State BJP Vice President Rupali Naik Interview: ಸೋತ ದುಃಖ ಇಲ್ಲ , ಜನರ ಜತೆಗಿರುವ ಖುಷಿ ಇದೆ
ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ ವೇಳೆ ಅವರಿಗೆ ಮೊದಲು ಶಾಲು ಹಾಕುವ ಅವಕಾಶ ನನಗೆ ಸಿಕ್ಕಿತು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಿದ್ದಕ್ಕೆ ತುಂಬಾ ಧನ್ಯವಾದಗಳು ಎಂದು ನಾನು ಮನಸ್ಸಲ್ಲೇ ಹೇಳಿಕೊಂಡು ಕಣ್ಣೀರಿಟ್ಟೆ. ಇದನ್ನು ಕಂಡು ಮೋದಿಯವರ ಕಣ್ಣುಗಳೂ ತೇವಗೊಂಡವು.
-
ವಿಶ್ವವಾಣಿ ಸಂದರ್ಶನ: ವಿನುತಾ ಹೆಗಡೆ, ಶಿರಸಿ
ರಾಜ್ಯ ಬಿಜೆಪಿ ಉಪಾಧ್ಯಕ್ಷೆಯಾಗಿ ತಳಮಟ್ಟದಿಂದ ಪಕ್ಷ ಸಂಘಟಿಸುತ್ತಿರುವ ಗಟ್ಟಿಗಿತ್ತಿ ಜನರ ಒಡನಾಡಿ ರೂಪಾಲಿ ನಾಯ್ಕ್
ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ ವೇಳೆ ಅವರಿಗೆ ಮೊದಲು ಶಾಲು ಹಾಕುವ ಅವಕಾಶ ನನಗೆ ಸಿಕ್ಕಿತು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಿದ್ದಕ್ಕೆ ತುಂಬಾ ಧನ್ಯವಾದಗಳು ಎಂದು ನಾನು ಮನಸ್ಸಲ್ಲೇ ಹೇಳಿಕೊಂಡು ಕಣ್ಣೀರಿಟ್ಟೆ. ಇದನ್ನು ಕಂಡು ಮೋದಿಯವರ ಕಣ್ಣುಗಳೂ ತೇವಗೊಂಡವು. ಆ ಒಂದು ಕ್ಷಣ ನನಗೆ, ದೇವರ ದರ್ಶನವಾದ ಅನುಭವ ಆಯಿತು. ಚುನಾವಣೆಯಲ್ಲಿ ಸೋತೆನೆಂದು ದುಃಖ ವಿಲ್ಲ. ಜನರ ಒಡನಾಡಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂಬ ಸಂತೋಷ ಇದೆ ಎನ್ನುತ್ತಾರೆ ಕಾರವಾರ ವಿಧಾನಸಭಾ ಕ್ಷೇತ್ರದ ಬಿಜೆಪಿ ನಾಯಕಿ ರೂಪಾಲಿ ನಾಯ್ಕ್. ವಿಶ್ವವಾಣಿ ನಡೆಸಿದ ವಿಶೇಷ ಸಂದರ್ಶನದ ಪೂರ್ಣಪಾಠ ಇಲ್ಲಿದೆ.
ರೂಪಾಲಿ ನಾಯ್ಕ್(Rupali Naik) ಉತ್ತರ ಕನ್ನಡ ಜಿಲ್ಲೆಯ ಕಾರವಾರ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸಿದ್ದ ಜನನಾಯಕಿ. ಬಿಜೆಪಿಯ ನಿಷ್ಠಾವಂತ ನಾಯಕಿಯಾಗಿರುವ ಅವರು ತಳಮಟ್ಟದಿಂದ ಮೇಲೇರಿ ಪಕ್ಷದಲ್ಲಿ ಮಹತ್ವದ ಸ್ಥಾನ ಪಡೆದವರು. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಪ್ರತಿನಿಧಿಸಿ ಕಾರವಾರದಿಂದ ಗೆದ್ದರು. 2023ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್ ನ ಸತೀಶ ಸೈಲ್ ವಿರುದ್ಧ ಕೇವಲ 2038 ಮತಗಳ ಅಂತರದಿಂದ ಸೋತರು. ಮಹಿಳೆಯರು ಹಾಗೂ ಶೋಷಿತರ ಪರ ಸದಾ ಧ್ವನಿ ಎತ್ತುತ್ತ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿರುವ ರೂಪಾಲಿ ಅವರು ಸಾರಿಗೆ ಸಂಸ್ಥೆಯನ್ನೂ ಮುನ್ನಡೆಸುತ್ತಿದ್ದಾರೆ. ಅವರ ಪತಿ ಸಂತೋಷ್ ನಾಯಕ್ ಗುತ್ತಿಗೆ ದಾರರಾಗಿದ್ದಾರೆ. ರೂಪಾಲಿ ಅವರು ತಮ್ಮ ರಾಜಕೀಯ ಪಯಣ, ಸಮಾಜ ಸೇವೆ ಬಗ್ಗೆ ವಿಶ್ವವಾಣಿ ಜತೆ ಮುಕ್ತವಾಗಿ ಮಾತನಾಡಿದರು.
ಇದನ್ನೂ ಓದಿ: Miss Universe India Interview: ಮಿಸ್ ಯೂನಿವರ್ಸ್ ಇಂಡಿಯಾ ಮಣಿಕಾ ವಿಶ್ವಕರ್ಮ ಫ್ಯಾಷನ್ ಟಾಕ್
ರಾಜಕೀಯ ಹಾದಿ ಹೇಗಿತ್ತು?
ಗ್ರಾಮ ಪಂಚಾಯಿತಿ ಚೆಂಡಿಯಾ ನಮ್ಮ ಊರು. ಅಲ್ಲಿಂದ ನಾನು 2004ರಲ್ಲಿ ಪಂಚಾಯಿತಿ ಸದಸ್ಯೆಯಾಗಿ ಆಯ್ಕೆಯಾಗಿದ್ದೆ. ಆಗ ನನಗೆ 26 ವರ್ಷ. ಊರ ಹಿರಿಯರ ಆಶೀರ್ವಾದದಂತೆ ಎಲ್ಲರೂ ಸೇರಿ ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡಿದರು. ಆಗ ನಮಗೆ ರಾಜಕೀಯ ಬಗ್ಗೆ ಏನು ಗೊತ್ತಿರಲಿಲ್ಲ. ಉತ್ಸಾಹಿ ಯುವಜನರ ಪಡೆ ಜತೆಗೆ ಅಭಿವೃದ್ಧಿಯ ಉತ್ಸಾಹ ಇತ್ತು.
ಇದಾಗಿ ಒಂದು ವರ್ಷದಲ್ಲಿ ತಾಲೂಕು ಪಂಚಾಯತಿ ಚುನಾವಣೆ ಬಂತು. ಅಲ್ಲಿಯೂ ಎಲ್ಲರ ಬೆಂಬಲದಿಂದ ಆಯ್ಕೆಯಾದೆ. ಮಹಿಳಾ ಆದ್ಯತೆ ಇದ್ದುದರಿಂದ ತಾಲೂಕು ಪಂಚಾಯತಿ ಅಧ್ಯಕ್ಷೆಯೂ ಆದೆ. ಆ ಅವಧಿಯಲ್ಲಿ ನಮ್ಮ ತಾಲೂಕಿಗೆ ಸ್ವಚ್ಛತಾ ರಾಷ್ಟ್ರೀಯ ಪುರಸ್ಕಾರ ಕೂಡ ಸಿಕ್ಕಿತು. ನಂತರ ಬಿಜೆಪಿ ಕಾರ್ಯಕಾರಣಿ ಸದಸ್ಯೆಯಾಗಿ, ಜಿಲ್ಲಾ ಮಹಿಳಾ ಮೋರ್ಚಾ ಪ್ರಭಾರಿಯಾಗಿ ಸೇವೆ ಸಲ್ಲಿಸಿದೆ. 2018ರ ವಿಧಾನಸಭಾ ಚುನಾವಣೆ ಬಂತು. ಅಲ್ಲಿಯೂ ನಮ್ಮ ನಾಯಕರು ನನ್ನನ್ನು ಅಭ್ಯರ್ಥಿಯಾಗಿ ಮಾಡಿದರು. ಗೆದ್ದು ಬಂದೆ.
ರಾಜಕೀಯ ಏಕೆ ಬೇಕಿತ್ತು ಅಂತ ಯಾವತ್ತಾದರೂ ಅನಿಸಿದೆಯಾ?
ನಾನು ಬಿಸಿನೆಸ್ ಮಾಡ್ತಾ ಇದ್ದೆ. ಆದರೆ ಅನಿರೀಕ್ಷಿತವಾಗಿ ರಾಜಕೀಯಕ್ಕೆ ಬಂದೆ. ಎಲ್ಲೋ ಒಂದು ಕಡೆಗೆ ರಾಜಕಾರಣದಲ್ಲಿ ಕೆಲವೊಂದು ಸುಳ್ಳುಗಳನ್ನು ಹೇಳಬೇಕಾಗುತ್ತೆ. ಯಾಕೆಂದ್ರೆ ನಾವು ಹೇಳಿದ ಕೆಲಸ ಆಗುವುದಿಲ್ಲ. ನಾವು ಸತ್ಯದಿಂದಲೇ ಹೋರಾಡ್ತಾ ಇರ್ತೀವಿ. ಆದರೆ ಪಂಚಾಯತ್ ಲೆವೆಲ್ ಅಥವಾ ಮೇಲಿನ ಲೆವೆಲ್‌ನಲ್ಲಿ ಆ ಕೆಲಸಗಳು ಆಗದೆ ಇರೋದನ್ನು ನೋಡಿದರೆ ಸುಳ್ಳುಗಾರ ರಾಗ್ತೀವಿ. ರಾಜಕಾರಣಿಗಳು ಸರಿ ಇಲ್ಲ ಎಂಬ ಮಾತು ಬರುತ್ತದೆ. ಆ ಥರದಲ್ಲಿ ನನಗೆ ತುಂಬಾ ನೋವಾ ಗಿದೆ. ಜನರ ಸೇವೆ ಮಾಡಬೇಕು, ಅಭಿವೃದ್ಧಿ ಮಾಡಬೇಕು, ಜನರ ಜತೆ ಚೆನ್ನಾಗಿರಬೇಕು ಅಂತ ಆಸೆ ಇದೆ. ಅಧಿಕಾರಿಗಳು ಕೆಲವೊಮ್ಮೆ ನಾವು ಹೇಳಿದ ಕೆಲಸ ತಕ್ಷಣ ಮಾಡುವುದಿಲ್ಲ, ಕೆಲವೊಮ್ಮೆ ನಮ್ಮ ಸರಕಾರ ಇರೋದಿಲ್ಲ.
ಶಾಸಕಿಯಾದ ವೇಳೆ ನೆನಪಿಟ್ಟುಕೊಳ್ಳುವ ಸಮಾಜಮುಖಿ ಕೆಲಸಗಳೇನು?
ನಮ್ಮ ನಾಯಕರಾದ ಯಡಿಯೂರಪ್ಪ, ಅನಂತ್ ಕುಮಾರ್ ಹೆಗಡೆ, ಕಾಗೇರಿ ಅವರ ಮಾರ್ಗ ದರ್ಶನ, ನೆರವಿನಿಂದ 2018ರಿಂದ 23ರವರೆಗೆ ಕಾರವಾರ ಅಂಕೋಲಾ ಕ್ಷೇತ್ರದಲ್ಲಿ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿರುವೆ. ಕಾರವಾರಕ್ಕೆ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಆಗಬೇಕು ಎಂಬ ಬೇಡಿಕೆ ಬಹಳ ವರ್ಷಗಳಿಂದ ಇತ್ತು. ಯಡಿಯೂರಪ್ಪನವರು ಕಾರವಾರದಲ್ಲಿ ಹಾಸ್ಪಿಟಲ್‌ಗೆ 160 ಕೋಟಿ ಅನುದಾನ ಕೊಟ್ಟರು.
ಅದು ಇವತ್ತು ರೆಡಿಯಾಗಿದೆ. ಈ ಸಲ ಕಾಂಗ್ರೆಸ್‌ನವರು ಬಜೆಟ್ʼನಲ್ಲಿ 100 ಕೋಟಿ ಘೋಷಣೆ ಮಾಡಿದ್ದಾರೆ. ಆದರೆ ನಾವು 160 ಕೋಟಿ ಪ್ಲಸ್ 30 ಕೋಟಿ ಅಂದ್ರೆ 190 ಕೋಟಿ ಹಿಂದಿನ ನಮ್ಮ ಬಿಜೆಪಿ ಸರಕಾರದಲ್ಲೇ ಘೋಷಣೆಯಾಗಿ, ಆಸ್ಪತ್ರೆಯೂ ರೆಡಿಯಾಗಿದೆ. ಆದರೆ ಡಾಕ್ಟರ್‌ಗಳ ಕೊರತೆ ಇದೆ. ಇಬ್ಬರು ನ್ಯೂರೋ ಸರ್ಜನ್, ಹಾರ್ಟ್ ಸರ್ಜನ್ ಬೇಕು. ಎಂಆರ್‌ಐ ಮಷೀನ್ ತಂದಿಲ್ಲ ಕಾಂಗ್ರೆಸ್‌ನವರು. ಬಂದು ಉದ್ಘಾಟನೆ ಮಾಡಿ ಹೋಗಿದ್ದಾರೆ. ನಾವು ಮಾಡಿದ್ದಕ್ಕೆ ಅವರ ಹೆಸರು ಹಾಕಿಕೊಂಡು ಹೋಗಿದ್ದಾರೆ. ಬಿಜೆಪಿ ಸರಕಾರ ಇದ್ದಾಗ ಬಹಳಷ್ಟು ಸೇತುವೆಗಳಾಗಿವೆ.
ರಾಮನಗುಳ ಸೇತುವೆ ಆ ಟೈಮಿಗೆ ಪ್ರವಾಹ ಬಂದು ಕುಸಿದು ಹೋಗಿತ್ತು. 25 ಕೋಟಿ ರೂಪಾಯಿ ವೆಚ್ಚದಲ್ಲಿ ದೊಡ್ಡದಾದ ಬ್ರಿಡ್ಜ್ ನಿರ್ಮಾಣ ಮಾಡಿದ್ದೇವೆ. ಕಡವಾಡದಲ್ಲಿ ಬ್ರಿಡ್ಜ್ ನಿರ್ಮಾಣ ಆಗಿದೆ. ಸಿದ್ದರದಲ್ಲಿ ಬ್ರಿಡ್ಜ್ ನಿರ್ಮಾಣ ಆಗಿದೆ. ಇಡೀ ಉತ್ತರ ಕನ್ನಡ ಜಿಲ್ಲೆಗೆ ಒಂದು ಮಹಿಳಾ ಕಾಲೇಜ್ ಮೇಲ್ದರ್ಜೆಗೆ ಮಾಡಲಾಗಿದೆ. ಅಲ್ಲಿ ಹಳ್ಳಿಗಳಿಂದ ಬಂದ ಮಹಿಳೆಯರಿಗೆ ಹಾಸ್ಟೆಲ್ ನಿರ್ಮಾಣ ಮಾಡಿದ್ದೇವೆ. ನಾಲ್ಕು ಕೋಟಿ ವೆಚ್ಚದಲ್ಲಿ ಶಾಸಕರ ಸ್ಕೂಲ್ ಅಭಿವೃದ್ಧಿ ಮಾಡಲಾಗಿದೆ. ಕಾರವಾರ ದಲ್ಲಿ ಇರುವ ಮಾಲಾದೇವಿ ಗ್ರೌಂಡ್‌ನಲ್ಲಿ ಶೌಚಾಲಯ, ಚೇಂಜ್ ರೂಮ್, ವಿಶ್ರಾಂತಿ ಗೃಹ ಐದು ಕೋಟಿ ವೆಚ್ಚದಲ್ಲಿ ಮಾಡಿದ್ದೇವೆ. ಪ್ರವಾಸಿ ಮಂದಿರ ಕೂಡ 10 ಕೋಟಿಯಲ್ಲಿ ಮಾಡಿದ್ದೇವೆ. ಗೋಕರ್ಣ, ಸಿರಸಿ, ಅಚವೆ ಭಾಗಗಳಿಗೆ 10 ಕೋಟಿ ವೆಚ್ಚದಲ್ಲಿ ಒಳ್ಳೆಯ ಸಿಮೆಂಟ್ ರೋಡ್ ಮಾಡಿಕೊಟ್ಟಿದ್ದೇವೆ. ಶಾಲೆಗಳಲ್ಲಿ ಕಂಪ್ಯೂಟರ್‌ಗಳು ಕೊಟ್ಟಿದ್ದೀನಿ. ಯಾರೂ ಹೋಗದೆ ಇರುವಂತಹ ಜಾಗಕ್ಕೆ ಹೋಗಿ ಅಲ್ಲಿಯ ಜನರಿಗೆ ಮೂಲಭೂತ ಸೌಕರ್ಯಗಳಾದ ರೋಡು, ನೀರಿನ ವ್ಯವಸ್ಥೆ ಮಾಡಿಕೊಟ್ಟಿದ್ದೇನೆ.
ಕ್ಷೇತ್ರದಲ್ಲಿ ಸದ್ಯ ಯಾವ ಸಮಸ್ಯೆ ನಿವಾರಣೆ ಆಗಬೇಕಿದೆ?
ದೊಡ್ಡ ಸಮಸ್ಯೆ ಅಂದರೆ ನಿರುದ್ಯೋಗ. ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳು ಬಂದಿವೆ. ಇಲ್ಲಿ ಕೈಗಾ ಪ್ರಾಜೆಕ್ಟ್ ಇದೆ, ನೌಕಾನೆಲೆ ಬೇಸ್ ಇದೆ. ಇನ್ನೂ ದೊಡ್ಡ ಯೋಜನೆಗಳು ಬರ್ತಾ ಇವೆ. ಆದರೆ ನಮ್ಮ ಮಕ್ಕಳಿಗೆ ನೌಕರಿ ಸಿಗ್ತಾ ಇಲ್ಲ. ಮುಡುಗೇರಿಯಲ್ಲಿ ಪ್ರಾಜೆಕ್ಟ್ ಗೆ ಸುಮಾರು 2009 ಎಕರೆ ಜಮೀನು ಸ್ವಾಧೀನ ಮಾಡಿಕೊಂಡಿದ್ದಾರೆ. ಆ ರೈತರಿಗೆ ಈ ತನಕ ಒಂದು ರುಪಾಯಿ ಕೊಟ್ಟಿಲ್ಲ.
10ರಿಂದ 15 ಸಾವಿರಕ್ಕಾಗಿ ಇಲ್ಲಿಂದ ಗೋವಾಗೆ, ಹುಬ್ಬಳ್ಳಿಗೆ, ಬೆಂಗಳೂರಿಗೆ ಹೋಗ್ತಾರೆ. ಗ್ಯಾರಂಟಿ ಆಸೆ ತೋರಿಸಿ ಅಧಿಕಾರದಲ್ಲಿ ಕೂತ್ಕೊಂಡಿದ್ದಾರೆ. ಆದರೆ ಈಗ ಅಧಿಕಾರ ನಡೆಸಲಿಕ್ಕೆ ಅವರ ಹತ್ರ ಹಣ ಇಲ್ಲ. ಜನರ ಮೇಲೆ ತೆರಿಗೆ ಭಾರ ಹಾಕ್ತಾ ಇದ್ದಾರೆ. ಬೇರೆ ಬೇರೆ ರೀತಿಯಲ್ಲಿ ಹಣ ವಸೂಲಿ ಆಗ್ತಾ ಇದೆ. ಬಿಜೆಪಿ ಸರಕಾರ ಇದ್ದಾಗ ನಮ್ಮ ಊರಿನ ಅಭಿವೃದ್ಧಿಗೆ 490 ಕೋಟಿ ರು.ತಂದಿದ್ದೆವು. ಈಗಿನ ಶಾಸಕರು ಅದನ್ನೇ ಮುಂದುವರಿಸಿಕೊಂಡು ಹೋಗ್ತಾ ಇದ್ದಾರೆ ಹೊರತು ಹೊಸದಾಗಿ ಏನೂ ತಂದಿಲ್ಲ.
ಗ್ಯಾರಂಟಿ ಸ್ಕೀಮ್ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಗ್ಯಾರಂಟಿ ಕೊಡುವುದು ಬೇಡ ಎಂದು ಯಾರೂ ಹೇಳಲ್ಲ. ಜನರಿಗೆ ಒಳ್ಳೆಯದಾಗಬೇಕು ಅಂತ ಇದ್ದರೆ ಮನೆಗೆ ಒಂದು ನೌಕರಿ ಕೊಡಬಹುದಿತ್ತಲ್ಲ? ಕಲಿತವರು ಎಷ್ಟೋ ಜನ ಇದ್ದರು. ಎಷ್ಟೋ ಬಡವರು, ಅವರ ಮಕ್ಕಳಿದ್ದಾರೆ. ‘ಮನೆಗೆ ಒಂದು ನೌಕರಿ’ ಘೋಷಣೆ ಮಾಡಬಹುದಿತ್ತಲ್ಲ? ತೆರಿಗೆ ಮೂಲಕ ಜನರಿಂದ ಹಣ ಲೂಟಿ ಮಾಡಿ ಗ್ಯಾರಂಟಿ ಕೊಡ್ತಾ ಇದ್ದೀರಿ. ಮಹಿಳೆಯರಿಗೆ ಉಚಿತ ಸಾರಿಗೆ ಮಾಡಿದ್ರಿ, ಪುರುಷರು ಇಲ್ವಾ, ಕಾಲೇಜಿಗೆ ಹೋಗುವ ಹುಡುಗರು ಇಲ್ವಾ? ಒಂದು ವೋಟಿನ ಸಲವಾಗಿ 2000 ಕೊಟ್ಟು ಮನೆಯಲ್ಲಿ ಮಹಿಳೆಯರು ಕಿತ್ತಾಡುವ ಹಾಗೆ ಮಾಡಿದ್ರಲ್ಲ.
ಮೀನುಗಾರರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಯಾವ ಕಾರ್ಯಗಳು ಆಗಬೇಕಿದೆ?
ಹಿಂದೆ ಸಾಗರಮಾಲಾ ಯೋಜನೆ ಮಾಡಿದ್ರು. ಇವತ್ತು ಕೇಣಿಯಲ್ಲಿ ಮಾಡ್ತಾ ದ್ದಾರೆ. ಯಾವುದೇ ಯೋಜನೆ ಬರಲಿ, ಜನರ ಮನಸ್ಥಿತಿಯನ್ನು ಗುರುತು ಮಾಡಿಕೊಂಡು ಯೋಜನೆ ತರಬೇಕು. ಇವತ್ತು ನೋಡಿ ನೆವಲ್ ಬೇಸ್, ಇದು ಬಹಳ ಮುಖ್ಯವಾಗಿ ಬೇಕಾಗಿತ್ತು. ಜನರಿಗೆ ನ್ಯಾಯ ಸಿಗಬೇಕು. ಅಲ್ಲಿ ನೌಕರಿ ಸಿಗಬೇಕು. ಅವರನ್ನು ಒಕ್ಕಲೆಬ್ಬಿಸಿ ಸರಿಯಾಗಿ ಪರಿಹಾರ ಕೊಡದೆ ಎಲ್ಲೋ ಒಂದು ಸ್ಮಶಾನಕ್ಕೆ ಹಾಕಿಬಿಟ್ರೆ? ಬಹಳಷ್ಟು ಯೋಜನೆಗಳನ್ನು ತರ್ತಾ ಇದ್ದಾರೆ. ಆದರೆ ಅಲ್ಲಿಯ ಜನರ ವಿಶ್ವಾಸ ಗಳಿಸುವಲ್ಲಿ ಸರಕಾರ ಯಶಸ್ವಿಯಾಗಿಲ್ಲ.
ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಹುದ್ದೆಯನ್ನು ಹೇಗೆ ನಿಭಾಯಿಸುತ್ತಿದ್ದೀರಾ?
ಹೋರಾಟ ಮಾಡಲು ಅಥವಾ ಸಂಘಟನೆ ಮಾಡಲು ನನಗೆ ಯಾವುದೇ ರೀತಿಯ ಸಮಸ್ಯೆ ಆಗಲಿಲ್ಲ. ತಳಮಟ್ಟದಿಂದ ಬಂದ ನನಗೆ ಸಂಘನೆಯಲ್ಲಿ ಹಿಡಿತವಿದೆ. ನನಗೆ ಸಿಕ್ಕಿರುವುದು ಗೌರವದ ಸ್ಥಾನ. ಬಹಳ ಖುಷಿಯಿಂದ ನಿಭಾಯಿಸಿದ್ದೇನೆ. ಎಲ್ಲಾ ಕಡೆಗೆ ತಿರುಗಾಡ್ತಾ ಇದ್ದೇನೆ. ಪಕ್ಷ ಕೊಟ್ಟ ಜವಾಬ್ದಾರಿ ಚಾಚೂ ತಪ್ಪದೆ ಮಾಡ್ತಾ ಇದ್ದೇನೆ. ಬಿಜೆಪಿ ತಾಯಿ ಸಮಾನ ಇರುವ ಪಕ್ಷ. ನಾವು ತಾಯಿಗೆ ಮೋಸ ಮಾಡಬಾರದು. ರಾಜಕಾರಣಕ್ಕೆ ಮಹಿಳೆಯರು ಹೆಚ್ಚೆಚ್ಚು ಬರಬೇಕು. ಉನ್ನತ ಅಧಿಕಾರ ಪಡೆಯಬೇಕು.
ರಾಜಕಾರಣದಲ್ಲಿ ಮಹಿಳಾ ಪ್ರಾಬಲ್ಯ, ಇದಕ್ಕೆ ನಿಮ್ಮ ಅಭಿಪ್ರಾಯ?
ಗಂಡಸರಿಗೆ ಸಮಾನವಾಗಿ ಮಹಿಳೆ ಕೆಲಸ ಮಾಡೋದು ನೋಡ್ತಾ ಇದ್ದೇವೆ. ನಮ್ಮ ನಿರ್ಮಲಾ ಸೀತಾರಾಮನ್ ನೋಡಿ. ವಿತ್ತ ಸಚಿವೆ ಆಗಿ ನಮ್ಮ ದೇಶವನ್ನು ಮುನ್ನಡೆಸ್ತಾ ಇದ್ದಾರೆ. ರಾಷ್ಟ್ರಪತಿ ಮುರ್ಮು ಮೇಡಂ ಅವರನ್ನು ನೋಡಿ. ಯಾವುದೇ ರೀತಿಯ ಜವಾಬ್ದಾರಿ ಕೊಟ್ಟರೂ ಮಹಿಳೆ ಮಾಡಿಕೊಂಡು ಹೋಗಲಿಕ್ಕೆ ಸಾಧ್ಯ ಇದೆ ಅಂತ ತೋರಿಸಿಕೊಟ್ಟಿದ್ದಾರೆ. ಮಹಿಳೆಯರು ಅದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ರಾಜಕಾರಣಕ್ಕೆ ಬರಬೇಕು. ನಮ್ಮ ಸಂವಿಧಾನ ಕೂಡ ನಮಗೆ ಅಷ್ಟೇ ಗೌರವ ಕೊಟ್ಟಿದೆ. ಆ ಸಂವಿಧಾನಕ್ಕೂ ಅಂಬೇಡ್ಕರ್ ಅವರಿಗೂ ನಾವು ಧನ್ಯವಾದ ಹೇಳಬೇಕಿದೆ.
ರಾಜಕೀಯದಲ್ಲಿ ನಿಮಗೆ ಗುರು, ಸ್ಪೂರ್ತಿ ಯಾರು?
ನನಗೆ ಯಾರು ರಾಜಕೀಯ ಗುರುಗಳು ಇಲ್ಲ. ನಮ್ಮ ಊರ ನಾಗರಿಕರು, ನಮ್ಮ ಯುವಕ ಯುವತಿ ಯರೇ ನನಗೆ ಗುರುಗಳು. ನಂತರ ಯಡಿಯೂರಪ್ಪಾಜಿ, ಅನಂತ ಕುಮಾರ್ ಹೆಗಡೆ ನನಗೆ ತುಂಬಾ ಆಶೀರ್ವಾದ ಮಾಡಿದ್ದಾರೆ, ಬೆಂಬಲಿಸಿದ್ದಾರೆ.
ಕಾಗೇರಿ ಅವರನ್ನು ಗೆಲ್ಲಿಸಲು ತುಂಬಾ ಶ್ರಮ ಪಟ್ಟಿದ್ದೀರಾ, ಅನುಭವ ಹೇಗಿತ್ತು?
ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬ ಮಹತ್ವಾಕಾಂಕ್ಷೆ, ಕೇಂದ್ರದಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬರಬೇಕಿತ್ತು. ಇದೊಂದು ಚಾಲೆಂಜ್ ಆಗಿ ನಾವು ಸ್ವೀಕಾರ ಮಾಡಿದ್ವಿ. ಯಾವುದೇ ಒಂದು ಪರಿಸ್ಥಿತಿಯಲ್ಲಿ ನಮ್ಮ ಒಂದೇ ಒಂದು ಮತ ಈ ಕಡೆಯಿಂದ ಬೇರೆ ಆಗಬಾರದು ಅನ್ನೋ ನಿಟ್ಟಿನಲ್ಲಿ ಇಡೀ ಉತ್ತರ ಕನ್ನಡ ಜಿಲ್ಲೆ ತಿರುಗಾಟ ಮಾಡಿದ್ದೇವೆ. ನಮ್ಮ ಕಾರ್ಯಸೂಚಿಗಳಂತೆ ನಮಗೆ ಜನ ಆಶೀರ್ವಾದ ಮಾಡಿದರು.
2028ಕ್ಕೆ ಕಾರವಾರ-ಅಂಕೋಲದಿಂದ ಮತ್ತೆ ರೂಪಾಲಿ ಅವರ ಸ್ಪರ್ಧೆ ಖಚಿತವೇ, ಸಿದ್ಧತೆ ಹೇಗಿದೆ?
ಸಿದ್ಧತೆ ಅಂತ ಏನಿಲ್ಲ. ಏನು ಕೆಲಸ ಮಾಡಬೇಕು ಅದು ಮಾಡ್ತಾ ಇದ್ದೇನೆ. ಚುನಾವಣೆ ಬಂದಾಗ ಅಷ್ಟೇ ಕೆಲಸ ಮಾಡೋದಲ್ಲ. ನಾನು ಸೋತಿದ್ದೇನೆ ಅಂತ ನನಗೆ ಅನಿಸ್ತಾ ಇಲ್ಲ. ನಾವು ಇರುವಷ್ಟು ದಿವಸ ಜನರ ಸೇವೆ ಮಾಡಬೇಕಾಗಿದೆ. ಅವರಿಗೆ ಮತ್ತೆ ಮತ್ತೆ ನಾವು ಸಿಗಬೇಕು, ಜನರ ಜತೆಗೆ ಇರಬೇಕು. ಈ ಭಾವನೆಯೊಂದಿಗೆ ನಾವು ಜನರ ಜತೆಗೆ ಇದ್ದು ಕೆಲಸ ಮಾಡ್ತಾ ಇದ್ದೇವೆ.
ನೀವು ಶಾಸಕಿ ವೇಳೆ ಬಿಎಸ್‌ವೈ ಸಿಎಂ ಆಗಿದ್ರು, ಆ ಸಂದರ್ಭ ಹೇಗಿತ್ತು?
2005ರಲ್ಲೇ ಯಡಿಯೂರಪ್ಪ ಅವರ ಪರಿಚಯವಾಗಿತ್ತು. ಕಾರವಾರದಲ್ಲಿ ಗುಡ್ಡ ಕುಸಿತ ಆದಾಗ ನಾನು ತಾಲೂಕು ಪಂಚಾಯಿತಿ ಅಧ್ಯಕ್ಷೆ ಆಗಿದ್ದೆ. ಆಗ 19 ಜನ ಮೃತಪಟ್ಟಿದ್ರು. ಯಡಿಯೂರಪ್ಪ ಅವರು ಅಲ್ಲಿಗೆ ಭೇಟಿ ನೀಡಿದ್ದ ವೇಳೆ ಅವರ ಮಾತುಗಳಿಂದ ಪ್ರಭಾವಿತಳಾದೆ. ಯಾವಾಗಲೂ ನಮಗೆ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ. ಸಂಘಟನೆ ವಿಷಯದಲ್ಲಿ ಇವತ್ತು ಕೂಡ ಗಟ್ಟಿಯಾಗಿ ನಿಲ್ಲುತ್ತಿದ್ದಾರೆ. ಅವರ ನಾಯಕತ್ವ ಮುಂದಿನ ಪೀಳಿಗೆಗೆ ಮಾದರಿ. ತಂದೆ ಹಾದಿಯಲ್ಲಿ ವಿಜಯೇಂದ್ರ ಸಾಗ್ತಾ ಇದ್ದಾರೆ,
ಕಾರ್ಯವೈಖರಿ ಹೇಗೆ?
ಎಲ್ಲರನ್ನೂ ಮುನ್ನಡೆಸಿಕೊಂಡು ವಿಜಯೇಂದ್ರ ಅವರು ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ತಂದೆಯವರ ರೀತಿ ಅವರ ಕಾರ್ಯ ವೈಖರಿ ಇದೆ. ಪ್ರತಿ ಜಿಲ್ಲೆಯ ಮೂಲೆಮೂಲೆಗೆ ತೆರಳಿ ಸಂಘಟನೆ ಮಾಡ್ತಾ ಇದ್ದಾರೆ. ಒಳ್ಳೆಯ ಯುವ ನಾಯಕರಾಗಿ ತಮ್ಮನ್ನು ಗುರುತಿಸಿಕೊಳ್ಳುತ್ತಿದ್ದಾರೆ. ಸಂಘಟನೆಗೆ ಮಹತ್ವ ಕೊಡಬೇಕು, ಎಲ್ಲಿಯೂ ಕೂಡ ಕೀಳುಮಟ್ಟದ ರಾಜಕಾರಣ ನಾವು ಮಾಡಬಾರದು ಎಂಬ ಸೂಚನೆ ವಿಜಯೇಂದ್ರ ಅವರಿಂದ ಬರ್ತಾ ಇರುತ್ತದೆ.
ಪ್ರಧಾನಿ ಮೋದಿ ಅವರ ಜತೆಗಿನ ಮಾತುಕತೆ ಹೇಗಿತ್ತು?
ನಾನು ಐದು ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಅವರ ಜತೆ ವೇದಿಕೆ ಹಂಚಿಕೊಂಡಿದ್ದೇನೆ. ಅಂಕೋಲಕ್ಕೆ ನರೇಂದ್ರ ಮೋದಿ ಅವರು ಆಗಮಿಸಿದ ವೇಳೆ ಎರಡು ಲಕ್ಷ ಜನ ಸೇರಿದ್ದರು. ಅದು 42 ವರ್ಷಗಳ ಬಳಿಕ ಪ್ರಧಾನಿಯೊಬ್ಬರು ಅಂಕೋಲಕ್ಕೆ ಆಗಮಿಸಿ ಕಾರ್ಯಕ್ರಮ ಆಗಿತ್ತು. ನೌಕಾ ಪಡೆಯ ಜಾಗ ಅದು, ರಿಸರ್ವ್ ಆಗಿದೆ, ಅಲ್ಲಿ ಪ್ರಧಾನಿ ಕಾಲಿಡಬಾರದು ಎಂದು ಕಾಂಗ್ರೆಸ್‌ನವರು ಕಿತಾಪತಿ ಮಾಡಿದರು.
ನಾನು ಹಠ ಹಿಡಿದು ಯಾವುದೇ ಪರಿಸ್ಥಿತಿಯಲ್ಲಿ ಸಮಾವೇಶ ಆಗಲೇಬೇಕು ಅಂದೆ. ಸಮಾವೇಶಕ್ಕೆ 6 ದಿನ ಬಾಕಿ ಇತ್ತು. ಪ್ರಲ್ಹಾದ್ ಜೋಶಿ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಇವರೆಲ್ಲ ಸಹಾಯ ಮಾಡಿದ್ರು. ರಾತ್ರಿ ಹಗಲು ಕೆಲಸ ಮಾಡಿದೆವು. ಆ ಸಮಾವೇಶ ನಡೆಸಿದ್ದಕ್ಕೆ ನನಗೆ ತುಂಬಾ ಖುಷಿ ಇದೆ. ಮೋದಿಜಿ ಅವರು ಕೂಡ ತುಂಬಾ ಖುಷಿ ಪಟ್ಟರು. ಆನಂತರ ಶಿರಸಿಗೆ ಕೂಡ ಬಂದರು. ಅವರಿಗೆ ಮೊದಲ ಶಾಲು ಹಾಕುವ ಅವಕಾಶ ನನಗೆ ಸಿಕ್ಕಿತು. ನನ್ನ ಕಣ್ಣಿಂದ ಆನಂದಭಾಷ್ಪ ಬರ್ತಾ ಇತ್ತು. ನಾನು ಒಂದೇ ಹೇಳ್ಕೊಂಡಿದ್ದು- ತಾವು ಅಯೋಧ್ಯೆಯಲ್ಲಿ ರಾಮ ಮಂದಿರ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು. ನನ್ನ ಕಣ್ಣಲ್ಲಿ ನೀರು ಬರ್ತಾ ಇದ್ದಂತೆ ಅವರು ಕೂಡ ಕಣ್ಣಲ್ಲಿ ನೀರು ಹಾಕಿಬಿಟ್ರು. ಮೋದಿ ಅವರು ಭಾವುಕರಾದ ಕ್ಷಣ ಕಂಡು ನನಗೆ ಎಲ್ಲೋ, ದೇಗುಲಕ್ಕೆ ಬಂದಿದ್ದೇನೆ ದೇವರ ದರ್ಶನ ಆಗ್ತಾ ಇದೆ ಅಂತ ಭಾಸವಾಯಿತು. ಆ ಕ್ಷಣವನ್ನು ನಾನು ಯಾವತ್ತೂ ಮರೆಯಲಾರೆ.