ಸೆನ್ಸೆಕ್ಸ್ 1,470 ಅಂಕ ಪತನ; ಹೂಡಿಕೆದಾರರಿಗೆ 10 ಲಕ್ಷ ಕೋಟಿ ರುಪಾಯಿ ನಷ್ಟ
Share Market Today: ಷೇರು ಪೇಟೆಯಲ್ಲಿ ಮತ್ತೆ ರಕ್ತಪಾತವಾಗಿದ್ದು, ಶುಕ್ರವಾರ (ಮಾರ್ಚ್ 14) ಸೆನ್ಸೆಕ್ಸ್ 1,470ಕ್ಕೂ ಹೆಚ್ಚು ಅಂಕ ಪತನವಾಗಿ 74,563ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 488 ಅಂಕ ಕಳೆದುಕೊಂಡು 23,151ಕ್ಕೆ ಸ್ಥಿರವಾಯಿತು. ಹೂಡಿಕೆದಾರರಿಗೆ 10 ಲಕ್ಷ ಕೋಟಿ ರುಪಾಯಿ ನಷ್ಟ ಉಂಟಾಯಿತು.
ಸಾಂದರ್ಭಿಕ ಚಿತ್ರ -
ಮುಂಬೈ, ಮಾ. 13: ಷೇರು ಪೇಟೆಯಲ್ಲಿ ಮತ್ತೆ ರಕ್ತಪಾತವಾಗಿದ್ದು, ಶುಕ್ರವಾರ (ಮಾರ್ಚ್ 14) ಸೆನ್ಸೆಕ್ಸ್ 1,470ಕ್ಕೂ ಹೆಚ್ಚು ಅಂಕ ಪತನವಾಗಿ 74,563ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 488 ಅಂಕ ಕಳೆದುಕೊಂಡು 23,151ಕ್ಕೆ ಸ್ಥಿರವಾಯಿತು. ನಿಫ್ಟಿ ಮೆಟಲ್ ಶೇಕಡಾ 4ಕ್ಕೂ ಹೆಚ್ಚು ಇಳಿಕೆ ದಾಖಲಿಸಿತು. ಸುಮಾರು ಒಂದು ವರ್ಷದ ಬಳಿಕ ಅತಿ ದೊಡ್ಡ ವೀಕ್ಲಿ ಡ್ರಾಪ್ ಇವತ್ತು ದಾಖಲಾಯಿತು. ಇರಾನ್ ಮತ್ತು ಇಸ್ರೇಲ್ - ಅಮೆರಿಕ ನಡುವಣ ಯುದ್ಧವೇ ಸೂಚ್ಯಂಕ ಕುಸಿತಕ್ಕೆ ಪ್ರಮುಖ ಕಾರಣ (Share Market). ಸಮರದ ಹಿನ್ನೆಲೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ದರ ಬ್ಯಾರಲ್‌ಗೆ 102 ಡಾಲರ್‌ಗೆ ಏರಿಕೆಯಾಗಿದೆ. ಸತತ ಮೂರನೇ ದಿನ ಸ್ಟಾಕ್ ಮಾರ್ಕೆಟ್ ಪತನವಾಗಿದೆ. ಹೂಡಿಕೆದಾರರಿಗೆ ಇವತ್ತು 10 ಲಕ್ಷ ಕೋಟಿ ರುಪಾಯಿ ನೋಶನಲ್ ನಷ್ಟ ಉಂಟಾಯಿತು.
ನಿಫ್ಟಿ ಮೆಟಲ್ ಇಂಡೆಕ್ಸ್‌ನಲ್ಲಿ ಹೆಚ್ಚು ನಷ್ಟವಾಗಿದ್ದರೆ, ರಿಯಾಲ್ಟಿ, ಕನ್‌ಸ್ಯೂಮರ್ ಡ್ಯೂರಬಲ್ಸ್ ಮತ್ತು ಪಿಎಸ್‌ಯು ಬ್ಯಾಂಕ್ ವಲಯದಲ್ಲೂ ನಷ್ಟ ಉಂಟಾಯಿತು. ಫೈನಾನ್ಷಿಯಲ್ಸ್ ಮತ್ತು ಆಟೊಮೊಬೈಲ್ ಕೂಡ ದುರ್ಬಲವಾಗಿತ್ತು. ಎಫ್‌ಎಂಸಿಜಿ ಸೆಕ್ಟರ್ ಮಾತ್ರ ಗ್ರೀನ್ ಆಗಿತ್ತು.
ಜಪಾನ್, ಆಸ್ಟ್ರೇಲಿಯಾ, ಹಾಂಕಾಂಗ್, ಶಾಂಘೈ, ಯುರೋಪ್‌ನಲ್ಲಿ ಷೇರು ಸೂಚ್ಯಂಕಗಳು ಇಳಿಯಿತು.
ಸ್ಟಾಕ್ ಮಾರ್ಕೆಟ್ ಪತನಕ್ಕೆ 6 ಕಾರಣಗಳು
- ಇರಾನ್- ಇಸ್ರೇಲ್ ಯುದ್ಧ ತೀವ್ರವಾಗಿರುವುದು.
- ಕಚ್ಚಾ ತೈಲ ದರ ಬ್ಯಾರಲ್‌ಗೆ 100 ಡಾಲರ್ ಗೆ ಏರಿಕೆ ಆಗಿರುವುದು.
- ಜಾಗತಿಕ ಷೇರು ಮಾರುಕಟ್ಟೆಯ ಪತನ.
- ಡಾಲರ್ ಎದುರು ರುಪಾಯಿ ದುರ್ಬಲವಾಗಿರುವುದು.
- ಬಾಂಡ್ ಯೀಲ್ಡ್ ಏರಿಕೆ ಆಗಿರುವುದು.
- ಎಫ್‌ಐಐಗಳಿಂದ ಷೇರು ಮಾರಾಟ ಹೆಚ್ಚಳವಾಗಿರುವುದು.
ಅಡುಗೆ ಎಣ್ಣೆ ಬೆಲೆ ಏರಿಕೆ, ಗ್ರಾಹಕರಿಗೆ ಬರೆ
ಲೋಹದ ಷೇರುಗಳು ಪತನವಾಗಿದ್ದೇಕೆ?
ಹಿಂದೂಸ್ಥಾನ್ ಜಿಂಕ್ ಷೇರು ದರ ಶೇಕಡಾ 4ರಷ್ಟು ಇಳಿಯಿತು. ಟಾಟಾ ಸ್ಟೀಲ್ ದರ ಕೂಡ ಶೇಕಡಾ 4ರಷ್ಟು ತಗ್ಗಿತು. ನ್ಯಾಲ್ಕೊ ಷೇರು ದರ ಶೇಕಡಾ 6ರಷ್ಟು ಮತ್ತು ಹಿಂಡಾಲ್ಕೊ ಇಂಡಸ್ಟ್ರೀಸ್ ಷೇರು ದರ ಶೇಕಡಾ 5ರಷ್ಟು ಕುಸಿಯಿತು.
ಇರಾನ್ ಯುದ್ಧ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣಿಸದಿರುವ ಹಿನ್ನೆಲೆಯಲ್ಲಿ ಅನಿಲ ಪೂರೈಕೆಯಲ್ಲಿ ಮತ್ತಷ್ಟು ವ್ಯತ್ಯಯ ಉಂಟಾಗುವ ಆತಂಕ ಉಂಟಾಗಿದೆ. ಲೋಹದ ಸಂಸ್ಕರಣೆಯಲ್ಲಿ ಇದು ಮಹತ್ತ್ವದ್ದಾಗಿದೆ. ಮಧ್ಯಪ್ರಾಚ್ಯ ಬಿಕ್ಕಟ್ಟಿನ ಅನಿಶ್ಚಿತತೆ ಇರುವುದರಿಂದ ಕಂಪನಿಗಳು ಲೋಹ ತಯಾರಿಕೆಗೆ ಬೇಕಾಗುವ ಕಚ್ಚಾ ವಸ್ತುಗಳ ಖರೀದಿಯನ್ನೂ ಕಡಿಮೆ ಮಾಡಿವೆ. ಹೀಗಾಗಿ ಮೆಟಲ್ ಸ್ಟಾಕ್ಸ್ ದರಗಳು ಇಳಿದಿವೆ.
ಎಚ್‌ಡಿಎಫ್ ಸಿ ಡಿಫೆನ್ಸ್ ಫಂಡ್, ಕ್ಯುಮಿನ್ಸ್ ಇಂಡಿಯಾ ಎಂಬ ಲಾರ್ಜ್ ಕ್ಯಾಪ್ ಸ್ಟಾಕ್ಸ್‌ನಿಂದ ತನ್ನೆಲ್ಲ ಷೇರು ಹೂಡಿಕೆಯನ್ನು ಹಿಂತೆಗೆದುಕೊಂಡಿದೆ. ಕಳೆದ ಐದು ವರ್ಷಗಳಲ್ಲಿ ಷೇರಿನ ದರದಲ್ಲಿ 400 ಪರ್ಸೆಂಟ್ ಏರಿಕೆ ಆಗಿರುವ ಹಿನ್ನೆಲೆಯಲ್ಲಿ ಎಚ್‌ಡಿಎಫ್ ಸಿ ಡಿಫೆನ್ಸ್ ಫಂಡ್ ಎಕ್ಸಿಟ್ ಆಗಿದೆ.
ತೈಲ ಬೆಲೆ ಬ್ಯಾರೆಲ್‌ಗೆ 200 ಡಾಲರ್ ತಲುಪಲಿದೆ: ಹಡಗುಗಳ ಮೇಲಿನ ದಾಳಿಗೆ ಇರಾನ್ ಖಡಕ್ ಎಚ್ಚರಿಕೆ
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಾರ್ಚ್ ತಿಂಗಳಿನಲ್ಲಿ 12ರ ತನಕ ಒಟ್ಟು 46,167 ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಬಂಗಾರದ ದರದಲ್ಲಿ ಸ್ವಲ್ಪ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 24 ಕ್ಯಾರಟ್ ನ ಪ್ರತಿ ಗ್ರಾಮ್ ಬಂಗಾರದ ದರ 16,069 ರುಪಾಯಿಗೆ ಇಳಿದಿದೆ. 22 ಕ್ಯಾರಟ್ ಚಿನ್ನದ ದರ 14,730 ರುಪಾಯಿಗೆ ತಗ್ಗಿದೆ. ಬೆಳ್ಳಿಯ ದರ ಪ್ರತಿ ಕೆಜಿಗೆ 2,80,000 ರುಪಾಯಿಗೆ ಇಳಿದಿದೆ.
ಟಿಸಿಸ್, ಇನ್ಫೋಸಿಸ್ ಸೇರಿದಂತೆ 6 ಐಟಿ ಷೇರುಗಳ ದರದಲ್ಲಿಕಳೆದ ಒಂದು ತಿಂಗಳಲ್ಲಿ ಶೇಕಡಾ 18ರ ತನಕ ಇಳಿಕೆಯಾಗಿದೆ. 52 ವಾರಗಳಲ್ಲಿನ ಕನಿಷ್ಠ ಮಟ್ಟಕ್ಕೆ ದರ ಇಳಿಕೆಯಾಗಿದೆ.