ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ನಾಲ್ಕು ವರ್ಷಗಳಿಂದ ಅಪೂರ್ಣ ಕಾಮಗಾರಿ; 3 ಕೋಟಿ ಬಿಡುಗಡೆಗೆ ಜನಪ್ರತಿನಿಧಿಗಳು ಮುಂದಾಗಲಿ

ಅನುದಾನದ ಕೊರತೆಯಿಂದ ನರಳುತ್ತಿರುವ ಗುರುಭವನಕ್ಕೆ ಸಂಜೀವನ ಶಕ್ತಿಯಾಗಿ ಯಾರಾದರೂ ಮುಂದೆ ಬರಬೇಕಿದೆ. ಪೂರ್ಣಗೊಳ್ಳಲು ಬೇಕಿರುವ 3 ಕೋಟಿ ಅನುದಾನವನ್ನು  ಒದಗಿಸಿ ಕಾಮಗಾರಿ ಪೂರ್ಣಗೊಳಿಸುವ ಮೂಲಕ ಗುರುಗಳಿಗೆ ಗೌರವದ ಕಾಣಿಕೆ ನೀಡಬೇಕೆಂಬುದು ಜಿಲ್ಲೆಯ ಶಿಕ್ಷಕರ ಹಾಗೂ ಸಾರ್ವಜನಿಕರ ಒತ್ತಾಯವಾಗಿದೆ.

ಅನುದಾನದ ಕೊರತೆಯ ಹಳ್ಳದಲ್ಲಿ ‘ಗುರುಭವನ’

-

Profile
Ashok Nayak Aug 31, 2026 7:01 AM

ಮುನಿರಾಜು ಎಂ ಅರಿಕೆರೆ 

ಚಿಕ್ಕಬಳ್ಳಾಪುರ: ಗುರುಗಳನ್ನು ಗೌರವಿಸುವುದು ಸಮಾಜದ ಕರ್ತವ್ಯ ಎನ್ನುವ ಮಾತು ಎಲ್ಲೆಡೆ ಕೇಳಿ ಬರುತ್ತದೆ. ಆದರೆ ನಗರ ಹೊರ ವಲಯ ಜೈನ್ ಮಿಷನ್ ಆಸ್ಪತ್ರೆಯ ಬಗಲಲ್ಲಿ ಶಿಕ್ಷಕರಿಗಾಗಿ ನಿರ್ಮಾಣವಾಗುತ್ತಿರುವ  ಗುರುಭವನಕ್ಕೆ ಗ್ರಹಣ ಹಿಡಿದಿದ್ದು ನಾಲ್ಕು ವರ್ಷಗಳಿಂದ ಅನುದಾನದ ಕೊರತೆಯ ಹಳ್ಳದಲ್ಲಿ ಸಿಲುಕಿ ನರಳುತ್ತಿದೆ. 

ಅಸ್ತಿಪಂಜರದಂತೆ ಕಳಾಹೀನವಾಗಿ ನಿಂತಿರುವ ಕಟ್ಟಡದ ಸುತ್ತ ಗಿಡಗಂಟೆಗಳು ಬೆಳೆದುಕೊಂಡು ಪುಂಡು ಪೋಕರಿಗಳ ತಾಣವಾಗಿ ಬದಲಾಗಿರುವುದು ವಿಪರ್ಯಾಸ. 

2020ರಲ್ಲಿ ಸುಮಾರು  5 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಗುರುಭವನ ನಿರ್ಮಾಣಕ್ಕೆ ಚಾಲನೆ ದೊರೆತಿದ್ದರೂ, ಜನಪ್ರತಿನಿಧಿಗಳ ಸಹಕಾರ, ಶಿಕ್ಷಕರ ಸಂಘದಲ್ಲಿನ ರಾಜಕಾರಣ, ಮತ್ತು ಅನುದಾನ ಅಲಭ್ಯತೆಯ ಕಾರಣ ಇಂದಿಗೂ ಕಾಮಗಾರಿ ಪೂರ್ಣಗೊಳ್ಳದೆ ನೆನೆಗುದಿಗೆ ಬಿದ್ದಿದೆ. 

ಇದನ್ನೂ ಓದಿ: Chikkaballapur News: ರಕ್ಷಾ ಬಂಧನ ಸಹೋದರತ್ವ, ಪ್ರೀತಿ–ವಿಶ್ವಾಸದ ಪ್ರತೀಕ: ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ

ಅನುದಾನದ ಕೊರತೆಯಿಂದ ನರಳುತ್ತಿರುವ ಗುರುಭವನಕ್ಕೆ ಸಂಜೀವನ ಶಕ್ತಿಯಾಗಿ ಯಾರಾದರೂ ಮುಂದೆ ಬರಬೇಕಿದೆ. ಪೂರ್ಣಗೊಳ್ಳಲು ಬೇಕಿರುವ 3 ಕೋಟಿ ಅನುದಾನವನ್ನು  ಒದಗಿಸಿ ಕಾಮಗಾರಿ ಪೂರ್ಣಗೊಳಿಸುವ ಮೂಲಕ ಗುರುಗಳಿಗೆ ಗೌರವದ ಕಾಣಿಕೆ ನೀಡಬೇಕೆಂಬುದು ಜಿಲ್ಲೆಯ ಶಿಕ್ಷಕರ ಹಾಗೂ ಸಾರ್ವಜನಿಕರ ಒತ್ತಾಯವಾಗಿದೆ.

ಆಗಿನ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಗುರುಭವನದ ಭೂಮಿ ಮಂಜೂರು ಮಾಡಿಸಿದ್ದಲ್ಲದೆ ಅವರ ಅಮೃತಹಸ್ತದಿಂದಲೇ 2020ರಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. 

2022ರ ಶಿಕ್ಷಕರ ದಿನಾಚರಣೆಯನ್ನು ಇದೇ ಭವನದಲ್ಲಿ ಆಚರಿಸೋಣ ಎಂದಿದ್ದರು.  ಆದರೆ ಬದಲಾದ ರಾಜಕೀಯದ ಸುಳಿಗೆ ಸಿಕ್ಕಿ ಆ ಕನಸು ಹುಸಿಯಾಗಿರುವುದು ವಿಪರ್ಯಾಸವೇ ಸರಿ.

1031816 Img

ನಿರ್ಮಿತಿ ಕೇಂದ್ರದ ಮೂಲಕ ಕೈಗೆತ್ತಿಕೊಂಡಿರುವ ಐದು ಕೋಟಿ ವೆಚ್ಚದ ಗುರುಭವನದ ಕಾಮಗಾರಿ ಗಯು ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಿಎಸ್‌ಆರ್‌ ನಿಧಿಯಿಂದ 2 ಕೋಟಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಗುರುಭವನ ನಿಧಿಯಿಂದ 1 ಕೋಟಿ ಪೈಕಿ 50ಲಕ್ಷ ಖರ್ಚು ಮಾಡಲಾಗಿದೆ. 

ಇದರಿಂದ ನೆಲಮಾಳಿಗೆ ಹಾಗೂ ಬೃಹತ್ ಸಭಾಂಗಣದ ಮೇಲ್ಚಾವಣಿಯ ಗೋಡೆಗಳ ನಿರ್ಮಾಣ ಮಾತ್ರ ನಡೆದಿದ್ದು, ನಂತರ ಅನುದಾನದ ಕೊರತೆಯಿದೆ ಎಂದು ಕಾಮಗಾರಿ ಸ್ಥಗಿತಗೊಂಡಿದೆ.

ಕಾಮಗಾರಿಗೆಂದು ತರಲಾಗಿದ್ದ ಕಬ್ಬಿಣ, ಸಿಮೆಂಟ್ ಸೇರಿದಂತೆ ನಿರ್ಮಾಣ ಸಾಮಗ್ರಿಗಳು ಸಮರ್ಪಕ ನಿರ್ವಹಣೆಯ ಕೊರತೆಯಿಂದ ಹಾಳಾಗಿವೆ. ಹೆದ್ದಾರಿಗಿಂತ 12 ಅಡಿಗೂ ಹೆಚ್ಚು ಆಳದ ಹಳ್ಳದಲ್ಲಿ ನಿರ್ಮಾಣವಾಗುತ್ತಿರುವ ಭವನವನ್ನು ಪೂರ್ಣಗೊಳಿಸಲು ಇನ್ನೂ ಸುಮಾರು 3 ಕೋಟಿ ಅಗತ್ಯ ವಿದೆ ಎಂದು ಶಿಕ್ಷಕರ ಸಂಘದ ಪ್ರತಿನಿಧಿಗಳು ತಿಳಿಸಿದ್ದಾರೆ. ಇದು ಬರುವುದು ಯಾವಾಗ ಪೂರ್ಣ ಗೊಳ್ಳುವುದು ಯಾವಾಗ ಎಂಬುದು ಯಕ್ಷಪ್ರಶ್ನೆಯಾಗಿದೆ.

1031813

ಜನಪ್ರತಿನಿಧಿಗಳ ಕಾಳಜಿಗೆ ಕಾಯುತ್ತಿರುವ ಗುರುಭವನ

ಅನುದಾನಕ್ಕಾಗಿ ಶಿಕ್ಷಕರ ಸಂಘದ ಪ್ರತಿನಿಧಿಗಳು ಸಂಸದರು, ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇ ಬಂತು, ಯಾರೊಬ್ಬರೂ ಕೂಡ ಮನಸ್ಸು ಮಾಡದ ಕಾರಣ ಕಾಮಗಾರಿ ಪೂರ್ಣಗೊಳ್ಳುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

*

“ಜಿಲ್ಲಾಕೇಂದ್ರದಲ್ಲಿ ಗುರುಭವನವಿಲ್ಲದಿರುವುದು ಶಿಕ್ಷಕರ ಪಾಲಿಗೆ ನೋವಿನ ಸಂಗತಿ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಶಿಕ್ಷಕರು ತಮ್ಮ ಕಾರ್ಯಕ್ರಮಗಳನ್ನು ನಡೆಸಲು ಇನ್ನೊಬ್ಬರ ಹಂಗಿನಲ್ಲಿರಬೇಕಾದ ಸ್ಥಿತಿ ಇದೆ. 2027ರ ಶಿಕ್ಷಕರ ದಿನಾಚರಣೆಯನ್ನಾದರೂ ನಮ್ಮದೇ ಗುರುಭವನ ದಲ್ಲಿ ಆಚರಿಸುವಂತಾಗಬೇಕು” ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ಸ್ವಾಮಿ ಆಶಿಸಿದ್ದಾರೆ.

ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಸುನೀಲ್ ಮಾತನಾಡಿ, 2022ರಲ್ಲಿ ಆರಂಭವಾದ ಕಾಮಗಾರಿ ಶೀಘ್ರ ಪೂರ್ಣಗೊಂಡು ಶಿಕ್ಷಕರ ದಿನಾಚರಣೆಯಂದು ಗುರುಭವನ ಲೋಕಾರ್ಪಣೆ ಯಾಗುವಂತಾಗಬೇಕು. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಅಗತ್ಯ ಅನುದಾನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

‘ಗುರುಕಾಣಿಕೆ’ಯಾಗಿ 3 ಕೋಟಿ ಅನುದಾನ ನೀಡಿ

ಜಿಲ್ಲೆಯಲ್ಲಿ ಸುಮಾರು 5,000 ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿರುವ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ ಅವರು ಅಪೂರ್ಣ ಗುರುಭವನದ ಕಾಮಗಾರಿ ಪೂರ್ಣ ಗೊಳಿಸಲು ವಿಶೇಷ ಮುತುವರ್ಜಿ ವಹಿಸಬೇಕು ಎಂಬುದು ಶಿಕ್ಷಕರ ಒತ್ತಾಯವಾಗಿದೆ. 

ಶಾಸಕರ ನಿಧಿ ಅಥವಾ ಮುಖ್ಯಮಂತ್ರಿಗಳ ವಿಶೇಷ ನಿಧಿ ಸೇರಿದಂತೆ ಲಭ್ಯವಿರುವ ಮಾರ್ಗಗಳ ಮೂಲಕ ಅಗತ್ಯ 3 ಕೋಟಿ ಅನುದಾನವನ್ನು ಕ್ರೋಢೀಕರಿಸಿ ಕಾಮಗಾರಿ ಪೂರ್ಣಗೊಳಿಸಿದರೆ ಅದು ಜಿಲ್ಲೆಯ ಶಿಕ್ಷಕರಿಗೆ ನೀಡುವ ಶಾಶ್ವತ ಗೌರವವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಗುರುಗಳನ್ನು ಗೌರವಿಸುವುದು ಎಂದರೆ ಕೇವಲ ಶಿಕ್ಷಕರ ದಿನಾಚರಣೆಯಂದು ಹಾರ ಹಾಕುವುದಲ್ಲ; ಅವರಿಗಾಗಿ ನಿರ್ಮಿಸಲು ಆರಂಭಿಸಿರುವ ಭವನವನ್ನು ಪೂರ್ಣಗೊಳಿಸಿ ಗೌರವಯುತ ವೇದಿಕೆ ಕಲ್ಪಿಸುವುದೂ ಆಗಿದೆ. 

ಹೀಗಾಗಿ ಜಿಲ್ಲಾಡಳಿತ, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ದಾನಿಗಳು ಒಗ್ಗೂಡಿ ಅನುದಾನದ ಕೊರತೆ ನೀಗಿಸಿ ಗುರುಭವನವನ್ನು ಪೂರ್ಣಗೊಳಿಸಬೇಕು. ಯಾರು ಇದರ ಕ್ರೆಡಿಟ್ ಪಡೆಯಲು ಮುಂದೆ ಬರುವರೋ ಕಾದು ನೋಡಬೇಕು.

ಏನೇ ಆಗಲಿ 2027ರ ಸೆಪ್ಟೆಂಬರ್ 5ರಂದು ಇದೇ ಭವನದಲ್ಲಿ ಶಿಕ್ಷಕರ ದಿನಾಚರಣೆ ನಡೆಯುವಂತಾ ದರೆ, ಅದು ಜಿಲ್ಲೆಯ ಸಾವಿರಾರು ಗುರುಗಳಿಗೆ ಸಲ್ಲಿಸುವ ನಿಜವಾದ "ಗುರುಕಾಣಿಕೆ "ಯಾಗಲಿದೆ ಎಂಬುದು ಪತ್ರಿಕೆಯ ಕಳಕಳಿಯಾಗಿದೆ.