BRAT Movie: ಡಾರ್ಲಿಂಗ್ ಕೃಷ್ಣ ಅಭಿನಯದ ʼಬ್ರ್ಯಾಟ್ʼ ಚಿತ್ರದ ಟ್ರೇಲರ್ ಔಟ್
Sandalwood News: ಶಶಾಂಕ್ ನಿರ್ದೇಶನದ ಹಾಗೂ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ ಬಹು ನಿರೀಕ್ಷಿತ ʼಬ್ರ್ಯಾಟ್ʼ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ʼಬ್ರ್ಯಾಟ್ʼ ಚಿತ್ರದ ಟ್ರೇಲರ್ ಅನ್ನು ಅನಾವರಣ ಮಾಡಿದರು.

-

ಬೆಂಗಳೂರು: ಡಾಲ್ಫಿನ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಮಂಜುನಾಥ್ ಕಂದಕೂರ್ ನಿರ್ಮಿಸಿರುವ, ಶಶಾಂಕ್ ನಿರ್ದೇಶನದ ಹಾಗೂ ಡಾರ್ಲಿಂಗ್ ಕೃಷ್ಣ (Darling Krishna) ನಾಯಕನಾಗಿ ನಟಿಸಿರುವ ಬಹು ನಿರೀಕ್ಷಿತ ʼಬ್ರ್ಯಾಟ್ʼ ಚಿತ್ರದ (BRAT Movie) ಟ್ರೇಲರ್ ಬಿಡುಗಡೆಯಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ʼಬ್ರ್ಯಾಟ್ʼ ಚಿತ್ರದ ಟ್ರೇಲರ್ ಅನ್ನು ಅನಾವರಣ ಮಾಡಿದರು. ನಂತರ ಸುದೀಪ್ ಹಾಗೂ ಚಿತ್ರತಂಡದ ಸದಸ್ಯರು ಮಾತನಾಡಿದರು.
ಶಶಾಂಕ್ ಒಬ್ಬರು ಒಳ್ಳೆಯ ಕಥೆಗಾರ. ಅವರ ನಿರ್ದೇಶನದ ಚಿತ್ರ ಎಂದ ಮೇಲೆ ಚೆನ್ನಾಗಿರುತ್ತದೆ. ಹಾಗೆ ಡಾರ್ಲಿಂಗ್ ಕೃಷ್ಣ ಕೂಡ ಉತ್ತಮ ನಟ. ಇವರಿಬ್ಬರ ಕಾಂಬಿನೇಶನ್‌ನಲ್ಲಿ ಮೂಡಿಬಂದಿದ್ದ ʼಕೌಸಲ್ಯ ಸುಪ್ರಜ ರಾಮʼ ಚಿತ್ರ ಕೂಡ ಬಿಗ್ ಹಿಟ್ ಆಗಿತ್ತು. ಈ ಚಿತ್ರ ಕೂಡ ಸೂಪರ್ ಹಿಟ್ ಆಗಲಿ ಎಂದು ಸುದೀಪ್ ಹಾರೈಸಿದರು.
ಸುದೀಪ್ ಅವರು, ನನಗೆ ಹಾಗೂ ಕೃಷ್ಣ ಇಬ್ಬರಿಗೂ ಬಹಳ ಲಕ್ಕಿ. ಏಕೆಂದರೆ ನಮ್ಮಿಬ್ಬರ ಕಾಂಬಿನೇಶನ್‌ನಲ್ಲಿ ಬಂದ ಹಿಂದಿನ ಚಿತ್ರ ʼಕೌಸಲ್ಯ ಸುಪ್ರಜ ರಾಮʼ ಚಿತ್ರದ ಟ್ರೇಲರ್ ಅನ್ನು ಸುದೀಪ್ ಅವರೇ ಅನಾವರಣ ಮಾಡಿದ್ದು. ಅದು ಎಷ್ಟು ಹಿಟ್ ಆಯಿತು ಅಂತ ಎಲ್ಲರಿಗೂ ಗೊತ್ತೆ ಇದೆ. ಇಂದು ʼಬ್ರ್ಯಾಟ್ʼ ಚಿತ್ರದ ಟ್ರೇಲರ್ ಕೂಡ ಸುದೀಪ್ ಅವರಿಂದಲೇ ಅನಾವರಣವಾಗಿದೆ. ಇದು ಕೂಡ ದೊಡ್ಡ ಹಿಟ್ ಅಗುವ ನಂಬಿಕೆ ಇದೆ. ಸುದೀಪ್ ಅವರಿಗೆ ಧನ್ಯವಾದ. ಇನ್ನೂ ನಾವು ಈ ಚಿತ್ರವನ್ನು ಪ್ಯಾನ್ ಇಂಡಿಯಾ ಚಿತ್ರ ಅಂತಲೇ ನಿರ್ಮಾಣ ಮಾಡಿದ್ದು. ಅದೇ ತರಹ ಈವರೆಗೂ ಟೀಸರ್ ಹಾಗೂ ಹಾಡುಗಳನ್ನು ಎಲ್ಲಾ ಭಾಷೆಗಳಲ್ಲೂ ಬಿಡುಗಡೆ ಮಾಡಿಕೊಂಡು ಬಂದಿದ್ದೇವೆ. ಆದರೆ ಟ್ರೇಲರ್ ಇಂದು ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿದೆ. ನಂತರದ ದಿನಗಳಲ್ಲಿ ಬೇರೆ ಭಾಷೆಗಳ ಟ್ರೇಲರ್ ಅನಾವರಣವಾಗಲಿದೆ. ಚಿತ್ರತಂಡದ ಸಹಕಾರದಿಂದ ʼಬ್ರ್ಯಾಟ್ʼ ಒಂದೊಳ್ಳೆ ಚಿತ್ರವಾಗಿ ನಿರ್ಮಾಣವಾಗಿದೆ. ಇದೇ ಅಕ್ಟೋಬರ್ 31 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಎಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಶಶಾಂಕ್.
ಸುದೀಪ್ ಅವರಿಗೆ ಧನ್ಯವಾದ ತಿಳಿಸಿ ಮಾತನಾಡಿದ ʼಬ್ರ್ಯಾಟ್ʼ ಚಿತ್ರದ ನಾಯಕ ಡಾರ್ಲಿಂಗ್ ಕೃಷ್ಣ, ʼಕೌಸಲ್ಯ ಸುಪ್ರಜ ರಾಮʼ ಚಿತ್ರದ ನಂತರ ಶಶಾಂಕ್ ಅವರು ನನಗೆ ನಾಲ್ಕೈದು ಕಥೆಗಳನ್ನು ಹೇಳಿದರು. ಈ ಕಥೆ ನನಗೆ ಬಹಳ ಇಷ್ಟವಾಯಿತು. ಈಗಾಗಲೇ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಹಾಡುಗಳು ಹಾಗೂ ಚಿತ್ರದ ಟೀಸರ್ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಟ್ರೇಲರ್‌ಗೂ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಈ ಚಿತ್ರದ ನನ್ನ ಲುಕ್ ಕೂಡ ಅಭಿಮಾನಿಗಳಿಗೆ ಇಷ್ಟವಾಗಿದೆ. ಇದೇ ಅಕ್ಟೋಬರ್ 31 ನಮ್ಮ ಚಿತ್ರ ತೆರೆಗೆ ಬರುತ್ತಿದೆ. ಎಲ್ಲರೂ ನೋಡಿ. ಪ್ರೋತ್ಸಾಹ ನೀಡಿ ಎಂದರು.
ಕ್ರಿಕೆಟ್ ಕುರಿತಾದ ನಮ್ಮ ʼಬ್ರ್ಯಾಟ್ʼ ಚಿತ್ರದ ಟ್ರೇಲರ್ ಉತ್ತಮ ನಾಯಕನಟರು ಹಾಗೂ ಉತ್ತಮ ಕ್ರಿಕೆಟ್ ಆಟಗಾರರು ಆದ ಸುದೀಪ್ ಅವರಿಂದ ಬಿಡುಗಡೆಯಾಗಿದ್ದು ಬಹಳ ಸಂತೋಷವಾಗಿದೆ. ನಮ್ಮ ಚಿತ್ರದ ನಾಯಕ ಡಾರ್ಲಿಂಗ್ ಕೃಷ್ಣ ಅವರು ಸಹ ಒಳ್ಳೆಯ ಕ್ರಿಕೆಟ್ ಆಟಗಾರರು. ಇನ್ನೂ, ಈ ಚಿತ್ರವನ್ನು ಶಶಾಂಕ್ ಅವರು ಬಹಳ ಚೆನ್ನಾಗಿ ನಿರ್ದೇಶಿಸಿದ್ದಾರೆ. ಅದಕ್ಕೆ ಸಂಪೂರ್ಣ ಚಿತ್ರತಂಡ ಸಾಥ್ ನೀಡಿದ್ದಾರೆ. ಅಕ್ಟೋಬರ್ 31 ರಂದು ಬಿಡುಗಡೆಯಾಗಲಿರುವ ನಮ್ಮ ಚಿತ್ರವನ್ನು ಎಲ್ಲರೂ ಚಿತ್ರಮಂದಿರಗಳಲ್ಲೇ ನೋಡುವ ಮೂಲಕ ಪ್ರೋತ್ಸಾಹ ನೀಡಿ ಎಂದರು ನಿರ್ಮಾಪಕ ಮಂಜುನಾಥ್ ಕಂದಕೂರ್.
ಈ ಸುದ್ದಿಯನ್ನೂ ಓದಿ | Deepavali Makeup 2025: ದೀಪಾವಳಿ ಹಬ್ಬಕ್ಕಿರಲಿ ಟ್ರೆಡಿಷನಲ್ ಗ್ರ್ಯಾಂಡ್ ಮೇಕಪ್
ನಾಯಕಿ ಮನಿಶಾ ಕಂದಕೂರ್ ಸಹ ಚಿತ್ರ ಹಾಗೂ ತಮ್ಮ ಪಾತ್ರದ ಕುರಿತು ಮಾತನಾಡಿದರು. ಚಿತ್ರದಲ್ಲಿ ನಟಿಸಿರುವ ರಮೇಶ್ ಇಂದಿರಾ, ಡ್ರ್ಯಾಗನ್ ಮಂಜು, ಆನಂದ್ ಆಡಿಯೋ ಆನಂದ್, ಗಾಯಕ ಬಾಳು ಬೆಳಗುಂದಿ, ಗಾಯಕಿ ಲಹರಿ, ನಿರ್ಮಾಪಕರ ಸಹೋದರ ಬದರಿನಾಥ್ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.