ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭದ್ರತಾ ತಪಾಸಣೆ ವೇಳೆ ಭೀಕರ ಎನ್‌ಕೌಂಟರ್‌; ಶಸ್ತ್ರಾಸ್ತ್ರ ಹೊಂದಿದ ನಾಲ್ವರನ್ನು ಹೊಡೆದುರುಳಿಸಿದ ಪೊಲೀಸರು

Crime News: ಮೇಘಾಲಯದಲ್ಲಿ ಭೀಕರ ಎನ್‌ಕೌಂಟರ್‌ ನಡೆದಿದ್ದು, ಭಾನುವಾರ (ಆಗಸ್ಟ್‌ 30) ಪೊಲೀಸರು ಶಸ್ತ್ರಾಸ್ತ್ರ ಹೊಂದಿದ್ದ ನಾಲ್ವರನ್ನು ಹೊಡೆದುರುಳಿಸಿದ್ದಾರೆ. ವಾಹನಗಳನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸುತ್ತಿದ್ದ ವೇಳೆ ನಾಲ್ವರು ಗುಂಡಿನ ದಾಳಿ ನಡೆಸಿದಾಗ ಪೊಲೀಸರು ಪ್ರತಿದಾಳಿ ಮಾಡಿದರು.

ಮೇಘಾಲಯದಲ್ಲಿ ಶಸ್ತ್ರಸಜ್ಜಿತ ನಾಲ್ವರನ್ನು ಹೊಡೆದುರುಳಿಸಿದ ಪೊಲೀಸರು

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Aug 30, 2026 10:08 PM

ಶಿಲ್ಲಾಂಗ್‌, ಆ. 30: ಭೀಕರ ಎನ್‌ಕೌಂಟರ್‌ಗೆ ಮೇಘಾಲಯ ಸಾಕ್ಷಿಯಾಗಿದ್ದು, ಭಾನುವಾರ (ಆಗಸ್ಟ್‌ 30) ಪೊಲೀಸರು ಶಸ್ತ್ರಾಸ್ತ್ರ ಹೊಂದಿದ್ದ ನಾಲ್ವರನ್ನು ಹೊಡೆದುರುಳಿಸಿದ್ದಾರೆ (Meghalaya Encounter). ವಾಹನಗಳನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸುತ್ತಿದ್ದ ವೇಳೆ ನಾಲ್ವರು ಪೊಲೀಸರತ್ತ ಗುಂಡಿನ ದಾಳಿ ನಡೆಸಿದರು. ಹೀಗಾಗಿ ಸ್ವಯಂ ರಕ್ಷಣೆಗಾಗಿ ಪೊಲೀಸರು ಪ್ರತಿದಾಳಿ ನಡೆಸಿದ್ದು, ಈ ವೇಳೆ ನಾಲ್ವರು ಹತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೇಘಾಲಯದ ಈಸ್ಟ್‌ ಗಾರೋ ಹಿಲ್ಸ್‌ ಜಿಲ್ಲೆಯ ಸಾಂಗ್ಸಾಕ್‌ನಲ್ಲಿ ಮುಂಜಾನೆ 4 ಗಂಟೆ ಸುಮಾರಿಗೆ ಈ ಭೀಕರ ಗುಂಡಿನ ಚಕಮಕಿ ನಡೆಸಿದೆ. ಸದ್ಯ ಮೃತರ ಗುರುತು ಪತ್ತೆಯಾಗಿಲ್ಲ. ಇವರ ಅಪರಾಧ ಹಿನ್ನೆಲೆ ಪತ್ತೆಹಚ್ಚಲು ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಉದ್ಯಮಿಯ ಕೊಲೆಯಲ್ಲಿ ಇವರ ಪಾತ್ರವಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆಯೂ ತನಿಖೆ ನಡೆಯಲಿದೆ.

ʼʼಭದ್ರತೆಯ ಕಾರಣಕ್ಕೆ ಪೊಲೀಸರು ನಾಕಾ ಚೆಕ್ಕಿಂಗ್‌ ಕೈಗೊಂಡಿದ್ದರು. ಪೊಲೀಸರು ಪ್ರತಿ ವಾಹನವನ್ನು ನಿಲ್ಲಿಸಿ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಶಸ್ತ್ರ ಸಜ್ಜಿತ ನಾಲ್ವರ ಗುಂಪು ಇದ್ದಕ್ಕಿದ್ದಂತೆ ಪೊಲೀಸರ ವೇಳೆ ಗುಂಡಿನ ದಾಳಿ ನಡೆಸಿತು. ಪೊಲೀಸರು ಪ್ರತಿಯಾಗಿ ನಡೆಸಿದ ದಾಳಿಯಲ್ಲಿ ನಾಲ್ವರು ಹತರಾಗಿದ್ದಾರೆʼʼ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ನಾಲ್ವರು ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಮೃತಪಟ್ಟಿದ್ದಾರೆ. ನಾಲ್ವರು ಕೂಡ ಅಪರಾಧ ಹಿನ್ನೆಲೆಯವರು ಎನ್ನಲಾಗಿದ್ದು, ಅವರ ಕುರಿತಾದ ತನಿಖೆ ಪ್ರಗತಿಯಲ್ಲಿದೆ.

ಮೂವರು ಸಹೋದರರ ಕೈಗೆ ರಾಖಿ ಕಟ್ಟುವ ಮುನ್ನವೇ ಚಿರನಿದ್ರೆಗೆ ಜಾರಿದ ಸಹೋದರಿ

ಪೊಲೀಸರು ಹೇಳಿದ್ದೇನು?

ಈಸ್ಟ್‌ ಗಾರೋ ಹಿಲ್ಸ್‌ನ ಪೊಲೀಸ್ ವರಿಷ್ಠಾಧಿಕಾರಿ ಸ್ವಪ್ನಿಲ್ ಪವಾರ್ ವಸಂತರಾವ್‌ ಮಾಹಿತಿ ನೀಡಿ, ಪೊಲೀಸರು ಮೊದಲು ಮೃತರ ಗುರುತುಗಳನ್ನು ಪತ್ತೆ ಹಚ್ಚಲಿದ್ದಾರೆ. ನಂತರ ಅವರ ಹಿನ್ನೆಲೆಯನ್ನು ಪರಿಶೀಲಿಸಲಾಗುವುದು ಎಂದಿದ್ದಾರೆ. ಎನ್‌ಕೌಂಟರ್‌ಗೆ ಕಾರಣವಾದ ಸಂದರ್ಭಗಳ ಕುರಿತಾಗಿಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ ಎಂದಿದ್ದಾರೆ.

ʼʼಇತ್ತೀಚೆಗೆ ದಾಮ್ರಾಯಲ್ಲಿ ಮೃತಪಟ್ಟ ಉದ್ಯಮಿಯೊಬ್ಬರು ಕೊಲೆಯ ಹಿಂದೆ ಈ ನಾಲ್ವರ ಕೈವಾಡವಿದೆ ಎನ್ನುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ತನಿಖೆ ಬಳಿಕವಷ್ಟೆ ಇದು ದೃಢವಾಗಲಿದೆ. ಮೃತರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಹೆಚ್ಚಿನ ವಿವರಗಳನ್ನು ಸರಿಯಾದ ಪರಿಶೀಲನೆ ಮತ್ತು ದೃಢೀಕರಣದ ನಂತರ ಹಂಚಿಕೊಳ್ಳಲಾಗುವುದು" ಎಂದು ವಿವರಿಸಿದ್ದಾರೆ. ಈ ಗುಂಪು ಅಸ್ಸಾಂನಿಂದ ಮೇಘಾಲಯಕ್ಕೆ ಬಂದಿದ್ದಾ ಅಥವಾ ರಾಜ್ಯ ಗಡಿಯುದ್ದಕ್ಕೂ ಕಾರ್ಯನಿರ್ವಹಿಸುತ್ತಿರುವ ವ್ಯವಸ್ಥಿತ ಜಾಲವೇ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಜಿಮ್‌ನಿಂದ ಹೊರ ಬರುತ್ತಿದ್ದ ಗಾಯಕ ಅಂಕಿತ್ ಬಲ್ಯಾನ್ ಮೇಲೆ ಗುಂಡಿನ ಮಳೆಗೆರೆದು ಹತ್ಯೆ

ಏನಿದು ದಾಮ್ರಾ ಘಟನೆ?

ಸದ್ಯ ಈ ಎನ್‌ಕೌಂಟರ್‌ ಅನ್ನು ದಾಮ್ರಾ ಘಟನೆಯೊಂದಿಗೆ ಜೋಡಿಸಲಾಗುತ್ತಿದೆ. ಆಗಸ್ಟ್ 25ರಂದು ಸುಲಿಗೆಗಾಗಿ ಉದ್ಯಮಿಯೊಬ್ಬರನ್ನು ಅಪಹರಿಸಿ ಕೊಲೆ ಮಾಡಲಾಗಿತ್ತು. ಮೃತ ವ್ಯಕ್ತಿಗಳಿಗೆ ಆ ಪ್ರಕರಣದೊಂದಿಗೆ ಯಾವುದೇ ನೇರ ಅಥವಾ ಪರೋಕ್ಷ ಸಂಬಂಧವಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಎನ್‌ಕೌಂಟರ್ ಸ್ಥಳದಿಂದ ನಾಲ್ವರು ಬಳಸಿದ್ದಾರೆ ಎನ್ನಲಾದ ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದು ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ಇದೆ. ಸದ್ಯ ಪೊಲೀಸರು ಜಿಲ್ಲೆಯಾದ್ಯಂತ ಕಟ್ಟೆಚ್ಚರ ಘೋಷಿಸಿದ್ದು, ಗಡಿ ಭಾಗಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.