ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸರ್ವಪಕ್ಷ ಸಭೆಗೆ ತಜ್ಞರ ಒತ್ತಾಯ

ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡಿನ ಟಿವಿಕೆ ಸರ್ಕಾರ ವಿಧಾನಸಭೆಯಲ್ಲಿ ಸರ್ವಾನು ಮತದ ನಿರ್ಣಯವನ್ನು ಮೇ ತಿಂಗಳ ತೆಗೆದುಕೊಂಡಿತ್ತು. ಅದರೆ, ಈ ನಿರ್ಣಯ ಹಾಗೂ ಕೇಂದ್ರದ ಮುಂದೆ ನ್ಯಾಯಾಧೀಕರಣದ ಬೇಡಿಕೆ ಇಟ್ಟಿರುವ ವಿಚಾರಕ್ಕೆ ಸಂಬಂಧಿಸಿ ಕರ್ನಾಟಕ ಸರಕಾರ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ

ಸರ್ವಪಕ್ಷ ಸಭೆಗೆ ತಜ್ಞರ ಒತ್ತಾಯ

-

ಪೆನ್ನಾರ್ ಮಾದರಿಯಲ್ಲಿ ಮೇಕೆದಾಟು ನ್ಯಾಯಾಧೀಕರಣ ರಚನೆಗೆ ತಮಿಳುನಾಡು ಪಟ್ಟು

ರಾಘವ ಶರ್ಮ ನಿಡ್ಲೆ ದೆಹಲಿ

ಕರ್ನಾಟಕದ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆಗೆ ತಡೆ ಒಡ್ಡಲೆಂದೇ ತಮಿಳುನಾಡು ಸರಕಾರ 2ನೇ ಕಾವೇರಿ ನ್ಯಾಯಾಧೀಕರಣ ರಚನೆಗೆ ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಇದು ರಾಜ್ಯಕ್ಕೆ ಹೊಸ ತಲೆನೋವಾಗಿ ಪರಿಣಮಿಸುತ್ತಿದೆ. ಪೆನ್ನಾರ್ ನದಿ ನೀರು ವ್ಯಾಜ್ಯದ ವಿಷಯದಲ್ಲಿ ನ್ಯಾಯಾಧೀಕರಣ ರಚನೆ ಬೇಡ ಎಂದು ಎಷ್ಟೇ ಪ್ರತಿಪಾದಿಸಿದ್ದರೂ ತಮಿಳುನಾಡು ಅಸಮ್ಮತಿ- ಅಸಹಕಾರದಿಂದಾಗಿ ಕೇಂದ್ರ ಸರಕಾರದ ಅಭಿಪ್ರಾಯ ಪಡೆದು ನ್ಯಾಯಾಧೀಕರಣ ರಚನೆಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ಈಗ ಮೇಕೆದಾಟು ವಿಷಯದಲ್ಲೂ ಇಂಥದ್ದೇ ಪರಿಸ್ಥಿತಿ ತಲೆದೋರುವ ಅಪಾಯವಿದೆ.

ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಸರಕಾರ ತಕ್ಷಣವೇ ಎಚ್ಚೆತ್ತುಕೊಂಡು ಕೇಂದ್ರ ಸರಕಾರ ಮೇಲೆ ಒತ್ತಡ ಹೇರುವುದು ಅನಿವಾರ್ಯ ವಾಗಲಿದೆ. ಕೇಂದ್ರದಲ್ಲಿರುವ ರಾಜ್ಯದ ಕೇಂದ್ರ ಸಚಿವರು, ಸರ್ವ ಪಕ್ಷಗಳ ಸಂಸದರು ಒಗ್ಗಟ್ಟಿನಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಜಲಶಕ್ತಿ ಇಲಾಖೆ ಸಚಿವರ ಮೇಲೆ ಒತ್ತಡ ಹೇರುವ ಕಾರ್ಯವನ್ನು ತುರ್ತಾಗಿ ಮಾಡಬೇಕಿದೆ ಎಂದು ರಾಜ್ಯದ ನೀರಾವರಿ ತಜ್ಞರು ಎಚ್ಚರಿಸಿದ್ದಾರೆ.

ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡಿನ ಟಿವಿಕೆ ಸರ್ಕಾರ ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯವನ್ನು ಮೇ ತಿಂಗಳ ತೆಗೆದುಕೊಂಡಿತ್ತು. ಅದರೆ, ಈ ನಿರ್ಣಯ ಹಾಗೂ ಕೇಂದ್ರದ ಮುಂದೆ ನ್ಯಾಯಾಧೀಕರಣದ ಬೇಡಿಕೆ ಇಟ್ಟಿರುವ ವಿಚಾರಕ್ಕೆ ಸಂಬಂಧಿಸಿ ಕರ್ನಾಟಕ ಸರಕಾರ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮೇಕೆದಾಟು ಯೋಜನೆ ನಮ್ಮ ಹಕ್ಕು ಎಂದು ಪ್ರತಿಪಾದಿಸಿ ಕರ್ನಾಟಕ ವಿಧಾನಸಭೆಯಲ್ಲೂ ಸರ್ವಾನುಮತದ ನಿರ್ಣಯ ತೆಗೆದುಕೊಳ್ಳಲು ಸಿಎಂ ಶಿವಕುಮಾರ್ ಮುಂದಾಗಬೇಕು ಎಂಬ ಮಾತುಗಳು ಜಲತಜ್ಞರು, ಹೋರಾಟಗಾರರ ವಲಯದಲ್ಲಿ ಕೇಳಿಬರುತ್ತಿದೆ. ನಿರ್ಣಯ ಮಂಡನೆ ಮಾಡುವುದರಿಂದ ಕಾನೂನಾತ್ಮಕ ಲಾಭ ಇಲ್ಲದಿದ್ದರೂ, ವಿರೋಧವನ್ನು ಬಲವಾಗಿ ಮಂಡಿಸುವ ಸಲುವಾಗಿ ಇಂಥಾ ಕಾರ್ಯತಂತ್ರಗಳನ್ನು ಮಾಡುವುದು ಅನಿವಾರ್ಯ. ಮೇಕೆದಾಟು ಸಿಎಂ ಶಿವಕುಮಾರ್ ಅವರ ಮಹತ್ವಕಾಂಕ್ಷಿ ಯೋಜನೆ ಆಗಿರುವುದರಿಂದ ಅವರ ಮುಂದಿನ ನಡೆ ಕುತೂಹಲ ಕೆರಳಿಸಿದೆ.

ಸರ್ವಪಕ್ಷಗಳ ಸಭೆ ಕರೆಯುವರೇ ಸಿಎಂ?: ಸಾಮಾನ್ಯವಾಗಿ ಜಲ ಬಿಕ್ಕಟ್ಟು ಎದುರಾದ ಸಂದರ್ಭ ದಲ್ಲಿ ಮುಖ್ಯಮಂತ್ರಿಗಳು ಎಲ್ಲಾ ಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಹಾಗೂ ಒಗ್ಗಟ್ಟಿನ ಧ್ವನಿಯನ್ನು ದೆಹಲಿಗೆ ಮುಟ್ಟಿಸುವ ಉದ್ದೇಶಕ್ಕಾಗಿಯೇ ಸರ್ವಪಕ್ಷಗಳ ಸಭೆಯನ್ನು ಕರೆಯುತ್ತಿದ್ದರು. ಮೇಕೆದಾಟು ನ್ಯಾಯಾಧೀಕರಣಕ್ಕಾಗಿ ತಮಿಳುನಾಡು ಒತ್ತಡ ಹೇರಿರುವ ಹಿನ್ನೆಲೆ ಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕೂಡ ರೈತ ನಾಯಕರನ್ನೂ ಸೇರಿಸಿಕೊಂಡ ಸರ್ವಪಕ್ಷಗಳ ಸಭೆ ಕರೆಯುವರೇ ಎಂಬ ನಿರೀಕ್ಷೆ ನೀರಾವರಿ ತಜ್ಞರಲ್ಲಿದೆ.

ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು 2018ರಲ್ಲಿ ಸಲ್ಲಿಸಿದ್ದ ತಕರಾರು ಅರ್ಜಿಯನ್ನು 2025ರಲ್ಲಿ ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಯೋಜನೆಯ ಪರಿಷ್ಕೃತ ಡಿಪಿಆರ್ ಸಲ್ಲಿಸಲು ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ಅವಕಾಶ ಮಾಡಿಕೊಟ್ಟಿದೆ. ಇದಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸಲು ತಮಿಳುನಾಡಿಗೆ ಅವಕಾಶವಿರುವಾಗ, ಹೊಸ ನ್ಯಾಯಾಧೀಕರಣದ ರಚನೆಯ ಪ್ರಶ್ನೆ ಎದುರಾಗದು ಎಂಬುದನ್ನು ರಾಜ್ಯ ಸರಕಾರ ಕೇಂದ್ರಕ್ಕೆ ಮನದಟ್ಟು ಮಾಡಬೇಕಿದೆ.

ಕೇಂದ್ರ ಸಚಿವರದ್ದೂ ಜವಾಬ್ದಾರಿ: ಕೇಂದ್ರದಲ್ಲಿ ಬಿಜೆಪಿಯ ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ ಹಾಗೂ ಜೆಡಿಎಸ್‌ನ ಎಚ್‌ಡಿ ಕುಮಾರಸ್ವಾಮಿ ಅವರು ಮಂತ್ರಿ ಗಳಾಗಿದ್ದು, ಕೇಂದ್ರ ಸರಕಾರದ ಮೇಲೆ ಹೆಚ್ಚಿನ ಪ್ರಭಾವ ಬೀರಬೇಕಿದೆ. ನ್ಯಾಯಾಧೀಕರಣ ರಚನೆಯಾದರೆ ಮೇಕೆದಾಟು ಯೋಜನೆ ಮತ್ತಷ್ಟು ವರ್ಷಗಳ ಕಾಲ ವಿಳಂಬವಾಗುವುದರ ಜತೆಗೆ ವಿದ್ಯುತ್ ಉತ್ಪಾದನೆ ಹಾಗೂ ಹೆಚ್ಚುವರಿ ನೀರು ಸಂಗ್ರಹಿಸಬೇಕೆಂಬ ಕರ್ನಾಟಕದ ಉದ್ದೇಶ ಸಾಧನೆಯೂ ಹಳ್ಳ ಹಿಡಿಯುತ್ತದೆ. ಹಿಂದೆ ಕಾವೇರಿ ವಿಷಯ ದಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಮತ್ತು ಮಾಜಿ ಪ್ರಧಾನಿ ದೇವೇಗೌಡರ ನಡುವೆ ಇದ್ದ ಒಗ್ಗಟ್ಟನ್ನು ಇಲ್ಲಿ ನೆನಪಿಸಿಕೊಳ್ಳ ಬಹುದು.

ಬಿಡದಿ ಬಡಿದಾಟ ಬದಿಗಿರಲಿ: ಬಿಡದಿ ಟೌನ್‌ಶಿಪ್ ಯೋಜನೆ ಸಿಎಂ ಡಿ.ಕೆ. ಶಿವಕುಮಾರ್ ಮತ್ತು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ನಡುವಿನ ರಾಜಕೀಯ ಜಟಾಪಟಿಗೆ ಕಾರಣವಾಗಿದ್ದರೂ, ಕಾವೇರಿ-ಮೇಕೆದಾಟು ವಿಷಯದಲ್ಲಿ ಅವರಿಬ್ಬರು ಒಗ್ಗಟ್ಟು ಪ್ರದರ್ಶಿಸುವುದು ಮುಖ್ಯವಾಗಲಿದೆ. ಇಬ್ಬರು ನಾಯಕರು ಕಾವೇರಿ ಕಣಿವೆ ಭಾಗದವರಾಗಿರುವುದರಿಂದ ಈ ವಿಷಯದಲ್ಲಿ ಒಗ್ಗಟ್ಟಿನಿಂದಿ ದ್ದರಷ್ಟೇ ನ್ಯಾಯಾಧೀಕರಣ ರಚನೆಯ ತೂಗುಕತ್ತಿಯಿಂದ ಪಾರಾಗಬಹುದು ಎಂದು ತಜ್ಞರು ಕಿವಿಮಾತು ಹೇಳಿದ್ದಾರೆ.

ಒಗ್ಗಟ್ಟಿನ ವಿಷಯದಲ್ಲಿ ತಮಿಳುನಾಡಿನ ಪ್ರಾದೇಶಿಕ ಪಕ್ಷಗಳೇ ನಮಗೆ ಮಾದರಿಯಾಗಬೇಕು. ಡಿಎಂಕೆ, ಎಐಎಡಿಎಂಕೆ, ಕಾಂಗ್ರೆಸ್ ಹಾಗೂ ಈಗಿನ ಟಿವಿಕೆ ಸೇರಿ ಎಲ್ಲರೂ ಒಂದೇ ಧ್ವನಿಯಿಂದ ವಿಧಾನಸಭೆಯಲ್ಲಿ ಸರ್ವಾನುಮತದಿಂದ ವಿರೋಧಿಸಿ ನಿರ್ಣಯ ಅಂಗೀಕರಿಸಿರುವುದೇ ಇದಕ್ಕೆ ನಿದರ್ಶನ. ಕರ್ನಾಟಕ ಸರಕಾರ ಹಾಗೂ ರಾಜಕೀಯ ಪಕ್ಷಗಳು ಈಗಲಾದರೂ ನಿದ್ದೆಯಿಂದ ಎದ್ದೇಳಬೇಕಿದೆ ಎಂದು ನೀರಾವರಿ ತಜ್ಞರು ಆಗ್ರಹಿಸಿದ್ದಾರೆ.

ರಹಸ್ಯ ಸರ್ವೇಧಿಕಾರ : ತ.ನಾ ಆರೋಪ ರಾಮನಗರ: ಮೇಕೆದಾಟು ಸಮೀಪ ಉದ್ದೇಶಿತ ಯೋಜನಾ ಸ್ಥಳಕ್ಕೆ ಭೇಟಿ ನೀಡಿದ, ತಮಿಳುನಾಡು ರೈತಸಂಘದ ಅಧ್ಯಕ್ಷ ಪಿ.ಆರ್.ಪಾಂಡಿಯನ್ ನೇತೃತ್ವದ ನಿಯೋಗವು ಕರ್ನಾಟಕ ಸರಕಾರ ರಹಸ್ಯವಾಗಿ ಸರ್ವೆ ಕಾರ್ಯ ಆರಂಭಿಸಿದೆ ಎಂದು ಆರೋಪಿಸಿದೆ. ಮೇಕೆದಾಟು ಭೇಟಿ ಬಳಿಕ ಹೊಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಂಡಿಯನ್ , ಮೇಕೆದಾಟಿನಲ್ಲಿ ಕಾವೇರಿ ನದಿಪಾತ್ರದ ಉದ್ದಕ್ಕೂ ಸರ್ವೆ ಬಿಂದುಗಳನ್ನು ಗುರುತಿ ಸಲು ಕಬ್ಬಿಣದ ಸರಳುಗಳನ್ನು ಬಂಡೆಗಳ ಮೇಲೆ ನೆಡಲಾಗಿದೆ. ಇದು ಮೇಕೆದಾಟು ಯೋಜನೆ ಸರ್ವೆ ಕಾರ್ಯ ಪ್ರಾರಂಭಿಸಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.

38 ಜಿಲ್ಲೆಗಳ ಮೇಲೆ ಪರಿಣಾಮ: ಮೇಕೆದಾಟು ಅಣೆಕಟ್ಟು ನಿರ್ಮಾಣವಾದರೆ, ಚೆನ್ನೈ ಸೇರಿದಂತೆ 38 ಜಿಲ್ಲೆಗಳ ಸುಮಾರು ಐದು ಕೋಟಿ ಜನರಿಗೆ ಕುಡಿಯುವ ನೀರಿನ ಮೇಲೆ ಪರಿಣಾಮ ಬೀರುತ್ತದೆ. ಸುಮಾರು 25 ಲಕ್ಷ ಎಕರೆ ಕೃಷಿ ಭೂಮಿ ಬಂಜರಾಗಿ, ಆಹಾರ ಉತ್ಪಾದನೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಪಾಂಡಿಯನ್ ಆರೋಪಿಸಿದರು.

image

ತಮಿಳುನಾಡು ವಾದ ಸಮರ್ಥನೀಯವಲ್ಲ ಮೇಕೆದಾಟು ಜಲಾಶಯ ಮತ್ತು ಹೆಚ್ಚುವರಿ ನೀರಿನ ಹಂಚಿಕೆಗೆ ಸಂಬಂಧಿಸಿದ ಜಲ ವಿವಾದಗಳ ಇತ್ಯರ್ಥಕ್ಕಾಗಿ ಎರಡನೇ ಕಾವೇರಿ ನ್ಯಾಯಾಧೀಕರಣ ರಚನೆ ಮಾಡಬೇಕೆಂಬ ತಮಿಳುನಾಡು ವಾದ ಕಾನೂನಾತ್ಮಕವಾಗಿ ಸಮರ್ಥನೀಯವಲ್ಲ. ಈ ವಿವಾದಗಳನ್ನು ಈಗಾಗಲೇ ಸುಪ್ರೀಂಕೋರ್ಟ್ 2018ರಲ್ಲಿ ಮತ್ತು ಮೊದಲ ನ್ಯಾಯಾಧೀಕರಣ 2007ರಲ್ಲಿ ಕರ್ನಾಟಕದ ಪರವಾಗಿ ನಿರ್ಧರಿಸಿದೆ. ಉಭಯ ರಾಜ್ಯಗಳ ಅಂತರರಾಜ್ಯ ಗಡಿ ಬಿಳಿಗುಂಡ್ಲುವಿನಲ್ಲಿ ಸಾಮಾನ್ಯ ವರ್ಷದಲ್ಲಿ 177.25 ಟಿಎಂಸಿ ಅಥವಾ ಸಂಕಷ್ಟದ ವರ್ಷದಲ್ಲಿ ನೀರಿನ ಸಂಗ್ರಹಕ್ಕೆ ಅನುಗುಣವಾಗಿ ತಮಿಳುನಾಡಿಗೆ ಹರಿವಿನ ಪ್ರಮಾಣ ಖಚಿತಪಡಿಸಿಕೊಳ್ಳುವ ನಿರ್ದೇಶನವನ್ನು ನೀಡಲಾಗಿದೆ. ಅದು ಹೊರತುಪಡಿಸಿ, ಕರ್ನಾಟಕದ ಇತರೆ ಸಾಂವಿಧಾನಿಕ ಅಧಿಕಾರಗಳ ಮೇಲೆ ಯಾವುದೇ ನಿರ್ಬಂಧವಿರುವುದಿಲ್ಲ.

-ಮೋಹನ್ ಕಾತರಕಿ, ಹಿರಿಯ ವಕೀಲರು