ಕ್ಯಾನ್ಸರ್ ಔಷಧಗಳ ಬೆಲೆಯಲ್ಲಿ ಶೇಕಡಾ 90ರಷ್ಟು ಇಳಿಕೆ: ಕೇಂದ್ರದಿಂದ ಮಹತ್ವದ ಕ್ರಮ
Cancer Drug Prices Slashed: ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಕವು ಕ್ಯಾನ್ಸರ್ ಔಷಧಗಳ 543 ಬ್ರ್ಯಾಂಡ್ಗಳ ಗರಿಷ್ಠ ಚಿಲ್ಲರೆ ಬೆಲೆಯನ್ನು ಪರಿಷ್ಕರಿಸಿದೆ. ಅವುಗಳಲ್ಲಿ ಕೆಲವನ್ನು ಶೇ. 90ಕ್ಕಿಂತ ಹೆಚ್ಚು ಕಡಿತಗೊಳಿಸಿದೆ. ಕೆಲವು ಜೆನೆರಿಕ್ ಮತ್ತು ಬಯೋಸಿಮಿಲರ್ ಬ್ರ್ಯಾಂಡ್ಗಳು ತೀವ್ರವಾಗಿ ಅಗ್ಗವಾಗಿವೆ.
ಸಾಂದರ್ಭಿಕ ಚಿತ್ರ -
ಚೆನ್ನೈ, ಅ. 29: ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಕವು 543 ಕ್ಯಾನ್ಸರ್ ಔಷಧ ಬ್ರ್ಯಾಂಡ್ಗಳ ಗರಿಷ್ಠ ಚಿಲ್ಲರೆ ಬೆಲೆಗಳನ್ನು ಪರಿಷ್ಕರಿಸಿದೆ (Cancer Drug Prices). ಅವುಗಳಲ್ಲಿ ಕೆಲವನ್ನು ಶೇ. 90ಕ್ಕಿಂತ ಹೆಚ್ಚು ಕಡಿತಗೊಳಿಸಿದೆ. ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ, ಕೆಲವು ಜೆನೆರಿಕ್ ಮತ್ತು ಬಯೋಸಿಮಿಲರ್ ಬ್ರ್ಯಾಂಡ್ಗಳು ತೀವ್ರವಾಗಿ ಅಗ್ಗವಾಗಿವೆ. ಆದರೆ ಎಂಎಸ್ಡಿ ಫಾರ್ಮಾದ ಬ್ಲಾಕ್ಬಸ್ಟರ್ ಇಮ್ಯುನೊಥೆರಪಿ ಕೀಟ್ರುಡಾದಂತಹ ದುಬಾರಿ ಕ್ಯಾನ್ಸರ್ ಔಷದಗಳು ಬೆಲೆ ಮಾತ್ರ ಬದಲಾಗದೆ ಉಳಿದಿವೆ.
ಕೆಲವು ಸ್ತನ ಕ್ಯಾನ್ಸರ್ಗಳಿಗೆ ಚಿಕಿತ್ಸೆ ನೀಡಲು ಬಳಸುವ ಪಾಲ್ಬೋಸಿಬ್ಲಿಬ್ನ ಬೆಲೆಯನ್ನು 40,421 ರೂ.ಗಳಿಂದ 2,270 ರೂ.ಗಳಿಗೆ ಇಳಿಸಲಾಗಿದೆ. ಸಮರ್ಥ್ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ತಯಾರಿಸುವ ಕಿಮೊಥೆರಪಿ ಔಷಧ ಥಿಯೋಟೆಪಾ ಬೆಲೆಯನ್ನು 100 ಮಿಗ್ರಾಂ ಬಾಟಲಿಗೆ 80,072 ರೂ.ಗಳಿಂದ 7,150 ರೂ.ಗಳಿಗೆ ಕಡಿತಗೊಳಿಸಲಾಗಿದೆ. ವಿವಿಧ ಕ್ಯಾನ್ಸರ್ಗಳ ಚಿಕಿತ್ಸೆಯಲ್ಲಿ ಬಳಸಲಾಗುವ ದಸಾಟಿನಿಬ್, ಲೆನ್ವಾಟಿನಿಬ್, ಅಬಿರಾಟೆರೋನ್ ಮತ್ತು ಓಲಾಪರಿಬ್ಗಳ ದರವನ್ನೂ ಕಡಿಮೆ ಮಾಡಲಾಗಿದೆ.
ಆದರೆ ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ರಿಬೋಸಿಕ್ಲಿಬ್ ಔಷಧದ ಬೆಲೆ 24,435 ರೂ.ಯಲ್ಲೇ ಮುಂದುವರಿಯಲಿದೆ. ಟ್ಯಾಗ್ರಿಸ್ಸೊ, ಟೆಸೆಂಟ್ರಿಕ್, ಡಾರ್ಜಲೆಕ್ಸ್ ಮತ್ತು ಇಂಫಿಂಜಿ ಸೇರಿ ಇತರ ಮೂಲ ಔಷಧ ತಯಾರಿಕಾ ಕಂಪನಿಗಳ ಬ್ರ್ಯಾಂಡ್ಗಳ ಬೆಲೆಯಲ್ಲಿಯೂ ಯಾವುದೇ ಬದಲಾವಣೆಯಾಗಿಲ್ಲ.
ಜ್ವರದಲ್ಲಿ ಆಂಟಿಬಯೋಟಿಕ್ ಅಗತ್ಯವೇ? ಹೆಚ್ಚುತ್ತಿರುವ ಸ್ವಯಂ ಔಷಧ ಸೇವನೆಯ ಅಪಾಯ
137 ನಿಗದಿತವಲ್ಲದ ಕ್ಯಾನ್ಸರ್ ವಿರೋಧಿ ಔಷಧಗಳ ಗರಿಷ್ಠ ಚಿಲ್ಲರೆ ಮಾರಾಟ ಬೆಲೆಯ (ಎಂಆರ್ಪಿ) ಮೇಲೆ ವ್ಯಾಪಾರಿಗಳ ಲಾಭದ ಮಿತಿಯನ್ನು ಶೇ. 30ಕ್ಕೆ ನಿಗದಿಪಡಿಸುವ ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರದ ನಿರ್ಧಾರದ ಬಳಿಕ, ಪರಿಷ್ಕೃತ ಬೆಲೆಗಳು ನವೆಂಬರ್ 9ರಿಂದ ಜಾರಿಗೆ ಬರಲಿವೆ. ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಔಷಧಗಳ ಹೆಚ್ಚಿನ ಬೆಲೆ ಹಾಗೂ ಪೂರೈಕೆ ಸರಪಳಿಯಲ್ಲಿ ವಿಧಿಸಲಾಗುತ್ತಿರುವ ಲಾಭದ ಪ್ರಮಾಣದ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ ಎತ್ತಿದ ಹಿನ್ನೆಲೆಯಲ್ಲಿ ಔಷಧಗಳ ಬೆಲೆಯನ್ನು ಕಡಿತಗೊಳಿಸಲಾಗಿದೆ.
ಪರಿಷ್ಕೃತ ಔಷಧಗಳ ಬೆಲೆಪಟ್ಟಿಯು ಅಕ್ಟೋಬರ್ 27ರವರೆಗೆ ಕಂಪನಿಗಳು ಸಲ್ಲಿಸಿರುವ ಮಾಹಿತಿಯನ್ನು ಆಧರಿಸಿದೆ. ಔಷಧ ತಯಾರಕರು ನಿಗದಿತವಲ್ಲದ ಕ್ಯಾನ್ಸರ್ ವಿರೋಧಿ ಔಷಧಗಳ ಪರಿಷ್ಕೃತ ಬೆಲೆಗಳನ್ನು ಸಲ್ಲಿಸಿದಂತೆ ಈ ಪಟ್ಟಿಯನ್ನು ನವೀಕರಿಸಲಾಗುತ್ತದೆ.
ದುಬಾರಿ ಔಷಧಗಳ ಬೆಲೆ ಬದಲಾಗಿಲ್ಲ
ಬೆಲೆ ಕಡಿತಗೊಳಿಸಿದ ನಂತರವೂ ದುಬಾರಿ ಔಷಧಗಳು ದುಬಾರಿಯಾಗಿಯೇ ಉಳಿದಿವೆ. ಭಾರತದಲ್ಲಿ ಅನೇಕ ಕ್ಯಾನ್ಸರ್ ರೋಗಿಗಳಿಗೆ ಇಂದಿಗೂ ಈ ಔಷಧಗಳನ್ನು ಖರೀದಿಸುವುದು ಸಾಧ್ಯವಾಗುತ್ತಿಲ್ಲ ಎಂದು ಆಲ್ ಇಂಡಿಯಾ ಡ್ರಗ್ ಆ್ಯಕ್ಷನ್ ನೆಟ್ವರ್ಕ್ನ ಸಹ ಸಂಚಾಲಕ ಎಸ್. ಶ್ರೀನಿವಾಸನ್ ಹೇಳಿದರು.
ಪ್ರಸ್ತುತ, ಔಷಧಗಳ ಬೆಲೆಯನ್ನು ಡ್ರಗ್ಸ್ (ಪ್ರೈಸಸ್ ಕಂಟ್ರೋಲ್) ಆರ್ಡರ್ 2013 (DCPO 2013) ಆಧರಿಸಿ ನಿಗದಿಪಡಿಸಲಾಗುತ್ತಿದೆ. ಈ ನಿಯಮದಡಿ ಸರಳ ಸರಾಸರಿ ಸೂತ್ರವನ್ನು ಬಳಸಿಕೊಂಡು ಗರಿಷ್ಠ ಬೆಲೆಯನ್ನು ಲೆಕ್ಕ ಹಾಕಲಾಗುತ್ತದೆ.
ವ್ಯಾಪಾರಿಗಳ ಲಾಭದ ಮಿತಿಯನ್ನು ಮಾತ್ರ ಕಡಿತಗೊಳಿಸುವುದರಿಂದ ಪ್ರಯೋಜನವಾಗುವುದಿಲ್ಲ ಎಂದು ಶ್ರೀನಿವಾಸನ್ ಅಭಿಪ್ರಾಯಪಟ್ಟರು. ಬದಲಾಗಿ, DCPO 1995ರ ಅಡಿಯಲ್ಲಿ ಇದ್ದ ವೆಚ್ಚ ಆಧಾರಿತ ಸೂತ್ರವನ್ನು ಬಳಸಿಕೊಂಡು ಔಷಧಗಳ ಬೆಲೆಯನ್ನು ಕಡಿತಗೊಳಿಸಬೇಕು ಎಂದು ಅವರು ಸಲಹೆ ನೀಡಿದರು.