಲ್ಲಿ ಇನ್ನಷ್ಟು ಸ್ಕಿಲ್ ಕಲಿತು ಮೇಲ್ಮಟ್ಟಕ್ಕೆ ಏರುತ್ತಿರುತ್ತಾರೆ. ಆದರೆ ಸ್ಯಾಂಡರ‍್ಸ್‌ಗೆ ಮೂಗಿನ ತುದಿಯಲ್ಲಿ ಕೋಪ. ಅಲ್ಲಿನ ಮ್ಯಾನೇಜರ್ ಜತೆಗೆ ಕಿತ್ತಾಟ ಮಾಡಿಕೊಳ್ಳು ತ್ತಾರೆ. ಅಲ್ಲಿಂದ ಕೆಲಸ ಕಳೆದುಕೊಳ್ಳುತ್ತಾರೆ. ೨೧ರ ವಯಸ್ಸಿನ ಆಜುಬಾಜಿನಲ್ಲಿ ಕರೆಸ್ಪಾಂಡೆನ್ಸ್ ಮೂಲಕ ಕಾನೂನು ಪದವಿಯನ್ನು ಪಡೆಯುತ್ತಾರೆ. ಆದರೆ ಈ ವೃತ್ತಿಯನ್ನು ಹೆಚ್ಚು ಕಾಲ ಮಾಡಲಾಗುವುದಿಲ್ಲ.
ಕ್ಲೈಂಟ್ ಜತೆಯಲ್ಲಿ ಕೋರ್ಟ್ ಆವರಣದಲ್ಲಿ ಕಿತ್ತಾಟ ಮಾಡಿಕೊಳ್ಳುತ್ತಾರೆ. ಹೀಗಾಗಿ ವಕೀಲ ವೃತ್ತಿ ಯಿಂದ ನಿವೃತ್ತಿ ಪಡೆಯುತ್ತಾರೆ. ಒಂದಲ್ಲ, ಎರಡಲ್ಲ ಹತ್ತಾರು ಸ್ವಂತ ಉದ್ದಿಮೆಗಳನ್ನು ತೆರೆಯು ತ್ತಾರೆ. ಸೋಲು ಎನ್ನುವುದು ಸದಾ ಎಲ್ಲದರಲ್ಲೂ ಅವರ ಜತೆಯಾಗುತ್ತದೆ. ಗ್ಯಾಸ್ ಲೈಟ್ ಸರಬ ರಾಜು ಮಾಡುವ ಸಂಸ್ಥೆ ಪರವಾಗಿಲ್ಲ ಎನ್ನುವಂತೆ ಇರುತ್ತದೆ. ಆದರೆ ಥಾಮಸ್ ಅಲ್ವ ಎಡಿಸನ್ ಇಲೆಕ್ಟ್ರಿಕ್ ಬಲ್ಬ್ ಕಂಡು ಹಿಡಿದ ಕಾರಣ ಗ್ಯಾಸ್ ಲೈಟ್ ಬೇಡಿಕೆ ಕುಸಿತ ಕಾಣುತ್ತದೆ.
ಬದುಕು ಎಂದರೆ ಇಷ್ಟೇ ನೋಡಿ. ಥಾಮಸ್ ಅಲ್ವ ಎಡಿಸನ್ ಬಲ್ಬ್ ಕಂಡುಹಿಡಿದ ಕಾರಣ ಪ್ರಖ್ಯಾತಿ ಹೊಂದಿ ಹಣದ ಮೇಲೆ ಹಣ ಸಂಪಾದಿಸುತ್ತಿದ್ದರೆ, ಇತ್ತ ಸ್ಯಾಂಡರ‍್ಸ್ ಇದ್ದ ಬದುಕನ್ನು ಕಳೆದು ಕೊಂಡಿದ್ದರು. ಮಳೆ ಬಂದರೆ ಕೆಲವರಿಗೆ ಅನುಕೂಲ, ಖುಷಿ; ಕೆಲವರಿಗೆ ಅದರಿಂದ ಕಷ್ಟ. ಇನ್ನೊಂದು ಪರವಾಗಿಲ್ಲ ಎನ್ನುವ ಉದ್ದಿಮೆ ಎಂದರೆ ಸರೋವರದ ಒಂದು ತುದಿಯಿಂದ ಇನ್ನೊಂದು ತುದಿಗೆ ಪ್ರಯಾಣಿಕರನ್ನು ತಲುಪಿಸಲು ಫೇರಿ ಸರ್ವಿಸ್ ನೀಡುತ್ತಿರುತ್ತಾರೆ.
ಅದು ಪರವಾಗಿಲ್ಲ ಎನ್ನುವ ಆದಾಯ ನೀಡುತ್ತದೆ. ಆದರೆ ಎರಡೂ ತುದಿಯನ್ನು ಬೆಸೆಯುವಂತೆ ಸೇತುವೆ ಕಟ್ಟಲಾಗುತ್ತದೆ, ಅದರೊಂದಿಗೆ ಸ್ಯಾಂಡರ‍್ಸ್ ಅವರ ಈ ವೆಂಚರ್ ಕೂಡ ಸೋಲಿನಲ್ಲಿ ಕೊನೆಗಾಣುತ್ತದೆ. ಆ ನಂತರ ಸೇಲ್ಸಮ್ಯಾನ್ ಆಗಿ, ಇನ್ಶೂರೆನ್ಸ್ ಮಾರಾಟಗಾರನಾಗಿ ಹತ್ತಾರು ಉದ್ಯೋಗಗಳನ್ನು ಮಾಡುತ್ತಾರೆ.
ಅವೆಲ್ಲವೂ ತಾತ್ಕಾಲಿಕ ಕೆಲಸಗಳು. ಅಂದಿನ ಜೀವನವನ್ನು ಸಾಗಿಸಲು ಅವಶ್ಯಕವಾಗಿ ಮಾಡ ಬೇಕಾದ ಸ್ಥಿತಿಯಲ್ಲಿ ಮಾಡಿದಂಥವು. ಬದುಕಿನ ಬಂಡಿ ಸಾಗಿಸಲೇಬೇಕಲ್ಲ, ಹೀಗಾಗಿ ಪೆಟ್ರೋಲ್ ಸ್ಟೇಷನ್ ಬಿಸಿನೆಸ್ ಶುರುಮಾಡುತ್ತಾರೆ. ಅದು ಹೇಳಿಕೇಳಿ 1920ರ ಸಮಯ. ಅಂದಿನ ದಿನದಲ್ಲಿ ಅಮೆರಿಕವನ್ನು ಎರಡು ಸಮಸ್ಯೆಗಳು ಬಾಧಿಸಲು ಪ್ರಾರಂಭಿಸಿರುತ್ತವೆ.
ಒಂದು ಬರಗಾಲ, ಎರಡು ಮಹಾನ್ ಆರ್ಥಿಕ ಹಿಜರಿತ. ಇವೆರಡು ಸಮಸ್ಯೆಗಳು ಅಂದಿನ ದಿನದಲ್ಲಿ ಸಾವಿರಾರು ಕುಟುಂಬಗಳನ್ನು ಬಲಿ ಪಡೆದುಕೊಳ್ಳುತ್ತವೆ. 1930ರ ವೇಳೆಗೆ ಕೆಂಟುಕಿಯ ಬೇರೊಂದು ಊರಿಗೆ ಶಿ- ಆಗುತ್ತಾರೆ. ಶೆಲ್ ಆಯಿಲ್ ಸ್ಟೇಷನ್ ನೋಡಿಕೊಳ್ಳುವ ಕೆಲಸ ಅದಾಗಿರುತ್ತದೆ. ಇಲ್ಲಿ ಕೂಡ ಸ್ಯಾಂಡರ‍್ಸ್ ಮುಂಗೋಪಕ್ಕೆ ಬೆಲೆ ತೆರೆಬೇಕಾಗುತ್ತದೆ.
ಪ್ರತಿಸ್ಪರ್ಧಿ ಪೆಟ್ರೋಲ್ ಬಂಕ್ ಮಾಲೀಕರೊಂದಿಗೆ ಜಾಹೀರಾತು ಹಾಕುವ ಜಾಗದ ಬಗ್ಗೆ ಕಿತ್ತಾಟವಾ ಗುತ್ತದೆ. ಅದು ಗನ್‌ಶಾಟ್ ಮೂಲಕ, ಸ್ಯಾಂಡರ‍್ಸ್ ಸಹಾಯಕನನ್ನು ಬಲಿ ಪಡೆದುಕೊಳ್ಳುವ ಮೂಲಕ ಕೊನೆಯಾಗುತ್ತದೆ. ಕೋರ್ಟು ಸ್ಯಾಂಡರ‍್ಸ್ ಅವರನ್ನು ನಿರ್ದೋಷಿ ಎಂದು ಬಿಡುಗಡೆ ಮಾಡುತ್ತದೆ. ಪ್ರತಿಸ್ಪರ್ಧಿ ಪೆಟ್ರೋಲ್ ಬಂಕ್ ಮಾಲೀಕನಿಗೆ ೧೮ ವರ್ಷ ಜೈಲುಶಿಕ್ಷೆಯಾಗುತ್ತದೆ.
ಈ ಆಯಿಲ್ ಸ್ಟೇಷನ್ ಬಹಳ ಜನನಿಬಿಢ ಪ್ರದೇಶದಲ್ಲಿದ್ದ ಕಾರಣ ಸ್ಯಾಂಡರ‍್ಸ್ ಇಲ್ಲಿ ಆಹಾರವನ್ನು ತಯಾರಿಸಿ ಮಾರುವುದಕ್ಕೆ ಶುರು ಮಾಡುತ್ತಾರೆ. ಇಲ್ಲಿ ವಿವಿಧ ರೀತಿಯ ಮಾಂಸ ಭಕ್ಷ್ಯಗಳನ್ನು, ಆಲೂಗೆಡ್ಡೆ ತಿನಿಸು ಇತ್ಯಾದಿ ತಯಾರಿಸಿ ಮಾರುತ್ತಾರೆ. ಇಷ್ಟೆ ಆದರೂ ಅವರಿಗೆ ವಿಶ್ವ ಮಾನ್ಯತೆ ತಂದುಕೊಡುವ ಸಿಗ್ನೇಚರ್ ಡಿಶ್ ‘ಫ್ರೈಡ್ ಚಿಕನ್’ ಇನ್ನೂ ಉಗಮವಾಗಿರುವುದಿಲ್ಲ.
1940ರ ವೇಳೆಗೆ ಅವರಿಗೆ ಈ ರೆಸಿಪಿ ಸಿದ್ಧಿಸುತ್ತದೆ. ಆದರೆ ಅದನ್ನು ಪ್ರಯೋಗ ಮಾಡುವ ಮುನ್ನ ಮತ್ತೊಂದು ಅಡ್ಡಿ ಎದುರಾಗುತ್ತದೆ. ಅದು ಎರಡನೇ ವಿಶ್ವಯುದ್ಧದ ಸಮಯವಾಗಿರುತ್ತದೆ. ಈ ವೇಳೆಗೆ ಸ್ಯಾಂಡರ‍್ಸ್ 52ರ ಹರೆಯಕ್ಕೆ ಕಾಲಿರಿಸಿರುತ್ತಾರೆ. ಯುದ್ಧ ಮಾಡುವ ಶಕ್ತಿ ಇರುವುದಿಲ್ಲ. ಹೀಗಾಗಿ ಮ್ಯಾನ್ಹಟನ್ ಪ್ರಾಜೆಕ್ಟ್ ನಲ್ಲಿ ಆಹಾರ ತಯಾರಿಕೆಯಲ್ಲಿ ಸಹಾಯ ಮಾಡುತ್ತಾರೆ.
ಯುದ್ಧ ಮುಗಿದ ಮೇಲೆ ಮತ್ತೆ ರೆಸ್ಟೋರೆಂಟ್ ತೆರೆಯುತ್ತಾರೆ. 150 ಜನ ಕೂರಬಹುದಾದ ದೊಡ್ಡ ರೆಸ್ಟೋರೆಂಟ್ ತೆರೆಯುತ್ತಾರೆ. ಅದು ಚೆನ್ನಾಗಿ ನಡೆಯುತ್ತಿರುತ್ತದೆ. ಆದರೆ ಊರನ್ನು ಬಳಸಿ ಹೋಗು ವಾಗ ಟ್ರಾಫಿಕ್ ಸಮಸ್ಯೆ ಜಾಸ್ತಿ ಎನ್ನುವ ಕಾರಣಕ್ಕೆ ಹೊಸದಾಗಿ ಫ್ರೀ-ವೇ ನಿರ್ಮಾಣ ಮಾಡುತ್ತಾರೆ.
ಎಲ್ಲಾ ವಾಹನಗಳು ಅಲ್ಲಿ ಓಡಾಡಲು ಶುರುಮಾಡುತ್ತವೆ. ಇವರ ರೆಸ್ಟೋರೆಂಟ್ ಜನರಿಲ್ಲದೆ ಸೊರಗುತ್ತದೆ. ಬದುಕಿನಲ್ಲಿ ನನಗೇನು ಬೇಕು, ಯಾವುದು ಇಷ್ಟ ಎಂದು ತಿಳಿದುಕೊಂಡು ಖುಷಿ ಕೊಡುವ ಕೆಲಸದಲ್ಲಿ ಇದ್ದಾಗ ಮತ್ತೊಂದು ಸೋಲು ಅವರನ್ನು ಬಂದಪ್ಪುತ್ತದೆ. ಈ ವೇಳೆಗೆ ೬೨ರ ವಯಸ್ಸಿನ ಅವರ ಸ್ನೇಹಿತರು ನಿವೃತ್ತಿ ಘೋಷಿಸಿಕೊಂಡು ಆರಾಮಾಗಿರಲು ಶುರುಮಾಡಿರುತ್ತಾರೆ.
ಆದರೆ ಅವರಿಗೆ ಉಳಿಸಿದ ಹಣವಿತ್ತು, ಅಲ್ಲದೆ ಒಂದಷ್ಟು ಪಿಂಚಣಿ ಬರುತ್ತಿತ್ತು. ಸ್ಯಾಂಡರ‍್ಸ್‌ಗೆ ಆ ದಿನದಲ್ಲಿ ಮಾಸಿಕ ಕೇವಲ 100 ಡಾಲರ್ ಸೋಷಿಯಲ್ ಸೆಕ್ಯುರಿಟಿಯಿಂದ ಸಿಗುತ್ತಿತ್ತು. ಅದರಲ್ಲಿ ಜೀವನ ನಡೆಸಲು ಸಾಧ್ಯವಿರಲಿಲ್ಲ, ಹೀಗಾಗಿ ರೆಸ್ಟೋರೆಂಟ್ ಅನ್ನು ನಷ್ಟದಲ್ಲಿ ಮಾರಿ ಕೆಲವೊಂದು ಕಿಚನ್ ಎಕ್ವಿಪ್ ಮೆಂಟ್ ತೆಗೆದುಕೊಂಡು ಅಲೆಮಾರಿಯಂತೆ ಹೊರಡುತ್ತಾರೆ.
ಕಾರಿನ ಮಲಗುವುದು, ಅ ಜೀವನ. ಬೇರೆ ಬೇರೆ ರೆಸ್ಟೋರೆಂಟ್‌ಗಳಿಗೆ ಹೋಗಿ ಫ್ರೈಡ್ ಚಿಕನ್ ಮಾಡಿ ಕೊಡುವುದು ಮಾಡುತ್ತಾರೆ. ಕೊನೆಗೆ 1952ರಲ್ಲಿ ಇದರ ಮೊದಲ ಔಟ್‌ಲೆಟ್ ಆರಂಭವಾಗುತ್ತದೆ. ನಿಧಾನವಾಗಿ ಅದು ಪ್ರಸಿದ್ದಿ ಹೊಂದುತ್ತ ಹೋಗುತ್ತದೆ. ಜನ ದೂರದ ಊರುಗಳಿಂದ ಇವರನ್ನು ಮಾತನಾಡಿಸಲು ಬರುತ್ತಾರೆ.
1960ರ ವೇಳೆಗೆ 200 ಮಳಿಗೆಗಳನ್ನು ಹೊಂದುತ್ತಾರೆ. ಇವೆಲ್ಲವೂ ಆರ್ಗ್ಯಾನಿಕ್ ಗ್ರೋಥ್. ಯಾವು ದಕ್ಕೂ ಅವರು ಹಣ ಖರ್ಚು ಮಾಡಿರುವುದಿಲ್ಲ. ಮುಂದಿನ ಮೂರು ವರ್ಷದಲ್ಲಿ ಮಳಿಗೆಗಳ ಸಂಖ್ಯೆ 600 ಮುಟ್ಟುತ್ತದೆ. ಸ್ಯಾಂಡರ‍್ಸ್ ವಾರ್ಷಿಕ ೩ ಲಕ್ಷ ಡಾಲರ್‌ಗೂ ಮಿಗಿಲಾದ ಲಾಭವನ್ನು ಪಡೆಯು ತ್ತಿರುತ್ತಾರೆ.
1964ರಲ್ಲಿ ಇದನ್ನು ೨ ಮಿಲಿಯನ್ ಡಾಲರ್‌ಗೆ ಮಾರುತ್ತಾರೆ. ಆದರೆ ಈ ವ್ಯಾಪಾರದ ಮುಖವಾಗಿ ಉಳಿದುಕೊಳ್ಳುತ್ತಾರೆ. 1971ರಲ್ಲಿ ಇದು ಮರುಮಾರಾಟವಾಗುತ್ತದೆ. ಈ ಬಾರಿ 285 ಮಿಲಿಯನ್ ಡಾಲರ್‌ಗೆ ಮಾರಾಟವಾಗುತ್ತದೆ. ೧೫ ವರ್ಷದ ನಂತರ ಪೆಪ್ಸಿ ಕೋ ಇದನ್ನು ಕೊಳ್ಳುತ್ತದೆ. ಇಂದಿಗೆ ಈ ಬ್ರ್ಯಾಂಡ್ ಅನ್ನು ಯುಮ್ (ಞ)ಎನ್ನುವ ಸಂಸ್ಥೆ ಮುನ್ನಡೆಸುತ್ತಿದೆ.
ಯುಮ್ ಕೆಎಫ್ಸಿ ಜತೆಗೆ ಟ್ಯಾಕೋ ಬೆಲ್ ಮತ್ತು ಫಿಜ್ಜಾ ಹಟ್‌ಗಳನ್ನೂ ಮುನ್ನಡೆಸುತ್ತಿದೆ. ಬದುಕಿನುದ್ದಕ್ಕೂ ಸಂಘರ್ಷ, ಗೆಲುವಿನ ರುಚಿ ತೋರಿಸಿ ಅದನ್ನು ಆಸ್ವಾದಿಸುವ ಮೊದಲೇ ಸೋಲು ಕೈ ಹಿಡಿಯುತ್ತಿತ್ತು. ಇಷ್ಟೆ ಸಂಘರ್ಷದ ನಡುವೆ ಕರ್ನಲ್ ಸ್ಯಾಂಡರ‍್ಸ್ ಅವರನ್ನು ಕಾಪಾಡಿದ್ದು ‘ಕ್ವಿಟ್’ ಹೇಳದೆ ಇರುವ ಅವರ ಗುಣ. ಅವರ ವಯಸ್ಸಿನ ೯೯ ಪ್ರತಿಶತ ಜನ ‘ಸಾಕಪ್ಪಾ ಈ ಬದುಕು-ಬವಣೆ.
ಇನ್ನು ಮುಂದೆ ನಿವೃತ್ತಿ ಜೀವನ’ ಎಂದು ಕೈ ಚೆಲ್ಲಿ ಕೂರುವ ಸಮಯದಲ್ಲಿ ಹೊಸ ವೆಂಚರ್‌ಗೆ ಕೈ ಹಾಕುವುದು ಸುಲಭದ ಮಾತಲ್ಲ. 1980ರಲ್ಲಿ ರಕ್ತದ ಕ್ಯಾನ್ಸರ್‌ಗೆ ತುತ್ತಾಗಿ ಡಿಸೆಂಬರ್ ೧೬ರಂದು ಇಲ್ಲಿನ ಎಲ್ಲಾ ಸಂಘರ್ಷಗಳಿಗೆ, ಸೋಲಿಗೆ, ಗೆಲುವಿಗೆ ಗುಡ್‌ಬೈ ಹೇಳಿ ಹೊರಡುತ್ತಾರೆ. ೯೦ ವರ್ಷದ ಅವರ ಜೀವನ ಕಥೆ ಸಾಮಾನ್ಯದಲ್ಲಿ ಸಾಮಾನ್ಯವಾಗಿ ಯಾರಿಗೂ ತಿಳಿಯದೆ ಹೋಗಿ ಬಿಡುತ್ತಿತ್ತು. ಅವರಲ್ಲಿ ನಿವೃತ್ತಿಯ ವಯಸ್ಸಿನಲ್ಲೂ ಇದ್ದ ಛಲ ಅವರನ್ನು ವಿಶ್ವದೆಡೆ ಮನೆಮಾತಾಗಿಸಿತು.