ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಷ್ಯಾದಿಂದ ತೈಲ ಖರೀದಿ ನಿಲ್ಲಿಸಲು ಸಾಧ್ಯವಿಲ್ಲ ಎಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Nirmala Sitharaman: ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ಭಾರತ ಏಕಾಏಕಿ ನಿಲ್ಲಿಸಿ ಬೇರೆ ಪೂರೈಕೆದಾರರತ್ತ ತಿರುಗಲು ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಜಾಗತಿಕ ತೈಲ ಪೂರೈಕೆ ಈಗಾಗಲೇ ಸೀಮಿತವಾಗಿರುವುದರಿಂದ ರಷ್ಯಾದ ತೈಲವನ್ನು ಬದಲಿಸಿದರೆ ಬೆಲೆ ಮತ್ತಷ್ಟು ಏರಿಕೆಯಾಗಬಹುದು ಎಂದು ಅವರು ಹೇಳಿದ್ದಾರೆ. ಭಾರತದ 140 ಕೋಟಿ ಜನರ ಇಂಧನ ಅಗತ್ಯತೆ, ಜಾಗತಿಕ ಪೂರೈಕೆ ಮತ್ತು ಭಾರತೀಯ ರಿಫೈನರಿಗಳ ತಾಂತ್ರಿಕ ಸಾಮರ್ಥ್ಯಗಳನ್ನು ಗಮನದಲ್ಲಿಟ್ಟುಕೊಂಡು ತೈಲ ಮೂಲಗಳನ್ನು ಆಯ್ಕೆ ಮಾಡಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ರಷ್ಯಾ ತೈಲ ಖರೀದಿ ನಿಲ್ಲಿಸಿದರೆ ಬೆಲೆ ಏರಿಕೆ ಸಾಧ್ಯತೆ: ನಿರ್ಮಲಾ ಸೀತಾರಾಮನ್

ನಿರ್ಮಾ ಸೀತಾರಾಮನ್‌ (ಸಂಗ್ರಹ ಚಿತ್ರ) -

Profile
Sushmitha Jain Sep 23, 2026 8:50 PM

ನವದೆಹಲಿ, ಸೆ. 23: ರಷ್ಯಾದಿಂದ ಕಚ್ಚಾ ತೈಲ (Russian crude oil) ಖರೀದಿಯನ್ನು ಭಾರತವು ತಕ್ಷಣವೇ ನಿಲ್ಲಿಸಿ ಬೇರೆ ದೇಶಗಳಿಂದ ತೈಲ ಆಮದು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹೇಳಿದ್ದಾರೆ. ಜಾಗತಿಕ ತೈಲ ಪೂರೈಕೆ ಈಗಾಗಲೇ ಸೀಮಿತವಾಗಿದ್ದು, ರಷ್ಯಾದ ತೈಲವನ್ನು ಏಕಾಏಕಿ ಬದಲಿಸಿದರೆ ಲಭ್ಯವಿರುವ ತೈಲದ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

ಮಂಗಳವಾರ ನಡೆದ BusinessLine Changemaker Awards ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಭಾರತದ 140 ಕೋಟಿ ಜನರ ಇಂಧನ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು.

ರಷ್ಯಾದಿಂದ ತೈಲ ಖರೀದಿಸುವುದನ್ನು ಭಾರತ ನಿಲ್ಲಿಸಿ ಬೇರೆಡೆಗೆ ತಿರುಗಿದರೆ, ಈಗಾಗಲೇ ಸೀಮಿತವಾಗಿರುವ ಜಾಗತಿಕ ತೈಲ ಪೂರೈಕೆ ಮಾರುಕಟ್ಟೆಯಲ್ಲಿ ಬೆಲೆ ಮತ್ತಷ್ಟು ಏರಿಕೆಯಾಗಬಹುದು ಎಂದು ಅವರು ವಿವರಿಸಿದರು. ಭಾರತದ ಹಿತಾಸಕ್ತಿಯನ್ನು ಪ್ರಮುಖವಾಗಿ ಪರಿಗಣಿಸಬೇಕಾಗುತ್ತದೆ ಎಂದೂ ಅವರು ಹೇಳಿದರು.

ಜಾಗತಿಕ ತೈಲದ ಬಗ್ಗೆ ನಿರ್ಮಲಾ ಸೀತಾರಾಮನ್‌ ಮಾತು:



ತೈಲ ಪೂರೈಕೆ ಕಡಿಮೆಯಾಗುತ್ತಿದೆ

ಇತ್ತೀಚಿನ ಜಾಗತಿಕ ಇಂಧನ ಮಾರುಕಟ್ಟೆಯ ಅಸ್ಥಿರತೆಯನ್ನು ಉಲ್ಲೇಖಿಸಿದ ಸೀತಾರಾಮನ್, ಸೌದಿ ಅರೇಬಿಯಾ ಸೇರಿ ಗಲ್ಫ್ ಪ್ರದೇಶದ ಕೆಲವು ತೈಲ ಮೂಲಸೌಕರ್ಯಗಳ ಮೇಲೆ ನಡೆದ ದಾಳಿಗಳು ಹಾಗೂ ಹಾನಿಯಿಂದ ಲಭ್ಯವಿರುವ ತೈಲ ಪೂರೈಕೆ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದರು. ಭಾರತ ಈಗಾಗಲೇ ತನ್ನ ಕಚ್ಚಾ ತೈಲ ಅನ್ನು ವಿವಿಧಡೆಯಿಂದ ಆಮದು ಮಾಡಿಕೊಳ್ಳುತ್ತಿದೆ. ಆದರೆ ರಷ್ಯಾದಿಂದ ಬರುತ್ತಿರುವ ಪ್ರಮಾಣದ ತೈಲವನ್ನು ಬದಲಿಸಲು ಒಂದೇ ದೇಶದ ಮೇಲೆ ಅವಲಂಬಿತರಾಗದೆ ಹಲವು ಮೂಲಗಳಿಂದ ಪೂರೈಕೆ ಪಡೆಯಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಎಲ್ಲ ಕಚ್ಚಾ ತೈಲವನ್ನು ಭಾರತೀಯ ರಿಫೈನರಿಗಳು ಸಂಸ್ಕರಿಸಲಾರವು

ರಷ್ಯಾದ ತೈಲವನ್ನು ಬದಲಿಸುವಲ್ಲಿ ಮತ್ತೊಂದು ತಾಂತ್ರಿಕ ಸವಾಲು ಇದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಭಾರತೀಯ ರಿಫೈನರಿಗಳು ನಿರ್ದಿಷ್ಟ ಗುಣಲಕ್ಷಣಗಳಿರುವ, ವಿಶೇಷವಾಗಿ medium ಮತ್ತು sulphur content ಹೊಂದಿರುವ ಕಚ್ಚಾ ತೈಲ ಸಂಸ್ಕರಣೆಗೆ ಹೊಂದಿಕೊಳ್ಳುವಂತೆ ವಿನ್ಯಾಸಗೊಂಡಿವೆ. ಬೇರೆ ದೇಶದಲ್ಲಿ ತೈಲ ಲಭ್ಯವಿದ್ದರೂ, ಅದನ್ನು ಭಾರತೀಯ ರಿಫೈನರಿಗಳಲ್ಲಿ ಅಗತ್ಯ ಬದಲಾವಣೆಗಳಿಲ್ಲದೆ ಸಂಸ್ಕರಿಸಲು ಸಾಧ್ಯವಾಗದಿದ್ದರೆ, ಅಂತಹ ತೈಲವನ್ನು ಖರೀದಿಸುವುದರಿಂದ ಏನು ಪ್ರಯೋಜನ ಎಂಬ ಪ್ರಶ್ನೆಯೂ ಎದುರಾಗುತ್ತದೆ ಎಂದು ಅವರು ಹೇಳಿದ್ದಾರೆ.

ಎಸ್‌ಎಂಇ ವಿಮೆಗೆ ಡಿಜಿಟಲ್ ಸ್ಪರ್ಶ: ಜೂರಿಕ್ ಕೋಟಕ್

ಅಮೆರಿಕದ ಒತ್ತಡದ ನಡುವೆ ಹೇಳಿಕೆ

ರಷ್ಯಾದ ತೈಲ ಖರೀದಿಸುವ ದೇಶಗಳ ವಿರುದ್ಧ ಅಮೆರಿಕದ ಒತ್ತಡ ಹೆಚ್ಚುತ್ತಿರುವ ಸಂದರ್ಭದಲ್ಲಿ ಸೀತಾರಾಮನ್ ಈ ಹೇಳಿಕೆ ನೀಡಿದ್ದಾರೆ. ಅಮೆರಿಕದ ಹೊಸ ಕಾನೂನು ರಷ್ಯಾದ ತೈಲ ಮತ್ತು ಅನಿಲ ಖರೀದಿಸುವ ಪ್ರಮುಖ ದೇಶಗಳ ಮೇಲೆ ಹೆಚ್ಚಿನ ಸುಂಕ ವಿಧಿಸುವ ಅಧಿಕಾರವನ್ನು ಅಧ್ಯಕ್ಷರಿಗೆ ನೀಡಿದೆ. ಭಾರತ ಮತ್ತು ಚೀನಾ ಈ ಕ್ರಮದಿಂದ ಪರಿಣಾಮ ಎದುರಿಸಬಹುದಾದ ದೇಶಗಳಾಗಿವೆ.

ಈ ನಡುವೆ, ಭಾರತದಿಂದ ರಷ್ಯಾದ ಕಚ್ಚಾ ತೈಲ ಆಮದು ಆಗಸ್ಟ್‌ನಲ್ಲಿ ಸುಮಾರು 16.5% ಇಳಿದು ದಿನಕ್ಕೆ 2.1 ಮಿಲಿಯನ್ ಬ್ಯಾರೆಲ್‌ಗಳಿಗೆ ತಲುಪಿತ್ತು. ಸೆಪ್ಟೆಂಬರ್‌ನಲ್ಲಿ ಇದು ಮತ್ತಷ್ಟು ಇಳಿದು ಸುಮಾರು 1.9 ಮಿಲಿಯನ್ ಬ್ಯಾರೆಲ್‌ಗಳಿಗೆ ತಲುಪಬಹುದು ಎಂಬ ಪ್ರಾಥಮಿಕ ಅಂದಾಜುಗಳಿವೆ.

ಝೆಲೆನ್ಸ್ಕಿ ಮನವಿ

ಇದೇ ಸಂದರ್ಭದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಭಾರತ ಸೇರಿ ರಷ್ಯಾದ ಪ್ರಮುಖ ತೈಲ ಖರೀದಿದಾರರು ಮಾಸ್ಕೋದೊಂದಿಗೆ ಇಂಧನ ವ್ಯಾಪಾರವನ್ನು ಕಡಿಮೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಭಾರತ, ಚೀನಾ ಮತ್ತು ಟರ್ಕಿಯಂತಹ ದೇಶಗಳು ರಷ್ಯಾದ ಇಂಧನ ಖರೀದಿಯನ್ನು ನಿಲ್ಲಿಸಿದರೆ ರಷ್ಯಾದ ಮೇಲೆ ಯುದ್ಧವನ್ನು ಮುಂದುವರಿಸುವ ಆರ್ಥಿಕ ಒತ್ತಡ ಹೆಚ್ಚಬಹುದು ಎಂದು ಅವರು ಹೇಳಿದ್ದಾರೆ.