Gold Rate: ಲಕ್ಷದ ಗಡಿ ದಾಟಿದ ಚಿನ್ನ-ಬೆಳ್ಳಿ 1.20 ಲಕ್ಷಕ್ಕೆ ಏರಿಕೆಯಾಗುತ್ತಾ? ಖರೀದಿಗೆ ಇದೇ ಸಕಾಲ?
ಭಾರತದ ಮಾರುಕಟ್ಟೆಯಲ್ಲಿ ಬಂಗಾರ ಮತ್ತು ಬೆಳ್ಳಿಯ ದರದಲ್ಲಿ ಮತ್ತೆ ಏರಿಕೆಯಾಗುತ್ತಿದೆ. ಜಾಗತಿಕ ಅನಿಶ್ಚಿತತೆಯ ಪರಿಣಾಮ ಚಿನ್ನದ ದರ ದಿನೇದಿನೆ ಏರುತ್ತಿದೆ. ಹೂಡಿಕೆಗೆ ಸುರಕ್ಷಿತ ತಾಣವಾಗಿ ಬೇಡಿಕೆ ಪಡೆದಿದೆ. ಇದಕ್ಕೆ ಮುಖ್ಯ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ 3,578 ಡಾಲರ್‌ಗೆ ಏರಿಕೆಯಾಗಿದೆ.

-

ಭಾರತದ ಮಾರುಕಟ್ಟೆಯಲ್ಲಿ ಬಂಗಾರ ಮತ್ತು ಬೆಳ್ಳಿಯ ದರದಲ್ಲಿ ಮತ್ತೆ (Gold Rate) ಏರಿಕೆಯಾಗುತ್ತಿದೆ. ಜಾಗತಿಕ ಅನಿಶ್ಚಿತತೆಯ ಪರಿಣಾಮ ಚಿನ್ನದ ದರ ದಿನೇದಿನೆ ಏರುತ್ತಿದೆ. ಹೂಡಿಕೆಗೆ ಸುರಕ್ಷಿತ ತಾಣವಾಗಿ ಬೇಡಿಕೆ ಪಡೆದಿದೆ. ಪ್ರತಿ 10 ಗ್ರಾಮ್ ಚಿನ್ನದ ದರ 1 ಲಕ್ಷದ 6 ಸಾವಿರದ 90 ರುಪಾಯಿಗೆ ಏರಿಕೆಯಾಗಿದೆ. ಇಕನಾಮಿಕ್ ಟೈಮ್ಸ್ ವರದಿ ಪ್ರಕಾರ ಈ ವರ್ಷದ ಅಂತ್ಯದ ವೇಳೆಗೆ ಬಂಗಾರದ ದರ 1 ಲಕ್ಷದ 20 ಸಾವಿರ ರುಪಾಯಿಗೆ ಏರಿಕೆಯಾಗುವ ಸಾಧ್ಯತೆ ಇದೆ.
ಇದಕ್ಕೆ ಮುಖ್ಯ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ 3,578 ಡಾಲರ್‌ಗೆ ಏರಿಕೆಯಾಗಿದೆ. ಗೋಲ್ಡ್‌ಮನ್ ಸ್ಯಾಚ್ಸ್ ಪ್ರಕಾರ 2026ರ ಮಧ್ಯ ಭಾಗದಲ್ಲಿ ಬಂಗಾರದ ದರ ಪ್ರತಿ ಔನ್ಸಿಗೆ 4,000 ಡಾಲರ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ. ಬೆಳ್ಳಿಯ ದರ ಪ್ರತಿ ಕೆಜಿಗೆ 1 ಲಕ್ಷದ 25 ಸಾವಿರದ 250 ರುಪಾಯಿಗೆ ವೃದ್ಧಿಸಿದೆ. ಜಾಗತಿಕ ಮಟ್ಟದಲ್ಲಿ ಗೋಲ್ಡ್ ಇಟಿಎಫ್‌ಗಳಲ್ಲಿ ಕೂಡ ಹೂಡಿಕೆ ವೃದ್ಧಿಸಿದೆ.
ಹಾಗಾದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆಗೆ ಕಾರಣವೇನು? ಜಾಗತಿಕ ಅನಿಶ್ಚಿತತೆ. ಜತೆಗೆ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರ ಕಡಿತ ಮಾಡುವ ಸಾಧ್ಯತೆ ಇದೆ. ವರದಿಗಳ ಪ್ರಕಾರ ಸೆಪ್ಟೆಂಬರ್‌ನಲ್ಲಿ ಬಡ್ಡಿ ದರ ಇಳಿಕೆಯಾಗುವ ನಿರೀಕ್ಷೆ ಇದೆ. ಜಾಕ್ಸನ್ ಹೋಲ್ ಸ್ಪೀಚ್ ಉಪನ್ಯಾಸ ಕಾರ್ಯಕ್ರಮದಲ್ಲಿ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಅವರು ಬಡ್ಡಿ ದರ ಇಳಿಕೆಯ ಇಂಗಿತ ವ್ಯಕ್ತಪಡಿಸಿದ್ದರು.
ಡಾಲರ್ ಎದುರು ರುಪಾಯಿ ಮೌಲ್ಯ ಇಳಿಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಹೆಚ್ಚು ಫೋಕಸ್ ಆಗದಿರುವ ಸಂಗತಿ ಯಾವುದು ಎಂದರೆ, ಸ್ವತಃ ಡಾಲರ್‌ನ ಮೌಲ್ಯವೂ ಇಳಿಯುತ್ತಿದೆ. ಡಾಲರ್ ದುರ್ಬಲವಾಗುತ್ತಿರುವುದು ಕೂಡ ಬಂಗಾರದ ದರ ಏರಿಕೆಯಾಗಲು ಒಂದು ಕಾರಣವಾಗಿದೆ. ಸೆಂಟ್ರಲ್ ಬ್ಯಾಂಕ್‌ಗಳೂ ಚಿನ್ನವನ್ನು ಖರೀದಿಸುತ್ತಿವೆ. 2023ರಿಂದೀಚೆಗೆ ಬಂಗಾರದ ದರ ಇಮ್ಮಡಿಯಾಗಿದೆ. ಭಾರತ, ಚೀನಾ, ಟರ್ಕಿ ಮತ್ತು ಪೊಲಾಂಡ್ ದೇಶಗಳ ಬ್ಯಾಂಕಿಂಗ್ ನಿಯಂತ್ರಕಗಳು ಬಂಗಾರವನ್ನು ಖರೀದಿಸಿವೆ.
ಹಾಗಾದರೆ ಈಗ ಬಂಗಾರವನ್ನು ಖರೀದಿಸಬಹುದೇ?
ತಜ್ಞರ ಪ್ರಕಾರ ಬಂಗಾರ ಮತ್ತು ಬೆಳ್ಳಿಯ ದರದಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಈಗ ಬಂಗಾರವನ್ನು ಮಾರಿ ಲಾಭ ಗಳಿಸಲು ಆಲೋಚಿಸುವ ಬದಲಿಗೆ, ಖರೀದಿಸಿದರೆ ಭವಿಷ್ಯದ ದಿನಗಳಲ್ಲಿ ದರ ಏರಿಕೆಯಾದಾಗ ಲಾಭ ಗಳಿಸಬಹುದು.
2024ರಲ್ಲಿ ಅತಿ ಹೆಚ್ಚು ಚಿನ್ನ ಉತ್ಪಾದಿಸಿದ ರಾಷ್ಟ್ರಗಳು:
ಚೀನಾ : 380 ಟನ್
ರಷ್ಯಾ: 330 ಟನ್
ಆಸ್ಟ್ರೇಲಿಯಾ: 284 ಟನ್
ಕೆನಡಾ: 202 ಟನ್
ಅಮೆರಿಕ: 160 ಟನ್
ಇನ್ನೊಂದು ಸ್ವಾರಸ್ಯಕರ ಬೆಳವಣಿಗೆಯಲ್ಲಿ ಅಮೆರಿಕದ ಟ್ರೆಶರಿ ಬಿಲ್‌ಗಳಲ್ಲಿ ಭಾರತದ ಹೂಡಿಕೆ ಕಡಿಮೆಯಾಗುತ್ತಿದೆ. ಅದರ ಬದಲಿಗೆ ಬಂಗಾರದಲ್ಲಿಯೇ ಹೂಡಿಕೆಯನ್ನು ಭಾರತವು ಹೆಚ್ಚಿಸಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಸರಕಾರದ ಪರವಾಗಿ ಚಿನ್ನದಲ್ಲಿ ಹೂಡಿಕೆ ಹೆಚ್ಚಿಸಿದೆ. ದೇಶದ ವಿದೇಶಿ ವಿನಿಮಯ ಸಂಗ್ರಹದ ಖಾತೆಯಲ್ಲೀಗ ಅಮೆರಿಕದ ಟ್ರೆಶರಿ ಬಿಲ್ಸ್‌ಗಳಲ್ಲಿನ ಹೂಡಿಕೆ ಇಳಿಕೆಯಾಗಿದೆ. ಕಳೆದ ಜೂನ್ ವೇಳೆಗೆ ಆರ್‌ಬಿಐ ಬಂಗಾರದಲ್ಲಿ ಮಾಡಿದ ಹೂಡಿಕೆಯು 879 ಟನ್‌ಗೆ ಏರಿಕೆಯಾಗಿದೆ.
ಬಂಗಾರ ಮತ್ತು ಬೆಳ್ಳಿಯ ದರ ಏರುಗತಿಯಲ್ಲಿ ಇರುವುದರಿಂದ ಈ ಲೋಹಗಳ ದರಗಳನ್ನು ಅಧರಿಸಿದ ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್ ಅಥವಾ ಇಟಿಎಫ್‌ಗಳು ಹೂಡಿಕೆದಾರರಿಗೆ ಉತ್ತಮ ಲಾಭ ನೀಡುತ್ತಿವೆ. ಟಾಟಾ ಗೋಲ್ಡ್ ಇಟಿಎಫ್ ಮತ್ತು ಟಾಟಾ ಸಿಲ್ವರ್ ಇಟಿಎಫ್ ಉತ್ತಮ ರಿಟರ್ನ್ ಕೊಟ್ಟಿವೆ. ಕಳೆದ ಒಂದು ವರ್ಷದಲ್ಲಿ 40% ಗೂ ಹೆಚ್ಚು ಲಾಭ ನೀಡಿವೆ.
ಈ ಸುದ್ದಿಯನ್ನೂ ಓದಿ: Gold Rate Today: ಚಿನ್ನದ ದರದಲ್ಲಿ ಭಾರೀ ಏರಿಕೆ; ಇಂದಿನ ರೇಟ್ ಚೆಕ್ ಮಾಡಿ
ಕಳೆದ 12 ತಿಂಗಳುಗಳಲ್ಲಿ ಹೆಚ್ಚು ಲಾಭ ನೀಡಿದ ಗೋಲ್ಡ್ ಇಟಿಎಫ್:
ಟಾಟಾ ಗೋಲ್ಡ್ ಇಟಿಎಫ್: 40.76% ರಿಟರ್ನ್
ಐಸಿಐಸಿಐ ಪ್ರುಡೆನ್ಷಿಯಲ್ ಗೋಲ್ಡ್ ಇಟಿಎಫ್: 40.74%
ಟಾಟಾ ಸಿಲ್ವರ್ ಇಟಿಎಫ್: 36.78%
ಆದಿತ್ಯಾ ಬಿರ್ಲಾ ಸನ್ ಲೈಫ್ ಸಿಲ್ವರ್ ಇಟಿಎಫ್: 36.72%
ಎಸ್‌ಬಿಐ ಸಿಲ್ವರ್ ಇಟಿಎಫ್ ಫಂಡ್ ಆಫ್ ಫಂಡ್: 35.45%