ಸೌದಿ ಅರೇಬಿಯಾದಲ್ಲಿ ಶವವಾಗಿ ಪತ್ತೆಯಾದ ಲಕ್ನೋ ಮಹಿಳೆ; ವರದಕ್ಷಿಣೆ ಕಿರುಕುಳ, ಕೊಲೆ ಆರೋಪ
ಸೌದಿ ಅರೇಬಿಯಾದಲ್ಲಿ ಲಕ್ನೋದ ಮಹಿಳೆಯೊಬ್ಬರು ಶವವಾಗಿ ಪತ್ತೆಯಾದ ಘಟನೆ ನಡೆದಿದೆ. ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಮಹಿಳೆ ಮದುವೆಯಾಗಿ ಒಂದು ವರ್ಷವಾಗುವ ಮೊದಲೇ ಸಾವನ್ನಪ್ಪಿದ್ದಾರೆ. ವರದಕ್ಷಿಣೆ ಕಿರುಕುಳ ನೀಡಿ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಅವರ ಕುಟುಂಬ ಆರೋಪಿಸಿದೆ.
ಸಂಗ್ರಹ ಚಿತ್ರ -
ಲಕ್ನೋ: ಸೌದಿ ಅರೇಬಿಯಾದಲ್ಲಿ (Saudi Arabia) ಲಕ್ನೋದ (Lucknow) ಮಹಿಳೆಯೊಬ್ಬರು ಶವವಾಗಿ ಪತ್ತೆಯಾದ ಘಟನೆ ನಡೆದಿದೆ. ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಮಹಿಳೆ ಮದುವೆ ಬಳಿಕ ಗಂಡನೊಂದಿಗೆ ಸೌದಿಗೆ ತೆರಳಿದ್ದರು. ಇದಾಗಿ ವಾರಗಳ ಬಳಿಕ ಅಲ್ಲಿ ಶವವಾಗಿ (woman found dead) ಪತ್ತೆಯಾಗಿದ್ದಾಳೆ. ಆಕೆಗೆ ವರದಕ್ಷಿಣೆ ಕಿರುಕುಳ (Dowry harassment) ನೀಡಲಾಗಿದೆ, ಆಕೆಯ ಮೇಲೆ ದೌರ್ಜನ್ಯ ನಡೆಸಲಾಗಿದೆ ಎಂದು ಆರೋಪಿಸಿರುವ ಆಕೆಯ ಕುಟುಂಬ ಮಹಿಳೆಯನ್ನು ಆಕೆಯ ಪತಿಯೇ ಕೊಲೆ (murder case) ಮಾಡಿದ್ದಾನೆ ಎಂದು ಆರೋಪಿಸಿದ್ದು, ತನಿಖೆಗೆ ಆಗ್ರಹಿಸಿದೆ.
ಕಂಪ್ಯೂಟರ್ ವಿಜ್ಞಾನದಲ್ಲಿ ಬಿಟೆಕ್ ಪದವೀಧರೆ ಮತ್ತು ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಐಮಾನ್ ಖಾನ್ ಮೂಲತಃ ಲಕ್ನೋದವರಾಗಿದ್ದು, ಇತ್ತೀಚೆಗೆ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಇದೊಂದು ಪೂರ್ವಯೋಜಿತ ಕೃತ್ಯ, ವರದಕ್ಷಿಣೆ ಕಿರುಕುಳ, ದೀರ್ಘಕಾಲದ ದೈಹಿಕ ಮತ್ತು ಮಾನಸಿಕ ಕಿರುಕುಳದಿಂದ ಆಕೆ ಸಾವನ್ನಪ್ಪಿದ್ದಾರೆ ಎಂದು ಆಕೆಯ ಕುಟುಂಬ ಆರೋಪಿಸಿದೆ.
Iran Protests: 2 ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ; ಅಮೆರಿಕದಿಂದ ಖಮೇನಿಗೆ ಎಚ್ಚರಿಕೆ
ಐಮಾನ್ ಖಾನ್ ಅವರ ಸಾವಿಗೆ ಸಂಬಂಧಿಸಿದಂತೆ ಅಳಿಯ ಮೊಹಮ್ಮದ್ ಆಮಿರ್ ಖಾನ್ ಮತ್ತು ಆತನ ಕುಟುಂಬದ ಇತರ ಸದಸ್ಯರ ವಿರುದ್ಧ ಐಮಾನ್ ಖಾನ್ ಅವರ ತಂದೆ ಶೇರ್ ಅಲಿ ಖಾನ್ ಅವರು ಲಕ್ನೋದ ಚಿನ್ಹಾಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಳೆದ ಏಪ್ರಿಲ್ ನಲ್ಲಿ ಐಮನ್ ಖಾನ್ ಮತ್ತು ಮೊಹಮ್ಮದ್ ಆಮಿರ್ ಖಾನ್ ವಿವಾಹವಾಗಿದ್ದು, ಮದುವೆಯಾದ ಕೆಲವೇ ದಿನಗಳಲ್ಲಿ ಆಮಿರ್ ಖಾನ್ ಇನ್ನೋವಾ ಕಾರಿನ ಬೇಡಿಕೆ ಇಟ್ಟಿದ್ದರು. ಕಿಯಾ ಸೆಲ್ಟೋಸ್ ಕಾರನ್ನು ತನ್ನ ಹೆಸರಿಗೆ ನೋಂದಾಯಿಸದ ಕಾರಣ ಕೋಪ ವ್ಯಕ್ತಪಡಿಸಿ ಐಮಾನ್ ಅವರ ಫೋನ್ ಮುರಿದು ನಿಂದಿಸಿದ್ದನು. ಬಳಿಕ ಅವರಿಬ್ಬರು ಸೌದಿ ಅರೇಬಿಯಾಕ್ಕೆ ತೆರಳಿದ್ದರು. ಅಲ್ಲಿಗೆ ಹೋದ ಮೇಲೂ ಆಕೆಯ ಮೇಲೆ ಪತಿ, ಆತನ ಸಹೋದರ ಮತ್ತು ಅಳಿಯಂದಿರು ನಿರಂತರ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ. ವರದಕ್ಷಿಣೆಯಾಗಿ ಪೋಷಕರ ಮನೆಯಿಂದ 20 ಲಕ್ಷ ರೂ. ತರುವಂತೆ ಪದೇ ಪದೇ ಒತ್ತಡ ಹೇರಲಾಗಿದೆ. ಈ ಬೇಡಿಕೆ ಈಡೇರಿಸದಿದ್ದರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕುತ್ತಿದ್ದರು ಎಂದು ಶೇರ್ ಅಲಿ ಖಾನ್ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಅಕ್ಟೋಬರ್ ನಲ್ಲಿ ಭಾರತಕ್ಕೆ ಮರಳಿದ್ದ ಐಮಾನ್ ಈ ಬಗ್ಗೆ ಕುಟುಂಬಕ್ಕೆ ತಿಳಿಸಿದ್ದು, ತಾವು ಹಣದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು. ಅವರು ಕೂಡ ಮಗಳಿಗೆ ಕಿರುಕುಳ ನೀಡುವುದನ್ನು ನಿಲ್ಲಿಸುವುದಾಗಿ ಭರವಸೆ ನೀಡಿದ್ದರು. ಇದರ ಆಧಾರದ ಮೇಲೆ ಐಮಾನ್ ಜೆಡ್ಡಾಗೆ ಮರಳಿದ್ದು, ಅಲ್ಲಿ ಮತ್ತೆ ಆಕೆಗೆ ಕಿರುಕುಳ ನೀಡಲಾಯಿತು.
ಆಹಾರ ನೀಡದೆ ಮನೆಯಿಂದ ಹೊರಹಾಕಲಾಗಿದೆ. ಭಾರತಕ್ಕೆ ಮರಳಿ ಬರದಂತೆ ತಡೆಯಲಾಗಿದೆ. ಡಿಸೆಂಬರ್ 17ರಂದು ಮಗಳೊಂದಿಗೆ ವಾಟ್ಸಾಪ್ ಸಂಭಾಷಣೆಯ ಬಳಿಕ ಆಕೆಯಿಂದ ಯಾವುದೇ ಸಂದೇಶ ಬರಲಿಲ್ಲ. ಹೀಗಾಗಿ ತಾವು ಸೌದಿಗೆ ಹೋಗಿದ್ದು, ಅಲ್ಲಿ ನೆರೆಹೊರೆಯವರ ಬಳಿ ವಿಚಾರಿಸಿದಾಗ ಐಮನ್ ಮೃತಪಟ್ಟಿರುವುದು ತಿಳಿದು ಬಂದಿತ್ತು. ಐಮನ್ ಗರ್ಭಿಣಿಯಾಗಿದ್ದು, ಆಕೆಯ ಸಾವನ್ನು ಆತ್ಮಹತ್ಯೆಯಂತೆ ಬಿಂಬಿಸಲು ಪ್ರಯತ್ನಿಸಲಾಗಿದೆ ಎಂದು ಶೇರ್ ಖಾನ್ ತಿಳಿಸಿದ್ದಾರೆ.
ಚುನಾವಣಾ ಭರವಸೆ ಈಡೇರಿಸಲು ಒಂದೇ ವಾರದಲ್ಲಿ 500 ನಾಯಿಗಳ ಹತ್ಯೆ! ಮೂಕ ಪ್ರಾಣಿ ಮೇಲೆ ಏನಿದು ದೌರ್ಜನ್ಯ
ಆಕೆಯ ಶವವನ್ನು ಸೌದಿ ಅರೇಬಿಯಾದಿಂದ ಲಕ್ನೋಗೆ ತರಲಾಗುತ್ತಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಘಟನೆಯಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
ಈ ಕುರಿತು ತನಿಖೆ ನಡೆಸುವುದಾಗಿ ಚಿನ್ಹಾತ್ ಪೊಲೀಸ್ ಠಾಣೆಯ ಉಸ್ತುವಾರಿ ದಿನೇಶ್ ಮಿಶ್ರಾ ತಿಳಿಸಿದ್ದಾರೆ.