ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸ್ಕೂಟರ್ ಸ್ಕಿಡ್ ಆಗಿ ಬಿದ್ದ ವೃದ್ಧನ ತಲೆಗೆ ಬಸ್ ಡಿಕ್ಕಿ; ಸ್ಥಳದಲ್ಲೇ ಸಾವು!

ನಿಪ್ಪಾಣಿ–ಮುಧೋಳ ರಾಜ್ಯ ಹೆದ್ದಾರಿಯಲ್ಲಿ ರೈತರ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಾಹನಗಳು ಪರ್ಯಾಯ ಮಾರ್ಗವಾಗಿ ಸಂಚರಿಸುತ್ತಿದ್ದ ವೇಳೆ, ಸ್ಕೂಟರ್ ಸ್ಕಿಡ್ ಆಗಿ ರಸ್ತೆ ಮೇಲೆ ಬಿದ್ದ ವೃದ್ಧನ ತಲೆಗೆ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಗುರುವಾರ ಮೂಡಲಗಿ ತಾಲೂಕಿನ ಶಿವಾಪೂರ ಗ್ರಾಮದ ಬಳಿ ನಡೆದಿದೆ.

ಸ್ಕೂಟರ್ ಸ್ಕಿಡ್ ಆಗಿ ಬಿದ್ದ ವೃದ್ಧನ ತಲೆಗೆ ಬಸ್ ಡಿಕ್ಕಿ

-

Profile
Ashok Nayak Oct 29, 2026 2:12 PM

ಮೂಡಲಗಿ: ನಿಪ್ಪಾಣಿ–ಮುಧೋಳ ರಾಜ್ಯ ಹೆದ್ದಾರಿಯಲ್ಲಿ ರೈತರ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಾಹನಗಳು ಪರ್ಯಾಯ ಮಾರ್ಗವಾಗಿ ಸಂಚರಿಸುತ್ತಿದ್ದ ವೇಳೆ, ಸ್ಕೂಟರ್ ಸ್ಕಿಡ್ ಆಗಿ ರಸ್ತೆ ಮೇಲೆ ಬಿದ್ದ ವೃದ್ಧನ ತಲೆಗೆ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಗುರುವಾರ ಮೂಡಲಗಿ ತಾಲೂಕಿನ ಶಿವಾಪೂರ ಗ್ರಾಮದ ಬಳಿ ನಡೆದಿದೆ.

ತಾಲೂಕಿನ ಹಳ್ಳೂರ ಗ್ರಾಮದ ನಿವಾಸಿ ಕೆಂಪಣ್ಣ ಕೌಜಲಗಿ (80) ಮೃತಪಟ್ಟವರು. ಕೆಂಪಣ್ಣ ಕೌಜಲಗಿ ಅವರು ಮೂಡಲಗಿ ಪಟ್ಟಣದಿಂದ ಶಿವಾಪೂರ ಮಾರ್ಗವಾಗಿ ಹಳ್ಳೂರ ಗ್ರಾಮಕ್ಕೆ ಸ್ಕೂಟರ್ ಮೇಲೆ ತೆರಳುತ್ತಿದ್ದರು. ಈ ವೇಳೆ ಶಿವಾಪೂರ ಗ್ರಾಮದ ಬಳಿ ಸ್ಕೂಟರ್ ಸ್ಕಿಡ್ ಆಗಿ ರಸ್ತೆ ಮೇಲೆ ಬಿದ್ದಿದ್ದಾರೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಹಿಂಬದಿಯಿಂದ ಆಗಮಿಸಿದ ಗೋಕಾಕ–ಜಮಖಂಡಿ ಮಾರ್ಗದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ(NWKRTC)ಯ ಬಸ್ ಅವರ ತಲೆಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: Mudalgi News: ನಮ್ಮ ಪರಿಸರ ರಕ್ಷಿಸುವ, ಸಂರಕ್ಷಿಸುವ ಕರ್ತವ್ಯ ಪ್ರತಿಯೊಬ್ಬರದ್ದು

ನಿಪ್ಪಾಣಿ–ಮುಧೋಳ ರಾಜ್ಯ ಹೆದ್ದಾರಿಯಲ್ಲಿ ರೈತರ ಪ್ರತಿಭಟನೆ ನಡೆಯುತ್ತಿರುವುದರಿಂದ, ಮಹಾ ಲಿಂಗಪುರದ ಕಡೆಗೆ ಸಂಚರಿಸುವ ವಾಹನಗಳು ಪರ್ಯಾಯ ಮಾರ್ಗವಾಗಿ ಶಿವಾಪೂರ ಗ್ರಾಮದ ಮೂಲಕ ಸಂಚರಿಸುತ್ತಿದ್ದವು ಎನ್ನಲಾಗಿದೆ. ಈ ಮಾರ್ಗದಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತ ಕೆಂಪಣ್ಣ ಕೌಜಲಗಿ ಅವರು ಕಳೆದ ಸುಮಾರು 20 ವರ್ಷಗಳಿಂದ ತಮ್ಮ ಜೀವನೋಪಾಯ ಕ್ಕಾಗಿ ಹಳ್ಳೂರ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಯಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು ಎನ್ನಲಾಗಿದೆ. ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಹಳ್ಳೂರ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ.

ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಬದಲಿ ಮಾರ್ಗಗಳಲ್ಲಿ ಸಂಚರಿಸುವ ವಾಹನಗಳ ಚಾಲಕರು ಎಚ್ಚರಿಕೆಯಿಂದ ವಾಹನ ಚಲಾಯಿಸುವ ಅಗತ್ಯವನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.