ನವೆಂಬರ್ 1ರ ದೆಹಲಿ ರಾಮ್ಲೀಲಾ ಮೈದಾನದ ಕಾಂಗ್ರೆಸ್ ರ್ಯಾಲಿಗೆ ವ್ಯಾಪಾರಿಗಳಿಂದ ತೀವ್ರ ವಿರೋಧ: ದೀಪಾವಳಿ ಖರೀದಿಗೆ ಅಡ್ಡಿಯಾಗುವ ಆತಂಕ
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜಿನಾಮೆಗೆ ಆಗ್ರಹಿಸಿ 'ವೋಟ್ ಚೋರ್ ಗದ್ದಿ ಚೋಡ್' ಎಂಬ ಘೋಷಣೆಯೊಂದಿಗೆ ಕಾಂಗ್ರೆಸ್ ರ್ಯಾಲಿ ನವೆಂಬರ್ 1ರಂದು ರಾಮ್ಲೀಲಾ ಮೈದಾನದಲ್ಲಿ ಆಯೋಜಿಸಲಾಗಿದೆ. ಹಬ್ಬದ ಸೀಸನ್ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟಿಗೆ ಇದು ಅಡ್ಡಿಯಾಗಲಿದೆ. ಹೀಗಾಗಿ ಇದನ್ನು ನವೆಂಬರ್ 10ರವರೆಗೆ ಮುಂದೂಡುವಂತೆ ವ್ಯಾಪಾರಿಗಳ ಸಂಘಟನೆ ಆಗ್ರಹಿಸಿದೆ.
ಸಂಗ್ರಹ ಚಿತ್ರ -
ನವದೆಹಲಿ: ರಾಮ್ ಲೀಲಾ ಮೈದಾನದಲ್ಲಿ (Ramlila Maidan rally) ನವೆಂಬರ್ 1ರಂದು ನಡೆಯಲಿರುವ ರಾಹುಲ್ ಗಾಂಧಿ ಅವರ ರ್ಯಾಲಿಯ (Rahul Gandhi rally) ಬಗ್ಗೆ ವ್ಯಾಪಾರಿಗಳ ಸಂಘಟನೆ ಕಳವಳ ವ್ಯಕ್ತಪಡಿಸಿದೆ. ಕಾಂಗ್ರೆಸ್ ಪಕ್ಷದ ರ್ಯಾಲಿಯಲ್ಲಿ (congress rally) 10 ಲಕ್ಷ ಜನರು ಸೇರುವ ನಿರೀಕ್ಷೆ ಇದೆ ಎನ್ನಲಾಗಿದ್ದು, ಹಬ್ಬದ ಸೀಸನ್ ಅವಧಿಯಲ್ಲಿ ಸಂಚಾರ ದಟ್ಟಣೆ ಮತ್ತು ವಾಹನ ನಿಲುಗಡೆ ಸಮಸ್ಯೆಗಳು ಉಂಟಾಗಲಿದೆ. ಇದರಿಂದ ದೆಹಲಿಯ 21 ಪ್ರಮುಖ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟಿಗೆ ಅಡ್ಡಿಯಾಗುವ ಬಗ್ಗೆ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ (Chamber of Trade and Industry) ಆತಂಕ ವ್ಯಕ್ತಪಡಿಸಿದೆ.
ಈ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿರುವ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ, ನವೆಂಬರ್ 1ರಂದು ರಾಮ್ಲೀಲಾ ಮೈದಾನದಲ್ಲಿ ನಿಗದಿಯಾಗಿರುವ ರ್ಯಾಲಿಯನ್ನು 'ಭಾಯ್ ದೂಜ್' ಹಬ್ಬದ ಅನಂತರದ ದಿನವಾದ ನವೆಂಬರ್ 10ರವರೆಗೆ ಮುಂದೂಡುವಂತೆ ಅಥವಾ ವಾಣಿಜ್ಯ ಪ್ರದೇಶಗಳಿಂದ ದೂರವಿರುವ ಸ್ಥಳಕ್ಕೆ ಬದಲಾಯಿಸುವಂತೆ ಮನವಿ ಮಾಡಿದೆ.
ಉದ್ಯೋಗ ಆಮಿಷದ ಲಿಂಕ್ ಕ್ಲಿಕ್ ಮಾಡಿದ ಬ್ಯಾಂಕ್ ಮ್ಯಾನೇಜರ್: ಕ್ಷಣಾರ್ಧದಲ್ಲೇ 1.25 ಲಕ್ಷ ರೂಪಾಯಿ ಮಾಯ!
ರ್ಯಾಲಿಯಲ್ಲಿ ಸುಮಾರು 10 ಲಕ್ಷ ಜನರು ಸೇರುವ ನಿರೀಕ್ಷೆಯನ್ನು ಕಾಂಗ್ರೆಸ್ ವ್ಯಕ್ತಪಡಿಸಿದೆ. ಇದರಿಂದ ಚಾಂದನಿ ಚೌಕ್, ಸಾದರ್ ಬಜಾರ್, ಖಾರಿ ಬಾವಲಿ ಮತ್ತು ಭಗೀರಥ ಪ್ಯಾಲೇಸ್ ಸೇರಿದಂತೆ ದೆಹಲಿಯ 21 ಪ್ರಮುಖ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳಲ್ಲಿನ ವಹಿವಾಟಿಗೆ ಅಡ್ಡಿಯುಂಟು ಉಂಟಾಗಲಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಕಳವಳ ವ್ಯಕ್ತಪಡಿಸಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಬರೆದಿರುವ ಪತ್ರದ ಪ್ರತಿಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಳುಹಿಸಲಾಗಿದ್ದು, ಮೈತ್ರಿ ಪಕ್ಷಗಳೊಂದಿಗೆ ಈ ವಿಷಯದ ಬಗ್ಗೆ ಚರ್ಚಿಸುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಅಧ್ಯಕ್ಷ ಬ್ರಿಜೇಶ್ ಗೋಯಲ್ ತಿಳಿಸಿದ್ದಾರೆ.
ರ್ಯಾಲಿ ಹಿನ್ನೆಲೆಯಲ್ಲಿ ಅಕ್ಟೋಬರ್ 31 ಮತ್ತು ನವೆಂಬರ್ 1 ರಂದು ಬ್ಯಾರಿಕೇಡ್ಗಳನ್ನು ಹಾಕಲಾಗುತ್ತದೆ. ರಸ್ತೆಗಳನ್ನು ತಡೆಯಲಾಗುತ್ತದೆ. ಇದರಿಂದ ಹಬ್ಬದ ಶಾಪಿಂಗ್ ಅವಧಿಯಲ್ಲಿ ಗ್ರಾಹಕರ ಓಡಾಟಕ್ಕೆ ತೊಂದರೆಯಾಗಲಿದೆ ಎಂದು ಅವರು ಹೇಳಿದ್ದಾರೆ.
ರ್ಯಾಲಿಯಲ್ಲಿ 10 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ದೆಹಲಿಗೆ 15,000 ದಿಂದ 20,000 ವಾಹನಗಳು ಬರುವ ಸಾಧ್ಯತೆಯಿದೆ. ಇದರಲ್ಲಿ 10,000 ದಿಂದ 12,000 ಬಸ್, ಕಾರುಗಳು, 5,000 ದಿಂದ 7,000 ಟೆಂಪೋ ಟ್ರಾವೆಲರ್ಗಳಂತಹ ಸಣ್ಣ ವಾಹನಗಳು ಸೇರಿರಲಿವೆ. ಈ ವಾಹನಗಳನ್ನು ಎಲ್ಲಿ ನಿಲ್ಲಿಸಬೇಕು ಎಂಬ ಬಗ್ಗೆಯೂ ಅವರು ಪ್ರಶ್ನಿಸಿದ್ದಾರೆ.
ರಾಮ್ಲೀಲಾ ಮೈದಾನದ ಸುತ್ತಮುತ್ತ ಕನಿಷ್ಠ 200 ವಾಹನಗಳನ್ನು ನಿಲ್ಲಿಸಲು ಕೂಡ ಅಧಿಕೃತ ಪಾರ್ಕಿಂಗ್ ವ್ಯವಸ್ಥೆ ಇಲ್ಲ ಎಂದಿರುವ ವ್ಯಾಪಾರಿಗಳ ಸಂಘಟನೆ, ರ್ಯಾಲಿಯನ್ನು ಮುಂದೂಡಲು ಸಾಧ್ಯವಾಗದಿದ್ದರೆ ವ್ಯಾಪಾರ ಚಟುವಟಿಕೆಗಳ ಮೇಲಾಗುವ ಪರಿಣಾಮವನ್ನು ಕಡಿಮೆ ಮಾಡಲು ಅದನ್ನು ಬುರಾರಿ ಮೈದಾನ ಅಥವಾ ಜವಾಹರಲಾಲ್ ನೆಹರು ಕ್ರೀಡಾಂಗಣಕ್ಕೆ ಸ್ಥಳಾಂತರಿಸುವಂತೆ ಸಲಹೆ ನೀಡಿದೆ.
ದೆಹಲಿಯ ಕಿರಿದಾದ ಬೀದಿಗಳಲ್ಲಿ ತೀವ್ರ ದಟ್ಟಣೆಯಿಂದ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡು, 10,000 ಕೋಟಿ ರೂಪಾಯಿಗಳಷ್ಟು ನಷ್ಟವಾಗಬಹುದು. ಕಳೆದ ಅಕ್ಟೋಬರ್ 10 ರಂದು ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯಿಂದ ಸುಮಾರು 3,000 ಕೋಟಿ ರೂಪಾಯಿ ನಷ್ಟ ಉಂಟಾಗಿತ್ತು ಎಂದು ತಿಳಿಸಿದೆ