''ವಿಷಾದವಿಲ್ಲ ನಾನು ಮತ್ತೆ ಕೊಲ್ಲುತ್ತೇನೆ'': 3 ಕೊಲೆ ಮಾಡಿದ ಅಪರಾಧಿಯಿಂದ ಕೋರ್ಟ್ ಮುಂದೆಯೇ ಶಾಕಿಂಗ್ ಹೇಳಿಕೆ
Crime News: ಜೋಡಿ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಸಾಬೀತಾದ 58 ವರ್ಷದ ವ್ಯಕ್ತಿಯೊಬ್ಬ, “ನನಗೆ ಈ ಬಗ್ಗೆ ಯಾವುದೇ ವಿಷಾದವಿಲ್ಲ. ಯಾರಾದರೂ ತನ್ನ ದಾರಿಗೆ ಅಡ್ಡ ಬಂದರೆ ಮತ್ತೆ ಹತ್ಯೆ ಮಾಡುತ್ತೇನೆ” ಎಂದು ನ್ಯಾಯಾಲಯದಲ್ಲಿ ತಿಳಿಸಿದ್ದಾನೆ.
ಕೊಲೆ ಆರೋಪಿ ಚೆಂತಮಾರ (ಸಂಗ್ರಹ ಚಿತ್ರ) -
ತಿರುವನಂತಪುರಂ, ಜು. 14: ಜೋಡಿ ಕೊಲೆ ಪ್ರಕರಣದಲ್ಲಿ ಕೇರಳಂ ನ್ಯಾಯಾಲಯದಿಂದ (Keralam Court) ತಪ್ಪಿತಸ್ಥ ಎಂದು ಸಾಬೀತಾಗಿ ಶಿಕ್ಷೆಗೆ ಗುರಿಯಾದ 58 ವರ್ಷದ ವ್ಯಕ್ತಿಯೊಬ್ಬ, “ನನಗೆ ಈ ಬಗ್ಗೆ ಯಾವುದೇ ವಿಷಾದವಿಲ್ಲ. ಯಾರಾದರೂ ತನ್ನ ದಾರಿಗೆ ಅಡ್ಡ ಬಂದರೆ ಮತ್ತೆ ಹತ್ಯೆ ಮಾಡುತ್ತೇನೆ” ಎಂದು ಕೋರ್ಟ್‌ನಲ್ಲಿ ತಿಳಿಸಿದ್ದಾನೆ. 2025ರ ಜನವರಿ ನೆರೆಯವರಾದ ಸುಧಾಕರನ್ ಮತ್ತು ಅವರ ತಾಯಿ ಲಕ್ಷ್ಮೀ ಅವರನ್ನು ಕೊಲೆ ಮಾಡಿದ್ದಕ್ಕಾಗಿ ನ್ಯಾಯಾಲಯವು ದೋಷಿ ಎಂದು ನಿರ್ಣಯಿಸುವ ಮೊದಲೇ, ಅಪರಾಧಿ ಚೆಂತಾಮರ ಪಾಲಕ್ಕಾಡ್ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಈ ಹೇಳಿಕೆಗಳನ್ನು ನೀಡಿದ್ದ (Crime News).
2019ರಲ್ಲಿ ಪೋತುಂಡಿಯಲ್ಲಿ ಸುಧಾಕರನ್ ಅವರ ಪತ್ನಿ ಸಜಿತಾ ಅವರನ್ನು ಕೊಲೆ ಮಾಡಿದ್ದಕ್ಕಾಗಿ ನ್ಯಾಯಾಲಯವು ಚೆಂತಾಮರನನ್ನು ದೋಷಿ ಎಂದು ಘೋಷಿಸಿತ್ತು. ಕೊಲೆ ಮಾಡಿದ್ದಕ್ಕಾಗಿ ಚೆಂತಾಮರನಿಗೆ ಯಾವುದೇ ನೈತಿಕ ಅಪರಾಧ ಪ್ರಜ್ಞೆ ಇಲ್ಲ ಮತ್ತು ಅವನು ಸಮಾಜಕ್ಕೆ ದೊಡ್ಡ ಕಂಟಕವಾಗಿದ್ದಾನೆ ಎಂದು ಸಾರ್ವಜನಿಕ ಅಭಿಯೋಜಕ ಎಂ. ಜೆ. ವಿಜಯಕುಮಾರ್ ಹೇಳಿದರು.
ಚೆಂತಮಾರ “ಹೌದು, ನನಗೆ ಯಾವುದೇ ವಿಷಾದವಿಲ್ಲ. ನಾನು ಗಾಂಧಿವಾದಿಯಲ್ಲ. ಯಾರಾದರೂ ನನ್ನ ದಾರಿಗೆ ಬಂದರೆ ನಾನು ಅವರನ್ನು ಕೊಲ್ಲುತ್ತೇನೆ” ಎಂದು ಹೇಳಿಕೆ ನೀಡಿದ್ದ. ಶಿಕ್ಷೆಯ ಪ್ರಮಾಣದ ವಿಚಾರಣೆಯನ್ನು ಜುಲೈ 15ಕ್ಕೆ ನಿಗದಿಪಡಿಸಲಾಗಿದ್ದರೂ, ಆತ ನ್ಯಾಯಾಲಯದಲ್ಲಿ ತನ್ನನ್ನು ಗಲ್ಲಿಗೇರಿಸುವಂತೆ ತಿಳಿಸಿದ್ದಾನೆ ಎಂದು ವಕೀಲರು ಹೇಳಿದ್ದಾರೆ.
ದುರಂತ ಅಂತ್ಯ ಕಂಡ ಕೌಟುಂಬಿಕ ಕಲಹ: ಮೊಬೈಲ್ ಫೋನ್‌ನಿಂದ ಪತಿಯ ತಲೆಗೆ ಹೊಡೆದು ಕೊಂದ ಪತ್ನಿ
ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ಚೆಂತಮಾರನನ್ನು ತಪ್ಪಿತಸ್ಥನೆಂದು ಘೋಷಿಸಿತು. ಈ ಪ್ರಕರಣದ ಎಲ್ಲ ಅಂಶಗಳನ್ನು ನ್ಯಾಯಾಲಯ ಸಮಗ್ರವಾಗಿ ಪರಿಶೀಲಿಸಿ ಈ ತೀರ್ಪು ನೀಡಿದೆ. ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ಸಲ್ಲಿಸಿದ ಸಾಂದರ್ಭಿಕ ಸಾಕ್ಷ್ಯಗಳು, ಸಾಕ್ಷಿದಾರರ ಹೇಳಿಕೆಗಳು, ವೈದ್ಯಕೀಯ ಹಾಗೂ ವಿಧಿವಿಜ್ಞಾನ (ಫೊರೆನ್ಸಿಕ್) ಸಾಕ್ಷ್ಯಗಳು ಆರೋಪಿಯ ವಿರುದ್ಧ ಪ್ರಮುಖವಾಗಿ ಕೆಲಸ ಮಾಡಿವೆ. ವೈಜ್ಞಾನಿಕ ರೀತಿಯಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸುವಲ್ಲಿ ಪೊಲೀಸರು ಅತ್ಯುತ್ತಮ ಕೆಲಸ ಮಾಡಿದ್ದಾರೆ ಎಂದು ಸಾರ್ವಜನಿಕ ಅಭಿಯೋಜಕ ವಿಜಯಕುಮಾರ್ ಹೇಳಿದ್ದಾರೆ.
“ನಾವು ಜುಲೈ 15ರಂದು ಖಂಡಿತವಾಗಿಯೂ ಮರಣದಂಡನೆಗೆ ಮೇಲ್ಮನವಿ ಸಲ್ಲಿಸುತ್ತೇವೆ. ನ್ಯಾಯಾಲಯವು ನಮ್ಮ ನಿಲುವನ್ನು ಒಪ್ಪುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಅವರು ಹೇಳಿದರು.
2019ರ ಕೊಲೆ ಪ್ರಕರಣದಲ್ಲಿ ಚೆಂತಮಾರ ಜಾಮೀನಿನ ಮೇಲೆ ಹೊರಬಂದು 2025ರ ಜನವರಿ 27ರಂದು ನೆನ್ಮಾರ ಬಳಿಯ ಪೋತುಂಡಿಯಲ್ಲಿರುವ ಸುಧಾಕರನ್ ಮನೆಗೆ ನುಗ್ಗಿ ಅವರನ್ನು ಮತ್ತು ಅವರ ತಾಯಿ ಲಕ್ಷ್ಮೀ ಅವರನ್ನು ಮಚ್ಚಿನಿಂದ ಕಡಿದು ಕೊಲೆ ಮಾಡಿದ್ದ. ಅಲ್ಲದೆ ಪೋತುಂಡಿಯಲ್ಲಿರುವ ತನ್ನ ಮನೆಯಲ್ಲಿಯೇ ಉಳಿದು ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದ. ಸುಧಾಕರನ್ ಕುಟುಂಬಕ್ಕೆ ಬೆದರಿಕೆ ಇದ್ದರೂ, ಆ ಪ್ರದೇಶದಲ್ಲಿ ಆರೋಪಿಯ ಉಪಸ್ಥಿತಿಯನ್ನು ಪತ್ತೆಹಚ್ಚದ ಮತ್ತು ಹತ್ಯೆಯನ್ನು ತಡೆಯದ ಕಾರಣಕ್ಕಾಗಿ ಪೊಲೀಸರ ವಿರುದ್ಧವೂ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಚೆಂತಮಾರ ಹಲವು ವರ್ಷಗಳಿಂದ ಸುಧಾಕರನ್ ಮತ್ತು ಅವರ ಕುಟುಂಬದ ವಿರುದ್ಧ ದ್ವೇಷ ಹೊಂದಿದ್ದ. ಸ್ಥಳೀಯ ಜ್ಯೋತಿಷಿಯೊಬ್ಬರು ಆತನ ಪತ್ನಿ ತೊರೆಯಲು ಈ ಕುಟುಂಬವೇ ಕಾರಣ ಎಂದು ಹೇಳಿದ ನಂತರ ದ್ವೇಷ ದ್ವಿಗುಣಗೊಂಡಿತು. ವೈಯಕ್ತಿಕ ದ್ವೇಷದಿಂದ ಚೆಂತಮಾರ 2019ರ ಆಗಸ್ಟ್‌ನಲ್ಲಿ ಸಜಿತಾ ಅವರ ಪತಿ ಮತ್ತು ಮಕ್ಕಳು ಹೊರಗೆ ಹೋದಾಗ ಅವರ ಮನೆಗೆ ನುಗ್ಗಿ ಮಚ್ಚಿನಿಂದ ಕಡಿದು ಕೊಲೆ ಮಾಡಿದ್ದ.
2019ರ ಪ್ರಕರಣದಲ್ಲಿ ಚೆಂತಮಾರಗೆ ವಿಚಾರಣಾ ನ್ಯಾಯಾಲಯವು ಎರಡು ವರ್ಷಗಳ ಜೀವಾವಧಿ ಶಿಕ್ಷೆ ಮತ್ತು 3.25 ಲಕ್ಷ ರುಪಾಯಿ ದಂಡ ವಿಧಿಸಿತ್ತು.