ಕೋವಿಡ್ ಎದುರಿಸಿದ ರೀತಿಯಲ್ಲೇ ಯುದ್ಧದ ಪರಿಣಾಮ ಎದುರಿಸಲು ಮುಂದಾದ ಕೇಂದ್ರ ಸರ್ಕಾರ
ಕೋವಿಡ್ ಸಾಂಕ್ರಾಮಿಕದ ಕಾಲದಲ್ಲಿ ಸಂಕಷ್ಟಗಳನ್ನು ಎದುರಿಸಿದ ರೀತಿಯಲ್ಲೇ ಇರಾನ್ ಸಂಘರ್ಷದಿಂದ ಉಂಟಾಗುವ ಪರಿಣಾಮವನ್ನು ಎದುರಿಸಲು ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮೊದಲಿಗೆ ತೀವ್ರವಾಗಿ ಹಾನಿಗೊಳಗಾಗದ ವಲಯಗಳನ್ನು ಬೆಂಬಲಿಸಲು ಕೇಂದ್ರ ಹಣಕಾಸು ಸಚಿವಾಲಯವು ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳುತ್ತಿವೆ.
ಸಂಗ್ರಹ ಚಿತ್ರ -
ನವದೆಹಲಿ: ಇಸ್ರೇಲ್ (Israel) ಮತ್ತು ಯುಎಸ್ (US) ಸೇನಾ ಪಡೆಯು ಇರಾನ್ (Iran war) ಮೇಲೆ ದಾಳಿ ನಡೆಸಿದ ಬಳಿಕ ಉಂಟಾಗಿರುವ ತೈಲ ಬಿಕ್ಕಟ್ಟು (oil crisis) ದೇಶದ ವಿವಿಧ ವಲಯಗಳನ್ನು ತೀವ್ರವಾಗಿ ಬಾಧಿಸಿದೆ. ಇದರ ರಕ್ಷಣೆಗೆ ಈಗ ಕೇಂದ್ರ ಸರ್ಕಾರ (central government) ಮುಂದಾಗಿದೆ. ಯುದ್ದದಿಂದ ನಷ್ಟ ಅನುಭವಿಸುತ್ತಿರುವ ವಲಯಗಳನ್ನು ರಕ್ಷಿಸಲು ಕೇಂದ್ರವು ಕೋವಿಡ್ (Covid) ಸಾಂಕ್ರಾಮಿಕ ಕಾಲದ ರಕ್ಷಣಾ ತಂತ್ರಗಳನ್ನು ಅಳವಡಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದೆ. ಇದಕ್ಕಾಗಿ ಕೇಂದ್ರ ಹಣಕಾಸು ಸಚಿವಾಲಯವು ( Union Ministry of Finance) ಹಲವಾರು ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳುತ್ತಿವೆ.
ಇರಾನ್ ಯುದ್ಧದ ಪರಿಣಾಮವಾಗಿ ತೀವ್ರ ತೊಂದರೆಯನ್ನು ಎದುರಿಸುತ್ತಿರುವ ವಲಯಗಳನ್ನು ಬೆಂಬಲಿಸಲು ಕೇಂದ್ರ ಹಣಕಾಸು ಸಚಿವಾಲಯವು 2 ಲಕ್ಷ ಕೋಟಿ ರೂ. ಗೂ ಹೆಚ್ಚು ಹೊಸ ಸಾಲ ಯೋಜನೆಯನ್ನು ಜಾರಿಗೆ ತರುವ ಕಾರ್ಯ ನಿರ್ವಹಿಸುತ್ತಿದೆ. ಇದನ್ನು ಕೋವಿಡ್ ಸಾಂಕ್ರಾಮಿಕ ಕಾಲದಲ್ಲಿ ನಡೆಸಿರುವ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆ (ECLGS) ಮಾದರಿಯಲ್ಲಿ ವಿನ್ಯಾಸಗೊಳಿಸಲಾಗುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಇರಾನ್ ಯುದ್ಧದಲ್ಲಿ ನಮ್ಮ ನಾವಿಕರನ್ನು ಕಳೆದುಕೊಂಡಿದ್ದೇವೆ ಎಂದ ಭಾರತ
ಮೊದಲಿಗೆ ಭಾರತದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಆದ್ಯತೆ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ ಇದಕ್ಕಾಗಿ ರಫ್ತು ಸಂಬಂಧಿತ ವಲಯಗಳಿಗೆ ಪರಿಹಾರ ನೀಡುವ ಗುರಿಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಹಣಕಾಸು ಸೇವೆಗಳ ಇಲಾಖೆಯು ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೆ ಸಂಬಂಧಪಟ್ಟ ಯೋಜನೆಯು 15 ದಿನಗಳಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ. ಈ ಯೋಜನೆಯಲ್ಲಿ ಮೇಲಾಧಾರ ಮುಕ್ತ ಸಾಲಗಳನ್ನು ನೀಡಬಹುದು ಎನ್ನಲಾಗುತ್ತಿದೆ.
ಪ್ರಮುಖ ಅಂಶಗಳು
ತುರ್ತು ಹಣಕಾಸು ಸಮಸ್ಯೆ ಪರಿಹಾರ ಯೋಜನೆಯ ಪ್ರಸ್ತಾವನೆಯಲ್ಲಿ ಮುಖ್ಯವಾಗಿ 2 ಲಕ್ಷ ಕೋಟಿ ರೂ. ಗೂ ಹೆಚ್ಚು ಹೊಸ ಸಾಲ, ಕೋವಿಡ್ ಸಾಂಕ್ರಾಮಿಕ ಕಾಲದ ಮಾದರಿಯ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆ, ರಫ್ತು ಸಂಬಂಧಿತ ಮತ್ತು ದುರ್ಬಲ ವಲಯಗಳಿಗೆ ಮೊದಲ ಆದ್ಯತೆ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಹೊಂದಿರುವವರಿಗೆ ಪರಿಹಾರ, ಸರ್ಕಾರಿ ಖಾತರಿಯೊಂದಿಗೆ ಮೇಲಾಧಾರ ಮುಕ್ತ ಸಾಲ ಸೌಲಭ್ಯ, 15 ದಿನಗಳಲ್ಲಿ ಯೋಜನೆ ಘೋಷಣೆ ಸಾಧ್ಯತೆ ಇದೆ. ಸದ್ಯ ಇದರ ಪೂರ್ವಭಾವಿ ಸಿದ್ಧತೆಯನ್ನು ನಡೆಸಲಾಗುತ್ತಿದೆ.
ಮಾರ್ಚ್ ತಿಂಗಳ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ ಬಳಿಕ ಕೇಂದ್ರ ಸರ್ಕಾರ ಯುದ್ದದ ಪರಿಣಾಮ ಎದುರಿಸಲು ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದೆ.
ಮಾರ್ಚ್ ತಿಂಗಳಲ್ಲಿ ಜಿಎಸ್ ಟಿ ಸಂಗ್ರಹ ಶೇ. 8.8ರಷ್ಟು ಹೆಚ್ಚಾಗಿದ್ದು, ದೇಶೀಯ ಪ್ರಯಾಣಿಕ ವಾಹನ ಮಾರಾಟವು ಶೇ. 16.3ರಷ್ಟು ಹೆಚ್ಚಾಗಿದೆ. ವಿದ್ಯುತ್ ಬಳಕೆ ಶೇ. 1.8 ರಷ್ಟು, ರೈಲ್ವೆ ಸರಕು ಸಾಗಣೆ ಶೇ. 3.4 ರಷ್ಟು ಏರಿಕೆಯಾಗಿದೆ. ವಿಶ್ವದಲ್ಲಿ ಯುದ್ಧ ಭೀತಿಯನ್ನು ಉಂಟು ಮಾಡಿದ್ದರೂ ಭಾರತ ತನ್ನ ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಂಡಿರುವುದು ಈ ಅಂಕಿಅಂಶಗಳಿಂದ ಸ್ಪಷ್ಟವಾಗಿದೆ.