SAFARI: ಸಫಾರಿ ನಿಷೇಧಕ್ಕೆ ಮುನ್ನ ಅಕ್ರಮ ಪ್ರವೇಶ ನಿಯಂತ್ರಿಸಿ !
ಸಫಾರಿ ನಿರ್ಬಂಧ ಹೇರಿರುವ ಪ್ರದೇಶಕ್ಕಿಂತ ಅರಣ್ಯ ಪ್ರದೇಶದೊಳಗೆ ಈ ರೀತಿ ಅಕ್ರಮ ಕಟ್ಟಡ ಗಳನ್ನು ನಿರ್ಮಿಸಲಾಗುತ್ತಿದೆ. ಆದ್ದರಿಂದ ಅರಣ್ಯ, ವನ್ಯಜೀವಿ ಗಳನ್ನು ರಕ್ಷಿಸಬೇಕು ಎನ್ನುವ ಆಲೋಚನೆ ಇದ್ದರೆ ಅರಣ್ಯ ಇಲಾಖೆ ಅಧಿಕಾರಿಗಳು ಸಫಾರಿಯನ್ನು ಸ್ಥಗಿತಗೊಳಿಸುವುದಕ್ಕಿಂತ ಮೊದಲು ಅರಣ್ಯ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಜಮೀನು ಮಾಡಿಕೊಂಡಿರುವವರು, ಎಲೆಕ್ಟ್ರಿಕ್ ಫೆನ್ಸಿಂಗ್ಗಳನ್ನು ಮಾಡಿಕೊಂಡಿರುವವರನ್ನು ಮಟ್ಟಹಾಕಬೇಕಿದೆ
-
ಪರಿಸರ ಸೂಕ್ಷ್ಮ ಪ್ರದೇಶದಲ್ಲಿಯೇ ಅಕ್ರಮ ಕಟ್ಟಡ ನಿರ್ಮಾಣ: ಅಧಿಕಾರಿಗಳ ಜಾಣ ಕುರುಡು
ಕರ್ನಾಟಕ ಪ್ರವಾಸೋದ್ಯಮಕ್ಕೆ ಕುತ್ತು ತರುವಂತೆ ಸಫಾರಿ ನಿರ್ಬಂಧಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳಿಗೆ, ಕಾಡಿನ ಪಕ್ಕದಲ್ಲಿಯೇ ಅವ್ಯಾಹತವಾಗಿ ನಡೆಯುತ್ತಿರುವ ಅನಧಿ ಕೃತ ಕಟ್ಟಡಗಳನ್ನು ನಿಯಂತ್ರಿಸುವ ವಿಷಯದಲ್ಲಿ ಮಾತ್ರ ‘ಜಾಣ ಮೌನ’ಕ್ಕೆ ಶರಣಾಗಿದ್ದಾ ರೆಯೇ ಎನ್ನುವ ಅನುಮಾನ ಶುರುವಾಗಿದೆ.
ವನ್ಯಜೀವಿ ಸಂಘರ್ಷಕ್ಕೂ, ಸಫಾರಿಗೂ ಯಾವುದೇ ಸಂಬಂಧವಿಲ್ಲದಿದ್ದರೂ ಕಳೆದ ಮೂರು ತಿಂಗಳಿನಿಂದ ಅರಣ್ಯ ಇಲಾಖೆ ಸಫಾರಿಗೆ ನಿರ್ಬಂಧ ಹೇರಿದೆ. ಇದರಿಂದ ನಿತ್ಯ ಲಕ್ಷಾಂತರ ರುಪಾಯಿ ನಷ್ಟವಾಗುವುದಷ್ಟೇ ಅಲ್ಲದೇ, ಸಾವಿರಾರು ಜನರ ಉದ್ಯೋಗ ಕಳೆದು ಹೋಗುವ ಆತಂಕವಿದೆ. ಸಫಾರಿ ಆರಂಭಿಸಬೇಕು ಎನ್ನುವ ತೀರ್ಮಾನ ಮಾಡಿದ್ದರೂ, ಯಾವಾಗ ಎಂದು ನಿರ್ಧರಿಸದೇ ಸಮಯ ವ್ಯರ್ಥ ಮಾಡುತ್ತಿದ್ದಾರೆ.
ಕೇವಲ ಅಕ್ರಮ ಕಟ್ಟಡ ನಿರ್ಮಾಣವಷ್ಟೇ ಅಲ್ಲದೇ, ಬಂಡೀಪುರ, ನಾಗರಹೊಳೆ ಸೇರಿದಂತೆ ರಾಜ್ಯದ ಸಂರಕ್ಷಿತ, ಅಭಯಾರಣ್ಯಗಳಲ್ಲಿ ಅಕ್ರಮ ಸಂಚಾರವೂ ಭಾರಿ ಪ್ರಮಾಣದಲ್ಲಿ ನಡೆಯುತ್ತಿದೆ ಎನ್ನುವ ಆರೋಪವಿದೆ. ಅಕ್ರಮ ಪ್ರವೇಶದಿಂದ ಅರಣ್ಯಕ್ಕೆ ಧಕ್ಕೆಯಾಗುತ್ತಿದೆ. ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕಿದೆ. ಅದನ್ನು ಮಾಡುವ ಬದಲು ಇಡೀ ಕಾಡಿನ ಶೇ.6-7ರಷ್ಟು ಪ್ರದೇಶದಲ್ಲಿ ಮಾತ್ರ ನಡೆಯುತ್ತಿರುವ ಸಫಾರಿ ನಿರ್ಬಂಧಿಸಿರುವುದು ಸರಿಯಲ್ಲ ಎನ್ನುವ ಪ್ರಶ್ನೆಗಳು ಶುರುವಾಗಿದೆ.
ಇದನ್ನೂ ಓದಿ: Safari Ban: ಇಲ್ಲಿ ಸಫಾರಿಗೆ ನಿರ್ಬಂಧ: ರಾಜ್ಯದ ಎಲ್ಲೆಲ್ಲೋ ಸಂಕಷ್ಟ
ಆದರೆ ಅರಣ್ಯವನ್ನು ರಕ್ಷಿಸಬೇಕಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಅರಣ್ಯ ರಕ್ಷಿಸುವ ವಿಷಯದಲ್ಲಿ ಮೈಮರೆತಿದ್ದಾರೆಯೇ ಎನ್ನುವ ಅನುಮಾನ ಶುರುವಾಗಿದೆ. ಬಂಡೀಪುರದ ಸುತ್ತಮುತ್ತಲಿನ ಭಾಗದಲ್ಲಿ ಅನೇಕ ಅನಧಿಕೃತ ಕಟ್ಟಡಗಳ ನಿರ್ಮಾಣ, ಫಾರ್ಮ್‌ಹೌಸ್ ಗಳು ನಿರ್ಮಾಣವಾಗುತ್ತಿವೆ.
ಇನ್ನು ಕೆಲವರು ಕಬಿನಿಗೆ ಹೊಂದಿಕೊಂಡಂತೆಯೇ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ. ಈ ರೀತಿ ಅರಣ್ಯದೊಳಗೆ ಅತಿಕ್ರಮಣ ಪ್ರವೇಶ ಮಾಡುತ್ತಿದ್ದರೂ ಯಾವುದೇ ಕ್ರಮವಹಿಸದೇ ‘ಕಣ್ಣು’ ಮುಚ್ಚಿ ಕುಳಿತಿದ್ದಾರೆ. ಅಧಿಕಾರಿಗಳು, ಅರ್ಥವಿಲ್ಲದ ತೀರ್ಮಾನಗಳನ್ನು ಕೈಗೊಳ್ಳುವ ಬದಲು, ಅರಣ್ಯವನ್ನು ಸಂರಕ್ಷಿಸುವ ವಿಷಯದಲ್ಲಿ ತೀರ್ಮಾನಗಳನ್ನು ಕೈಗೊಳ್ಳಬೇಕಿದೆ. ನಾಗರಹೊಳೆಗೆ ಹೋಲಿಸಿದರೆ, ಬಂಡೀಪುರ ಭಾಗದಲ್ಲಿ ವನ್ಯಜೀವಿಗಳು ಸಂಚರಿಸುವ ಪ್ರದೇಶ ಗಳಲ್ಲಿಯೇ ಜಮೀನು, ಫಾರ್ಮ್ ಹೌಸ್, ತೋಟಗಳನ್ನು ಅನೇಕರು ಮಾಡಿಕೊಂಡಿದ್ದಾರೆ.
ಹಾಗೇ ನೋಡಿದರೆ, ಸಫಾರಿ ನಿರ್ಬಂಧ ಹೇರಿರುವ ಪ್ರದೇಶಕ್ಕಿಂತ ಅರಣ್ಯ ಪ್ರದೇಶದೊಳಗೆ ಈ ರೀತಿ ಅಕ್ರಮ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಆದ್ದರಿಂದ ಅರಣ್ಯ, ವನ್ಯಜೀವಿ ಗಳನ್ನು ರಕ್ಷಿಸಬೇಕು ಎನ್ನುವ ಆಲೋಚನೆ ಇದ್ದರೆ ಅರಣ್ಯ ಇಲಾಖೆ ಅಧಿಕಾರಿಗಳು ಸಫಾರಿಯನ್ನು ಸ್ಥಗಿತಗೊಳಿಸುವುದಕ್ಕಿಂತ ಮೊದಲು ಅರಣ್ಯ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಜಮೀನು ಮಾಡಿಕೊಂಡಿರುವವರು, ಎಲೆಕ್ಟ್ರಿಕ್ ಫೆನ್ಸಿಂಗ್ಗಳನ್ನು ಮಾಡಿ ಕೊಂಡಿರುವವರನ್ನು ಮಟ್ಟಹಾಕಬೇಕಿದೆ ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.
ವನ್ಯಜೀವಿ-ಮನುಷ್ಯರ ನಡುವಿನ ಸಂಘರ್ಷ ತಗ್ಗಿಸಿ
ಇತ್ತೀಚಿನ ದಿನದಲ್ಲಿ ವನ್ಯಜೀವಿ, ಮನುಷ್ಯರ ನಡುವಿನ ಸಂಘರ್ಷ ಹೆಚ್ಚಾಗಲು ಸ್ಥಳೀಯ ಮಟ್ಟದಲ್ಲಿ ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎನ್ನಲಾಗುತ್ತಿದೆ. ಪರಿಸರ ಸೂಕ್ಷ್ಮ ಪ್ರದೇಶವನ್ನು ಅತಿಕ್ರಮ ಪ್ರವೇಶ ಮಾಡಿದರೂ, ‘ಪ್ರಭಾವಿ’ ಗಳು ಎನ್ನುವ ಕಾರಣಕ್ಕೆ ಬಹುತೇಕ ಅಧಿಕಾರಿಗಳು ಮೌನಕ್ಕೆ ಶರಣಾಗುತ್ತಿದ್ದಾರೆ. ವನ್ಯಜೀವಿಗಳು ಸಂಚರಿಸುವ ಭಾಗದಲ್ಲಿ ಕಟ್ಟಡಗಳನ್ನು ಕಟ್ಟುವುದಕ್ಕೆ ಬಿಟ್ಟು, ಈಗ ಸಫಾರಿಯನ್ನು ನಿರ್ಬಂಧಿಸುವ ಅವೈಜ್ಞಾನಿಕ ತೀರ್ಮಾನ ಕೈಗೊಳ್ಳುವ ಬದಲು, ಮೊದಲೇ ಅಕ್ರಮ ಪ್ರವೇಶವನ್ನು ತಡೆಗಟ್ಟಿದ್ದರೆ ಇಂದು ಈ ಸಮಸ್ಯೆ ಉದ್ಭವಿಸುತ್ತಲೇ ಇರಲಿಲ್ಲ ಎನ್ನುವುದು ಬಹುತೇಕ ಅಭಿಪ್ರಾಯವಾಗಿದೆ.
ಅರಣ್ಯದೊಳಗೆ ಮೇವು
ಅಭಯಾರಣ್ಯದೊಳಗೆ ಜಾನುವಾರುಗಳಿಗೆ ಮೇಯಿಸಲು ಬಿಡಬಾರದು ಎನ್ನುವ ಸ್ಪಷ್ಟ ಆದೇಶವಿದೆ. ಅಭಯಾರಣ್ಯದ ಬದಲು ಗೋಮಾಳಗಳಲ್ಲಿ ಜಾನುವಾರುಗಳಿಗೆ ಮೇಯಲು ಅವಕಾಶ ನೀಡಬೇಕು. ಆದರೆ ಸ್ಥಳೀಯರ ಒತ್ತಡಕ್ಕೆ ಮಣಿದು, ಅರಣ್ಯದೊಳಗೆ ಜಾನುವಾರು ಗಳಿಗೆ ಮೇಯಲು ಅವಕಾಶ ನೀಡಲಾಗುತ್ತಿದೆ. ಇದರಿಂದ ಹುಲಿ, ಚಿರತೆ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ. ಇದನ್ನು ತಡೆಯಲು ಹೋಗಿಯೂ ಅನೇಕರು ಜೀವ ಕಳೆದು ಕೊಂಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು, ಸಫಾರಿ ನಿರ್ಬಂಧದಂತಹ ಅವೈಜ್ಞಾನಿಕ ತೀರ್ಮಾನ ಕೈಗೊಳ್ಳುವ ಬದಲು, ಅಭಯಾರಣ್ಯದೊಳಗೆ ಹೋಗದಂತೆ ತಡೆಯೊಡ್ಡಿದ್ದರೆ ವನ್ಯಜೀವಿ- ಮಾನವ ಸಂಘರ್ಷ ಅರ್ಧ ತಗ್ಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.