ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಿವೃತ್ತಿ ಜೀವನದ ಪ್ಲ್ಯಾನಿಂಗ್‌ ಮಾಡ್ತಿದ್ದೀರಾ?: ನೆಮ್ಮದಿಯ ಭವಿಷ್ಯಕ್ಕಾಗಿ ಇಲ್ಲಿದೆ ಭಾರತದ ಟಾಪ್ ಉಳಿತಾಯ ಯೋಜನೆಗಳ ಪಟ್ಟಿ

Retirement Savings Schemes: ವೃದ್ಧಾಪ್ಯದಲ್ಲಿ ಯಾರ ಮೇಲೂ ಆರ್ಥಿಕವಾಗಿ ಅವಲಂಬಿತರಾಗದೆ ನೆಮ್ಮದಿಯ ಜೀವನ ನಡೆಸಲು ಚಿಕ್ಕ ವಯಸ್ಸಿನಲ್ಲೇ ಹಣಕಾಸಿನ ಯೋಜನೆ ರೂಪಿಸುವುದು ಅತಿಮುಖ್ಯ. ಭಾರತದಲ್ಲಿ ನಿವೃತ್ತಿ ನಂತರ ಉತ್ತಮ ಆದಾಯ ಹಾಗೂ ಭದ್ರತೆ ನೀಡುವ ಪ್ರಮುಖ ಉಳಿತಾಯ ಯೋಜನೆಗಳ ವಿವರ ಇಲ್ಲಿದೆ.

ಭಾರತದ ಟಾಪ್ ಉಳಿತಾಯ ಯೋಜನೆಗಳ ಪಟ್ಟಿ ಇಲ್ಲಿದೆ

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Aug 23, 2026 8:02 AM

ಬೆಂಗಳೂರು: ಜೀವನದ ಎರಡನೇ ಇನಿಂಗ್ಸ್ ಅಂದರೆ ನಿವೃತ್ತಿ. ಅಂತಹ ಬದುಕಿನ ಮುಖ್ಯ ಭಾಗ ನೆಮ್ಮದಿಯಿಂದ ಕೂಡಿರಬೇಕೆಂದರೆ, ಚಿಕ್ಕ ವಯಸ್ಸಿನಲ್ಲೇ ಸರಿಯಾದ ಹಣಕಾಸಿನ ಯೋಜನೆ ಮಾಡುವುದು ಅತ್ಯಗತ್ಯ. ವಯಸ್ಸಾದ ಮೇಲೆ ಯಾರ ಮೇಲೂ ಅವಲಂಬಿತರಾಗದೆ, ಸ್ವಾಲಂಬಿಯಾಗಿ ಆರ್ಥಿಕವಾಗಿ ಸ್ವತಂತ್ರವಾಗಿರಲು ಸೂಕ್ತ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಮುಖ್ಯ (Retirement Savings Schemes). ಭಾರತ ಸರ್ಕಾರ ಮತ್ತು ಹಣಕಾಸು ಸಂಸ್ಥೆಗಳು ನಿವೃತ್ತಿಯ ನಂತರ ಉತ್ತಮ ಆದಾಯ ನೀಡುವ ಹಲವು ಜನಪ್ರಿಯ ಯೋಜನೆಗಳನ್ನು ಒದಗಿಸುತ್ತಿದ್ದು, ಅವುಗಳ ಸಂಪೂರ್ಣ ವಿವರ ಇಲ್ಲಿದೆ.

ರಾಷ್ಟ್ರೀಯ ಪಿಂಚಣಿ ಯೋಜನೆ (National Pension System-NPS)

ಕೇಂದ್ರ ಸರ್ಕಾರದಿಂದ ಬೆಂಬಲಿತವಾಗಿರುವ ಎನ್‌ಪಿಎಸ್ ನಿವೃತ್ತಿಗಾಗಿ ಹೂಡಿಕೆ ಮಾಡಲು ಅತ್ಯಂತ ಜನಪ್ರಿಯ ಹಾಗೂ ನಂಬಿಕಾರ್ಹ ಯೋಜನೆ. ಇದರಲ್ಲಿ ಹಣವನ್ನು ಈಕ್ವಿಟಿ ಮತ್ತು ಕಾರ್ಫರೇಟ್ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲಾಗುವುದರಿಂದ, ಸಾಂಪ್ರದಾಯಿಕ ಬ್ಯಾಂಕ್ ಡೆಪಾಸಿಟ್‌ಗಿಂತ ಹೆಚ್ಚಿನ ಬಡ್ಡಿ ಸಿಗಲಿದೆ. ಅಂದರೆ ಶೇಕಡಾ 9ರಿಂದ 12ರಷ್ಟು ರಿಟರ್ನ್ಸ್ ಸಿಗುವ ಸಾಧ್ಯತೆ ಇದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಸಿ ಅಡಿಯಲ್ಲಿ 1.5 ಲಕ್ಷ ರುಪಾಯಿ ಹಾಗೂ ಸೆಕ್ಷನ್ 80ಸಿಸಿಡಿ (1ಬಿ) ಅಡಿಯಲ್ಲಿ ಹೆಚ್ಚುವರಿಯಾಗಿ 50,000 ಸೇರಿದಂತೆ ಒಟ್ಟು 2 ಲಕ್ಷ ರುಪಾಯಿವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು. ನಿವೃತ್ತಿ ನಂತರ ಅಂದರೆ 60 ವರ್ಷದ ನಂತರ ಹೂಡಿಕೆಯ ಶೇ. 60 ಭಾಗವನ್ನು ತೆರಿಗೆ-ರಹಿತವಾಗಿ ಒಂದೇ ಬಾರಿಗೆ ಹಿಂಪಡೆಯಬಹುದು. ಬಾಕಿ ಶೇ. 40 ಭಾಗವನ್ನು ಆನ್ಯುಟಿ ಯೋಜನೆಯಲ್ಲಿ ಹೂಡಿಕೆ ಮಾಡಿ ತಿಂಗಳ ಪಿಂಚಣಿ ಪಡೆಯಬಹುದು.

ಸಾರ್ವಜನಿಕ ಭವಿಷ್ಯ ನಿಧಿ (Public Provident Fund-PPF)

ಹಣಕ್ಕೆ ಸಂಪೂರ್ಣ ಭದ್ರತೆ ಮತ್ತು ಖಚಿತ ರಿಟರ್ನ್ಸ್ ಬಯಸುವವರಿಗೆ ಪಿಪಿಎಫ್ ಸೂಕ್ತ ಆಯ್ಕೆ. ಪ್ರಸ್ತುತ ಸರ್ಕಾರವು ಇದಕ್ಕೆ ಶೇಕಡಾ 7.1 ಬಡ್ಡಿ ನೀಡುತ್ತಿದ್ದು, ವರ್ಷಕ್ಕೆ ಕನಿಷ್ಠ 500 ರುಪಾಯಿಯಿಂದ ಗರಿಷ್ಠ 1.5 ಲಕ್ಷ ರುಪಾಯಿವರೆಗೆ ಹೂಡಿಕೆ ಮಾಡಬಹುದು. ಈ ಯೋಜನೆಯ ಅವಧಿ 15 ವರ್ಷ (ನಂತರ 5 ವರ್ಷಗಳಂತೆ ವಿಸ್ತರಿಸಬಹುದು). ಇದರಲ್ಲಿ ಹೂಡಿಕೆ ಮಾಡುವ ಹಣ, ಬರುವ ಬಡ್ಡಿ ಮತ್ತು ನಿವೃತ್ತಿಯ ನಂತರ ಸಿಗುವ ಒಟ್ಟು ಹಣ, ಮೂರೂ ಸಂಪೂರ್ಣವಾಗಿ ತೆರಿಗೆ ರಹಿತ.

ಉದ್ಯೋಗಿಗಳ ಭವಿಷ್ಯ ನಿಧಿ (Employees’ Provident Fund-EPF)

ಸಂಬಳ ಪಡೆಯುವ ಉದ್ಯೋಗಿಗಳಿಗೆ ಇದು ಸ್ವಯಂಚಾಲಿತ ನಿವೃತ್ತಿ ಉಳಿತಾಯ ಯೋಜನೆ. ಪ್ರತಿಯೊಬ್ಬ ಉದ್ಯೋಗಿಯ ಮೂಲ ವೇತನದ ಶೇಕಡಾ 12ರಷ್ಟು ಭಾಗ ಇಪಿಎಫ್‌ಗೆ ಜಮಾ ಆಗುತ್ತದೆ ಮತ್ತು ಅಷ್ಟೇ ಪ್ರಮಾಣದ ಹಣವನ್ನು ಸಂಸ್ಥೆಯೂ ಜಮಾ ಮಾಡುತ್ತದೆ. ಪ್ರಸ್ತುತ ಶೇಕಡಾ 8.25ರಷ್ಟು ಬಡ್ಡಿ ಸಿಗುತ್ತಿದ್ದು, ಇದು ಸುರಕ್ಷಿತ ಹೂಡಿಕೆಗಳಲ್ಲಿ ಅತ್ಯಧಿಕ ರಿಟರ್ನ್ಸ್ ನೀಡುವ ಯೋಜನೆ. ನಿವೃತ್ತಿಯ ಸಮಯದಲ್ಲಿ ದೊಡ್ಡ ಮೊತ್ತದ ಕಾರ್ಪಸ್ ರೂಪದಲ್ಲಿ ಈ ಹಣ ಕೈಸೇರುತ್ತದೆ.

ಹಿರಿಯ ನಾಗರಿಕರಿಗಾಗಿ ಉಳಿತಾಯ ಯೋಜನೆ (Senior Citizens’ Savings Scheme-SCSS)

ಈಗಾಗಲೇ ನಿವೃತ್ತರಾದವರಿಗೆ ಅಥವಾ 60 ವರ್ಷ ದಾಟಿದ ಹಿರಿಯ ನಾಗರಿಕರಿಗೆ ನಿರಂತರ ಆದಾಯ ನೀಡಲು ಇದು ಅತ್ಯುತ್ತಮ ಯೋಜನೆ. ಸರ್ಕಾರದಿಂದ ಶೇಕಡಾ 8.2ರಷ್ಟು ಬಡ್ಡಿ ಲಭ್ಯವಿದ್ದು, ಬಡ್ಡಿಯ ಹಣವು ಪ್ರತಿ ಮೂರು ತಿಂಗಳಿಗೊಮ್ಮೆ ಹೂಡಿಕೆದಾರರ ಖಾತೆಗೆ ಜಮಾ ಆಗುತ್ತದೆ. ಒಬ್ಬರು ಗರಿಷ್ಠ 30 ಲಕ್ಷ ರುಪಾಯಿವರೆಗೆ ಹೂಡಿಕೆ ಮಾಡಬಹುದು. ಈ ಯೋಜನೆಯ ಅವಧಿ 5 ವರ್ಷಗಳಾಗಿದ್ದು, ಬೇಕಿದ್ದಲ್ಲಿ ಮತ್ತೆ 3 ವರ್ಷ ವಿಸ್ತರಿಸಬಹುದು.

ಅಟಲ್ ಪಿಂಚಣಿ ಯೋಜನೆ (Atal Pension Yojana-APY)

ಅಸಘಟಿತ ವಲಯದ ಕಾರ್ಮಿಕರು ಮತ್ತು ಸಣ್ಣ ಆದಾಯ ಹೊಂದಿರುವವರಿಗೆ ಈ ಯೋಜನೆ ವರವಾಗಿದೆ. 18ರಿಂದ 40 ವರ್ಷದೊಳಗಿನ ಭಾರತೀಯರು ಈ ಯೋಜನೆಗೆ ಸೇರಬಹುದು. 60 ವರ್ಷ ವಯಸ್ಸಾದ ನಂತರ, ನೀವು ಹೂಡಿಕೆ ಮಾಡಿದ ಪ್ರೀಮಿಯಂ ಆಧಾರದ ಮೇಲೆ ತಿಂಗಳಿಗೆ 1,000 ರುಪಾಯಿಯಿಂದ 5,000 ರುಪಾಯಿವರೆಗೆ ಖಚಿತ ಪಿಂಚಣಿ ಲಭಿಸುತ್ತದೆ.

ರೈಡ್‌ಗೆ ಮೊದಲೇ ಟಿಪ್ಸ್‌ ನೀಡಬೇಡಿ: ರ‍್ಯಾಪಿಡೋ, ಉಬರ್‌ ಗ್ರಾಹಕರಿಗೆ ಎಚ್ಚರಿಕೆ

ನಿವೃತ್ತಿಗಾಗಿ ಮ್ಯೂಚುವಲ್ ಫಂಡ್‌ಗಳು (Mutual funds)

ಸರ್ಕಾರದ ಭದ್ರತೆಯ ಜತೆಗೆ, ನಿವೃತ್ತಿಗಾಗಿ ಹಣ ಉಳಿತಾಯ ಮಾಡಲು ಮ್ಯೂಚುವಲ್ ಫಂಡ್‌ಗಳು ಅತ್ಯುತ್ತಮ ಮಾರ್ಗ. ದೀರ್ಘಕಾಲೀನ ಹೂಡಿಕೆಯಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳು ಮಾರುಕಟ್ಟೆಯ ಏರಿಳಿತಕ್ಕೆ ಒಳಪಟ್ಟಿದ್ದರೂ, ಸಾಂಪ್ರದಾಯಿಕ ಬ್ಯಾಂಕ್ ಯೋಜನೆಗಳಿಗಿಂತ ಹೆಚ್ಚಿನ ಲಾಭವನ್ನು ನೀಡುವ ಸಾಮರ್ಥ್ಯ ಹೊಂದಿವೆ. ಸಿಸ್ಟಮ್ಯಾಟಿಕ್ ಇನ್ವೆಸ್ಟೆಎಮೆಂಟ್‌ ಪ್ಲ್ಯಾನ್‌ (SIP) ಮೂಲಕ ಪ್ರತಿ ತಿಂಗಳು ಸಣ್ಣ ಮೊತ್ತವನ್ನು ನಿಯಮಿತವಾಗಿ ಹೂಡಿಕೆ ಮಾಡುತ್ತಾ ಬಂದರೆ, ಕಾಂಪೌಂಡಿಂಗ್ ಬಡ್ಡಿಯ ಲಾಭದೊಂದಿಗೆ ನಿವೃತ್ತಿಯ ವೇಳೆಗೆ ದೊಡ್ಡ ಮಟ್ಟದ ಸಂಪತ್ತನ್ನು ಸೃಷ್ಟಿಸಬಹುದು. ನಿವೃತ್ತಿಯ ವಯಸ್ಸು ಹತ್ತಿರವಾಗುತ್ತಿದ್ದಂತೆ, ನಷ್ಟದ ಭೀತಿಯನ್ನು ಕಡಿಮೆ ಮಾಡಲು ಹೂಡಿಕೆಯ ಒಂದಷ್ಟು ಭಾಗವನ್ನು ಈಕ್ವಿಟಿಯಿಂದ ಡೆಟ್ ಫಂಡ್‌ಗಳಿಗೆ ಅಥವಾ ಇತರ ಸ್ಥಿರ ಆದಾಯ ತರುವ ಯೋಜನೆಗಳಿಗೆ ಬದಲಾಯಿಸುವುದು ಸೂಕ್ತ ತಂತ್ರ.

Top Savings Schemes

ಸೂಕ್ತವಾದ ಯೋಜನೆ ಯಾವುದು?

ಎಲ್ಲರಿಗೂ ಒಂದೇ ರೀತಿಯ ನಿವೃತ್ತಿ ಯೋಜನೆ ಸೂಕ್ತವಾಗಿರುವುದಿಲ್ಲ. ನಿಮ್ಮ ವಯಸ್ಸು, ಆದಾಯ, ಕೆಲಸದ ಸ್ವರೂಪ, ರಿಸ್ಕ್ ತಗೆದುಕೊಳ್ಳುವ ಸಾಮರ್ಥ್ಯ ಹಾಗೂ ನಿವೃತ್ತಿಯ ಗುರಿಗಳನ್ನು ಆಧರಿಸಿ ಸರಿಯಾದ ಯೋಜನೆಯನ್ನು ಆಯ್ಕೆ ಮಾಡಬೇಕಾಗುತ್ತದೆ. ಹಣಕಾಸು ತಜ್ಞರ ಪ್ರಕಾರ, ಕೇವಲ ಒಂದೇ ಯೋಜನೆಯನ್ನು ನೆಚ್ಚಿಕೊಳ್ಳದೆ ವಿವಿಧ ಯೋಜನೆಗಳಲ್ಲಿ ಹಣವನ್ನು ವಿಂಗಡಿಸಿ ಹೂಡಿಕೆ ಮಾಡುವುದು ಅತ್ಯಂತ ಸುರಕ್ಷಿತ. ಉದಾಹರಣೆಗೆ, ಉದ್ಯೋಗಿಗಳಿಗೆ ಇಪಿಎಫ್ ಮೂಲ ಆಸರೆಯಾಗಿದ್ದರೆ, ಹೆಚ್ಚುವರಿ ನಿಧಿಗಾಗಿ ಎನ್‌ಪಿಎಸ್ ಮತ್ತು ಪಿಪಿಎಫ್ ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ನಿವೃತ್ತಿಯ ನಂತರ ದಿನನಿತ್ಯದ ವೆಚ್ಚಗಳಿಗೆ ಎಸ್‌ಚಿಎಸ್‌ಎಸ್‌ನಂತಹ ಯೋಜನೆಗಳು ನಿಯಮಿತ ಆದಾಯ ತಂದುಕೊಡುತ್ತವೆ. ಮುಖ್ಯವಾಗಿ, ಎಷ್ಟು ಬೇಗ ಹೂಡಿಕೆ ಮಾಡಲು ಪ್ರಾರಂಭಿಸುತ್ತೀರೋ, ಕಾಂಪೌಂಡಿಂಗ್‌ (ಚಕ್ರಬಡ್ಡಿ) ಲಾಭದೊಂದಿಗೆ ನಿವೃತ್ತಿಯ ವೇಳೆಗೆ ಅಷ್ಟೇ ಬೃಹತ್ ಪ್ರಮಾಣದ ಹಣವನ್ನು ಕೂಡಿಡಲು ಸಾಧ್ಯವಾಗುತ್ತದೆ.