ಛೇ ಇದೆಂತಾ ದುರ್ವಿಧಿ; ರಾಖಿ ದಿನದಂದೇ ಅಪಘಾತದಲ್ಲಿ ತಂಗಿಯೊಟ್ಟಿಗೆ ಮೃತಪಟ್ಟ ಸಹೋದರರು
UP Crime: ಸಹೋದರನೊಂದಿಗೆ ರಕ್ಷಾ ಬಂಧನ ಆಚರಿಸುವ ಸಲುವಾಗಿ ಇಬ್ಬರು ಸಹೋದರಿಯರು ಇನ್ನೋರ್ವ ಸಹೋದರನೊಂದಿಗೆ ತುಂಬಾ ದೂರದಿಂದ ಬಂದಿದ್ದರು. ಆದರೆ ರಸ್ತೆ ಅಪಘಾತವೊಂದು ಅವರ ರಕ್ಷಾ ಬಂಧನದ ದಿನವನ್ನು ಜೀವನದ ಕೊನೆಯ ದಿನವಾಗಿ ಮಾಡಿತ್ತು. ಇಬ್ಬರು ಸಹೋದರರೊಂದಿಗೆ ಓರ್ವ ಸಹೋದರಿ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ ಫರಿದಾಬಾದ್‌ನಲ್ಲಿ ನಡೆದಿದೆ.
ಸಂಗ್ರಹ ಚಿತ್ರ -
ಉತ್ತರಪ್ರದೇಶ: ಇಬ್ಬರು ಸಹೋದರಿಯರು ಸಹೋದರನೊಂದಿಗೆ ಇನ್ನೋರ್ವ ಸಹೋದರನಿಗೆ ರಕ್ಷೆ ಕಟ್ಟಲು ಬಂದಿದ್ದರು. ರಕ್ಷಾ ಬಂಧನವನ್ನು ಆಚರಿಸಿ ಮರಳುತ್ತಿದ್ದಾಗ ಭೀಕರ ರಸ್ತೆ ಅಪಘಾತದಲ್ಲಿ (road accident) ಇಬ್ಬರು ಸಹೋದರರು ಮತ್ತು ಓರ್ವ ಸಹೋದರಿ ಸಾವನ್ನಪ್ಪಿದ್ದಾರೆ. ಇನ್ನೋರ್ವ ಸಹೋದರಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಉತ್ತರಪ್ರದೇಶದ (UP Crime) ಫರಿದಾಬಾದ್‌ನ (Faridabad accident) ಬಸ್ ನಿಲ್ದಾಣದ ಬಳಿ ಶನಿವಾರ ಬೆಳಗ್ಗೆ ನಡೆದಿದೆ. ಮೃತರನ್ನು ಅಖಿಲೇಶ್, ಅವಧೇಶ್, ಸರೋಜ್ ಎಂದು ಗುರುತಿಸಲಾಗಿದ್ದು, ರಾಜಕುಮಾರಿ ಎಂಬಾಕೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಫರಿದಾಬಾದ್‌ನಲ್ಲಿ ಅಖಿಲೇಶ್ ಜೊತೆ ರಕ್ಷಾ ಬಂಧನ ದಿನವನ್ನು ಆಚರಿಸುವ ಸಲುವಾಗಿ , ಅವಧೇಶ್, ಸರೋಜ್ ಮತ್ತು ರಾಜಕುಮಾರಿ ಬಂದಿದ್ದರು. ರಕ್ಷಾ ಬಂಧನ ಆಚರಿಸಿದ ಮರು ದಿನ ಬೆಳಗ್ಗೆ ಅವರು ಮರಳಿ ಹೊರಟಿದ್ದು, ಅವರನ್ನು ಬಸ್ ನಿಲ್ದಾಣಕ್ಕೆ ಬಿಡಲೆಂದು ಅಖಿಲೇಶ್ ಕೂಡ ಬಂದಿದ್ದರು. ಫರಿದಾಬಾದ್‌ನ ಬಸ್ ನಿಲ್ದಾಣದ ಬಳಿ ವೇಗವಾಗಿ ಬಂದ ಟೊಯೋಟಾ ಫಾರ್ಚೂನರ್ ಕಾರು ಅವರಿಗೆ ಡಿಕ್ಕಿಯಾಗಿದ್ದು ಇದರಿಂದ ಅಖಿಲೇಶ್, ಅವಧೇಶ್, ಸರೋಜ್ ಮೂವರು ಸಾವನ್ನಪ್ಪಿದ್ದಾರೆ.
ಗರ್ಭಿಣಿಯಾಗಿದ್ದ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಅಪಹರಿಸಿ ಬೆಂಕಿ ಹಚ್ಚಿ ಕೊಂದ ಪಾಪಿಗಳು!
ಅಖಿಲೇಶ್ ಮನೆಯಲ್ಲಿ ಶುಕ್ರವಾರ ರಾತ್ರಿ ರಕ್ಷಾ ಬಂಧನವನ್ನು ಆಚರಿಸಿಕೊಂಡಿದ್ದರು. ಅದು ಅವರ ಕೊನೆಯ ರಾತ್ರಿಯಾಗುತ್ತೆ ಎಂದು ಅವರು ಊಹಿಸಿರಲಿಲ್ಲ. ರಾತ್ರಿಯನ್ನು ಒಟ್ಟಿಗೆ ಕಳೆದ ಅವರೆಲ್ಲರೂ ಮರುದಿನ ಮರಳಿ ಮನೆಗೆ ತೆರಳಲು ಬಸ್ ನಿಲ್ದಾಣಕ್ಕೆ ಬಂದಿದ್ದರು. ಅವರನ್ನು ಬೀಳ್ಕೊಡಲು ಅಖಿಲೇಶ್ ಕೂಡ ಬಸ್ ನಿಲ್ದಾಣಕ್ಕೆ ಬಂದಿದ್ದರು. ಸುಮಾರು 10 ರಿಂದ 15 ನಿಮಿಷಗಳ ಕಾಲ ಬಸ್ ಗಾಗಿ ಕಾಯುತ್ತಿದ್ದ ಅವರಿಗೆ ವೇಗವಾಗಿ ಬಂದ ಫಾರ್ಚೂನರ್ ಕಾರೊಂದು ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆ ಎಷ್ಟು ಗಂಭೀರವಾಗಿತ್ತೆಂದರೆ ಅಖಿಲೇಶ್ ಮತ್ತು ಅವಧೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸರೋಜ್ ಮತ್ತು ರಾಜಕುಮಾರಿ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದ್ದು, ಶನಿವಾರ ರಾತ್ರಿ ಸರೋಜ್ ಕೂಡ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ರಾಜಕುಮಾರಿ ಅವರನ್ನು ಫರಿದಾಬಾದ್‌ನ ಎಸ್‌ಎಸ್‌ಬಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮೂಲತಃ ಉತ್ತರ ಪ್ರದೇಶದ ಅಮೇಥಿಯ ಖರಕ್‌ಪುರದವರಾದ ಸಹೋದರ ಸಹೋದರಿಯರಲ್ಲಿ ಅವಧೇಶ್, ಸರೋಜ್ ಮತ್ತು ರಾಜಕುಮಾರಿ ಅವರು ಪಲ್ವಾಲ್‌ನ ಕುಲೇನಾದಲ್ಲಿ ವಾಸವಾಗಿದ್ದರು. ಅಪಘಾತದ ಬಳಿಕ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಆತನ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ ದಾಖಲಿಸಲಾಗಿದೆ.
ಅವಧಿ ಮೀರಿದ ಬಿಸ್ಕೇಟ್ ಮಾರಾಟ: ಎಫ್‌ಡಿಎ ಅಧಿಕಾರಿಗೆ ಜನರಿಂದ ಘೇರಾವ್, ಬಾಯಿಗೆ ಬಿಸ್ಕೇಟ್ ತುರುಕಲು ಯತ್ನ
ವಾಹನವನ್ನು ಯುನಿಮೆಕ್ ಓವರ್ಸೀಸ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ. ವಾಹನ ಚಾಲಕನ ವಿರುದ್ಧ ಬಿಎನ್ ಎಸ್ ಸೆಕ್ಷನ್ 281, 125A ಮತ್ತು 106(1) ಅಡಿಯಲ್ಲಿ ಅತಿ ವೇಗದ ಚಾಲನೆ, ನಿರ್ಲಕ್ಷ್ಯ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.