Vishweshwar Bhat Column: ಚಿಕಾಗೋದ ಆಗಸದಲ್ಲಿ ಕಂಗೊಳಿಸಿದ ಹವ್ಯಕ ಮಳೆಬಿಲ್ಲು !
ನಾವು ಊರನ್ನು ಬಿಟ್ಟು ಬರಬಹುದು, ಹೋಗಬಹುದು, ಆದರೆ ಊರು ನಮ್ಮನ್ನು ಎಂದಿಗೂ ಬಿಡುವು ದಿಲ್ಲ. ಬದುಕಿನ ಅತ್ಯಂತ ದೊಡ್ಡ ವಿಸ್ಮಯವೆಂದರೆ ಇದೇ-ನಾವು ಎಲ್ಲೇ ಇದ್ದರೂ ನಮ್ಮೊಳಗಿನ ತೀರ ನಮ್ಮನ್ನು ಸದಾ ಕರೆಯುತ್ತಲೇ ಇರುವುದು. ಇತ್ತೀಚೆಗೆ ಅಮೆರಿಕದ ಚಿಕಾಗೋ ನಗರಕ್ಕೆ ಕಾಲಿಟ್ಟಾಗ ನನಗಾಗಿದ್ದು ಇದೇ ಅನುಭವ!
-
ನೂರೆಂಟು ವಿಶ್ವ
ಕೆಲವೊಮ್ಮೆ ಭೌಗೋಳಿಕ ದೂರ ಎನ್ನುವುದು ಕೇವಲ ನಕಾಶೆಯ ಮೇಲಿನ ಗೆರೆಗಳಷ್ಟೇ ಎಂದೆನಿಸಿ ಬಿಡುತ್ತದೆ. ಸಮುದ್ರದಾಚೆ, ಸಾವಿರ ಮೈಲಿಗಳನ್ನು ಕ್ರಮಿಸಿ ಹೋದರೂ, ಬಾಲ್ಯದ ಅಡಕೆ ತೋಟದ ವಾಸನೆ, ಮಳೆಗಾಲದ ಬಿಸಿ ಹಂಡೆ ನೀರಿನ ಸ್ನಾನ ಮತ್ತು ಅಮ್ಮ ಉಣಬಡಿಸಿದ ತಂಬುಳಿಯ ರುಚಿ ನಮ್ಮ ಅಂಗೈಯ ರೇಖೆಗಳಂತೆ ನಮ್ಮ ಜತೆಯ ಪ್ರಯಾಣಿಸುತ್ತಿರುತ್ತವೆ. ಅಪರಿಚಿತ ಜನ, ವಿಭಿನ್ನ ಸಂಸ್ಕೃತಿಗಳ ನಡುವೆ ಬದುಕುತ್ತಿದ್ದರೂ, ನಮ್ಮ ಮೂಲ ಬೇರುಗಳನ್ನು ಕಡಿದುಕೊಳ್ಳದೇ, ನಮ್ಮತನವನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬ ಅನಿವಾಸಿ ಭಾರತೀಯನ ಪರಮ ಧರ್ಮ. ವಿಶ್ವದ ಯಾವ ದೇಶದಲ್ಲಿಯೇ ಬದುಕು ಕಟ್ಟಿಕೊಂಡಿರಬಹುದು, ನಮ್ಮ ಸುತ್ತಲೂ ನಾವು ಕಳೆದ ಬಾಲ್ಯದ ಊರನ್ನು ಸೃಷ್ಟಿಸಿ ಕೊಳ್ಳುವುದರಲ್ಲಿ ಇರುವ ಆನಂದ, ಸಮಾಧಾನ ಯಾವುದರಲ್ಲೂ ಸಿಗದು. ನಮ್ಮ ಭಾಷೆ, ಬಾಲ್ಯದ ಸ್ನೇಹಿತರು, ಚಿಕ್ಕಂದಿನ ನೆನಪುಗಳನ್ನು ಹಂಚಿಕೊಳ್ಳುವ ನಾಲ್ಕು ಜನ ಸಿಕ್ಕರೆ ಅಂದು ಪುಟ್ಟ ಲೋಕವೇ ತೆರೆದುಕೊಂಡುಬಿಡುತ್ತದೆ.
ಅಮೆರಿಕದಲ್ಲಿ ಸ್ನೇಹಿತರ ಹರಟೆಯಲ್ಲಿ ಮತ್ತು ಅಮ್ಮ ಹಿತ್ತಲಲ್ಲಿ ಕೊಯ್ದು ತಂದ ಆ ಸೊಪ್ಪಿಗೆ ಮಜ್ಜಿಗೆ ಒಗ್ಗರಣೆ ಹಾಕಿ ಉಣಬಡಿಸಿದ ‘ತಂಬುಳಿ’ ಎಂಬ ಉದ್ಗಾರ ನಮ್ಮನ್ನು ಪುನಃ ಊರಿಗೆ ಕರೆದು ತಂದು ಬಿಡುತ್ತದೆ. ಕಾರಣ ತಂಬುಳಿ ಎನ್ನುವುದು ಕೇವಲ ಆಹಾರವಲ್ಲ, ಅದೊಂದು ಭಾವನೆ. ಅದರ ಮೊದಲ ತುತ್ತು ನಾಲಿಗೆಯನ್ನು ಮುಟ್ಟಿದಾಗ ಇಡೀ ಮಲೆನಾಡು-ಕರಾವಳಿ ನಮ್ಮ ಎದೆಯೊಳಗೆ ಹರಿಯ ತೊಡಗುತ್ತದೆ. ಅಂಗೈ ರೇಖೆಗಳು ಹೇಗೆ ಹುಟ್ಟಿನಿಂದ ಸಾವಿನವರೆಗೂ ನಮ್ಮ ಕೈಯ ಅಚ್ಚಾಗಿರುತ್ತವೆಯೋ, ಹಾಗೆಯೇ ಈ ಊರಿನ ವಾಸನೆ, ರುಚಿ ಮತ್ತು ಮನುಷ್ಯರ ಮುಖಗಳು ನಮ್ಮ ಪ್ರeಯೊಳಗೆ ಶಾಶ್ವತವಾಗಿ ಕುಳಿತುಬಿಡುತ್ತವೆ.
ನಾವು ಊರನ್ನು ಬಿಟ್ಟು ಬರಬಹುದು, ಹೋಗಬಹುದು, ಆದರೆ ಊರು ನಮ್ಮನ್ನು ಎಂದಿಗೂ ಬಿಡುವು ದಿಲ್ಲ. ಬದುಕಿನ ಅತ್ಯಂತ ದೊಡ್ಡ ವಿಸ್ಮಯವೆಂದರೆ ಇದೇ-ನಾವು ಎಲ್ಲೇ ಇದ್ದರೂ ನಮ್ಮೊಳಗಿನ ತೀರ ನಮ್ಮನ್ನು ಸದಾ ಕರೆಯುತ್ತಲೇ ಇರುವುದು. ಇತ್ತೀಚೆಗೆ ಅಮೆರಿಕದ ಚಿಕಾಗೋ ನಗರಕ್ಕೆ ಕಾಲಿಟ್ಟಾಗ ನನಗಾಗಿದ್ದು ಇದೇ ಅನುಭವ!
ಇದನ್ನೂ ಓದಿ: Vishweshwar Bhat Column: ವರ್ಜೀನಿಯಾದ ಅಗ್ಗಳಿಕೆ
ಸುಮಾರು ನಲವತ್ತೈದು ವರ್ಷಗಳ ಹಿಂದೆ, ಅಮೆರಿಕ ಮತ್ತು ಕೆನಡದಲ್ಲಿ ನೆಲೆಸಿರುವ ಹವ್ಯಕ ಕನ್ನಡಿಗರೆಲ್ಲ ಸೇರಿ ಅತ್ಯಂತ ಪ್ರೀತಿಯಿಂದ ‘ಹವ್ಯಕ ಅಸೋಸಿಯೇಶನ್ ಆಫ್ ಅಮೆರಿಕ’ ( HAA ) ಎಂಬ ಸಂಸ್ಥೆಯನ್ನು ಕಟ್ಟಿ ಹವ್ಯಕರನ್ನು ಒಂದೆಡೆ ಸೇರಿಸುವ ಸಂಕಲ್ಪ ತೊಟ್ಟರು. ಆ ಸಂಸ್ಥೆ ಪ್ರತಿ ಎರಡು ವರ್ಷಕ್ಕೊಮ್ಮೆ ಅಮೆರಿಕದ ಬೇರೆ ಬೇರೆ ಊರುಗಳಲ್ಲಿ ಹವ್ಯಕರ ಮಹಾಸಮಾವೇಶವನ್ನು ಸಂಘಟಿಸುತ್ತದೆ. ಈ ಬಾರಿ ಚಿಕಾಗೋದಲ್ಲಿ ನಡೆದ ಸಮಾವೇಶಕ್ಕೆ ನಾನು ಮುಖ್ಯ ಅತಿಥಿಯಾಗಿ ಹೋಗಿದ್ದೆ. ಅದು ಕೇವಲ ಒಂದು ಸಮ್ಮೇಳನವಾಗಿರಲಿಲ್ಲ, ಅದೊಂದು ಭಾವನೆಗಳ ಮಹಾಪೂರ, ಸಂಬಂಧಗಳ ಒಕ್ಕೂಟ, ಹರಟೆಗಳ ಜಗಲಿಕಟ್ಟೆ ಮತ್ತು ಒಂದು ಅಪೂರ್ವ ಹೃದಯ ಸಂಗಮ. ನಿಜಾರ್ಥದಲ್ಲಿ ಅದು ಪಶ್ಚಿಮದ ಆಕಾಶದಲ್ಲಿ ಮೂಡಿದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಕಾಸರ ಗೋಡು, ಉಡುಪಿ, ಚಿಕ್ಕಮಗಳೂರು, ಕೊಡಗು ಹಾಗೂ ಮಲೆನಾಡಿನ ಸಾಂಸ್ಕೃತಿಕ ಮಳೆ ಬಿದ್ದಾಗಿತ್ತು.
ಚಿಕಾಗೋದ ಆ ಭವ್ಯ ಸಭಾಂಗಣದಲ್ಲಿ ಕಾಲಿಟ್ಟಾಗ ನನಗಾಗಿದ್ದು ತಕ್ಷಣದ ಸಾಂಸ್ಕೃತಿಕ ಆಘಾತ ವೊಂದರ ಆಪ್ತ ಸುಖ. ಹೊರಗೆ ಅಮೆರಿಕದ ಧಾವಂತದ ರಸ್ತೆಗಳು, ಅಪರಿಚಿತ ಜನ, ಇಂಗ್ಲಿಷ್ ಭಾಷೆಯ ಗಲಿಬಿಲಿ... ಆದರೆ ಸಭಾಂಗಣದ ಒಳಗೆ ಒಮ್ಮೆಲೇ ಇಡೀ ಭೌಗೋಳಿಕ ನಕಾಶೆಯೇ ಅದಲುಬದಲಾಗಿ ಹೋದ ಅನುಭವ. ಅಪ್ಪಟ ಹವ್ಯಕ ಭಾಷೆಯ ಆ ಮೃದುವಾದ ಏರಿಳಿತಗಳು ಕಿವಿಗೆ ಬೀಳುತ್ತಿದ್ದಂತೆ, ನಾನು ಎಲ್ಲಿದ್ದೇನೆ, ನಿಜಕ್ಕೂ ಅಮೆರಿಕದಲ್ಲಿದ್ದೇನಾ ಎಂಬ ಪ್ರಜ್ಞೆಯೇ ಗಾಳಿಯಲ್ಲಿ ಕರ್ಪೂರದಂತೆ ಕರಗಿ ಹೋಯಿತು.
ಅದು ಕೇವಲ ಭಾಷೆಯಲ್ಲ, ನಮ್ಮೂರಿನ ಅಡಕೆ ತೋಟಗಳ ಮಧ್ಯೆ ಇರುವ ಹಳೇ ಮನೆಯ ಚೌಕಿಯ ವಾಸನೆ! ಪ್ರತಿಯೊಬ್ಬರ ಮುಖದಲ್ಲೂ ಇದ್ದ ಆ ಸಾಂದ್ರವಾದ ಹಸನ್ಮುಖಿ ಸ್ವಾಗತ ಮತ್ತು ಆತ್ಮೀಯತೆ ನನ್ನನ್ನು ತಾಯ್ನಾಡಿಗೆ ಹೊತ್ತೊಯ್ದಿದ್ದವು. ಪುರುಷರು ಶುಭ್ರವಾದ ಕಚ್ಚೆ ಧೋತಿ ಮತ್ತು ಸಾಂಪ್ರದಾಯಿಕ ಶರ್ಟ್ ಧರಿಸಿ ಗಂಭೀರವಾಗಿ ಹರಟುತ್ತಿದ್ದರೆ, ಮಹಿಳೆಯರು ಕಾಂಜೀವರಂ, ಮೈಸೂರು ರೇಷ್ಮೆ ಸೀರೆಗಳ ವೈಭವದಲ್ಲಿ, ಮುಡಿದ ಮಲ್ಲಿಗೆಯ ಕಂಪು ಹರಡುತ್ತಾ ಓಡಾಡು ತ್ತಿದ್ದರು. ಆ ಮಲ್ಲಿಗೆಯ ವಾಸನೆಗೂ ಚಿಕಾಗೋದ ಹವಾನಿಯಂತ್ರಿತ ಗಾಳಿಗೂ ನಡುವೆ ಒಂದು ಸುಂದರ ಕದನವೇ ನಡೆಯುತ್ತಿದ್ದಂತೆ ಭಾಸವಾಗುತ್ತಿತ್ತು. ಅಲ್ಲಿ ನಮ್ಮ ಇಡೀ ಸಂಸ್ಕೃತಿ ತನ್ನ ಸಂಪೂರ್ಣ ಜೀವಂತಿಕೆಯೊಂದಿಗೆ ಮೈದಳೆದು ನಿಂತಿತ್ತು.
ನಾವು ದೇಶ ಬಿಟ್ಟು ಬಂದರೂ, ನಮ್ಮ ಸಂಪ್ರದಾಯ, ಭಾಷೆ, ಹಾವಭಾವ, ಮಾತು, ಹರಟೆ, ಪರಂಪರೆ, ಸಂಸ್ಕೃತಿ, ಸೊಗಡನೆಲ್ಲ ಎದೆ ಗೂಡಿನೊಳಗೆ ಸುರಕ್ಷಿತವಾಗಿ ಹೊತ್ತು ತಂದಿದ್ದೇವೆ ಎಂಬುದಕ್ಕೆ ಆ ಸಭಾಂಗಣವೇ ಒಂದು ಚಲಿಸುವ ಕಾವ್ಯದಂತಿತ್ತು. ಲೋಕಾರೂಢಿ ಒಂದು ಜನಪ್ರಿಯ ಮಾತಿದೆ-‘ಇಬ್ಬರು ಹವ್ಯಕರು ಒಂದೆಡೆ ಸೇರಿದರೆ, ಅಲ್ಲಿ ಕನಿಷ್ಠ ಮೂರು ವಿಭಿನ್ನ ಅಭಿಪ್ರಾಯಗಳು ಹುಟ್ಟಿಕೊಳ್ಳುತ್ತವೆ’! ಇದು ತೀಕ್ಷ ವೈಚಾರಿಕತೆ ಮತ್ತು ಜಿಜ್ಞಾಸೆಯ ಲಕ್ಷಣ. ಪ್ರತಿಯೊಂದು ಚರ್ಚೆಯನ್ನೂ ಸೂಕ್ಷ್ಮವಾಗಿ ವಿಶ್ಲೇಷಿಸುವ, ತರ್ಕಿಸುವ ಗುಣ ಹವ್ಯಕರ ರಕ್ತದ ಇದೆ.
ಇನ್ನು ಅಪ್ಪಿತಪ್ಪಿ ಮೂರು ಹವ್ಯಕರು ಒಂದೆಡೆ ಸೇರಿದರೆ, ಅಲ್ಲಿ ಒಂದು ಪುಟ್ಟ ಸಮಾವೇಶವೇ ಜಮಾ ಆಗುತ್ತದೆ. ಅಲ್ಲಿ ಹರಟೆಯ ಕಟ್ಟೆ ಸಿದ್ಧವಾಗುತ್ತದೆ, ಊರಿನ ಹಳೆಯ ಪ್ರಸಂಗಗಳು ಮರುಜೀವ ಪಡೆಯುತ್ತವೆ ಮತ್ತು ಚರ್ಚೆಯ ಕಾವು ಏರುತ್ತಲೇ ಹೋಗುತ್ತದೆ. ಆಗ ಅಲ್ಲಿ ಹರಿಯುವ ಹವ್ಯಕ ಭಾಷೆಯ ಸೊಗಡೇ ವಿಶಿಷ್ಟ. ಅದು ಮಲೆನಾಡಿನ ಹೆಮ್ಮೆಯ ‘ಅಪ್ಪೆಹುಳಿ’ಯ ಪ್ರವಾಹ ಸದೃಶ.
ಅಪ್ಪೆಹುಳಿ ಎಂದರೆ ಮಿಡಿಮಾವಿನ ಹುಳಿ, ಹಸಿಮೆಣಸಿನ ಖಾರ, ಉಪ್ಪಿನ ಚುರುಕು ಮತ್ತು ನೀರಿನ ತಂಪು ಎಲ್ಲವುಗಳ ಹದ ಸಮ್ಮಿಶ್ರಣ. ಹವ್ಯಕರ ಭಾಷೆಯೂ ಹಾಗೆಯೇ-ಮಾತಿನಲ್ಲಿ ಬುದ್ಧಿವಂತಿಕೆಯ ಚುರುಕು, ಹಾಸ್ಯದ ಖಾರ, ಪರಂಪರೆಯ ಆಳವಾದ ರುಚಿ ಮತ್ತು ಎಲ್ಲದರ ನಡುವೆ ನದಿಯ ನಿರಂತರ ಹರಿವು. ಆ ಭಾಷೆಯ ಏರಿಳಿತಗಳನ್ನು ಅಮೆರಿಕದಲ್ಲಿ ಆಲಿಸುವುದೇ ಒಂದು ಆನಂದ.
ಇನ್ನು ಆರೇಳು ನೂರು ಹವ್ಯಕ ಬಂಧುಗಳು ಒಂದೆಡೆ ಒಟ್ಟಿಗೆ ಸೇರಿದರೆ ಆ ಗಮ್ಮತ್ತನ್ನು ವರ್ಣಿಸಲು ಪದಗಳು ಸಾಲುವುದಿಲ್ಲ! ಅಲ್ಲಿ ಸೃಷ್ಟಿಯಾಗುವ ಸಾಂಸ್ಕೃತಿಕ ಅಲೆಯ ತೀವ್ರತೆ ಎಂಥವರನ್ನೂ ಬೆರಗುಗೊಳಿಸುವಂಥದ್ದು. ಸಭಾಂಗಣದಲ್ಲಿ ನೂರಾರು ಅಪ್ಪೆಹುಳಿಯ ಕೋಡಿಗಳು ಒಟ್ಟಿಗೆ ಹರಿದು ಹವ್ಯಕ ಮಹಾಸಾಗರವೇ ನಿರ್ಮಾಣವಾದಂತಿತ್ತು. ಭಾಷೆ ಎನ್ನುವುದು ನೆನಪುಗಳ ಹಡಗು. ಚಿಕಾಗೋದ ಆ ವಿಶಾಲ ಸಭಾಂಗಣದ ಮೂಲೆ ಮೂಲೆಗಳಿಂದ ತೇಲಿ ಬರುತ್ತಿದ್ದ ‘ಆರಾಮನೋ, ಎಷ್ಟು ದಿನ ಆತ ನಿನ್ನ ನೋಡದೇ?’, ‘ಮನೆಯಲ್ಲಿ ಎಲ್ಲಾ ಆರಾಮಾ?’, ‘ಯಾರ್ಯಾರು ಬಂಜಿ?’, ‘ಊರ ಕಡೆಗೆ ಹೋಗಿದ್ಯಾ?’, ‘ನಿಂಗ ಈಗ ಯಾವ ಊರಲ್ಲಿ ಇದ್ದಿ?’ ‘ಇಲ್ಲಿಗೆ ಬಂದು ಎಷ್ಟು ವರ್ಷ ಆತು?’, ‘ಮಗ-ಮಗಳು ಯಂತ ಮಾಡ್ತಾ?’... ಎಂಬ ಮಾತುಗಳು ಕೇವಲ ಔಪಚಾರಿಕ ವಿಚಾರಣೆ ಗಳಾಗಿರಲಿಲ್ಲ. ಅವುಗಳ ಹಿಂದೆ ಕರಾವಳಿಯ ಹೊಳೆಯ ತಂಪಿತ್ತು, ಮಲೆನಾಡಿನ ಘಟ್ಟದ ಆಪ್ತತೆ ಯಿತ್ತು. ಪರಸ್ಪರ ಅಪರಿಚಿತರಾಗಿದ್ದ ಇಬ್ಬರು ಕೇವಲ ತಮ್ಮದೇ ಭಾಷೆಯ ಉಚ್ಚಾರಣೆಯ ಒಂದು ಸಣ್ಣ ಎಳೆಯನ್ನ ಹಿಡಿದು ಆಪ್ತರಾಗುವ ದೃಶ್ಯ ಅಲ್ಲಿ ಹೊಸ ಹವ್ಯಕಲೋಕವನ್ನು ಅನಾವರಣ ಮಾಡಿತ್ತು.
ಅಮೆರಿಕದ ಅತಿ ವೇಗದ ಬದುಕಿನಲ್ಲಿ, ವಾರದ ದಿನಗಳ ಜಂಜಾಟದಲ್ಲಿ ಕಳೆದುಹೋಗಿದ್ದ ಜೀವಗಳಿಗೆ ಈ ಹವ್ಯಕ ಸೊಗಡಿನ ಮಾತುಗಳು ತಂಪಾದ ಹನಿಗಳಂತೆ ಇಳಿದಿದ್ದವು. ಮನುಷ್ಯ ಜಗತ್ತಿನ ಯಾವುದೇ ಮೂಲೆಗೆ ಹೋಗಿ ಎಷ್ಟೇ ದೊಡ್ಡ ಯಶಸ್ಸಿನ ಶಿಖರ ಏರಿ ನಿಂತರೂ, ಅವನ ಒಂಟಿತನವನ್ನು ಕರಗಿಸಲು ಅವನ ತಾಯ್ನುಡಿಯ ಒಂದೇ ಒಂದು ಸಣ್ಣ ಧ್ವನಿ ಸಾಕು. ಈ ಸಮಾಗಮ ಅದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿತ್ತು.
ಅಲ್ಲಿ ಭಾಷೆಯು ಜನರನ್ನು ಬೆಸೆಯುವ ಅದೃಶ್ಯ ಸೇತುವೆಯಾಗಿತ್ತು. ಕೇವಲ ಐದು ನಿಮಿಷಗಳ ಮುನ್ನ ಪರಿಚಯವಾದ ವ್ಯಕ್ತಿಯೂ ಬಾಲ್ಯದ ಗೆಳೆಯನಂತೆ ಹಳೇ ನೆನಪುಗಳ ಪೆಟ್ಟಿಗೆಯನ್ನು ಬಿಚ್ಚಿಡುತ್ತಿದ್ದ. ಹಳ್ಳಿಯ ಕೆರೆಯ ದಡ, ಶಾಲೆಯ ದಿನಗಳ ತುಂಟಾಟ, ಊರಿನ ದೇವಸ್ಥಾನದ ರಥೋತ್ಸವದ ಕಥೆಗಳು ಅಲ್ಲಿ ಮರುಜನ್ಮ ಪಡೆದಿದ್ದವು. ಇಂಗ್ಲಿಷಿನ ‘ಹಲೋ, ಹೌ ಆರ್ ಯೂ’ ಎಂಬ ಯಾಂತ್ರಿಕ ಅಭ್ಯಾಸಗಳ ನಡುವೆ, ಅಪ್ಪಟ ದೇಶಿ ಭಾಷೆಯ ಈ ವಿಚಾರಣೆಗಳು ಎದೆಯ ಆಳಕ್ಕೆ ಇಳಿದು ಸಾಂಸ್ಕೃತಿಕ ಮೆರುಗಿಗೆ ಋಣ ಸಂದಾಯ ಮಾಡುತ್ತಿದ್ದವು.
ಜಗತ್ತಿನ ಅತ್ಯಂತ ಶ್ರೀಮಂತ ಮತ್ತು ಭೌತಿಕವಾಗಿ ಮುಂದುವರಿದ ದೇಶವೊಂದರಲ್ಲಿ ನಮ್ಮ ಸಂಸ್ಕೃತಿಯ ಬೇರುಗಳು ಹೇಗೆ ಕಸಿಗೊಂಡು ಚಿಗುರೊಡೆದು ಹೆಮ್ಮರವಾಗಿ ನಿಂತಿದೆ ಎಂಬುದಕ್ಕೆ ಚಿಕಾಗೋದ ಈ ಸಮಾವೇಶವೇ ಒಂದು ಜೀವಂತ ಉದಾಹರಣೆಯಾಗಿತ್ತು. ಈ ಇಡೀ ಸಮಾಗಮದ ಅತ್ಯಂತ ಭವ್ಯ ಹಾಗೂ ಸುಂದರ ಆಕರ್ಷಣೆಯೆಂದರೆ ಅಲ್ಲಿ ಎದ್ದು ಕಾಣುತ್ತಿದ್ದ ಹವ್ಯಕ ಸಮಾಜದ ವೈವಿಧ್ಯ, ಸಂಸ್ಕೃತಿ ಪ್ರದರ್ಶನ ಮತ್ತು ಅಪೂರ್ವ ಒಗ್ಗಟ್ಟು.
ಅಮೆರಿಕದ ಬೇರೆ ಬೇರೆ ಮೂಲೆಗಳಿಂದ-ಕ್ಯಾಲಿಫೋರ್ನಿಯಾದ ಶಾಂತ ಕರಾವಳಿಯಿಂದ, ನ್ಯೂಯಾರ್ಕಿನ ಗಿಜಿಗುಡುವ ಬೀದಿಗಳಿಂದ, ಟೆಕ್ಸಾಸ್‌ನ ಬಿಸಿಲಿನ ನಾಡಿನಿಂದ, ಫ್ಲೋರಿಡಾದ ಹಸಿರಿನ ಕಣಿವೆಯಿಂದ... ಹೀಗೆ ಎಡೆಗಳಿಂದ ಹವ್ಯಕ ಬಂಧುಗಳು ತಮ್ಮ ದೈನಂದಿನ ಜಂಜಾಟ ಗಳನ್ನು ಬದಿಗಿಟ್ಟು ಚಿಕಾಗೋ ನಗರಕ್ಕೆ ಧಾವಿಸಿ ಬಂದಿದ್ದರು. ವಿಮಾನದ ಹಾರಾಟ, ರಸ್ತೆಯ ಸುದೀರ್ಘ ಪ್ರಯಾಣದ ಆಯಾಸ ಯಾವುದೂ ಅವರ ಉತ್ಸಾಹವನ್ನು ಕುಗ್ಗಿಸಿರಲಿಲ್ಲ. ಭೌಗೋಳಿಕ ವಾಗಿ ಅವರು ಹರಿದು ಹಂಚಿಹೋಗಿದ್ದರೂ, ಸಾಂಸ್ಕೃತಿಕವಾಗಿ ಅವರೆಲ್ಲರ ಹೃದಯ ಒಂದೇ ಲಯದಲ್ಲಿ ಮಿಡಿಯುತ್ತಿತ್ತು.
ಈ ಇಡೀ ಸಡಗರದ ನಡುವೆ ನನ್ನ ಮನಸ್ಸಿಗೆ ಅತ್ಯಂತ ಆಳವಾದ ತೃಪ್ತಿ ಮತ್ತು ಸಮಾಧಾನ ನೀಡಿದ ದೃಶ್ಯ ಮತ್ತೊಂದಿತ್ತು. ಅದು ಅಮೆರಿಕದ ಮಣ್ಣಿನ ಹುಟ್ಟಿ, ಅಲ್ಲಿನ ಸಾಂಸ್ಕೃತಿಕ ವಾತಾವರಣದ ಬೆಳೆಯುತ್ತಿರುವ ಇಂದಿನ ಪೀಳಿಗೆಯ ಮಕ್ಕಳ ಮತ್ತು ಯುವಕರ ಉತ್ಸಾಹಭರಿತ ಪಾಲ್ಗೊಳ್ಳುವಿಕೆ. ಸಾಮಾನ್ಯವಾಗಿ ವಿದೇಶಗಳಲ್ಲಿ ಬೆಳೆಯುವ ಮಕ್ಕಳು ತಮ್ಮ ಮೂಲ ಬೇರುಗಳಿಂದ ಕಳಚಿಕೊಳ್ಳು ತ್ತಾರೆ ಎಂಬ ಆತಂಕ ಹೆತ್ತವರಲ್ಲಿ ಸಾಮಾನ್ಯ. ಆದರೆ ಇಲ್ಲಿ ಕಂಡುಬಂದ ಚಿತ್ರಣವೇ ಬೇರೆಯಾಗಿತ್ತು. ಆ ಮಕ್ಕಳು ತಮ್ಮ ತಂದೆ-ತಾಯಂದಿರ ಜತೆಗೆ ಹೆಗಲಿಗೆ ಹೆಗಲು ಕೊಟ್ಟು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಓಡಾಡುತ್ತಿದ್ದರು.
ಅಲ್ಲಿ ಚಡ್ಡಿ, ಜೀ ಧರಿಸಿದ ಮಕ್ಕಳನ್ನು ನೋಡುವುದು ಸಾಧ್ಯವೇ ಇರಲಿಲ್ಲ. ಅದರಲ್ಲೂ ವಿಶೇಷ ವಾಗಿ, ಅವರ ಅಮೆರಿಕನ್ ಇಂಗ್ಲಿಷ್ ಉಚ್ಚಾರಣೆಯ ನಡುವೆಯೂ ಅತ್ಯಂತ ಮುದ್ದಾಗಿ, ನಿರರ್ಗಳ ವಾಗಿ ಹವ್ಯಕ ಭಾಷೆಯನ್ನು ಮಾತನಾಡಲು ಪ್ರಯತ್ನಿಸುತ್ತಿದ್ದ ದೃಶ್ಯ ಅಪರೂಪವಾಗಿತ್ತು. ಹವ್ಯಕ ಭಾಷೆಯ ಮೃದುವಾದ ಸೊಗಡು ಅವರ ನಾಲಿಗೆಯ ಮೇಲೆ ನಲಿಯುತ್ತಿತ್ತು. ಇದು ಹೆತ್ತವರು ತಮ್ಮ ಅಸ್ತಿತ್ವ, ಪರಂಪರೆ ಮತ್ತು ಸಂಸ್ಕಾರವನ್ನು ಮುಂದಿನ ತಲೆಮಾರಿಗೆ ಅತ್ಯಂತ ಯಶಸ್ವಿಯಾಗಿ ದಾಟಿಸುತ್ತಿದ್ದಾರೆ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿತ್ತು. ತಲೆಮಾರುಗಳ ನಡುವಿನ ಈ ಸಾಂಸ್ಕೃತಿಕ ಕೊಂಡಿ ಕಳಚದೆ ಹಾಗೇ ಮುಂದುವರಿಯುತ್ತಿರುವುದನ್ನು ಕಂಡಾಗ, ನಮ್ಮತನ ಎಲ್ಲೇ ಇದ್ದರೂ ಅಳಿಯುವುದಿಲ್ಲ ಎಂಬ ಭರವಸೆ ಮೂಡುವಂತಾಗಿತ್ತು.
ಯಾವುದೇ ಒಂದು ದೊಡ್ಡ ಸಮಾವೇಶಕ್ಕೆ ಜನರನ್ನು ಸೇರಿಸುವುದಷ್ಟೇ ಮುಖ್ಯವಲ್ಲ, ಅದಕ್ಕೊಂದು ವೈಚಾರಿಕ ದಿಕ್ಸೂಚಿ ಅತ್ಯಗತ್ಯ. ಚಿಕಾಗೋದ ಈ ಹವ್ಯಕ ಸಮಾವೇಶದ ಆಶಯವನ್ನು ಅತ್ಯಂತ ಅರ್ಥಪೂರ್ಣವಾಗಿ ಹೊತ್ತು ನಿಂತಿದ್ದು ಅದರ ಆಕರ್ಷಕ ಘೋಷವಾಕ್ಯ-‘ನಮ್ಮ ಜನ, ನಮ್ಮತನ, ನಮ್ಮ ಧನ, ನಮ್ಮ ಋಣ’. ಈ ನಾಲ್ಕು ಪದಗಳು ಕೇವಲ ವೇದಿಕೆಯ ಮೇಲಿನ ಬ್ಯಾನರ್ ಆಗಿರಲಿಲ್ಲ, ಬದಲಿಗೆ ಅನಿವಾಸಿ ಕನ್ನಡಿಗರ ಬದುಕಿನ ನಾಲ್ಕು ಭದ್ರವಾದ ಕಂಬಗಳಾಗಿದ್ದವು. ಮೊದಲನೆಯ ದಾಗಿ, ‘ನಮ್ಮ ಜನ’. ನಾವು ಜಗತ್ತಿನ ಯಾವುದೇ ದೇಶದಲ್ಲಿ ನೆಲೆಸಿದ್ದರೂ, ಕಷ್ಟ-ಸುಖಗಳ ಕ್ಷಣದಲ್ಲಿ ಹೆಗಲು ಕೊಟ್ಟು ನಿಲ್ಲಲು ನಮ್ಮದೇ ಆದ ಒಂದು ಸಮುದಾಯದ ಬಾಂಧವ್ಯದ ಅಗತ್ಯವಿರುತ್ತದೆ. ಅಮೆರಿಕದ ಒಂಟಿತನವನ್ನು ಕರಗಿಸಿ ಆತ್ಮೀಯತೆಯ ಬೆಚ್ಚಗಿನ ಆಶ್ರಯ ನೀಡುವುದು ಈ ‘ನಮ್ಮ ಜನ’ ಎಂಬ ಪರಿಕಲ್ಪನೆ. ಇನ್ನು ಎರಡನೆಯದು, ‘ನಮ್ಮತನ’. ಇದು ನಮ್ಮ ಅಸ್ತಿತ್ವದ ಬೇರು. ಭೌತಿಕವಾಗಿ ಪಾಶ್ಚಾತ್ಯ ಜೀವನಶೈಲಿಗೆ ಒಗ್ಗಿಕೊಂಡರೂ, ಒಳಗಿನ ಭಾಷೆ, ಆಚಾರ, ವಿಚಾರ ಮತ್ತು ಪರಂಪರೆಯನ್ನು ಮರೆಯದೇ, ಮುಂದಿನ ಪೀಳಿಗೆಗೂ ಆ ಸಂಸ್ಕಾರವನ್ನು ದಾಟಿಸುವುದೇ ನಮ್ಮತನ.
ಮೂರನೆಯದಾಗಿ, ‘ನಮ್ಮ ಧನ’. ಹವ್ಯಕರು ತಮ್ಮ ಬುದ್ಧಿವಂತಿಕೆ ಮತ್ತು ಕಠಿಣ ಶ್ರಮದಿಂದ ಅಮೆರಿಕದಾದ್ಯಂತ ಉನ್ನತ ಹುದ್ದೆಗಳಲ್ಲಿದ್ದಾರೆ, ಉದ್ಯಮಗಳನ್ನು ಸ್ಥಾಪಿಸಿದ್ದಾರೆ. ಆದರೆ, ತಾವು ಗಳಿಸಿದ ಸಂಪತ್ತು ಕೇವಲ ಸ್ವಂತದ ಭೋಗಕ್ಕಲ್ಲದೇ, ಸಮಾಜದ ಏಳಿಗೆಗೆ, ಜ್ಞಾನದ ವೃದ್ಧಿಗೆ ಮತ್ತು ಅಗತ್ಯವಿರುವವರಿಗೆ ನೆರವಾಗಲು ಸದ್ವಿನಿಯೋಗವಾಗಬೇಕು ಎಂಬ ಉದಾತ್ತ ಚಿಂತನೆ ಇದರಲ್ಲಿದೆ.
ಕೊನೆಯದಾಗಿ, ಎಲ್ಲದಕ್ಕಿಂತ ಮಿಗಿಲಾದದ್ದು ‘ನಮ್ಮ ಋಣ’. ನಮಗೆ ಜನ್ಮ ನೀಡಿದ, ಸಂಸ್ಕೃತಿಯ ತಾಯಿಬೇರಾದ ತಾಯ್ನಾಡಿನ ಮಣ್ಣಿಗೆ ಮತ್ತು ನಮ್ಮನ್ನು ಬೆಳೆಸಿದ ಸಮಾಜಕ್ಕೆ ಸದಾ ಕೃತಜ್ಞ ರಾಗಿರುವುದು ಹಾಗೂ ನಮ್ಮ ಯಶಸ್ಸಿನ ಒಂದು ಭಾಗವನ್ನು ತಾಯ್ನಾಡಿನ ಅಭಿವೃದ್ಧಿಗೆ ಮುಡಿಪಾಗಿಡುವುದು ಇದರ ಆಶಯ. ಈ ನಾಲ್ಕು ಸೂತ್ರಗಳು ಸಮಾವೇಶದ ಆಶಯಕ್ಕೆ ಗಂಭೀರ ಮುದ್ರೆ ಒತ್ತಿದವು.
ಕಲೆ ಎನ್ನುವುದು ಯಾವುದೇ ಒಂದು ಸಮುದಾಯದ ಜೀವಂತಿಕೆಯ ಸಂಕೇತ. ಈ ಸಮಾವೇಶದ ಪ್ರಮುಖ ಲಕ್ಷಣವೆಂದರೆ ಸಾಂಸ್ಕೃತಿಕ ಕಾರ್ಯಕ್ರಮಗಳು. ಇದರಲ್ಲಿ ಬಹುತೇಕ ಹಿರಿಯರು-ಕಿರಿಯರು ಎನ್ನದೇ ಬಹುತೇಕ ಎಲ್ಲರೂ ಮೈಚಳಿ ಬಿಟ್ಟು ವೇದಿಕೆಯಲ್ಲಿ ಕಂಗೊಳಿಸಿದ್ದು ವಿಶೇಷವೇ. ನಮ್ಮೂರಿನ ಕಲಾಪ್ರಕಾರಗಳು ಮರುಜನ್ಮ ಪಡೆದು ಅಲ್ಲಿ ನೆರೆದಿದ್ದವರಲ್ಲಿ ಆನಂದಭಾಷ್ಪ ಸುರಿಸಿದ್ದು ಸುಳ್ಳೇನಲ್ಲ. ಯುವತಿಯರು ಮತ್ತು ಮಕ್ಕಳು ಶಾಸೀಯ ನೃತ್ಯಗಳ ಜತೆಗೆ, ನಮ್ಮ ಜನಪದ ಕಲೆಗಳ ಲಯಬದ್ಧ ಹೆಜ್ಜೆಗಳನ್ನು ಪ್ರದರ್ಶಿಸಿದರು.
ಭರತನಾಟ್ಯದ ಮುದ್ರೆಗಳು ಹಾಗೂ ನೃತ್ಯ ರೂಪಕಗಳು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದವು. ಈ ಕಲಾ ಪ್ರದರ್ಶನಗಳ ಮೂಲಕ, ಪರದೇಶದಲ್ಲಿ ನೆಲೆಸಿದ್ದರೂ ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆ ಯನ್ನು ಚೂರೂ ತಗ್ಗದಂತೆ ಕಾಪಾಡಿಕೊಂಡು ಬರಲಾಗಿದೆ ಎಂಬ ಸತ್ಯ ಎಲ್ಲರಿಗೂ ಮನವರಿಕೆ ಯಾಯಿತು. ಮುಂದಿನ ತಲೆಮಾರಿಗೆ ಕಲೆಯ ಮೂಲಕವೇ ಸಂಸ್ಕಾರವನ್ನು ದಾಟಿಸುವ ಈ ಪ್ರಯತ್ನ ಇಡೀ ಸಮಾವೇಶದ ಅತ್ಯಂತ ಉದಾತ್ತ ಮತ್ತು ಯಶಸ್ವಿ ಅಧ್ಯಾಯವಾಗಿ ವೇದ್ಯವಾ ಯಿತು.
ಲೋಕದಲ್ಲಿ ಯಾವುದೇ ಹವ್ಯಕ ಸಮಾರಂಭವಾದರೂ ಸರಿಯೇ, ಅಲ್ಲಿ ಹವ್ಯಕ ಅಡುಗೆಯ ವೈವಿಧ್ಯ ಮತ್ತು ಆತಿಥ್ಯದ ಪ್ರೀತಿ ಇಲ್ಲದೇ ಹೋದರೆ ಆ ಕಾರ್ಯಕ್ರಮವೇ ಅಪೂರ್ಣ. ಹವ್ಯಕ ಸಂಸ್ಕೃತಿಯಲ್ಲಿ ಭೋಜನ ಎನ್ನುವುದು ಕೇವಲ ಹಸಿವನ್ನು ನೀಗಿಸುವ ಪ್ರಕ್ರಿಯೆಯಲ್ಲ. ಅದೊಂದು ಷಡ್ರಸೋಪೇತ ಕಲೆಯ ಆರಾಧನೆ. ಚಿಕಾಗೋದ ಈ ಭವ್ಯ ಸಮಾಗಮದಲ್ಲಿ ಉಣಬಡಿಸಿದ ಆ ಮೂರು ದಿನಗಳ ಭೋಜನವು, ನಮ್ಮೂರಿನ ಮಲೆನಾಡಿನ ಯಾವುದೋ ಸಾಂಪ್ರದಾಯಿಕ ಮದುವೆ ಮನೆಯನ್ನಾಗಿ ಮಾರ್ಪಡಿಸಿತ್ತು.
ಅಮೆರಿಕದಂಥ ದೇಶದಲ್ಲಿ, ಅಲ್ಲಿನದೇ ಆದ ಮಾರುಕಟ್ಟೆಯ ಮಿತಿಗಳ ನಡುವೆಯೂ ನಮ್ಮ ಅಪ್ಪಟ ಸಾಂಪ್ರದಾಯಿಕ ಅಡುಗೆಯ ರುಚಿಯನ್ನು ಯಥಾವತ್ತಾಗಿ ತಟ್ಟೆಗೆ ತಂದಿದ್ದು ಒಂದು ಪವಾಡವೇ ಸರಿ. ಸ್ವಯಂಸೇವಕರು ಹಗಲಿರುಳು ಶ್ರಮಿಸಿ ಸಿದ್ಧಪಡಿಸಿದ್ದ ಆ ಮೆನುವಿನಲ್ಲಿ ಹವ್ಯಕರ ಹೆಮ್ಮೆಯ ಸಿಗ್ನೇಚರ್ ಡಿಶ್‌ಗಳಾದ ಘಮಘಮಿಸುವ ಸಾಂಪ್ರದಾಯಿಕ ಅಪ್ಪೆಹುಳಿ, ನಾಲಿಗೆಗೆ ತಂಪೆರೆಯುವ ಶುಂಠಿ-ಜೀರಿಗೆಯ ತಂಬುಳಿ, ಕರಕುಶಲ ಪಾಕವಿಧಾನದ ಪತ್ರೊಡೆ, ಹಲಸಿನ ಹಣ್ಣಿನ ಪಾಯಸ ಹಾಗೂ ಮಲೆನಾಡಿನ ತೋಟದ ನೆನಪನ್ನು ಕೆಣಕುವ ಮಿಡಿ ಉಪ್ಪಿನಕಾಯಿ ಎಲ್ಲವೂ ಸಾಲುಸಾಲಿಗೆ ಬಾಳೆಲೆಯನ್ನು ಸಿಂಗರಿಸಿದ್ದವು. ಆ ಪ್ರತಿಯೊಂದು ತುತ್ತಿನಲ್ಲೂ ಬಾಣಸಿಗರ ಭಕ್ತಿ, ಶ್ರದ್ಧೆ ಮತ್ತು ತಾಯ್ನಾಡಿನ ಮೇಲಿನ ಮಮತೆ ಎದ್ದು ಕಾಣುತ್ತಿತ್ತು. ನೆರೆದಿದ್ದ ಏಳುನೂರಕ್ಕೂ ಹೆಚ್ಚು ಮಂದಿ ತೃಪ್ತಿಯಿಂದ ಉಂಡು ಕೈ ತೊಳೆಯುವಾಗ ಅವರ ಮುಖದಲ್ಲಿ ಮೂಡಿದ ಆ ಆನಂದದ ನಗು, ಹವ್ಯಕರ ಆತಿಥ್ಯದ ಉದಾರ ಮನೋಭಾವಕ್ಕೆ ಭಾಷ್ಯ ಬರೆದಂತಿತ್ತು.
ಯಾವುದೇ ಒಂದು ಕಾರ್ಯಕ್ರಮದ ಯಶಸ್ಸಿನ ಹಿಂದೆ ಸದ್ದಿಲ್ಲದೆ ದುಡಿಯುವ ನೂರಾರು ಕೈಗಳಿರು ತ್ತವೆ. ಚಿಕಾಗೋದ ಈ ಭವ್ಯ ಸಮಾವೇಶವನ್ನು ಅತ್ಯಂತ ಅಚ್ಚುಕಟ್ಟಾಗಿ, ಆಸ್ಥೆಯಿಂದ ಸಂಘಟಿಸಿದ ಅಧ್ಯಕ್ಷ ಮುರಳೀಧರ ಕಜೆ ಮತ್ತು ಅವರ ಸಮರ್ಥ ತಂಡದ ಪರಿಶ್ರಮವನ್ನು ಎಷ್ಟು ಹೊಗಳಿದರೂ ಕಡಿಮೆಯೇ. ಸಹಸ್ರಾರು ಮೈಲಿಗಳ ಆಚೆ, ಸಂಪೂರ್ಣ ಭಿನ್ನವಾದ ಸಾಂಸ್ಕೃತಿಕ ಮತ್ತು ಆಡಳಿತಾ ತ್ಮಕ ವಾತಾವರಣ ವಿರುವ ಅಮೆರಿಕದ ಮಣ್ಣಿನಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಕಾರ್ಯಕ್ರಮ ವನ್ನು ಆಯೋಜಿಸುವುದು ಸಾಮಾನ್ಯದ ಮಾತಲ್ಲ.
ಇಡೀ ಮೂರು ದಿನಗಳ ಕಾರ್ಯಕ್ರಮದಲ್ಲಿ ಎಲ್ಲೂ ಒಂದೇ ಒಂದು ಸಣ್ಣ ಲೋಪ ಇರದಂತೆ ಅತ್ಯಂತ ವ್ಯವಸ್ಥಿತವಾಗಿ ಅವರು ಸಂಘಟಿಸಿದ್ದರು. ಸಮಯಪಾಲನೆಯಿಂದ ಹಿಡಿದು ಅತಿಥಿ ಸತ್ಕಾರದವರೆಗೆ ಪ್ರತಿಯೊಂದು ವಿಭಾಗದಲ್ಲೂ ಇಡೀ ತಂಡದ ದಕ್ಷತೆ ಎದ್ದು ಕಾಣುತ್ತಿತ್ತು. ಈ ಒಂದು ದಿವ್ಯ ಸಾಕಾರಕ್ಕಾಗಿ ಮುರಳೀಧರ ಕಜೆ ಮತ್ತು ಅವರ ತಂಡದವರು ಕಳೆದ ಐದಾರು ತಿಂಗಳುಗಳಿಂದ ಹಗಲಿರುಳು ನಿದ್ದೆಗೆಟ್ಟು, ತಮ್ಮ ವೈಯಕ್ತಿಕ ಬದುಕಿನ ಜವಾಬ್ದಾರಿಗಳ ನಡುವೆ ಯೂ ಶ್ರಮಿಸಿದ್ದು ಸಾರ್ಥಕ ಫಲವನ್ನು ನೀಡಿತು.
ನಮ್ಮ ಸ್ವಂತ ಊರಿನ ಇಂಥದೊಂದು ಬೃಹತ್ ಸಮಾವೇಶವನ್ನು ಏರ್ಪಡಿಸುವುದು ಅಷ್ಟು ಸುಲಭವಲ್ಲ. ಎಲ್ಲ ಸೌಕರ್ಯಗಳಿದ್ದರೂ ಏನಾದರೊಂದು ಕೊರತೆ ಎದ್ದು ಕಾಣುತ್ತದೆ. ಹೀಗಿರು ವಾಗ, ತಾಯ್ನಾಡಿನಿಂದ ಏಳೆಂಟು ಸಾವಿರ ಮೈಲಿ ದೂರದ ಅಮೆರಿಕದಲ್ಲಿ ಅಪ್ಪಟ ‘ಹವ್ಯಕ ಲೋಕ’ವನ್ನೇ ಮರುಸೃಷ್ಟಿಸಿದ್ದು ಕೇವಲ ಸಾಂಕ ಶಕ್ತಿಯಲ್ಲ, ಬದಲಿಗೆ ಅದು ಕಜೆ ಮತ್ತು ಅವರ ತಂಡದ ಅಪ್ರತಿಮ ದಕ್ಷತೆ, ಅಚಲ ಬದ್ಧತೆ ಮತ್ತು ಸಮುದಾಯದ ಮೇಲಿರುವ ಅಗಾಧವಾದ ಪ್ರೀತಿಯನ್ನು ತೋರಿಸುತ್ತದೆ. ಅವರ ಈ ನಿಸ್ವಾರ್ಥ ಸೇವೆ ಮತ್ತು ಸಂಘಟನಾ ಚಾತುರ್ಯ ಇಡೀ ಅನಿವಾಸಿ ಕನ್ನಡ ಸಮಾಜಕ್ಕೆ ಒಂದು ಅತ್ಯುನ್ನತ ಮಾದರಿಯಾಗಿ ಇತಿಹಾಸದ ಪುಟಗಳಲ್ಲಿ ಶಾಶ್ವತ ವಾಗಿ ದಾಖಲಾಗಿ ಉಳಿಯುತ್ತದೆ.