ಕಾಕ್ರೋಚ್ ಜನತಾ ಪಕ್ಷದ ಸ್ಥಾಪಕ ಅಭಿಜೀತ್ ದಿಪ್ಕೆಗೆ ಕೊಲೆ ಬೆದರಿಕೆ
ಒಂದು ವಾರಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ಕಾಕ್ರೋಚ್ ಪಕ್ಷದ ಸ್ಥಾಪಕ ಅಭಿಜೀತ್ ಡಿಪ್ಕೆಗೆ ಕೊಲೆ ಬೆದರಿಕೆಗಳು ಬರಲು ಪ್ರಾರಂಭವಾಗಿವೆ. ಅಮೆರಿಕದಲ್ಲೇ ನಿಮ್ಮನ್ನು ಕೊಲೆ ಮಾಡುವುದಾಗಿ ಬೆದರಿಕೆಗಳು ಬರುತ್ತಿವೆ ಎಂದು ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್ ನಲ್ಲಿ ಹೇಳಿಕೊಂಡಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ: ಕಾಕ್ರೋಚ್ ಜನತಾ ಪಕ್ಷದ (Cockroach Janata Party) ಸ್ಥಾಪಕ ಅಭಿಜೀತ್ ಡಿಪ್ಕೆಗೆ ( Abhijeet Dipke) ಕೊಲೆ ಬೆದರಿಕೆಗಳು (death threat) ಬರಲು ಪ್ರಾರಂಭವಾಗಿವೆ. ಕಳೆದ ಒಂದು ವಾರಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಜನಪ್ರಿಯತೆ ಗಳಿಸಿಕೊಂಡಿರುವ ಕಾಕ್ರೋಚ್ ಜನತಾ ಪಕ್ಷವು (CJP) ಬಿಜೆಪಿ (BJP), ಕಾಂಗ್ರೆಸ್ (congress) ಗಿಂತಲೂ ಹೆಚ್ಚಿನ ಅನುಯಾಯಿಗಳನ್ನು ಗಳಿಸಿ ಸದ್ದು ಮಾಡುತ್ತಿದೆ. ಈ ನಡುವೆ ಕಾಕ್ರೋಚ್ ಜನತಾ ಪಕ್ಷದ ಎಕ್ಸ್ ಖಾತೆಯನ್ನು ಭಾರತದಲ್ಲಿ ತಡೆಯಲಾಗಿದ್ದು, ಇದರ ಬೆನ್ನಲ್ಲೇ ಅಭಿಜೀತ್ ಡಿಪ್ಕೆ ಅವರು ತಮಗೆ ಅಮೆರಿಕದಲ್ಲೇ ಕೊಲ್ಲುವುದಾಗಿ ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ಹೇಳಿದ್ದಾರೆ.
ವಿಡಂಬನಾತ್ಮಕ ಪಕ್ಷವಾದ ಸಿಜೆಪಿ ಸಂಸ್ಥಾಪಕ ಅಭಿಜೀತ್ ಡಿಪ್ಕೆ ಅವರು ವಾಟ್ಸಾಪ್‌ನಲ್ಲಿ ಅಪರಿಚಿತ ಸಂಖ್ಯೆಗಳಿಂದ ತನಗೆ ಕೊಲೆ ಬೆದರಿಕೆಗಳು ಬರುತ್ತಿವೆ ಎನ್ನಲಾದ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಸಾಮಾಜಿಕ ಮಾಧ್ಯಮ ಖಾತೆಯಾದ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
ಆಪ್ ಜೊತೆ ನಂಟು: ಕಾಕ್ರೋಚ್ ಜನತಾ ಪಾರ್ಟಿ ಸೇರಿದ್ದ ಮಾಜಿ ನಾಗರಿಕ ಸೇವಕ ರಾಜೀನಾಮೆ
Receiving death threats now. pic.twitter.com/agCy94jXEf
— Abhijeet Dipke (@abhijeet_dipke) May 22, 2026
ಕೊಲೆ ಬೆದರಿಕೆಗಳ ಜೊತೆಗೆ ತಮ್ಮನ್ನು ಬಿಜೆಪಿಗೆ ಸೇರುವಂತೆ ಒತ್ತಾಯಿಸಿದ್ದು, ಅಮೆರಿಕದಲ್ಲೇ ಕೊಲ್ಲುವುದಾಗಿ ಬೆದರಿಕೆ ಕೂಡ ಹಾಕಲಾಗುತ್ತಿದೆ ಎನ್ನುವ ಮತ್ತೊಂದು ಸ್ಕ್ರೀನ್‌ಶಾಟ್ ಅನ್ನು ಕೂಡ ಅವರು ಹಂಚಿಕೊಂಡಿದ್ದಾರೆ. ಬೆದರಿಕೆ ಸಂದೇಶಗಳನ್ನು ಕಳುಹಿಸಿದವರ ಫೋನ್ ನಂಬರ್ ಇದೆ. ಅವರ ವಿಳಾಸವನ್ನು ಹುಡುಕಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ನಿರುದ್ಯೋಗದ ಬಗ್ಗೆ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಸಿಜೆಪಿ ಖಾತೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ತೆರೆಯಲಾಗಿತ್ತು. ಇದಾದ ವಾರದೊಳಗೆ ಅದು ತನ್ನ ಅನುಯಾಯಿಗಳ ಸಂಖ್ಯೆಯನ್ನು ತೀವ್ರವಾಗಿ ಹೆಚ್ಚಿಸಿಕೊಂಡಿದೆ. ಇದು ವಿಶ್ವದ ಅತೀ ದೊಡ್ಡ ಪಕ್ಷವಾದ ಬಿಜೆಪಿ ಅನುಯಾಯಿಗಳ ಸಂಖ್ಯೆಯನ್ನು ಮೀರಿಸಿದೆ. ಕಾನೂನು ಕಾರಣದಿಂದಾಗಿ ಸಿಜೆಪಿಯ ಎಕ್ಸ್ ಖಾತೆಯನ್ನು ಭಾರತದಲ್ಲಿ ತಡೆ ಹಿಡಿಯಲಾಗಿತ್ತು. ಈ ಕುರಿತಾದ ಸ್ಕ್ರೀನ್ ಶಾಟ್ ಅನ್ನು ಅವರು ಹಂಚಿಕೊಂಡು ಇದನ್ನು ಮೊದಲೇ ನಿರೀಕ್ಷೆ ಮಾಡಿದ್ದೆ ಎಂದು ಹೇಳಿದ್ದರು.
CJP’s backup Instagram account also taken down. https://t.co/j3v97OXAhQ
— Abhijeet Dipke (@abhijeet_dipke) May 22, 2026
ಸಿಜೆಪಿ ಖಾತೆ ಸ್ಥಗಿತದ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಿದ ಕಾಂಗ್ರೆಸ್ ಸಂಸದ ಶಶಿ ತರೂರ್, ಪಕ್ಷದ ಖಾತೆಯನ್ನು ನಿಗ್ರಹಿಸುವುದು ಅಪಾಯಕಾರಿ. ಇದು ತೀವ್ರ ಅವಿವೇಕದ ಕೃತ್ಯ. ಖಾತೆಯನ್ನು ಕಾರ್ಯನಿರ್ವಹಿಸಲು ಬಿಡಬೇಕು. ಯುವಕರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಒಂದು ಮಾರ್ಗವಿರಬೇಕು. ಅದಕ್ಕಾಗಿ ಸಿಜೆಪಿ ಕೆಲಸ ಮಾಡಲಿ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ, ಹಾಸ್ಯ, ವಿಡಂಬನೆ ಮತ್ತು ಹತಾಶೆ ವ್ಯಕ್ತಪಡಿಸಲು ಮಾರ್ಗ ಬೇಕಾಗುತ್ತದೆ ಎಂದು ಅವರು ತಿಳಿಸಿದರು.
Cockroach Janta Party: ದೇಶದ ಗಡಿ ದಾಟಿದ ಜಿರಳೆ; ಪಾಕಿಸ್ತಾನಕ್ಕೂ ತಲುಪಿದ ಭಾರತದ ಕಾಕ್ರೋಚ್ ಚಳುವಳಿ
ಶಶಿ ತರೂರ್ ಮಾತ್ರವಲ್ಲ ಅನೇಕ ನಾಯಕರು ಸಿಜೆಪಿಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ನಾಯಕರಾದ ಮಹುವಾ ಮೊಯಿತ್ರಾ, ಕೀರ್ತಿ ಆಜಾದ್ ಅವರು ಬಹಿರಂಗವಾಗಿಯೇ ಕಾಕ್ರೋಚ್ ಜನತಾ ಪಕ್ಷಕ್ಕೆ ಸೇರಲು ಉತ್ಸಾಹಿತರಾಗಿರುವುದಾಗಿ ಹೇಳಿದರು. ಇವರೊಂದಿಗೆ ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್, ನಟರಾದ ಕೊಂಕಣ ಸೇನ್ ಶರ್ಮಾ ಮತ್ತು ಇಶಾ ಗುಪ್ತಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕೂಡ ಸಿಜೆಪಿಯ ಇನ್ ಸ್ಟಾಗ್ರಾಮ್ ಖಾತೆಯನ್ನು ಅನುಸರಿಸಲು ಪ್ರಾರಂಭಿಸಿದ್ದಾರೆ.