ಕೊರಗ ಕುಟುಂಬಗಳಿಗೆ ನೂರು ಸೂರು !
ಕೊಡುಗೈ ದಾನಿ, ಬಡವರ ಬಂಧು ಡಾ.ಹಾಲಾಡಿ ಶ್ರೀನಿವಾಸ ಶೆಟ್ಟರ ಅಬ್ಬರದ ಭಾಷಣಗಳಿಲ್ಲ, ರಾಜಕೀಯದ ಬಣ್ಣದ ಮಾತುಗಳಿಲ್ಲ. ಹರಿಯುವ ನದಿ ಹೇಗೆ ದಡದ ಗಿಡಮರಗಳನ್ನು ಪೋಷಿಸು ತ್ತದೆಯೋ, ಹಾಗೆಯೇ ಶೆಟ್ಟರ ಸೇವೆ ಸದ್ದಿಲ್ಲದೆ ಸಮಾಜದ ಕಟ್ಟಕಡೆಯ ಮನುಷ್ಯನನ್ನು ತಲುಪುತ್ತಿದೆ.
-
ಜಿತೇಂದ್ರ ಕುಂದೇಶ್ವರ
28 ಮನೆಗಳು ಪೂರ್ಣ: ಡಿ.25ರಂದು ಬಡ ಕುಟುಂಬಗಳಿಗೆ ಸಮರ್ಪಣೆ
ಕಡುಬಡವರಿಗೆ ಉಚಿತವಾಗಿ ಮನೆಕಟ್ಟಿಸಿಕೊಡುವ ಕೈಂಕರ್ಯದಲ್ಲಿ ತೊಡಗಿಕೊಂಡಿರುವ ಉದ್ಯಮಿ ಡಾ.ಎಚ್.ಎಸ್.ಶೆಟ್ಟಿ ಅವರು, 28 ಮನೆಗಳನ್ನು ಡಿ.25ರಂದು ಕೊರಗ ಸಮುದಾಯ ದವರಿಗೆ ಹಸ್ತಾಂತರಿಸಲಿದ್ದಾರೆ
ಕೊಡುಗೈ ದಾನಿ, ಬಡವರ ಬಂಧು ಡಾ.ಹಾಲಾಡಿ ಶ್ರೀನಿವಾಸ ಶೆಟ್ಟರ ಅಬ್ಬರದ ಭಾಷಣಗಳಿಲ್ಲ, ರಾಜಕೀಯದ ಬಣ್ಣದ ಮಾತುಗಳಿಲ್ಲ. ಹರಿಯುವ ನದಿ ಹೇಗೆ ದಡದ ಗಿಡಮರಗಳನ್ನು ಪೋಷಿಸು ತ್ತದೆಯೋ, ಹಾಗೆಯೇ ಶೆಟ್ಟರ ಸೇವೆ ಸದ್ದಿಲ್ಲದೆ ಸಮಾಜದ ಕಟ್ಟಕಡೆಯ ಮನುಷ್ಯನನ್ನು ತಲುಪು ತ್ತಿದೆ. ಒಂದು ಕಾಲದಲ್ಲಿ ಉದ್ಯಮ ಲೋಕದ ದಿಗ್ಗಜ ಧೀರೂಭಾಯಿ ಅಂಬಾನಿಯವರ ಜತೆ ಹೆಜ್ಜೆ ಹಾಕಿದವರು ಈ ಎಚ್.ಎಸ್. ಶೆಟ್ಟಿ. ಮುಂಬೈನ ಬಹ್ರೈನ್‌ನ ಉದ್ಯಮದವರೆಗೆ ಇವರು ಕಂಡ ಯಶಸ್ಸು ಅಪಾರ.
ಸಾಗರದ ನೀರು ಎಷ್ಟೇ ಇದ್ದರೂ ಅದು ಕುಡಿಯಲು ಯೋಗ್ಯವಾಗುವುದು ಮೋಡವಾಗಿ ಮಳೆ ಸುರಿದಾಗ ಮಾತ್ರ ಎನ್ನುವ ಸತ್ಯ ಇವರಿಗೆ ಬೇಗ ಅರಿವಾಯಿತು. ಪೇಜಾವರ ಶ್ರೀಗಳ ಮಾರ್ಗದರ್ಶನ ಇವರ ಪಾಲಿಗೆ ದಾರಿದೀಪವಾಯಿತು. ದುಡಿದು, ಗಳಿಸಿದ ಹಣ ಸದುಪಯೋಗವಾಗಬೇಕಾದರೆ, ಆ ಹಣವು ಬಡವರ ಕಣ್ಣೀರು ಒರೆಸುವ ಸಾಧನ ಆಗಬೇಕು ಎಂದು ನಿರ್ಧರಿಸಿದಾಗ ಅವರಿಗೆ ಹೊಳೆದದ್ದು ಕೊರಗ ಕುಟುಂಬಗಳ ಮನೆಗಳ ದುಸ್ಥಿತಿ.
ಇದನ್ನೂ ಓದಿ: Lokesh Kayarga Column: ಎಲ್ಲ ಡಿಗ್ರಿಗಳನ್ನು ಕಂಪ್ಯೂಟರ್ ನುಂಗಿ ಹಾಕಿತೇ ?
ಕಾಡಿನ ಉತ್ಪನ್ನಗಳೇ ಆಧಾರವಾಗಿದ್ದ ಕೊರಗ ಸಮುದಾಯವು ನಾಡಿಗೆ ಬಂದ ಬಳಿಕ ಬದುಕು ಗಾಳಿಯಲ್ಲಿನ ದೀಪದಂತೆ ತೋಯ್ದಾಡುತ್ತಿತ್ತು. ಈ ಸಮುದಾಯದವರಿಗೆ ಶೆಟ್ಟರು ಕೊಡುಗೆಯಾಗಿ ಮನೆ ಕಟ್ಟಿಸಿಕೊಟ್ಟರು; ಇಂದು ಅವರು ಕೇವಲ ಮನೆ ಕಟ್ಟಿಕೊಡುತ್ತಿಲ್ಲ, ಕುಸಿದು ಹೋಗಿದ್ದ ಅವರ ಆತ್ಮವಿಶ್ವಾಸಕ್ಕೆ ಬುನಾದಿ ಹಾಕುತ್ತಿದ್ದಾರೆ. ಈಗಾಗಲೇ, ಮೊದಲ ಹಂತದಲ್ಲಿ 14 ಮನೆಗಳು ನಿರ್ಮಿಸಿ, ಬಡ ಕೊರಗ ಕುಟುಂಬಗಳಿಗೆ ನೀಡಲಾಗಿದೆ.
ಎರಡನೇ ಹಂತದ ೨೮ ಮನೆಗಳು, ಇದೇ ಡಿ.25ರಂದು ಹಸ್ತಾಂತರವಾಗಲಿವೆ. ಶಾಲಾ ಮಕ್ಕಳ ಪಾಲಿನ ‘ವಿದ್ಯಾದಾತ’: ಹಸಿದ ಹೊಟ್ಟೆಗೆ ಅನ್ನ ಎಷ್ಟು ಮುಖ್ಯವೋ, ಬೆಳೆಯುವ ಮಗುವಿಗೆ ಅಕ್ಷರ ಅಷ್ಟೇ ಮುಖ್ಯ ಎಂಬ ಚಿಂತನೆಯಲ್ಲಿ ಕಳೆದ 17 ವರ್ಷಗಳಿಂದ ವಿದ್ಯಾರ್ಥಿಗಳ ಬದುಕಿಗೆ ನೆರವಾಗಿದ್ದಾರೆ. ಪ್ರತಿ ವರ್ಷ 41 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಇವರು ಸಮವಸ್ತ್ರ ವಿತರಿಸುತ್ತಿದ್ದಾರೆ.
ಸರಕಾರಿ ಶಾಲೆಯ ಮಕ್ಕಳಿಗೆ ಕಂಪ್ಯೂಟರ್ ಮತ್ತು ಸುಸಜ್ಜಿತ ಕೊಠಡಿಗಳನ್ನು ಒದಗಿಸುವ ಮೂಲಕ ಶೆಟ್ಟರು ಅವರ ಭವಿಷ್ಯಕ್ಕೆ ಬೆಳಕಾಗುತ್ತಿದ್ದಾರೆ. ಡಾ.ಎಚ್.ಶ್ರೀನಿವಾಸ ಶೆಟ್ಟರು ಯಶಸ್ವಿ ಉದ್ಯಮಿ. ಖಾದ್ಯ ತೈಲಗಳ ಬಹುಕೋಟಿ ಉದ್ಯಮ ಇವರ ಕೈಯಲ್ಲಿತ್ತು. ಆದರೆ ಉದ್ಯಮದಲ್ಲಿ ಲಾಭ ಗಳಿಸ ಬೇಕಾದರೆ ಕೆಮಿಕಲ್ ಬಳಸಲೇಬೇಕಿತ್ತು.
ಜನಸಾಮಾನ್ಯರ ಆರೋಗ್ಯ ಹಾಳುಮಾಡಿ ಲಾಭಗಳಿಸುವ ಅಗತ್ಯವಿಲ್ಲ ಎಂದು ಆ ಉದ್ಯಮವನ್ನೇ ಬಿಟ್ಟರು. ಈಗ ದುಡಿಮೆ ಕೇವಲ ದಾನಕ್ಕಾಗಿ ಎನ್ನುವ ನಿರ್ಧಾರಕ್ಕೆ ಡಾ.ಎಚ್.ಎಸ್.ಶೆಟ್ಟಿ ಬಂದಿ ದ್ದಾರೆ. “ಇನ್ನೂ ಹೆಚ್ಚು ದುಡಿಯಬೇಕಿತ್ತು, ಆಗ ಇನ್ನಷ್ಟು ದಾನ ಮಾಡಬಹುದಿತ್ತು" ಎಂದು ಎಚ್.ಎಸ್.ಶೆಟ್ಟಿ ಅವರು ಹೇಳುವಾಗ ಅಲ್ಲಿ ಅವರೊಳಗಿನ ಮಾನವೀಯತೆ ಎದ್ದು ಕಾಣುತ್ತದೆ.
“ಇದು ಕೇವಲ ಆರಂಭ. ನನ್ನ ಗುರಿ 100 ಕೊರಗ ಕುಟುಂಬಗಳಿಗೆ ಸೂರು ಒದಗಿಸುವುದು" ಎಂದು ಡಾ.ಶೆಟ್ಟಿಯವರು ಈಗಾಗಲೇ ಘೋಷಿಸಿದ್ದಾರೆ. ಇದು ಕೇವಲ ದಾನವಲ್ಲ, ಒಂದು ಸಮುದಾಯ ವನ್ನು ವ್ಯವಸ್ಥಿತವಾಗಿ ಮೇಲೆತ್ತುವ, ಸ್ವಾಭಿಮಾನದ ಬದುಕು ಕಟ್ಟಿಕೊಡುವ ನಿರಂತರ ಯಜ್ಞ.
ಬೆಂಗಳೂರು ಮೂಲದ ಮೈಸೂರು ಮರ್ಕೆಂಟೈಲ್ ಕಂಪನಿ ಲಿಮಿಟೆಡ್‌ನ ಸ್ಥಾಪಕ, ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಎಚ್.ಎಸ್. ಶೆಟ್ಟಿ ಸಮಾಜಮುಖಿ ಕೆಲಸಗಳಲ್ಲಿಯೇ ತೊಡಗಿಕೊಂಡಿ ದ್ದಾರೆ. ದ್ರವ ಸರಕು ಬಿಟುಮೆನ್ ನಿರ್ವಹಿಸುವುದಕ್ಕಾಗಿ ಕಾರವಾರ ಬಂದರಿನಲ್ಲಿ ದ್ರವ ಸರಕು ಸಂಗ್ರಹಣಾ ಟ್ಯಾಂಕ್ ಸೌಲಭ್ಯ ಸ್ಥಾಪಿಸಿದ ಭಾರತದ ಮೊದಲ ಉದ್ಯಮಿ.
2 ದಶಕಗಳ ಹಿಂದೆ ಮಂಗಳೂರು ಬಂದರಿನಲ್ಲಿ ಒಂದು ದೊಡ್ಡ ಖಾದ್ಯ ತೈಲ ಸಂಸ್ಕರಣಾಗಾರ ನಿರ್ಮಿಸಿದ ಚಾಣಾಕ್ಷ ಉದ್ಯಮಿ. ಡಾ.ಎಚ್.ಎಸ್.ಶೆಟ್ಟಿ ಚಿಕ್ಕಂದಿನಲ್ಲೇ ಮುಂಬೈ ಸೇರಿ ನಂತರ ಬಹ್ರೈನ್‌ಗೆ ತೆರಳಿ ಉದ್ಯಮದಲ್ಲಿ ತೊಡಗಿದರು. ವಾಪಸ್ ಬೆಂಗಳೂರಿಗೆ ಬಂದು ಮೈಸೂರು ಮರ್ಕೆಂ ಟೈಲ್ ಕಂಪನಿ (ಎಂಎಂಸಿಎಲ್) ಸ್ಥಾಪಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ‘ಅತ್ಯುತ್ತ ಮ ರಫ್ತುದಾರ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಉದ್ಯಮದಲ್ಲೇ ಸಂತಸ ಕಂಡು, ಇಂದು ಬಡವರಿಗೆ ದಾನ ನೀಡಲು ಮುಂದಾಗಿದ್ದಾರೆ.
ಮೊದಲ ಹಂತದಲ್ಲಿ ಉಡುಪಿ ಜಿಲ್ಲೆಯ ಹಾರ್ದಳ್ಳಿ ಮಂಡಲಿ ಗ್ರಾಮ ಪಂಚಾಯತ್‌ನ ಬಡ ಕೊರಗ ಕುಟುಂಬಗಳಿಗೆ 14 ಉಚಿತ ಮನೆಗಳನ್ನು ಈಗಾಗಲೇ ಹಸ್ತಾಂತರಿಸಲಾಗಿದೆ. 605 ಚದರ ಅಡಿ, ಎರಡು ಮಲಗುವ ಕೋಣೆ, ಹಾಲ್, ಅಡುಗೆಮನೆ ಮತ್ತು ನೀರಿನ ಟ್ಯಾಂಕ್ ಹೊಂದಿದ ಸ್ನಾನಗೃಹ ಇದೆ. ಪ್ರತಿ ಮನೆಯ ಸರಾಸರಿ ವೆಚ್ಚ ಸುಮಾರು 14 ಲಕ್ಷ ರು. ಎರಡನೆಯ ಹಂತ ಕುಂದಾಪುರದ ಉಳ್ಳೂರು ಗ್ರಾಮಕ್ಕೆ ವಿಸ್ತರಣೆಗೊಂಡಿದ್ದು, ಅಲ್ಲಿ 14 ಮನೆಗಳ ನಿರ್ಮಾಣವು 2.5 ಕೋಟಿ ರು. ಬಜೆಟ್ನಲ್ಲಿ ಪೂರ್ಣಗೊಂಡಿದೆ. ಇದೇ ಡಿ.25ರಂದು ಮನೆಗಳ ಹಸ್ತಾಂತರ.
*
ಹಿಂದೆ ನಾನು ದೇಣಿಗೆಗಳನ್ನು ಸೇವೆ ರೂಪದಲ್ಲಿ ಕೊಡುತ್ತಿದ್ದೆ; ಆದರೆ ಯಾವಾಗ ಇದನ್ನು ಧಾರ್ಮಿಕ ಶ್ರದ್ಧೆ ರೂಪದಲ್ಲಿ ದಾನ ಧರ್ಮ ಮಾಡಲು ಆರಂಭಿಸಿದೆನೋ ಆಗ ನೆಮ್ಮದಿ ಲಭಿಸುತ್ತಿದೆ. ಒಳ್ಳೆಯ ಕೆಲಸಗಳಿಗೆ ಇನ್ನಷ್ಟು ದಾನ ಧರ್ಮ ಮಾಡಬಹುದಿತ್ತು ಎಂಬ ಕಾರಣಕ್ಕೆ ಇನ್ನು ಹೆಚ್ಚು ದುಡಿಯಬೇಕಿತ್ತು ಎಂಬ ಭಾವ ಇದೆ.
- ಡಾ. ಎಚ್. ಎಸ್. ಶೆಟ್ಟಿ