ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಿಮಾನ ಯಾತ್ರಿಕರಿಗೆ ಗುಡ್ ನ್ಯೂಸ್; ಹೆಚ್ಚುವರಿ ಶುಲ್ಕವಿಲ್ಲ, ಶೇಕಡಾ 60ರಷ್ಟು ಸೀಟು ಉಚಿತ

ಯುಗಾದಿಗೂ ಮುನ್ನವೇ ದೇಶದ ವಿಮಾನ ಯಾತ್ರಿಕರಿಗೆ ಶುಭ ಸುದ್ದಿಯೊಂದು ಸಿಕ್ಕಿದೆ. ಇನ್ನು ಮುಂದೆ ವಿಮಾನ ಟಿಕೆಟ್ ಬುಕ್ಕಿಂಗ್ ವೇಳೆ ಯಾವುದೇ ಗುಪ್ತ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಪ್ರಯಾಣಿಕರಿಗೆ ಪರಿಹಾರವಾಗಿ ಹೆಚ್ಚುವರಿ ಶುಲ್ಕವಿಲ್ಲದೆ ಶೇಕಡಾ 60ರಷ್ಟು ಸೀಟು ಉಚಿತವಾಗಿ ನೀಡುವುದಾಗಿ ಭಾರತೀಯ ವಿಮಾನಯಾನ ಸಂಸ್ಥೆಯು ತಿಳಿಸಿದೆ.

ವಿಮಾನ ಪ್ರಯಾಣಿಕರಿಗೆ ಶುಭ ಸುದ್ದಿ

ಸಂಗ್ರಹ ಚಿತ್ರ -

ನವದೆಹಲಿ: ವಿಮಾನ ಪ್ರಯಾಣಕರಿಗೆ (Air Travelers) ಕೇಂದ್ರ ಸರ್ಕಾರವು ಇದೀಗ ಒಂದು ಶುಭ ಸುದ್ದಿಯನ್ನು ನೀಡಿದೆ. ಇನ್ನು ಮುಂದೆ ದೇಶೀಯ ವಿಮಾನ (domestic flight) ಯಾತ್ರಿಕರು ಪ್ರಯಾಣದ ವೇಳೆ ಯಾವುದೇ ಹೆಚ್ಚುವರಿ ಶುಲ್ಕಗಳನ್ನು ಪಾವತಿಸಬೇಕಿಲ್ಲ. ಯಾಕೆಂದರೆ ಶೀಘ್ರದಲ್ಲೇ ವಿಮಾನಯಾನ ಸಂಸ್ಥೆಗಳು ಸೀಟು ಆಯ್ಕೆಗೆ ವಿಧಿಸುವ ಹೆಚ್ಚುವರಿ ಶುಲ್ಕವನ್ನು ತೆಗೆದುಹಾಕಲು ಸರ್ಕಾರ ನಿರ್ದೇಶನ ನೀಡಿದೆ. ಇದರಿಂದ ಟಿಕೆಟ್ ದರ ಇಳಿಕೆಯಾಗುವುದು ಮಾತ್ರವಲ್ಲ ಯಾವುದೇ ದೇಶೀಯ ವಿಮಾನದಲ್ಲಿ ಕನಿಷ್ಠ ಶೇಕಡಾ 60ರಷ್ಟು ಸೀಟುಗಳನ್ನು ಉಚಿತವಾಗಿ ಆಯ್ಕೆ ಮಾಡಬಹುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ (Ministry of Civil Aviation) ತಿಳಿಸಿದೆ.

ವಿಮಾನಯಾನ ಸಂಸ್ಥೆಗಳಿಗೆ ನಾಗರಿಕ ವಿಮಾನಯಾನ ಸಚಿವಾಲಯ ನೀಡಿರುವ ನಿರ್ದೇಶನದಲ್ಲಿ, ಯಾವುದೇ ದೇಶೀಯ ವಿಮಾನದಲ್ಲಿ ಕನಿಷ್ಠ ಶೇಕಡಾ 60ರಷ್ಟು ಸೀಟುಗಳ ಮೇಲೆ ಹೆಚ್ಚುವರಿ ಶುಲ್ಕವನ್ನು ವಿಧಿಸದಂತೆ ಸೂಚಿಸಿದೆ. ಅಲ್ಲದೇ ಪ್ರತಿಯೊಬ್ಬರಿಗೂ ನ್ಯಾಯಯುತ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಟಿಕೆಟ್‌ಗಳನ್ನು ಬುಕ್ ಮಾಡಿದ ಬಳಿಕ ಅಥವಾ ವೆಬ್ ಚೆಕ್ ಇನ್ ಸಮಯದಲ್ಲಿ ಪ್ರಯಾಣಿಕರು ಹೆಚ್ಚಾಗಿ ಎದುರಿಸುವ ಗುಪ್ತ ವೆಚ್ಚಗಳನ್ನು ಕಡಿಮೆ ಮಾಡುವ ಗುರಿಯನ್ನು ಇದು ಹೊಂದಿದೆ. ವಿಮಾನದಲ್ಲಿ ಈವರೆಗೆ ಕೇವಲ ಶೇ. 20ರಷ್ಟು ಸೀಟುಗಳು ಮಾತ್ರ ಉಚಿತವಾಗಿ ಲಭ್ಯವಿದ್ದವು.

ಚೀನಾಕ್ಕೆ ತೆರಳುತ್ತಿದ್ದ ರಷ್ಯಾದ ತೈಲ ಟ್ಯಾಂಕರ್ ಯೂಟರ್ನ್; ಮಂಗಳೂರಿನತ್ತ ಪಯಣ

ಹೆಚ್ಚುವರಿ ಶುಲ್ಕ ರದ್ದು

ಈ ಕುರಿತು ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು, ಈ ಕ್ರಮವು ಪ್ರಯಾಣಿಕರಿಗೆ ನೀಡಲಾಗುವ ಸೌಲಭ್ಯವನ್ನು ಹೆಚ್ಚು ಬಲಪಡಿಸುವ ಪ್ರಯತ್ನವಾಗಿದೆ. ಇದರಿಂದ ಶೇಕಡಾ 60 ರಷ್ಟು ಸೀಟುಗಳು ಉಚಿತ, ಕುಟುಂಬಗಳಿಗೆ ಒಟ್ಟಿಗೆ ಆಸನಗಳು ಖಚಿತವಾಗಿರುತ್ತದೆ. ಇದು ಕ್ರೀಡೆ, ಸಂಗೀತ ಉಪಕರಣಗಳು ಮತ್ತು ಸಾಕುಪ್ರಾಣಿಗಳ ಸಾಗಣೆಗೆ ಸ್ಪಷ್ಟ, ಮಾತು ಪಾರದರ್ಶಕವಾದ ಮಾನದಂಡಗಳನ್ನು ವಿಧಿಸಲಾಗುತ್ತದೆ ಎಂದು ತಿಳಿಸಿದರು.

ಪ್ರಯಾಣಿಕ ಸ್ನೇಹಿ ನೀತಿ

ಒಂದೇ ಪಿಎನ್ ಆರ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಒಟ್ಟಿಗೆ ಕುಳಿತುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯವು ವಿಮಾನಯಾನ ಸಂಸ್ಥೆಗಳಿಗೆ ನಿರ್ದೇಶನ ನೀಡಿದ್ದು, ಇದಕ್ಕಾಗಿ ಯಾವುದೇ ರೀತಿಯ ಹೆಚ್ಚುವರಿ ಶುಲ್ಕ ವಿಧಿಸದಂತೆ ಸೂಚಿಸಲಾಗಿದೆ. ಇನ್ನು ಬ್ಯಾಗೇಜ್, ಸಾಕುಪ್ರಾಣಿಗಳು ಮತ್ತು ಸೇವೆಗಳಿಗೆ ಸಂಬಂಧಿಸಿ ಹೆಚು ಪಾರದರ್ಶಕ ಮತ್ತು ಪ್ರಯಾಣಿಕ ಸ್ನೇಹಿ ನೀತಿಗಳನ್ನು ಪರಿಚಯಿಸಲಾಗಿದೆ.

ಇದರಲ್ಲಿ ಸುರಕ್ಷತೆ ಮತ್ತು ಸುಗಮ ಸಾಗಣೆಯನ್ನು ಖಚಿತಪಡಿಸಿಕೊಳ್ಳುವ ಕಾರ್ಯವನ್ನು ಡಿಜಿಸಿಎಗೆ ವಹಿಸಲಾಗಿದೆ.

ಹಕ್ಕುಗಳ ಬಗ್ಗೆ ಜಾಗೃತಿ

ಇನ್ನು ಪ್ರಯಾಣಿಕರ ಹಕ್ಕುಗಳಿಗೆ ಸಂಬಂಧಿಸಿ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲಾಗಿದೆ. ಇದರಲ್ಲಿ ವಿಶೇಷವಾಗಿ ವಿಳಂಬ, ರದ್ದತಿ ಮತ್ತು ಬೋರ್ಡಿಂಗ್ ನಿರಾಕರಿಸಿದ ಸಂದರ್ಭಗಳಲ್ಲಿ ಪ್ರಯಾಣಿಕರ ಹಕ್ಕುಗಳಿಗೆ ಹೆಚ್ಚಿನ ಆದ್ಯತೆ ನೀಡಲು ಸೂಚಿಸಲಾಗಿದೆ. ಇನ್ನು ವೆಬ್‌ಸೈಟ್‌ಗಳು, ಮೊಬೈಲ್ ಅಪ್ಲಿಕೇಶನ್‌ಗಳು, ಬುಕಿಂಗ್ ಪ್ಲಾಟ್‌ಫಾರ್ಮ್‌ಗಳು ಮತ್ತು ವಿಮಾನ ನಿಲ್ದಾಣದ ಕೌಂಟರ್‌ಗಳಲ್ಲಿ ಈ ಹಕ್ಕುಗಳನ್ನು ಪ್ರಮುಖವಾಗಿ ಪ್ರದರ್ಶಿಸಲು ಹಾಗೂ ಈ ಕುರಿತು ಪ್ರಾದೇಶಿಕ ಭಾಷೆಗಳಲ್ಲಿ ಪ್ರಯಾಣಿಕರಿಗೆ ತಿಳಿಸಬೇಕು ಎಂದು ವಿಮಾನಯಾನ ಸಂಸ್ಥೆಗಳನ್ನು ಸೂಚಿಸಲಾಗಿದೆ.

ಸಣ್ಣ ವ್ಯಾಪಾರಿಗಳಿಗೆ ಸಾಲದ ಲಭ್ಯತೆ ಹಿಂದೆಂದಿಗಿಂತ ಈಗ ಏಕೆ ಮುಖ್ಯವಾಗಿದೆ ?

ದೂರುಗಳು ಹೆಚ್ಚಳ ಹಿನ್ನೆಲೆಯಲ್ಲಿ ಕ್ರಮ

ವಿಮಾನದಲ್ಲಿ ಆಸನ ಆಯ್ಕೆ ಸೇರಿದಂತೆ ವಿವಿಧ ಸೇವೆಗಳಿಗೆ ವಿಮಾನಯಾನ ಸಂಸ್ಥೆಗಳು ಹೆಚ್ಚಿನ ಶುಲ್ಕ ವಿಧಿಸುತ್ತಿರುವ ಬಗ್ಗೆ ಜನರಿಂದ ದೂರುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆಗಳು ಈ ನಿರ್ದೇಶನಗಳನ್ನು ನೀಡಿದೆ. ಪ್ರಯಾಣಿಕರ ಮೇಲಿನ ಹೆಚ್ಚುವರಿ ವೆಚ್ಚಗಳ ಹೊರೆಯನ್ನು ಕಡಿಮೆ ಮಾಡುವ ಸಲುವಾಗಿ ವಿಮಾನಯಾನದಲ್ಲಿ ಪಾರದರ್ಶಕತೆ ಮತ್ತು ಏಕರೂಪತೆಯನ್ನು ತರುವ ಗುರಿಯನ್ನು ಈ ಕ್ರಮಗಳು ಹೊಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.