West Bengal Election ground report by Raghava Sharma Nidle: ಕೆಂಬಾವುಟದ ಜಾಗದಲ್ಲೀಗ ಕೇಸರಿ ಬಾವುಟ
1967ರಲ್ಲಿ ನಕ್ಸಲ್ ದಂಗೆ ಎದುರಿಸಲು ಅಂದಿನ ಸರಕಾರ ಪೊಲೀಸ್ ಪಡೆಗಳನ್ನು ಸಜ್ಜುಗೊಳಿಸಲು ಪ್ರಾರಂಭಿಸಿತ್ತು. ಆಗ ಜಾರುಗಾಂವ್ ನಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಒಬ್ಬರನ್ನು ನಕ್ಸಲ್ ನಾಯಕರು ರಚಿಸಿದ್ದ ರೈತ ಸಮಿತಿ ಸದಸ್ಯರು ಹತ್ಯೆ ಮಾಡಿದ್ದರಿಂದ, ಅದಕ್ಕೆ ಪ್ರತೀಕಾರವಾಗಿ, ಪೊಲೀಸರು ಗುಂಡಿನ ದಾಳಿ ಮಾಡಿದ್ದರು. 1967ರ ಮೇ 24ರಂದು ಒಂಬತ್ತು ಮಹಿಳೆಯರೊಂದಿಗೆ ಹಸುಳೆಯೊಂದು ಮೃತಪಟ್ಟಿತು.
-
ಗ್ರೌಂಡ್ ರಿಪೋರ್ಟ್
ವಿಶ್ವವಾಣಿ ಬಂಗಾಳ ಚುನಾವಣಾ ಯಾತ್ರೆ
ಬೆಳಗ್ಗೆ 11.30ರ ಸುಮಾರಿಗೆ ಆ ಸರಕಾರಿ ಶಾಲೆ ಪ್ರವೇಶಿಸಿದೆ. ಚುನಾವಣೆ ಕರ್ತವ್ಯದ ಹಿನ್ನೆಲೆಯಲ್ಲಿ ಮುಖ್ಯೋಪಾಧ್ಯಾಯ ಸೇರಿ ಇಬ್ಬರು ಶಿಕ್ಷಕರು ಮಾತ್ರ ಇದ್ದರು. 1 ರಿಂದ 5ನೇ ತರಗತಿಯವರೆಗೆ ಓದುತ್ತಿದ್ದ ಮಕ್ಕಳಲ್ಲಿ ಕೆಲವರು ಬಟ್ಟೆ ಮತ್ತು ಪ್ಲಾಸ್ಟಿಕ್ ಗಳನ್ನು ಕಟ್ಟಿ ತಯಾರು ಮಾಡಿದ್ದ ಚೆಂಡಿನಲ್ಲಿ ಫುಟ್ಬಾಲ್ ಆಡುತ್ತಿದ್ದರು. ಶಾಲೆಯ ಒಳಭಾಗದ ಗೋಡೆಯಿಂದ ಹೊರ ನೋಡಿದಾಗ ಕೆಂಪು ಕ್ರಾಂತಿಕಾರಿಗಳ ಪ್ರತಿಮೆಗಳು ರಸ್ತೆಗೆ ಮುಖ ಮಾಡಿ ನೋಡುತ್ತಿದ್ದ ದೃಶ್ಯ ಕಾಣುತ್ತಿತ್ತು.
ಹೌದು. ಅದು 1967ರಲ್ಲಿ ಭಾರತದಲ್ಲಿ ನಕ್ಸಲ್ ಚಳವಳಿ ಹುಟ್ಟುಹಾಕಿದ್ದ ನಕ್ಸಲ್ ಬಾರಿ ಪಟ್ಟಣದ ಬೆಂಗಾಯ್ ಜೋತ್ ಗ್ರಾಮ. ಗ್ರಾಮದ ಭೂಮಾಲೀಕರ ದಬ್ಬಾಳಿಕೆ ವಿರುದ್ಧ ಸೆಟೆದು ನಿಂತು ಕೃಷಿಕರು, ಬಡವರು, ಆದಿವಾಸಿ ಸೇರಿದಂತೆ ಹಿಂದುಳಿದ ವರ್ಗದ ಜನರನ್ನು ಒಗ್ಗೂಡಿಸಿ ವ್ಯವಸ್ಥೆ ವಿರುದ್ಧ ಶಸ್ತ್ರಸಜ್ಜಿತ ನಕ್ಸಲ್ ಚಳವಳಿಗೆ ಕರೆಕೊಟ್ಟ ಚಾರು ಮಜುಂದಾರ್, ಸರೋಜ್ ದತ್ತಾ, ಮಹಾದೇವ ಮುಖರ್ಜಿ ಅವರ 5 ದಶಕದ ಹಿಂದಿನ ನಕ್ಸಲ್ ರಕ್ತಕ್ರಾಂತಿ ಹಾಗೂ ಹೋರಾಟಗಳನ್ನು ಬಿಂಬಿಸುವ ಸಲುವಾಗಿ ಆ ಪ್ರತಿಮೆಗಳನ್ನು ನಿರ್ಮಿಸಲಾಗಿದೆ.
ಈ ಮೂವರ ಪ್ರತಿಮೆಗಳೊಂದಿಗೆ ಚೀನಾದ ಮಾವೋತ್ಸೆ ತುಂಗ್, ಲಿಂಪಿಯಾವೋ, ಲೆನಿನ್, ಆಂಗಲ್ಸ್, ಸ್ಟಾಲಿನ್ ಪ್ರತಿಮೆಗಳನ್ನೂ ಕೆತ್ತಲಾಗಿದೆ. ಹಿಂದೊಮ್ಮೆ ಬಂಗಾಳಕ್ಕೆ ಬಂಗಾಳವನ್ನೇ ನಡುಗಿಸಿದ್ದ ನಕ್ಸಲ್ ಹೋರಾಟ ಇಲ್ಲಿ ಅಂತ್ಯವಾಗಿ ವರ್ಷಗಳೇ ಕಳೆದಿವೆ. ಆದರೆ, ಅಂದಿನ ರಕ್ತಕ್ರಾಂತಿಯ ಕರಾಳ ಅಧ್ಯಾಯವನ್ನು ಇಲ್ಲಿಂದ ಮರೆ ಮಾಚಲು ಸಾಧ್ಯವೇ ಇಲ್ಲ.
1967ರಲ್ಲಿ ನಕ್ಸಲ್ ದಂಗೆ ಎದುರಿಸಲು ಅಂದಿನ ಸರಕಾರ ಪೊಲೀಸ್ ಪಡೆಗಳನ್ನು ಸಜ್ಜುಗೊಳಿಸಲು ಪ್ರಾರಂಭಿಸಿತ್ತು. ಆಗ ಜಾರುಗಾಂವ್ ನಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಒಬ್ಬರನ್ನು ನಕ್ಸಲ್ ನಾಯಕರು ರಚಿಸಿದ್ದ ರೈತ ಸಮಿತಿ ಸದಸ್ಯರು ಹತ್ಯೆ ಮಾಡಿದ್ದರಿಂದ, ಅದಕ್ಕೆ ಪ್ರತೀಕಾರವಾಗಿ, ಪೊಲೀಸರು ಗುಂಡಿನ ದಾಳಿ ಮಾಡಿದ್ದರು. 1967ರ ಮೇ 24ರಂದು ಒಂಬತ್ತು ಮಹಿಳೆಯರೊಂದಿಗೆ ಹಸುಳೆ ಯೊಂದು ಮೃತಪಟ್ಟಿತು.
ಇದನ್ನೂ ಓದಿ: West Bengal Election ground report by Raghava Sharma Nidle: ಪ್ರತ್ಯೇಕ ಗೋರ್ಖಾಲ್ಯಾಂಡ್ ಮುಗಿದ ಅಧ್ಯಾಯ. ಮುಂದೇನು ?
ಇದು ಇಡೀ ಪ್ರದೇಶದಲ್ಲಿ ಅಲ್ಲೋಲಕಲ್ಲೋಲ ಎಬ್ಬಿಸಿತ್ತು. ಸಾವಿನ ಸಂಖ್ಯೆ ಹೆಚ್ಚಾದ ಸುದ್ದಿಗಳು ಕಾಳ್ಗಿಚ್ಚಿನಂತೆ ಹಬ್ಬಿತು. ನಂತರದ ದಿನಗಳಲ್ಲಿ, ನೆರೆಯ ಪ್ರದೇಶಗಳಾದ ಖಾರಿಬಾರಿ ಮತ್ತು ಫ್ಯಾನ್ಸಿದೇವದ ಕೆಲವು ಭೂಮಾಲೀಕರನ್ನು ಹೊಡೆದು ಕೊಲ್ಲಲಾಯಿತು. ಕೆಂಪು ನಾಯಕರ ನೇತೃತ್ವದಲ್ಲಿ ಶುರುವಾದ ವರ್ಗ ಸಂಘರ್ಷ ತಾರಕಕ್ಕೇರಿತ್ತು.
ನಕ್ಸಲ್ ನಾಯಕರನ್ನು ಪೊಲೀಸರು ಬಂಧಿಸಿದರು. 1972ರಲ್ಲಿ ಚಾರು ಮಜುಂದಾರ್ ಜೈಲಿನ ಮೃತಪಟ್ಟರು. ನಕ್ಸಲ್ ಚಳವಳಿಯಲ್ಲಿ ಸಾಥಿಯಾಗಿದ್ದ ಕಾನು ಸನ್ಯಾಲ್, ಬಂಧನದಿಂದ ಬಿಡುಗಡೆಯಾಗಿ ನಂತರ ರಾಜಕೀಯಕ್ಕಿಳಿದರು. ತಮ್ಮ ಹೋರಾಟವನ್ನೂ ಮುಂದುವರಿಸಿದ್ದರು. 2010ರಲ್ಲಿ ಆರೋಗ್ಯ ತೀರಾ ಕ್ಷೀಣಿಸಿದ್ದ ಹಿನ್ನೆಲೆಯಲ್ಲಿ ಸಿಲಿಗುರಿಯಿಂದ 25 ಕಿಮೀ ದೂರವಿದ್ದ ಸೆಫ್ತುಲ್ಲಾಜೋತ್ ಗ್ರಾಮದ ಮನೆಯಲ್ಲಿ ಅವರು ಆತ್ಮಹತ್ಯೆಗೆ ಶರಣಾದರು.
ಕಾನು ಸನ್ಯಾಲ್ ಜನಿಸಿದ್ದ ಹಾಥಿಗಿಸಾ ಗ್ರಾಮದ ಮನೆಗೆ ಬೀಗ ಹಾಕಲಾಗಿದ್ದು, ಅದು ತುಕ್ಕು ಹಿಡಿದಿದೆ. 1967ರ ಹೋರಾಟದಲ್ಲಿ ತನ್ನ 15 ದಿನದ ಮಗುವನ್ನು ಬೆನ್ನಿಗೆ ಬಟ್ಟೆಯಲ್ಲಿ ಕಟ್ಟಿಕೊಂಡು ಕಾನು ಸನ್ಯಾಲ್ ಜತೆಗಿದ್ದ ಶಾಂತಿ ಮುಂಡಾ (ಈಗ 85 ವರ್ಷ) ಪಕ್ಕದ ಸಣ್ಣ ಮನೆಯೊಂದರಲ್ಲಿ ಕುಟುಂಬಸ್ಥರೊಂದಿಗೆ ವಾಸಿಸುತ್ತಿದ್ದಾಳೆ.
ಕೆಂಪು ನಾಯಕರ ಪ್ರತಿಮೆಗಳನ್ನು ನೋಡಲು ಇಲ್ಲಿ ಯಾರಾದರೂ ಬರುತ್ತಾರಾ ಎಂದು ಬೆಂಗಾಯ್ ಜೋತ್ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯರಲ್ಲಿ ನಾನು ಕೇಳಿದೆ. ಆ ನಾಯಕರ ಜನ್ಮದಿನ ಅಥವಾ ಅವರ ಹೋರಾಟ ಹುಟ್ಟಿದ ದಿನದಂದು ಸಿಪಿಐ(ಎಂಎಲ್) ಪಕ್ಷದ ಮುಖಂಡರು, ಕಾರ್ಯಕರ್ತರು ಇಲ್ಲಿ ಬಂದು ಪ್ರತಿಮೆಗಳಿಗೆ ಹಾರಹಾಕಿ, ನಮಸ್ಕರಿಸಿ ಹೋಗುತ್ತಾರೆ.
ಉಳಿದಂತೆ, ಇದನ್ನು ಯಾರೂ ಕೇಳುವವರಿಲ್ಲ ಎಂದು ತಿಳಿಸಿದರು. 1967ರಿಂದ ಆರಂಭಗೊಂಡು ನಕ್ಸಲ್ ಕ್ರಾಂತಿ ಬೆಳೆದ ಬಗೆ, ಯುವಕ-ಯುವತಿಯರನ್ನು ಸೆಳೆದ ರೀತಿ ಹಾಗೂ ವ್ಯವಸ್ಥೆ ವಿರುದ್ಧದ ಶಸ್ತ್ರಸಜ್ಜಿತ ಹೋರಾಟದಿಂದಾಗಿ ಈ ಪ್ರದೇಶ ಕರಾಳ ಇತಿಹಾಸವೊಂದರ ಭಾಗವಾಗಿದೆ. ಚಾರು ಮಜುಂದಾರ್ ಹುಟ್ಟು ಹಾಕಿದ ಸಿದ್ಧಾಂತದ ಪ್ರತಿಪಾದಕರು ಈಗಲೂ ಅವರನ್ನು ಪೂಜಿಸುತ್ತಾರೆ.
ಈ ಕೆಂಪು ನಾಯಕರ ಪ್ರತಿಮೆಗಳಿರುವ ಗ್ರಾಮದ ದಾರಿ ತೋರಿಸಿದ್ದು ಪಟ್ಟಣದ ಸ್ವಸ್ತಿಕ್ ಪುಸ್ತಕ ಭಂಡಾರದ ಅಂಗಡಿ ಮಾಲೀಕ ಸೋಮೆಂದ್ರ ಪ್ರಸಾದ್ ಬಸು. ಈ ಪಟ್ಟಣ ಮೊದಲಿಗಿಂತ ಚೆನ್ನಾಗಿದ್ದರೂ, ಇಲ್ಲಿ ಉದ್ಯೋಗದ ಸಮಸ್ಯೆ ಇದೆ. ಉತ್ಕೃಷ್ಟ ದರ್ಜೆಯ ಕಾಲೇಜುಗಳಿಲ್ಲ. ನಕ್ಸಲಿ ಸಮ್ ಕಮರ್ಷಿಯಲ್ ಹೋರಾಟವಾಗಿ ಬದಲಾದ ಕಾರಣ ದೇಶದಲ್ಲಿ ನೆಲೆ ಕಳೆದುಕೊಂಡಿತು. ಯಾವಾಗಲೋ ಅದನ್ನು ಹತ್ತಿಕ್ಕಬೇಕಿತ್ತು ಎಂದರು ಬಸು.
34 ವರ್ಷಗಳ ಎಡಪಕ್ಷಗಳ ಆಡಳಿತದಿಂದ ಇಲ್ಲಿ ಏನೂ ಆಗಲಿಲ್ಲ. ನನ್ನ ಮಗ ಈಗ ತಮಿಳುನಾಡಿನ ಚೆನ್ನೈನಲ್ಲಿ ಬಿ.ಟೆಕ್ ಓದುತ್ತಿzನೆ. ದಕ್ಷಿಣದ ರಾಜ್ಯಗಳಿಗೆ ಹೋಲಿಸಿದರೆ ಅಭಿವೃದ್ಧಿಯಲ್ಲಿ ತುಂಬಾ ಹಿಂದಿದ್ದೇವೆ. ನಿಮ್ಮಲ್ಲಿ ಹಿಂದೂ-ಮುಸ್ಲಿಂ ಧರ್ಮ ರಾಜಕಾರಣ ಇಲ್ಲ. ನಾನು ಮಮತಾ ಬ್ಯಾನರ್ಜಿ ಅಭಿಮಾನಿ ಅಲ್ಲ.
ಎಡಪಕ್ಷಗಳ ಹಿಂಸಾಚಾರದ ರಾಜಕಾರಣವನ್ನು ಅವರೂ ಅನುಸರಿಸುತ್ತಾರೆ. ಆದರೆ, ಬಿಜೆಪಿಯವರ ಜಾತಿ, ಧರ್ಮ ರಾಜಕಾರಣ ದ್ವೇಷಿಸುತ್ತೇನೆ. ಅವರು ಹಿಂದಿ ಸಂಸ್ಕೃತಿ ಹೇರಿ, ಬಂಗಾಳಿ ಸಂಸ್ಕೃತಿಗೆ ಹಾನಿ ಮಾಡುತ್ತಾರೆ ಎಂದು ದೂರಿದರು. ತಮ್ಮ ಪತ್ನಿಗೆ ಲಕ್ಷ್ಮಿ ಭಂಡಾರ್ ಯೋಜನೆ ಅಡಿಯಲ್ಲಿ ರೂ. 1500 ಹಣ ಖಾತೆಗೆ ಜಮೆಯಾದಾರೂ, ರಾಜಕೀಯ ಲಾಭಕ್ಕಾಗಿ ಜಾರಿ ಮಾಡುವ ಎಲ್ಲ ಉಚಿತ ಯೋಜನೆಗಳನ್ನು ಸುಪ್ರೀಂಕೋರ್ಟ್ ರದ್ದು ಮಾಡಿದಾಗಲೇ ಈ ದೇಶಕ್ಕೆ ಒಳ್ಳೆಯದಾಗುತ್ತದೆ ಎಂಬ ಖಚಿತ ನಿಲುವನ್ನು ಅವರು ಹೊರಹಾಕಿದರು.
ಉತ್ತರ ಬಂಗಾಳದಲ್ಲಿ ಚುನಾವಣಾ ಪ್ರವಾಸದುದ್ದಕ್ಕೂ ಲಕ್ಷ್ಮೀರ್ ಭಂಡಾರ್ ಯೋಜನೆ ಬಗ್ಗೆ ಕಿಡಿಕಾರುತ್ತಿದ್ದ ಕಾರು ಚಾಲಕ ಶಂಶೇರ್ ಅಲಿಗೆ ಸೋಮೆಂದ್ರ ಪ್ರಸಾದ್ ಬಸು ಅಭಿಪ್ರಾಯ ಕೇಳಿ ಬಹಳ ಖುಷಿ ಆಗಿತ್ತು. ಅರ್ಹರಿಗೆ ಮಾತ್ರ ನೆರವು ನೀಡಬೇಕು. ಸರಕಾರ ಅನರ್ಹರಿಗೂ ದುಡ್ಡು ಕೊಟ್ಟು ಸಾಕುತ್ತಿರುವುದು ಮೂರ್ಖತನ ಎಂದು ಶಂಶೇರ್ ಹೇಳುತ್ತಲೇ ಇದ್ದ. ಹಾಗಂತ, ಆತನ ಪತ್ನಿ ಮತ್ತು ತಾಯಿಗೆ ರೂ.1500+1500 ಬರುತ್ತಿದೆ. ಆವರಿಬ್ಬರು ನನ್ನ ಮಾತು ಎಲ್ಲಿ ಕೇಳುತ್ತಾರೆ? ಅವರ ವೋಟು ದೀದಿಗೆ. ನನ್ನ ವೋಟು ಈ ಬಾರಿ ಮೋದಿಗೆ ಎಂದು ತಿಳಿಸಿದ.
ನಕ್ಸಲ್ ಬಾರಿಯ ಕೇಸರಿಕರಣದ ಕಥೆ ಅಸಕ್ತಿದಾಯಕವಾಗಿದೆ. ಬಂಗಾಳ ಹೇಗೆ ಎಡಪಕ್ಷಗಳನ್ನು ಕೈಬಿಟ್ಟು ಟಿಎಂಸಿ ಕಡೆ ವಾಲಿತೋ ಅದೇ ರೀತಿ ನಕ್ಸಲ್ ಬಾರಿ ಕೂಡ ತನ್ನನ್ನು ಸೈದ್ಧಾಂತಿಕ ಬದಲಾವಣೆಗೆ ಮುಕ್ತಗೊಳಿಸಿತು. 1977ರಿಂದ 2011ರವರೆಗಿನ ಸಿಪಿಎಂ ಆಡಳಿತದ ನಂತರ ನಕ್ಸಲ್ ಬಾರಿಯಂತಹ ರಾಜಕೀಯ ನಿರ್ವಾತ ಸೃಷ್ಟಿಯಾಗಿದ್ದ ಪ್ರದೇಶವನ್ನು ಟಿಎಂಸಿ ತನ್ನದಾಗಿಸಿ ಕೊಳ್ಳಲು ಪ್ರಯತ್ನಿಸಿದರೂ, ನಕ್ಸಲ್ ಬಾರಿ ಒಳಗೊಂಡ ಡಾರ್ಜಿಲಿಂಗ್ ಲೋಕಸಭೆಯನ್ನು 2009ರಲ್ಲಿ ಬಿಜೆಪಿ ಗೆದ್ದುಕೊಂಡಿದ್ದರಿಂದ ಇಲ್ಲಿ ತನ್ನ ಅಸ್ತಿತ್ಬವನ್ನು ಆರಂಭಿಸಲು ಬಿಜೆಪಿಗೆ ಹೊಸದೊಂದು ಶಕ್ತಿ ಸಿಕ್ಕಿತ್ತು.
ದಶಕಗಳ ಕಾಲದ ಎಡಪಕ್ಷಗಳ ಕೇಡರ್ ಆಧಾರಿತ ಪ್ರಾಬಲ್ಯ ದುರ್ಬಲಗೊಂಡಿತು. 2021ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಆನಂದಮಯ್ ಬರ್ಮನ್ ನಕ್ಸಲ್ಬಾರಿ-ಮಟಿಗಾರ ಕ್ಷೇತ್ರದಿಂದ ಗೆದ್ದು ದಾಖಲೆ ನಿರ್ಮಿಸಿದರು.
2011ರಲ್ಲಿ ಕಾಂಗ್ರೆಸ್ ಪಕ್ಷದ ಶಂಕರ್ ಮಲಕರ್ ಸಿಪಿಐಎಂನ ಜರೆನ್ ರಾಯ್ ವಿರುದ್ಧ 6800 ಮತಗಳಿಂದ ಗೆದ್ದಿದ್ದರು. 2016ರಲ್ಲಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶಂಕರ್ ಮಲಕರ್, ಟಿಎಂಸಿ ವಿರುದ್ಧ 18 ಸಾವಿರ ಮತಗಳ ಅಂತದರಲ್ಲಿ ಗೆದ್ದು ಬೀಗಿದರು.
2021ರಲ್ಲಿ ಕಾಂಗ್ರೆಸ್ ನ ಮಲಕರ್ ಮೂರನೇ ಸ್ಥಾನಿಯಾದರೆ, ದ್ವಿತೀಯ ಸ್ಥಾನದಲ್ಲಿದ್ದ ಟಿಎಂಸಿಯ ರಾಜೇನ್ ಸುಂದಸ್ ರನ್ನು ಬಿಜೆಪಿಯ ಆನಂದಮಯ್ ಬರ್ಮನ್ 0 ಸಾವಿರ ವೋಟುಗಳ ಅಂತರ ದಲ್ಲಿ ಸೋಲಿಸಿದರು. ಕಾಂಗ್ರೆಸ್ ನ ಶಂಕರ್ ಮಲಕರ್ ಈಗ ಟಿಎಂಸಿ ಸೇರಿಕೊಂಡಿದ್ದು, ಅಭ್ಯರ್ಥಿ ಯಾಗಿ ಬಿಜೆಪಿ ವಿರುದ್ಧ ಕಣದಲ್ಲಿದ್ದಾರೆ.
ಈಗ ನಕ್ಸಲ್ ಬಾರಿಯ ಬಹುತೇಕ ಕಡೆ ಬಿಜೆಪಿ ಪ್ರಾಬಲ್ಯ ಹೊಂದಿದೆ. ನಕ್ಸಲರಿಂದ ಭ್ರಮ ನಿರಸನಗೊಂಡ ಮತದಾರರ ಆದ್ಯತೆ ಬದಲಾಗಿದೆ. ರಾಮ ನವಮಿಯಂದು ನಕ್ಸಲ್ ಬಾರಿ ಭಾರಿ ಜನಸ್ತೋಮದ ಶೋಭಾಯಾತ್ರೆಗೆ ಸಾಕ್ಷಿಯಾಗಿದೆ. ಇದು ಸೈದ್ಧಾಂತಿಕ ರೂಪಾಂತರಕ್ಕೆ ಸಾಕ್ಷಿ ಎನ್ನುತ್ತಾರೆ ಯುವಕ ಆದಿವಾಸಿ ಯುವಕ ಅಜಯ್ ಗೋರ್.
ಇಲ್ಲಿ ಆರೆಸ್ಸೆಸ್ ಕಾರ್ಯಕರ್ತರ ಪರಿಶ್ರಮ, ಅಲ್ಲಲ್ಲಿ ಶಾಖೆಗಳನ್ನು ನಡೆಸಿರುವುದು, ರಾಷ್ಟ್ರೀಯತೆ ಪ್ರತಿಪಾದನೆ, ಬುಡಕಟ್ಟು ಸಮುದಾಯಗಳ ಸಂಪರ್ಕ ಅಭಿಯಾನ ಸೇರಿದಂತೆ ಹಲವು ವರ್ಷಗಳ ಗ್ರೌಂಡ್ ವರ್ಕ್ ಬಿಜೆಪಿ ಪ್ರಾಬಲ್ಯಕ್ಕೆ ಕಾರಣವಾಗಿದೆ.
ನಕ್ಸಲ್ ಬಾರಿ ತನ್ನ ಕ್ರಾಂತಿಕಾರಿತ್ವದಿಂದ ದೂರ ಸರಿದಿದೆ. ವಿಶಾಲವಾಗಿ ಹರಿಯುತ್ತಿರುವ ಮೇಚಿ ನದಿಯಲ್ಲಿ ಸಾಕಷ್ಟು ನೀರು ಹರಿದಿದೆ. ಪ್ರಜಾಸತ್ತಾತ್ಮಕ ಮಾತುಕತೆ ಮತ್ತು ಅಭಿವೃದ್ಧಿ-ಆಧಾರಿತ ರಾಜಕೀಯದ ವಾಸ್ತವಗಳಿಗೆ ನಕ್ಸಲ್ ಬಾರಿ ತೆರೆದುಕೊಂಡಿದೆ. ವರ್ಗ ಸಂಘರ್ಷಗಳಲ್ಲಿ ಭಾಗಿಯಾ ಗಿದ್ದ ಸಮುದಾಯಗಳು ಚುನಾವಣಾ ಪ್ರಕ್ರಿಯೆಗಳಲ್ಲಿ ಭಾಗವಹಿಸುತ್ತಿವೆ.
ಜನರು ತಮ್ಮ ಬದುಕಿನಲ್ಲಿ ಸುಧಾರಣೆಗಳನ್ನು ಕಾಣಬಯಸುತ್ತಿದ್ದಾರೆಯೇ ವಿನಃ ಅಶಾಂತಿ, ತಿಕ್ಕಾಟ, ರಕ್ತಪಾತ ಬೇಕಿಲ್ಲ. ಕೇಂದ್ರ ಸರಕಾರ ಪ್ರೇರಿತ ಅಭಿವೃದ್ಧಿ, ಜಾಗತಿಕವಾಗಿ ಭಾರತ ಬಲಿಷ್ಠ ಗೊಂಡಿರುವುದು, ಬಂಗಾಳ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿರುವುದು, ಕೈಗಾರಿಕೆಗಳ ಕೊರತೆ ಬಗೆಗಿನ ಯುವಕ ಅಜಯ್ ಗೋರ್ ಮಾತುಗಳನ್ನು ಹಿರಿ ವಯಸ್ಸಿನ, ಸೈಕಲ್ ರಿಪೇರಿ ಅಂಗಡಿಯ ಮಾಲೀಕ ರಾಜೇಂದ್ರ ರಾಯ್ ಒಪ್ಪಲಿಲ್ಲ.
ವಿದೇಶದಿಂದ ಕಪ್ಪು ಹಣ ತಂದು ನಿಮ್ಮ ಅಕೌಂಟಿಗೆ ಹಾಕುತ್ತೇನೆ ಎಂದವರು ಎಲ್ಲಿ ಹೋದರು ಎಂದು ಅವರು ಪ್ರಶ್ನಿಸಿದರು. ಇವರ ವಾದದ ಮಧ್ಯೆ, ತನ್ನ ನಿಲುವನ್ನು ಖಚಿತಪಡಿಸದ ಜಗದೀಶ್ ರಾಯ, "ಮತ ಹಾಕಲು ಕ್ಯೂ ನಿಂತಾಗ ನಿರ್ಧಾರ ಮಾಡುತ್ತೇನೆ. ಜನರು ಕೂಡ ಇನ್ನೂ ತೀರ್ಮಾನ ಮಾಡಿಲ್ಲ. ಸದ್ಯ 50:50 ಫೈಟ್ ಆಗುತ್ತಿದೆ" ಎಂದು ಮಾತು ಮುಗಿಸಿದರು.
ರಕ್ತಪಾತ ಪಟ್ಟಣ ಈಗ ಶಾಂತಿಯ ನೆಲೆ
ನಕ್ಸಲ್ ಬಾರಿ ಈಗ ಬದಲಾವಣೆಗೆ ತೆರೆದುಕೊಂಡು ಹಲವು ವರ್ಷಗಳಾಗಿವೆ. ಬಿಜೆಪಿ-ಟಿಎಂಸಿ ವಿರುದ್ಧದ ವಾಮಪಂಥೀಯರ ಮಾತು-ವಾದ-ಪ್ರತಿಪಾದನೆಗಳು ಜನರ ಮಧ್ಯೆ ಪ್ರಸ್ತುತತೆ ಕಳೆದು ಕೊಂಡಿವೆ. ಅವರ ವಿಚಾರಧಾರೆಗಳಿಗೆ ಕಿವಿಯಾಗುವವರನ್ನು ಹುಡುಕುವ ಸ್ಥಿತಿ ಇದೆ. ನಕ್ಸಲ್ ಬಾರಿಯಲ್ಲಿ ಹುಟ್ಟಿ ವಿವಿಧ ರಾಜ್ಯಗಳಿಗೆ ವಿಸ್ತರಣೆಗೊಂಡ ನಕ್ಸಲ್ ವಾದ ಈಗ ಛತ್ತೀಸ್ ಗಢ ಹಾಗೂ ಬಂಗಾಳದ ಒಂದೆರಡು ಭಾಗಗಳಲ್ಲಿ ಬಿಟ್ಟರೆ ಉಳಿದೆಡೆ ಅಂತ್ಯ ಕಂಡಿದೆ. ಕೆಂಪು ಉಗ್ರರನ್ನು ದೇಶಾದ್ಯಂತ ವಿಸ್ತರಿಸಿದ್ದ ಈ ’ರಕ್ತಪಾತದ ಪಟ್ಟಣ’ ಈಗ ’ಶಾಂತಿಯ ನೆಲೆ’ಯಾಗಿದೆ. ಎಡಪಂಥೀ ಯರ ’ಕೆಂಪುಕೋಟೆ’ಯನ್ನು ಕೇಸರಿಪಡೆ ಭೇದಿಸಿದೆ. ಎಲ್ಲಾ ಬೆರಳೆಣಿಕೆ ಅಂಗಡಿ-ಮುಂಗಟ್ಟು ಹಾಗೂ ಮನೆಗಳಲ್ಲಿ ಎಡಪಕ್ಷಗಳ ಕೆಂಪು ಬಾವುಟ ಕಾಣುತ್ತದೆಯೇ ವಿನಃ ಉಳಿದೆಡೆ ಬಿಜೆಪಿ ಮತ್ತು ಟಿಎಂಸಿ ಬಾವುಟಗಳದ್ದೇ ಆರ್ಭಟ.