ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bihar Election ground report by Raghav Sharma Nidle: ಪರ್ವತ ಪುರುಷನ ಪರಿವಾರ ಕೈ ಕಡೆ ವಾಲಿದ್ದೇಕೆ ?

ಬಿಹಾರದ ಗಯಾದಿಂದ ಅತ್ರಿ ವಿಧಾನಸಭೆ ವ್ಯಾಪ್ತಿಯ ಗೆಹ್ಲೋರ್ ಇತಿಹಾಸ ಪ್ರಸಿದ್ಧ ಸ್ಥಳ. ಈ ಹಳ್ಳಿ ವಿಶ್ವದ ಗಮನ ಸೆಳೆದಿದ್ದು ಬಿಹಾರದ ಪರ್ವತ ಪುರುಷ ದಶರಥ ಮಾಂಜಿ ಕಾರಣದಿಂದ. ಬರೀ ಸುತ್ತಿಗೆ ಮತ್ತು ಉಳಿ ಬಳಸಿ ೨೨ ವರ್ಷಗಳ ಕಾಲ ಗೆಹ್ಲೋರ್‌ನ ಬೃಹತ್ ಬೆಟ್ಟವನ್ನು ಏಕಾಂಗಿಯಾಗಿ ಕೊರೆದು ರಸ್ತೆ ನಿರ್ಮಾಣ ಮಾಡಿದ್ದ ಮಹಾನ್ ಪರ್ವತ ಪುರುಷ ಆತ.

ಪರ್ವತ ಪುರುಷನ ಪರಿವಾರ ಕೈ ಕಡೆ ವಾಲಿದ್ದೇಕೆ ?

-

Ashok Nayak
Ashok Nayak Nov 9, 2025 7:52 AM

ನಿತೀಶರು ಅಜ್ಜನಿಗೆ ಮಾನ-ಸಮ್ಮಾನ ನೀಡಿದರು. ಅವರಿಂದಾಗಿಯೇ ನಮ್ಮ ಕುಟುಂಬಕ್ಕೆ ಬಿಹಾರದಲ್ಲಿ ಗುರುತು ಸಿಕ್ಕಿತು ಎನ್ನುವ ದಶರಥ ಮಾಂಜಿ ಕುಟುಂಬ, ರಾಹುಲ್ ಗಾಂಧಿ ಮನೆ ಕಟ್ಟಿಕೊಟ್ಟದ್ದರಿಂದ ಈ ಬಾರಿ ಮಹಾಘಟಬಂಧನಕ್ಕೆ ನಮ್ಮ ಮತ ಎಂದು ಘೋಷಿಸಿದೆ.

ಬಿಹಾರದ ಗಯಾದಿಂದ ಅತ್ರಿ ವಿಧಾನಸಭೆ ವ್ಯಾಪ್ತಿಯ ಗೆಹ್ಲೋರ್ ಇತಿಹಾಸ ಪ್ರಸಿದ್ಧ ಸ್ಥಳ. ಈ ಹಳ್ಳಿ ವಿಶ್ವದ ಗಮನ ಸೆಳೆದಿದ್ದು ಬಿಹಾರದ ಪರ್ವತ ಪುರುಷ ದಶರಥ ಮಾಂಜಿ ಕಾರಣದಿಂದ. ಬರೀ ಸುತ್ತಿಗೆ ಮತ್ತು ಉಳಿ ಬಳಸಿ ೨೨ ವರ್ಷಗಳ ಕಾಲ ಗೆಹ್ಲೋರ್‌ನ ಬೃಹತ್ ಬೆಟ್ಟವನ್ನು ಏಕಾಂಗಿಯಾಗಿ ಕೊರೆದು ರಸ್ತೆ ನಿರ್ಮಾಣ ಮಾಡಿದ್ದ ಮಹಾನ್ ಪರ್ವತ ಪುರುಷ ಆತ.

ಸಕಾಲಕ್ಕೆ ಚಿಕಿತ್ಸೆ ಸಿಗದೆ ಸತ್ತ ತನ್ನ ಪತ್ನಿಯ ಸ್ಥಿತಿ ಹಳ್ಳಿಯ ಇತರರಿಗೆ ಬರಬಾರದು. ಬೆಟ್ಟ ದಾಟಿ ಆಸ್ಪತ್ರೆಗೆ ತೆರಳಲು ಸರಿಯಾದ ರಸ್ತೆ ಬೇಕು ಎಂದು ಆ ಬೆಟ್ಟವನ್ನೇ ಕೊರೆದ ಛಲವಾದಿ ಈ ದಶರಥ ಮಾಂಜಿ. ಗೆಹ್ಲೋರ್‌ನಲ್ಲಿ ಮಾಂಜಿ ನೆಲೆಸಿದ್ದ ಕಾಲೊನಿಗೆ ‘ದಶರಥ ನಗರ’ ಎಂದು ನಾಮಕರಣ ಮಾಡಲಾಗಿದೆ.

ಇದನ್ನೂ ಓದಿ: B‌ihar Election ground report by Raghav Sharma Nidle: ಬಿಹಾರಿಗರನ್ನು ಹೊಸ ಚಿಂತನೆಗೆ ಪ್ರೇರೇಪಿಸಿದ ಪ್ರಶಾಂತ್

ಇದು ಮಾಂಜಿ ಸಮುದಾಯದವರ ಕಾಲೊನಿ. ಅವರ ಹಳೆ ಮನೆಗೆ ತಾಗಿಕೊಂಡಂತೆ ಇರುವ ಬಿಳಿ ಬಣ್ಣದ ಮಾಂಜಿ ಪ್ರತಿಮೆ ಅತಿಥಿಗಳನ್ನು ಸ್ವಾಗತಿಸುತ್ತದೆ. ಅವರು ವಾಸವಿದ್ದ ಹಳೆ ಮನೆ ಬಹುತೇಕ ಕುಸಿದಿದೆ. ಪುತ್ರ ಭಗೀರಥ ಮಾಂಜಿ ಮತ್ತು ಮೊಮ್ಮಕ್ಕಳು ಆ ಮನೆ ಯಲ್ಲೇ ಸೆಪ್ಟೆಂಬರ್‌ʼವರೆಗೂ ವಾಸಿಸುತ್ತಿದ್ದರು.

Nidle

2025ರ ಜೂನ್‌ನಲ್ಲಿ ನಳಂದಾ ಜಿಲ್ಲೆಯ ರಾಜ್‌ಗೀರ್‌ಗೆ ರಾಹುಲ್ ಗಾಂಧಿ ಬಂದಿದ್ದರು. ಅಲ್ಲಿಂದ ಗೆಹ್ಲೋರ್‌ಗೆ ಆಗಮಿಸಿ ದಶರಥ ಮಾಂಜಿ ಮನೆಗೆ ಭೇಟಿ ನೀಡಿದ್ದರು. ತನ್ನ ತಂದೆ ಬೆಟ್ಟ ಕೊರೆದು ರಸ್ತೆ ನಿರ್ಮಾಣ ಮಾಡಿದ ಸ್ಥಳವವನ್ನು ಭಗೀರಥ ಮಾಂಜಿ, ರಾಹುಲ್‌ಗೆ ತೋರಿಸಿದ್ದರು. ಆಗ ರಾಹುಲ್, ಮಾಂಜಿ ಪರಿವಾರಕ್ಕೆ ಯಾವುದೇ ಭರವಸೆ ನೀಡಿರಲಿಲ್ಲ.

ಆದರೆ, ಕೆಲ ದಿನಗಳ ನಂತರ ರಾಹುಲ್ ಸೂಚನೆ ಮೇರೆಗೆ ಕಾಂಗ್ರೆಸ್‌ನ ಕೆಲ ಮುಖಂಡರು, ಎಂಜಿನಿಯರ್ ಹಾಗೂ ಕಾರ್ಮಿಕರು ದಶರಥ ನಗರಕ್ಕೆ ಬಂದು ದಶರಥ ಮಾಂಜಿ ಪರಿವಾರಕ್ಕೆ ಹೊಸ ಮನೆ ಕಟ್ಟಲು ಶುರು ಮಾಡಿದರು. ಕೆಲ ದಿನಗಳಲ್ಲೇ ಸುಂದರ ಮನೆ ತಲೆ ಎತ್ತಿತು. ‘ಇಂಥ ಮನೆಯ ಮಾಲೀಕ ನಾವಾಗುತ್ತೇವೆ’ ಎಂಬ ಕಲ್ಪನೆಯೂ ಮಾಂಜಿ ಪರಿವಾರಕ್ಕೆ ಇರಲಿಲ್ಲ!

ಆಗ-ಸೆಪ್ಟೆಂಬರ್ ಮತದಾರರ ಅಧಿಕಾರ ಯಾತ್ರೆ ವೇಳೆ ಗಯಾಕ್ಕೆ ಬರುವಂತೆ ಭಗೀರಥ ಮಾಂಜಿಯನ್ನು ರಾಹುಲ್ ಗಾಂಧಿ ತಂಡ ಆಹ್ವಾನಿಸಿತ್ತು. ಅಲ್ಲಿ ಹೊಸ ಮನೆಯ ಕೀಯನ್ನು ಮಾಂಜಿಗೆ ಹಸ್ತಾಂತರಿಸಿದರು. ಗೆಹ್ಲೋರ್‌ನ ದಶರಥನಗರ ಬಿಡಿ, ಇಲ್ಲಿರುವ ಹತ್ತು-ಹಲವು ಮಾಂಜಿ ಕಾಲೊನಿಗಳಲ್ಲಿ ಮಣ್ಣು-ಇಟ್ಟಿಗೆ ಮನೆಗಳಷ್ಟೇ ಇವೆ.

ಸಿಮೆಂಟ್ ಮನೆಗಳ ಕಲ್ಪನೆಯೂ ಇಲ್ಲ. ಹೀಗಿರುವಾಗ, ರಾಹುಲ್ ಗಾಂಧಿ ಮನೆ ಕಟ್ಟಿ ಕೊಟ್ಟದ್ದು ಮಾಂಜಿ ಕುಟುಂಬದ ಮೆಚ್ಚುಗೆಗೆ ಪಾತ್ರವಾಗಿದೆ. ಈ ಬೆಳವಣಿಗೆಗಳ ಬಳಿಕ ಅತ್ರಿ ವಿಧಾನಸಭೆ ಕ್ಷೇತ್ರಕ್ಕೆ ಮಹಾಘಟಬಂಧನ್ ಅಭ್ಯರ್ಥಿಯಾಗಿ ಭಗೀರಥ ಮಾಂಜಿ ಅವರನ್ನು ಮಾಡಿದರೆ ಹೇಗೆ? ಎಂಬ ಚರ್ಚೆ ಸ್ಥಳೀಯ ಕಾಂಗ್ರೆಸ್ಸಿಗರಲ್ಲಿ ನಡೆದಿತ್ತು. ಭಗೀರಥ ಮಾಂಜಿ ಅವರಲ್ಲೂ ಆಸಕ್ತಿ ಮೂಡಿತು.

Screenshot_8 R R

ತಮಗೆ ಟಿಕೆಟ್ ನೀಡುವಂತೆ ಕೇಳಲು ದೆಹಲಿಗೆ ಹೋಗಿದ್ದ ಭಗೀರಥ ಮಾಂಜಿ, ದೆಹಲಿಯ ಪಹಾರ್‌ಗಂಜ್‌ನ ಹೊಟೇಲಲ್ಲಿ ಉಳಿದು ೪ ದಿನ ಕಾದರೂ ರಾಹುಲ್ ಗಾಂಧಿ ಭೇಟಿ ಸಾಧ್ಯ ವಾಗಲಿಲ್ಲ. ದಶರಥ ನಗರಕ್ಕೆ ವಿಶ್ವವಾಣಿ ಭೇಟಿ ನೀಡಿದಾಗ ಭಗೀರಥ ಮಾಂಜಿ ಇರಲಿಲ್ಲ.

ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಗಯಾದಲ್ಲಿ ನಡೆಯಲಿರುವ ಚುನಾವಣಾ ಸಭೆಗೆ ಕರೆದುಕೊಂಡು ಹೋಗಿದ್ದರು. ನಮ್ಮ ಕುಟುಂಬ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸ ಲಿದೆ. ನೆಮ್ಮದಿಯಿಂದ ವಾಸಿಸಲು ಮನೆ ಕಟ್ಟಿಕೊಟ್ಟ ವ್ಯಕ್ತಿಯ ಪಕ್ಷಕ್ಕೆ ಮತ ಹಾಕುವುದು ನಮ್ಮ ಕರ್ತವ್ಯ ಎಂಬ ಕುಟುಂಬದ ನಿರ್ಧಾರವನ್ನು ಭಗೀರಥ ಮಾಂಜಿ ಪುತ್ರಿ ಆಂಶು ಮಾಂಜಿ ಮತ್ತು ಅಳಿಯ ಮಿಥುನ್ ಮಾಂಜಿ ಹೇಳಿದರು.

ದಶರಥ ಮಾಂಜಿ ಅವರನ್ನು ಬಿಹಾರ-ಭಾರತಕ್ಕೆ ಪರಿಚಯಿಸಿದ್ದು ನಿತೀಶ್ ಕುಮಾರ್. ೨೦೦೬ರಲ್ಲಿ ಸಿಎಂ ಆಗಿದ್ದ ನಿತೀಶರು ಪಟನಾದಲ್ಲಿ ಜನತಾ ದರ್ಬಾರ್ ಏರ್ಪಡಿಸಿದ್ದರು. ಅಲ್ಲಿಗೆ ಬಂದ ದಶರಥ ಮಾಂಜಿ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡ ನಿತೀಶ್, ‘ಇಂದಿನ ಮಟ್ಟಿಗೆ ನೀವೇ ನನಗೆ ರಾಜ. ಏನು ಬೇಕು ಕೇಳಿ, ಮಾಡಿ ಕೊಡುತ್ತೇನೆ’ ಎಂದಿದ್ದರು.

‘ನನ್ನ ಊರಿಗೆ, ಸ್ವಾಸ್ಥ್ಯ ಕೇಂದ್ರ, ಶಾಲೆ, ರಸ್ತೆ ಮತ್ತು ನೀರಿನ ಪೂರೈಕೆಗೆ ಕ್ರಮ ಕೈಗೊಳ್ಳಬೇಕು’ ಎಂದು ದಶರಥ ಮನವಿ ಮಾಡಿದರು. ಬಳಿಕ ಕೆಲ ತಿಂಗಳಲ್ಲೇ ಎಲ್ಲಾ ವ್ಯವಸ್ಥೆಗಳನ್ನು ಸಿಎಂ ಕಲ್ಪಿಸಿದ್ದರು. ‘ನಿತೀಶರು ಅಜ್ಜನಿಗೆ ಮಾನ-ಸಮ್ಮಾನ ನೀಡಿದರು. ಅವರಿಂದಾಗಿ ನಮ್ಮ ಕುಟುಂಬಕ್ಕೆ ಬಿಹಾರದಲ್ಲಿ ಗುರುತು ಸಿಕ್ಕಿತು. ಅವರನ್ನು ಎಂದಿಗೂ ಮರೆಯುವು ದಿಲ್ಲ’ ಎಂದಿದ್ದಾರೆ ಮಾಂಜಿ ಅವರ ಮೊಮ್ಮಗಳು ಆಂಶು ಮಾಂಜಿ.

ಯಾರೂ ಮಾಡಲಾಗದ, ಊಹಿಸಲಾಗದ ಅಭೂತಪೂರ್ವ ಸಾಹಸ ಮಾಡಿದ್ದ ದಶರಥ ಮಾಂಜಿ ತನ್ನ ಕೆಲಸದ ಬಗ್ಗೆ ದಿಲ್ಲಿಯ ನಾಯಕರಿಗೆ ತಿಳಿಸಲು ಒಮ್ಮೆ ದೆಹಲಿ ರೈಲು ಹತ್ತಿದ್ದರು. ಆದರೆ, ಟಿಕೆಟ್ ಖರೀದಿಸಲು ದುಡ್ಡಿಲ್ಲದ ಕಾರಣ ರೈಲಿನಿಂದ ಇಳಿಸಿದರು. ಛಲವಾದಿ ಮಾಂಜಿ, ರೈಲು ಟ್ರ್ಯಾಕ್‌ನ ನಡೆದು ದಿಲ್ಲಿ ತಲುಪಿದರು.

ಆಗ ರಾಜ್ಯ-ಕೇಂದ್ರ ಸರಕಾರ ನಮ್ಮ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಿಲ್ಲ. ೨೨ ವರ್ಷ (1960-1982) ನನ್ನ ಅಜ್ಜ ಬೆಟ್ಟ ಕೊರೆದರು. ಕಿಂಚಿತ್ತಾದರೂ ಆರ್ಥಿಕ ಸಹಾಯ ಮಾಡ ಲಿಲ್ಲ ಎಂದು ಬೇಸರ ಹೊರಹಾಕಿದ್ದಾರೆ ಆಂಶು ಮಾಂಜಿ. 2007ರಲ್ಲಿ ದಶರಥ ಮಾಂಜಿ ನಿಧನರಾದರು. ದೆಹಲಿ ಏಮ್ಸ ಆಸ್ಪತ್ರೆಯಿಂದ ಹಳ್ಳಿಗೆ ಮೃತದೇಹ ತಂದು ಸಮಾಧಿ ಮಾಡಲಾಯಿತು. 2010ರಲ್ಲಿ ಪೂರ್ನಿಯಾ ಲೋಕಸಭೆ ಕ್ಷೇತ್ರದ ಹಾಲಿ ಸಂಸದ ಪಪ್ಪು ಯಾದವ್ ಮಾಂಜಿ ಮನೆಗೆ ಭೇಟಿ ನೀಡಿ ೧ ಲಕ್ಷ ರು. ನೆರವು ನೀಡಿದ್ದರು. ಆ ಹಣದಲ್ಲಿ ಜಮೀನು ಖರೀದಿಸಿ ಕೃಷಿ ಮಾಡುತ್ತಿದ್ದೇವೆ ಎಂದರು ಅಳಿಯ ಮಿಥುನ್ ಮಾಂಜಿ.

ಹಳೆ ಮನೆಗೆ ತಾಗಿಕೊಂಡು ದಶರಥ ಮಾಂಜಿ ಪ್ರತಿಮೆ ನಿರ್ಮಾಣ ಮಾಡಿದ್ದು ಕೂಡ ಪಪ್ಪು ಯಾದವ್. ದಶರಥನಗರದಿಂದ ೧ ಕಿಮೀ ದೂರದಲ್ಲಿ ಮಾಂಜಿ ಕೊರೆದ ಬೆಟ್ಟವಿದೆ. ಮಧ್ಯೆ ಬೆಟ್ಟ ಕೊರೆದು ಮಾಡಿರುವ ರಸ್ತೆ ಎದ್ದುಕಾಣುತ್ತದೆ. ಎದುರಿಗೆ ದಶರಥ ಮಾಂಜಿ ಹೆಸರಿನ ದ್ವಾರವಿದೆ. 43 ವರ್ಷಗಳ ಹಿಂದೆ ಪೂರ್ಣಗೊಂಡ ರಸ್ತೆ, ಬೆಟ್ಟ ಸಾಲು ನೋಡಿದಾಗ ಇದು ಒಬ್ಬ ಮನುಷ್ಯನಿಂದ ನಿಜಕ್ಕೂ ಸಾಧ್ಯವಾಗುವ ಕೆಲಸವೇ? ಈ ಬಂಡೆ ಕಲ್ಲುಗಳನ್ನು ಕೊರೆಯವುದು ತನ್ನಿಂದ ಸಾಧ್ಯ ಎಂದು ಮಾಂಜಿಗೆ ಅನಿಸಿದ್ದಾದರೂ ಹೇಗೆ? ಬರೀ ಉಳಿ, ಸುತ್ತಿಗೆಯಿಂದ ಬೆಟ್ಟ ಕೊರೆದಿದ್ದ ಆತನ ತಾಳ್ಮೆ, ಸಂಯಮ ಯಾವ ಮಟ್ಟದ್ದಾಗಿತ್ತು? ೨೨ ವರ್ಷ ನಿರಂತರ ಕೊರೆದಿದ್ದಾನೆ ಎಂದರೆ ಅವನು ನಿಜಕ್ಕೂ ಸಾಮಾನ್ಯ ಮನುಷ್ಯ ನಾಗಿದ್ದನಾ? ಅಥವಾ ದೈವಾಂಶಸಂಭೂತನಾಗಿದ್ದನಾ? ಎಂಬೆ ಪ್ರಶ್ನೆಗಳು ಮನಸ್ಸಿನ ಹಾದುಹೋದವು.

ಪತ್ನಿ ಫಗುನಿಯಾ ದೇವಿ ಅನಾರೋಗ್ಯಕ್ಕೆ ತುತ್ತಾದಾಗ, ಬೆಟ್ಟದ ಕಡಿದಾದ ರಸ್ತೆಗಳನ್ನು ದಾಟಿ ವಜೀರ್‌ಗಂಜ್‌ನ ಸ್ವಾಸ್ಥ್ಯ ಕೇಂದ್ರಕ್ಕೆ ಆಕೆಯನ್ನು ಕರೆದೊಯ್ಯಲು ದಶರಥ ಮಾಂಜಿಗೆ ಸಾಧ್ಯವಾಗಿರಲಿಲ್ಲ. ೫೫ ಕಿಮೀ ಉದ್ದದ ರಸ್ತೆಯಲ್ಲಿ ಸುತ್ತು ಹಾಕಿ ಹುಷಾರಿಲ್ಲದ ಪತ್ನಿಯನ್ನು ಕರೆದೊಯ್ಯುವುದು ದುಸ್ತರವಾಗಿತ್ತು.

ಚಿಕಿತ್ಸೆ ಸಿಗದೆ ಪತ್ನಿ ಮೃತಪಟ್ಟರು. ಪತ್ನಿಯನ್ನು ನೆನೆದು ದಶರಥ ಮಾಂಜಿ ೨ ವರ್ಷ ಕೊರಗಿದ್ದರು. ‘ನನ್ನಂತೆ ಇನ್ನೊಬ್ಬರು ನೋವು ತಿನ್ನಬಾರದು’ ಎಂದು ಯೋಚಿಸಿದ ಮಾಂಜಿ, ಪತ್ನಿಯ ನೆನಪಿಗಾಗಿ ಹಾಗೂ ರಸ್ತೆ ಸಮಸ್ಯೆ ಪರಿಹಾರಕ್ಕೆ ಬೆಟ್ಟ ಕೊರೆಯುವುದೇ ಪರಿಹಾರ ಎಂದು ತೀರ್ಮಾನ ಮಾಡಿದರು.

೨೨ ವರ್ಷಗಳಲ್ಲಿ ಒಟ್ಟು 110 ಮೀಟರ್ ಉದ್ದ, ೯.೧ ಮೀಟರ್ ಅಗಲ ಮತ್ತು ೭.೭ ಮೀಟರ್ ಆಳಕ್ಕೆ ಬೆಟ್ಟ ಕೊರೆದರು. ಪರಿಣಾಮವಾಗಿ ಗೆಹ್ಲೋರ್‌ನಿಂದ ಬೆಟ್ಟದ ಕೆಳಗಿನ ಅಮೈಟಿ ಗ್ರಾಮವನ್ನು ಕೆಲ ಗಂಟೆಗಳಲ್ಲಿ ತಲುಪಲು ಸಾಧ್ಯವಾಯ್ತು. ಅದಕ್ಕೆ ಮುನ್ನ ಗೆಹ್ಲೋರ್‌ ನಿಂದ ಗಯಾಕ್ಕೆ ಹೋಗುವಾಗ ಸಿಗುವ ಭಿಂಡಸ್ ಎಂಬಲ್ಲಿ ತಿರುಗಿ ಅಮೈಟಿಯನ್ನು ತಲುಪಬೇಕಾಗುತ್ತಿತ್ತು.

ಅಮೈಟಿ ಹಾಗೂ ಪಕ್ಕದ ವಜೀರ್‌ಗಂಜ್ ಕ್ಷೇತ್ರದ ವಿವಿಧ ಬ್ಲಾಕ್‌ಗಳನ್ನು ತಲುಪಲು 55 ಕಿಮೀ ರಸ್ತೆ ಸುತ್ತಿ ಬಳಸಿ ಸಾಗಬೇಕಿತ್ತು. ಮಾಂಜಿ ಸಾಹಸದಿಂದಾಗಿ ಈಗ ೧೨ ಕಿಮೀ ಅಂತರದ ಇಲ್ಲಿಗೆ ತಲುಪುವಂತಾಯ್ತು. ಈಗ ಗಯಾದಿಂದ ಗೆಹ್ಲೋರ್ ಕೆಲ ನಿಮಿಷಗಳ ದಾರಿ. ಬಳಿಕ ಸರಕಾರ ಉತ್ತಮ ರಸ್ತೆ ನಿರ್ಮಿಸಿದೆ.

ಬೆಟ್ಟದ ಎದುರಿಗೆ ದಶರಥ ಮಾಂಜಿ ದ್ವಾರದ ಎಡಭಾಗ ರಾಜ್ಯ ಸರಕಾರ ಮಾಂಜಿ ಪ್ರತಿಮೆ ಸ್ಥಾಪಿಸಿದ್ದರಿಂದ ಈಗದು ಪ್ರವಾಸಿ ತಾಣವಾಗಿದೆ. ಮಾಂಜಿಯ ಸಮಾಧಿ-ಪ್ರತಿಮೆ ನೋಡಲು ಬೇರೆ ಊರುಗಳಿಂದ ಬರುವ ಸಣ್ಣ ಸಮುದಾಯಗಳ ಮಂದಿ, ಪ್ರತಿಮೆಗೆ ಅಡ್ಡಬಿದ್ದು ನಮಸ್ಕರಿಸುತ್ತಾರೆ. ವಾಮನಮೂರ್ತಿ ದಶರಥ ಮಾಂಜಿ ಸ್ಥಳೀಯರ ಪಾಲಿಗೆ ದೇವರಾಗಿ ದ್ದಾರೆ.

2020ರ ವಿಧಾನಸಭೆ ಚುನಾವಣೆಯಲ್ಲಿ ಅತ್ರಿ ಕ್ಷೇತ್ರದಿಂದ ಆರ್‌ಜೆಡಿ ಅಭ್ಯರ್ಥಿ ಅಜಯ್ ಯಾದವ್ ಜೆಡಿಯುನ ಮನೋರಮಾ ದೇವಿ ಅವರನ್ನು 7931 ಮತ ಗಳಿಂದ ಸೋಲಿಸಿ ದ್ದರು. ಈ ಬಾರಿ ಅಜಯ್ ಯಾದವ್ ಬದಲಿಗೆ ವೈಜಯಂತಿ ದೇವಿ ಅವರಿಗೆ ಆರ್‌ಜೆಡಿ ಟಿಕೆಟ್ ನೀಡಿದೆ. ಎನ್‌ಡಿಎ ಮೈತ್ರಿಕೂಟದಿಂದ ಜೀತನ್‌ರಾಮ್ ಮಾಂಜಿ ಅವರ ಹಿಂದೂ ಸ್ತಾನಿ ಅವಾಮಿ ಮೋರ್ಚಾ ಪಕ್ಷದಿಂದ ಭೂಮಿಹಾರ್ ಸಮುದಾಯದ ರೋಮಿತ್ ಕುಮಾರ್ ಕಣದಲ್ಲಿದ್ದಾರೆ. ಅದೇ ಸಮುದಾಯದ ಶೈಲೇಂದ್ರ ಸಿಂಗ್ ಜನ ಸುರಾಜ್ ಪಕ್ಷ ದಿಂದ ಸ್ಪರ್ಧಿಸಿದ್ದಾರೆ. ಅತ್ರಿಯಿಂದ ಸ್ಪರ್ಧಿಸ ಬೇಕೆಂಬ ದಶರಥ ಮಾಂಜಿ ಪುತ್ರ ಭಗೀರಥ ಮಾಂಜಿ ಕನಸು ಕಮರಿ ಹೋಗಿದೆ.

ಈಗಲೂ ಬಯಲು ಶೌಚ

ದಶರಥನಗರ ಮತ್ತು ವಂಶಿ ವಿಹಾರ್ ಎಂಬ ಮಾಂಜಿ ಕಾಲೊನಿಗಳು ಸೇರಿ ಇಲ್ಲಿನ ಹಲವು ಮನೆಗಳಲ್ಲಿ ಶೌಚಾಲಯವೇ ಇಲ್ಲ. ಹಣವಿದ್ದವರು ಕಟ್ಟಿಸಿಕೊಂಡಿದ್ದಾರೆ. ಆದರೆ, ಶೇ.90 ರಷ್ಟು ಮನೆಯವರು ಶೌಚಕ್ಕೆಂದು ಬಯಲಿಗೇ ಹೋಗುತ್ತಾರೆ. ವರ್ಷಂಪ್ರತಿ ಆ.17ರಂದು ಗೆಹ್ಲೋರ್‌ನಲ್ಲಿ ಮಾಂಜಿ ಉತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ರಾಜ್ಯ ಸಚಿವರು, ಪಕ್ಷಗಳ ಮುಖಂಡರು ದೊಡ್ಡದಾಗಿ ಭಾಷಣ ಮಾಡುತ್ತಾರೆ. ಆದರೆ, ಮಾಂಜಿಗಳ ಜೀವನ ಮಾತ್ರ ಬದಲಾಗಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಮಿಥುನ್ ಮಾಂಜಿ.

ಮಾಂಜಿ ಕಾಲೊನಿ ಮಕ್ಕಳು ಸರಕಾರಿ ಶಾಲೆಗೆ ಹೋಗುತ್ತಾರೆ. ಆದರೆ, ಸರಿಯಾದ ಶಿಕ್ಷಕರೇ ಇಲ್ಲ ಎನ್ನುವುದು ಹೆತ್ತವರ ಅಳಲು. ಮಕ್ಕಳಿಗೆ ಪಾಠಮಾಡಲು ಕರುಣೋದಯ ಫೌಂಡೇ ಷನ್‌ಎಂಬ ಎನ್ ಜಿಒ ಮುಂದೆ ಬಂದಿದೆ. ವಂಶಿ ವಿಹಾರ ಕಾಲೊನಿ ಮಕ್ಕಳಿಗೆ ಪದವಿ ವಿದ್ಯಾರ್ಥಿನಿ ಪಕ್ಕದ ಊರಿನ ಲಲಿತಾ ದೇವಿ ಪಾಠ ಹೇಳಿ ಕೊಡುತ್ತಿದ್ದಾರೆ. ಶೋಷಿತ ಮಾಂಜಿ ಸಮುದಾಯ ಸಣ್ಣ ಮಟ್ಟದ ಬದಲಾವಣೆಗೆ ಹೀಗೆ ತೆರೆದುಕೊಂಡಿದೆ.