ಊರು ಬಿಡಬೇಡಿ, ನಿಮ್ಮೂರಲ್ಲೇ ಕೆಲಸ ನೀಡುತ್ತೇವೆ
ಒಂದೆಡೆ ಬರದ ಪರಿಣಾಮ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದರೆ, ಮತ್ತೊಂದೆಡೆ ಗ್ರಾಮೀಣ ಭಾಗದಲ್ಲಿ ಕೂಲಿ ಕೆಲಸಗಳೂ ಸಿಗುತ್ತಿಲ್ಲ. ಹೀಗಾಗಿ ಜೀವನ ನಿರ್ವಹಣೆಗಾಗಿ ಮಹಿಳೆಯರು, ಮಕ್ಕಳು ಸೇರಿದಂತೆ ಇಡೀ ಕುಟುಂಬವೇ ಊರು ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪೋಷಕರೊಂದಿಗೆ ಮಕ್ಕಳು ಕೂಡ ವಲಸೆ ಹೋಗುತ್ತಿರುವುದರಿಂದ ಅವರ ಶಿಕ್ಷಣ ಮೊಟಕುಗೊಳ್ಳುವ ಆತಂಕ ಎದುರಾಗಿದೆ.
-
ವೀರೇಶ ಎಸ್. ಕೆಂಭಾವಿ
ಬರದ ಛಾಯೆ, ಕೃಷಿ ಚಟುವಟಿಕೆಗಳ ಕೊರತೆ, ಗ್ರಾಮೀಣ ಭಾಗದಲ್ಲಿ ಕೂಲಿ ಕೆಲಸವೂ ಇಲ್ಲ. ಕೈಗೆ ಕಾಯಕವಿಲ್ಲದೆ ಹೊಟ್ಟೆಪಾಡಿಗಾಗಿ ಇಡೀ ಕುಟುಂಬ ಸಮೇತ ಊರು ತೊರೆಯುವ ಅನಿವಾರ್ಯತೆಗೆ ಸಿಲುಕಿರುವ ಕಾರ್ಮಿಕ ಕುಟುಂಬಗಳು! ಕೆಲಸ ಅರಸಿ ಬೆಂಗಳೂರು, ಮುಂಬೈ ಸೇರಿದಂತೆ ಮಹಾ ನಗರಗಳತ್ತ ಗುಳೆ ಹೊರಟಿರುವ ಬಡ ಕುಟುಂಬಗಳ ದೃಶ್ಯ ಜಿಲ್ಲೆಯಲ್ಲಿ ಬಸ್, ರೈಲು ನಿಲ್ದಾಣದಲ್ಲಿ ದೃಶ್ಯ ಸರ್ವೇ ಸಾಮಾನ್ಯವಾಗಿದೆ.
ಒಂದೆಡೆ ಬರದ ಪರಿಣಾಮ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದರೆ, ಮತ್ತೊಂದೆಡೆ ಗ್ರಾಮೀಣ ಭಾಗದಲ್ಲಿ ಕೂಲಿ ಕೆಲಸಗಳೂ ಸಿಗುತ್ತಿಲ್ಲ. ಹೀಗಾಗಿ ಜೀವನ ನಿರ್ವಹಣೆಗಾಗಿ ಮಹಿಳೆಯರು, ಮಕ್ಕಳು ಸೇರಿದಂತೆ ಇಡೀ ಕುಟುಂಬವೇ ಊರು ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪೋಷಕರೊಂದಿಗೆ ಮಕ್ಕಳು ಕೂಡ ವಲಸೆ ಹೋಗುತ್ತಿರುವುದರಿಂದ ಅವರ ಶಿಕ್ಷಣ ಮೊಟಕುಗೊಳ್ಳುವ ಆತಂಕ ಎದುರಾಗಿದೆ. ಈ ಗಂಭೀರ ಪರಿಸ್ಥಿತಿಯನ್ನು ಮನಗಂಡ ಜಿಲ್ಲಾ ಪಂಚಾಯಿತಿ, ಕಾರ್ಮಿಕರ ವಲಸೆ ತಡೆದು ಗ್ರಾಮೀಣ ಪ್ರದೇಶದಲ್ಲಿಯೇ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ವಿಶೇಷ ಜಾಗೃತಿ ಅಭಿಯಾನಕ್ಕೆ ಮುಂದಾಗಿದೆ.
ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಬಸವರಾಜ ಶರಬೈ ಅವರ ನೇತೃತ್ವದ ಅಧಿಕಾರಿಗಳ ತಂಡ ಯಾದಗಿರಿ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ, ಬೆಂಗಳೂರು ಹಾಗೂ ಮುಂಬೈ ಸೇರಿದಂತೆ ವಿವಿಧ ನಗರಗಳಿಗೆ ತೆರಳಲು ಸಿದ್ಧರಾಗಿದ್ದ ಕಾರ್ಮಿಕ ಕುಟುಂಬಗಳನ್ನು ಭೇಟಿಯಾಗಿ ಮನವೊಲಿಸಿತು. ಊರು ಬಿಟ್ಟು ಹೋಗುವ ಬದಲು ಸರಕಾರದ ಉದ್ಯೋಗ ಖಾತರಿ ಯೋಜನೆಯಡಿ ಸ್ಥಳೀಯವಾಗಿಯೇ ಕೆಲಸ ಪಡೆದುಕೊಳ್ಳುವಂತೆ ತಿಳಿಸಿತು.
ಇದನ್ನೂ ಓದಿ: Yadgir News: ಚಾಕೋಲೆಟ್ ಆಮಿಷವೊಡ್ಡಿ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಕೇಸ್ ದಾಖಲು
ಊರಲ್ಲೇ ಕೆಲಸ, ಕುಟುಂಬದೊಂದಿಗೆ ಬದುಕು: ವಿಬಿ-ಜಿ ರಾಮ್-ಜಿ ಯೋಜನೆಯಡಿ ಅರ್ಹ ಕಾರ್ಮಿಕರಿಗೆ 125 ಮಾನವ ದಿನಗಳ ಉದ್ಯೋಗ ಹಾಗೂ ಪ್ರತಿದಿನ 382 ರು. ಕೂಲಿ ಪಡೆಯುವ ಅವಕಾಶವಿದೆ. ಗ್ರಾಮೀಣ ಪ್ರದೇಶದಲ್ಲಿ ವೈಯಕ್ತಿಕ ಕಾಮಗಾರಿಗಳು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಮೂಲಕ ಉದ್ಯೋಗ ಒದಗಿಸಲಾಗುತ್ತಿದೆ. ಈ ಸೌಲಭ್ಯಗಳನ್ನು ಬಳಸಿಕೊಂಡು ಸ್ವಗ್ರಾಮದಲ್ಲಿಯೇ ದುಡಿಯುವಂತೆ ಅಧಿಕಾರಿಗಳು ಕಾರ್ಮಿಕರಿಗೆ ಮನವರಿಕೆ ಮಾಡಿದರು.
‘ಕೆಲಸಕ್ಕಾಗಿ ನಿಮ್ಮ ಊರು, ಮನೆ ಬಿಟ್ಟು ದೂರದ ನಗರಗಳಿಗೆ ಹೋಗಬೇಡಿ. ನಿಮ್ಮ ಗ್ರಾಮದಲ್ಲಿ ಯೇ ಉದ್ಯೋಗ ಕಲ್ಪಿಸುವ ವ್ಯವಸ್ಥೆಯಿದೆ. ಸರಕಾರದ ಯೋಜನೆಯಡಿ ಕೆಲಸ ಪಡೆದು ಕುಟುಂಬ ದೊಂದಿಗೆ ಊರಲ್ಲಿಯೇ ನೆಮ್ಮದಿಯ ಜೀವನ ನಡೆಸಿ. ಮುಖ್ಯವಾಗಿ ಮಕ್ಕಳ ಶಿಕ್ಷಣ ಮೊಟಕುಗೊಳಿಸ ಬೇಡಿ’ ಎಂದು ಅಧಿಕಾರಿಗಳು ಮನವಿ ಮಾಡಿದರು.
ಅಧಿಕಾರಿಗಳ ಮನವಿಗೆ ಸ್ಪಂದಿಸಿದ ಕೆಲವು ಮಹಿಳಾ ಕಾರ್ಮಿಕರು, ಊರಲ್ಲಿಯೇ ನಿರಂತರವಾಗಿ ಕೆಲಸ ನೀಡಿದರೆ ಬೇರೆ ನಗರಗಳಿಗೆ ವಲಸೆ ಹೋಗದೆ ಇಲ್ಲಿಯೇ ಕೂಲಿ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
![]()
ಕಾರ್ಮಿಕರು ಉದ್ಯೋಗಕ್ಕಾಗಿ ತಮ್ಮ ಊರು ಬಿಟ್ಟು ದೂರದ ನಗರಗಳಿಗೆ ವಲಸೆ ಹೋಗಬಾರದು. ಸರಕಾರದ ವಿಬಿ-ಜಿ ರಾಮ್-ಜಿ ಯೋಜನೆಯಡಿ 125 ಮಾನವ ದಿನಗಳ ಉದ್ಯೋಗ ಹಾಗೂ ಪ್ರತಿದಿನ 382 ರು.ಕೂಲಿ ಪಡೆಯುವ ಅವಕಾಶವಿದೆ. ಗ್ರಾಮದಲ್ಲಿಯೇ ವಿವಿಧ ವೈಯಕ್ತಿಕ ಹಾಗೂ ಅಭಿವೃದ್ಧಿ ಕಾಮಗಾರಿಗಳಲ್ಲಿ ಕೆಲಸ ಒದಗಿಸಲಾಗುತ್ತಿದೆ. ಈ ಸೌಲಭ್ಯಗಳನ್ನು ಬಳಸಿಕೊಂಡು ಊರಲ್ಲಿಯೇ ದುಡಿಯಬೇಕು. ನೀವು ಊರು ಬಿಟ್ಟರೆ ನಿಮ್ಮ ಮಕ್ಕಳ ಶಿಕ್ಷಣ ಮತ್ತು ಭವಿಷ್ಯದ ಮೇಲೂ ಪರಿಣಾಮ ಬೀರುತ್ತದೆ.
-ಬಸವರಾಜ ಶರಬೈ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ
![]()
ಬರಗಾಲದಿಂದ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದು, ಗ್ರಾಮೀಣ ಕಾರ್ಮಿಕರಿಗೆ ಉದ್ಯೋಗ ವಿಲ್ಲದೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರ್ಮಿಕರು ಊರು ಬಿಟ್ಟು ಹೋಗದಂತೆ ಸರಕಾರ ಹಾಗೂ ಜಿಲ್ಲಾಡಳಿತ ಗ್ರಾಮದಲ್ಲಿಯೇ ನಿರಂತರವಾಗಿ ಕೆಲಸ ಒದಗಿಸಬೇಕು.
-ಎಚ್.ಆರ್. ಬಡಿಗೇರ, ರೈತ ಸೇನೆ ರಾಜ್ಯ ಕಾರ್ಯದರ್ಶಿ